“ಏನ್ರಯ್ಯ ಇಡೀ ಕರ್ನಾಟಕನೇ ಆಳೋ ಪ್ಲಾನ್ನಿದ್ದಂಗದೆ.” ಕಾಡಾ ಆಫೀಸಿನ ಸಿಬ್ಬಂದಿಯೊಬ್ಬ ವ್ಯಂಗ್ಯವಾಡಿದ. “ಆಗೇನೂ ಇಲ್ಲ ಸರ್; ಸಮಾಜಮುಖಿ ಕೆಲಸಕ್ಕಾಗಿ” ವಿಶಾಲ್ ಸಮರ್ಥಿಸಿಕೊಂಡ.
“ನಂಗೊತ್ತಿಲ್ವೇ ? ನೀವ್ ಮಾಡೋ ಉದ್ಧಾರ! ಹಾಕಿ ಹಾಕಿ ಸೈನಾ..” ಮತ್ತದೇ ಅಪಹಾಸ್ಯ ಕಿವಿಮುಟ್ಟಿತು.
“ಉದ್ಧಾರನೋ ಹಾಳೋ; ಕೆಲ್ಸ ಮುಗಿದಿದ್ರೆ ಪತ್ರ ತತ್ತರಲ್ಲ ಇತ್ಲಾಗೆ” ವಿನೋದ ಕಿಡಿಕಾರಿದ.
ಸಂಸ್ಥೆಯೊಂದರ ನೊಂದಣಿಗೆ ಈ ಯುವಕರಿಷ್ಟು ಎಣಗಾಡಿದ್ದು ಆ ಸಿಬ್ಬಂದಿಗೆ ತಮಾಷೆಯಾಗಿ ಕಂಡರೂ ಆ ಹತ್ತದಿನೈದು ಐಕ್ಳು ಮಾತ್ರ ಏನ್ನನ್ನೋ ಸಾಧಿಸಲಿಕ್ಕಿದು ಮುನ್ನುಡಿಯೆಂದೇ ಭಾವಿಸಿದ್ದರು.
ಅಂದಹಾಗೆ ಅದು ಆಲಹಳ್ಳಿ. ಹಚ್ಚಹಸಿರಿನಿಂದ ಕೂಡಿರುವ ಸ್ವಚ್ಛ ನಾಡಾದರೂ ಆ ಯುವಕರಿಗೆ ಅಸಮಾಧಾನವೋ ಅಸಮಾಧಾನ. ಊರಿನ ದೊಡ್ಡದಾದ ಬಾಗೇಮರದ ಕೆಳಗೆ ಆಗಷ್ಟೇ ಎದ್ದ ಬಸ್ ಸ್ಟ್ಯಾಂಡೊಂದಿದೆ. ಅದರ ಬದಿಯಲ್ಲಿ ಊರನ್ನ ಎರಡು ಭಾಗಗಳಾಗಿ ವಿಂಗಡಿಸಿರುವ ದೊಡ್ಡದಾದ ರಸ್ತೆಯ ಉಪಸ್ಥಿತಿ. ಆ ರಸ್ತೆಯುದ್ದಕ್ಕೂ ಒಂದು ಕಡೆ ಲಿಂಗಾಯತರ ಬೀದಿಗಳು. ಮತ್ತೊಂದು ಕಡೆ ದಲಿತರ ಮನೆಗಳು.
ಅಷ್ಟೇ ಅಲ್ಲ ರಸ್ತೆಯ ಆದಿಯಲ್ಲೇ ಒಂದು ಬದಿಯಲ್ಲಿ ಬಸವಣ್ಣನವರ ಪುತ್ಥಳಿ; ಮತ್ತೊಂದೆಡೆ ಅಂಬೇಡ್ಕರದು. ಅವುಗಳ ಮಧ್ಯೆದಲ್ಲಿ ನಮ್ದೂ ಒಂದಿರಲಿ ಅಂತಲೇ ವೇದಿಕೆಯೊಂದನ್ನು ಆ ಹುಡುಗರು ನೊಂದಣಿ ಮಾಡಿರಬಹುದು! ಆಗಂತೂ ಭಾವಿಸಬೇಡಿ. ಅವರ ಈ ಸಂಸ್ಥೆಯ ಪದಾಧಿಕಾರಿಗಳಲ್ಲಿ ಐಂಟು ಜನ ದಲಿತರಿದ್ದರೆ, ಉಳಿದೆಂಟು ಜನ ಲಿಂಗಾಯತರಿದ್ದರು. ಅದರಲ್ಲಿ ಕೆಲವರು ಅಕ್ಷರಸ್ಥರು ಇನ್ನೂ ಕೆಲವರು ಅನಕ್ಷರಸ್ಥರು.
ಆದರೆ ಎಲ್ಲರೂ ಯುವ ಉತ್ಸಾಹಿಗಳೆ. ಈ ಯುವಕರ ತಂಡದ ಮುಖ್ಯ ಧ್ಯೇಯ ಊರಿನಲ್ಲಿ ಯಾವುದೇ ಕುಂದುಕೊರತೆಗಳಿದ್ದರೂ ಯಾರೂ ಭೇದ ಭಾವವೆಣಿಸದೇ ಒಗ್ಗಟ್ಟಿನಿಂದ ಕೆಲಸ ಮಾಡುವುದು; ಗ್ರಾಮದ ಏಳಿಗೆ ಬಯಸುವುದು, ಜೊತೆಗೆ ಊರಿನಲ್ಲಿ ಸಾಮರಸ್ಯ ಬಿತ್ತುವ ಕೆಲಸಗಳು ಅವರಿಂದ ಜರುಗಬೇಕಾದದ್ದು. ಈ ನಿಟ್ಟಿನಲ್ಲಿ ಅವರು ಹಾದಿ ಸುಗಮವಾಗಿತ್ತು. ಯುವಕರು ನೋಡಿ “ನೆಲಗುದ್ದಿ ನೀರು ತೆಗೆಯುವ ವಯಸ್ಸದು”.
ಕೆಲವೊಮ್ಮೆ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆದಾಗ “ಕನ್ನಡ ಸಂಘವಿದೆ” ಎಂಬ ಕೂಗು ಕೇಳಿದರೆ ಸಾಕು ಇಡೀ ಗ್ರಾಮಪಂಚಾಯತಿಯೇ ನಡುಗುತ್ತಿತ್ತು. ಹೂಳೆತ್ತದ ಚರಂಡಿಗಳು, ಸ್ವಚ್ಛವಾಗದ ನೀರಿನ ಟ್ಯಾಂಕುಗಳು, ಕಸ ತುಂಬಿದ ಡಸ್ಟ್ ಪಿನ್ಗಳು ಕಣ್ಣಿಗೆ ಕಂಡರೆ, ಈ ಯುವಕರ ತಂಡ ಅದನ್ನು ಪ್ರಶ್ನಿಸಿ ನಿಂತರೆ ಆ ಘಳಿಗೆಯಲ್ಲೇ ಗ್ರಾಮಪಂಚಾಯತಿಯ ಬಹುತೇಕ ಕೆಲಸ ಕಾರ್ಯಗಳು ಪ್ರಾರಂಭವಾಗುತ್ತಿದ್ದವು. ಇದೆಲ್ಲವೂ ಗ್ರಾಮಪಂಚಾಯಿತಿ ಚೇರ್ಮನಾಗಿದ್ದ ಯಶೋಧಮ್ಮನ ಪತಿರಾಯನಿಂದ ಹಿಡಿದು, ಹೆಂಡತಿರ ಹೆಸರಿನಲ್ಲಿ ದರ್ಬಾರು ನಡೆಯುತ್ತಿದ್ದ ಮಹಿಳಾ ಸದಸ್ಯರ ಗಂಡಂದಿರವರೆಗೂ ನುಂಗಲಾರದ ತುತ್ತಾಗಿ ಪರಿಣಮಿಸಿತು.
ಹೀಗಿದ್ದರೂ ಎರಡು ಸಮುದಾಯಗಳ ಯುವಚೇತನವಾಗಿದ್ದ ಆ ಯುವಕರ ಹೊಂದಾಣಿಕೆ ಹೇಳತೀರದು. ಬಸವ ಜಯಂತಿ ಆಚರಣೆ ಎಂದರೆ ಎಲ್ಲರೂ ಹಾಜರಿರುತ್ತಿದ್ದರು. ಅಂಬೇಡ್ಕರ್ ಸ್ಮರಣಾದಿನವಿದ್ದಾಗ ಸಿಹಿ ಹಂಚುತ್ತಿದ್ದರು. ಇನ್ನೂ ಕನ್ನಡ ರಾಜ್ಯೋತ್ಸವ ಎಂದರೆ ಊರಿಗೆ ಊರೇ ರಂಗೇರುತ್ತಿತ್ತು. ಊರಿನ ಪ್ರತಿಬೀದಿಯಲ್ಲೂ ಕನ್ನಡದ ಕಂಪು. ಶಾಲಾ ಮಕ್ಕಳೊಂದಿಗೆ ಮೆರವಣಿಗೆ. ಎತ್ತಿನ ಬಂಡಿಯೇ ಕನ್ನಡದ ತೇರು ಸಡಗರವೋ ಸಡಗರ. ಆದರೆ ಈ ಸಾಮರಸ್ಯ ಹೆಚ್ಚು ದಿನ ಜೀವಂತವಾಗಿರಲಿಲ್ಲ.
ಅದೊಂದು ದಿನ ಗ್ರಾಮದೇವತೆಯ ಹಬ್ಬದ ವಿಚಾರವಾಗಿ ಎರಡು ಸಮುದಾಯಗಳ ಮುಖಂಡರು ಸಭೆ ಸೇರಿ ಆಗಿತ್ತು. ಮತ್ತಲ್ಲಿ ಈ ಯುವಕರ ತಂಡ ಹಾಜರಿಲ್ಲದೇ ಹೋದರೆ ಹೇಗೆ ? ಇಡೀ ಕನ್ನಡ ಸಂಘವೇ ಅಲ್ಲಿತ್ತು. ಚರ್ಚೆ ಆರಂಭವಾಯಿತು.
“ನೋಡ್ರಿ ಈ ಬಾರಿ ಮಾರಿಹಬ್ಬವನ್ನ ಬಾರೀ ಜೋರಾಗಿ ಮಾಡ್ಬೇಕು. ಅದಕ್ಕಾಗಿ ಊರೊಟ್ಟಿಗೆ ತಲಾ ಒಂದೊಂದು ಸಾವಿರ ಕೊಡ್ಬೇಕತ್ತೈತ್ತಿ. ಹಬ್ಬ ಮಾಡಿ ಐದಾರು ವರ್ಷ ಕಳೆದೈತಿ. ಈ ಬಾರಿಯೂ ನಡೆಸಿಲ್ಲ ಅಂದ್ರ ತಾಯಿ ಕ್ಷಮ್ಸಲ್ಲ. ಏನಂತೀರಿ” – ಊರಿನ ಗೌಡ ಕೇಳಿದ.
ಲಿಂಗಾಯತ ವರ್ಗ ಬೇರೆ ಸ್ವರವೆತ್ತದೆ ತಲೆಯಲುಗಾಡಿಸಿತು. ದಲಿತ ಸಮುದಾಯದಲ್ಲಿ ನಿರಾಸಕ್ತಿ ಮನೆಮಾಡಿತ್ತು.
ಅಷ್ಟರಲ್ಲೇ ಅಲ್ಲೊಬ್ಬ ಆಸಾಮಿ “ಆಗೋದಿಲ್ಲಪೋ… ಈ ಬಾರಿ ನಮ್ಮ ಕೈಯಿಂದ ಹಬ್ಬ ಮಾಡೋದಕ್ಕ ಆಗಲ್ಲ. ಹಬ್ಬ ಅಂದ್ರ ಸಮ್ನಲ್ಲ. ನೆಂಟ್ರು ಇಷ್ಟ್ರು ಕರಿಬೇಕು. ಮರಿ ಹೊಡಿಬೇಕು. ನಿಮ್ಮ ರೀತಿ ಮಾಡ್ಲಿಕ್ಕೆ ಆಗುತ್ತಾ ನಾವು. ಆ ಹಾಳು ಕರೋನದಿಂದ ಕೆಲ್ಸ ಬದ್ಕು ಇಲ್ದೇ ಚೇತರಿಸ್ಕೊಳೋದೇ ಆಗಿದೆ. ಇನ್ನೂ ಇದು ಬ್ಯಾರಿನಾ ?”
“ಅಲ್ಲಯ್ಯ ಮಾದ. ನೀ ಹೀಂಗದ್ರ ಹೆಂಗ್ಲ? ಊರಿಗೆ ಒಳ್ಳೆದಾಗ್ಬೇಕು ತಾನೇ ? ಕರೋನ ಮಾರಿ ಮಸ್ಣಿ ನೋಡ್ತಿಲ್ಲೇನು?”
“ಆಗಲ್ಲಪ್ಪೋ… ಒಂದ್ ಸಾವ್ರ ನಮ್ಮ ಒಂದು ವಾರದ ಕೂಲಿ. ಹೆಂಡ್ತಿ ಮಕ್ಳು ಇದ್ದಾರು ನಮ್ಗೂ.”
ಈ ಸಂಭಾಷಣೆ ನಡುವೆ ಆ ಯುವಕರ ಗುಂಪಿನ ಸದಸ್ಯ ಕೆಂಪ ಬಾಯ್ತೆರೆದ : “ಆಗ್ಲಿ ಸ್ವಾಮಿ. ನಾವು ಸಾವ್ರೂಪಾಯಿ ಕೊಡ್ತೀವಿ. ನಮ್ಮನ್ನು ದೇವಸ್ಥಾನದ ಒಳಗಡೆ ಬಿಟ್ಕಳಿ ಮತ್ತ.”
ಅಲ್ಲಿದ್ದ ದಲಿತ ಸಮುದಾಯ “ಹ್ಹೂ ಮತ್ತೆ” ಎನ್ನುವಂತೆ ಕೆಂಪನನ್ನ ನೋಡಿದರೆ, ಇವರಿಗೆಷ್ಟೂ ಸೊಕ್ಕು ಎನ್ನುವಂತೆ ಲಿಂಗಾಯತ ಸಮುದಾಯ ಅವರತ್ತ ಕಣ್ಣಾಯಿಸಿತು.
“ಲೋ ಅದೇನ್ರೋ ದೇವಸ್ಥಾನ ದೇವಸ್ಥಾನ ಅಂತೀರಿ… ಬನ್ನಿ ಒಂದು ಗ್ರಂಥಾಲಯ ಕಟ್ಟುವ; ಎಲ್ಲರಿಗೂ ಮುಕ್ತ ಅವಕಾಶ ನೀಡುವ” – ವಿಶಾಲ್ ಅವರಿವರ ಬಿರುನೋಟದ ನಡುವೆಯೂ ಮಾತುದರಿಸಿದ.
“ರೀ ಪಾಟೀಲ್ರೆ, ಸ್ವಾಮಿ ಶಿವಮೂರ್ತಿ… ನಿಮ್ಮ ಮಕ್ಕಳಿಗೆ ಬುದ್ಧಿ ಹೇಳ್ರಿ. ಏನೋ ಕಿತ್ತಾಕ್ತಿವಿ ಅಂತ ಸಂಘ ಕಟ್ಟಿಕೊಂಡು ಊರು ಹೊಲಗೇರಿ ಒಂದು ಮಾಡ್ತಾವ್ರೆ. ಇವ್ರು ಲಿಂಗಾಯತ್ರ ಇಲ್ಲ…” ಗೌಡ ನಾಲಿಗೆ ಹಿಡಿತ ಕಳೆದುಕೊಂಡ.
“ಗೌಡ್ರೆ ಆಡೋ ಮಾತು ಕರೆಕ್ಟಾಗಿ ಆಡ್ರಿ… ನಾಲಿಗೆ ಮೇಲೆ ಹಿಡ್ತವಿರಲಿ” ಪಾಟೀಲಾ ತಿರುಗಿ ಬಿದ್ದ. ಒಂದು ಕ್ಷಣ ಆ ಸಭಾಂಗಣವೇ ರಣರಂಗವಾಗಿತ್ತು. ಪೋಲಿಸಿನವರ ಎಂಟ್ರಿಯೂ ಆಯ್ತು. ಈ ಘಟನೆ ಬಳಿಕ ಸ್ವಲ್ಪ ದಿನಗಳ ಮಟ್ಟಿಗೆ ಊರಿನಲ್ಲಿ ನಿಷೇಧಾಜ್ಞೆ ಜಾರಿಯಾಗಿತ್ತು. ಸಂಘದ ಸದಸ್ಯರಾಗಿದ್ದ ತಮ್ಮ ತಮ್ಮ ಮಕ್ಕಳಿಗೆ ಲಿಂಗಾಯತರು ಸ್ವಲ್ಪ ಕ್ಲಾಸನ್ನೂ ತೆಗೆದುಕೊಂಡಿದ್ರು. ಆದರೆ ಅಷ್ಟು ಮಾತ್ರಕ್ಕೆ ಕನ್ನಡ ಸಂಘ ಮುರಿದು ಬೀಳಲಿಲ್ಲ. ನಿಷೇಧಾಜ್ಞೆಯ ತೆರವಿನ ಬಳಿಕ ಮತ್ತೆ ಊರಿನಲ್ಲಿ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಎಲ್ಲರೂ ತೊಡಗಿಸಿಕೊಂಡಿದ್ದರು. ಇನ್ನೂ ಊರಿನಲ್ಲಂತೂ ‘ಮಾರಿಹಬ್ಬ’ದ ವಾತಾವರಣವೇ ಇರಲಿಲ್ಲ. ಈ ನಡುವೆ ಅಂಬೇಡ್ಕರ್ ಜಯಂತಿ ಸಮೀಪಿಸಿತು. ಹಿಂದಿನ ದಿನವೇ ಯುವಕರ ತಂಡ ಬಹಳ ಅದ್ದೂರಿಯಾಗಿ ಎಲ್ಲವನ್ನೂ ತಯಾರಿ ಮಾಡಿಕೊಂಡಿತು.
ಇದೇ ಸಮಯಕ್ಕಾಗಿ ಗ್ರಾಮಪಂಚಾಯಿತಿ ಸದಸ್ಯನೊಬ್ಬ ಕಾದು ಕೂತಿದ್ದ. ರಾತ್ರೋರಾತ್ರಿ ತನ್ನ ಸಹಚರರೊಂದಿಗೆ ಅಂಬೇಡ್ಕರ್ ಪುತ್ಥಳಿ ಹಾಗೂ ಬಸವಣ್ಣನವರ ಪುತ್ಥಳಿಗಳೆರಡನ್ನೂ ನೆಲಕ್ಕೆ ಉರುಳಿಸಿದ್ದ. ಬೆಳಿಗ್ಗೆ ಸ್ಥಳಕ್ಕೆ ಧಾವಿಸಿದ ಯುವಕರ ತಂಡಕ್ಕೆ ಆಘಾತ ಎದುರಾಗಿತ್ತು. ಅಲ್ಲಿ ಏನಾಗಿದೆ; ಏನಾಗಬೇಕಿತ್ತು ಇದೇ ಗೊಂದಲದೊಳಗೆ ಎಲ್ಲರೂ ಕಣ್ಣು ಬಾಯಿ ಬಿಟ್ಟುಕೊಂಡು ನೋಡುತ್ತಾ ನಿಂತಿದ್ದರು. ಇದೇ ಸಮಯಕ್ಕೆ ಸರಿಯಾಗಿ ದಾರಿಯಲ್ಲಿ ಹಾದು ಹೋಗುತ್ತಿದ್ದ ದಾರಿಹೋಕನೊಬ್ಬ “ಓ… ಮುಗಿಸಿದ್ರಾ? ದೇವಸ್ಥಾನದ ಒಳಗಡೆ ಹೋಗ್ಬೇಕು ಅಂದ್ರಲ್ಲ ಅವತ್ತು. ಎಲ್ಲದ್ದಕ್ಕೂ ನಿಮ್ಮನ್ನ ಸಮರ್ಥಿಸಿಕೊಳ್ತಿದ್ದ ನಿಮ್ಮ ಸಂಘದವರು ಏಕೆ ಏನೂ ಮಾತನಾಡದೆ ಆ ದಿನ ಗೊಂಬೆಯಂಗೇ ನಿಂತಿದ್ರು. ನೋಡಿ ಅವರದೇ ಇದು ಕೆಲಸ. ಹೋರಾಡ್ರಿ ಹೋರಾಡ್ರಿ.” ಅಂದ.
ಮತ್ತೊಂದು ಕಡೆಯಿಂದ “ಗೊಳ್ಗೆಸಿದ್ಧ ಒಳಗೊಳ್ಗೆ ಮಾಡ್ದ ಅಂದಂಗೆ ನಿಮ್ಗ್ಯಾಕ್ಲಾ ಬೇಕಿತ್ತು ಊರ್ ಉಸಾಬರಿ. ಅನ್ಯಾಯವಾಗಿ ದೇವ್ರನ್ನ ನೆಲಕ್ಕಾಬಿಟ್ರಲ್ಲೋ…” ಮಾರ್ದನಿ ಕೇಳಿಸಿತು. ಆ ಹದಿನಾರು ಜನ ಯುವಕರ ಮನಸ್ಸೂ ಹದಿನಾರು ರೀತಿ ಯೋಚಿಸಲಿಕ್ಕೆ ಶುರುಮಾಡಿತು. ದಲಿತ ಸಮುದಾಯದ ಯುವಕರು ಅಂಬೇಡ್ಕರ್ ಪುತ್ಥಳಿಯನ್ನ ಮೇಲೆತ್ತಿದರು. ಬಸವಣ್ಣನವರ ಪುತ್ಥಳಿಯನ್ನ ಲಿಂಗಾಯತರು ಮೇಲಿತ್ತಿದರು. ಮತ್ತದೆ ರಸ್ತೆ… ಮತ್ತದೇ ಬಿರುಕು… ತನ್ನಿಂದಾಚೆಗೆ ಎಂಟು ಜನ; ತನ್ನಿಂದೀಚೆಗೆ ಎಂಟು ಜನರನ್ನ ರಸ್ತೆ ವಿಭಾಗಿಸಿಕೊಂಡಿತು. ಒಂದೆರೆಡು ತುಕಡಿ ಪೋಲೀಸ್ ಸ್ಥಳದಲ್ಲಿ ಬೀಡುಬಿಟ್ಟಿತು. ಸಾಮರಸ್ಯವನ್ನೇ ಉಸಿರಾಗಿಸಿಕೊಂಡಿದ್ದ ಕನ್ನಡ ಸಂಘ ನೆಲ ಕಚ್ಚಿ ಮಲಗಿತು.
–ಮನು ಗುರುಸ್ವಾಮಿ