ನಿನಗೆಂದೇ ಮುಡಿಪಿಟ್ಟ ಕನಸುಗಳಿವು…
ನಿನಗೆಂದೇ ಮುಡಿಪಿಟ್ಟ ಕನಸುಗಳಿವು
ಮೌನದ ಜಾಡಿಯೊಳಗಿಟ್ಟು ಕಾಯುತಿರುವೆ
ಒಲವಿನ ಅಗ್ನಿಸ್ಪರ್ಶದಿಂದವುಗಳನು
ನನಸು ಮಾಡುತ ಬದುಕಿ ಬಾಳಬೇಕು
ಹರೆಯ ತಂದೆಸೆದ ಚೆಲುವಿನ ಸುರಹೊನ್ನೆ
ತೆರೆಯುತ ತನ್ನೆಲ್ಲ ಕಂಪ ಸೂಸುತಲಿ
ಧರೆಯ ಸಿರಿಯಂತೆ ಬದುಕ ತುಂಬುತಲಿ
ಮರೆಯಲಾಗದಂತಹ ಚಣಗಳಾಗಬೇಕು
ಕಬ್ಬಿನೊಳಗಾ ಸಿಹಿ ರಸದೊಳಿರುವಂತೆ
ತಬ್ಬಿದಂತೆ ಲತೆತರುವನೆಳಸಿ ಅದುವೇ
ಹಬ್ಬಲಿಬ್ಬರೊಳಗವಿತು ಕುಳಿತಂತೆ ಪ್ರೀತಿ
ಇಬ್ಬರೊಳಗೂ ಹದವಾಗಿ ಪ್ರೇಮ ಅರಳಬೇಕು
ಎಲ್ಲರೊಳಗೊಂದಾಗಿರುತೆಲ್ಲವನು ಸ್ವೀಕರಿಸಿ
ಇಲ್ಲಸಲ್ಲದ ನೆವವ ಪ್ರೀತಿಗೆಂದೆಳಸಿ ನಿನ್ನ
ನಲ್ಲನಾಗುತಲಿರಲು ಹೃದಯದೊಳಗೊಲುಮೆ
ನಿಲ್ಲದೆಯೆ ನಿತ್ಯದಿ ಜಿನುಗಬೇಕು
-ಸಚಿನ್‌ಕುಮಾರ ಬ.ಹಿರೇಮಠ
ನಾನಾಗಲಾರೆ
ನಿನ್ನಂತೆ ನಾನಾಗಬೇಕೇ
ಖಂಡಿತ ಇಲ್ಲ
ನಿನ್ನ ಸುಳ್ಳು ನನಗೆ ಬೇಕಿಲ್ಲ
ಸುಳ್ಳಿನ ಅರಮನೆ ನನಗಲ್ಲ
ಕನಸುಗಳ ಹಾರ ಬೇಡವೇ ಬೇಡ
ಹುಸಿನಗೆಯ ನೋವು ಬೇಡ
ನಿನ್ನಂತೆ ನಾನಾಗಲಾರೆ
ನಾನೊಬ್ಬ ಭಾರತೀಯ ಸತ್ಪ್ರಜೆ ||
ನಿನ್ನಂತೆ ವ್ಯಾಪಾರಿಯಾಗಬೇಕೆ
ಖಂಡಿತ ಇಲ್ಲ
ಕೊಡುಕೊಳ್ಳುವ ಬುದ್ಧಿ ನನಗಿಲ್ಲ
ಉಡಾಫೆ ಉತ್ತರಗಳ ಕೊಡವೆ ಇಲ್ಲ
ಕಾಣದ ಲೋಕದ ಪಯಣಿಕನಲ್ಲ
ನಾನು ಮತಕ್ಕೆ ಹಕ್ಕುದಾರ
ಎಲ್ಲಾ ಅಧಿಕಾರದ ಸೂತ್ರಧಾರ
ನಿನ್ನಂತೆ ನಾನಾಗಲಾರೆ
ನಾನೊಬ್ಬ ಭಾರತೀಯ ಸತ್ಪ್ರಜೆ ||
ನಿನ್ನಂತೆ ಮತೀಯವಾದಿ ಆಗಬೇಕೆ
ಖಂಡಿತ ಇಲ್ಲ
ಜಾತಿಧರ್ಮದ ಹಸಿವು ನನಗಿಲ್ಲ
ಮತ ಧರ್ಮಗಳ ವ್ಯಾಮೋಹವಿಲ್ಲ
ಬಟ್ಟೆ ಭಾಷೆಯ ಗುಂಪಿನವನಲ್ಲ
ಕಲ್ಲೆಸೆದು ಹರಸುವವನಲ್ಲ
ನಿನ್ನಂತೆ ನಾನಾಗಲಾರೆ
ನಾನೊಬ್ಬ ಭಾರತೀಯ ಸತ್ಪ್ರಜೆ ||
ನಿನ್ನಂತೆ ಲೋಬಿಯಾಗಬೇಕೇ
ಖಂಡಿತ ಇಲ್ಲ
ಚೂರು ಹಣದ ಅರಸನಲ್ಲ
ಸುರಲೋಕದ ಅಸುರನಲ್ಲ
ಸತ್ಯ ಲೋಕದ ಕನಸುಗಾರ ನಾನು
ಮಹಾತ್ಮರ ಮಗುವು ನಾನು
ನಿನ್ನಂತೆ ನಾನಾಗಲಾರೆ
ನಾನೊಬ್ಬ ಭಾರತೀಯ ಸತ್ಪ್ರಜೆ ||
-ವೆಂಕಟೇಶ ಚಾಗಿ
ಹಾಯ್ಕುಗಳು
೧.
ಜಾತಿಯ ನಿಷ್ಠೆ
ತೋರಿಸಲು; ಬೇಕಿಲ್ಲ
ಚುನಾವಣೆಯು!
೨.
ಸ್ನೇಹ-ಸಂಬಂಧ
ಲೆಕ್ಕಕ್ಕಿಲ್ಲ; ಸ್ವಾರ್ಥವೇ
ಮೊದಲಾದ್ಯತೆ!
೩.
ಸ್ವಾರ್ಥಿಗಳೆಲ್ಲ
ಸಾಧಕರೆ; ಬಿದ್ದಾಗ
ಪ್ರಾಮಾಣಿಕತೆ!
೪.
ಹಸಿರುಡುಗೆ
ತೊಟ್ಟ ಪ್ರಕೃತಿ; ಮತ್ತೆ
ನವ ಯೌವನೆ!
೫.
ಪರಿಷತ್ತಿಗೆ
ಸಾಹಿತ್ಯೇತರ ದಾಳಿ
ಗುರಿ ದಿವಾಳಿ!
೬.
ಒಳ್ಳೇ ಕೆಲಸ
ಕೆಟ್ಟದಾಗಿ ಕಂಡರ
ತಪ್ಪು ನಿಂದಲ್ಲ!
೭.
ಅರ್ಹತೆಯಲ್ಲ
ಅನುಕಂಪದ ಮತ
ಅಧಿಕಾರಕ್ಕೆ!
೮.
ಮುತ್ತಿಡುವಾಗ
ಮೀಸೆ ಚುಚ್ಚುತ್ತೆ; ಪುಟ್ಟ
ಮಗಳ ದೂರು!
೯.
ಕೆಟ್ಟ ಮಾಡಾಕ
ಸಾಕಷ್ಟು ಮಂದಿ ಐತಿ
ನೀ ಯಾಕ ಸಾಯ್ತಿ!
೧೦.
ನಿನಗೂ ಒಂದ್
ಕಾಲ ಬರತ್ತ ; ಆಗ
ಕತ್ತ್ಯಾಗಬ್ಯಾಡ!
-ಅಶೋಕ ವಿ ಬಳ್ಳಾ, ಸೂಳೇಬಾವಿ.
ನಿಸಾರ್ ಸಾರ್ ಗೆ ಕಾವ್ಯ ಕಾಣ್ಕೆ
1
ಸದಾ ಇವರು ಹೀಗೆಯೆ
ಮಳೆ ಗಾಳಿ ಬಿಸಿಲ ಝಳ
ವಸಂತ ಚೈತ್ರವೆನದೆ
ಮೈಗೆ ಕೋಟು ಟೈ ಸೂಟು ಧರಿಸಿ
ಕಾಲಿಗೆ ಬೂಟು ತೊಡಿಸಿ
ಅದೆಲ್ಲದಕ್ಕೂ ಮಿಗಿಲಾಗಿ
ಪ್ರಸನ್ನ ಚಿತ್ತ ಮೊಗದಲಿ
ಮುಗುಳ್ನಗೆ ತೀಡಿ ಬರಿಸಿ
ನಡೆದರೆ…. ನುಡಿದರೆ….
ಮುತ್ತಿಕೊಳ್ಳುವುದು ಸುತ್ತಲೂ
ವಿದೇಶಿ ಅತ್ತರು
ಮೈಸೂರಿನ ಗಂಧ
ಮಲ್ಲಿಗೆಯ ಪರಿಮಳ
ಹಸಿರು ಬನಗಳ ಕೋಮಲ
ಶಿವಮೊಗ್ಗೆಯ ತುಂತುರು ಮಳೆ
ಬೆಂಗಳೂರಿನ ಗಾಂಧಿ ಬಜಾರಿನ ಸದ್ದು
ನವ ನವೀನ ಪದ ಲಲಿತಗಳ ಗಾರುಡಿ ಎದ್ದು
ಕನ್ನಡಾಂಬೆಗೆ ಬಾಗಿನ ಕೊಡುವ
ನಿತ್ಯೋತ್ಸವ ನಿತ್ಯ ಹುರುಪು.
2
ಹಣೆಗೆ ಇಟ್ಟ ಕುಂಕುಮ ಬಣ್ಣ
ಕೈಗೆ ಇಟ್ಟ ಮದರಂಗಿ ಬಣ್ಣ
-ಗಳ ಅಭೇದ್ಯವರಿಯದವರು
ಅಮ್ಮ ಹೆಂಡತಿ ತೊಟ್ಟ ಕಪ್ಪು ಬುರ್ಖಾ
ಅಂಗಳದಲಿ ಇಡದ ರಂಗೋಲಿಗಳ
ಬಗ್ಗೆ ಇಂದಿಗೂ ಪೆಚ್ಚಾಗಿ ಮನಸು
ಸೋಜಿಗ ಉಳಿಸಿಕೊಂಡವರು
ಧರ್ಮಗಳ ಮಧ್ಯೆ ಕೊಂಡಿಯಾಗಿ ನಿಂತವರು
ಅಲ್ಪಸಂಖ್ಯಾತರಲ್ಲ ಅಸಂಖ್ಯಾತರಲಿ
ನಿಸ್ಸೀಮ ಸಂಕೇತವಾದವರು.
3
ಜಗ್ಗಿದ ಕಡೆ ಬಾಗದೆ ಡೋಂಗಿ ಸಾಲಾಮುಗಳ ಹಾಕದೆ
ಇವರು ಇವರಂತಾಗಿ
ಆ ಮಹಾಕವಿ ನುಡಿದಂತೆ
ನೂರು ದೇವರನೆಲ್ಲ ನೂಕಿ ದೂರ
ಭಾರತಾಂಬೆಯನೆ ಪೂಜಿಸಿ ಬಂದವರು
ಕನ್ನಡಾಂಬೆಗೆ ಪದ್ಮಶ್ರಿ ಕಿರೀಟ ತೊಡಿಸಿದವರು
ಇವರ ಪದ್ಯಗಳ ಓದಿದಂತೆಲ್ಲಾ
ಮರುಭೂಮಿಯಲಿ ಕರ್ಜೂರ ಮರಗಳ ತಂಪು
ಹುಳಿ ದ್ರಾಕ್ಷಿಗಳು ಒಣಗಿದ ನಾಲಿಗೆಯಿಂದ
ಜೊಲ್ಲುಕಿತ್ತ ಅನುಭವ
ಕಲ್ಲು ಸಕ್ಕರೆ ಸಿಹಿಯಾಗಿ ಕರಗಿ
ಜೊತೆಗೆ ಬಾದಾಮಿ ಮೆಲ್ಲುವ ಹಾವಭಾವ
ಮಕ್ ಮಲ್ಲಿನ ಗಲ್ಲಿಗಳಲ್ಲಿ ಸಂಚರಿಸಿ
ಸಾಧು ಸದ್ಗುರಗಳ ಮೂರ್ತಿವೆತ್ತ ಮೌನ
ದಿವ್ಯ ಚಹರೆಗಳ ತೇಜ ಮೂಡಿಸುತ್ತದೆ.
4
ಮಲ್ಲಿಗೆ ಕಂಟಿಯ ಅಂಟು
ತಿಳಿದವನಲ್ಲ ನಾನು
ಮಲ್ಲಿಗೆ ಬಳ್ಳಿಯ ಜೀವಂತ
ಕಾಣ್ಕೆ ಕೊಡುವುದಕೆ
ಆದರೆ, ಕಾವ್ಯದ ನಂಟನು ಅರಿತವನು
ಕಾವ್ಯದ ಅಂಟುಮಾಡಿ
ಕಾವ್ಯ ಕಾಣ್ಕೆಯ ನೀಡಿರುವೆ
ಇದೋ ಗುರುವೆ….. ಸ್ವೀಕರಿಸಿ ಹರಸು…..
-ಸಂತೋಷ್ ಟಿ
ಗರಿ ಬಿಚ್ಚಿ ನವಿಲೊಂದು ಕುಣಿದು
ಗರಿ ಬಿಚ್ಚಿ ನವಿಲೊಂದು ಕುಣಿದು
ಜೊತೆಗಾತಿಯ ಮೆಚ್ಚಿಸುವುದು
ನಾನೆಂದೂ ನಿನಗಾಗಿ ಇಚ್ಚಿಸಿ
ಮುಂಚೆಯೇ ಕುಣಿಯಲಾರೆ
ಬರುವುದಾದರೆ ನೀನೆ ಮೆಚ್ಚಿ ಬಾ!
ಕುಣಿಸುವ ಕಾಲಿಗೆ ಗೆಜ್ಜೆ ತೊಡಿಸಿ ನಲಿಸುವೆ…
ಆಕಸ್ಮಿಕವಾಗಿ ಎದುರಾದರೆ
ತಲೆ ತಗ್ಗಿಸಿ ಮೊಗ ಎತ್ತದೆ
ನೆಲ ನೋಡುವ ಹುಡುಗಿಯೇ…
ನಾನೇಕೆ ನಿನ್ನ, ಬಿಗುಮಾನಕೆ ಬಲಿಯಾಗಲಿ?
ನಿನ್ನ ರಬಸ ಗಾಳಿಯೂ ಸೋಕದಂತೆ
ದೂರ ಬಹು ದೂರ ಸರಿವೆ
ಬರುವುದಾದರೆ ನೀನೆ ಮೆಚ್ಚಿ ಬಾ!
ಆ ದೂರದ ಸಮಯವ ನಿನಗಾಗಿ ಮೀಸಲಿಡುವೆ…
ಸಿಕ್ಕ ಸಿಕ್ಕವರನೆಲ್ಲ ಸಖಿ ಎನುವ ವಯಸ್ಸಲಿ
ಸಿಕ್ಕೊಡನೆ ಸಖನೆಂದು ನನ್ನ ನಂಬದೇ ನೀನು
ಅಂತಸ್ತು ಶ್ರೇಯಸ್ಸುಗಳ ಎಣಿಸಿ ಗುಣಿಸುವೆಯಲ್ಲ!
ಕಾಗುಣಿತವೇ ಬರದ ಅಂಧಮತಿಯವನು ನಾನು
ಬರುವುದಾರೆ ನೀನೆ ಮೆಚ್ಚಿ ಬಾ!
ಕೂಡಿಸಿ ಗುಣಿಸಲಾಗದಷ್ಟು
ಪ್ರೀತಿ ಸಿಹಿಯನೆರೆವೆ…
ರಕ್ತ ಲೇಖನಿ ಇಲ್ಲ…ಮುಕ್ತ ಮಾತುಗಳಿಲ್ಲ…
ಒಡಲಲಿ ಸಿಡಿಲೊಡೆದ ಒಲವನು ವ್ಯಕ್ತಪಡಿಸುವುದಿಲ್ಲ…
ಕಣ್ಣ ಸನ್ನೆಗಳಿಲ್ಲ…ಬಣ್ಣ ಕವನಗಳಿಲ್ಲ…
ಕವಲೊಡೆದು ನಿನ್ನ ಪಡೆಯುವ ಯತ್ನಗಳನು…,
ನಾನು ಮೊದಲೆ ಮಾಡುವುದಿಲ್ಲ
ಬರುವುದಾದರೆ ನೀನೆ ಮೆಚ್ಚಿ ಬಾ!
ಬಣ್ಣಗಳ ಕುಡಿದು, ಸಿಡಿಲಿನ ಎದೆಯನು ಬಗೆದು,
ಕಾಮನ ಬಿಲ್ಲಿನ ಕವನಕೆ, ನಿನ್ನನು ಶೀರ್ಷಿಕೆಯಾಗಿಸುವೆ…
-ಪ್ರಸಾದ ಇಂಗಳಗಿ
ಪರಿಸರ ಮಾತೆ
ಪರಿಸರದ ಮಾತೆ ಸದಾ ಪೂಜಿತೆ
ಈ ನಿನ್ನ ಮಡಿಲು ಹಸಿರು ಇರುವ ಹೊನಲು
ಉಸಿರು ನಿನ್ನ ಒಡಲು
ಕೊನರು ತುಂಬಿದ ಕಡಲು
ಪರಿಸರದ ಮಾತೆ ಸದಾ ಪೂಜಿತೆ
ಜೀವರಾಶಿ ತುಂಬಿದ ಬೀಡು ನಿನ್ನದು
ಭಾವಶಕ್ತಿ ತುಂಬುವ ಔದಾರ್ಯ ನಿನ್ನದು
ತಂಪು ಕಂಪು ಬೀರುವ ಮನ ನಿನ್ನದು
ಮನುಶ್ಶಾಂತಿ ದೊರಕಿಸೋ ತನು ನಿನ್ನದು
ಸೌಂದರ್ಯ ಸೊಂಪಾದ ಸಿರಿ ನಿನ್ನದು
ವನದೇವಿ ಪ್ರಕೃತಿಗೆ ವರದಾನವು
ಸಿರಿ ಸಂಪನ್ಮೂಲದ ಸವಿ ಉದ್ಯಾನವು
ಮನು ಸಂಕುಲಕ್ಕೆ ಜೀವದಾನವು
ತರುಲತೆಗಳಿಗೆ ಆಶ್ರಯ ಧಾಮವು
ಗಿಡಮೂಲಿಕೆಗಳ ರಸ ತಾಣವು
ತರುಲತೆಗಳಲ್ಲಿ ನಿನ್ನದೇ ಜೀವ
ಜೀವಶಕ್ತಿಯಾಗಿ ತುಂಬಿದೆ ಭಾವ
ಅಪಾರ ಮಹಿಮೆ ನಿನ್ನದೇ ವನವೇ
ಹಸಿರು ಉಸಿರು ಎಲ್ಲವೂ ನಿನ್ನದೇ
ಪರಿಸರದ ಮಾತೆ ಸದಾ ಪೂಜಿತೆ
-ಚಂದ್ರು ಪಿ ಹಾಸನ್