ಗೆಸ್ಟ್ ಫ್ಯಾಕಲ್ಟಿ: ಪ್ರಶಾಂತ್ ಬೆಳತೂರು

ಸರಗೂರು ಪಟ್ಟಣಕ್ಕೆ ಹೊಂದಿಕೊಂಡಂತಿರುವ ನಿಲುವಾಗಿಲಿನ ನಮ್ಮ ಚೆಲುವಕೃಷ್ಣನು ಬಾಲ್ಯದಿಂದಲೂ ಓದಿನಲ್ಲಿ ಮುಂದಿದ್ದವನು. . ! ಆದರೆ ರಾಯರ ಕುದುರೆ ಬರುಬರುತ್ತಾ ಕತ್ತೆಯಾಯಿತು ಎನ್ನುವ ಹಾಗೆ ಅದೇಕೋ ಎಸ್. ಎಸ್. ಎಲ್. ಸಿ. ಯಲ್ಲಿ ಅವನು ಗಾಂಧಿ ಪಾಸಾದ ಕಾರಣ ಅನಿವಾರ್ಯವೆಂಬಂತೆ ಪಿಯುಸಿಯಲ್ಲಿ ಕಲಾವಿಭಾಗಕ್ಕೆ ದಾಖಲಾಗಬೇಕಾಯಿತು. ಅಲ್ಲೂ ಕೂಡ ಆರಕ್ಕೇರದ ಮೂರಕ್ಕಿಳಿಯದ ಅವನ ಸರಾಸರಿ ಅಂಕಗಳು ಶೇ ೪೦ ಕೂಡ ದಾಟಲಿಲ್ಲ. . ! ಪದವಿ ಕೂಡ ಇದರ ಮುಂದುವರಿದ ಭಾಗದಂತೆ ಮುಕ್ತಾಯಗೊಂಡಿತ್ತು. . ! ಮುಂದೇನು ಎಂದು ಯೋಚಿಸುತ್ತಿರುವಾಗಲೇ ಜೊತೆಯಲ್ಲಿನ ಗೆಳೆಯರು “ಬಿ. ಇಡಿ ಮಾಡಿದರೆ ಬೇಗ ಮೇಷ್ಟ್ರಾಗಿ ಬಿಡಬಹುದು. . ಬರೇ ಹತ್ತು ತಿಂಗಳಷ್ಟೇ ಓದೋದು ಆಮೇಲೆ ಗಂಟೆ ಹೊಡಿ ಸಂಬಳ ತಗೋ. . “ಆರಾಮ ಕೆಲಸ ಡೋನೆಷನ್ ಕಟ್ಟಾದ್ರು ಸರಿ ಮೈಸೂರಿನಲ್ಲಿ ಬಿ. ಇಡಿ. ಮಾಡಬೇಕೆಂದು ನಿರ್ಧರಿಸಿದ್ದರಿಂದ ನಮ್ಮ ಚೆಲುವಕೃಷ್ಣನು ಜಿದ್ದಿಗೆ ಬಿದ್ದವನಂತೆ ಮನೆಯವರೊಂದಿಗೆ ಜಗಳ ಮಾಡಿ ಅದಾಗ ತಾನೇ ಹತ್ತಿಬೆಳೆ ಮಾರಿ ಹೆತ್ತವರ ಕೈ ಸೇರಿದ್ದ ಐವತ್ತು ಸಾವಿರ ಹಣದಲ್ಲಿ ತನ್ನ ಪಾಲಿಗೆ ಬೇಕಿದ್ದ ಮೂವತ್ತು ಸಾವಿರ ಹಣವನ್ನು ಪಡೆದು ಬಿ. ಇಡಿ ಕಾಲೇಜು ಸೇರಿದ್ದ. ಮುಂದೆ ಅವನ ಬಿ. ಇಡಿಯು ಮುಗಿಯಿತು. . !

ಹೀಗೆ ನಮ್ಮ ಚೆಲುವಕೃಷ್ಣನು ಓದಿನಲ್ಲಿ ಸಾಧರಣ ವಿದ್ಯಾರ್ಥಿಯಾಗಿ ಸಾಧಾರಣ ಅಂಕಗಳೊಂದಿಗೆ ತೇರ್ಗಡೆಯಾದ ಮುಂದಿನ ಪರಿಣಾಮಗಳ ಬಗ್ಗೆ ಲವಲೇಶವೂ ಅರಿಯದಿದ್ದ ಅವನ ಬೋಳೇತನಕ್ಕೆ ಮೇಷ್ಟ್ರಾಗಬೇಕೆಂಬ ಹಂಬಲ ಅಸಲಿಗೆ ಇಲ್ಲದಿದ್ದರೂ ಬಿ. ಇಡಿ ಓದಿರುವ ಕಾರಣಕ್ಕೆ ನಿಧಾನವಾಗಿ ಮೊಳೆಯಲಾರಂಭಿಸಿತು. . ! ಅಲ್ಲದೇ ಅವನ ಜೊತೆಗಿದ್ದ ಆರು ಗೆಳೆಯರಲ್ಲಿ ಇಬ್ಬರು ಗೆಳೆಯರು ಬಿ. ಇಡಿ ಮುಗಿದ ಮರುವರ್ಷವೇ ಪ್ರೌಢಶಾಲಾ ಶಿಕ್ಷಕರ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಸರ್ಕಾರಿ ಮೇಷ್ಟ್ರಾಗುವ ಸೌಭಾಗ್ಯ ಪಡೆದು ಜೀವನದಲ್ಲಿ ನೆಲೆ ಕಂಡುಕೊಂಡದ್ದನ್ನು ಕಂಡು ತಾನು ಮೇಷ್ಟ್ರಾಗಬೇಕೆಂಬ ಕನಸಿಗೆ ಹೊಸ ರೆಕ್ಕೆ ಬಂದಂತಾಗಿತ್ತು. . ! ಆಗಾಗಿ ತಾನು ಕೂಡ ಒಂದಷ್ಟು ಶ್ರದ್ಧೆಯಿಂದ ಓದಿ ಹೇಗಾದರೂ ಈ ಮೇಷ್ಟ್ರು ಕೆಲಸವನ್ನು ಗಿಟ್ಟಿಸಬೇಕೆಂಬ ಹಂಬಲದಿಂದ ಓದಿನಲ್ಲಿ ಮುಂದಿದ್ದ, ಆಗಷ್ಟೇ ಈ ನೌಕರಿ ಪಡೆದಿದ್ದ ತನ್ನಿಬ್ಬರು ಗೆಳೆಯರಲ್ಲಿ ಸಲಹೆ ಮಾರ್ಗದರ್ಶನಗಳನ್ನು ಪಡೆದ. ಅವರಲ್ಲೊಬ್ಬ ನೀನು ಬರೇ ಓದುತ್ತಾ ಕೂತರೆ ಜೀವನಕ್ಕೆ ಕಷ್ಟವಾಗಬಹುದು ಎಲ್ಲಾದರೊಂದು ಒಳ್ಳೆಯ ಶಾಲೆಯನ್ನು ಹುಡುಕಿ ಈ ಮೇಷ್ಟ್ರು ಕೆಲಸಕ್ಕೆ ಸೇರು. . ನಿನ್ನ ಪರೀಕ್ಷಾ ಓದಿಗೂ ಆ ನಿಟ್ಟಿನಲ್ಲಿ ಒಳ್ಳೆಯದಾಗುತ್ತದೆ ಎಂಬ ಬಹುಮುಖ್ಯ ಸಲಹೆಯ ಮೇರೆಗೆ ನಮ್ಮ ಚೆಲುವಕೃಷ್ಣನು ತನ್ನ ಮುದ್ದಾದ ಬಯೋಡಾಟವನ್ನು ಸಿದ್ದಪಡಿಸಿ ಹಲವು ಶಾಲೆಗಳಿಗೆ ಸಂದರ್ಶನಕ್ಕೆ ತೆರಳಬೇಕೆಂದು ನಿರ್ಧರಿಸಿದ. ಮೊದಲಿಗೆ ಮೈಸೂರಿನ ಪ್ರಖ್ಯಾತ ಕ್ರೈಸ್ತ ಮಿಷನರಿ ಶಾಲೆಯೊಂದಕ್ಕೆ ಕನ್ನಡ ಶಿಕ್ಷಕ ಹುದ್ದೆ ಖಾಲಿಯಿದೆ ಎಂದು ತಿಳಿದಾಗ ಅಲ್ಲಿಗೆ ಅರ್ಜಿ ಸಲ್ಲಿಸಿ ತನ್ನ ಹೆಸರನ್ನು ನೊಂದಾಯಿಸಿಕೊಂಡ. ಸಂದರ್ಶನದ ದಿನ ಐವತ್ತಕ್ಕೂ ಹೆಚ್ಚು ಅಭ್ಯರ್ಥಿಗಳು ಇದುದ್ದನ್ನು ಕಂಡು ಕಸಿವಿಸಿಗೊಂಡ.

ಆದರೆ ಸಂದರ್ಶನದಲ್ಲಿ ಆಯ್ಕೆಯಾದ ಮೂರು ಅಭ್ಯರ್ಥಿಗಳಿಗೆ ಮಾದರಿ ಬೋಧನೆ ಮಾಡಲು ಅವಕಾಶವಿರುವುದಾಗಿ ತಿಳಿದು ಆಸೆಗಣ್ಣುಗಳಿಂದ ತನ್ನ ಸರದಿಗಾಗಿ ಕಾದು ಕೂತ. ತನ್ನ ಸರದಿ ಬಂದಾಗ ಅವನು ಎದುರಿಸಿದ ಮೊದಲ ಪ್ರಶ್ನೆ ” ಸಾಹಿತ್ಯ ಎಂದರೇನು?” ಮುಖ ಮುಖ ನೋಡುತ್ತಾ ಕೂತ ಚೆಲುವಕೃಷ್ಣನನ್ನು ತಾವಿನ್ನು ಹೊರಡಬಹುದು ಎಂದು ಎದುರಿಗಿದ್ದ ವ್ಯಕ್ತಿ ಹೇಳುವುದಕ್ಕಿಂತ ಮುಂಚೆಯೇ ಮುಖದಲ್ಲಿದ್ದ ಮಂದಹಾಸ ಹಾರಿ ಹೋಗಿ ನಿರಾಸೆಯಿಂದ ಹೊರನಡೆಯಬೇಕಾದ ಪರಿಸ್ಥಿತಿ ಎದುರಾಯಿತು. ಇದರಿಂದ ಖೇದಗೊಂಡ ನಮ್ಮ ಚೆಲುವಕೃಷ್ಣನು ನನ್ನ ಅರೆಬರೆ ಓದಿನ ಜ್ಞಾನ ಸಾಲದೆಂದು ಪುಸ್ತಕಗಳನ್ನು ಓದಿ ತನ್ನ ಅರಿವನ್ನು ವಿಸ್ತರಿಸಿಕೊಳ್ಳಬೇಕೆಂದು ನಿಶ್ಚಯಿಸಿ ಬಿಡುವಿನ ವೇಳೆಯಲ್ಲಿ ಒಂದಷ್ಟು ಓದುವ ಅಭ್ಯಾಸವನ್ನು ಇಟ್ಟುಕೊಂಡ. ಛಲ ಬಿಡದ ದುರ್ಯೋಧನನಂತೆ ಹತ್ತಾರು ಪ್ರತಿಷ್ಠಿತ ಶಾಲೆಗಳಿಗೆ ಹೋಗಿ ಸಂದರ್ಶನ ಎದುರಿಸಿ ಬಂದ. ಆದರೆ ಯಾರೊಬ್ಬರೂ ಇವನ ಗಾಂಧಿ ಪಾಸಿನ ಅಂಕಗಳನ್ನು ನೋಡಿ ಕೆಲಸಕ್ಕೆ ತೆಗೆದುಕೊಳ್ಳಲು ನಿರಾಕರಿಸುತ್ತಿದ್ದರು. . !

ಕೊನೆಗೆ ಯಾರೋ ಇವನಿಗೆ ವಿವಿಧ ವಸತಿ ಶಾಲೆಗಳಲ್ಲಿ ಮೇಷ್ಟ್ರು ಹುದ್ದೆಗಳು ಖಾಲಿಯಿವೆ ಎಂದು, ನೀನು ಹೇಗಾದರೂ ಮಾಡಿ ಅಲ್ಲಿಗೆ ಸೇರಿಕೊಂಡರೆ ನಿನ್ನ ಈ ನಿರುದ್ಯೋಗದ ಬದುಕು ತಕ್ಕಮಟ್ಟಿಗೆ ಸುಧಾರಿಸಬಹುದೆಂದು, . ಎಂ. ಪಿ. ಯನ್ನೋ, ನಿಮ್ ಕ್ಷೇತ್ರದ ಎಂ. ಎಲ್. ಎ. ಯನ್ನೋ ಹಿಡಿದು ಖಾಲಿ ಇರುವ ಕಡೆ ಒಂದು ಲೆಟರ್ ಹಾಕ್ಸಿ ಒಳಗಡೆ ಸೇರ್ಕೋ ಮಾರಾಯ, ಮೂರು ಹೊತ್ತು ಊಟ, ಮಲ್ಕೊಳೋಕೆ ಕ್ವಾಟ್ರಸ್ , ಸಂಬಳ ಬರೋದು ತಡವಾದರೂ ಒಟ್ಟಿಗೆ ಬರುತ್ತದೆ ಅದಕ್ಕಾಗಿ ಭಯ ಬೀಳೋದು ಬೇಡ ಎಂದು ಇವನನ್ನು ಹುರಿದುಂಬಿಸಿದ್ದರಿಂದ ವಾರಗಳ ಕಾಲ ಸಾವಿರಾರು ರೂಪಾಯಿಗಳನ್ನು ರಾಜಕೀಯ ದಲ್ಲಾಳಿಗಳಿಗೆ ತೆತ್ತು ಕೊನೆಗೊಮ್ಮೆ ಎಂ. ಎಲ್. ಎ. ಯವರನ್ನು ಮೈಸೂರಿನ ಅವರ ಸ್ವಗೃಹದಲ್ಲಿ ಮುಂಜಾನೆಯ ಅವರ ಕಾಫಿ ಸಮಯಕ್ಕೆ ಮುಖತಃ ಭೇಟಿ ಮಾಡಿ ತನ್ನ ಸಂಕಷ್ಟದ ದೀನಸ್ಥಿತಿಗಳನ್ನೆಲ್ಲಾ ಹೇಳಿಕೊಂಡ ಬಳಿಕ ಗಂಭೀರ ಮುಖಭಾವ ಹೊತ್ತ ಮಾನ್ಯ ಶಾಸಕರು ಕಾಫಿ ಲೋಟವನ್ನು ಕೆಳಗಿಳಿಸಿ ಖಾಲಿ ಇರುವ ಅತಿಥಿ ಶಿಕ್ಷಕರ ಹುದ್ದೆಗಳ ದೀರ್ಘಪಟ್ಟಿಯನ್ನು ತರಿಸಿ ಕರ್ನಾಟಕ ಮತ್ತು ಕೇರಳದ ಗಡಿಗಳಿಗೆ ಹೊಂದಿಕೊಂಡಂತಿದ್ದ ಹೆಗ್ಗಡದೇವನ ಕೋಟೆ ತಾಲ್ಲೂಕಿನ ೪೦ ಮೈಲು ದೂರದ ದೊಡ್ಡ ಬೈರನಕುಪ್ಪೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಕನ್ನಡ ಮೇಷ್ಟ್ರು ಕೆಲಸಕ್ಕೆ ನಿಯೋಜನೆಗೊಳ್ಳುವಂತೆ ಪತ್ರಕ್ಕೆ ಸಹಿ ಹಾಕುವುದರ ಮುಖೇನ ಅನುಮತಿ ಕೊಟ್ಟು ಕಳುಹಿಸಿದರು.

ಅಂದಿನಿಂದ ನಮ್ಮ ಗೆಸ್ಟ್ ಫ್ಯಾಕಲ್ಟಿ ಚೆಲುವಕೃಷ್ಣನು ತಾನೊಬ್ಬ ಕನ್ನಡ ಮೇಷ್ಟ್ರೇಂದು ಮನೆಯವರೆದುರು, ಊರಿನವರೆದುರು ಬೀಗುತ್ತಾ, ಆಧುನಿಕತೆಯ ಗಂಧಗಾಳಿ ಸೋಕದೆ, ಸರಿಯಾದ ಸಾರಿಗೆ ವ್ಯವಸ್ಥೆಗಳಿಲ್ಲದೆ, ದಟ್ಟವಾದ ಕಾಕನಕೋಟೆಯ ಕಾಡಿನ ಮಡಿಲಲ್ಲಿ ಬಹುತೇಕರಿಗೆ ಅಪರಿಚಿತವಾಗಿದ್ದ ದೊಡ್ಡಬೈರನಕುಪ್ಪೆಗೆ ವೃತ್ತಿ ಬದುಕಿಗಾಗಿ ಕಾಲಿರಿಸಿದ. ಆದರೆ ಚೆಲುವಕೃಷ್ಣನ ಈ ತಾತ್ಕಾಲಿಕ ವೃತ್ತಿ ಬದುಕು ತನ್ನನ್ನು ಹಣ್ಣು ಮಾಡಿಬಿಡುತ್ತದೆ ಎಂಬ ಮುಂದಾಲೋಚನೆಯಾಗಲೀ, ಅಂದಾಜಗಾಲೀ ಮೊದಮೊದಲು ಅವನಿಗೆ ತಿಳಿದಿರಲಿಲ್ಲ . ! ಏಕೆಂದರೆ ಈ ದೊಡ್ಡ ಬೈರನಕುಪ್ಪೆಯು ಕಾಡುಕುರುಬರ, ಜೇನುಕುರುಬರ ಮೂಲ ಸ್ಥಳವಾಗಿದ್ದರಿಂದ ಅವರ ಜನಸಂಖ್ಯೆ ಅತ್ಯಧಿಕವಾಗಿತ್ತು. . ! ಅಲ್ಲದೇ ಆಧುನಿಕತೆಯ ಸೋಗಿನ ಅಭಿವೃದ್ಧಿಯ ಹೆಸರಿನಲ್ಲಿ ವಲಸಿಗರಾಗಿ ಬಂದ ಕೆಲ ಬಲಾಢ್ಯ ಜಾತಿಯ ಜನರು ನೆರೆರಾಜ್ಯದ ಮಲಯಾಳಿಗಳೊಂದಿಗೆ ಗಂಧದ ಕಳ್ಳಸಾಗಾಣಿಕೆ, ಮರಳು ದಂಧೆಯನ್ನು ಗುಪ್ತವಾಗಿ ನಡೆಸುತ್ತಾ ಅವರು ಕೂಡ ಕುಟುಂಬ ಸಮೇತ ಅಲ್ಲಲ್ಲಿ ನೆಲೆಯೂರಿದ್ದ ಊರಾಗಿತ್ತು. ಇಂತಹ ಊರಿನಲ್ಲಿ ಈ ವಸತಿ ಶಾಲೆ ಇದ್ದಿದ್ದರಿಂದ ಶಾಲೆಯ ಹೆಚ್ಚಿನ ಮಕ್ಕಳು ಕಾಡುಕುರುಬರ ಜೇನುಕುರುಬರ ಮಕ್ಕಳೇ ಆಗಿರುತ್ತಿದ್ದವು. ೬-೧೦ ನೇ ತರಗತಿಯವರೆಗಿನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಕಾಡಂಚಿನ ಮಕ್ಕಳಿಗೂ ದೊರೆಯಬೇಕೆಂಬ ಸದುದ್ದೇಶದಿಂದ ಸರ್ಕಾರ ಈ ವಸತಿ ಶಾಲೆಗೆ ಅನುಮತಿ ನೀಡಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಸುಸಜ್ಜಿತವಾಗಿ ಕಲ್ಪಿಸಿಕೊಟ್ಟಿದ್ದರು ಖಾಯಂ ಶಿಕ್ಷಕರು ಮಾತ್ರ ಹೆಚ್ಚು ದಿನಗಳ ಕಾಲ ನೆಲೆ ನಿಲ್ಲದೆ ವರ್ಗಾವಣೆಗಾಗಿ ಮೇಲಾಧಿಕಾರಿಗಳೊಂದಿಗೆ ದುಂಬಾಲು ಬೀಳುತ್ತಾ ಕಚೇರಿಗಳಿಗೆ ಅಲೆಯುತ್ತಿದ್ದರು.

ಅಂತಹ ವಸತಿ ಶಾಲೆಗೆ ಅತಿಥಿ ಕನ್ನಡ ಶಿಕ್ಷಕನಾಗಿ ಸೇರ್ಪಡೆಗೊಂಡ ನಮ್ಮ ಚೆಲುವಕೃಷ್ಣನಿಗೆ ಇನ್ನುಳಿದ ಐವರು ಶಿಕ್ಷಕರು ತನ್ನಂತೆಯೇ ಗೆಸ್ಟ್ ಫ್ಯಾಕಲ್ಟಿಗಳೆಂದು ತಿಳಿದು ಖುಷಿಯಾಯಿತು. . ! ಅಲ್ಲದೇ ಈ ವಸತಿ ನಿಲಯದ ನಿಲಯ ಮೇಲ್ವಿಚಾರಕ ಕೂಡ ಈ ಶಾಲೆ ಆರಂಭವಾದಾಗಿನಿಂದ ಗೆಸ್ಟ್ ಫ್ಯಾಕಲ್ಟಿಯಾಗಿಯೇ ಕರ್ತವ್ಯ ನಿರ್ವಹಿಸುತ್ತಿದ್ದರಿಂದ ಖಾಯಂ ಉದ್ಯೋಗಿಗಳೆಂದು ಹೇಳಿಕೊಳ್ಳಲು ಆ ಶಾಲೆಯ ಮುಖ್ಯೋಪಾಧ್ಯಯನನ್ನು ಬಿಟ್ಟರೆ ಇನ್ನಾರು ಉಳಿದಿರಲಿಲ್ಲ. . ! ಈ ಮುಖ್ಯೋಪಾಧ್ಯಯನು ಬಯಲು ಸೀಮೆಯ ತುಮಕೂರಿನವನಾದ್ದರಿಂದ ಇಲ್ಲಿಯ ಸ್ಥಳೀಯ ಮೂಲದ ಊರುಗಳಿಂದ ತಮ್ಮ ರಾಜಕೀಯ ಪ್ರಭಾವ, ಹಣದ ಪ್ರಭಾವ ಬಳಸಿ ಸೇರಿಕೊಂಡಿದ್ದ ಈ ಗೆಸ್ಟ್ ಫ್ಯಾಕಲ್ಟಿಗಳ ಮೇಲೆ ಯಾವ ಅಧಿಕಾರವನ್ನು ಬಳಸಲಾಗದೆ ಅವರುಗಳ ಕೈಗೊಂಬೆಯಾಗಿ ಬದುಕುದೂಡುತ್ತಿದ್ದ ವಿಚಿತ್ರ ಜೀವಿಯಾಗಿದ್ದ. ! ಅಡುಗೆ ಸಿಬ್ಬಂದಿಗಳಿಂದ ಹಿಡಿದು ಜವಾನನವರೆಗೂ ಒಂದು ರೀತಿಯ ಜಾತಿ ರಾಜಕೀಯ, ಸಹೋದ್ಯೋಗಿ ದ್ವೇಷ, ಅನೈತಿಕ ನಡುವಳಿಕೆಗಳು, ಸಣ್ಣ ಪುಟ್ಟ ರಂಪಗಳು, ಬದುಕಿನ ಅಭದ್ರತೆಯ ತಾಕಲಾಟಗಳು ನಡೆಯುತ್ತಲೇ ಇದ್ದ ವಿಷಮ ಕಾಲದಲ್ಲಿ ಚೆಲುವಕೃಷ್ಣನ ಈ ವೃತ್ತಿ ಬದುಕು ಚಿಗುರುತ್ತಿತ್ತು. . !

೬- ೧೦ ನೇ ತರಗತಿಯವರೆಗೆ ಒಟ್ಟು ಐದು ಅವಧಿಗೆ ನಿತ್ಯ ಕನ್ನಡ ಪಾಠ ಮಾಡಬೇಕಿದ್ದ ಚೆಲುವಕೃಷ್ಣನಿಗೆ ಓದಿನ ಶಿಸ್ತು, ಬೋಧನೆಯ ಮಹತ್ವಗಳು ಅರ್ಥವಾಗಿದ್ದರಿಂದ ಪ್ರತಿನಿತ್ಯ ಮಕ್ಕಳಿಗೆ ಚಾಚೂ ತಪ್ಪದೆ ಪಾಠ ಮಾಡಬೇಕೆಂಬ ತುಡಿತ, ವೃತ್ತಿಧರ್ಮಕ್ಕೆ ವಿರುದ್ಧವಾಗಿ ನಡೆಯಬಾರದೆಂಬ ಸ್ವಯಂ ಶಿಸ್ತು ತಿಳುವಳಿಕೆಗಳು ಬೆಳೆದು ಸಮಯಪಾಲನೆಗೆ ನಿಷ್ಠನಾಗಿದ್ದ. ಆದರೆ ಅಲ್ಲಿಯ ಕಾಡಂಚಿನ ಜೇನುಕುರುಬರ, ಕಾಡುಕುರುಬರ ಮಕ್ಕಳಿಗೆ ಯಾವ ಮೇಷ್ಟ್ರುಗಳ ಪಾಠವೂ ಬೇಕಿರಲಿಲ್ಲ. . ! ಸದಾ ಕಾಡಿನಲ್ಲಿ ಹರಿವ ಝರಿಯಲ್ಲಿ , ಹಳ್ಳಕೊಳ್ಳಗಳಲ್ಲಿ ಆಟವಾಡುತ್ತಾ, ದಟ್ಟ ಕಾಡಿನೊಳಗೆ ಕಣ್ಮರೆಯಾಗುತ್ತಿದ್ದ ಮಕ್ಕಳು ಊಟ ತಿಂಡಿ ಸಮಯಕ್ಕೆ ಮಾತ್ರ ಹಾಜರಾಗುತ್ತಿದ್ದವು. ಯಾವ ವಿದ್ಯಾರ್ಥಿಗಳು ಕೂಡ ವಸತಿ ನಿಲಯದಲ್ಲಿ ಉಳಿದುಕೊಳ್ಳದೇ ಕಾಡಿನ ಸುತ್ತಮುತ್ತಲಿದ್ದ ತಮ್ಮ ಹಾಡಿಗಳಿಗೆ ಹಿಂದಿರುಗುತ್ತಿದ್ದ ಪರಿಣಾಮವಾಗಿ ನಿಲಯ ಮೇಲ್ವಿಚಾರಕ ಸೇರಿದಂತೆ ಅಲ್ಲಿನ ಸಿಬ್ಬಂದಿಗಳೆಲ್ಲಾ ಶಾಮೀಲಾಗಿ ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ಸರಬರಾಜಾಗುತ್ತಿದ್ದ ಟೂತ್ ಪೇಸ್ಟ್, ಟೂತ್ ಬ್ರಷ್, ಸ್ಯಾಂಡಲ್ ಸೋಪ್, ಕೊಬ್ಬರಿ ಎಣ್ಣೆಯಿಂದ ಮೊದಲ್ಗೊಂಡು ಟವೆಲ್ಲುಗಳು, ರಗ್ಗು, ದಿಂಬು, ಹಾಸಿಗೆ ಸಮೇತ ಮಾರುಕಟ್ಟೆಯ ರೀಟೆಲ್ ದರದ ಅರ್ಧಂಬರ್ಧ ಬೆಲೆಗೆ ಮಾರಿ ಹಣ ಎಣಿಸಿಕೊಳ್ಳುತ್ತಿದ್ದರು. . ! ಅಲ್ಲದೇ ಮಳೆಗಾಲದಲ್ಲಿ ಬದುಕಿಗೆ ತ್ರಾಸವಾಗುತ್ತಿದ್ದ ಕಾರಣ ಇಲ್ಲಿಯ ಕಾಡುಕುರುಬ ಮತ್ತು ಜೇನುಕುರುಬ ಜನರು ವೈನಾಡಿನ ಮಾನಂದವಾಡಿ, ಕಲ್ಪೆಟ್ಟ, ಸುತ್ತಮುತ್ತಲ ಸ್ಥಳಗಳಿಗೆ ಕೂಲಿಗಾಗಿ ಕುಟುಂಬ ಸಮೇತ ಗುಳೇ ಹೊರಟು ಬಿಡುತ್ತಿದ್ದರು.

ಆಗಾಗಿ ಈ ಕುಟುಂಬಗಳು ಮೂರು ತಿಂಗಳಿಗೋ ಅಥವಾ ಆರು ತಿಂಗಳಿಗೋ ತಮ್ಮ ಮೂಲಸ್ಥಳಕ್ಕೆ ಹಿಂತಿರುಗುತ್ತಿದ್ದರಿಂದ ತಮ್ಮ ಮಕ್ಕಳನ್ನು ಜೊತೆಗೆ ಕರೆದೊಯ್ಯುವುದು ಸಾಮಾನ್ಯವಾಗಿತ್ತು. . ಆಗಾಗಿ ಈ ವಸತಿ ಶಾಲೆಯಲ್ಲಿನ ಹತ್ತು ವಿದ್ಯಾರ್ಥಿಗಳಲ್ಲಿ ೯ ವಿದ್ಯಾರ್ಥಿಗಳು ಈ ಜೇನುಕುರಬ ಮತ್ತು ಕಾಡುಕುರುಬ ಕುಟುಂಬದ ಮಕ್ಕಳೇ ಇರುತ್ತಿದ್ದರಿಂದ ಅಡುಗೆ ಸಿಬ್ಬಂದಿಗಳಿಗಾಗಲೀ ಮೇಷ್ಟ್ರುಗಳಿಗಾಗಲೀ ಹೆಚ್ಚಿನ ಕೆಲಸವೂ ಇರುತ್ತಿರಲಿಲ್ಲ. . ! ಅಲ್ಲದೇ ಗೈರಾದ ಮಕ್ಕಳಿಗೆಲ್ಲಾ ಹಾಜರಾತಿಯನ್ನು ನೀಡಿ ಅಕ್ಕಿ, ಬೇಳೆ, ಎಣ್ಣೆ, ತರಕಾರಿಯ ಹೆಸರಿನಲ್ಲಿ ಸುಳ್ಳು ಲೆಕ್ಕದ ಬಿಲ್ಲುಗಳನ್ನೆಲ್ಲಾ ತಯಾರಿಸಿ ಇಲಾಖೆಗೆ ನೀಡಿ ಹಣ ಲಪಾಟಾಯಿಸುವಲ್ಲಿ ನಿಸ್ಸೀಮರಾಗಿದ್ದರು. ಅಲ್ಲದೇ ತಾಲ್ಲೂಕು ಕೇಂದ್ರದಿಂದ ಬಹುದೂರದಲ್ಲಿರುವ ಈ ಶಾಲೆಗೆ ಮೇಲಾಧಿಕಾರಿಗಳು ವರ್ಷಕ್ಕೆ ಒಮ್ಮೆ ಭೇಟಿ ಕೊಟ್ಟರು ಅದೊಂದು ಪವಾಡಸದೃಶವೇ ಸರಿ. ಹೀಗಾಗಿ ಮೇಲಾಧಿಕಾರಿಗಳಿಗೂ ಒಂದಷ್ಟು ಕೈಬೆಚ್ಚಗೆ ಮಾಡುವ ಪರಿಪಾಠ ಬೆಳೆದು ಬಂದಿದ್ದರಿಂದ ಇಲಾಖೆಯವರು ಕೂಡ ಇತ್ತ ಮುಖ ಹಾಕುತ್ತಿರಲಿಲ್ಲ. . ! ಹಾಗಾಗಿ ಇವರ ಎಲ್ಲಾ ಗುಳುಂ ಕಾರ್ಯಗಳು ಸುಸೂತ್ರವಾಗಿ ಸಾಗುತ್ತಾ ಅವರಿಗೆ ದಕ್ಕಬೇಕಾದ ಪಾಲುಗಳನ್ನು ಅಳೆದು ತೂಗಿ ಹಂಚಿಕೊಳ್ಳುತ್ತಾ ಬದುಕು ಹೊರೆಯುತ್ತಿದ್ದ ಇಲ್ಲಿನ ಸಿಬ್ಬಂದಿಗಳೊಂದಿಗೆ ನಮ್ಮ ಚೆಲುವಕೃಷ್ಣ ಮಾತ್ರ ಭಿನ್ನವಾಗಿ ಕಾಣತೊಡಗಿದ. ಯಾರೊಂದಿಗೂ ದ್ವೇಷ, ಅಸೂಯೆಗಳನ್ನು ಹೊಂದಿರದ ಈತ ಅವರು ಕೊಡುವ ಯಾವ ಅನ್ಯಾಯದ ಹಣಗಳನ್ನು ಮುಟ್ಟದವನಾಗಿದ್ದ ಆದರೆ ಅವೆಲ್ಲವನ್ನೂ ಪ್ರತಿಭಟಿಸದೆ ನೋಡಿಯೂ ನೋಡದಂತೆ, ಕೇಳಿಯೂ ಕೇಳದಂತೆ ಮೌನದಲ್ಲೇ ಇದ್ದುಬಿಡುತ್ತಿದ್ದ ಇವನ ವ್ಯಕ್ತಿತ್ವ ಹಲವರಿಗೆ ನಗು ತರಿಸುತ್ತಲೇ ಇತ್ತು. ನಿಮ್ಮ ಮನೆಗೊಂದಿಷ್ಟು ರೇಷನ್ ಇಲ್ಲಿಂದಲೇ ಒಯ್ಯೋ ಮಾರಾಯ ಎಂದರೆ ನಿರಾಕರಿಸುತ್ತಿದ್ದ.

ಸಂಬಳ ಬಾರದೆ ಆರು ತಿಂಗಳಾದರೂ ಇಲಾಖೆಯವರನ್ನು, ಟೆಂಡರಿನವರನ್ನೂ ದೂಷಿಸದೆ ಗಾಢಮೌನದಲ್ಲೇ ಮುಳುಗಿರುತ್ತಿದ್ದ ಚೆಲುವಕೃಷ್ಣನನ್ನು ಇತರೆ ಸಿಬ್ಬಂದಿಗಳು ಅವನ ವ್ಯಕ್ತಿತ್ವಕ್ಕೆ ಅನ್ವರ್ಥವಾಗಿ “ಪುಣ್ಯಕೋಟಿ” ಎಂದು ನಾಮಾಕರಣ ಮಾಡಿದ್ದರು. ಅವನು ಕ್ಲಾಸಿಗೆ ಹೊರಟರೆ ಬೆನ್ನ ಹಿಂದೆ ಕುಹಕವಾಡುತ್ತಾ , ” ಹಿಂದೆ ಬಂದರೆ ಒದೆಯಬೇಡಿ ಮುಂದೆ ಬಂದರೆ ಹಾಯಬೇಡಿ” ಎಂದು ಗೇಲಿ ಮಾಡಿಕೊಂಡು ನಗುತ್ತಿದ್ದರು. ಈ ಆಧುನಿಕ ಕಾಲಕ್ಕೆ ಬೇಕಾದ ಚುರುಕುತನ, ಜಾಣತನಗಳು ಚೆಲುವಕೃಷ್ಣನಲ್ಲಿ ಕೊಂಚವೂ ಇಲ್ಲ ಅದೊಂದು ಪುಸ್ತಕದ ಕೀಟವೆಂದು ಕೆಲ ಸಹೋದ್ಯೋಗಿಗಳು ಹಿಂದೆ ಜರಿದರೆ ಕೆಲವರು ಮುಖತಃ ಜರಿಯುತ್ತಿದ್ದರು. ಆದರೆ ಅವಕ್ಕೆಲ್ಲಾ ಕಿವಿಗೊಡದೆ ನಕ್ಕು ಮುಂದೆ ಹೋಗಿಬಿಡುತ್ತಿದ್ದ ಚೆಲುವಕೃಷ್ಣನ ಮೇಲೆ ಪ್ರೀತಿಯ ಜೊತೆ ಜೊತೆಗೆ ಅಸಹನೆಯ ಗೆರೆಗಳು ಮೂಡಿದ್ದವು. ಅಲ್ಲದೇ ಈ ಭಾರತೀಯ ಸಮಾಜದಲ್ಲಿ ಅಷ್ಟೇನೂ ಉತ್ತಮವೆಂದು ಗುರುತಿಸಲ್ಪಡದ ಹಾಗೆ ನಿಕೃಷ್ಟವೂ ಎಂದು ಕಡೆಗಣಿಸಲ್ಪಡದ ಕುಂಬಾರ ವರ್ಗಕ್ಕೆ ಸೇರಿದವನಾಗಿದ್ದ ನಮ್ಮ ಚೆಲುವಕೃಷ್ಣನ ಜಾತಿಶ್ರೇಣಿಯು ಅಪಾಯಕಾರಿಯಲ್ಲದ ನಗಣ್ಯ ಸಂಖ್ಯೆಯಲ್ಲಿನ ಜಾತಿಯಾಗಿದ್ದುದ್ದರಿಂದ ಅವನ ಬೋಳೇತನಕ್ಕೆ ಅನುಕಂಪ ಭಾವವು ಅವರಲ್ಲಿ ಒಮ್ಮೊಮ್ಮೆ ಮೂಡುತ್ತಿತ್ತು. . !

ಸದಾ ತನ್ನ ವಸತಿಗೃಹದ ಕೋಣೆಯಲ್ಲಿ ಒಂಟಿಯಾಗಿ ಕಾಲದೂಡುತ್ತಿದ್ದ ಚೆಲುವಕೃಷ್ಣನಿಗೆ ಮೂರು ಹೊತ್ತಿನ ಊಟ, ಮಲಗಲು ಜಾಗವೇನೋ ದೊರೆಯಿತು. . ! ಆದರೆ ಅದು ಅವನ ವೈಯಕ್ತಿಕ ಖುಷಿಯನ್ನು ಕಿತ್ತುಕೊಳ್ಳುತ್ತಿತ್ತು. . ! ಆರೇಳು ತಿಂಗಳು ಮಕ್ಕಳು ಬಾರದೆ ಪಾಠವೂ ಮಾಡದೆ ಬಂದ ಸಂಬಳದ ಹಣವನ್ನು ಮುಟ್ಟಲು ಕಸಿವಿಸಿಯಾಗುತ್ತಿತ್ತು. . ! ಆದರೆ ಬದುಕಿನ ಪರಿಸ್ಥಿತಿಗಳ ಮುಂದೆ ಅನಿವಾರ್ಯವಾಗಿ ಮಂಡಿಯೂರಬೇಕಾದ ದುಸ್ಥಿತಿಯಲ್ಲಿ ಇದ್ದುದ್ದರಿಂದ ಒಲ್ಲದ ಮನಸ್ಸಿನಿಂದಲೇ ಪಡೆದುಕೊಂಡ. ಈ ಅರೆಕಾಸಿನ ಹಣವನ್ನು ಅವನು ಹೇಗೆ ಲೆಕ್ಕ ಹಾಕಿದರೂ ಖಾಯಂ ಉದ್ಯೋಗಿಯೊಬ್ಬ ಪಡೆಯುವ ನಾಲ್ಕನೇ ಒಂದು ಭಾಗಕ್ಕಿಂತ ಕಡಿಮೆಯಿದೆ ಎಂದು ಮೊದಲ ಬಾರಿಗೆ ತಿಳಿಯಿತು. . ! ಈ ಸರ್ಕಾರಗಳು ಎಷ್ಟು ಬುದ್ಧಿವಂತಿಕೆಯಿಂದ ವರ್ತಿಸುತ್ತವೆ ಎಂದರೆ ಖಜಾನೆಯಲ್ಲಿನ ಹಣ ಪೋಲಾಗದಂತೆ ಖಾಲಿಯಿರುವ ಲಕ್ಷಾಂತರ ಹುದ್ದೆಗಳಿಗೆ ತಾತ್ಕಾಲಿಕ, ಅರೆಕಾಲಿಕ ನೌಕರರನ್ನು ನಿಯೋಜಿಸಲು ಟೆಂಡರಿನವರಿಂದ, ಏಜೆನ್ಸಿಗಳಿಂದ ಕಮೀಷನ್ ಪಡೆದು ಗುತ್ತಿಗೆ ನೀಡುವ ಇವರ ಒಳಮರ್ಮಗಳು ಯಾವ ಬಂಡವಾಳಶಾಹಿ ನೀತಿಗೂ ಕಡಿಮೆಯಿಲ್ಲದಂತೆ ನಿರುದ್ಯೋಗ ನಿವಾರಣೆಯ ಹೆಸರಿನಲ್ಲಿ ದುಡಿಯುವವನ ರಕ್ತ ಹೀರುವ ಜಿಗಣೆಗಳಾಗಿವೆ ಎಂದೆನಿಸಿತು. . !

ಅಲ್ಲದೇ ಇಲ್ಲಿಯ ಸಹೋದ್ಯೋಗಿಗಳು ವಸತಿ ಶಾಲೆಗೆ ಯಾವುದೇ ವಸ್ತುಗಳು ಬರಲಿ ಅದನ್ನು ಮಾರಿ ಹಣ ಪಡೆಯುವುದು ಹೇಗೆಂದು ಯೋಜನೆ ರೂಪಿಸುತ್ತಲೇ ಇರುತ್ತಾರೆ. ರಾಶಿ ರಾಶಿ ಬೀಳುವ ಉಚಿತ ನೋಟ್ ಬುಕ್ಗಳನ್ನು ಮಾರಿಕೊಳ್ಳುವುದಕ್ಕೂ ಯಾಕೆ ಹೇಸುವುದಿಲ್ಲ ಎಂದರೆ ಅವರಿಗೆ ಬರುತ್ತಿದ್ದ ಪುಡಿಗಾಸಿನ ಸಂಬಳವೂ ಸರಿಯಾದ ಸಮಯಕ್ಕೆ ದೊರಕದೆ ಹೋಗುತ್ತಿದ್ದದ್ದು ಬಹುಮುಖ್ಯ ಕಾರಣವೆಂದು ಚೆಲುವಕೃಷ್ಣನಿಗೆ ತುಂಬಾ ಸಲ ಅನ್ನಿಸಿದ್ದಿದೆ. . ! ಆಗಾಗಿ ಅತಿಥಿ ಶಿಕ್ಷಕನಾದ ಎರಡೇ ವರ್ಷಕ್ಕೆ ತಾನು ಮಾಡುತ್ತಿದ್ದ ಕೆಲಸದಲ್ಲಿ ನಿರಾಸಕ್ತಿ ಹೊಂದುತ್ತಿದ್ದ ಚೆಲುವಕೃಷ್ಣನಿಗೆ ಈ ಶಿಕ್ಷಣ ವ್ಯವಸ್ಥೆಯೇ ರೇಜಿಗೆ ಹುಟ್ಟಿಸಿಬಿಟ್ಟಿತ್ತು. . ! ಒಂದು ಕಡೆ ಶಾಲೆಗೆ ಬರದೆ ಅಂಡಲೆಯುವ ಹಾಡಿ ಮಕ್ಕಳು, ಮತ್ತೊಂದು ಕಡೆ ಸರ್ಕಾರ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಅರಿವಿರದ ಜನ, ನಿತ್ಯ ಇಪ್ಪತ್ನಾಲ್ಕು ಗಂಟೆಯೂ ಕುಡಿದ ಮತ್ತಿನಲ್ಲಿ ತೇಲುವ ಶಾಲೆಯ ಆಡಳಿತ ಮಂಡಳಿ ಸದಸ್ಯರುಗಳಾದ ಪೋಷಕರುಗಳ ನಿರ್ಲಕ್ಷ್ಯವನ್ನೇ ಬಂಡವಾಳವಾಗಿಸಿಕೊಂಡ ಸಹೋದ್ಯೋಗಿಗಳು ಸರ್ಕಾರದ ಸವಲತ್ತುಗಳನ್ನು ನುಂಗಿ ನೀರು ಕುಡಿಯುವುದರಲ್ಲೇ ಮಗ್ನರಾಗಿದ್ದರೆ ಹೊರತು ಯಾರೊಬ್ಬರಿಗೂ ಇಲ್ಲಿಯ ಮಕ್ಕಳ ಶೈಕ್ಷಣಿಕ ಏಳಿಗೆಗಳು ಮುಖ್ಯವಾಗಿರಲಿಲ್ಲ. . !

ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳುವಾಗ ಇರುವ ಇವರ ಚೂರುಪಾರು ಉತ್ಸಾಹ, ಮಕ್ಕಳನ್ನು ಮರಳಿ ವಸತಿ ನಿಲಯಕ್ಕೆ ಕರೆತರುವುದರಲ್ಲಿ ಇರುತ್ತಿರಲಿಲ್ಲ. ಏಕೆಂದರೆ ಗೈರಾದ ವಿದ್ಯಾರ್ಥಿಗಳೆಲ್ಲಾ ಹಾಜರಾತಿ ಪುಸ್ತಕದಲ್ಲಿ ಮಾತ್ರ ಶಿಸ್ತಿನ ಸಿಪಾಯಿಗಳಾಗಿ ವರ್ಷಪೂರ್ತಿ ಹಾಜರಾತಿ ಪಡೆಯುತ್ತಿದ್ದ ಲಾಭ ಇವರುಗಳಿಗೆ ಇದ್ದುದ್ದರಿಂದ ಪ್ರಾಯಶಃ ಅವರು ಗುಳೇ ಹೋಗುವುದನ್ನೇ ಆಸೆಗಣ್ಣುಗಳಿಂದ ಕಾಯುವವರಾಗಿದ್ದರು. . ! ಇವೆಲ್ಲವನ್ನೂ ಕಂಡು ವಾಕರಿಕೆ ಬರಿಸಿಕೊಂಡಿದ್ದ ಚೆಲುವಕೃಷ್ಣನಿಗೆ ಇಲ್ಲಿಂದ ನಿರ್ಗಮಿಸಿ ಯಾವುದಾದರೊಂದು ಸರ್ಕಾರಿ ಕೆಲಸ ಗಿಟ್ಟಿಸಬೇಕೆಂಬ ಹಂಬಲ ಕೂಡ ಬಹಳವೇ ಇದ್ದುದ್ದರಿಂದ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದಿದ್ದ ಆದರೆ ಯಾವೊಂದು ಪರೀಕ್ಷೆಯೂ ಅವನಿಗೆ ನಿರೀಕ್ಷಿತ ಫಲ ನೀಡಲಿಲ್ಲ. . ! ಕೆಲವು ಪರೀಕ್ಷೆಗಳಿಗೆ ಪದವಿ ಅಂಕಗಳು, ಬಿ. ಇಡಿ ಅಂಕಗಳು ಕನಿಷ್ಠ ಶೇ ೫೦ರ ಸರಾಸರಿ ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕೆಂಬ ನಿಯಮವನ್ನು ಹೊತ್ತು ತಂದಿದ್ದರಿಂದ ಅವನ ಸರ್ಕಾರಿ ಉದ್ಯೋಗದ ಆಸೆಯೂ ಕಮರುತ್ತಲೇ ಹೋಯಿತು. . !

ಹಾಗೆಯೇ ಅವನ ಗೆಸ್ಟ್ ಫ್ಯಾಕಲ್ಟಿಯ ವೃತ್ತಿ ಬದುಕು ಕೂಡ ದೀರ್ಘವಾಗುತ್ತಲೇ ಇತ್ತು. . ! ಹೀಗಿರುವಾಗ ಹೊಸದಾಗಿ ಅಸ್ತಿತ್ವಕ್ಕೆ ಬಂದ ಸರ್ಕಾರ ವಸತಿ ಶಾಲೆಗಳಲ್ಲಿ ಖಾಲಿಯಿರುವ ಹಲವು ಅತಿಥಿ ಹುದ್ದೆಗಳ ಜಾಗದಲ್ಲಿ ಖಾಯಂ ನೌಕರರನ್ನು ಭರ್ತಿ ಮಾಡುವುದಾಗಿ ಘೋಷಿಸಿ ಆದೇಶ ಹೊರಡಿಸಿದಾಗ ವಸತಿ ಶಾಲೆಗಳಲ್ಲಿ ಹಲವು ವರ್ಷಗಳ ಕಾಲ ತಾತ್ಕಾಲಿಕ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದವರೆಲ್ಲರೂ ಒಂದೆಡೆ ಸಂಘಟನೆಯಾಗಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಯನ್ನು ನಡೆಸಬೇಕೆಂದು ಹಾಗೂ ನಾವೀಗ ನಿರ್ವಹಿಸುತ್ತಿರುವ ತಮ್ಮ ವೃತ್ತಿಯನ್ನು ಖಾಯಂಗೊಳಿಸಬೇಕೆಂದು, ಇನ್ನು ಹತ್ತು ಹಲವು ಬೇಡಿಕೆಗಳನ್ನಿಟ್ಟು ಸರ್ಕಾರದ ವಿರುದ್ಧ ಪ್ರತಿಭಟಿಸಿದರು. ತಮಗೆ ದೊರೆಯಬೇಕಾಗಿದ್ದ ನ್ಯಾಯಯುತ ಸವಲತ್ತುಗಳಿಗಾಗಿ ಸರ್ಕಾರದ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ದಾಖಲಿಸಿದರು ಆದರೆ ಸರ್ಕಾರ ಮಾತ್ರ ತನ್ನ ನಿಲುವಿನಲ್ಲಿ ಹಿಂದೆ ಬೀಳಲಿಲ್ಲ. ತಾನು ಹೊರಡಿಸಿದ ಆದೇಶದಂತೆ ೪ ಸಾವಿರಕ್ಕೂ ಹೆಚ್ಚಿನ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇರನೇಮಕಾತಿಗೆ ಆದೇಶ ನೀಡಿತು.

ಜೊತೆಗೆ ಈಗಾಗಲೇ ವಸತಿ ನಿಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ತಾತ್ಕಾಲಿಕ ನೌಕರರ ಭವಿಷ್ಯದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆಯಲ್ಲಿ ಇಂತಿಷ್ಟು ಕೃಪಾಂಕಗಳನ್ನು ಸೇವಾ ಆಧಾರದ ಮೇಲೆ ನೀಡುವುದಾಗಿಯೂ ಘೋಷಣೆ ಮಾಡಿತು. ಆದರೆ ಇದರಿಂದ ತಾತ್ಕಾಲಿಕ ನೌಕರರಿಗೆ ಯಾವ ಕೋನದಿಂದ ಲೆಕ್ಕಾಚಾರ ಹಾಕಿದರೂ ಇದರ ಲಾಭ ದಕ್ಕುವುದು ಅನುಮಾನವಾಗಿತ್ತು. . ! ಆದರೂ ಸರ್ಕಾರ ಮಾತ್ರ ತಾತ್ಕಾಲಿಕ ನೌಕರರ ವಿಚಾರದಲ್ಲಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿ ಅವರ ಹೋರಾಟದಲ್ಲಿ ಭಿನ್ನಮತಗಳು ಭುಗಿಲೇಳುವಂತೆ ಮಾಡಿತ್ತು. . ! ಆ ವರ್ಷ ದೊಡ್ಡಬೈರನಕುಪ್ಪೆಯ ಅತಿಥಿ ಶಿಕ್ಷಕರುಗಳೆಲ್ಲಾ ಹೋರಾಟದ ಹೆಸರಲ್ಲಿ ಬೆಂಗಳೂರಿಗೆ ಹೋಗಿ ಬರುವ ಓಡಾಟದಲ್ಲಿ ದಿನದೂಡಿದರೆ. . . ತನಗೆ ಸಂಬಂಧವೇ ಇಲ್ಲವೆಂಬಂತೆ ಒಂಟಿಯಾಗಿ ಶಾಲೆಯ ವಸತಿಗೃಹದ ಮೂಲೆಯೊಂದರಲ್ಲಿ ಕಾಲಕಳೆಯುತ್ತಿದ್ದ ಚೆಲುವಕೃಷ್ಣನಿಗೆ ತನ್ನ ವೃತ್ತಿಯನ್ನು ಖಾಯಂಗೊಳಿಸಬೇಕೆನ್ನುವ ಹಂಬಲವಾಗಲೀ, ಅಥವಾ ಈ ವೃತ್ತಿಯಲ್ಲೇ ಮುಂದುವರಿಯಬೇಕೆನ್ನುವ ಮಹತ್ವಕಾಂಕ್ಷೆಗಳೆಲ್ಲಾ ಅವನ ಅಂತರಂಗದಲ್ಲಿ ಎಂದೋ ಮಣ್ಣು ಪಾಲಾಗಿದ್ದವು. . ! ಆಗಾಗಿ ಸರ್ಕಾರದ ವಿರುದ್ಧ ಕೆಲಸವನ್ನು ಖಾಯಂಗೊಳಿಸುವಂತೆ ಪ್ರತಿಭಟನೆ ಚಳವಳಿ ಇತ್ಯಾದಿಗಳು ಹುಟ್ಟಿಕೊಂಡ ಆ ವರ್ಷ ಚೆಲುವಕೃಷ್ಣನನ್ನು ಬಿಟ್ಟರೆ ಯಾರೊಬ್ಬರೂ ಈ ವಸತಿ ಶಾಲೆಯತ್ತ ಮುಖ ಹಾಕದೆ ಓಡಾಡುತ್ತಿದ್ದರು. .

ಅಲ್ಲದೇ ಇದೇ ಸಮಯದಲ್ಲಿ ಖಾಯಂ ಉದ್ಯೋಗಿಯಾಗಿದ್ದ ತುಮಕೂರು ಸೀಮೆಯ ಮುಖ್ಯೋಪಾಧ್ಯಯನಿಗೂ ವರ್ಗಾವಣೆಗೆ ಸಿಕ್ಕಿದ್ದರಿಂದ ಇಡೀ ವಸತಿಶಾಲೆ ದಿನವೀಡಿ ಬಿಕೋ ಎನ್ನುತ್ತಿತ್ತು. . ! ಬೆಳಿಗ್ಗೆ ಅಥವಾ ಸಂಜೆ ಮುಖ್ಯ ಅಡುಗೆ ಸಿಬ್ಬಂದಿಯ ದೀರ್ಘ ಗೈರಿನ ನಿಮಿತ್ತ ಸಹಾಯಕ ಅಡುಗೆಯ ಒಂದಿಬ್ಬರು ಮಹಿಳಾ ಸಿಬ್ಬಂದಿಗಳು ಬಂದು ಹೋಗುತ್ತಿದ್ದರು. . ! ಅವರೇನೂ ಚೆಲುವಕೃಷ್ಣನಿಗೆ ಹೊಸಬರಾಗಿರಲಿಲ್ಲ. . ! ಅವನು ಕೆಲಸಕ್ಕೆ ಇಲ್ಲಿಗೆ ಬಂದಾಗಿನಿಂದ ಯೋಗಕ್ಷೇಮ ವಿಚಾರಿಸುವ, ಕುಶಲೋಪರಿ ಕೇಳುವ ಲತಾ ಎಂದರೆ ಚೆಲುವಕೃಷ್ಣನಿಗೆ ಅಚ್ಚುಮೆಚ್ಚು. . ! ಆದರೆ ಈ ಲತಾ ಚಿಕ್ಕ ಪ್ರಾಯದಲ್ಲೇ ಗಂಡನನ್ನು ಕಳೆದುಕೊಂಡವಳು, ತುಂಬುಗೆನ್ನೆಯ, ಆಕರ್ಷಕ ಮೈಕಟ್ಟಿನ ಅವಳ ಚೆಲುವು ಎಂಥವರ ಕಣ್ಣುಗಳನ್ನು ಕುಕ್ಕುತ್ತಲೇ ಇತ್ತು. ನಡೆಯುವಾಗ ಬಳುಕುವ ಸೊಂಟ, ಬಗ್ಗಿದಾಗ ಸೆರಗು ಜಾರಿ ರವಿಕೆಯ ಒಳಗಿನಿಂದ ಕಾಣುವ ದುಂಡಾದ ಮೊಲೆ, ತೊಂಡೆಹಣ್ಣಿನಂತಹ ಅವಳ ಕೆಂಪುತುಟಿಗಳ ಮೇಲೆ ಹಾತೊರೆವ ರಸಿಕಶಿಖಾಮಣಿಗಳೇ ಆಗಿದ್ದರು. . ! ಹೀಗಿರುವಾಗ ಚೆಲುವಕೃಷ್ಣನ ದಿನವೀಡಿಯ ಏಕಾಂತದ ಬದುಕು, ಹದಗೆಟ್ಟ ವ್ಯವಸ್ಥೆಯ ಮೇಲಿನ ರೇಜಿಗೆಗಳೆಲ್ಲಾ ಅವನನ್ನು ಹಣ್ಣು ಮಾಡಿ ನರುಳುತ್ತಿರುವಾಗಲೆಲ್ಲಾ ಅವನ ಪುಸ್ತಕದ ಓದುಗಳು ಕೂಡ ಬೇಸರ ತರಿಸಿ ಮನಸ್ಸು ಕೂಡ ಖಿನ್ನತೆಗೆ ದೂಡಲ್ಪಡುತ್ತಿತ್ತು. . ! ಆಗೆಲ್ಲಾ ಲತಾ ಇವನ ದೀರ್ಘ ಮೌನವನ್ನು ಮುರಿಯಲು ಮಾತಿಗೆಳೆಯುವುದು, ಸ್ನೇಹದಿಂದ ಸಲುಗೆಯಿಂದ ವರ್ತಿಸುವುದು ನಡೆಯುತ್ತಲೇ ಇತ್ತು. . !

ಹೀಗೆ ನಡೆಯುತ್ತಿದ್ದ ಅವರ ಸ್ನೇಹ ಸಲುಗೆಗಳು ವಸತಿಶಾಲೆಯಲ್ಲಿನ ಸಹೋದ್ಯೋಗಿಗಳ ದೀರ್ಘಗೈರು ಹಾಜರಿಗಳ ಲಾಭವೆಂಬಂತೆ ಅವರು ಏಕಾಂತದಲ್ಲಿ ಕೂಡಲು ಅವಕಾಶ ಕಲ್ಪಿಸಿಕೊಟ್ಟಿತ್ತು. ಮೊದಲ ಬಾರಿಗೆ ಚೆಲುವಕೃಷ್ಣ ತನ್ನ ವೃತ್ತಿ ಘನತೆಯನ್ನು ಆದರ್ಶಗಳನ್ನು ಗಾಳಿಗೆ ತೂರಿ ಲತಾಳೊಂದಿಗೆ ಬೆತ್ತಲೆಯಾಗಿ ಮಲಗಿದ. ಅವಳ ದೇಹ ಸುಖಕ್ಕಾಗಿ ಹಂಬಲಿಸಿದ. . ! ಕಾಮದ ಉತ್ತುಂಗದಲ್ಲಿ ಎಡವಿ ಮುಂದೆ ಎದುರಾಗಬಹುದಾದ ಪರಿಣಾಮಗಳನ್ನು ಮರೆತ ಚೆಲುವಕೃಷ್ಣನ ವ್ಯಕ್ತಿತ್ವಕ್ಕೆ ಕೊಡಲಿಪೆಟ್ಟು ಕೊಡುವಂತೆ ಮಾಡಿದ್ದು ಲತಾ ಗರ್ಭವತಿಯಾಗಲು ತಾನು ಕಾರಣನಾಗಿರುವ ಸತ್ಯವನ್ನು ಅವಳ ಬಾಯಿಂದ ಕೇಳಿದ ಮೇಲೆ ಸಿಡಿಲೆರಗಿದಂತಾಗಿತ್ತು. . ! ಹೇಗಾದರೂ ಮಾಡಿ ಲತಾಳಿಗೆ ತನ್ನ ಗರ್ಭವನ್ನು ತೆಗಿಸಿಕೊಳ್ಳುವಂತೆ ಒತ್ತಾಯಿಸಿದ. ತನಗೆ ತಿಳಿದಿರುವ ಕಡೆಯಿಂದ ಗುಟ್ಟಾಗಿ ಗರ್ಭ ನಿರೋಧಕ ಮಾತ್ರೆಗಳನ್ನು ತಂದು ಅವಳ ಕೈಗಿತ್ತ. ಲತಾ ಅವುಗಳನ್ನು ಕುಡಿಯಲೊಪ್ಪದೆ ಬಿಸಾಡಿದಳು. ಚಿಂತಾಕ್ರಾಂತನಾದ ಚೆಲುವಕೃಷ್ಣನು ಎರಡು ವಾರಗಳ ಕಾಲದ ಅವರಿಬ್ಬರ ದೀರ್ಘ ಮೌನದ ನಂತರ ಕೇರಳದ ತಿರುನೆಲ್ಲಿಯಿಂದ ಗರ್ಭ ತೆಗೆದುಹಾಕುವ ಕೈಔಷಧಿಯೊಂದಿಗೆ ಐವತ್ತು ಸಾವಿರ ಹಣವನ್ನು ಇರಿಸಿ ಇದನ್ನು ಕುಡಿಯುವಂತೆ ಬಗೆಬಗೆಯಾಗಿ ವಿನಂತಿಸಿಕೊಂಡು ದುಃಖಿತನಾದ.

ಲತಾ ಜಿದ್ದಿಗೆ ಬಿದ್ದವಳಂತೆ ಮೊದಮೊದಲಿಗೆ ವರ್ತಿಸಿದರೂ ಕಡೆಗೆ ಅವನ ಮೊಂಡು ಹಟಕ್ಕೆ ಮೊದಲ ಬಾರಿಗೆ ಕಣ್ಣೀರು ಹಾಕುತ್ತಾ ಅವನ ಹಣವನ್ನು ಅಲ್ಲೇ ಬಿಟ್ಟು ತಂದಿದ್ದ ಔಷಧಿಯನ್ನು ಒಲ್ಲದ ಮನಸ್ಸಿನಿಂದ ಪಡೆದು ಭಾರವಾದ ಹೆಜ್ಜೆಯೊಂದಿಗೆ ಕಣ್ಣೀರು ಹಾಕುತ್ತಾ ನಡೆದುಬಿಟ್ಟಳು. ಚೆಲುವಕೃಷ್ಣನಿಗೆ ಮೊದಲ ಬಾರಿಗೆ ತನ್ನ ವ್ಯಕ್ತಿತ್ವದ ಮೇಲೆ ಅಸಹ್ಯ ಹುಟ್ಟಿಸಿತ್ತು. . ! ತಾನೊಬ್ಬ ಮಹಾವಂಚಕ ಎಂದೆನಿಸಿ ಕೂತಲ್ಲಿಯೇ ದಂಗಾಗಿ ಬಿಡುವಂತೆ ಮಾಡಿಬಿಡುತ್ತಿತ್ತು. ಪಶ್ಚಾತಾಪದಲ್ಲಿ ಬೇಯುತ್ತಾ ಮಾನಸಿಕವಾಗಿ ನಲುಗಿ ಹೋದ ಚೆಲುವಕೃಷ್ಣನಿಗೆ ಲತಾಳಿಗೆ ಮುಖತೋರಿಸುವ ಧೈರ್ಯವೂ ಇರಲಿಲ್ಲ. . ! ಪರಿಸ್ಥಿತಿ ಹೀಗಿರುವಾಗ ವಸತಿಶಾಲೆಗೆ ಎಂದಿನಂತೆ ನಮ್ಮ ಗೆಸ್ಟ್ ಫ್ಯಾಕಲ್ಟಿ ಟೀಚರ್ಗಳು ಹಾಜರಾಗಲು ಶುರು ಮಾಡಿದರು. . ! ತಾವು ಸರ್ಕಾರದ ವಿರುದ್ಧ ನಡೆಸುತ್ತಿರುವ ಹೋರಾಟದ ಕುರಿತು ಗಂಟೆಗಟ್ಟಲೇ ಚರ್ಚಿಸುತ್ತಾ, ಚೆಲುವಕೃಷ್ಣ ಬೆಂಗಳೂರಿನ ಪ್ರತಿಭಟನೆಗೆ ಬಾರದೆ ಇದುದ್ದಕ್ಕೆ ಅವನನ್ನು ಅಲ್ಲಗಳೆಯುತ್ತಾ, ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ನಾವು ನಿರ್ವಹಿಸುತ್ತಿರುವ ಈ ಉದ್ಯೋಗದ ಸ್ಥಾನಕ್ಕೆ ಬೇರೊಬ್ಬರು ಬಾರದಂತೆ ಕೋರ್ಟಿನಲ್ಲಿ ದಾವೆ ಹೂಡಿರುವುದಾಗಿ ಅದರಲ್ಲಿ ನಿನ್ನ ಹೆಸರನ್ನು ಸೇರಿಸಿರುವುದರಾಗಿ ತಿಳಿಸುತ್ತಾ. . ಕೋರ್ಟು ಕಚೇರಿಯ ಖರ್ಚಿಗೆಂದು ತಲಾ ಇಪ್ಪತ್ತು ಸಾವಿರ ರೂಪಾಯಿಗಳನ್ನು ನಿಗದಿಪಡಿಸಿರುವುದಾಗಿ ತಿಳಿಸುತ್ತಾ, ಅದನ್ನು ಮುಂದಿನ ಎರಡು ತಿಂಗಳಲ್ಲಿ ಎಲ್ಲರೂ ಕಡ್ಡಾಯವಾಗಿ ತಲುಪಿಸಬೇಕೆಂದು ಹೇಳಿ ತಮ್ಮ ಹೋರಾಟದ ಯಶೋಗಾಥೆಯನ್ನು ವಿವರಿಸಿದರು. !

ಅಲ್ಲದೇ ಮುಂದಿನ ತಿಂಗಳು ಹಮ್ಮಿಕೊಂಡಿರುವ ವಿಧಾನಸೌಧದ ಎದುರಿನ ಚಳವಳಿಗೆ ನೀನು ಕಡ್ಡಾಯವಾಗಿ ಹಾಜರಿರಬೇಕೆಂದು ಹೇಳಿ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡರು. ಚೆಲುವಕೃಷ್ಣನಿಗೆ ಅವರು ಹೇಳಿದ ಯಾವ ಮಾತುಗಳು ಕಿವಿಗೆ ಬೀಳಲೊಲ್ಲವು. ಬದುಕಿನ ಉತ್ಸಾಹವನ್ನೇ ನುಂಗಿಕೊಂಡ ಲಜ್ಜೆಗೆಟ್ಟ ಅವನ ನಡತೆ ನಾಳೆ ಯಾರಿಗಾದರೂ ತಿಳಿದರೆ ಹೇಗೆ ಎಂಬ ಆತಂಕವೂ ಇತ್ತು. . ! ಪುಣ್ಯಕೋಟಿಯೆಂದು ಛೇಡಿಸುತ್ತಿದ್ದ ಸಹೋದ್ಯೋಗಿಗಳಿಗೆ ನನ್ನ ಕಾಮುಕತನದ ಹೇಡಿತನ ತಿಳಿದರೆ ಅವರನ್ನೆಲ್ಲಾ ಎದುರಿಸುವುದು ಹೇಗೆ? ಹೀಗೆ ಹತ್ತಾರು ಆಲೋಚನೆಗಳು ಓಡುತ್ತಲೇ ಇತ್ತು. . ಆ ದಿನ ಮಧ್ಯಾಹ್ನ ಎಲ್ಲರಿಗಿಂತ ಮುಂಚೆ ಅಡುಗೆ ಮನೆಗೆ ಹೋದ ಚೆಲುವಕೃಷ್ಣ ಒಲೆಯ ಮುಂದೆ ನಿಂತಿದ್ದ ಲತಾಳನ್ನು ನೋಡಿದ. ಅವಳು ಇವನತ್ತ ನೋಡಿದಳು. ಯಾವ ಮಾತುಗಳು ಇವನ ತುಟಿಯಿಂದ ಹೊರಡದೆ ನಿಂತಲ್ಲೇ ಮೌನವಾದ. ಲತಾ ಅವನು ಕೊಟ್ಟಿದ್ದ ಔಷಧಿಯನ್ನು ಕುಡಿದಿರುವ ಗುರುತಿಗಾಗಿ ಆ ಖಾಲಿ ಬಾಟ್ಲಿಯನ್ನು ಅವನಿಗೆ ಕಾಣುವಂತೆ ತೋರಿಸಿ ಅಲ್ಲಿಯೇ ಇದ್ದ ಕಸದ ಬುಟ್ಟಿಗೆ ಎಸೆದು ತನ್ನ ಕೆಲಸದಲ್ಲಿ ತೊಡಗಿಕೊಂಡಳು. . ! 

ಚೆಲುವಕೃಷ್ಣನಿಗೆ ಗಂಟಲು ಬಿಗಿಯತೊಡಗಿ ಸ್ಟಾಫ್ ರೂಮಿನತ್ತ ಹೆಜ್ಜೆ ಹಾಕಿ ತನ್ನ ಕುರ್ಚಿಯಲ್ಲಿ ಕೂತ. . !ಅವನ ಸಹೋದ್ಯೋಗಿಗಳು ಇವತ್ತಿನ ಪತ್ರಿಕೆ ಓದಿದಿಯೇನೋ ಚೆಲುವಕೃಷ್ಣ ಎಂದಿದ್ದಕ್ಕೆ ಇಲ್ಲವೆಂದು ತಲೆಯಾಡಿಸಿದ್ದನ್ನು ಕಂಡು “ಆಂದೋಲನದ ಪತ್ರಿಕೆಯ ಮೂರನೇ ಪುಟ ನೋಡು ಮಾರಾಯ ನಮ್ಮದೇ ಮುಖ್ಯ ಸುದ್ದಿ ಎಂದ” ಚೆಲುವಕೃಷ್ಣ ಬೆವರಿದ ಅಂಗೈಗಳಲ್ಲಿ ಆ ಪತ್ರಿಕೆ ಹಿಡಿದು ತುರ್ತಾದ ಕೆಲಸವಿದೆಯೆಂದು, ತನಗೆ ೨ ದಿನಗಳ ಕಾಲ ರಜೆಬೇಕೆಂದು ತರಾತುರಿಯಲ್ಲಿ ರಜೆಪತ್ರ ಗೀಚಿ ೪ ಗಂಟೆಯ ಮಾಡರ್ನ್ ಬಸ್ಸನ್ನಿಡಿದು ಕೈಯಲ್ಲಿನ ಪತ್ರಿಕೆಯ ಪುಟ ತಿರುವುತ್ತಾ ಕಣ್ಣು ಹಾಯಿಸಿದ” ದೊಡ್ಡ ಬೈರನಕುಪ್ಪೆಯ ತಾತ್ಕಾಲಿಕ ಅತಿಥಿ ಶಿಕ್ಷಕರಿಂದ ಶಿಕ್ಷಣ ಕ್ರಾಂತಿ” ಹಿಂದುಳಿದ ತಾಲ್ಲೂಕೆಂಬ ಹಣೆಪಟ್ಟಿ ಹೊತ್ತ ಹೆಗ್ಗಡದೇವನ ಕೋಟೆಯ ಅಜ್ಞಾತ ಕಾಡಿನ ಮೂಲೆಯಲ್ಲಿ ಜೇನುಕುರಬ ಮತ್ತು ಕಾಡು ಕುರುಬ ಮಕ್ಕಳ ಶೈಕ್ಷಣಿಕ ಏಳಿಗೆಗಳಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಇಲ್ಲಿಯ ತಾತ್ಕಾಲಿಕ ನೌಕರರ ಶೈಕ್ಷಣಿಕ ಸೇವೆ ಅವಿಸ್ಮರಣೀಯವಾದುದೆಂಬ ಲಜ್ಜೆಗೆಟ್ಟ ಲೇಖನವನ್ನು ಕಂಡು ಕಣ್ಣೀರು ತುಂಬಿಕೊಳ್ಳುತ್ತಾ ಪತ್ರಿಕೆಯನ್ನು ಬಸ್ಸಿನ ಕಿಟಕಿಯಿಂದಾಚೆಗೆ ಎಸೆದು ನಿಟ್ಟುಸಿರು ಬಿಡುತ್ತಾ ಮೌನವಾದ. ಅವನೊಳಗಿದ್ದ ಸ್ವಾರ್ಥಭಾವ ಪಶ್ಚಾತ್ತಾಪದಲ್ಲಿ ಬೇಯುತ್ತಲೇ ಇತ್ತು. . . ! ಎದೆಭಾರವಾಗುತ್ತಲೇ ಲತಾಳ ಪ್ರೀತಿ ತುಂಬಿದ ಕಂಗಳು ಇನ್ನಿಲ್ಲದಂತೆ ಕಾಡತೊಡಗಿತು. . . !

ಪ್ರಶಾಂತ್ ಬೆಳತೂರು


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
RPS
RPS
1 year ago

ತುಂಬಾ ಚೆನ್ನಾಗಿದೆ ಪ್ರಶಾಂತ್ ಸಾರ್

H N MANJURAJ
H N MANJURAJ
10 months ago

ಪೂರ್ತ ಓದಿದೆ. ಅಧಃಪತನಕ್ಕೆ ವ್ಯವಸ್ಥೆಯೂ ಹೇಗೆ ಕೈ ಜೋಡಿಸುವುದೆಂಬ ಖಿನ್ನತೆಯ ಮಾದರಿ.

ಶ್ರೀ ಕೃಷ್ಣ ಆಲನಹಳ್ಳಿಯವರ ಕತೆಗಳ ಓದು ಆಯಾಚಿತವಾಗಿ ನೆನಪಾಯಿತು. ಸರಳ ಮತ್ತು ನಿರಾಭರಣ. ಸದ್ದಿಲ್ಲದ ಶೋಷಣೆಯ ಬಗೆಗಳು.
ಓದಿ ಮನಸು ಭಾರ. ಇದೇ ಅಲ್ಲವೇ ಸಾಹಿತ್ಯದ ಶಕ್ತಿ. ಸ್ವಲ್ಪ ಮೆಲೋಡ್ರಾಮಾಟಿಕ್‌ ಶೈಲಿಯನ್ನು ಹತೋಟಿಗೆ ತಂದುಕೊಂಡರೆ ನಿಮ್ಮದು ಮೆಚ್ಚುವ ಕಥನಗಾರಿಕೆ.
ಈಗಿನ ಕತೆಗಳಲ್ಲಿ ಪ್ರಬಂಧದ ಗುಣ ಆವರಿಸಿಕೊಳ್ಳುತ್ತಿರುವುದಕೆ ನಿಮ್ಮ ಬರೆಹವೇ ಸಾಕ್ಷಿ. ಧನ್ಯವಾದಗಳು ಪ್ರಕಟಿಸಿದ ನಮ್ಮ ಪಂಜುವಿಗೆ.

2
0
Would love your thoughts, please comment.x
()
x