ಹೊಸ ತಲೆಮಾರುಗಳ ತಲ್ಲಣಗಳ ಗುಚ್ಛ “ಕಾಜೂ ಬಿಸ್ಕೆಟ್”: ಡಾ. ನಟರಾಜು ಎಸ್ ಎಂ

ಗೋಡಂಬಿಯು ನನ್ನ ಇಷ್ಟದ ಡ್ರೈ ಫ್ರೂಟ್ ಆದ ಕಾರಣಕ್ಕೂ, ಅದರ ಸ್ವೀಟ್ ನೆಸ್ ನ ಕಾರಣಕ್ಕೂ “ಕಾಜು ಬಿಸ್ಕೆಟ್” ಎಂಬ ಒಂದೊಳ್ಳೆ ಟೈಟಲ್ ಇರುವ ಪುಸ್ತಕ ಕಣ್ಣಿಗೆ ಬಿದ್ದಾಗ ಒಂತರಾ ಆಕರ್ಷಣೀಯ ಅನಿಸಿತು. ಲೇಖಕರು ಪುಸ್ತಕ ಕೊಳ್ಳಲು ಲಿಂಕ್ ಗಳನ್ನು ಎಫ್ ಬಿ ಯಲ್ಲಿ ನೀಡಿದ್ದರಾದರೂ ಚೆಕ್ ಔಟ್ ಮಾಡುವ ವೇಳೆ ಪುಸ್ತಕದ ಬೆಲೆಗಿಂತ ಹೆಚ್ಚು ಹಣ ಕೊಡಬೇಕಾದ ಕಾರಣಕ್ಕೆ ಪರಿಚಯವಿರುವ ಪುಸ್ತಕ ಮಾರಾಟಗಾರರಿಂದ ಪುಸ್ತಕ ತರಿಸಿಕೊಂಡೆ.

“ಕಾಜೂ ಬಿಸ್ಕೆಟ್’ ಕಿರಣ್ ಕುಮಾರ್ ಕೆ ಆರ್ ರವರ ಚೊಚ್ಚಲ ಕಥಾಸಂಕಲನ. ಈ ಪುಸ್ತಕವನ್ನು ಲೇಖಕರೇ ಪ್ರಕಟಿಸಿದ್ದಾರೆ. ಋತುಮಾನ ಡಿಜಿಟಲ್ ಪ್ರಿಂಟ್ಸ್ ಈ ಪುಸ್ತಕವನ್ನು ಮುದ್ರಿಸಿದ್ದಾರೆ. ಕಸುಬು ಕ್ರಿಯೇಷನ್ಸ್ ಈ ಪುಸ್ತಕದ ಒಳಪುಟ ವಿನ್ಯಾಸ ಮಾಡಿದ್ದರೆ ರಘು ಅಪಾರ ಪುಸ್ತಕದ ಮುಖಪುಟ ಮಾಡಿದ್ದಾರೆ.

ಇತ್ತೀಚಿನ ಅನೇಕ ಕವರ್ ಪೇಜ್ ಡಿಜೈನರ್ ಗಳ ಫೇವರೇಟ್ ಬಣ್ಣ ಬಹುಶಃ ನೀಲಿಯಾದ ಕಾರಣಕ್ಕೆ ಈ ಪುಸ್ತಕದ ಮುಖಪುಟಕ್ಕೂ ತಿಳಿ ನೀಲಿ, ಬಿಳಿ ಬಣ್ಣದ ಹಿನ್ನೆಲೆ ಉಪಯೋಗಿಸಿರುವ ರಘು ಅಪಾರ ಪುಸ್ತಕದ ಕತೆಗಳು ಬೆಂಗಳೂರು ನಗರದಂತಹ ನಗರ ಕೇಂದ್ರಿತ ಕತೆಗಳು ಎನ್ನುವುದನ್ನು ತಮ್ಮ ಗೆರೆಗಳಲ್ಲಿ ತಿಳಿಸಿದ್ದಾರೆ. ಅದನ್ನು ಬಿಂಬಿಸಲು ಬಹು ಅಂತಸ್ತಿನ ಮಹಡಿಗಳು, ಅದರ ಪಕ್ಕದಲ್ಲೇ ಇರುವ ಮೆಟ್ರೋ, ಮೆಟ್ರೋ ಬದಿಯಲ್ಲಿರುವ ರಸ್ತೆ, ರಸ್ತೆ ಪಕ್ಕದಲ್ಲಿರುವ ಜನ, ರಸ್ತೆ ಮೇಲಿರುವ ಕಾರು, ಆಟೋ ಹಾಗೆಯೇ ಟ್ರಾಫಿಕ್ ಸಿಗ್ನಲ್ ಎಲ್ಲವನ್ನು ಮುಖಪುಟದಲ್ಲಿ ಅಚ್ಚುಕಟ್ಟಾಗಿ ಚಿತ್ರಿಸಿದ್ದಾರೆ. ಅಪಾರ ಅವರಿಗೆ ಮುಖಪುಟ ರಚಿಸುವುದರಲ್ಲಿ ಇರುವ ಅಪಾರ ಅನುಭವದ ಕಾರಣಕ್ಕೆ ಕತೆಗಳಿಗೆ ಒಪ್ಪುವಂತಹ ಮುಖಪುಟವನ್ನು ರಚಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ ಎನ್ನಬಹುದು. ಅಪಾರ ಅವರು ರಚಿಸಿರುವ ಈ ಮುಖಪುಟದಲ್ಲಿ ಬಹುಮುಖ್ಯವಾಗಿ ಗಮನ ಸೆಳೆಯುವ ಚಿತ್ರವೆಂದರೆ ಬಾಲಕನೊಬ್ಬ ಹಳದಿ ಬಣ್ಣದ ದೊಡ್ಡ ಗುಂಡನ್ನು ಉರುಳಿಸುತ್ತಾ ಹೋಗುತ್ತಿರುವುದು‌. ಈ ಚಿತ್ರ ಪುಸ್ತಕದ ಕತೆಗಳು ಪುರುಷನ ಜವಾಬ್ಧಾರಿಯ ಕುರಿತು ಮಾತನಾಡುತ್ತವೆ ಹಾಗು ಈ ಅಷ್ಟೂ ಕತೆಗಳು ಪುರುಷ ಪ್ರಧಾನ ಕತೆಗಳು ಎನ್ನುವುದನ್ನು ಸೂಚ್ಯವಾಗಿ ಹೇಳುತ್ತದೆ‌.

ಕಿರಣ್ ಕುಮಾರ್ ರವರ ಈ ಕಥಾಸಂಕಲನದಲ್ಲಿ ಒಟ್ಟು ಹನ್ನೆರಡು ಕತೆಗಳಿವೆ. ಹೆಚ್ಚಿನ ಕತೆಗಳಲ್ಲಿನ ಮುಖ್ಯ ಪಾತ್ರಧಾರಿಯ ಹೆಸರು ಕತೆಯ ಮೊದಲ ಸಾಲಿನ ಮೊದಲ ಪದವಾಗಿ ಅಥವಾ ಮೊದಲ ಸಾಲಿನ ಪದವಾಗಿ ಅಥವಾ ಮೊದಲ‌ ಪ್ಯಾರಾದಲ್ಲಿ ಇದ್ದೇ ಇರುತ್ತದೆ. ಉದಾಹರಣೆಗೆ ಕುಮಾರ ಬನಶಂಕರಿಯ ಎರಡನೇ ಹಂತದಲ್ಲಿ ಮನೆಯನ್ನು ಬಾಡಿಗೆಗೆ ಹಿಡಿದು ಎರಡೂವರೆ ವರ್ಷಗಳಾಗಿದ್ದವು. (ಕತೆ: ಇಲ್ಲಿ ದಾವಣಗೆರೆಯವರು ಇದ್ದಾರಾ?), ಮಂಜುನಾಥನ ಅಜ್ಜ ಒಂದು ಬೆಳಿಗ್ಗೆ ಕಾಣೆಯಾಗಿದ್ದರು (ಕತೆ: ಕಾಣೆಯಾದವರು). ಕಿರಣ್ ಅವರ ಕತೆಗಳು ಶೇಖರ, ಗೌತಮ, ಶ್ರೀಧರ, ಹರೀಶ, ಸಿದ್ರಾಮ, ರಮಾಕಾಂತ, ಚಂದ್ರಶೇಖರ, ಮದನ್ ಲಾಲ್ ಹೀಗೆ ಮುಖ್ಯ ಪಾತ್ರಗಳ ಹೆಸರುಗಳಿಂದಲೇ ಪ್ರಾರಂಭವಾಗುತ್ತವೆ. ಒಂದೆರಡು ಕತೆಗಳಲ್ಲಿ ಬಿಟ್ಟರೆ ಎಲ್ಲಾ ಕತೆಗಳ ಮುಖ್ಯ ಪಾತ್ರಗಳು ಯುವಕರೇ ಎನ್ನುವುದು ಗಮನಾರ್ಹ. ಹಾಗೆ ಯುವಕರನ್ನು ಕತೆಯೊಳಗೆ ತಂದು ಅವರ ಜೊತೆಗೆ ಇನ್ನೂ ಮೂರ್ನಾಲ್ಕು ಪಾತ್ರಗಳನ್ನು ಸೇರಿಸಿ ಕಥಾಹಂದರ ನಿರ್ಮಿಸಿ ಕತೆಗಾರನೆ ನಿರೂಪಕನಾಗಿ ಕತೆ ಹೇಳುತ್ತಾ ಹೋಗುವುದು ಕಿರಣ್ ಅವರ ಕಥನ ಶೈಲಿಯಾಗಿದೆ.

ಹನ್ನೆರಡು ಕತೆಗಳಲ್ಲಿ ಕೆಲವು ಕತೆಗಳು ಪ್ರೀತಿ ಪ್ರೇಮ, ಮದುವೆ, ದಾಂಪತ್ಯದ ವಿವಿಧ ಮಜುಲುಗಳನ್ನು ಪರಿಚಯಿಸಿದರೆ, ಕೆಲವು ಕತೆಗಳು ಒಬ್ಬಂಟಿಗರ ಕತೆಗಳನ್ನು ಅವರ ತಾಕಲಾಟಗಳನ್ನು ಹೇಳುತ್ತಾ ಹೋಗುತ್ತವೆ. ಇನ್ನು ಕೆಲವು ಕತೆಗಳು ಸಾಮಾಜಿಕ ಸಮಸ್ಯೆಗಳ ಕುರಿತು ಮಾತನಾಡತೊಡಗುತ್ತವೆ.

ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ

“ಕೊಲೆ” ಕತೆಯು ಪ್ರಿಯದರ್ಶಿನಿ ಶೇಖರರ ಪ್ರೇಮ ಕತೆ. Career ಕಟ್ಟಿಕೊಳ್ಳಲು ಇಚ್ಚೆ ಇರುವುದರ ಜೊತೆಗೆ ಬದುಕನ್ನು ಮದುವೆಯ ಮೂಲಕ ಕಟ್ಟಿಕೊಳ್ಳಲು ಇಚ್ಚಿಸುವ ಜೋಡಿಗಳಿಬ್ಬರ ದ್ವಂದ್ವಗಳ ಕತೆ ಇದು. ನಾವು ಓದುಗರಾಗಿ ನಮ್ಮಲ್ಲೇ ಒಂದು ಕಲ್ಪನಾಲೋಕವನ್ನು ಸೃಷ್ಟಿಸಿಕೊಂಡು “ಕೊಲೆ” ಕತೆಗೆ ಒಂದು ತಾರ್ಕಿಕ ಅಂತ್ಯ ಕೊಟ್ಟುಕೊಂಡು ಕತೆಯನ್ನು ಮುಂದುವರೆಸಿಕೊಂಡು ನೋಡಿದರೆ “ಅಪ್ಪ ಸೈಕಲ್ ಕಲಿಸಲಿಲ್ಲ” ಕತೆಯ ಮೂಲಕ ಗೌತಮ-ಮಹಿಮಾ ನಮ್ಮೆದುರು ನಿಲ್ಲುತ್ತಾರೆ. ಇವರಿಬ್ಬರಿಗೂ ಮದುವೆಯಾಗಿ ಮಗಳು ಹುಟ್ಟಿದ್ದರೆ, ಮಗಳನ್ನು, ದುಡಿಯುವ ಗಂಡ ಹೆಂಡತಿ ಹೇಗೆ ಸಾಕುವುದು ಎನ್ನುವ ದ್ವಂದ್ವಗಳ ಮೂಟೆ ಹೊತ್ತ ಜೋಡಿ ಇದಾಗಿರುತ್ತದೆ. “ಕೊಲೆ” ಕತೆಗೆ ನಾವು ಮತ್ತೊಂದು ಆಯಾಮ ಕೊಟ್ಟುಕೊಂಡರೆ “ಇಪ್ಪತ್ತೊಂದನೇ ಕ್ರೋಮೋಜೋಮು” ಕತೆಯಲ್ಲಿ ಮದುವೆಯಾಗಿ ಮಕ್ಕಳನ್ನು ಪಡೆಯಲು ಹೆಣಗುವ ಶೇಖರ-ಪ್ರಿಯದರ್ಶಿನಿಯರ ಬದುಕಿನ ದರ್ಶನವಾಗುತ್ತದೆ. “ಕೊಲೆ” ಕತೆಗೆ ಇನ್ನೂ ಅನೇಕ ಆಯಾಮಗಳನ್ನು ಕೊಡುತ್ತಾ ನಾವು ನೋಡಿದರೆ “ಕಾಜೂ ಬಿಸ್ಕೆಟ್” ನ ನಿತ್ಯಾ ಪ್ರಶಾಂತ್, “ಶ್ರೀಧರ್ ನನಗೆ ಚೆನ್ನಾಗಿ ಗೊತ್ತು” ಕತೆಯ ಕುಮಾರ್-ನಯನ, “ಎಂಟನೆಯ ದಿನ” ಕತೆಯ ರಮಾಕಾಂತ್-ವನಜಾ ಹೀಗೆ ಅನೇಕ ಜೋಡಿಗಳ ಬದುಕು ಮತ್ತು ಅವರ ಬದುಕಿನೊಳಗಿನ ದ್ವಂದ್ವಗಳನ್ನು ಲೇಖಕರು ಕಟ್ಟಿಕೊಡುತ್ತಾ “ದಸ್ ಕಹಾನಿಯ” ಅಂತಾರಲ್ಲ ಹಾಗೊಂದು ವಿವಿಧ ಕತೆಗಳ ಗುಚ್ಛಗಳನ್ನು ನಮಗೆ ನೀಡಿ ನಮ್ಮೊಳಗೊಂದು ಬೇರೆಯದೇ ಲೋಕವನ್ನು ಸೃಷ್ಟಿಸಿಬಿಡುತ್ತಾರೆ.

ಒಬ್ಬಂಟಿಗರ ಕತೆಗಳು

ಕತೆಗಾರರು ನಾಲ್ಕು ಕತೆಗಳಲ್ಲಿ ಪ್ರತಿ ಒಬ್ಬಂಟಿಗರ ಬದುಕನ್ನು ವಿಷಾದದ ರೀತಿಯಲ್ಲಿ ಕಟ್ಟುತ್ತಾ ಹೋಗುತ್ತಾರೆ. ಈ ಕತೆಗಳಲ್ಲಿ ಒಂದು ಒಬ್ಬಂಟಿಗನ ಪಾತ್ರ ಸೃಷ್ಟಿಸಿ ಅವನ ಜೊತೆಗೆ ಇನ್ನೊಂದಷ್ಟು ಪಾತ್ರಧಾರಿಗಳನ್ನು ಕರೆತಂದು ಆ ಪಾತ್ರಧಾರಿಗಳಿಗೆ ಒಂದು ಸಂಬಂಧದ ಚೌಕಟ್ಟು ನೀಡುತ್ತಾರೆ. “ಇಲ್ಲಿ ದಾವಣಗೆರೆಯವರು ಇದ್ದಾರಾ?” ಕತೆಯ ಕುಮಾರ ಒಂಟಿಯಾಗಿದ್ದರೂ ಆ ಕತೆಯಲ್ಲಿ ಬರುವ ಅಷ್ಟೂ ಪಾತ್ರಧಾರಿಗಳು ಒಂದು ರೀತಿಯಲ್ಲೇ ಒಂಟಿಯೇ. “ಕಾಣೆಯಾದರು” ಕತೆಯಲ್ಲಿ ಬರುವ ಅಷ್ಟೂ ಪಾತ್ರಗಳು ಕಾಣೆಯಾಗಲು ತುಡಿಯುತ್ತವೆ. “ಪ್ರತಿಮೆ,” “ಪರಕೀಯ” ಕತೆಗಳು ತಮ್ಮ ಶೀರ್ಷಿಕೆಗಳಿಂದಲೂ ಇವು ಒಬ್ಬಂಟಿಗರ ಕತೆಗಳು ಎನ್ನುವಂತೆ ದ್ವನಿಸುತ್ತವೆ.

ಸಾಮಾಜಿಕ ಸಮಸ್ಯೆಗಳ ಕತೆಗಳು

ಸಾಮಾಜಿಕ ಸಮಸ್ಯೆಗಳು ಎಂದ ತಕ್ಷಣ ಅನೇಕ ಬಗೆಯ ಸಮಸ್ಯೆಗಳು ನಮ್ಮ ಅರಿವಿಗೆ ಬಂದರೂ ಕತೆಗಾರರು ಎರಡು ಸೂಕ್ಷ್ಮ ವಿಷಯಗಳನ್ನು ತೆಗೆದುಕೊಂಡು “ಎಂಟನೆಯ ದಿನ” ಮತ್ತು “ಅವರು ಮತ್ತೆ ಬರುತ್ತಾರೆ” ಎಂಬ ಎರಡು ವಿಭಿನ್ನ ಕತೆಗಳನ್ನು ಕಟ್ಟುವ ಪ್ರಯತ್ನ ಮಾಡಿದ್ದಾರೆ. “ಎಂಟನೆಯ ದಿನ” ಕತೆಯಲ್ಲಿ “ತಬ್ಲೀಗಿ ಅಂತ ಮುಸ್ಲಿಂ ಆರ್ಗನೈಝೇಷನ್ನೋರು ಎರಡು ಸಾವಿರ ಜನ ಸೇರಿದ್ರಂತೆ ಡೆಲ್ಲೀಲಿ. ಅವ್ರಿಂದಾಗಿ ಎಷ್ಟೋ ಜನಕ್ಕೆ ಕರೋನಾ ಹರಡಿದ್ಯಂತೆ” ಎನ್ನುವ ಸಾಲನ್ನು ಬರೆಯುವ ಮೂಲಕ ಕರೋನ ಕಾಲದ ಜನರ ಮನಸ್ಥಿತಿಗಳನ್ನು ಅನಾವರಣ ಮಾಡುವ ಪ್ರಯತ್ನ ಮಾಡಿದ್ದಾರೆ. ಹಾಗೆಯೇ ಒಂದು ಸುದ್ದಿ ಹರಡುವುದರಲ್ಲಿ ವಾಟ್ಸ್‌ ಅಪ್‌ ಮತ್ತು ಫೇಸ್‌ ಬುಕ್‌ ವಹಿಸುವ ಪಾತ್ರವನ್ನು ಕತೆ ಕಟ್ಟಿಕೊಡುತ್ತದೆ. “ಅವರು ಮತ್ತೆ ಬರುತ್ತಾರೆ” ಕತೆಯಲ್ಲಿ “ನಮ್ಮಪ್ಪ ಎಲ್ಲಾರ್ನು ಎದುರು ಹಾಕಿಕೊಂಡಿದ್ದ. ಅವನು ನಾಸ್ತಿಕ, ನಿಷ್ಠುರವಾದಿ. ವಿಗ್ರಹ ಪೂಜೆಗೆ ಅರ್ಥ ಇಲ್ಲ ಅಂತ ಹೇಳ್ತಿದ್ದ” ಎನ್ನುವ ಸಾಲನ್ನು ಬರೆಯುತ್ತಲೇ ಮದನ್ ಲಾಲ್ ಎನ್ನುವ ವ್ಯಕ್ತಿ ಗಾಂಧೀಜಿಯನ್ನು ಕೊಲ್ಲಲು ಮಾಡಿದ ಪ್ರಯತ್ನವನ್ನು ಈ ಕತೆಯ ಶುರುವಿಗೆ ಉಲ್ಲೇಖಿಸುತ್ತಾ ಇತಿಹಾಸದ ಪುಟಗಳನ್ನು ಒಮ್ಮೆ ತಿರುವಿ ನೋಡಬೇಕಾದ ಅವಶ್ಯಕತೆಯನ್ನು ಒತ್ತಿ ಹೇಳುತ್ತಾರೆ. ಜೊತೆಗೆ ಕಿರಣ್ ರವರು ಇತಿಹಾಸದ ಇಂತಹ ಸೂಕ್ಷ್ಮಾತಿಸೂಕ್ಷ್ಮ ವಿಚಾರಗಳನ್ನು ಕತೆಯಲ್ಲಿ ಮನ್ನೆಲೆಗೆ ತಂದು ಇಂದಿನ ದಿನಗಳಿಗೆ ಆ ಇತಿಹಾಸದ ಅರಿವಿನ ಪ್ರಸ್ತುತತೆಯನ್ನು “ಅವರು‌ ಮತ್ತೆ ಬರುತ್ತಾರೆ” ಕತೆಯಲ್ಲಿ ಕಟ್ಟಿಕೊಟ್ಟಿದ್ದಾರೆ.

ಇತರ ಕತೆಗಳು
ಕತೆಗಾರರು ಹೆಚ್ಚಿನ ಕತೆಗಳಲ್ಲಿ ಒಂದು ತಲೆಮಾರಿ‌ನ ಕತೆಗಳನ್ನು ಹೇಳುತ್ತಾ ಹೋಗುತ್ತಾರೆ. ಕೆಲವು ಕತೆಗಳು ಎರಡೆರಡು ತಲೆಮಾರಿನ ಕತೆಗಳನ್ನು ಹೇಳಿದರೆ ಕೆಲವು ಕತೆಗಳು ಮೂರ್ನಾಲ್ಕು ತಲೆಮಾರಿನ ಕತೆಗಳನ್ನು ಹೇಳುತ್ತಾ ಹೋಗುತ್ತವೆ. ಆ ತಲೆಮಾರಿನ ಕತೆಗಳನ್ನು ಹೇಳುತ್ತಾ ಹೇಳುತ್ತಾ ಕತೆಗಾರರು ಆ ತಲೆಮಾರಿನ ತಲ್ಲಣಗಳನ್ನು ನಮ್ಮ ಮುಂದಿಡುತ್ತಾ ಹೋಗುತ್ತಾರೆ. ಆಸ್ತಿ ಹೋಗಿಬಿಡುತ್ತದ್ದಲ್ಲ ಎನ್ನುವ ಒಂದು ಕುಟುಂಬದ ತಲ್ಲಣದ ಕತೆಯನ್ನು “ಒಂದು ಮಧ್ಯಾಹ್ನ” ಕತೆಯಲ್ಲಿ ಕಟ್ಟಿಕೊಡಲು ಕಿರಣ್ ರವರು ಪ್ರಯತ್ನಿಸಿದ್ದಾರೆ.

ಒಟ್ಟಿನಲ್ಲಿ ಲೇಖಕರು ಅವರ ಪುಸ್ತಕದ ಮೊದಲ‌ ಮಾತಿನಲ್ಲಿ ಹೇಳಿದ ಹಾಗೆ‌ ಅತಿ ಸಾಮಾನ್ಯ ಎನಿಸುವ ಸಂಗತಿಗಳನ್ನು ಅವರು ಕತೆಗಳಲ್ಲಿ ಹೇಳಿದರೂ ಅವು ಈಗಿನ ಕಾಲದ ಜ್ವಲಂತ ಸಮಸ್ಯೆಗಳು ಸಹ ಎನ್ನುವುದನ್ನು ನಮಗೆ ತಮ್ಮದೇ ಬರಹದ ಶೈಲಿಯಿಂದ ಮನವರಿಕೆ ಮಾಡಿಕೊಡುತ್ತಾ ಹೋಗುತ್ತಾರೆ. ಹಾಗೆಯೇ ಒಂದು ಕತೆಯಲ್ಲಿ ಬರೀ ಒಂದು ಸಮಸ್ಯೆ ಅಷ್ಟೇ ಇರದೆ ಅದಕ್ಕೆ ತಾಳೆ ಹಾಕಿಕೊಂಡಂತೆ ಮತ್ತೊಂದು ಸಮಸ್ಯೆಯೂ ಸಹ ಇರುತ್ತದೆ. ಆ ಸಮಸ್ಯೆಗಳಿಂದ ಹೊರಬರಲು ಒದ್ದಾಡುವವರ ಕತೆಗಳ ಗುಚ್ಛವೇ “ಕಾಜೂ ಬಿಸ್ಕೆಟ್” ಎನ್ನಬಹುದು.

ಇನ್ನು ಈ ಪುಸ್ತಕದಲ್ಲಿ ಲೇಖಕರು ಗಮನ ಕೊಡಬೇಕಾಗಿದ್ದ ಕೆಲವು ಅಂಶಗಳೆಂದರೆ, ಇಲ್ಲಿನ ಪ್ರತಿ ಕತೆಗಳು ಪುರುಷ ಪ್ರಧಾನ ಕತೆಗಳೇ ಆಗಿದ್ದರೂ ಸ್ತ್ರೀ ಪಾತ್ರಗಳು ಕೆಲವು ಕತೆಗಳಲ್ಲಿ ಹೀಗೆ ಬಂದು ಹಾಗೆ ಹೋಗುವ ಪಾತ್ರಗಳಾಗಿವೆ. ಕಥಾಹಂದರ ಕೆಲವು ಕತೆಗಳಲ್ಲಿ ಮೂರ್ನಾಲ್ಕು ಪುಟಗಳಿಗಷ್ಟೇ ಮೀಸಲಾಗಿರುವ ಕಾರಣ ಆ ಕತೆಗಳ ಕಥಾಹಂದರವನ್ನು ಇನ್ನೂ ವಿಸ್ತಾರಗೊಳಿಸಬಹುದಿತ್ತು. ಹಾಗೆಯೇ “ಪರಕೀಯ” ಎನ್ನುವ ಕತೆಯ ಗೋಜಲುಗಳನ್ನು ಬಿಡಿಸಿದ್ದರೆ ಒಂದೊಳ್ಳೆ ಕತೆಯಾಗುತ್ತಿತ್ತೇನೋ. ಅದು ಒಂದು ಸಿನಿಮಾಕ್ಕೆ ಕತೆ ಹೇಳುವ ಕತೆಯಾದರೂ ಅದನ್ನು ಒಂದೊಳ್ಳೆ ಕತೆಯಾಗಿಸುವಲ್ಲಿ ಲೇಖಕರು ಬಹುಶಃ ಸೋತಿದ್ದಾರೆ. ಮುನ್ನುಡಿ ಹಿನ್ನುಡಿ, ಲೇಖಕರ ಪರಿಚಯ, ಪ್ರಕಾಶನದ ಹೆಸರು, ಮುಖ್ಯವಾಗಿ ಲೇಖಕರ ಭಾವಚಿತ್ರ ಪುಸ್ತಕದಲ್ಲಿದ್ದರೆ ಚಂದವಿರುತ್ತಿತ್ತು. ಪುಸ್ತಕದ ಒಳಪುಟದಲ್ಲಿ ಕಿರಣ್ ಕುಮಾರ್ ಕೆ ಆರ್ ಎಂದಿರುವ ಲೇಖಕರ ಹೆಸರು ಮುಖಪುಟದಲ್ಲಿ ಬರೀ ಕಿರಣ್ ಕುಮಾರ್ ಎಂದಷ್ಟೇ ಆಗಿದೆ. ಮುಂದಿನ ಮುದ್ರಣದಲ್ಲಿ ಅದನ್ನು ಲೇಖಕರು ಸರಿಮಾಡಿಕೊಳ್ಳಲಿ ಎಂದು ಆಶಿಸುವೆ.

ಒಂದೊಂದು ಕತೆಯಲ್ಲಿನ ಕಥಾಹಂದರವನ್ನು ವಿಶ್ಲೇಷಿಸುತ್ತಾ ಕುಳಿತರೆ ಹೊಸದಾಗಿ ಕತೆಗಳನ್ನು ಓದವವರಿಗೆ ರಸಭಂಗವಾಗುವ ಅಪಾಯ ಇರುವುದರಿಂದ ಕತೆಗಳ ಬಗ್ಗೆ ಇನ್ನು ಹೆಚ್ಚು ಹೇಳುವುದಿಲ್ಲ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಒಂದೇ ಗುಕ್ಕಿಗೆ ಇಡೀ ಪುಸ್ತಕವನ್ನು ಓದಿಸಿಕೊಳ್ಳುವ ಶಕ್ತಿ ಕಿರಣ್ ರವರ ಕತೆಗಳಿಗಿದೆ. ಹಾಗೆಯೇ ಪ್ರತಿ ಕತೆಗಳಿಗೆ ಒಂದು ತಾರ್ಕಿಕ ಅಂತ್ಯ ನೀಡದೆ ಕತೆಯು ಓದುಗರ ಮನದಲ್ಲಿ ಬೇರೆಯದೆ ರೂಪ ತಾಳುವ ಹಾಗೆ ಮಾಡಿ ಓದುಗರನ್ನು ಚಿಂತನೆಗೆ ಹಚ್ಚುವ ಕಿರಣ್ ಅವರ “ಕಾಜು ಬಿಸ್ಕೆಟ್” ಕತೆಗಳ ಸವಿಯ ಸುಖ ನಿಮ್ಮದಾಗಲಿ‌. ಕಿರಣ್ ರವರ ಈ ಹೊಸ ಪುಸ್ತಕಕ್ಕೆ ತುಂಬು ಹೃದಯದ ಅಭಿನಂದನೆಗಳು. ಅವರ ಇನ್ನೂ ಹೆಚ್ಚು ಕೃತಿಗಳು ಕನ್ನಡ ಸಾರಸ್ವತ ಲೋಕಕ್ಕೆ ದಕ್ಕಲಿ ಎಂದು ಹಾರೈಸುತ್ತೇನೆ.

-ಡಾ. ನಟರಾಜು ಎಸ್ ಎಂ

ಕೃತಿ: ಕಾಜೂ ಬಿಸ್ಕೆಟ್

ಪ್ರಕಾರ: ಕಥಾಸಂಕಲನ

ಲೇಖಕರು: ಕಿರಣ್ ಕುಮಾರ್ ಕೆ ಆರ್

ಬೆಲೆ: ರೂ. ೧೨೫/-

ಪ್ರತಿಗಳಿಗಾಗಿ ಸಂಪರ್ಕಿಸಿ: ೯೯೮೬೩೪೮೭೬೮


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x