ನನ್ನವ್ವ ಬೆವರುತ್ತಾಳೆ. . . . . .
ಕೆಂಡ ಕಾರುವ
ರಣ ಭೀಕರ ಬಿಸಿಲನ್ನು ತಲೆಗೆ ಸುತ್ತಿಕೊಂಡು
ಮಾಸಿದ ಸೀರೆಯ
ಜೋಳಿಗೆಯಲಿ ಬೆತ್ತಲೆ ಮಗುವ ಮಲಗಿಸಿ
ಜಗದ ಹೊಟ್ಟೆ ತುಂಬಿಸಲೆಂದು
ಭತ್ತ ನಾಟಿ ಮಾಡುವಾಗ
ನನ್ನವ್ವ ಬೆವರುತ್ತಾಳೆ
ಮಂಜುನಾಥನ ಮಾತಾಡಿಸಲು
ಮಾರಿಕಾಂಬೆಯ ಮುಂದೆ ಸೆರಗೊಡ್ಡಲು
ಚಾಮುಂಡಿಯ ಕಾಲುಗಳಲಿ ಬಿಕ್ಕಳಿಸಲು
ಮಹಾನಗರದ ಗಗನಚುಂಬಿ ಕಟ್ಟಡದ
ಬುಡದ ಸಂದಿಯಲಿ
ಉಸಿರಾಡಲು ಕಷ್ಟ ಪಡುತಿರುವ
ಕರುಳ ಬಳ್ಳಿಯ ಬೆನ್ನ ಸವರಲೆಂದು
ತಿರುಗಾಡುವಾಗ
ನನ್ನವ್ವ ಬೆವರುತ್ತಾಳೆ
ತುಂಡು ಬ್ರೆಡ್ಡು
ಅರ್ಧ ಕಪ್ಪು ಹಾಲು ಕೊಟ್ಟು
ಪತ್ರಿಕೆಯಲಿ ಫೋಟೋ ಹಾಕಿಸಿಕೊಳ್ಳುವ
ತೆರಿಗೆಗಳ್ಳರ ದುಡ್ಡಿನಲಿ ಮಾಡುವ
ಸಮಾನತೆಯ ಕಾರ್ಯಕ್ರಮದ
ಊಟದ ಮನೆಯಲಿ
ಕಸ ಹೊಡೆಯುವಾಗ
ನನ್ನವ್ವ ಬೆವರುತ್ತಾಳೆ
ಒಂಟಿ ಚಪ್ಪಲಿಯನ್ನು ಬೀದಿಯಲಿ
ಬಿಸಾಕುವಂತೆ
ಬಿಟ್ಟು ಹೋದವರ
ಮನೆ ಮುರಿಯದೆ
ಮೂಕ ಪರದೆಗಳ
ಹಿಂದೆ ತುಟಿ ಕಚ್ಚಿ ಕಣ್ಣೀರ ಕುಡಿಯುತ್ತ
ಮೈ ಮುರಿಯುವಾಗ
ನನ್ನವ್ವ ಬೆವರುತ್ತಾಳೆ
ಶತಮಾನಗಳ
ಅವಮಾನದ ಗಂಟನ್ನು
ಬಚ್ಚಲು ಮನೆಯ ಕನ್ನಡಿಯ ಹಿಂದೆ
ಬಚ್ಚಿಟ್ಟು
ಕಟ್ಟೆ ಮೇಲೆ ಕೂತವರ
ಕಣ್ಣುಗಳ ಹಸಿವನ್ನು
ಮಣ್ಣಿಗೆ ತೂರಿ
ತಲೆ ಎತ್ತಿ ನಡೆದಾಡುವಾಗ
ನನ್ನವ್ವ ಬೆವರುತ್ತಾಳೆ
ಕಾಲುಗಳ ನರಗಳನ್ನು
ಹೊಸೆದು ಮೈಯ ತುಂಬಾ ಬೊಬ್ಬೆ ಎಬ್ಬಿಸಿಕೊಂಡು
ತಾನೇ ಹಾಕಿದ
ಹೆದ್ದಾರಿಯಲಿ ಸಾಲದ ಮೂಟೆಗಳ ಹೊತ್ತು
ಎತ್ತಿನ ಬಂಡಿಯಲಿ ಬರುವಾಗ
ಐಷಾರಾಮಿ ಕಾರೊಂದು
ಮೂಗು ಮುರಿದು
ಹೋಗುವುದು
ನೋಡಿ
ನನ್ನವ್ವ ಬೆವರುತ್ತಾಳೆ
ತಲೆ ಹಿಡಿಯದೆ
ತಲೆ ಒಡೆಯದೆ
ತಲೆ ಓಡಿಸದೆ
ನಿಯತ್ತಿನ ರೊಟ್ಟಿ ಸಂಪಾದಿಸಲು
ಹುಸಿ ಸಮಾಜ ಸೇವಕರ ಮನೆಯಲಿ
ಮುಸುರೆ ತಿಕ್ಕುವಾಗ
ನನ್ನವ್ವ ಬೆವರುತ್ತಾಳೆ
ಎಣ್ಣೆ ಕಾಣದ ಜಡೆಯಲಿ
ಚಿಂತೆಗಳ ಹೇನು ಸಾಕಿಕೊಂಡು
ಬೆನ್ನ ಮೇಲೆ ಇದಿಮಾಯಿ ಹಾಕಿದ
ಬರೆಗಳ ಕೆರೆದುಕೊಳ್ಳುವ
ಅವಳ ಚಿತ್ರವನ್ನು
ನಿಮ್ಮ ಶ್ರೇಷ್ಠತೆಯ ತೆವಲು ತೀರಿಸಿಕೊಳ್ಳಲು
ಬಳಿಸಿಕೊಳ್ಳುವಾಗ
ನನ್ನವ್ವ ಬೆವರುತ್ತಾಳೆ
ತಿರಸ್ಕಾರದ ನಂಜು ಬೆಳೆಯುವ ನಿಮ್ಮ
ಎದೆಗಳ ಹೊಲದ ಮೇಲೆ
ವಚನಗಳ ಲಸಿಕೆಯ ಮಳೆ ಸುರಿಯಲಿ
ಕಂಡ ಕಂಡ ದೇವರುಗಳ ಮುಂದೆ
ನನ್ನವ್ವ ಹಚ್ಚಿರುವ
ಅಸಂಖ್ಯ ಊದಿನ ಕಡ್ಡಿಗಳ ಘಮ
ನಿಮ್ಮ ಹೊಟ್ಚೆಯಲಿ
ಹುಟ್ಟುವ ಕೂಸುಗಳ ಕಾಪಾಡಲಿ
ಹೌದು ಜಗದ ಕೇಡೆಲ್ಲ
–ಮೆಹಬೂಬ ಮಠದ್
ಸಗ್ಗ
ಮಲ್ಲಿಗೆಯ ಮುಡಿದು ಮೆಲ್ಲಗೆ ಬಾ ಮಡದಿ
ಮೆಲುದನಿಯಲಿ ಮಾತಾಡುತ ಮಧುವನೀರುವ
ಸಿಹಿ ಮಧುವನೀರುವ.
ಮಧುವ ಸವಿಯಲಿ ಮಧುರ ಕ್ಷಣವ ಕಳೆವ
ಮಧುರ ಕ್ಷಣವ ಕಳೆವ.
ಮರೆಯದಿರು ಗೆಳತಿ ಮೊದಲ ರಾತ್ರಿಯಿದು
ಬಾರದು ಮತ್ತೆಂದು ತಿರುಗಿ,
ಆರಂಭ ಮಾಡುವ ಇದನು ಮುತ್ತಿಂದ ತೊಡಗಿ.
ಮತ್ತೊಂದು ಮೊಗದೊಂದು ಮುತ್ತನೀಡುತ
ಮರೆಯೋಣ ಈ ಜಗವ ಮತಿಗೆಡುತ.
ಸಗ್ಗವೆಂಬುದು ಬೇರಿಲ್ಲ ಕಾಣ ಜಗದಿ
ತೋಳತೆಕ್ಕೆಯಲಿ ಬಿಗಿದು, ಅಧರದೊಳಗಧರ ಸರಿದು
ಮಧುವ ಸವಿಯುತ, ಸಮಯ ಸರಿಸುತ,
ಬೆಚ್ಚನೆಯ ಅಪ್ಪುಗೆಯಲ್, ಶೃಂಗಾರ ಬಿಸಿಯೇರಿ
ಬಸವಳಿಯಲ್, ಅದೇ ಸಗ್ಗ ಕಾಣ ಮಡದಿ.
ಡಾ. ದೋ. ನಾ. ಲೋಕೇಶ್
ಎಷ್ಟೊಂದು ಸುಂದರವಾಗಿದೆ ಈ ನಗರ
ಎಷ್ಟೊಂದು ಸುಂದರವಾಗಿದೆ ಈ ನಗರ
ಈ ಮೊದಲು ಎಲ್ಲೂ ನೋಡಿರದ ಈ ನಗರ
ಎಷ್ಟೊಂದು ಸುಂದರವಾಗಿದೆ
ಧರ್ಮ ಭೇದವಿಲ್ಲದ ಈ ಜನರು ಅವರವರ
ಪಾಡಿಗೆ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದಾರೆ
ಇಲ್ಲ ಸಲ್ಲದ ಮಾತುಗಳಿಗೆ ಅವಕಾಶ
ಕಲ್ಪಿಸಕೊಡದೇ ಮೌನವನ್ನೇ ಕಾಪಾಡಿ ಶಾ೦ತಿಯ
ಸ೦ಕೇತದಲ್ಲಿ ಬದುಕುತ್ತಿದ್ದಾರೆ.
ಹೀಗಾಗಿ ಈ ನಗರದಲ್ಲಿ ಜಗಳಗಳು ಕಾಣಲು
ಸಿಗುವುದು ಅಪರೂಪ.
ಎಷ್ಟೊಂದು ಸುಂದರವಾಗಿದೆ ಈ ನಗರ
ಹಗಲು ಇರುಳಿನಲ್ಲೂ ಯುವತಿಯರು ಹೆ೦ಗಸರು
ಇಲ್ಲಿ ಯಾವ ಭಯವೂ ಇಲ್ಲದೆ ಒಬ್ಬ೦ಟಿಯಾಗಿ
ನಡೆದಾಡುತ್ತಾರೆ.
ರಾಣಿ ಆಳಿದ ಈ ನಗರದಲ್ಲಿ
ಹೆಣ್ಣು ಮಕ್ಕಳಿಗೆ ವಿಶೇಷ ಸ್ಥಾನಮಾನ.
ಹೀಗಾಗಿ ಇಲ್ಲಿ ಯಾವ ಅತ್ಯಾಚಾರಿಗಳು
ಲೂಟಿಕೋರರು ಇಲ್ಲ.
ಎಷ್ಟೊಂದು ಸುಂದರವಾಗಿದೆ ಈ ನಗರ
ರಾಣಿ ಮಹಲಿನ ಅನತಿ ದೂರದಲ್ಲೇ ಉದ್ಯಾನವನ
ವಾಯು ವಿಹಾರಕ್ಕೆ ತೆರಳುವ ಜನರು ಸೇರುವುದು
ಇದೇ ಉದ್ಯಾನವನದಲ್ಲಿ. ಈ ನಗರವನ್ನು ಆಳಿದ
ರಾಣಿಯ ಪುರಾತನ ಶಿಲುಬೆಯು ಕೂಡ ಇದೇ
ಉದ್ಯಾನವನದಲ್ಲಿದೆ. ಗುಲ್ಮೊಹರ್, ಲೀಲಿ
ಹೂವಿನ ಗಿಡಗಳು ಸೇರಿದಂತೆ ಇನ್ನೂ ಅನೇಕ
ಬಣ್ಣ ಬಣ್ಣದ ಹೂ ಗಿಡಗಳು, ಆಗಸದೆತ್ತರಕ್ಕೆ
ಬೆಳೆದು ನಿಂತಿರುವ ಮರಗಳು,
ಗಿಡ ಮರಗಳ ನೆರಳಿನ ಆಸರೆಯಲ್ಲಿ
ವಿಶ್ರಾಂತಿ ಪಡೆಯಲು ಕಟ್ಟಿಗೆಯಲ್ಲಿ
ನಿರ್ಮಾಣವಾಗಿರುವ ಚೆ೦ದದ ಆಸನಗಳು,
ಮೌನ ಗಾಳಿಯಲ್ಲಿ ತೇಲಿ ತೇಲಿ ಹಳದಿ ಚಿಟ್ಟೆಗಳಾಗಿ
ಉದುರಿ ಬೀಳುತ್ತಿರುವ ಒಣ ಎಲೆಗಳು
ಎಷ್ಟೊಂದು ಸುಂದರವಾಗಿದೆ ಈ ಉದ್ಯಾನವನ
ರಾಣಿ ಮಹಲಿನಿ೦ದ ನಾಲ್ಕೈದು ನಿಮಿಷದ ಕಾಲು
ದಾರಿಯಲ್ಲಿ ಪ್ರಾಣಿ ಸ೦ಗ್ರಹಾಲಯವಿದೆ.
ಪ್ರಾಣಿ ಪ್ರೀಯನಾಗಿದ್ದ ರಾಣಿ
ತನ್ನ ಹೆಚ್ಚು ಸಮಯವನ್ನು
ಈ ಪ್ರಾಣಿ ಸ೦ಗ್ರಹಾಲಯದಲ್ಲಿ ಕಳೆಯುತ್ತಿದ್ದರು
ಇಲ್ಲಿ ನಾನಾ ತರಹದ ದೇಶ ವಿದೇಶಗಳಿಂದಲೂ
ತರಿಸಿದ ಪ್ರಾಣಿಗಳು ಎಷ್ಟು ನೋಡಿದಷ್ಟೂ
ಕಡಿಮೆಯೇ. ಎಷ್ಟೊಂದು ಸುಂದರವಾಗಿದೆ ಈ
ಪ್ರಾಣಿ ಸ೦ಗ್ರಹಾಲಯ
ಪಕ್ಷಿ ಪ್ರೇಮಿಯೂ ಕೂಡ ಆಗಿದ್ದ ರಾಣಿ
ಮಹಲಿನ ತು೦ಬೆಲ್ಲ ಬಣ್ಣ ಬಣ್ಣದ ಪಕ್ಷಿಗಳನ್ನು
ಚಿತ್ರಿಸಿದ್ದಾರೆ, ಹೆಣ್ಣಿಗೂ ಪಕ್ಷಿಗೂ
ಸಮಾನತೆಯನ್ನು ಇಟ್ಟುಕೊಂಡು. . .
ಎಷ್ಟೊಂದು ಸುಂದರವಾಗಿದೆ ಈ ಚಿತ್ರಗಳು
ಹಾಗೂ ಈ ನಗರ. . . . .
-ನರೇಶ ನಾಯ್ಕ
ಕಣ್ಣ ಕಿಟಕಿಯಲ್ಲಿ
ಕಣ್ಣ ಕಿಟಕಿಯೊಳಗೆ
ಮಾವಿನ ಮರ ಹೂ ಬಿಡುತ್ತಿದೆ
ಕಾಲ ಕೂಟದ ಹೊರಗೆ
ಕಣ್ಣು ಮುಚ್ಚುವಾಗ ಹೂ ನಗುತ್ತಿದೆ
ಕಣ್ಣಾದ ಅಕ್ಷರದ ಮೇಲೆ
ದಾಳಿಯಾಗುವ ಮುನ್ನವೇ
ಪಾದ ಊರಿದ ಮೊದಲ ಸಾಲು
ಕಣ್ಣ ಕಿಟಕಿಯೊರಗೆ ಕಾಣದಾಗುತ್ತಿದೆ
ಕಣ್ಣ ಗೂಡಿಗೆ ಹೊತ್ತು ತರುವ
ಮುಚ್ಚಿದ ಕಣ್ಣ ಲಕೋಟೆಯಲಿ
ಎಂದೊ ಸಿಕ್ಕ ಹೂಗಳು ನಕ್ಕು ಬಿಡುತ್ತಿವೆ
ಕಾಣಲು ಸಿಗುವ ಮುಖಗಳು
ಕೃತಿಯಲ್ಲಿ ಅರಳಿ ಕಿಟಕಿಯೊರಗೆ ಸೊರಗುತ್ತಿವೆ
ಹೂ ಮಾರುತ್ತಿದ್ದ ಮಾರುಕಟ್ಟೆಯಲಿ
ಕಣ್ಣ ಹನಿಗಳಂತಿರುವ ನೀರ ಬಿಂದುಗಳ
ಕೊಡವಿ ಕೇಳುತ್ತಾ!
ಕಣ್ಣುರಿಯ ಕಾಣದ ಇಬ್ಬನಿ
ಜಾರಿ ಜಾರಿ ಕಣ್ಣ ಕಿಟಕಿಯೊರಗೆ ಬೀಳುತ್ತಿವೆ
ಕಾಣಲು ಸಾಧ್ಯವಾಗುವುದ?
ಕಣ್ಣ ಕಿಟಕಿಯೊಳಗಿನ ಮುಗ್ಧ ಚಿತ್ರವ!
ಕಣ್ಣ ಮುಚ್ಚಿಸುವ ಹುನ್ನಾರವಿದೆ ಇಲ್ಲಿ
ಹೂ ಗಂಧವ ಮೂಸಲು!
ಕಣ್ಣಿಗೆ ಕಟ್ಟಿದ ಕಾಣದ ಮುಖವ
ಹೃದಯಕೆ ಪ್ರೇಮವ ಹೂಡಿಕೆ ಮಾಡಿ ಕಾಣುವ
ನಾವ್ ಈ ಕಣ್ಣ ಕಿಟಕಿಯೊರಗೆ ಹೂವಾಗುವಾ?
-ಶ್ರೀಧರ ಜಿ ಯರವರಹಳ್ಳಿ
ಅಪ್ಪನಿಗೆ ವಯಸ್ಸಾಯಿತು
ಅಪ್ಪನಿಗೆ ವಯಸ್ಸಾಯಿತು
ಅವನೊಂದು ಹೊರೆಯಾಗಿದ್ದು
ಯಾವುದಕ್ಕೂ ಪ್ರಯೋಜನವಿಲ್ಲ
ನೋಡುತ್ತಿರೆ ಸಪ್ಪೆ ಮೊರೆ
ಮೂಲೆಗೆ ಸೇರಿದ್ದ ಕಸದಂತೆ
ಮಂಜು ಮಂಜಿನ ಕಣ್ಣು ಕವಿದಂತೆ
ಕೆಲವೋಮ್ಮೆ ವಿನಾಕಾರಣ
ಹನಿ ಹನಿ ಕಂಬನಿ ಸುರಿಯುತಲಿತ್ತು.
ಅಪ್ಪನಿಗೆ ವಯಸ್ಸಾಯಿತು
ಮುಖದ ತುಂಬ ಗೆರೆಗಳು
ಸರಿಯಾಗಿ ಕಾಣದ ಕೇಳಿಸದ
ಮೂಕ ಅಭಿನಯ ಮಾಡುತ್ತ
ಎಲ್ಲರನ್ನು ದಿಟ್ಟಿಸಿ ನೋಡುತ್ತಾ
ಭಾರವಾದ ಹೃದಯ ಕಂಪಿಸುತ್ತ
ಹಗುರ ಮಾಡಿಕೊಳ್ಳಲು ಸಾವಿನತ್ತ
ಹೆದರುತ್ತ ಕಣ್ಣು ಮುಚ್ಚದಂತಿದ್ದ
ಅಪ್ಪನಿಗೆ ವಯಸ್ಸಾಯಿತು
ಬಡಕಲು ದೇಹ ಬಿದ್ದುಕೊಂಡಿದ್ದ
ಒಣಗಿದ ಚರ್ಮ ಸೊಕ್ಕುಗಟ್ಟಿತು
ಕೂರಲು ನಡೆಯಲು ಆಗದಂತಿತ್ತು
ನನ್ನವರು ತನ್ನವರು ಅವರಿವರು
ಬಂದು ಬಂದು ಭೇಟಿ ನೀಡುತ್ತಾ
ಯೋಗ ಕ್ಷೇಮ ವಿಚಾರಿಸುತ್ತಾ
ಕನಿಕರಿಸುತ್ತ ಸಮಾಧಾನಿಸುತಿದ್ದರು
ಅಪ್ಪನಿಗೆ ವಯಸ್ಸಾಯಿತು
ಅಪ್ಪ ಬಾಳಿ ಬದುಕಿದನ್ನು ನೆನೆದ
ಹೆಂಡತಿ ಮಕ್ಕಳ ಹರಸಿದ
ಇದ್ದ ಮನೆಯನೊಮ್ಮೆ ನೋಡಿದ
ದೇವರ ನೆನೆದು ಬದುಕು ಸಾಕೆಂದ
ಮನೆಯಲೊಮ್ಮೆ ಬೆಳಕಾಗಿ ಕತ್ತಲೆ.
ಅಪ್ಪನ ದೇಹ ತಣ್ಣಗಾಗಿತ್ತು ಮೆಲ್ಲಗೆ
ಆಕ್ರಂದನ ರೋದನ ಶುರುವಾಯಿತು.
-ಹೆಚ್ ಷೌಕತ್ ಅಲಿ, ಮದ್ದೂರು
ನಾನಿಲ್ಲ, ನನ್ನಲ್ಲಿ.
ನೀನು ಮರಳಿ
ಬರೋಲ್ಲವೆಂದು
ಕಣ್ಣಿಗೆ ಗೊತ್ತಿದ್ದರೆ,
ಕಣ್ಣಿನ ಪಾಪೆಯ
ತುಂಬ ನಿನ್ನ ಚಿತ್ರ
ತುಂಬಿಕೊಳ್ಳುತ್ತಿತ್ತು.
ಹಿಂದಿರುಗಿ ಬರಲಾರೆ
ನೀನು ಎಂದು
ಮನಕೆ ಗೊತ್ತಿದ್ದರೆ,
ಹೃದಯದ ಬಡಿತದಲ್ಲಿ
ನೀನೆ, ಬರೀ ನಿನ್ನೆ
ತುಂಬಿಸಿಕೊಳ್ಳುತ್ತಿತ್ತು.
ಇನ್ನು ನೀನು
ನನ್ನವಳಾಗಿರೊಲ್ಲ
ಎಂಬ ಸುಳಿವು
ಸಿಕ್ಕಿದ್ದರೂ,
ನನ್ನ ಅಣು ಅಣುವಿನಲ್ಲಿ
ಕಣ ಕಣದಲ್ಲಿಯೂ ನಿನ್ನೆ
ತೋಡಿಕೊಳ್ಳುತ್ತಿದ್ದೆ.
ನೀನು ಸಕ್ಕರೆಯೆಂದು
ಬೆರೆಸಿದ ಉಪ್ಪೇ,
ನನ್ನ ಪಾಲಿನ ಸಿಹಿ.
ನೀನು ಮತ್ತೆ ಬರೋಲ್ಲವೆಂದು
ಗೊತ್ತಿದ್ದರೆ, ಈ ಜೀವಕ್ಕೊಂದಿಡಿ
ಉಪ್ಪಾದರೂ ಬೇಡಿಕೊಳ್ಳುತ್ತಿದ್ದೆ.
ನೀನು ಅತ್ತಂತೆ ನಟಿಸಿದಾಗ
ನಾನೂ ಅತ್ತನಲ್ಲವೆ,
ಆ ಅಳು ಇನ್ನು ಜೀವದ ಸಂಗಾತಿ
ಎಂದು ಗೊತ್ತಿದ್ದ, ನೀನು
ಒಂದೀಟು ನಗುವಾದರೂ
ಚೆಲ್ಲಬಹುದಿತ್ತು, ಆದರೆ ಚೆಲ್ಲಲಿಲ್ಲ.
ಆದರೆ,
ನೀನು ಹೇಳಲಿಲ್ಲ.
ನಾನೂ ಕೇಳಲಿಲ್ಲ.
ನೀನೀಗ ಇಲ್ಲೆಲ್ಲೂ ಇಲ್ಲ.
ನಾನಿಲ್ಲ, ನನ್ನಲ್ಲಿ.
-ಜ್ಯೋತಿ ಕುಮಾರ್. ಎಂ(ಜೆ. ಕೆ. ).
ವಿಳಾಸವಿಲ್ಲದ ಓಲೆ
ಅರಿಯದೆ
ಅಂಚೆಗೆ ಬಿದ್ದ
ವಿಳಾಸವಿಲ್ಲದ ಓಲೆ
ಯಾರು ಯಾರಿಗೆ
ಬರೆದರೆಂಬ
ಪಥವಿಲ್ಲದ ಓಲೆ
ಕತ್ತಲೆಗೂ
ಕಾಣದಂತೆ ಕಾಪಿಟ್ಟ
ನೋವು-ನಲಿವಿನ ಓಲೆ
ಅಂದಿಗೂ ಇಂದಿಗೂ
ಎಂದೆಂದಿಗೂ ಓದಲಾಗದ
ಅಂತರಂಗದ ಓಲೆ
ಬಾರದಿರುವ
ನಾಳೆಗಾಗಿ ಕಾದಿರುವ
ವಿಳಾಸವಿಲ್ಲದ ಓಲೆ.
-ಜೆ. ಪ್ರೇಮಾನಂದ,
ಎರಡು ಕ್ರೌಂಚ ಪಕ್ಷಿಗಳು
ಅದೊಂದು ಅಪರೂಪದ
ಆಪಿನರಮನೆ ಅಲ್ಲಿ;
ಎಲ್ಲ ಎಲ್ಲೆಗಳನ್ನು ದಾಟಿ ಬಂದ
ಎರಡು ಕ್ರೌಂಚ ಪಕ್ಷಿಗಳು
ಒಲವಿನ ಬಣವೆಯೊಟ್ಟಿಕೊಂಡು
ನಾಳೆಗಳ ಗೊಡವೆ
ನಮಗೇಕೆಂದು ಬಾಳುತ್ತಿದ್ದವು.
ಅವುಗಳ ಅನ್ಯೋನ್ಯತೆ ಕಂಡು
ಕರುಬಿದ ನೆರೆ-ಹೊರೆಯ ಹದ್ದುಗಳು
ಅಸೂಯೆಯನ್ನ ಹಗೇವುಗಳಲ್ಲಿ
ತುಂಬಿಸಿ,
ಹಸುಗೂಸಿನಂಥ ಕ್ರೌಂಚ ಪಕ್ಷಿಗಳ
ಬಾಳಿನ ಹಾಲಿನ ಹೊಳೆಯಲ್ಲಿ
ಹುಳಿ ಹಿಂಡಲೆಂದು ಹೊಂಚು ಹಾಕುತ್ತಿದ್ದವು
ಸದಾಕಾಲ
ಮರ್ಯಾದೆಯ ಮುಳ್ಳಿನ ಕಿರೀಟ
ನೆತ್ತಿ ಮೇಲೆ
ಹೊತ್ತು ತಿರುಗುವವರ
ಅಹಂಕಾರದಗ್ನಿಯಲಿ
ಸುಟ್ಟು ಕರಕಲಾಗುವುದರೊಳಗೆ
ಉರಿಯುತ್ತಿರುವ ಒಲವಿನ
ಬಣವೆಯನ್ನು ಉಳಿಸಿ ಕೊಳ್ಳಲು
ಎರಡು ಕ್ರೌಂಚ ಪಕ್ಷಿಗಳೂ ಎಣಿಗಾಡಿದವು.
ದ್ವೇಷಕ್ಕೂ ಪ್ರೀತಿ ಹುಟ್ಟುವಂತೆ
ಬಾಳುತ್ತಿದ್ದ ಕ್ರೌಂಚ ಪಕ್ಷಿಗಳು
ಮೊಟ್ಟೆಯಿಟ್ಟು, ಮರಿ ಹಾಕಿ
ಒಲವಿಗಾಸರೆ ಒಲವೆಂಬಂತೆ
ಬಾಳುವುದನು ಕಂಡು
ಹಗೆಯ ಹದ್ದುಗಳೆಲ್ಲಾ ದಿನಗಳೆದಂತೆ
ನಗೆಸೂಸ ತೊಡಗಿದ್ದು ನಿಜವಲ್ಲ
ಯಾರಿಗೂ ಸುಳಿವು ನೀಡದೆ
ಸುಳಿದಾಡಿದ ಕ್ರೌರ್ಯ ಕತ್ತಿ ಮಸೆದಾಗ
ಮರ್ಯಾದೆ ಹೆಸರಿನಲಿ
ಮಗಳನು ಕೊಂದಾಗ
ಒಂಟಿ ಕ್ರೌಂಚ ಪಕ್ಷಿಯ ಸಂಕಟ
ಕಂಡು ಮರುಗುವ
ಮನಕ್ಕಾಗಿ ಈ ನೆಲ ತವಕಿಸುತ್ತಿದೆ.
-ಮೋದೂರು ತೇಜ
ಕವಿತೆ
ಏನಿದೆಲ್ಲಾ ಯಾಕೀಗೆಲ್ಲಾ
ಏನೂ ಅರಿಯದೆ ಅರೆಗಳಿಗೆ,
ಸುಮ್ಮನೆ ನೂಕುತಿಹೆನಲ್ಲಾ.
ಗೆಳತಿ! ನೀ ಬಂದಮೇಲೆಯೇ ಹೀಗಾಯಿತಲ್ಲಾ. . .
ಹಕ್ಕಿಗಳ ಕಲರವ
ಕಣ್ತುಂಬಿಕೊಳುವವಗೆ
ಕಿವಿಯ ಕುಕ್ಕಿ ಕಿರುಚಿದ
ಹಾಗಾಗುತಿದೆಯಲ್ಲಾ. . .
ಪುಷ್ಪಗಳ ಪುಳಕದಲಿ
ತೊಳಲಾಡುತಿರುವವಗೆ
ಮನವು ಮುಳ್ಳಿಗೆ ರೊಸಿ
ಉರುಳಾಡುತಿದೆಯಲ್ಲಾ. . .
ಏನಿದೆಲ್ಲಾ ಯಾಕೀಗೆಲ್ಲಾ
ಗೆಳತಿ! ನೀ ಬಂದಮೇಲೆಯೇ ಹೀಗಾಯಿತಲ್ಲಾ. . .
ಕಿಟಕಿಗಳ ಬೇಲಿ, ಬೆಳಕದು ತೇಲಿ
ಸದಾ ಯೋಗದಲ್ಲಿರುವವಗೆ
ಕಪಟದ ಗುಂಜು, ಸೀನುತ ನಂಜು
ಕಟುಕತ್ತಲಾಗುತಿದೆಯಲ್ಲಾ. . .
ಗುಡಿಯ ಗಂಟೆಯ ಘನನದಲಿ
ಸದಾ ಗುನ್ ಗುಣುಗುತಿರುವವಗೆ
ಫೋನ್ ರಿಂಗಣಿಸೀತೇ ? ಮನ
ಗೊಣಗಾಡುತಿದೆಯಲ್ಲಾ. . .
ಏನಿದೆಲ್ಲಾ ಯಾಕೀಗೆಲ್ಲಾ
ಗೆಳತಿ ನೀ ಬಂದಮೇಲೆಯೇ ಹೀಗಾಯಿತಲ್ಲಾ. . .
ತಳ ರಾಡಿ ತುಂಬಿದ, ತಿಳಿನೀರ ಮನಸಿಗೆಲ್ಲಾ. .
ಕಳಸಾದರು ಕಳಸು, ಕಲಿಸಾದರು ಕಲಿಸು. . .
ಸುಮ್ಮನೆ ಕದಡುವುದಕೆ ಇದು ಕದನವೇನಲ್ಲಾ. . .
ಏನಿದೆಲ್ಲಾ ಯಾಕೀಗೆಲ್ಲಾ
ಗೆಳತಿ ನೀ ಬಂದಮೇಲೆಯೇ ಹೀಗಾಯಿತಲ್ಲಾ. . .
-ಪ್ರಸಾದ ಇಂಗಳಗಿ