ಮಾನವನ ಮೂಲಭೂತ ಸೌಕರ್ಯಗಳಾದ ಗಾಳಿ, ನೀರು, ಆಹಾರ, ವಸತಿ ಜೊತೆಗೆ ಶಿಕ್ಷಣವೂ ಒಂದು ಎಂದರೆ ತಪ್ಪಾಗಲಾರದು. ಅನಾದಿ ಕಾಲದಿಂದಲೂ ವಿದ್ಯೆಗೆ ಮಹತ್ವದ ಸ್ಥಾನವಿದೆ. “ವಿದ್ಯೆ ಇರುವವನ ಮುಖವು ಮುದ್ದು ಬರುವಂತಿಕ್ಕು, ವಿದ್ಯೆ ಇಲ್ಲದವನ ಬರಿ ಮುಖವು ಹಾಳೂರು ಹದ್ದಿನಂತಿಕ್ಕು “ಎಂಬ ಸರ್ವಜ್ಞ ನ ಮಾತು ಇಂದಿಗೂ ಪ್ರಸ್ತುತ. ದೇಶ ୭೬ ನೇ ಸ್ವಾತಂತ್ರ ದಿನದ ಹೊಸ್ತಿಲಲ್ಲಿದೆ. ಆದರೆ ಬಡತನ, ನಿರುದ್ಯೋಗ, ಹಸಿವು, ಅನಕ್ಷರತೆ ಇನ್ನೂ ದೇಶದಿಂದ ತೊಲಗಿಲ್ಲ. ದೇಶದ ಹಲವಾರು ಸಮಸ್ಯೆಗಳಿಗೆ ಶಿಕ್ಷಣ ಮದ್ದಾಗಬಲ್ಲದು.
“ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರು”, ಎಂಬಂತೆ ಮಗುವಿನ ಮೊದಲ ಕಲಿಕೆ ಎಂಬುದು ಮನೆ ಹಾಗೂ ಅಮ್ಮನಿಂದ ಅಂಕುರಿಸುತ್ತದೆ. ಮಗುವಿನ ಸರ್ವತೋಮುಖ ಬೆಳವಣಿಗೆಯ ಮೇಲೆ ಮನೆ ಹಾಗೂ ಸುತ್ತಲ ಪರಿಸರದ ವಾತಾವರಣ ಪ್ರಭಾವ ಬೀರುತ್ತದೆ. ಇದು ಗಂಡು ಹೆಣ್ಣು ಅನ್ನದೇ ಎಲ್ಲರಿಗೂ ವಿದ್ಯೆ ಅವಶ್ಯಕ ಎಂಬುದನ್ನು ತೋರುತ್ತದೆ. ಆರದಿಂದ- ಹದಿನಾಲ್ಕು ವರ್ಷದ ಒಳಗಿನ ಎಲ್ಲ ಮಕ್ಕಳಿಗೂ ಕಡ್ಡಾಯ ಹಾಗೂ ಉಚಿತ ಶಿಕ್ಷಣವನ್ನು ನಮ್ಮ ಸಂವಿಧಾನ ಒದಗಿಸಿದರೂ ಎಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರೆ. ಇದಕ್ಕೆ ಕಾರಣಗಳು ಹಲವಾರು, ಆದರೆ ಕರ್ನಾಟಕ ಸರ್ಕಾರದ ಯೋಜನೆಗಳು ಮಕ್ಕಳನ್ನು ಶಾಲೆಗೆ ಕರೆತರುವಲ್ಲಿ ಯಶಸ್ವಿಯಾಗಿವೆ( ಮಧ್ಯಾಹ್ನದ ಬಿಸಿ ಊಟ, ಉಚಿತ ಪಠ್ಯ ಪುಸ್ತಕ, ಉಚಿತ ಸೈಕಲ್). ಆದರೆ ಇವು ಎಷ್ಟು ಜನರನ್ನು ತಲುಪುತ್ತವೇ ಎಂಬುದು ಮುಖ್ಯ.
ಸರ್ಕಾರದ ಎಲ್ಲಾ ಯೋಜನೆಗಳ ಹೊರತಾಗಿಯೂ ಖಾಸಗಿ ಶಾಲೆಗಳು ಹೆಚ್ಚು ಪಾಲಕರನ್ನು ಆಕರ್ಷಿಸುತ್ತಿವೆ. ಖಾಸಗಿ ಶಾಲೆಗಳ ಅನುಕೂಲತೆಗಳು, ಮಕ್ಕಳ ಬಗೆಗೆ ವಿಶೇಷ ಕಾಳಜಿ, ಎಲ್ಲ ವಿಷಯಗಳಿಗೂ ನುರಿತ ಶಿಕ್ಷಕರ ಉಪಲಬ್ಧತೆ ಮುಂತಾದವು ಕಾರಣಗಳಿರಬಹುದು. ಆದರೆ ಇವು ಸರ್ಕಾರಿ ಶಾಲೆಗಳಲ್ಲಿ ದೊರೆಯುವಂತಾಗಬೇಕು. ಪ್ರಸ್ತುತ ಪ್ರತಿ ೩೦ ಮಕ್ಕಳಿಗೆ ಒಬ್ಬ ಶಿಕ್ಷಕ ಎಂಬ ಅನುಪಾತದಲ್ಲಿ ಶಾಲೆಯ ಶಿಕ್ಷಕರ ಸಂಖ್ಯೆ ಅವಲಂಬಿತವಾಗಿದೆ. ಆದರೆ ಪ್ರತಿ ತರಗತಿಗೂ ಒಬ್ಬ ಶಿಕ್ಷಕರ ಹಾಗೂ ಪ್ರತಿ ವಿಷಯಕ್ಕೂ ಪ್ರತ್ಯೇಕ ಶಿಕ್ಷಕರ ಅವಶ್ಯಕತೆ ಇದೆ. ಇದು ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಅವಶ್ಯಕ. ನನಗೆ ತಿಳಿದಿರುವ ಮಟ್ಟಿಗೆ ಸರ್ಕಾರಿ ಶಾಲೆಗಳಲ್ಲಿ ಎಲ್ಲವನ್ನು ದಾಖಲಾತಿಗೊಳಿಸುವುದು(Documentation) ರೂಢಿ. ದಾಖಲೆಗಳು ಮುಖ್ಯ ಆದರೆ , ದಾಖಲಿಸುವುದೇ ಕೆಲಸವಾಗಬಾರದು, ಮಕ್ಕಳ ಬೆಳವಣಿಗೆ ದಾಖಲೆಗೆ ಪೂರಕವಾಗಿರಬೇಕು. ಶಿಕ್ಷಕರಿಗೆ ತರಬೇತಿ ನೀಡಿದರಷ್ಟೇ ಸಾಲದು ಅದು ಮಕ್ಕಳನ್ನು ತಲುಪಬೇಕು ಆಗಷ್ಟೇ ಆ ತರಬೇತಿಯು ಮೌಲ್ಯಯುತವಾಗುವುದು.
“ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ”, ಎಂಬುದು ಎಷ್ಟು ಅರ್ಥಪೂರ್ಣವಾದ ವಾಕ್ಯ. ಆದರೆ ಹೆಣ್ಣು ಮಗು ಹುಟ್ಟಿದರೆ ಹೊರೆಯೆಂದು ಭಾವಿಸುವ ಮನಸ್ಥಿತಿಗಳು, ಹೆಣ್ಣು ಮಕ್ಕಳನ್ನು ಓದಿಸುವುದು ಹಣದ ವ್ಯರ್ಥ ಎಂದು ಭಾವಿಸುವ ಮನಸ್ಥಿತಿಗಳು ಇನ್ನೂ ನಮ್ಮ ಸಮಾಜದಲ್ಲಿವೆ. ಈ ಮನಸ್ಥಿತಿಗಳು ಬದಲಾಗಬೇಕು. ಸರ್ಕಾರ ಶಿಕ್ಷಣವನ್ನು ಉಚಿತವಾಗಿ ನೀಡುತ್ತಿದ್ದರು ಹೆಣ್ಣು ಮಕ್ಕಳ ಉನ್ನತ ವಿದ್ಯಾಭ್ಯಾಸದ ಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ. ಊರಿನಲ್ಲಿರುವ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದರೂ, ಹೈಸ್ಕೂಲಿಗಾಗಿ ಬೇರೆಯ ಊರಿಗೆ ಹೋಗಬೇಕಾದ ಪರಿಸ್ಥಿತಿಯಲ್ಲಿ ಪಾಲಕರು ಹೆಣ್ಣು ಮಕ್ಕಳನ್ನು ಕಳಿಸಲು ಹಿಂಜರಿಯುತ್ತಾರೆ, ಇದಕ್ಕೆ ಕಾರಣಗಳು ಹಲವಾರು. ಸಾರಿಗೆ ವ್ಯವಸ್ಥೆ, ಆರ್ಥಿಕ ಪರಿಸ್ಥಿತಿ ಒಂದು ಕಡೆಯಾದರೆ ಅವಳು ಓದಿ ಏನು ಸಾಧಿಸಬೇಕಾಗಿದೆ ಮನೆಯ ನಿರ್ವಹಣೆಯನ್ನು ಕಲೆತರೆ ಸಾಕು ಎಂಬ ತಾತ್ಸಾರ ಇನ್ನೊಂದು ಕಡೆ. ಭಾರತ ಹಳ್ಳಿಗಳ ದೇಶ , ಆದರೆ ಇನ್ನೂ ಎಷ್ಟೋ ಹಳ್ಳಿಗಳಲ್ಲಿ ಸಾರಿಗೆ ವ್ಯವಸ್ಥೆ ಸರಿಯಾಗಿ ಇಲ್ಲ. ಸರ್ಕಾರಿ ಶಾಲೆಗಳಲ್ಲಿ ಹೈಸ್ಕೂಲು ಮಕ್ಕಳಿಗೆ ಉಚಿತ ಸೈಕಲ್ ವಿತರಣೆ ಇದ್ದರೂ ಅದು ಬಂದು ತಲುಪುವ ಹೊತ್ತಿಗೆ ಒಂದು ವರ್ಷದ ತರಗತಿ ಮುಗಿದಿರುತ್ತದೆ . ಈ ರೀತಿಯ ಕಾರ್ಯಗಳು ಆದಷ್ಟು ಬೇಗ ಆಗುವಂತೆ ನೋಡಿಕೊಳ್ಳುವುದು ಸರ್ಕಾರದ ಹೊಣೆಯಾಗಿದೆ. ಹೆಣ್ಣು ಮಕ್ಕಳಿಗೆ ಋತುಚಕ್ರ ಶುರುವಾದಾಗಿನಿಂದ ಶಾಲೆಗೆ ಕಳಿಸುವುದನ್ನು ಹಲವು ಪಾಲಕರು ನಿಲ್ಲಿಸುತ್ತಾರೆ. ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲದಿರುವುದು, ಶೌಚಾಲಯಗಳ ವ್ಯವಸ್ಥೆ ಇಲ್ಲದಿರುವುದು ಇದಕ್ಕೆ ಕಾರಣಗಳು. ಈ ಸಮಸ್ಯೆ ಮಹಿಳಾ ಶಿಕ್ಷಕರಿಗೂ ತಪ್ಪಿದ್ದಲ್ಲ. ಸರ್ಕಾರದ ಯೋಜನೆಗಳ ಅಡಿ ಕಟ್ಟಿದ ಎಷ್ಟೋ ಶೌಚಾಲಯಗಳು ನಿರ್ವಹಣೆಗೆ ಬರದೆ ಗೋಡಾನುಗಳಾಗಿ ಮಾರ್ಪಟ್ಟಿರುವುದು ಬೇಸರದ ಸಂಗತಿ. ಒಂದು ವೇಳೆ ಅವು ಬಳಕೆಯಲ್ಲಿದ್ದರೂ ಸರಿಯಾದ ಸ್ವಚ್ಛತೆಯ ನಿರ್ವಹಣೆ ಇಲ್ಲದೆ ಉಪಯೋಗಿಸಲು ಯೋಗ್ಯವಾಗಿರುವುದಿಲ್ಲ. ಮಕ್ಕಳಲ್ಲಿ ಸ್ವಚ್ಛತೆಯ ನಿರ್ವಹಣೆ ಅದರ ಮಹತ್ವದ ಅರಿವು ಮೂಡಿಸುವುದು ನಮ್ಮ ಕರ್ತವ್ಯವಾಗಬೇಕು. ಆಗ ಮಾತ್ರವೇ ಗಾಂಧೀಜಿಯವರ ಸ್ವಚ್ಛ ಭಾರತದ ಕನಸು ನನಸಾಗಲು ಸಾಧ್ಯ. ಹೆಣ್ಣು ಮಕ್ಕಳ ಸ್ವಯಂ ರಕ್ಷಣೆಗಾಗಿ ಕರಾಟೆ ಮೊದಲಾದ ಕಲೆಗಳನ್ನು ಕಲಿಸುವ ಪ್ರಯತ್ನಗಳಾಗಬೇಕು.
ಪದವಿ ಪೂರ್ವ ಕಾಲೇಜಿಗೆ ಸೇರುವಾಗ ಹೆಚ್ಚಿನ ಪಾಲಕರು ವಿಜ್ಞಾನವನ್ನೇ ಮಕ್ಕಳು ಓದಬೇಕೆಂಬ ಆಸೆ. ವಾಣಿಜ್ಯ ಹಾಗೂ ಕಲಾ ವಿಭಾಗ ಅಷ್ಟೇನು ಮಹತ್ವದ್ದಲ್ಲ ಎಂಬುದು ಅವರ ನಂಬಿಕೆ. ಎಲ್ಲ ಪಾಲಕರೂ ತಮ್ಮ ಮಕ್ಕಳು ಡಾಕ್ಟರ್, ಇಂಜಿನಿಯರ್ ಓದಬೇಕೆಂಬ ಬಯಕೆ. ಆದರೆ ವಾಣಿಜ್ಯ ಹಾಗೂ ಕಲಾವಿಭಾಗದಲ್ಲೂ ಅಷ್ಟೇ ಅವಕಾಶಗಳಿರುವುದು ಪಾಲಕರಿಗೆ ಮನನವಾಗಬೇಕು. ಎಲ್ಲರಿಗೂ ವಿಜ್ಞಾನವೇ ನೆಚ್ಚಿನ ವಿಷಯವಾಗಿರಬೇಕಿಲ್ಲ. ಮಕ್ಕಳ ಆಸಕ್ತಿಗಳನ್ನು ಪೋಷಕರು ನೀರೆರೆದು ಪಾಲಿಸುವ ಕಾರ್ಯವಾಗಬೇಕು. ಇನ್ನು , ಎಂಟ್ರೆನ್ಸ್ ಎಕ್ಸಾಮ್ ಗಳಾದ ಸಿಇಟಿ , ನೀಟ್ ಪರೀಕ್ಷೆ ತಯಾರಿಗಾಗಿ ಕೋಚಿಂಗ್ ಸೆಂಟರ್ ಗಳ ಅಬ್ಬರ ಹೇಳತೀರದು. ಆದರೆ ಈ ಸೌಲಭ್ಯಗಳು ಎಲ್ಲ ಮಕ್ಕಳಿಗೂ ದೊರಕುವಂಥದ್ದಲ್ಲ. ಗ್ರಾಮೀಣ ಭಾಗದ ಮಕ್ಕಳಿಗೆ ಇದು ತಲುಪಬೇಕಾದರೆ ಸರ್ಕಾರದ ಸಹಾಯ ಅವಶ್ಯಕ. ಗ್ರಾಮೀಣ ಭಾಗದ ಹಾಗೂ ಹಿಂದುಳಿದ ಮಕ್ಕಳ ಅಭಿವೃದ್ಧಿಗಾಗಿ ಹೊಸ ಯೋಜನೆಗಳ ಅವಶ್ಯಕತೆ ಇದೆ.
ಮಕ್ಕಳು ಪಠ್ಯದಲ್ಲಿ ಅಷ್ಟೇ ಅಲ್ಲದೆ ಆಟ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಎನ್ ಸಿ ಸಿ , ಎನ್ಎಸ್ಎಸ್, ರೆಡ್ ಕ್ರಾಸ್ ಗಳಂತಹ ಸ್ವಯಂಸೇವಕ ಸಂಘಗಳಲ್ಲಿ ಗುರುತಿಸಿಕೊಳ್ಳಬೇಕು. ಶಿಕ್ಷಣ ಬರೀ ಪಠ್ಯಪುಸ್ತಕದಿಂದ ಮಾತ್ರ ದೊರೆಯುವುದಿಲ್ಲ. ಶಿಕ್ಷಕರಿಂದ ನಮ್ಮ ಸ್ನೇಹಿತರಿಂದ ಸುತ್ತಲಿನ ಪರಿಸರದಿಂದ ಕಲಿತುಕೊಳ್ಳುವುದು ಸಾಕಷ್ಟಿರುತ್ತದೆ. ಎನ್‌ಸಿಸಿ ಹಾಗೂ ಎನ್ಎಸ್ಎಸ್ ಕ್ಯಾಂಪ್ ಗಳು ವಿದ್ಯಾರ್ಥಿಗಳಲ್ಲಿ ಶಿಸ್ತು , ಸಮಯದ ಮಹತ್ವ , ಸಹಬಾಳ್ವೆ, ರಾಷ್ಟ್ರೀಯತೆಯನ್ನು , ಏಕತೆಯ ಭಾವವನ್ನು ಮೂಡಿಸುತ್ತವೆ. ಇಂತಹ ಘಟಕಗಳು ಹೆಚ್ಚು ಹೆಚ್ಚು ಶಾಲೆಗಳನ್ನು , ಮಕ್ಕಳನ್ನು ತಲುಪುವಂತಾಗಬೇಕು. ನ್ಯಾಷನಲ್ ಕ್ಯಾಂಪ್ ಗಳು ಮಕ್ಕಳಲ್ಲಿ ಭರವಸೆಯನ್ನು ಮೂಡಿಸುವುದಷ್ಟೇ ಅಲ್ಲದೆ ಹೆಚ್ಚಿನ ಅವಕಾಶಗಳನ್ನು ಕೊಡುತ್ತವೆ.
ಕ್ರೀಡೆ , ನೃತ್ಯ , ಸಂಗೀತ , ರಂಗಭೂಮಿ ಇವೆಲ್ಲವೂ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಹಾಯಕವಾಗುತ್ತವೆ. ಪಠ್ಯದ ಜೊತೆಗೆ ಬೇರೆಯ ಪುಸ್ತಕಗಳು ಬೇರೆಯ ಪುಸ್ತಕಗಳನ್ನು ಓದುವ ಹಾಗೆ ಮಕ್ಕಳನ್ನು ಪ್ರೇರೇಪಿಸಬೇಕು. ಪೂರ್ಣಚಂದ್ರ ತೇಜಸ್ವಿಯವರ ರಚನೆಗಳು ಮಕ್ಕಳಲ್ಲಿ ಕನ್ನಡದ ಬಗೆಗೆ, ಪರಿಸರದ ಬಗೆಗೆ ಕಾಳಜಿಯನ್ನು, ಅಚ್ಚರಿಯನ್ನುಂಟುಮಾಡುತ್ತದೆ ಇಂತಹ ಅನೇಕ ಪುಸ್ತಕಗಳು ಲಭ್ಯವಿದ್ದು ಅವು ಮಕ್ಕಳನ್ನು ತಲುಪುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಶಾಲೆಯಲ್ಲಿ ಪಠ್ಯದ ಜೊತೆಗೆ ಪುಸ್ತಕಗಳನ್ನು ಓದುವ ಹಾಗೆ ಪ್ರೇರೇಪಿಸಬೇಕು. ನಾವು ಪಠ್ಯೇತರ ಚಟುವಟಿಕೆಗಳು ಎಂದು ಪರಿಗಣಿಸುವ ಆಟ- ಓಟ, ಸಂಸ್ಕೃತಿಕ ಚಟುವಟಿಕೆಗಳೂ ಸಹ ಅವಶ್ಯಕ. ಪ್ರತಿಯೊಬ್ಬರೂ ಡಾಕ್ಟರ್, ಇಂಜಿನಿಯರ್ ಆಗಲು ಸಾಧ್ಯವಿಲ್ಲ. ಬದುಕು ರೂಪಿಸಿಕೊಳ್ಳಲು ಹಲವಾರು ಆಯ್ಕೆಗಳಿವೆ. ತಾವು ಇಷ್ಟ ಪಡುವ, ಆಸಕ್ತಿ ಇರುವ ಎಲ್ಲ ಕ್ಷೇತ್ರದಲ್ಲೂ ಜೀವನ ಕಟ್ಟಿಕೊಳ್ಳುವ ಸಾಧ್ಯತೆ ಇದೆ. ಆಟೋಟಗಳನ್ನು ಉತ್ತೇಜಿಸಲು ಕ್ರೀಡಾಕೂಟಗಳಿವೆ ಆದರೆ ಅವು ಶಾಲೆಯ ಸ್ಪರ್ಧೆಗಷ್ಟೇ ಮೀಸಲಾಗದೆ ಮಕ್ಕಳಲ್ಲಿ ಜೀವನೋತ್ಸಾಹ ತುಂಬುವ ಸಂಜೀವಿನಿಯಾಗಬೇಕು. ನೃತ್ಯ, ಸಂಗೀತ, ನಾಟಕಗಳೆಲ್ಲವೂ ಬರಿಯ ಆಸಕ್ತಿಗೆ ಸೀಮಿತವಾಗದೇ ಅಲ್ಲಿಯೂ ಜೀವನದ ಆಯ್ಕೆ ದೊರೆಯಬೇಕು. ಲಲಿತ ಕಲಾ ಕಾಲೇಜು, ಜನಪದ ವಿಶ್ವವಿದ್ಯಾಲಯಗಳ ಅರಿವು ಅದರ ಮಹತ್ವ ಮಕ್ಕಳಿಗೆ ಪಾಲಕರಿಗೆ ತಲುಪಬೇಕು.
ಇಂಟರ್ನೆಟ್ ಕ್ರಾಂತಿ ಇಂದ ಪ್ರಪಂಚವೇ ಒಂದು ಜಾಗತಿಕ ಗ್ರಾಮವಾಗಿದೆ. ಪ್ರತಿ ವಿಷಯವು ಕೈಬೆರಳಿನ ತುದಿಯಲ್ಲಿದೆ. ಆದರೆ ಇದರಿಂದ ಅನುಕೂಲಗಳ ಜೊತೆಗೆ ಅನಾನುಕೂಲಗಳೂ ಉಂಟು. ಇದರ ತಿಳಿವು ಮೂಡಿಸುವುದು ಶಿಕ್ಷಣದ, ಶಿಕ್ಷಕರ ಕರ್ತವ್ಯ ವಾಗಬೇಕು. ಪ್ರತಿ ಶಾಲೆಯಲ್ಲೂ ಕಂಪ್ಯೂಟರ್ ಶಿಕ್ಷಕರಿರಬೇಕು, ಆದರೆ ಎಷ್ಟೋ ಶಾಲೆಗಳಲ್ಲಿ ಕಂಪ್ಯೂಟರ್ ಧೂಳು ಹಿಡಿದು ಕೂತ ಉದಾಹರಣೆಗಳಿವೆ. ಇಂದು ನಾವು ಕೃತಕ ಬುದ್ದಿಮತ್ತೆಯ ಯುಗದಲ್ಲಿದ್ದೇವೆ. ಇದರ ಅರಿವು ಶಿಕ್ಷಕರಿಗೂ, ಮಕ್ಕಳಿಗೂ ಇರುವುದು ಅವಶ್ಯಕ, ಇದರ ನಿಟ್ಟಿನಲ್ಲಿ ಸರ್ಕಾರದ ಯೋಜನೆಗಳು ಜಾರಿಗೆ ಬರುವುದು ಅವಶ್ಯಕ. ಭಾಷೆ ಮನುಷ್ಯನ ಜೀವನದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ, ಮಾತೃ ಭಾಷೆ ಇನ್ನೂ ಮಹತ್ವದ ಪಾತ್ರವನ್ನು ವಹಿಸುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಹಲವು ಭಾಷೆಗಳನ್ನರಿಯುವುದು ಅವಶ್ಯಕ ಆದರೆ ಮಾತೃ ಭಾಷೆಯನ್ನು ಕಡೆಗಣಿಸುವುದು ಎಷ್ಟು ಸರಿ? ಎಷ್ಟೋ ಶಾಲೆಗಳಲ್ಲಿ ಕನ್ನಡ ತೃತೀಯ ಭಾಷೆಯಾಗಿದೆ. ನಮ್ಮ ನೆಲದಲ್ಲೇ ನಮ್ಮ ಭಾಷೆ ತೃತೀಯ ಭಾಷೆಯಾಗಿರುವುದು ಎಷ್ಟು ಸಮಂಜಸ?. ಒಂದು ಹಂತದವರೆಗೆ ಕನ್ನಡವನ್ನು ಶಾಲೆಗಳಲ್ಲಿ ಕಡ್ಡಾಯಗೊಳಿಸುವುದು ಅನಿವಾರ್ಯವಾಗಿದೆ. ಹಾಗೆಯೇ ಮಾತೃ ಭಾಷೆಯಲ್ಲಿ ಓದಿದವರಿಗೆ ಉನ್ನತ ವಿದ್ಯಾಭ್ಯಾಸದಲ್ಲಿ, ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಇರುವುದು ಒಳ್ಳೆಯ ಯೋಜನೆ ಎನಿಸಿದೆ.
ಬಾಲಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ ಗಳಾದರೂ ಈ ಅನಿಷ್ಟ ಪದ್ದತಿಗಳು ಇನ್ನೂ ನಿಂತಿಲ್ಲ. ಆದ್ದರಿಂದ ಪಾಲಕರಲ್ಲಿ ಜಾಗೃತಿ ಮೂಡಿಸುವ ಸಭೆಗಳು ನಾಟಕಗಳು ಬೀದಿ ನಾಟಕಗಳು ಆಗಬೇಕು. ಈ ಪದ್ಧತಿಗಳನ್ನು ಸರಿಪಡಿಸಲು ಕಾನೂನು ಇದೆಯಾದರೂ ಕಾನೂನಿನ ಕಣ್ಣು ತಪ್ಪಿಸಿ ಹಲವಾರು ಕಾರ್ಯಗಳು ನಡೆಯುತ್ತವೆ. ಇಂತಹ ಕೃತ್ಯಗಳು ನಿಲ್ಲಬೇಕಾಗಿದೆ. ಅರ್ಹ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಗಳು ದೊರೆಯಬೇಕು. ಉನ್ನತ ವ್ಯಾಸಂಗ ಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು. ವಿಜ್ಞಾನದ ಆವಿಷ್ಕಾರಗಳು ಹೆಚ್ಚಬೇಕು, ಅದಕ್ಕೆ ಬೇಕಾದ ಸೌಕರ್ಯಗಳು ದೊರೆಯಬೇಕು. ಶಿಕ್ಷಣ ಬರಿ ಅಕ್ಷರಸ್ಥರನ್ನಾಗಿಸಿದರೆ ಸಾಲದು , ಮಗುವಿನ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಬೇಕು. ಏಕತೆ, ಸಮನ್ವತೆ, ಪರಿಸರ ಕಾಳಜಿ, ಕರುಣೆ, ಪ್ರೀತಿ, ಸಹಬಾಳ್ವೆ ಮಕ್ಕಳಲ್ಲಿ ಮೂಡಿಸುವುದು ಶಿಕ್ಷಣದ ಗುರಿಯಾಗಬೇಕು. ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಆರ್ಥಿಕವಾಗಿ , ಸಾಮಾಜಿಕವಾಗಿ ರಾಜಕೀಯವಾಗಿ ಉನ್ನತಿ ಸಾಧಿಸಲು ಶಿಕ್ಷಣ ಅವಶ್ಯಕವಾಗಿದೆ. ಅಂತಹ ಗುಣಮಟ್ಟದ ಶಿಕ್ಷಣ ಎಲ್ಲರಿಗೂ, ಎಲ್ಲಡೆಯೂ ದೊರೆಯಬೇಕೆನ್ನುವುದೇ ಇಂದಿನ ಆಶಯ ಮತ್ತು ಪ್ರಾರ್ಥನೆಯಾಗಿದೆ.
-ವಿದ್ಯಾಶ್ರೀ ಭಗವಂತಗೌಡ್ರ.
Wow Amazing