ಕರ್ಮ……..: ರೂಪ ಮಂಜುನಾಥ

“ಥೂ ಬೋ…. ಮಕ್ಳಾ! ಹರಾಮ್ ಚೋರ್ಗುಳಾ? ಕೆಲ್ಸಕ್ ಬಂದು ಬೆಳ್ಬೆಳಗ್ಗೇನೇ ಏನ್ರೋ ನಿಮ್ ಮಾತುಕತೆ ಕಂಬಕ್ತ್ ಗುಳಾ!ಇರಿ ಇರಿ ನಿಮ್ಗೆ ಹೀಗ್ ಮಾಡುದ್ರಾಗಲ್ಲ. ಸರ್ಯಾಗ್ ಆಪಿಡ್ತೀನಿ ಇವತ್ತಿಂದ ನೀವ್ ಮಾಡೊ ದರಿದ್ರದ ಕೆಲಸಕ್ಕೆ ನಿಮ್ ಕೂಲಿ ಐವತ್ತು ರೂಪಾಯಿ ಅಷ್ಟೆ. ಬೇಕಾದ್ರೆ ಇರಿ. ಇಲ್ದೋದ್ರೆ, ನಿಮ್ಗೆಲ್ಲಿ ಬೇಕೋ ಅಲ್ಲಿ ನೆಗೆದ್ಬಿದ್ದು ಸಾಯ್ರೀ”, ಅಂದು ಮಂಡಿಯೂರಿ ಕೂತು ಬಾರ್ ಬೆಂಡಿಂಗ್ ಮಾಡುತ್ತಿದ್ದ ಕೆಲಸದವರು ಭುವನ್ ಮತ್ತೆ ಅಮೋಲ್ ನನ್ನ ಮಾಲೀಕ ಬಿಪುಲ್ ತನ್ನ ಬೂಟು ಕಾಲಿನಿಂದ ಒದ್ದು, ಇಬ್ಬರ ಜುಟ್ಟುಗಳನ್ನೂ ಜುಂಗಾಡಿ, ನೂಕುತ್ತಾ ಕೂಗಾಡಿದ. ಇವನು ಒದ್ದ ರಭಸಕ್ಕೆ ಭುವನ್ ಮುಗ್ಗರಿಸಿ, ”ಮಾಯೀ”, ಎಂದು ನೋವಿನಿಂದ ಚೀರಿದರೆ ಬಿಪುಲ್ ಏನೋ ತೃಪ್ತಿಯಾದ ಭಾವನೆಯಿಂದ ಗಹಗಹಿಸಿ ಕಾರಿನಲ್ಲಿ ಓನರ್ ಸೀಟಿನಲ್ಲಿ ಕೂತು, ”ಡ್ರೈವರ್, ಲೀಲಾ ಪ್ಯಾಲೇಸ್ ಚಲೋ”, ಎಂದು ಹಾಗೇ ಸೀಟಿಗೊರಗಿ ಆರಾಮ ಮಾಡುತ್ತಾ ಸಣ್ಣದಾಗಿ ಕೇಳುತ್ತಿದ್ದ ಸಂಗೀತವನ್ನು ಆಸ್ವಾದಿಸುತ್ತಾ ಕಣ್ಮುಚ್ಚಿದ.

ಆತ ತನ್ನ ಕೆಂಪು ರೋಲ್ಸ್ ರಾಯ್ಸ್ ಕಾರಿನಿಂದ ಲೀಲಾ ಪ್ಯಾಲೇಸ್ ಹೋಟಲಿನ ಮುಂದೆ ಇಳಿದಿದ್ದೇ ಕಾದಿರುವಂತೆ, ಹೋಟೆಲಿನ ಮುಂಬಾಗಿಲಿನಲ್ಲಿ ನಿಂತಿದ್ದ ಸೆಕ್ಯುರಿಟಿ, ”ಗುಡ್ ಮಾರ್ನಿಂಗ್ ಸರ್”, ಎಂದು ಸಲಾಮ್ ಹೊಡೆದು ಕಾರಿನ ಬಾಗಿಲು ತೆಗೆದ. ಮಿರಿಮಿರಿ ಮಿಂಚುತ್ತಿದ್ದ ಲೂಯಿಸ್ ವಿಟ್ಟಾನ್ ಬೂಟುಗಳನ್ನ ಧರಿಸಿದ ನೀಳವಾದ ಕಾಲುಗಳನ್ನ ಇಳಿಬಿಟ್ಟು ಕಾರಿನಿಂದಾಚೆಗೆ ಬಂದು ಪಟಪಟನೆ ನಾಲ್ಕು ಹೆಜ್ಜೆ ಹಾಕಿ ನಿಂತ ಬಿಪುಲ್! ಅವನ ಬೆಲೆಬಾಳುವ ದಿರಿಸುಗಳು, ಅವನ ಅಲಂಕಾರ, ಗತ್ತು, ನೋಡಿದರೆ ಎಂಥವರಿಗೂ ಅವನು ಕೋಟ್ಯಾಧಿಪತಿ ಎಂದು ತಿಳಿಯುತ್ತಿತ್ತು. ಸೆಕ್ಯೂರಿಟಿ ಬಿಪುಲ್ ನ ಸೂಟ್ಕೇಸು, ಬ್ರೀಫ್ಕೇಸುಗಳನ್ನ ಹಿಡಿದು ಬಿಪುಲ್ ಜೊತೆ ನಡೆದ. ಕಾರನ್ನು ಚಾಲಕ ಪಾರ್ಕ್ ಮಾಡಲು ಹೊರಟ. ರಿಸೆಪ್ಷನ್ ನಲ್ಲಿದ್ದ ಸುಂದರಿ ಇವನನ್ನು ನೋಡಿ ವಂದಿಸಿ, ಸೆಕ್ಯೂರಿಟಿಯ ಕೈಗೆ ಬೀಗದ ಕೈಗಳನ್ನು ಕೊಟ್ಟಳು. ಲಿಫ್ಟ್ ನಲ್ಲಿ ಬಿಪಿನ್ ಹಿಂದೆಯೇ ಹೆಜ್ಜೆ ಇಟ್ಟ ಸೆಕ್ಯೂರಿಟಿ ಲಿಫ್ಟ್ ಗುಂಡಿಗಳನ್ನು ಒತ್ತಿ ಬಿಪುಲ್ ಅನ್ನು ಎಂಟನೆಯ ಮಹಡಿಗೆ ಕರೆದೊಯ್ದ. ”ಎಕ್ಸಿಕ್ಯೂಟಿವ್ ಸ್ಯೂಟ್ಸ್”, ನ ಕೋಣೆ ನಂಬರ್ ನಾಲ್ಕಕ್ಕೆ ಕರೆದೊಯ್ದು, ಬಾಗಿಲು ತೆಗೆದು, ಬಿಪುಲ್ ಅನ್ನು ಒಳಗೆ ಸ್ವಾಗತಿಸಿದ. ಅವನ ಲಗೇಜೆಲ್ಲವನ್ನೂ ತಂದು ಎಲ್ಲಿಡಬೇಕೋ ಅಲ್ಲಿಟ್ಟು, ”ನಿಮ್ಮ ಯಾವುದೇ ಅವಶ್ಯಕತೆಗಳಿಗೂ ಇಂಟರ್ಕಾಮಿನಿಂದ ರೂಮ್ ಸರ್ವಿಸ್ ಗೆ ಕಾಲ್ ಮಾಡಿ ಸರ್. ನಾವು ನಿಮ್ಮ ಸೇವೆಗೇಂತಲೇ ಕಾದಿರ್ತೀನಿ”, ಎಂದ. ಏಸಿ ಆಗಿನ್ನೂ ಹಾಕಿದ್ದರಿಂದ ರೂಮು ತಣ್ಣಗಾಗಲು ಒಂದೆರೆಡು ನಿಮಿಷಗಳಾಗುವುದರಲ್ಲಿ ಅವನಿಗೆ, ಶಖೆ ತಡೆಯದೇ, ”ಫ್ಯಾನ್”, ಎಂದು ಸನ್ನೆ ಮಾಡಿದ. ಆತ ಫ್ಯಾನ್ ಗುಂಡಿ ಅದುಮಿ, ”ಸಾಕಾ ಸರ್ ಅಥವಾ ಹೆಚ್ಚು ಮಾಡಲೇ?”, ಎಂದಿದ್ದಕ್ಕೆ ಥಮ್ಸಪ್ ತೋರಿಸಿದ ಬಿಪುಲ್. ಸೆಕ್ಯೂರಿಟಿ, ಬಗ್ಗಿ ಸಲಾಮು ಹೊಡೆದು ಹೊರಡಲನುವಾದ. ಬಿಪಿನ್ ಎರಡು ಸಾವಿರದ ನೋಟೊಂದನ್ನು ಟಿಪ್ ಕೊಟ್ಟರೆ, ಅವನು ಮತ್ತಷ್ಟು ಬಗ್ಗಿ, ಇನ್ನೊಂದು ಸಲಾಮನ್ನ ಹಾಕಿ ಬಾಗಿಲನ್ನೆಳೆದುಕೊಂಡು ಆಚೆಗೆ ನಡೆದ.

ಬಿಪುಲ್ ತನ್ನ ಬಟ್ಟೆಗಳನ್ನ ಕಳಚಿ, ಅಂಗಾತ ಹಾಸಿಗೆಯ ಮೇಲೊರಗಿಕೊಂಡ. ಮೆತ್ತನೆಯ ಹಾಸಿಗೆಗೆ ಹಾಸಿದ್ದ ಜಾರುವಂಥಾ ಮಕಮಲ್ ಹೊದಿಕೆ, ಇವನಿಗೆ ಕಚಗುಳಿ ಇಟ್ಟಂತಾಯಿತು!ಹಾಗೇ ಹತ್ತು ನಿಮಿಷ ಕಣ್ಮುಚ್ಚಿಕೊಂಡ!ಕಾಣದ ಯಾವುದೋ ಸೋಪಾನದಲ್ಲಿದ್ದಂಥಾ ಪರಮ ಸುಖ! ಫ್ಯಾನು, ಎಸಿ ಎರಡು ಗಾಳಿಯೂ ಸೇರಿ ಕೊರೆಯತೊಡಗಿದಾಗ, ನಿದ್ದೆಯಿಂದ ಕೊಡವಿಕೊಂಡಂತೆ ಎದ್ದು ರಿಮೋಟಿನಿಂದ ಫ್ಯಾನಿನ ಗುಂಡಿಯನ್ನು ಅಮುಕಿದ. ಸುತ್ತಲೂ ಕಣ್ಣಾಡಿಸಿದ. ಅರಮನೆಯಂತೆ ವೈಭವದಿಂದಿದ್ದ ಕೋಣೆ. ಕಿಟಕಿ, ಬಾಗಿಲುಗಳಿಗೆ ಇಳಿಬಿದ್ದಿದ್ದ ಬಂಗಾರದ ಕುಸುರಿ ಕೆಲಸದ ರೇಶ್ಮೆಯಂತೆ ನುಣುಪಾಗಿ ಮಿನುಗುತ್ತಿದ್ದ ಪರದೆಗಳು, ಹಂಸತೂಲಿಕಾತಲ್ಪದಂತಿದ್ದ ಮಂಚ, ಮತ್ತೊಂದು ಬದಿಯಲ್ಲಿ ರಾಜಮನೆತನದ ಕುರ್ಚಿ, ಮೇಜುಗಳನ್ನು ನೆನಪು ಮಾಡಿಸುವಂತೆ ಇದ್ದ ಎರಡು ಕುರ್ಚಿಯ ನಡುವೆ ಒಂದು ಮೇಜು. ಇದಕ್ಕಂಟಿಕೊಂಡಂತೆ ಪಕ್ಕದ ಕೋಣೆಯಲ್ಲಿದ್ದ ಸೋಫಾಸೆಟ್ಟು, ಅದರ ಮುಂದೊಂದು ಮೇಜು, ಅದರ ಮೇಲೊಂದು ಬಣ್ಣಬಣ್ಣದಹೂಗಳಿಂದ ತುಂಬಿದ್ದ ಹೂದಾನಿ, ಪಕ್ಕದಲ್ಲೇ ನೀರಿನ ಜಗ್ಗು, ಅದರ ಜೊತೆಗಷ್ಟು ಕುಕೀಗಳು, ಸ್ನಾಕುಗಳ ಪ್ಯಾಕೆಟ್ಟುಗಳನ್ನಿಟ್ಟಿದ್ದರು. ಮತ್ತೊಂದು ಬೌಲಿನಲ್ಲಿ ಎರಡು ಸೇಬು, ಎರಡು ಕಿತ್ತಳೆ, ಎರಡು ಬಾಳೆಹಣ್ಣುಗಳು ಜೋಡಿಸಿದ್ದರು. ಮುಂದಿನ ಗೋಡೆಗಂಟಿಕೊಂಡಿದ್ದ ತೆಳ್ಳಗಿನ ಟಿವಿ ಎಲ್ಲವೂ ಆ ಸ್ಯೂಟಿನ ಆಡಂಬರವನ್ನು ಎತ್ತಿತೋರಿಸುತ್ತಿತ್ತು. ಬಿಪುಲ್ ಗೆ ಯಾಕೋ ಹೊಟ್ಟೆ ಚುರುಗುಟ್ಟತೊಡಗಿ, ಒಂದು ಸೇಬನ್ನ ತೆಗೆದು ಕಚ್ಚಿ ತಿನ್ನತೊಡಗಿದ. ಊಹೂ, ವಯಸ್ಸಿನಲ್ಲಿರುವ ಹುಡುಗರಿಗೆ ಹೊಟ್ಟೆ ತುಂಬಲು ಅಷ್ಟು ಸಾಕೇ?

ಊಹೂ…. ತೃಪ್ತಿಯಾಗಲಿಲ್ಲ. ಆರಾಮ ಮಾಡುವ ಸಮಯದಲ್ಲಿ ಮತ್ತೆ ಫ್ರೆಷ್ ಆಗಿ ಬಟ್ಟೆ ತೊಡಗಿಕೊಂಡು, ಡೈನಿಂಗ್ ಲಾಬಿಯ ಕಡೆ ಹೋಗುವವರ್ಯಾರೂ? ಎಂಬ ಆಲಸ್ಯದಿಂದ,

ರೂಮ್ ಸರ್ವೀಸ್ ನನ್ನ ಸಂಪರ್ಕಿಸಿದ. ಎರಡೇ ನಿಮಿಷದಲ್ಲಿ ಅದರ ಸೇವೆಗೆಂದೇ ಇದ್ದ ಒಬ್ಬ ಬಂದು ತಟ್ಟಲೋಬೇಡವೋ ಎನ್ನುವಂತೆ ನಿಧಾನವಾಗಿ ಬಾಗಿಲು ತಟ್ಟಿದ. ಬಿಪುಲ್, ”ಯಸ್ ಕಂ ಇನ್”, ಎಂದು ಇವನ ಆದೇಶಿಸಿದ ಸದ್ದಿಗೆ ಶಿಸ್ತಿನ ಸಿಪಾಯಿಯಂತೆ ಒಳಗೆ ಬಂದು ಬಾಗಿ ನಿಂತ!”ನಿಮ್ಮ ಹೋಟೆಲ್ ನ ಯಾವ ಖಾದ್ಯ ಬಹಳ ವಿಶೇಷವಾಗಿರುತ್ತದೆ”, ಎಂದ ಇವನ ಪ್ರಶ್ನೆಗೆ ಉತ್ಸಾಹಿತನಾಗಿ, ”ಸರ್, ನಮ್ಮಲ್ಲಿನ ಎಲ್ಲ ಖಾದ್ಯಗಳೂ ಬಹಳವೇ ಯೂನಿಕ್ ಆಗಿರುತ್ತದೆ. ಅದರಲ್ಲೂ ನೀವು…. . ಅಂತು ಟ್ರೈ ಮಾಡಲೇಬೇಕು”, ಎಂದು ಒಂದೆರೆಡು ಖಾದ್ಯಗಳು, ಐಸ್ಕ್ರೀಮುಗಳನ್ನ ಗುರುತಿಸಿ ಹೇಳಿದಾಗ, ಅದನ್ನೇ ಕಳಿಸಲು ಒಪ್ಪಿಗೆ ನೀಡಿದ. ಹತ್ತನ್ನೆರೆಡು ನಿಮಿಷಗಳಲ್ಲಿ ಒಂದು ಮುದ್ದಾದ ಗಾಲಿಗಳಿರುವ ಕೆತ್ತನೆಯ ಗಾಡಿಯಲ್ಲಿ ಸಿದ್ದಪಡಿಸಿದ ಆಹಾರ, ಮೇಲೊಂದು ಮಕಮಲ್ ಕರವಸ್ತ್ರದಂತಿದ್ದ ಹೊದಿಕೆಯೊಡನೆ ಇವನ ಮುಂದೆ ಪ್ರತ್ಯಕ್ಷವಾಯಿತು. ಆಹಾಹಾಹಾ!ಅವರುಗಳು ಆಹಾರವನ್ನು ಪ್ರಸ್ತುತ ಪಡಿಸಿದ್ದ ಆ ರೀತಿಯನ್ನು ನೋಡಿದಾಗ ಎಂಥ ಹೊಟ್ಟೆ ತುಂಬಿದವರಿಗೂ, ನಾಲಗೆಯಲ್ಲಿ ನೀರೂರುವಂತಿತ್ತು. ಹಾಗಿದ್ದಾಗ, ಬೆಳಗಿನಿಂದಲೂ ಏನೂ ತಿನ್ನದ ಬಿಪುಲ್ ಗೆ ಹೇಗಾಗಿರಬೇಡ. ನಿಧಾನವಾಗಿ ಒಂದೊಂದೇ ಎಲ್ಲವನ್ನೂ ರುಚಿ ನೋಡುತ್ತಾ ಆಸ್ವಾದಿಸಿದ. ಹೊಟ್ಟೆ ಬಿರಿಯುವಂತೆ ತಿಂದು ಕೊನೆಯಲ್ಲಿ ರಸ್ ಮಲೈ, ಫ್ರೂಟ್ ಸಾಲಡ್, ಐಸ್ಕ್ರೀಮ್, ತಿಂದು, ಮಲೈ ಪಾನ್ ಹಾಕಿದಾಗ ತೇಗಲು ಗಾಳಿಯೂ ಆಚೆ ಬರಲು ಒದ್ದಾಡುವಂತೆ ಕಂಠಮಟ್ಟಗೆ ತಿಂದಿದ್ದ ವಿಪುಲ್. ಫಿಂಗರ್ ಬೌಲಿನಲ್ಲಿ ಕೈ ಸ್ವಚ್ಛ ಮಾಡಿಕೊಳ್ಳುವ ಹೊತ್ತಿಗೆ ದೇಹ ಭಾ…. ರವಾದಂತಾಯಿತು. ಇವನ ಕರೆಗೆ ಮತ್ತೊಮ್ಮೆ ವೇಟರ್ ಬಂದು ಇವನು ಊಟ ಮಾಡಿದ ಟೇಬಲ್ ಅನ್ನು ತೆಗೆದುಕೊಂಡು ಹೋಗಲು ಬಂದಾಗ, ಅವನಿಗೂ ಎರಡುಸಾವಿದ ಗುಲಾಬಿಬಣ್ಣದ ನೋಟೊಂದನ್ನು ಟಿಪ್ಪಾಗಿ ಕೊಟ್ಟ. ಆವನು ಮನಃಪೂರ್ವಕವಾಗಿ ಕೃತಜ್ಞತೆಗಳನ್ನು ತಿಳಿಸಿ, ವಂದಿಸಿ ತೆರಳಿದ.

ಇಂಥಾ ಭಾರೀ ಭಕ್ಷ್ಯಭೋಜ್ಯಗಳನ್ನ ಗಡದ್ದಾಗಿ ಇಳಿಸಿದ ವಿಪುಲ್ ಗೆ ಮತ್ತೆ ಕಣ್ಣೆಳೆಯತೊಡಗಿತು. ಸರಿಯಾಗಿ ಎರಡು ಗಂಟೆ ನಿದ್ದೆ ತೆಗೆದೇಬಿಟ್ಟ. ಏಳುವ ಹೊತ್ತಿಗೆ ಸಂಜೆ ನಾಲ್ಕಾಗಿತ್ತು. ಸ್ಟ್ರಾಂಗಾಗಿ ಒಂದು ಕಪ್ ಟೀ ತರಿಸಿಕೊಂಡ. ಕುಡಿದು ಒಂದು ಟೀಶರ್ಟು, ಚಡ್ಡಿಯನ್ನ ತೊಟ್ಟು, ರೋಲೆಕ್ಸ್ ರಿಸ್ಟ್ ವಾಚ್ ಹಾಕಿಕೊಂಡು,

ಕಣ್ಣಿಗೆ ಬೆಲೆಬಾಳುವ ರೇಬನ್ ತಂಪುಕನ್ನಡಕವನ್ನ ಹಾಕಿಕೊಂಡು, ಕೈಯಲ್ಲಿ ಐ ಫೋನ್ ೧೫, ಪ್ರೋ ಮ್ಯಾಕ್ಸ್, ಹಿಡಿದು, ಕಿವಿಗಳಿಗೆ ಇಯರ್ ಫೋನು ಹಾಕಿಕೊಂಡು ತನಗಿಷ್ಟವಾದ ಸಂಗೀತ ಕೇಳುತ್ತಾ , ಹೋಟೆಲ್ ಅನ್ನು ಒಂದು ಸುತ್ತು ಸುತ್ತಿ ಬರಲು ಹೊರಟ. ಎಲ್ಲೆಲ್ಲೂ ಸುಂದರ ವಾತಾವರಣ, ಅರಮನೆಯಂಥಾ ವೈಭವ, ಎದುರಿಗೆ ಬಂದ ಹೋಟೆಲಿನ ನೌಕರರು ಬಗ್ಗಿ ಸಲಾಮು ಹೊಡೆಯುತ್ತಿದ್ದರೆ, ವಿಪುಲ್ ರಾಜಗಾಂಭೀರ್ಯದಿಂದ ದರ್ಪದಲ್ಲಿ ನಡೆದುಹೋಗುತ್ತಿದ್ದ. ಹಾಗೇ ಕೆಳಗೆ ರಿಸೆಪ್ಷನ್ ಬಳಿಗೂ ಬಂದ. ಅಲ್ಲಿನ ಕೆಲವು ಸುಂದರ ಕಲಾಕೃತಿಗಳ ಮುಂದೆ ಓಡಾಡುತ್ತಲೇ ಸೆಲ್ಫಿ ತೆಗೆದುಕೊಂಡ. ಹಾಗೇ ನಡೆಯುತ್ತಿರಬೇಕಾದರೆ, ಕಿಟಕಿಯ ಮೂಲಕ ದೃಷ್ಟಿ ಹಾಯಿಸಿದಾಗ, ಸುಂದರವಾದ ಈಜುಕೊಳದಲ್ಲಿ ಗಂಡು ಹೆಣ್ಣೆಂಬ ಬೇಧವಿಲ್ಲದೆ ಎಲ್ಲರೂ ಆನಂದವಾಗಿ ಈಜಾಡುತ್ತಿದ್ದರು. ಯಾಕೋ ಆ ಕೊಳ, ಆ ಪರಿಸರ ನೋಡಿದಾಗ ವಿಪುಲ್ ಗೆ ಕೂಡಾ ಈಜಾಡಬೇಕೆಂಬ ಮನಸ್ಸಾಯಿತು. ತಿರುಗಿ ತನ್ನ ಕೋಣೆಗೆ ಲಿಫ್ಟ್ ಹಿಡಿದ. ಸ್ವಿಮ್ಮಿಂಗ್ ಸೂಟ್, ಹೇರ್ ಕ್ಯಾಪ್ ಹಾಕಿ, ಮೇಲೊಂದು ಲಾಂಗ್ ಗೌನು ಧರಿಸಿಕೊಂಡು, ಚಪ್ಪಲಿ ಹಾಕಿಕೊಂಡು ಮತ್ತೆ ಕೆಳಗಿಳಿದ. ಗೌನನ್ನು ಕಳಚಿ ಒಂದು ಕುರ್ಚಿಗೆ ತಗಲಿಹಾಕಿದ. ಚಪ್ಪಲಿ ಬಿಟ್ಟು ಸೀದಾ ನೀರಿಗೆ ಹಾರಿ, ಕೈಕಾಲು ಬಡಿಯತೊಡಗಿದ!!!!

“ಬಾ…. ಪ್ ರೇ…. . ಏನಾಯ್ತೋ ನಿನ್ಗೇ ಹಳಾದವ್ನೇ. ಆಗ್ಲೇನೂ ಹಿಂಗೇ ಕಾಲಲ್ಲಿ ಜಾಡಿಸಿ ಒದ್ ಒದ್ ಇಟ್ಟೆ. ಎದ್ ಹೋಗಿ ಇನ್ನೆಲ್ಲಾದ್ರೂ ಬಿದ್ಕೊಳೊದಣಾಂದ್ರೆ, ಇಲ್ಲಿ ಅದಕ್ಕೂ ಜಾಗವಿಲ್ಲ. ಅರೇ ರಾ. . ಮ್ ಮೇ ಕ್ಯಾ ಕರೂ…. ಏ ಸಾಲೆ ಮುಝೆ ಸೋನೇ ನಹೀ ದೇತೀಹೇ ”, ಎಂದು ಪಕ್ಕದಲ್ಲಿ ಮಲಗಿದ್ದ ಅಮೋಲ್ ಬೊಬ್ಬೆ ಹಾಕಿ, ಎರಡು ಗುದ್ದು ಸರಿಯಾಗಿ ಬೆನ್ನ ಗುದ್ದಿದಾಗ, ಕನಸಿನಲ್ಲಿ ಈಜಾಡುತ್ತಿದ್ದ ವಿಪುಲ್ ವಾಸ್ತವಕ್ಕೆ ಬಂದು, ಮಗ್ಗುಲು ತಿರುಗಿ ಮಲಗಿದ. ಮುರುಕಲು ಚಾಪೆಯ ಮೇಲಿದ್ದ ಹರಕಲು ಹೊದಿಕೆ ಇವರುಗಳ ಒದ್ದಾಟಕ್ಕೆ ಎಲ್ಲೋ ಮುದುರಿ ಮೂಲೆ ಸೇರಿಕೊಂಡಿತ್ತು. ಇವನ ಕೈಕಾಲಿನ ಒದರಾಟದಿಂದ ಅಮೋಲ್ ಗೆ ನಿದ್ದೆ ಹಾರಿಯೇ ಹೋಗಿತ್ತು. ಹಾಗೇ ಮುರುಕಲು ಕಿಟಕಿಯತ್ತ ಕಣ್ಣು ಹಾಯಿಸಿದ. ಇನ್ನೂ ಕಗ್ಗತ್ತಲು! ಆ ದಿನ ಕಾಂಪ್ಲೆಕ್ಸ್ನ ಕಾಂಕ್ರೀಟ್ ಕೆಲಸಕ್ಕೆ ಬೆಳಗ್ಗೆ ಐದು ಗಂಟೆಯಿಂದ ಸುಮಾರು ಏಳು ಗಂಟೆಯವರೆಗೂ ಬಾರ್ ಬೆಂಡಿಂಗ್ ಮಾಡೀ ಮಾಡೀ, ಇವರುಗಳೂ ಬೆಂಡಾಗಿ ಹೋಗಿದ್ದರು. ಮನೆಗೆ ಹಿಂತಿರುಗಿ ಅಡಿಗೆ ಮಾಡಿಕೊಳ್ಳುವ ತ್ರಾಣವೂ ಇಲ್ಲದಂತಾಗಿ, ಪಾತ್ರೆ ತುಂಬಾ ಗಂಜಿ ಮಾಡಿಕೊಂಡು ಉಪ್ಪು, ಮೆಣಸಿನಕಾಯಿ ನಂಚಿಕೊಂಡು ತಿಂದು ಇಬ್ಬರೂ

ಹೊಟ್ಟೆ ತುಂಬಾ ನೀರು ಕುಡಿದು ಮಲಗಿದ್ದರು. ದಿನವೆಲ್ಲಾ ಶ್ರಮದ ಕೆಲಸ ಮಾಡಿದ ಫಲ, ಪ್ರಜ್ಞೆ ಇಲ್ಲದಂತೆ ನಿದ್ದೆ ಆವರಿಸಿಕೊಂಡಿತ್ತು. ಆದರೆ, ಬಿಪುಲ್ ಅಮೋಲ್ನ ನಿದ್ದೆ ಕೆಡಿಸಿದ್ದ. ಅಮೋಲ್ ಗೆ ಮತ್ತೂ ಬೆಳಗಿನ ಝಾವದ ನಿದ್ದೆ ಕಣ್ಣೆಳೆದುಕೊಂಡು ಬಂದು ಆವರಿಸಿಕೊಂಡಿತ್ತು. ಎರಡು ಗುದ್ದು ಬಿದ್ದರೂ ಬಿಪುಲ್, ತಲೆ ಕರೆದುಕೊಂಡು ಮತ್ತೆ ಹರಕಲು ಹೊದಿಕೆಯನ್ನ ಎಳೆದು ನಿದ್ದೆಗಣ್ಣಿನಲ್ಲೇ ಸುತ್ತುಕೊಂಡು ಮಗ್ಗುಲಾಗಿ ಮಲಗಿ ಮತ್ತೆ ಯಾವುದೋ ಕನಸಿನ ಲೋಕದಲ್ಲಿ ಜಾರಿಹೋಗಿದ್ದ. ಬೆಳಗ್ಗೆ ಬಿಪುಲ್ ಗಡಬಡಿಸಿ ಎದ್ದವನೇ, ”ಲೋ ಅಮೋಲ್ ಏಳೋ, ಆಗಲೇ ಏಳು ಗಂಟೆಯಾಗೇ ಹೋಗಿದೆ. ಇನ್ನೂ ಬೇಜಾನ್ ಕೆಲ್ಸ ಇದೆ”, ಎಂದು ಅವನ ದುಪ್ಪಡಿ ಎಳೆದಾಗ ಅಮೋಲ್, ”ಥೂ ಬೇಕೂಫ ನನ್ ಮಗ್ನೇ, ಏನ್ ಬಂದಿತ್ತೋ ನಿನ್ಗೆ ರಾತ್ರಿ? ಹಂಗೆ ಕೈ ಕಾಲು ಒದ್ರಾಡಿದೆ, ಹಾಳಾದವ್ನೇ, ನಿನ್ನಿಂದ ಅಷ್ಟು ಚೆನ್ನಾಗಿ ಬರ್ತಿದ್ದ ನಿದ್ದೆಯೆಲ್ಲಾ ಹೊರ್ಟೇಹೋಯ್ತು”, ಅಂತ ಸಿಡುಕಾಡಿದ. ಅಮೋಲ್ ನ ಮಾತು ಕೇಳಿ, ನೀರಸವಾಗಿ ನಗೆ ನಕ್ಕು, ಬೀದಿನಲ್ಲಿಯಲ್ಲಿ ನೀರು ಹಿಡಿಯಲು ಪ್ಲಾಸ್ಟಿಕ್ ಕೆೊಡ ಹಿಡಿದು ಕೋಣೆಯಿಂದಾಚೆಗೆ ಬಂದ. ಆಗಲೇ ಒಂದು ಫರ್ಲಾಂಗಿಗಿಂತಲೂ ಉದ್ದವಿದ್ದ ಸಾಲಿನಲ್ಲಿ ಸೇರಿಕೊಂಡ. ಮನಸ್ಸು ಮತ್ತೆ ಎಲ್ಲಿಗೋ ಹಾರಿ, ಹಿಂತಿರುಗಿ ನೋಡುತ್ತಿತ್ತು.

ಬಿಪುಲ್ ಅಸ್ಸಾಮಿನ ಒಂದು ಕುಗ್ರಾಮದ ಹುಡುಗ. ಬಡತನಕ್ಕೆ ಮಕ್ಕಳು ಜಾಸ್ತಿ ಎನ್ನುವಂತೆ, ಕಿತ್ತು ತಿನ್ನುವ ಬಡತನದ ದಂಪತಿಗಳಿಗೆ ಐದು ಮಕ್ಕಳು ಸಧ್ಯಕ್ಕಾದರೆ, ತಾಯಿ ಮತ್ತೊಂದು ಹೆರಲು ಆಗಲೇ ಹೊಟ್ಟೆ ತುಂಬಿಕೊಂಡಿದ್ದಳು. ಬಿಪುಲ್ ಹಿರಿಯವನು. ಸರಕಾರಿ ಶಾಲೆಯಲ್ಲಿ ಎಂಟನೆಯ ತರಗತಿ ಓದುತ್ತಿದ್ದಾಗ, ಆ ಹಳ್ಳಿಯಲ್ಲೇ ಇದ್ದೊಬ್ಬ ಯುವಕ ಜಗನ್ , ಬೆಂಗಳೂರಿಗೆ ವಲಸೆ ಬಂದು, ಕೆಲವಾರು ವರ್ಷಗಳ ನಂತರ ಮೇಸ್ತ್ರಿಯಾಗಿ ಚೆನ್ನಾಗಿ ದುಡ್ಡು ಮಾಡಿದ್ದವನು ಹಳ್ಳಿಯ ಕೆಲ ಹುಡುಗರನ್ನು ಗುಡ್ಡೆ ಹಾಕಿಕೊಂಡು, ”ನೋಡೀ, ನೀವು ಇಲ್ಲಿ ಎಷ್ಟು ಒದ್ದಾಡಿದರೂ ಅಷ್ಟೇ. ದಿನಕ್ಕೆ ಮೂವತ್ತು ರೂಪಾಯಿ ದುಡಿಯುವಷ್ಟರಲ್ಲಿ ಸುಸ್ತಾಗುತ್ತೀರಿ. ನನ್ನ ಜೊತೆ ಬೆಂಗಳೂರಿಗೆ ಬನ್ನಿ. ದಿನಕ್ಕೆ ನೂರು ರೂಪಾಯಿ ಕೂಲಿ ಕೊಡ್ತೀನಿ”, ಅಂತ ಪುಸಲಾಯಿಸಿದಾಗ, ನೂರು ರೂಪಾಯಿಗಳನ್ನು ಅಪರೂಪಕ್ಕೂ ಕಾಣದ ಗತಿಯಲ್ಲಿದ್ದ ಈ ಬಿಪುಲ್, ಅಮೋಲ್ ಅವನ ಜೊತೆ ಕೂಲಿ ಕೆಲಸ ಮಾಡಲು ಹೊರಟು ನಿಂತಿದ್ದರು. ತಮ್ಮ ಬಡತನಕ್ಕೆ ದುಡಿಯುವ ಕೈಯೊಂದು ಸೇರಿದರೆ, ಮಕ್ಕಳ ಊಟಕ್ಕೆ ಸಹಾಯವಾಗಬಹುದೆಂಬ ಉದ್ದೇಶದಿಂದ ತಂದೆತಾಯಿಯರೂ ಗದ್ಯಂತರವಿಲ್ಲದೆ ಕಳಿಸಿದ್ದರು. ಈಗಾಗಲೇ ವಿಪುಲ್ ದುಡಿಯತೊಡಗಿ ನಾಲ್ಕು ವರ್ಷಗಳಾಗಿತ್ತು. ವರ್ಷಕ್ಕೊಮ್ಮೆ ಮಾತ್ತವೇ ಊರಿಗೆ ಹೋಗಿ, ಉಳಿಸಿದ ದುಡ್ಡನ್ನೆಲ್ಲಾ ತಂದೆಗೆ ಕೊಟ್ಟು, ಒಂದು ವಾರ ಕುಟುಂಬದ ಜೊತೆಯಲ್ಲಿದ್ದು ಪುನಃ ಕೆಲಸಕ್ಕೆ ಹಿಂತಿರುಗುತ್ತಿದ್ದ.

ಬಿಪುಲ್ ತನ್ನ ಹಳ್ಳಿಯಲ್ಲೀಗ ಬಹಳ ಮರ್ಯಾದಸ್ಥ. ಬೆಂಗಳೂರಿನಲ್ಲಿ ನೌಕರಿ ಮಾಡುವವನು. ಮನೆಗೂ ನೆರವಾಗುತ್ತಿದ್ದ ಹಾಗಾಗಿ, ಮನೆಯಲ್ಲೂ ಅವನು ಬಂದಾಗ ವಿಶೇಷ ಮರ್ಯಾದೆ. ಆ ದಿನ ಗೆಳೆಯರೊಡಗೂಡಿ ಊರಿನಲ್ಲಿದ್ದ ಟಾಕೀಸಿಗೆ ಸಿನಿಮಾಗೆಂದು ಹೋಗಿದ್ದ. ಸಿನಿಮಾ ಮುಗಿಸಿ ಬರುವ ದಾರಿಯಲ್ಲಿ ಲಾಟರಿ ಟಿಕೀಟಿನ ಅಂಗಡಿ. ಅಂಗಡಿಯವನು ಹೋದರೆ ಹತ್ತು ರೂಪಾಯಿ, ಬಂದರೆ ಐವತ್ತು ಕೋಟಿ ಎಂದು ಜೋರಾಗಿ ಧ್ವನಿವರ್ಧಕದಲ್ಲಿ ಕಿರುಚುತ್ತಾ ಇದ್ದ. ವಿಪುಲ್ ಗೆ ಒಳಗೇ ಅಡಗಿದ್ದ ಒಂದು ಆಸೆ, ಟಿಕೀಟು ಕೊಳ್ಳುವಂತೆ ಕೆಣಕಿತು. ಹತ್ತು ರೂಪಾಯಿ ಕೊಟ್ಟು ಒಂದು ಲಾಟರಿ ಟಿಕೀಟು ಕೊಂಡೇಬಿಟ್ಟ. ”ಭಯ್ಯಾ ಡ್ರಾ ಯಾವಾಗಾ?”, ಎಂದು ಕೇಳಿದಾಗ, ಬರುವ ಶನಿವಾರ”, ಎಂದ. ಆದರೆ, ಆದರೆ ವಿಪುಲ್ ಆ ಗುರವಾರವೇ ಬೆಂಗಳೂರಿಗೆ ಹೊರಡುವವನಿದ್ದ. ಟಿಕೇಟನ್ನು ಜೋಪಾನವಾಗಿ ತಂದೆಗೆ ಕೊಟ್ಟ. ”ಮಗನೇ, ನಾವು ಲಾಟರಿ ಹೊಡೆಯುವಷ್ಟು ಅದೃಷ್ಟವಂತರೇ? ಹೀಗೆಲ್ಲಾ ಹಣ ಪೋಲು ಮಾಡಬೇಡ. ಅದೇ ದುಡ್ಡು ಇದ್ದರೆ, ನಮಗೇನೋ ಉಪಯೋಗಕ್ಕೆ ಬರುತ್ತದೆ”, ಎಂದು ಬುದ್ದಿ ಹೇಳಿದರು. ಅದಕ್ಕೆ ಬಿಪುಲ್, ”ಅಪ್ಪಾ, ಕೆಲವು ಆಸೆಗಳನ್ನ ಕೇವಲ ಲಾಟರಿ ಹೊಡೆದರೆ ಮಾತ್ರವೇ ಪೂರೈಸಿಕೊಳ್ಳಬಹುದು. ನಮ್ಮ ದುಡಿಮೆಯಿಂದ ಪೂರೈಸಿಕೊಳ್ಳಲು ಸಾಧ್ಯವಿಲ್ಲ. ”ಎಂದು ಒಗಟಿನಂತೆ ಉತ್ತರಿಸಿದ. ಅರ್ದಂಬರ್ದ ಅರ್ಥ ಮಾಡಿಕೊಂಡ ಆತನ ಅಪ್ಪ, ತಲೆ ಅಡ್ಡವಾಗಿ ಅಲ್ಲಾಡಿಸಿ, ಉಫ್ …. ಎಂದು ಉಸಿರುಬಿಟ್ಟು, ”ಆಗ್ಲಿ ಬಿಡು ನೋಡೋಣ. ನಿನ್ ಹಣೆಬರಹದಲ್ಲಿ ಅನುಭವಿಸುವ ಯೋಗವಿದ್ದರೆ, ಈ ಕಾಗದದ ಚೂರಿನಲ್ಲೇ ಅದೃಷ್ಟಲಕ್ಷ್ಮಿ ಕಾಣಿಸಿಕೊಳ್ಳಬಹುದು”, ಎಂದು ಮಡಚಿ ಅಂಗಿಯ ಜೇಬಲ್ಲಿಟ್ಟುಕೊಂಡರು.

ಗುರುವಾರ ಬೆಂಗಳೂರಿಗೆ ಹೊರಟ ವಿಪುಲ್, ”ಅಪ್ಪಾ, ಲಾಟರಿ ನೋಡುವುದನ್ನು ಮರೆಯಬೇಡಿ”, ಅಂದ. “ಆಯ್ತಪ್ಪಾ ನೋಡ್ತೀನಿ”, ಅಂದು ಮಗನನ್ನು ಬೀಳ್ಕೊಟ್ಟರು. ಮಾರನೆಯ ದಿನ ಬೆಳಗ್ಗೆಯೇ, ಯಾವುದೋ ಸಾಹುಕಾರರ ತೋಟದಲ್ಲಿ ಕೂಲಿಗಾಗಿ, ಹೋದ ಬಿಪುಲ್ ಅಪ್ಪ, ಕೋಣೆಯ ಬಾಗಿಲಿಗೆ ತಗಲಿಹಾಕಿದ್ದ ಆ ಲಾಟರಿ ಇದ್ದ ಅಂಗಿಯನ್ನೇ ಹಾಕಿಕೊಂಡು ಕೂಲಿಗೆ ಹೋದರು. ಸಂಜೆ ಮನೆಗೆ ಮರಳಿದ ಮೇಲೆ ವಿಪರೀತ ಧೂಳು, ಕೊಳೆ ಮೆತ್ತಿಕೊಂಡ ಆ ಅಂಗಿಯನ್ನು ಮುದುರಿ ಯಾವುದೋ ಜ್ಞಾನದಲ್ಲಿ ಒಗೆಯಲು ಹಾಕಿಬಿಟ್ಟರು.

ಬಿಪುಲ್ ಅಮ್ಮ ತನ್ನ ಕೆಲಸಗಳ ಗಡಿಬಿಡಿಯಲ್ಲಿ, ಎಲ್ಲರ ಬಟ್ಟೆಗಳನ್ನೂ ಸೋಪಿನ ನೀರಿನಲ್ಲ ನೆನೆಸಿ, ಬಟ್ಟೆ ಸೆಣೆಯುವಾಗ ಲಾಟರಿಯ ಟಿಕೆಟ್ಟಿರುವ ಅಂಗಿಯನ್ನೂ ಸೆಣೆದು, ಹಿಂಡಿ, ಕೊಡವಿ, ಹಾಕುವುದರಲ್ಲಿ ಆ ಟಿಕೆಟ್ಟು ಚಿಂದಿಚಿತ್ರಾನ್ನವಾಗಿ ಹೋಗಿತ್ತು. ಆ ವಿಷಯ ಆತನ ತಾಯಿಯ ಗಮನಕ್ಕೂ ಬರದೆ ಹೋಯ್ತು.

ವಿಪುಲ್ ಬೆಂಗಳೂರನ್ನು ಸೇರಲು ರೈಲಿನಲ್ಲಿ ಕೂತಿದ್ದ. ರೈಲುಬಂಡಿ ಮುಂದೆಮುಂದೆ ಹೋಗುತ್ತಿದ್ದರೂ, ಅವನ ನೆನಪುಗಳು ಹಿಂದೆಹಿಂದೆ ಓಡತೊಡಗಿದವು. ವಿಪುಲ್, ತನ್ನ ಒಡೆಯನ ಜೊತೆಗೆ ಕೆಲಸ ಮಾಡಲು ಬೆಂಗಳೂರೆಲ್ಲಾ ತಿರುಗುತ್ತಿದ್ದ. ದೊಡ್ಡ ದೊಡ್ಡ ಬಂಗಲೆಗಳು, ಐಷಾರಾಮಿ ಹೋಟೆಲುಗಳು, ದೊಡ್ಡ ದೊಡ್ಡ ಕಂಪನಿಗಳು, ಎಲ್ಲ ಕಡೆಗಳಲ್ಲೂ ಕಟ್ಟಡ ಕೆಲಸಗಳು, ರಿಪೇರಿಗಳು ಎಂದು ಇವನು ಹೋಗದ ಜಾಗಗಳೇ ಇಲ್ಲ. ಎಲ್ಲಾ ಕಡೆ ಏನೇ ಐಷಾರಾಮ ಕಂಡರೂ ಇವನದ್ದು ಜೋಪಡಿಯ ಜೀವನವೇ!ಆಸೆಯ ಕಣ್ಣುಗಳು ಬಣ್ಣಬಣ್ಣದ ಕಾರುಗಳು, ಕೋಟ್ಯಾಧಿಪತಿಗಳ ವೈಭವದ ಜೀವನ, ಉಡುಪು, ವಾಚುಗಳು, ಬೂಟುಗಳು ಇದರ ಮೇಲೆಯೇ ನೆಟ್ಟಿರುತ್ತಿದ್ದವು. ಒಂದು ಬಾರಿ ಲೀಲಾ ಪ್ಯಾಲೇಸಿನಲ್ಲಿಯ ಕೆಲಸಕ್ಕೆ ಹೋಗಿ, ಅಲ್ಲಿನ ವೈಭೋಗ ಕಂಡು ಬೆಕ್ಕಸ ಬೆರಗಾಗಿದ್ದ. ಜೀವನದಲ್ಲಿ ಒಮ್ಮೆಯಾದರೂ ಈ ಹೋಟೆಲಿನಲ್ಲಿದ್ದು, ಅಲ್ಲಿನ ಎಲ್ಲಾ ಸುಖವನ್ನು ಅನುಭವಿಸಬೇಕೆಂದು ತೀರ್ಮಾನಿಸಿಬಿಟ್ಟಿದ್ದ.

ಇವನ ಬಾಸು ಜಗನ್ ಇವನು ಮಾಡುವ ಕೆಲಸ ಬಿಟ್ಟು ಬೇರೆಯ ಕಡೆಯೆಲ್ಲಾ ನೋಟ ಹರಿಸಿ ಮೈಮರೆಯುತ್ತಿದ್ದಾಗಲೆಲ್ಲಾ ತಲೆಯ ಮೇಲೊಂದು ಸರಿಯಾಗಿ ಮೊಟಕಿ, ”ಏನ್ಲಾ ಬದ್ಮಾಷ್, ಎಲ್ಲಿದೆ ನಿನ್ ಗಮ್ನಾ? ನಿನ್ ಕೆಲ್ಸದ್ ಕಡೆ ನಿಗಾ ಇಡೋ ಕರಮ್ಜಾಲೇ. ನೀನು ಅಡ್ಕಸಬಿ ಥರ ಹಿಂಗೇ ಕೆಲ್ಸ ಮಾಡುದ್ರೆ, ಒದ್ ಊರಿಗ್ ಕಳಿಸ್ತೀನಿ. ಹೋಗಿ ಮಣ್ ತಿನ್ನುವಿಯಂತೆ”, ಅಂತ ಬಾಯಿಗೆ ಬಂದಂತೆ ಉಗಿಯುತ್ತಿದ್ದ. ಇವನ ಜೊತೆ ಕೆಲಸ ಮಾಡುತ್ತಿದ್ದ ಅಮೋಲ್ ಇವನನ್ನ ಕಿರುಗಣ್ಣಲ್ಲೇ ನೋಡಿ ಕಿಸಕ್ಕೆಂದು ನಕ್ಕರೆ, ಎದ್ದು ಹೋಗಿ ನಾಲ್ಕು ತದಕಿ ಬರಲೇ ಎನ್ನುವಷ್ಟು ಕೋಪ ಬಂದರೂ ಬಡವನ ಕೋಪ ದವಡೆಗೆ ಮೂಲ ಎನ್ನುವಂತೆ, ಹಲ್ಲುಮುಡಿ ಕಚ್ಚಿಕೊಂಡು ಸಹಿಸಿಕೊಳ್ಳುತ್ತಿದ್ದ.

ಜಗನ್ ಇವರ ಕೆಲಸದಿಂದ ದಿನಕ್ಕೆ ಮೂರುನೂರು ರೂಪಾಯಿಗಳನ್ನ ಪಡೆದು ಇವರುಗಳಿಗೆ ಕೇವಲ ನೂರು ರೂಪಾಯಿಗಳನ್ನ ಕೊಡುತ್ತಿದ್ದುದು ಬಿಪುಲ್ ಗೆ ಎಂದೋ ಒಂದು ದಿನ ಬಟವಾಡೆ ಮಾಡುವ ದಿನ ತಿಳಿದುಹೋಗಿ, ಕೊತಕೊತನೆ ಕುದ್ದುಹೋದ. ಒಂದು ದಿನ ಕೋಣೆಯಲ್ಲಿ , “ಅಮೋಲ್ ನೋಡ್ಲಾ, ಆ ಕಮೀನೇ ಎಂತಾ ಕತ್ರಿ ಕೆಲ್ಸ ಮಾಡ್ತಿದಾನೆ. ನಾವು ಮಾಡೋ ಕೆಲ್ಸದ ಕೂಲಿಯಲ್ಲಿ ಅವ್ನು ಮಜಾ ಮಾಡ್ತಾ ಕಾರಲ್ಲಿ ಓಡಾಡ್ತಿದಾನೆ. ನಮ್ಗೇನೂ, ಆಗ್ಲೇ ಬಂದ್ ನಾಕ್ ವರ್ಷ ಆದ್ರೂ ಒಂದ್ ಸೈಕಲ್ ಕೊಂಡ್ಕೊಳ್ಳೋ ಯೋಗ್ಯತೆಯೂ ಇಲ್ಲ. ಮಾಲೀಕನನ್ನ ಒಂದ್ ಸಾರಿ ಇಬ್ರೂ ಹೋಗಿ, ಸ್ವಲ್ಪ ಕೂಲಿ ಜಾಸ್ತಿ ಮಾಡೋಕೆ ಕೇಳೋಣ ಕಣೋ”, ಎಂದು ಧೈರ್ಯ ಮಾಡಿ, ಗೆಳೆಯನನ್ನು ಎಳೆದುಕೊಂಡು ಹೋಗಿ ಜಗನ್ ಮುಂದೆ ನಿಂತುಕೊಂಡ. ”ಏನ್ರೋ ನನ್ ಮಕ್ಳಾ, ಕೆಲ್ಸ್ ಬಿಟ್ಟು ಇಲ್ಲಿಗ್ಯಾತಕ್ ಬಂದ್ರೋ ನಾಯಿಗಳಾ”, ಎಂದ. ಅಮೋಲ್ ಅಂತೂ ಬಾಯೂ ಬಿಡದೆ, ಮೆತ್ತಗೆ ಒಂದಡಿ ಹಿಂದೆಯೇ ಸರಿದ. ಬಿಪುಲ್ ಧೈರ್ಯ ಮಾಡಿ, ”ಅಣ್ಣಾ, ನಾವ್ ಬಂದು ಆಗ್ಲೇ ನಾಕೊರ್ಷ ಆಯ್ತು”, ಅಂದ. ”ಅದಕ್ಕೇನೂಂತಾ?”, ಗತ್ತಿನಲ್ಲಿ ಕೇಳಿದ ಮಾಲೀಕ. ”ಅಣ್ಣ, ವಾರದ್ ಏಳೂ ದಿನ ರಜಾ ತಗೊಳ್ದೆ ಕೆಲ್ಸ ಮಾಡ್ತೀವಿ. ಎಷ್ಟೋ ದಿನ ರಾತ್ರಿ ಹನ್ನೆರಡಾದ್ರೂ ಕೆಲ್ಸ ಮಾಡಿದೀವಿ”, ಅಂದ. ಜಗನ್ ಪಿತ್ತ ನೆತ್ತಿಗೇರಿ, ”ಥೂ ಬೋಸೂಡೀಕೆ! ಇದ್ನೆಲ್ಲಾ ಯಾಕ್ ನನ್ ಹತ್ರ ಹೇಳ್ತಿದೀಯೋ? ಇದೆಲ್ಲಾ ನಂಗೆ ಗೊತ್ತಿರೋ ವಿಷಯ ಕಣ್ಲಾ! ಏನಾದ್ರೂ ನಂಗ್ ಗೊತ್ತಿಲ್ಲದಿರ ವಿಷ್ಟ ಇದ್ರೆ ಅದ್ನ ಬೊಗ್ಳಿ ಸಾಯಿ. ಸುಮ್ನೆ ಕೊಯ್ಯ ಕೊಯ್ಯ ಅಂತ ಪಿಟೀಲು ಕುಯ್ತಾ ಇನ್ನೈದ್ ನಿಮ್ಷ ಟೈಮ್ ವೇಸ್ಟು ಮಾಡುದ್ರೂ, ಇವತ್ತಿನ ಕೂಲಿ ಕಟ್ಟು”, ಅಂದಿದ್ದೇ, ಅಮೋಲ್ ಮೆತ್ತಗೆ ಹೆದರಿದ ದನಿಯಿಂದ ಪಿಸುಗುಟ್ಟಿದ, ”ನಾನೋಗ್ತೀನಿ ಕಣೋ”, ಅಂತಿದ್ದಕ್ಕೆ ಅವನ ಕೈಯನ್ನ ಬಲವಾಗಿ ಹಿಡಿದು, ಹೆದರುತ್ತಾ, ”ನಮ್ಗೆ ನೀವು ಕೊಡೋ ಕೂಲಿ ಸಾಲ್ತಿಲ್ಲ. ಸ್ವಲ್ಪವಾದ್ರೂ ಜಾಸ್ತಿ ಮಾಡಿ”, ಎಂದು ನಡುಗುತ್ತಲೇ ಕೇಳಿದ.

ಇದನ್ನ ಕೇಳಿದ ಮಾಲಿಕ ಕೆರಳಿ ಕೆಂಡವಾಗಿ, ”ಏನಂದ್ಲಾ ಸೂವರ್ ಕೆ ಬಚ್ಚೇ! ಸಗಣಿ ತಿಂತಿದ್ದವ್ನಿಗೆ ವೆರೈಟಿ ಊಟದ್ ರುಚಿ ತೋರ್ಸಿದ್ನಲ್ಲಾ, ಅದ್ಕೇ ಮೈ ತುಂಬಾ ಕೊಬ್ಬೇರೋಯ್ತು. ನಿನ್ ಬುದ್ದಿ ಎಕ್ಕಡ ತಿಂತಿರೋದು ಸಾಲ್ದೂಂತ ಅವ್ನನ್ನೂ ಇದಕ್ಕೆಲ್ಲಾ ಎಳ್ದು ಹಾಳ್ ಮಾಡ್ತಿದೀಯಾ!ಏನ್ಲಾ ಕುತ್ತೇಕಮೀನೇ, ಈ ಲೋಫರ್ ನನ್ ಮಗ ಎಲ್ಲಿಗ್ ಕರೆದ್ರೆ, ಅಲ್ಲಿಗ್ ಹೋಗ್ಬಿಡ್ತೀಯಾ? ನಿನ್ ತಲೇಲಿ ಏನ್ ಜೇಡಿ ಮಣ್ ತುಂಬ್ಕೊಂಡಿದ್ಯಾ?ಥೂ ಕಛಡಾ ನನ್ ಮಕ್ಳನ್ ತಂದು! ನೀವ್ ಮಾಡೋ ಕೆಲ್ಸಕ್ಕೆ ಇಷ್ಟು ಕೊಡ್ತಿರೋದೇ ಹೆಚ್ಚು. ಇನ್ನೊಂದ್ ಸಾರಿ ಏನಾದ್ರೂ ನನ್ ಹತ್ರ ಬಾಲ ಬಿಚ್ಚುದ್ರೆ, ಊರ್ ಕಡೆಗ್ ಒದ್ ಓಡುಸ್ತೀನಿ. ಅಲ್ಲಿ ತಿರುಪೆ ಎತ್ಕೊಂಡ್ ಸಾಯಿ ಹರಾಮ್ ಚೋರ್”, ಎಂದು ಇಬ್ಬರ ಕತ್ತಿನ ಪಟ್ಟಿ ಹಿಡಿದು, ”ಲೋ ಬೇವಾರ್ಸಿ, ಇವ್ನ ಮಾತ್ ಕೇಳ್ಕೊಂಡ್ ಬಾಯಿಗೆ ಮಣ್ ಹಾಕೋಬೇಡ. ಹೋಗಿ ಕೆಲ್ಸ ನೋಡು”, ಅಂತ ಅಮೋಲ್ ನ ನೂಕಿದ. ಅಮೋಲ್ ಸತ್ತೆನೋ, ಕೆಟ್ಟೆನೋ ಅಂತ ನಿಲ್ಲಿಸಿದ ಕೆಲಸ ಮುಂದುವರೆಸಲು ಓಡಿದ. ಇವನಿಗೆ, ಮತ್ತೊಂದು ಎಚ್ಚರಿಕೆಯಂತೆ, ”ನೀನು ಇಷ್ಟೊಂದು ಮಿತಿ ಮೀರಿ, ನನ್ ಎದ್ರುಗೆ ನಿಂತ್ ಮಾತಾಡಿದ್ದಕ್ಕೆ ಇನ್ಮೇಲೆ ನಿನ್ ಕೂಲಿ ದಿನಕ್ಕೆ ಎಂಭತ್ ರೂಪಾಯಿ. ಇದ್ರಿರು, ಇಲ್ದಿದ್ರೆ ಜಾಗ ಖಾಲಿ ಮಾಡು. ನೋಡೋಣ ಈ ಊರಲ್ಲಿ ನಿಂಗೆ ಬೇರೆ ಯಾರು ಕೆಲ್ಸ ಕೊಡ್ತಾರೇಂತಾ!”ಎಂದು ಧಮ್ಕಿ ಹಾಕಿ ಜೋರಾಗಿ ನೂಕಿದ ರಭಸಕ್ಕೆ ಸವೆದು ಹೋದ ಅಂಗಿಯ ಕತ್ತಿನ ಪಟ್ಟಿ ಮಾಲೀಕನ ಕೈಲೇ ಉಳಿದುಕೊಂಡಿತು. ಮೊದಲೇ ಹದಿಹರೆಯದ ಬಿಸಿ ರಕ್ತ, ಏನಾದರೂ ಮಾಡುವ ಹಾಗಿದ್ದರೆ, ಮಾಲೀಕನನ್ನು ಅಲ್ಲೇ ಹರಿದು, ಸೀಳಿ ಹಾಕಿ, ಅವನ ರಕ್ತ ಹೀರಿಯೇಬಿಡುತ್ತಿದ್ದ.

ಆದರೆ, ಹೌದು, ಬಡವರಿಗೆ ಕೋಪ ಬರಬಾರದು ಎಂದು ತನ್ನಲ್ಲೇ ಗೊಣಗಿಕೊಂಡು ತನ್ನ ಅಸಹಾಯಕತೆಗೆ ತಾನೇ ಮುಷ್ಟಿ ಬಿಗಿಹಿಡಿದು ತನ್ನ ತೊಡೆಗೆ ಗುದ್ದಿಗುದ್ದಿ ಕೋಪ ತೀರಿಸಿಕೊಂಡ. ”ಥೂ ಮುಂಡೆಮಗ್ನೇ, ಜೊತೆಗ್ ಬಂದು ಧೈರ್ಯ ಕೊಡೋ ಅಂದ್ರೆ ಹೆದ್ರಿ, ಹಿಂದೆ ಬಿದ್ ಸಾಯ್ತೀಯಲ್ಲೋ! ನಿನ್ ನಂಬ್ಕೊಂಡ್ರೆ ಅಷ್ಟೇ”, ಅಂತ ಗೆಳೆಯನನ್ನು ಆಗುವಷ್ಟು ಉಗಿದ. ಅದಕ್ಕೆ ಅಮೋಲ್, ”ನಿನ್ಗೆ ನಮಸ್ಕಾರ ಕಣಪ್ಪಾ!ಈಗೇನೋ ಈ ಮಾಲಿಕ ಕೊಡೊ ದುಡ್ನಿಂದ ನಮ್ ಮನೇಲಿ ಎರಡೊತ್ತು ಗಂಜಿಯೋ, ಅಂಬಲಿಯೋ ತಿಂತಿದಾರೆ. ನಾನೇನಾದ್ರೂ ಕೆಲ್ಸ ಬಿಟ್ರೆ, ನನ್ಗೂ ಅವ್ರಿಗೂ ತಣ್ಣೀರ್ ಬಟ್ಟೆಯೇ ಗತಿ. ಇಂಥದ್ದಕ್ಕೆಲ್ಲಾ ನನ್ ಕರೀಬೇಡ”, ಅಂತ ನಿಕೃಷ್ಟವಾಗಿ ನೋಡಿ ಕೈ ಮುಗಿದೇ ಬಿಟ್ಟ. ”ಥೂ ಹೆದ್ರಪುಕ್ಕಲ. ಹಾಳ್ಬಿದ್ದು ಹೋಗು”, ಎಂದು ಮನಸ್ಸಿನಲ್ಲೇ, ಮಾಲೀಕ ಭವನ್ ನನ್ನ ನೆನೆಸಿಕೊಂಡು, ’ಊ…ಫ್, ಕೆಲ್ಸಕ್ಕ್ ಕರ್ಕೊಂಡ್ಬಂದು, ನಮ್ ದುಡ್ಡೆಲ್ಲಾ ನೀನೇ ಗುಳುಮ್ ಮಾಡಿ, ನಮ್ಗೆ ಅನ್ಯಾಯ ಮಾಡ್ತಿದೀಯಲ್ಲಾ! ಇರ್ಲಿ, ಇದೆಲ್ಲಾ ಮೇಲಿರೋ ದೇವ್ರು ನೋಡ್ತಲೇ ಇರ್ತಾನೆ. ನಮ್ಮಜ್ಜಿ ಹೇಳ್ತಿದ್ದಂಗೆ ಕರ್ಮ ಯಾವತ್ತೂ ಯಾರ್ನೂ ಬಡೋಲ್ಲ. ನನ್ಗೂ ನಿನ್ನ ಗೋಳು ಹೊಯ್ಕೊಳ್ಳೋ ಕಾಲ ಸಧ್ಯದಲ್ಲೇ ಇದೆ. ಮಗನೇ ಆ ಲಾಟರೀ ಹೊಡೀಲಿ, ನಿನ್ನ ಅಟ್ಟಾಡಿಸಿಕೊಂಡು ಹೊಡ್ದು, ಜುಟ್ ಹಿಡ್ದು ಕೆಲ್ಸ ತೆಗೀತೀನಿ. ನಿನ್ಗೆ ನಾನು ಪಟ್ಟ ಕಷ್ಟ, ನೋವು ಏನೂಂತ ತೋರಿಸಿ ಕೊಡ್ತೀನಿ. ಎರಡೇ ದಿನ. ತಾಳೋ ಕಮೀನೇ”, ಅಂತ ಮನಸಿನಲ್ಲೇ ಆಗುವಷ್ಟು ಬೈದುಕೊಂಡೇ ಕೆಲಸ ಮುಂದುವರೆಸಿದ ಬಿಪುಲ್.

ಸಂಜೆ ಕೆಲಸ ಮುಗಿಸಿ, ಕೋಣೆ ಸೇರುವ ಹೊತ್ತಿಗೆ ಎಂಟೇ ಆಗಿ ಹೋಗಿತ್ತು. ೧೦*೮ ರ ಆ ಕೋಣೆಯ ಒಂದು ಬದಿಯಲ್ಲಿ ಅಡಿಗೆ ಮಾಡುವುದಾದರೆ, ಮತ್ತೊಂದು ಬದಿಯಲ್ಲಿ ಸ್ನಾನಕ್ಕೆ ಬಚ್ಚಲು, ಎದುರಿನ ಭಾಗದಲ್ಲೇ ಮಲಗುವುದು. ಆಚೆಗೆ ತಗಡಿನಿಂದ ಮಾಡಿದ ಪಾಯಿಖಾನೆ! ಇದಕ್ಕೇ ತಿಂಗಳಿಗೆ ಎರಡು ಸಾವಿರ ಕೊಡಬೇಕಿತ್ತು. ಮಿಕ್ಕ ದುಡ್ಡಿನಲ್ಲಿ ಅಂಬಲಿಯೋ, ಗಂಜಿಯೋ ಮಾಡಿಕೊಂಡು ತಿಂಗಳಿಗೆ ಆರೇಳು ನೂರುಗಳನ್ನು ಊರಿಗೆ ಕಳಿಸಲು ಕೂಡಿಡುತ್ತಿದ್ದರು. ಅಪರೂಪಕ್ಕೊಮ್ಮೆ ಮಾಲೀಕ ರಾತ್ರಿ ಕೆಲಸಕ್ಕೆ ಉಳಿದುಕೊಂಡರೆ ಬಿರಿಯಾನಿ ಕೊಡಿಸುತ್ತಿದ್ದ. ಆ ದಿನ ಇವರುಗಳಿಗೆ ಹಬ್ಬದೂಟ. ಬಿಟ್ಟರೆ, ದಿನವೂ ಇದೇ ಗೋಳೇ!ಗಂಜಿ ಕಾಯಿಸಿಕೊಂಡು, ಉಪ್ಪು ಹಸಿ ಮೆಣಸಿನಕಾಯಿ ನಂಚಿಕೊಂಡು ಹೊಟ್ಟೆ ಭರ್ತಿ ಕುಡಿದು ಮಲಗಿಕೊಂಡರು. ವಿಪುಲ್ ಹಾಗೇ ತನ್ನೊಳಗೆ ಯೋಚಿಸತೊಡಗಿದ. ಹೌದು, ನಾನು ಕೊಂಡುಕೊಂಡ ಲಾಟರಿ ನಾಳೆ ಡ್ರಾ. ಏನಾದರೂ ಮೊದಲನೆಯ ಬಹುಮಾನ ನನಗೇ ಬಂದ್ರೆ……………ಆ ಏನಾದ್ರೂ ಬಂದ್ರೆ ……. ಮೊದ್ಲು ಆ ಬೋ…ಮಗನನ್ನ ನನ್ನ ಕೂಲಿಯಾಳಾಗಿಟ್ಕೊಂತೀನಿ. ಆಮೇಲೆ, ದಿನಾ ಅವ್ನಿಗೆ ಬೂಡ್ಸು ಕಾಲಿನಲ್ಲಿ ಒದ್ದೂಒದ್ದೂ ಹಣ್ಗಾಯಿನೀರ್ಗಾಯಿ ಮಾಡಿ, ಅವನು ಕುರ್ರೋಮರ್ರೋ ಅನ್ನೋದನ್ನ ನೋಡಿ ಸಂತೋಷಪಡ್ತೀನಿ. ಆಗ್ಲೇ ನನ್ಗೆ ಸಮಾಧಾನ!ಈ ಯೋಚನೆಯಲ್ಲೇ ಸಿಹಿಕನಸನ್ನ ಕಾಣತೊಡಗಿದ್ದ ಬಿಪುಲ್.

ಬಿಪುಲ್ ಕಂಡ ಕನಸು ನಿಜವಾಗುವುದಾ?ಅವನ ಅಜ್ಜಿ ಹೇಳಿದ ಕರ್ಮದ ಕತೆಯಂತೆ, ಮುಂದೆ ಅವನಿಗೂ ಅಂಥ ಒಂದು ದಿನ ಬರುತ್ತದೆಯೇ? ನಾಳೆ ತಿಳಿಯುತ್ತದೆ!

-ರೂಪ ಮಂಜುನಾಥ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x