ಗಝಲ್
ಸುಡುವ ಸಂಕಟ ಎದೆಯ ಹಿಂಡಲು ಮನಸು ಮುರಿಯದೇ ಸಖಾ
ಕಾಡುವ ನೆನಪು ಹೃದಯ ದಹಿಸಲು ಕಂಬನಿ ಸುರಿಯದೇ ಸಖಾ
ಮಿಡಿವ ಕರುಳಿದು ಕಾಲನ ತಿವಿತಕೆ ಗುರಿಯಾದ ಕಥೆ ಹೇಳಲೇ
ತುಡಿವ ಜೀವವ ಸತತ ನೋಯಿಸಿರೆ ವೇದನೆ ಇರಿಯದೇ ಸಖಾ
ನುಡಿವ ಮಾತದು ಚುಚ್ಚುವ ಶರವಾಗಿ ವಿಷವ ಲೇಪಿಸಿದೆ ನೋಡು
ಹಾಡುವ ಕೋಗಿಲೆ ಗೋಣನು ಕೊಯ್ದಿರೆ ಒಡಲು ಉರಿಯದೇ ಸಖಾ
ಬಾಡುವ ಹೂವಿದು ಸೌರಭ ಸೂಸಿದೆ ಸಾರ್ಥಕ್ಯ ಲಭಿಸಿದೆ ಜಗದೆ
ನೋಡುವ ಕಣ್ಣಲ್ಲಿ ಮಾತ್ಸರ್ಯ ಇಣುಕಿರೆ ಬೆಸುಗೆ ಹರಿಯದೇ ಸಖಾ
ನೀಡುವ ಕೈಗಳು ನೂರಿವೆ ಸುಜಿಗೆ ಬಾಳಿನ ಬುತ್ತಿಯ ಕೈತುತ್ತನು
ದೂಡುವ ಕರಗಳೇ ಆಸರೆ ಕೊಡುತಿರೆ ಕಾರ್ಮೋಡ ಸರಿಯದೇ ಸಖಾ
-ಸುಜಾತಾ ರವೀಶ್
ಗಝಲ್
ಹೊಲದಲ್ಲಿ ಸುರಿದ ರೈತನ ಬೆವರ ಹನಿಗಿಂತ
ಜಾಸ್ತಿ ಬೆಲೆ ದಲ್ಲಾಳಿ ಬಾಯಿಗೆ ಬಜಾರಿನಲ್ಲಿ
ಅವಶ್ಯಕತೆಗಿಂತ ಆಸೆಯೆ ಜಾಸ್ತಿ
ಕೊಳ್ಳುವರಿಗೆ ಬಜಾರಿನಲ್ಲಿ
ಬಿತ್ತಿ ಬೆಳೆದವನೆ ಹೊತ್ತುಮಾರಬೇಕೆಂದೇನಿಲ್ಲ ಯಾರದೊ
ಕನಸುಗಳು; ಮತ್ತಾರೋ ಬರುವ ಖರೀದಿಗೆ ಬಜಾರಿನಲ್ಲಿ
ಸೋತವರ ರಟ್ಟಿ ಶಕ್ತಿಕಸಿದು;ಹಗಲಿಗಿಂತ ,
ತಕ್ಕಡಿ ರಾತ್ರಿ ತೂಗುವುದೆ ಹೆಚ್ಚಿಗೆ ಬಜಾರಿನಲ್ಲಿ
ಬಂಗಾರ,ನ್ಯಾಯ,ಪರೀಕ್ಷಿಸುವರು ವಿಧ ವಿಧವಾಗಿ
“ಜೊನ್ನವ”ಮನುಷ್ಯ ಅರ್ಹನಲ್ಲ ನಂಬಿಕೆಗೆ ಬಜಾರಿನಲ್ಲಿ
-ಜೊನ್ನವ (ಪರಶುರಾಮ ಎಸ್ ನಾಗೂರ್)