ಅಂಡೇ ಪಿರ್ಕಿ ಅಮೀರ..: ಶರಣಬಸವ. ಕೆ.ಗುಡದಿನ್ನಿ

ದೋ ಅಂತ ಮೂರಾ ಮುಂಜಾನಿಯಿಂದ ಬಿಡ್ಲಾರದ ಸುರಿಯೋ ಮಳ್ಯಾಗ ಅವನ್ಗೀ ಎಲ್ಲಿ ನಿಂತ್ಕಂಡು ಚೂರು ಸುಧಾರಿಸ್ಕೆಳ್ಳಬೌದೆಂಬ ಅಂದಾಜು ಹತ್ಲಿಲ್ಲ. ಹಂಗಾ ನೆಟ್ಟಗ ನಡದ್ರ ಪೂಜಾರಿ ನಿಂಗಪ್ಪನ ಮನೀ ಅದರ ಎಡಕ್ಕಿರದೇ ಅಮೀರನ ತೊಟಗು ಮನಿಯಂಗ ಕಾಣೊ ತಗ್ಡಿನ ಶೆಡ್ಡು. ಗಂವ್ವೆನ್ನುವ ಇಂತಾ ಅಪರಾತ್ರ್ಯಾಗ ಅಮೀರನೆಂಬೋ ಆಸಾಮಿ ಹಿಂಗ್ ಅಬ್ಬೇಪಾರಿಯಂಗ ಓಣಿ ಓಣ್ಯಾಗ ತಿರಗಾಕ ಅವ್ನ ಹಾಳ ಹಣೀಬರ ಮತ್ಯಾ ಮಾಡ್ಕೆಂಡ ಕರುಮಾನ ಕಾರಣ ! ಅವ್ನ ಹೇಣ್ತೀ ನೂರಾನಿ ರಾತ್ರ್ಯಾಗಿಂದ ಒಂದ್ಯಾ ಸವನ ಹೆರಿಗಿ ಬ್ಯಾನಿ ಅಂತ ಒದ್ದಾಡುತ್ತಿದ್ರ ಇವ್ನು ಕುಂಡಿ ಸುಟ್ ಬೆಕ್ಕಿನಂಗ ಬರೀ ತಿರಿಗ್ಯಾಡಾಕತ್ತಿದ್ದ. ಮುಟ್ಟಿ ನೋಡಿಕೆಂಡ್ರ ಜೇಬಿನ್ಯಾಗಿದ್ದ ಚಿಲ್ರೆ ನೂರಾ ಇಪ್ಪತ್ತು ರೂಪಾಯಿ ಲೋಬಾನ್ಕು ಆಗ್ದೆ ಆಸ್ಪತ್ರೆಗೆ ಸಾಗ್ಸೋ ಆಟೋಕರ ಸಾಕಾತವ ಇಲ್ಲಾ ಅನಂಗಾಗಿ ಕೈ ಸಾಲ ಇಸ್ಗಂಳ್ಳಾಕ ಅಂತ ಹಿಂಗ್ ಅವಸರ್ದಾಗ ಮನ್ಯಾಗಿಂದ ಹೊರಬಿದ್ದಿದ್ದ.

ಅವನೇನು ಹಂಗ ಪೂರ ಖರ್ಚೀಗೀ ಇಲ್ದಾಂಗ ಬದ್ಕೊ ಅಡ್ನಾಡಿ, ಐನಾತಿ ಮನುಷ್ಯಾಲ್ಲ ಆದ್ರಾ ಅವ್ನಿಗೆ ತಿಂಗ್ಳಿಗೆ ಅಂತ ಕೊಡ್ತಿದ್ದ ಗೌರ್ಮೆಂಟ್ ಸಾಲಿಯ ಪ್ಯೂನ್ ನೌಕ್ರೀ ಸಂಬ್ಳಾ ಮೂರ್ನಾಲ್ಕು ದಿನದ ಕುಡಿತಕ್ಕ ಖಲಾಸಾಗ್ತಿತ್ತು.ಅಲೇ ಇವ್ನಾ ಅವ್ನು ಅಂತಾಪರೀ ಧಿಮಾಕಿಲಿ ಕಾಸ್ಟ್ಲೀದು ಕುಡಿತ್ಯಾನೇನು ಅಂತ ನೋಡಿದ್ರೆ ಅದೂ ಇಲ್ಲ.! ಪುಟಕೋಸಿ ನಲವತ್ತೆಂಟು ರೂಪಾಯ್ದು ಒಂದು ರಗುತದ ಬಣ್ಣದ ರಮ್ಮು , ಅದಕ ಸೋಡಾದ ಮುಲಾಜಿಲ್ದೆ ಮುಂದಿದ್ದ ಜಗ್ಗಿನ್ಯಾಗಿನ ತಣ್ಣೀರಿನಾಗ ಕಲಿಸಿ ಗುಳುಕ್ ಅಂತ ಗ್ಲಾಸು ಒಂದ್ಸಲ ಎತ್ತಿ ಇಳಿಸಿದ್ರ ಮುಗೀತಿ. ನಡುವಿ ನೆಕ್ಕಾಕ ಒಂದ್ರುಪಾಯಿ ಮಾನೀಕಾರ ಬಾಯಿಚಟಕ್ಕ ಹಸಿವೋ , ಉರ್ದವೋ ಐದು ರೂಪಯಿಯ ಚೀಟಿ ಕಟ್ಟಿದ ಶೇಂಗಿದ್ದರೆ ಆಯ್ತು ಅವತ್ತಿನ ಜಾತ್ರೀ. ಆದ್ರೆ ಅಮೀರನ ತಿಂಡೀ ಚಾಲುವಾಗದೇ ಆಮ್ಯಾಕ . ಮೊದಲ ಕ್ವಾಟ್ರ ಹೊಟ್ಟ್ಯಾಕ ಸೇರಿ ಮಟ್ಟೂರು ದಾವಲಮಲಿಕ್ಕಾಗ, ಆನಹೊಸೂರು ಹುಸೇನ ಸಾಬಾಗ ಮನಸಿನ್ಯಾಗ ಕೈ ಮುಗ್ದು ಡರ್ರ್ ಅಂತ ತೆಗಿ ಒಂದು ದೊಡ್ಡುಸ್ರು ಬಿಟ್ಟು ನಶೆಯೆಂಬುದು ಅಲೆಅಲೆಯಾಗಿ ಮಿದುಳನ್ಯಾಗ ಒಕ್ಕಂಡು , ಮೈಯ ಮ್ಯಾಲಿನ ಮುಕ್ಕೋಟಿ ರೋಮಗಳೆಲ್ಲ ನಿಗುರಿ ನಿಂತು,
ನರ-ನಾಡಿಗಳೆಲ್ಲ ಪಂಪ್ ಸೆಟ್ ಹಚ್ಚಿ ನೀರುಬಿಟ್ಟ ಪೈಪಿನಂಗಾಗಿ ಇರುವ ನಲವತ್ತಾರು ಕೆಜಿ ತೂಕದ ಕಡ್ಡೀಪುಡಿ ಬಾಡಿ ಗಾಳ್ಯಾಗ ತೂರಾಡಿ
” ಅಲಲಲೈ ಸಾರಥಿ ನಾನು ದಾರೆಂದರೆ”
ಎಂದು ಉದ್ಗಾರ ಶುರುವಾತಿತ್ತು. ಆ ಶಬುದ ಹಂಗ ಒರಗ ಬಂದ್ರಾ ಸಾಕು ಆಕಡಿ-ಈಕಡೀ ಕುಂತ ನಾಕು ಮಂದಿ ಬಾಳೇವಸ್ತರು
” ಚಾಲುವಾತಲೇ ಅಮ್ಮೀರನ ಕಥೀ ನಾವ್ ಸತ್ವಿ” ಅಂತ ಕುಳಿತ ಟೇಬಲ್ಲಿನಿಂದ ಅನಾಮತ್ತು ಗ್ಲಾಸು ,ಆಮ್ಲೇಟಿನೊಂದಿಗೆ ಮಾಯಾತಿದ್ರು. ಆಗಲೆ ಕುಡಿದು ಚಿತ್ತಾಗಿ ಮತ್ಯಾ ಕುಡ್ಯಾಕ ಗತಿ ಇಲ್ದ ಕುಂತ ಟೇಬಲ್ದಾಗ ಹಾರಾಡೋ ನೊಣ ಹೋಡೀತಿದ್ದೋರಿಗೆ ಲಾಟ್ರೀ ಹೊಡ್ದಾಂಗಾಗಿ ಅಮೀರನೆಂಬುವವನು ಸಂಬಳವೆಂಬ ನಿಧಿಯನ್ನು ಜೇಬಲ್ಲಿಟ್ಟು ಕೊಂಡ ಬೈಪಾಸ್ ರೋಡಿನ ಬ್ಯಾಂಕಿನಂಗ ಕಂಡು ಅವನ ಸುತ್ತ ಮುಕುರುತ್ತಿದ್ದರು.

ಜನ ಸೇರ್ದಷ್ಟು ಅಮೀರನ ಕುಂಡಿ ಈಟಗಲ ಆಗಿ ಸ್ವರ ತಾರಕಕ್ಕೇರುತ್ತಿತ್ತು
” ಅತಳ ವಿತಳ ಪಾತಾಳ ತಳತಳದಲೀ ಇರದ ಸಿರಿವಂತ ಪಿಂಜಾರ ಮೈಬ್ಯಾನ ಮಗನಲೇ ಈ ಅಮೀರ”
ಎಂದು ಆಗಲೇ ಕುಡ್ದು ಸೈಡಿಗಿಟ್ಟ ಗಾಜಿನ ಗ್ಲಾಸನು ಪತರಗುಟ್ಟುವಂತೆ ಟೇಬಲ್ಲಿಗೆ ಕುಟ್ಟುತ್ತಿದ್ದ.
ಮುಂದೆ ಕುಳಿತವರು ” ನೀವು ಅಂತಹವರೇ ಆಗಿದ್ದರೆ ಈ ಬಸ್ಟಾಂಡ್ ಮುಂದಿನ ಸಂಗೀತ ಬಾರ್ನ್ಯಾಗ ಬಂದು ಕೂತುದ್ಯಾಕ ಮಹಾರಾಜರೇ”
ಅಂದದ್ದೆ ತಡ ಮುಂದಿದ್ದ ಮೂರು ಕಡೇ ಮುರಿದ ಪ್ಲಾಸ್ಟಿಕ್ ಟೇಬಲ್ಲನ್ನ ದಡಲ್ ಅಂತ ದಬ್ಬಿ
” ಕುಡುದ್ರ ಓಟೀನೇ ಕುಡ್ಯಾದು, ಕುಂತ್ರ ಸಂಗೀತ್ದಾಗ ಕುಂದ್ರಾದು, ಹೆಣ ಬಿದ್ರು ಎಣ್ಣಿ ಚೇಂಜ್ ಮಾಡ ಪೈಕಿ ಅಲ್ಲಲೇ ಅಲಲಲೈ…
ಅಂತಂದು ಒದ್ರತಿದ್ದ ಮತ್ತು ಅದೇ ಗುಂಗಿನ್ಯಾಗ ಮುಂದ ಕುಂತ ಕರೀಮುಖದ ಮಂದೀಗಿ ಕುಡಿಯದಿದ್ದರೆ ಜೀವಾನೇ ಬಿಟ್ಟಾವು ಎಂಬಂತೆ ಡಾವಾಕಿ ಕುಂತ ಜೀವಗಳಿಗಿ ಎಲ್ಡೆಲ್ಡು ಕ್ವಾಟ್ರು, ತಾ ಒಣ ಶೇಂಗಾ ತಿಂದ್ರು ಅವರಿಗೆ ಆಮ್ಲೇಟು ಅದರ ಮ್ಯಾಲ ಅವಾಗರ ಕರಿದ ಗೌಸ್ ನ ಅಂಗ್ಡಿಯ ಗಮಾಗಮ ಕಬಾಬು ಆರ್ಡರ ಮಾಡಿ “ತಿನ್ರಲೇ ಎಷ್ಟ್ ತಿಂತೀರಿ, ನಾಳಿ ಸತ್ರ ಯಾವ್ ಸೂಳೀಮಗ್ನು ಹೊತ್ಗಂಗಂಡೋಗಂಗಿಲ್ಲ”
ಅಂತ ಪುರಾಣ ಹಚ್ತಿದ್ದ. ಎಲ್ಲಾ ಕಥೀ ಮುಗಿದು ಮುಂದೆ ಕುಳ್ತವ್ರೆಲ್ಲ ಕರಗಿ ಅಂಗಡಿಯ ಬಾಗ್ಲು ಮುಚ್ವುವ ಹುಡುಗ ಬಂದು ಬಿಲ್ಲು ಮುಂದೆ ಹಿಡ್ದಾಗನ ಅಮೀರನ ಚಣ್ಣ ಟರ್ರ್ ಅಂದು ಲಾಡಿ ಸಡ್ಲಾಗೋದು.
” ಇವನೌನ ಇಟ್ಟಾತ್ಯಲಲೇ ಬಿಲ್ಲು, ಹೆಣ್ತೀ ಚಪ್ಲೀ ತಗಂತಾಳಪೋ”
ಅಂತ ಅನಕಾಂತನೇ ಮನೀ ದಾರಿ ಇಡೀತಿದ್ದ.

ಇಂತಿಪ್ಪ ಅಮೀರನ ಅಂಗೈವೊಳಗೆ ಕತ್ತರಿ ಎಂಬುದು ನಿಕ್ಕಾ ಇದೆಯೆಂತಲೂ ಜುಬ್ಬ ಪಾಯಜಾಮಾದ ತುಂಬ ಬೊಕ್ಕಣಗಳಿದ್ದರೂ ಲಕ್ಷ್ಮೀ ಎಂಬಾಕಿ ಪುರುಸೊತ್ತು ಇಲ್ದಾಂಗ ಅಲ್ಲಿರಲಾರ್ದ ಓಡಿ ಹೋತಾಳಂತ ಮದುವಿಯಾದ ಮೂರು ದಿನಕ್ಕ ನೂರಾನಿ ಎಂಬ ಅಮೀರನ ಹೇಣ್ತಿಗೆ ಗೊತ್ತಾಗಿ ತನಗೆ ಹಿಂದೆ-ಮುಂದೆ ನೋಡದೇ ಗೌರ್ಮೆಂಟು ಪಗಾರಾದ ಬಾಳೇವು ಪಾಡಾತದ ತಗಾ ಅಂತ ಅಪ್ಪನ ತಲೀ ತುಂಬಿ ಮದುವೀ ಮಾಡಿಸಿದ ತನ್ನೂರ ಇಮಾಮ ಸಾಬು ಮಾಮನ ಹೆಣಕ್ಕ ಸಾಪಿಸ್ತಿದ್ಲು.

ಕೈಸಾಲ ಕೇಳಾಕ್ಕಂತ ಹೊರಗ ಬಿದ್ದಾಂವಗ ಯಾರಾಂತ್ಯಾಕ ರೊಕ್ಕಾ ಕೇಳಾದು, ಈಟೋತ್ತಿನ್ಯಾಗ ಯಾರ್ ಮನೀ ಬಾಗ್ಲು ಬಡಿಯಾದ ಅಂಬ ಚಿಂತ್ಯಾಗ ದೊಡ್ಡ ಹನಮಂದೇವರ ಗುಡಿ ದಾಟಿ ಮಹಾಬಲೇಶ ಮಾಸ್ಟ್ರ ಮನೀ ಮುಂದ ಬಂದು ನಿಂತಿದ್ದ. ಕೂಗಾಕ ದನಿ ಬರಾವಲ್ದು ಈಟೋತ್ಯ್ನಾಗ ನಿಂದೇನು ಕಿರಿಕಿರಿ ಅಂದ್ರೆಂಗ ಅನಿಸಿತಾದರೂ ಬ್ಯಾರೇ ದಾರೀ ಕಾಣಲಾರದ ಮನೀ ಬಾಗಿಲಕ ಇದ್ದ ಚಿಲಕ ಕೈಯಾಗಿಡ್ದು ಹಗೂರಕ ಟಕಾಟಕಾ ಬಡ್ದಾ ಮೊದಲ ಬಡ್ತಕ ಏನು ಸೌಂಡ್ ರಿಪ್ಲೈ ಬರ್ಲಾದ್ದಕ ಮತ್ಯಾ ಹಿಂಗ್ ಒಂದ್ಸಲ ಬಡ್ಯಾಕ “ಯಾರದೂ.?
ಅಂತ ಸಾಕ್ಷಾತ್ ಮಾಸ್ಟ್ರಾ ಬಂದ್ರು. ಮುಖದ ತುಂಬಾ ದಿಗ್ಲು ತುಂಬಿಕೆಂಡು ಮಳೀಗಿ ತೊಪ್ಪನ ತೊಯ್ದು ಬಾಗಲ್ಯಾಗ ನಿಂತಿದ್ದ ಪ್ಯೂವುನ್ ಅಮೀರಗ ನೋಡ್ತಿಂದ್ಹಂಗ ಶುಗರ್ರಿನಾಗ ಮುಳುಗಿದ್ದ ಹೆಡ್ ಮಾಸ್ಟ್ರೆಲ್ಲಿ ಸ್ವರ್ಗ ಸೇರುದ್ರೇನು ಹೆಚ್ಚೆಮ್ ಪಾಳಿ ಕುತಿಗಿ ಬಂತು ಅಂತ ಹೆದ್ರೀ
” ಏನಾತೋ ಸಾಬು ಈಟೋತ್ಯ್ನಾಗ?
ಅಂತ ಬಾಗಲ್ಯಾಗಿಂದ ಗೋಣು ಮುಂದ ಚಾಚಿದ್ರು.
“ಹಿಂಗಿಗ್ರೀ ಸರಾ ಮನ್ಯಾಗ ಹೇಣ್ತೀ ಬ್ಯಾನಿ ತಿನ್ನಕತ್ಯಾಳ ದವಖಾನೀಗಿ ಹಚ್ಚಾಕ ರೊಕ್ಕಿಲ್ಲ ಅದಕ ಬಂದಿನ್ರೀ”
ಅಂತ ಅಷ್ಟೆತ್ತರದ ಮೈಯನ್ನ ಈಟಾ ಮಾಡಿ ಕೈ ಕಟ್ಟಿ ನಿಂತೊಂಗಂಡ್ರ
” ಹೇ ನಿನ್ನೇರ ಕೇಳಬಾರದೇನಾ ಕೋಡಿ ಮನೀ ಕಂತು ಕಟ್ಟಿದ್ಯಾ ಈಗೆಲ್ಯಾವ ರೊಕ್ಕಾ ಮುಂಜಾನಿ ನೋಡಾಮು ತಗಾ “
ಅಂತಂದು ದಡಕ್ಕಂತ ಬಾಗ್ಲು ಹಾಕ್ಕಂಡ್ರು. ಮಾರಿಗಿ ಹೊಡ್ದಾಂಗಾತು. ಮುಖದ ಮ್ಯಾಲಿ ಹಳ್ಳು ಒಡೆದ ಮೊಬೈಲಿನ್ಯಾಗ ಇದನ್ನ ಕೇಳಬೌದಿತ್ತು ಆದ್ರ ಮುಂದಿದ್ರ ಮಾತು ಬ್ಯಾರೇತದ ಅಂತ ಬಂದ್ರ ಹಿಂಗಂದ್ರು ಅಂತ ಅಮೀರ ಎದೀ ಒಡೆದ. ವಾಪಸ್ಸು ಬರಾ ಮುಂದಾ ನೆಪ್ಪು ಆದವರಿಗೆಲ್ಲ ಫೋನಚ್ಚಿದ ಕೆಲವರು ಫೋನೆತ್ತಿ ಹಲೋ, ಹಲೋ ಅಂತ ನಾಟಗ ಮಾಡಿದ್ರು ಇನ್ನೊಸ್ವಲಪು ಮಂದೀ ಅಳಾರಗತೀ ಮಾತಾಡಿ ರೊಕ್ಕಿಲ್ಲಂದ್ರು.

ಇಡೊ ಹೆಜ್ಜಿ ವಜ್ಜೀ ಅನಿಸಿ ಚೂರು ನಿಂತು ಸುಧಾರಿಸಿಕೆಂಡ್ರು ಜೀವ ತಡೀಲಿಲ್ಲ ಮನ್ಯಾಗಿದ್ದ ನೂರಾನಿ ಎಷ್ಟು ನೋವು ತಿಂದು ಒದ್ಯಾಡ್ತಾಳೋ,ಬತ್ಯಾಕ ಮಕ್ಕಂಡಿರೋ ಮೂರು ವರಸದ ಮಗ್ಳು ಫಾತಿಮಾ ಎಲ್ಲಿ ಎದ್ದು ಗಲಾಟಿ ಮಾಡಕತ್ಯಾಳೋ ಅಂತ ಸಟಕ್ ಪುಟಕ್ ಅಂತ ಹಾಕ್ಯಂಡ ಸ್ಯಾಂಡಲ್ ಚಪ್ಲಿ ಶಬುದ ಮಾಡಿಕೆಂತ ರೋಡಿನ್ಯಾಗ ಕಾಲು ಇಡಾ ಹೊತ್ತಿಗಿ ಎಡಕಾಲು ಸಿಸಿ ರೋಡಿನ್ಯಾಗ ನಟ್ಟ ನಿಂತಿದ್ದ ಕಲ್ಲೀಗಿ ಎಡವಿ ಜೀವ ಹೋದಂಗ್ಹಾಗಿ ನೋಡಿಕೆಂಡ್ರ ರಗುತ ಬಳ್ಳ ತುಂಬಾ ಇಳ್ದು ಮಳೀ ಜತೀ ಸೇರ್ಕ್ಯಂಡು ಹೊಂಟಿತ್ತು. ಆದ್ರೂ ಅದ್ಯಾವದರ ಪರಿವೀ ಇಲ್ದಾಂಗ ಶೆಡ್ಡಿನ್ತಲ್ಲಿ ಬರಾಹೊತ್ಗೀ ಒಳಗಿಂದ ಬಂದ ಬಾಜೂ ಮನೀ ಪದ್ದಮ್ಮಕ್ಕ
” ಎಲ್ಲೋಗಿದ್ದೋ ಅಮೀರಸಾಬು, ನಿನ್ ಹೇಣ್ತೀ ಆ ಪರೀ ಬಡ್ಕಂತಿದ್ಲು ಬಂದು ನೋಡಿದ್ರೇ ಬಾಣಿಂತಾನ ಆಗಂಕಾಣ್ತಿ “
ಅನ್ನಾಟಿಗಿ
ಅಮೀರನ ಕಣ್ಣಾಗಿಂದ ಬಳ್ ಅಂತ ನೀರು ಬಂದು
” ಯಕ್ಕಾ ದೌಖಾನಿಗಿ ತೋರ್ಸಾಕ ರೊಕ್ಕಿದ್ದಿಲ್ಲ ಯಾರ್ನಾರ ಕೇಳಾಮು ಅಂತ ಹೋಗಿದ್ದೆ ಹೆಂಗೈತವ ಯಕ್ಕಾ ನನ್ ಹೇಣ್ತೀ”
ಅಂತ ಅಳಕಾಂತ ಹೇಳೋವತ್ತಿಗೆ
ಪದ್ದಮ್ಮ
” ಅಳಬ್ಯಾಡೋ ಅಮೀರಣ್ಣ ರಾಜ್ಕುಮಾರನಂತ ಮಗಾ ಹುಟ್ಯಾನ, ದವಾಖಾನಿಗಿ ಫೋನಚ್ಚಾಮು ಅಂಬುಲೆನ್ಚ್ ಬರ್ತಾದಂದ್ರ ನಿನ್ ಹೇಣ್ತೀ ಬ್ಯಾಡ ಯಕ್ಕಾ ನನಗಂಡಗ ತ್ರಾಸಾತದ ಮೊದ್ಲಾ ರೊಕ್ಕಿಲ್ಲ ಅಂತ ಒದ್ಯಾಡ್ತಾನ ಏಟರ ತ್ರಾಸಗ್ಲಿ ಇಲ್ಯಾ ಬಾಣ್ತನ ಮಾಡು ಅಂದ್ಲೋ ಎಂತಾ ಪುಣ್ಯಾತಿಗಿತ್ತಿಗಿ ಪಡಿದೀ”
ಅಂತೇಳಿ ಬರಾಬರ ಒಳಗೋಗಿ ಅಳಾ ಹಸಾಗೂಸನ ಬಟ್ಟ್ಯಾಗ ಹಿಡ್ಕಂಡು ಬಂದು ತೋರಿಸಿದ್ಲು.
ಕಣ್ಣೀರು ಕಪಾಳಕ್ಕಿಳೀತಿದ್ರೂ ಕೈಯಾಗ ಇದ್ದ ಕೂಸಿನ ಮಾರೀ ನೋಡೀಕ್ಯಾಂತ
“ನೂರೀsss”
ಅನಕೋಂತ ಒಳಗ ಕಾಲಿಟ್ಟ. ಹರದ ಕೌದಿ ಮ್ಯಾಲ ತಲಿದಿಂಬಿಗಿ ಆನಿಕೆಂಡು ಮಲಿಗಿದ್ದ ನೂರಾನಿ ಮುಖದಾಗ ಅಳು,ನಗು,ಮುನಿಸುಗಳೆಂಬ ನೂರೆಂಟು ಭಾವಗಳ್ನ ತುಂಬಿಕೆಂಡು ಸುಮ್ಮಗ ನೋಡಿದ್ಲು. ಕೂಸಿನ ಆಕಿ ಮಡಿಲಾಗ ಇಟ್ಟು ಪಿಳಿ ಪಿಳಿ ಕಣ್ಣು ಬಿಟಗಂಡು ಮನೀಗ್ ಬಂದ ಹೊಸ ತಮ್ಮಗ ಹೆಂಗ್ ಎತ್ತಿಗೆಳ್ಳಾದು ಅಂತ ಕುಂತಿದ್ದ ಮಗಳ ಫಾತೀಮನ ತಲೀ ನೇವರಿಸಿ
“ಇನಮ್ಯಾಕ ನಾ ಕುಡಿಯಾಂಗಿಲ್ಲ, ಇಲ್ದಾಗ ಯಾವ ಸೂಳಿಮಗ್ನು ಬಾಯಾಗ ಉಚ್ಚಿ ಹೊಯ್ಯಾಂಗಿಲ್ಲ, ಇನ ಮ್ಯಾಲ ನೋಡ ನಾ ಯಾಂಗ ಬದುಕವ ಇದೀನಿ”
ಅಂತೇಳಿ ಎದ್ದು ಶೆಡ್ಡಿನೊಳಗಿಂದ ಹೊರಗ ಬಂದ. ಹಾಂಗ್ ಬರುವದಕ್ಕ ಚುಮು ಚುಮು ಬೆಳಕಾಗಿ ಸೂರ್ಯ ಪರಮಾತ್ಮ ಹೊರಗ ಬರಾಕತ್ತಿ ಪುಟ್ಯಾಗಿದ್ದ ಕೋಳಿ ಇದು ಬರೀ ಬೆಳಕಲ್ಲೋ ಹೊಸ ಬದುಕು ಅಂತ ಕೂಗಾಕತ್ತಿತ್ತು.

-ಶರಣಬಸವ. ಕೆ.ಗುಡದಿನ್ನಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x