ನಾಲ್ಕು ಕಿರುಗತೆಗಳು- ಎಂ ನಾಗರಾಜ ಶೆಟ್ಟಿ

                         

ಗೌರವ

ಮುನೀರ್​ಮಂಗಳೂರಲ್ಲಿ ಕಾರ್ಯಕ್ರಮವೊಂದಕ್ಕೆ ಬರಲೇ ಬೇಕೆಂದು ಒತ್ತಾಯ ಮಾಡಿದ್ದರಿಂದ ನಾವು ಮೂವರು ಗೆಳೆಯರು ಕಾರಲ್ಲಿ ಹೊರಟಿದ್ದೆವು. ಕಾರು ನನ್ನದೇ. ದೀರ್ಘ ಪ್ರಯಾಣದಿಂದ ಸುಸ್ತಾಗುತ್ತದೆ, ಡ್ರೈವಿಂಗ್ ಮಾಡುತ್ತಾ ಗೆಳೆಯರೊಂದಿಗೆ ಹರಟುವುದು ಕಷ್ಟವೆಂದು ಡ್ರೈವರ್​ಗೆ ಹೇಳಿದ್ದೆ. ಆತ ಪರಿಚಿರೊಬ್ಬರ ಖಾಯಂ ಡ್ರೈವರ್​. ಕೊಹ್ಲಿ ಸ್ಟೈಲಲ್ಲಿ ದಾಡಿ ಬಿಟ್ಟಿದ್ದ ಹಸನ್ಮುಖಿ ಯುವಕ.
ಅವನನ್ನು ಗಮನಿಸಿದ ಗೆಳೆಯರೊಬ್ಬರು, “ಕ್ರಿಕೆಟ್​ನೋಡುತ್ತೀಯಾ?” ವಿಚಾರಿಸಿದರು.
“ಬಿಡುವಿದ್ದಾಗ ನೋಡುತ್ತೇನೆ ಸಾರ್​, ಕಾಲೇಜಲ್ಲಿ ಕ್ರಿಕೆಟ್​ಆಡುತ್ತಿದ್ದೆ”
“ಕಾಲೇಜಿಗೆ ಹೋಗಿದ್ದಿಯಾ?” ಆಶ್ಚರ್ಯ ವ್ಯಕ್ತಪಡಿಸಿದ ಮತ್ತೊಬ್ಬ ಗೆಳೆಯ “ಏನು ಓದಿದ್ದೆ?” ಕೇಳಿದರು.
“ಬಿಎಸ್ಸಿ ಆಗಿದೆ ಸಾರ್”​ಕೂಲಾಗಿ ಹೇಳಿದ.
“ನಿಮ್ಮ ಭಾಷಣಕ್ಕೆ ಇಲ್ಲೇ ವಿಷಯ ಸಿಕ್ಕಿತು. ಸಾಮಾಜಿಕ ಅಸಮಾನತೆ ಹೇಗಿದೆ ನೋಡಿ, ಓದಿದವರಿಗೂ ಕೆಲಸ ಇಲ್ಲ”
ಸಾಮಾಜಿಕ ಅಸಮಾನತೆಯ ಕುರಿತು ನಾನು ಕಾರ್ಯಕ್ರಮದಲ್ಲಿ ಮಾತಾಡಬೇಕಿದ್ದನ್ನು ನೆನಪಿಸುತ್ತಾ ಗೆಳೆಯರು ಹೇಳಿದರು. ನಮ್ಮಲ್ಲಿ ಪ್ರತಿ ಹಂತದಲ್ಲೂ ಅಸಮಾನತೆಯನ್ನು ಪೋಷಿಸಲಾಗುತ್ತಿದೆ, ಡಿಗ್ನಿಟಿ ಆಫ್​ಲೇಬರ್​ಕೂಡಾ ಇಲ್ಲ ಎನ್ನುವ ಕುರಿತು ಕೆಲ ಹೊತ್ತು ಮಾತುಕತೆ ನಡೆಯಿತು.
ಆಗಲೇ ಸಾಕಷ್ಟು ದೂರ ಕ್ರಮಿಸಿದ್ದೆವು. ಎಲ್ಲರಿಗೂ ಹಸಿವಾಗಿತ್ತು. ಎಲ್ಲಾದರೂ ಒಳ್ಳೆಯ ಹೋಟೆಲ್​ಕಂಡರೆ ನಿಲ್ಲಿಸು ಎಂದು ಡ್ರೈವರ್​ಗೆ ಹೇಳಿದೆವು.
ಅವನು ʼಇಂದ್ರಪ್ರಸ್ಥʼದ ಮುಂದೆ ನಿಲ್ಲಿಸಿದ.
ಮೂವರೂ ವಾಶ್​ರೂಮಿಗೆ ಹೋಗಿ ಬಂದೆವು.
ವೈಟರ್​ಮೆನು ತಂದಿಟ್ಟ.
“ಯಾರಿಗೆ ಏನು ಬೇಕೋ ಅದು ಆರ್ಡರ್​ಮಾಡಿ” ಎನ್ನುವಾಗ ಡ್ರೈವರ್​ಕಂಡ.
ಅವನಿಗೆ ಮುಂದುಗಡೆಯ ಟೇಬಲ್​ತೋರಿಸಿ ” ಏನು ಬೇಕಾದರೂ ತೊಕೋ” ಎಂದೆ.
ನನ್ನ ಪಕ್ಕ ಚೇರ್​ಖಾಲಿಯೇ ಇತ್ತು!


ಭಯ

ಮಧ್ಯರಾತ್ರಿ. ಕೆಟ್ಟ ಕನಸು ಬಿದ್ದು ದಿಗ್ಗನೆದ್ದು ಕೂತ. ಮನೆಗೆ ಕಳ್ಳರು ನುಗ್ಗಿದ್ದರು. ಪುಸ್ತಕ ಓದುತ್ತಾ ಕೂತವನಿಗೆ ನಿದ್ದೆ ಹತ್ತಿತ್ತು. ದಡಬಡನೆ ಬಾಗಿಲತ್ತ ಹೋಗಿ ಚಿಲಕ ಹಾಕಿದೆಯಾ ನೋಡಿದ. ಭದ್ರವಾಗಿತ್ತು.

ʼಅಯ್ಯಪ್ಪಾʼ ಎಂದು ನಿಟ್ಟುಸಿರೆಳೆದ.

ಮಂಚದ ಮೇಲೆ ಕುಳಿತುಕೊಂಡ. ಎದೆ ಡವಗುಟ್ಟುವುದು ನಿಂತಿರಲಿಲ್ಲ. ಒಬ್ಬಂಟಿ. ಕಳ್ಳರು ಬಂದಿದ್ದರೆ ಏನು ಒಯ್ಯಬಹುದಿತ್ತೆಂದು ಯೋಚಿಸಿದ. ಬೆಲೆ ಬಾಳುವುದೇನೂ ಇರಲಿಲ್ಲ. ಒಂದೆರಡು ಸಾವಿರ ಕ್ಯಾಷ್​ಇತ್ತು. ಅದು ಬಿಟ್ಟರೆ ಐದಾರು ಸಾವಿರದ ಮೊಬೈಲ್.​ ಅದರಿಂದ ಕಳ್ಳರಿಗೆ ಏನೂ ಅನುಕೂಲವಿರಲಿಲ್ಲ. ಮನೆಗೆ ನುಗ್ಗಿ ಕತ್ತು ಪಟ್ಟು ಹಿಡಿಯುವಂತ ವೈರಿಗಳೂ ಅವನಿಗಿರಲಿಲ್ಲ.

ಬಾಲ್ಯದಲ್ಲಿ ಅಗುಳಿ ಹಾಕದೆ ಮಲಗುತ್ತಿದ್ದುದು ನೆನಪಾಯಿತು. ಬೇಸಿಗೆಯಲ್ಲಿ ಹೆಂಗಸರನ್ನು ಬಿಟ್ಟು ಗಂಡಸರೆಲ್ಲ ಹೊರಗೇ ಮಲಗುತ್ತಿದ್ದರು. ಕೊಲೆ, ಕಳ್ಳತನಗಳ ಯೋಚನೆಯೇ ಇರಲಿಲ್ಲ. ಸ್ವಲ್ಪ ಶಬ್ದವಾದರೂ ಯಾರಾದರೂ ಓಡಿ ಬರುತ್ತಿದ್ದರು.

ಈಗ ಎರಡೆರಡು ಬೀಗ ಹಾಕುತ್ತಾನೆ. ಸರಿಯಾಗಿದೆಯೇ ಎಂದು ಜಗ್ಗಿ ನೋಡುತ್ತಾನೆ. ಅಷ್ಟೆಲ್ಲ ಆದರೂ ಮಧ್ಯರಾತ್ರಿಯಲ್ಲಿ ಬೆಚ್ಚಿ ಬಿದ್ದು ಏಳುತ್ತಾನೆ!

ಭಯ ಒಳಗಿನದೋ, ಹೊರಗಿನದೋ….ಯೋಚಿಸುತ್ತಾ ಅವನಿಗೆ ನಿದ್ದೆ ಬರಲಿಲ್ಲ.


ಪರಿಸರ

ನೂರು ಮನೆಗಳ ಸಣ್ಣ ಅಪಾರ್ಟ್​ಮೆಂಟಾದರೂ ಸುತ್ತಲೂ ಜಾಗವಿತ್ತು. ಯಾರೋ ಪುಣ್ಯಾತ್ಮರು ಆ ಜಾಗದಲ್ಲಿ ನೆಲ್ಲಿ, ಸೀಬೆ, ದಾಳಿಂಬೆ ಗಿಡಗಳನ್ನು ಹಾಕಿದ್ದರು. ಗಿಡಗಳು ಬೆಳೆದು ನಿಂತಿದ್ದವು. ಗಿಡಗಳ ರೆಂಬೆಗಳು ಅಪಾರ್ಟ್​ಮೆಂಟ್​ನಿವಾಸಿಗಳು ವಾಕ್​ಮಾಡುವ ಜಾಗದ ವರೆಗೂ ಹರಡಿತ್ತು.

ನೇಪಾಲಿ ಯುವಕನೊಬ್ಬ ಸೆಕ್ಯುರಿಟಿ ಕೆಲಸದೊಂದಿಗೆ ಗಿಡಗಳಿಗೆ ನೀರು ಹಾಕುವುದನ್ನೂ ಮಾಡುತ್ತಿದ್ದ. ಒಂದು ದಿನ ಬೆಳಿಗ್ಗೆ ನಿವಾಸಿಗಳು ವಾಕ್​ಮಾಡುತ್ತಿರುವಾಗ ಸಣ್ಣ ಕೊಡಲಿ ಹಿಡಿದುಕೊಂಡು ಬರುತ್ತಿರುವುದನ್ನು ಕಂಡರು. ಪಶುಪತಿನಾಥನ ಭಕ್ತ ಪರಶುರಾಮನ ದಾಸ ಏಕಾದ ಎಂದು ಒಬ್ಬರು ಅವನನ್ನು ಪ್ರಶ್ನಿಸಿದರು. ಅಸೋಸಿಯೇಶನ್​ಸೆಕ್ರೆಟರಿ ಗಿಡಗಳನ್ನು ಕಡಿಯಲು ಹೇಳಿದ್ದಾರೆ, ಅದಕ್ಕೆ ಕೊಡಲಿ ತಂದೆ ಎಂದು ನೇಪಾಲಿ ಹೇಳಿದ.

ಅವನ ಮಾತಿಗೆ ವಾಕ್​ಮಾಡುತ್ತಿದ್ದವರಲ್ಲಿ ಕೆಲವರು ವಿರೋಧ ವ್ಯಕ್ತ ಪಡಿಸಿದರು. ಒಬ್ಬಿಬ್ಬರ ಒಪ್ಪಿಗೆಯೂ ಇತ್ತು. ನೇಪಾಲಿ ಸೆಕ್ರೆಟರಿಗೆ ಹೇಳಿದ. ಅವರು ಮತ್ತೊಬ್ಬ ನಿವಾಸಿಯ ಜೊತೆ ಬಂದರು.

ʼಸೆಕ್ರೆಟರಿಗೆ ಗಿಡ ಕಡಿಯಲು ಹೇಳಿದ್ದು ನಾನೇ. ವಾಕ್​ಮಾಡುವಾಗ ತಲೆಗೆ ತಾಕುತ್ತೆ. ಗಿಡ, ಮರಗಳಿದ್ದರೆ ಸೊಳ್ಳೆ ಹೆಚ್ಚಾಗುತ್ತದೆʼ ಎಂದು ಸೆಕ್ರೆಟರಿಯವರೊಂದಿಗಿದ್ದ ಬೊಕ್ಕ ತಲೆಯ ವ್ಯಕ್ತಿ ವಾದ ಮಾಡಿದರು. ಹೆಚ್ಚಿನವರು ಅವರ ಮಾತನ್ನು ಒಪ್ಪಲಿಲ್ಲ. ತಲೆಗೆ ತಾಗುವ ಕೊಂಬೆಗಳನ್ನಷ್ಟೇ ಕತ್ತರಿಸಿ, ಸೊಳ್ಳೆಗಳಿಗೆ ಫಾಗಿಂಗ್​ಮಾಡಿ ಎನ್ನುವ ಸಲಹೆಗಳು ಬಂದವು. ಕೊನೆಗೆ ಗಿಡ ಕತ್ತರಿಸುವುದನ್ನು ನಿಲ್ಲಿಸಿ, ರೆಂಬೆಗಳನ್ನಷ್ಟೆ ಸವರುವ ತೀರ್ಮಾನವಾಯಿತು.

ಈ ಸಲ ಸೀಬೆ ಗಿಡ ತುಂಬಾ ಹಣ್ಣುಗಳು ತುಂಬಿದ್ದವು. ನೆಲ್ಲಿಕಾಯಿ ಗೊಂಚಲು ಗೊಂಚಲಾಗಿ ಇಳಿ ಬಿದ್ದಿತ್ತು.

ಬೊಕ್ಕ ತಲೆಯ ವ್ಯಕ್ತಿ ನೆಲ್ಲಿಕಾಯಿ ಹೆಂಡತಿಯ ಜೊತೆ ನೆಲ್ಲಿಕಾಯಿ ಉದುರಿಸಲು ಹರಸಾಹಸ ಪಡುತ್ತಿದ್ದರು. ಸೀಬೆ ಗಿಡದ ಗೆಲ್ಲುಗಳು ತಲೆಗೆ ಚುಚ್ಚುತ್ತಿರುವುದರ ಬಗ್ಗೆ ಅವರಿಗೆ ಲಕ್ಷ್ಯವಿರಲಿಲ್ಲ!


ಪ್ರೇಮ ಬಂಧನ

ಜೋಡಿ ಲವ್​ಬರ್ಡ್ಸ್​ಗಳಲ್ಲಿ ಒಂದು ಪರಾರಿಯಾಗಿತ್ತು. ಇಬ್ಬರು ಹೆಣ್ಣು ಮಕ್ಕಳು ಕಂಗಾಲಾಗಿ ಅದನ್ನು ಹುಡುಕುತ್ತಿದ್ದರು. ಹದಿವರೆಯದ ಅವರ ಕಣ್ಣುಗಳಲ್ಲಿ ನೀರು ಜಿನುಗುತ್ತಿತ್ತು. ಪೊದೆ, ಗಿಡ, ಬಳ್ಳಿಗಳೆಡೆಯಲ್ಲಿ ಹುಡುಕುತ್ತಿದ್ದವರನ್ನು ಕಂಡವರು ವಿಚಾರಿಸಿದರು.

ಕಳೆದು ಹೋಗಿದ್ದ ಹಕ್ಕಿಯೆಂದು ಗೊತ್ತಾಗಿ, ʼಅಷ್ಟೆನಾ, ಚಿಕ್ಕ ಹಕ್ಕಿಗೆ ಅಷ್ಟೊಂದು ಚಿಂತೆ ಮಾಡ್ತಾರಾ!ʼ ಎಂದು ತಾತ್ಸಾರ ತೋರಿದರು.
ʼಅದನ್ಯಾಕೆ ಹುಡುಕ್ತೀರಾ, ಅದಿನ್ನು ಸಿಗೊಲ್ಲʼ
ʼಅದೇನು ಚಿನ್ನನಾ ಬೆಳ್ಳಿಯಾ?ʼ
ತಲೆಗೊಂದೊಂದು ಮಾತುಗಳು ಬಂದವು.
ಹೆಣ್ಣುಮಕ್ಕಳು ತಲೆ ಕೆಡಿಸಿಕೊಳ್ಳದೆ ಹುಡುಕುತ್ತಲೇ ಇದ್ದರು. ಕೆಲವರು ಅವರೊಡನೆ ಬೆರೆತು ಅಲ್ಲಿ, ಇಲ್ಲಿ ಹುಡುಕಿದರು.
“ನೋಡಿ, ನೋಡಿ, ಅಲ್ಲಿದೆ”
ಕೂಗು ಬಂದೆಡೆ ಎಲ್ಲರೂ ನೋಡಿದರು..

ಕಿರುಬೆರಳು ಗಾತ್ರದ ನೀಲಿ, ಕೆಂಪು ಬಣ್ಣದ ಹಕ್ಕಿ ಸೀಬೆ ಗಿಡದ ರೆಂಬೆಯೊಂದರಲ್ಲಿ ಕೂತಿತ್ತು. ಎಲೆಯ ಅರ್ಧದಷ್ಟೂ ಇಲ್ಲದ ಅದನ್ನು ಎಲೆಗಳ ನಡುವೆ ಗುರುತಿಸುವುದೇ ಕಷ್ಟವಾಗಿತ್ತು. ಮೆತ್ತಗೆ ಹಿಡಿಯಲೆಂದು ನಿಧಾನವಾಗಿ ಗೆಲ್ಲನ್ನು ಬಗ್ಗಿಸಿ ಕೈ ಚಾಚಿದರು. ಹಕ್ಕಿ ಗದ್ದಲಕ್ಕೆ ಬೇರೆಡೆ ಹಾರಿತು. ಸೀಬೆ ಗಿಡ ಅಲುಗಾಡಿಸಿದರೆ ಪಕ್ಕದ ದಾಳಿಂಬೆ ಗಿಡದ ಆಸರೆ ಪಡೆಯುತ್ತಿತ್ತು. ಅತ್ತಿಂದಿತ್ತ ಇತ್ತಿಂದತ್ತ ಹಾರಿ ದಿಕ್ಕು ತಪ್ಪಿಸುತ್ತಿತ್ತು. ಹತ್ತಿರ ಹೋಗುವ ವರೆಗೆ ಸುಮ್ಮನಿದ್ದು ಕೈ ಚಾಚಿದರೆ ಪುರ್ರೆಂದು ಹಾರುತ್ತಿತ್ತು. ಹಿಂದೆ, ಮುಂದೆ ಓಡಿ, ಗಿಡವನ್ನು ಹತ್ತಿ, ಜಾರಿ ಎಲ್ಲ ಸುಸ್ತಾದರು.

“ಜೋಡಿ ಹಕ್ಕಿಯನ್ನು ತನ್ನಿ, ಅದು ಕೂಗಿದರೆ ಬರಬಹುದು” ಗುಂಪಲ್ಲಿದ್ದವರು ಸಲಹೆ ನೀಡಿದರು.

ಹೆಣ್ಣು ಮಗಳೊಬ್ಬಳು ಗೂಡನ್ನು ತಂದಳು. ಗೂಡಿನೊಳಗಿದ್ದ ಹೆಣ್ಣು ಹಕ್ಕಿಯನ್ನು ಗಂಡು ಹಕ್ಕಿಗೆ ತೋರಿಸುವ ಪ್ರಯತ್ನ ಮಾಡಿದಳು. ಪ್ರಿಯತಮನನ್ನು ʼಕರೆ, ಕರೆʼ ಎಂದು ಗೂಡಿನ ಹಕ್ಕಿಗೆ ನಿವೇದಿಸಿದಳು. ಉಹೂಂ…..ಅದು ಜಪ್ಪಯ್ಯ ಅನ್ನಲಿಲ್ಲ. ಬಹುಶಃ ಜಗಳ ಆಗಿ ಮನೆ ಬಿಟ್ಟು ಹೋಗಿರಬಹುದು. ಅಥವಾ ಸಂಗಾತಿ ಇಲ್ಲದ ದುಃಖವೇ?

ಹಕ್ಕಿಗೆ ಕಾಣುವಂತೆ ಗೂಡನ್ನು ಗಿಡಕ್ಕೆ ತೂಗು ಹಾಕಿದರು. ಅದು ಗಮನಿಸಿತೋ ಇಲ್ಲವೋ, ಅತ್ತಿಂದಿತ್ತ, ಇತ್ತಿಂದತ್ತ ಹಾರಿ ರೆಂಬೆಗಳ ಮೇಲೆ ಕೂತಿತಲ್ಲದೆ ಗೂಡಿನ ಹತ್ತಿರ ಸುಳಿಯಲಿಲ್ಲ.

ಕೊನೆಗೆ ಉಳಿದಿದ್ದು ಒಂದೇ ದಾರಿ. ಗೂಡಿನ ಬಾಗಿಲು ತೆರೆಯುವುದು. ಸಂಗಾತಿಯನ್ನು ಕಂಡು ಒಳಗೆ ಬರಬಹುದು. ಇಲ್ಲವೇ ಗೂಡಿನೊಳಗಿನ ಹಕ್ಕಿಯೂ ಹಾರಿ ಹೋಗಬಹುದು.

ಬೇರೆ ದಾರಿ ಇಲ್ಲದೆ ಗೂಡಿನ ತೆರೆಯನ್ನು ತೆರೆದು ದೂರ ಸರಿದು ನಿಂತರು.

ಐದೇ ನಿಮಿಷ.

ಗೂಡು ಬಿಟ್ಟಿದ್ದ ಹಕ್ಕಿ ಒಳ ಹೊಕ್ಕು ಸಂಗಾತಿಯನ್ನು ಮುದ್ದು ಮಾಡತೊಡಗಿತು!

-ಎಂ ನಾಗರಾಜ ಶೆಟ್ಟಿ



ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಚಂದ್ರಪ್ರಭ ಕಠಾರಿ
ಚಂದ್ರಪ್ರಭ ಕಠಾರಿ
1 year ago

ನಾಲ್ಕು ಕತೆಗಳು ಚೆನ್ನಾಗಿವೆ. ಅದರಲ್ಲಿ ಗೌರವ ಕತೆ ತುಂಬಾ ಹಿಡಿಸಿತು.

1
0
Would love your thoughts, please comment.x
()
x