ಪಂಜು ಕಾವ್ಯಧಾರೆ

ಅವು ಮತ್ತು ನಾನು

ಯಾವ ನೋವುಗಳು
ಹೆಚ್ಚಾಗಿ ಕಾಡುವವೋ,
ಆ ನೋವುಗಳನ್ನ
ಇಚ್ಚೆಯಿಂದ ಅನುಭವಿಸುವ ಭರವಸೆಯ
ಅವುಗಳಿಂದಲೇ ಕಲಿತುಕೊಳ್ಳುವೆ….

ಅವು ಹಟಮಾರಿಯಾದರೆ
ನಾನೂ ಹಟಮಾರಿಯಾಗುವೆ
ಅವು ಬಿಡಲೆನ್ನುವವಾದರೆ
ನಾನೂ ಬರಲೆನ್ನುವವನಾಗುವೆ

ಅವು ಹಿಂಡುತ್ತಿರುವಾಗ
ನಾನು ಕಂಡವನು
ಅದ ಉಂಡವನೂ…
ಅವು ಕುಣಿಯುತ್ತಿರುವಾಗ
ನಾನು ಅವಕ್ಕೆ ಅಟ್ಟ ಆದವನು

ಅವು ನಾನಿರುವವರೆಗೂ ಮಾತ್ರ-
ನನ್ನ ತಿನ್ನುವವು
ನಾ ಇಲ್ಲವಾದೊಡನೆ ಅವುಗಳ ಸಾವು
ಅವುಗಳಿಗಾಗಿಯೇ ನಾ ಜೀವಾ ಹಿಡಿದಿರುವಾಗ
ನನಗೆ ಗೊತ್ತು;
ಸಾವೆಂಬುದು ಕ್ರೂರಿಯಲ್ಲವೆ?!…

ಇರುವಷ್ಟು ದಿನ;
ಅವುಗಳಿಗೆ ಉಪಕಾರಿಯಾಗಲಿ ಈ ದೇಹ;
ಅವುಗಳಿಗೂ ಬದುಕಿದೆ ತಿಂದು;
ತಿಂದರೂ, ಹಿಂಡಿದರೂ ಅವುಗಳದೇ
ಎಲ್ಲಿಂದ ಮೀಟಿದರೂ
ಅನುಮತಿ ಕೊಟ್ಟಿರುವೆ

ಇಚ್ಚೆ ಇರಲಿ;
ಹಟವಿರಲಿ
ನನಗೂ;
ಅವುಗಳಿಗೂ…

-ಕಾಸಿಂ ನದಾಫ್ ಭೈರಾಪುರ

ನಮ್ಮಮ್ಮನ ಸೊಸೆ

ನಾನು ಪ್ರಾಯಕ್ಕೆ ಕಾಲಿಟ್ಟಾಗ
ನಡೆಸಿದ್ದಳು ನನ್ನಮ್ಮ ಸೊಸೆ ಬೇಟೆ
ಎಲ್ಲರಂತೆ
ತಯಾರಿಸಿ ದೊಡ್ಡದೊಂದು ಪಟ್ಟಿ:
ಮೊಗ ಚಂದವಿರಬೇಕು
ನಾಸಿಕವು ಸಂಪಿಗೆಯಂತೆ
ಕಣ್ಣುಗಳು ಕಮಲದಂತೆ
ತುಟಿಗಳು ಪಾರಿಜಾತದ ತೊಟ್ಟಂತೆ
ದಂತ ಪಂಕ್ತಿ ದಾಳಿಬೆಯಂತೆ.
ನಡು ಸಣ್ಣದಿರಬೇಕು ನೀರ ಕೊಡ ಹೊರಲು
ಕೈ ಕಾಲು ನೆಟ್ಟಗಿರಬೇಕು
ಅಡುಗೆ ಮಾಡಲು
ಹತ್ತು ಮಕ್ಕಳ ಹೆತ್ತು ಹೊರೆಯಲು
ಬಂದ ಬಂಧುಗಳ ಸತ್ಕರಿಸಲು
ಒಮ್ಮೊಮ್ಮೆ ಅವಳ ಸೇವೆ ಮಾಡಲು!
ಮತ್ತು
ಇನ್ನೆಷ್ಟೋ ಅಂಶಗಳ ಪಟ್ಟಿ ಮಾಡಿ
ಅವಳಿಗಿದಿರಾಡದ ಹೆಣ್ಣೊಂದ
ಸೊಸೆಯಾಗಿ ತರುವ ಕನಸು ಕಾಣುತ್ತಾ
ಹುನ್ನಾರ ನಡೆಸಿದ್ದಳು .

..೨..

ಮನದಲ್ಲೇ ಮೆಚ್ಚಿದ್ದ ಮನದನ್ನೆಯಾ
ಆ ಕೃಷ್ಣವರ್ಣೆಯ
ವರಿಸಿ ಬಂದಿಳಿದೆ
ಹಾರ, ತುರಾಯಿಯೊಂದಿಗೆ
ನನ್ನಮ್ಮನೆದುರು
ಮೂಕಾಗಿ, ಬೆಪ್ಪಾಗಿ
ಕೂಡಿಸಿ ಗುಣಿಸಿ , ಭಾಗಿಸಿ ಸಮೀಕರಿಸಲು
ಪ್ರಯತ್ನಿಸಿ ಸುಸ್ತಾದಳು ಪಟ್ಟಿ ಅಂಶಗಳ

..೩..

ಹೊರಗಣ್ಣ ನೋಟಕ್ಕೆ;
ಒಂಚೂರು ಸೊಟ್ಟ ಮೂಗು,
ಬಾಯಿ ಬಿಟ್ಟರೆ ಕೋಟೆ ಬಾಗಿಲು,
ಗಜಗಮನೆ,
ನಿರಾಭರಣ ಸುಂದರಿ
ಎನ್ನ ಮನದನ್ನೆ, ಎನ್ನ ಚೆನ್ನೆ.

ಪಾಪ ! ಅಮ್ಮಳಿಗೇನು ಗೊತ್ತು ?
ನನ್ನವಳ
ಮನಸು ದಾಳಿಂಬೆಯಂತೆ ಪಳ,ಪಳ
ನೇ ಹೊಳೆದು
ಸಂಪಿಗೆಯ ಘಮಲು ಗಾಳಿಗೆ ತೇಲಿ, ಕಮಲದೊಡಗೂಡಿ
ದೇವಗರ್ಪಿಸುವ ಪಾರಿಜಾತದಂತೆ
ಧನ್ಯೋಸ್ಮಿ
ಒಳಗಣ್ಣ ನೋಟಕ್ಕೆ ನನ್ನ ಸುಂದರಿಯದೆಂದು !

-ಶ್ರೀಕೊಯ.

ನೀನು ನನ್ನನವನೆಂಬ ಭಾವವು

ನೀನು ನನ್ನನವನೆಂಬ ಭಾವವು
ನೂರು ಸುಖವ ತಂದಿದೆ..
ನಾನು ನಿನ್ನವಳೆಂಬ ಹೆಮ್ಮೆಯ
ನೆನೆದು ಮನವು ನಲಿದಿದೆ,
ನೆನೆದು ಮುದದಿ ಅರಳಿದೆ…

ತೆರೆಯು ನಾನು, ತೀರ ನೀನು
ನಿನ್ನ ಸೆಳೆತಕ್ಕೆ ಸೋಲುವೆ..
ಪುನಃ ಪುನಃ ತೆರಳಿ ಮರಳಿ
ನಿನ್ನ ನಾನು ನೆನೆಯುವೆ,
ಮತ್ತೆ ಮತ್ತೆ ಬೆರೆಯುವೆ…

ನದಿಯು ನಾನು,ಶರಧಿ ನೀನು
ನಿನ್ನ ಹುಡುಕುತ ಅಲೆಯುವೆ..
ನಿನ್ನ ಕಂಡ ಘಳಿಗೆಯಲ್ಲಿ
ನನ್ನೇ ನಾನು ಮರೆಯುವೆ,
ಕಣ್ಣ ಕಡಲಲಿ ಬೆರೆಯುವೆ…

ಸಂಧ್ಯೆ ನಾನು, ಮುಗಿಲು ನೀನು
ಹೊನ್ನ ಬಣ್ಣ ತೆರೆಯುವೆ..
ನಿನ್ನ ಕಣ್ಣ ಹೊಳಪಿನಲ್ಲಿ
ತಾರೆಯಾಗಿ ನೆರೆಯುವೆ,
ದೀಪವಾಗಿ ಬೆಳಗುವೆ…

-ಸರೋಜಪ್ರಶಾಂತಸ್ವಾಮಿ

ಹಾಡೇ ಮಾಗಿಯ ಕೋಗಿಲೆ

ಬಂದಿದೆ ಮಾಘಮಾಸ
ಸರಿದಿದೆ ಸುಮಧುರ ರಾಗವೆಲ್ಲ
ಒಮ್ಮೆಲೆ ಕೇಳುವೆ ಹಾಡು ಹಾಡಲೇ
ಓ ಕುಹೂ ಕುಹೂ ಕೋಗಿಲೆ

ಮುಖವಾಡದ ಮನುಕುಲದ ಕಥೆ
ಮರೆಮಾಚಿ ಮನಕಲಕಿದ ವ್ಯಥೆ
ಅವನೇ ಸ್ವಚ್ಛಂದವಾಗಿ ರುವನು ನೀ ಹಾಡಲೇ
ಓ ಕುಹೂ ಕುಹೂ ಕೋಗಿಲೆ

ಮೂಕಳಾದೆಯಾ? ಮೋಸವ ಕಂಡು
ತೂಕ ಮಾಡಲು ಬಾರದು ಯಮನ ದಂಡು
ಮಾಮರವು ಕೂಗಿ ಕೇಳಿದೆ ಹಾಡಲೇ
ಓ ಕುಹೂ ಕುಹೂ ಕೋಗಿಲೆ

ಪಾಪದ ಪುಟಗಳನ್ನು ತಿರುಗಿಸಿ
ಕುರೂಪದ ದೂರುಗಳನ್ನು ಹೊರಿಸಿ
ನಲಿಯುತ್ತಿರುವನು, ಹಠ ಬಿಟ್ಟು ಹಾಡಲೇ
ಓ ಕುಹೂ ಕುಹೂ ಕೋಗಿಲೆ

ಕರಗದ ಕಲ್ಲಿನ ಬಂಡೆ ಅದುವೇ
ಕೊರಗುತ್ತ ನಿಂತಿಹೆ ಮಲ್ಲಿಗೆ ಹೃದಯವೇ
ನಶಿಸುವ ದಿನವಿದೆ ಅವನ್ಗೆ ಹಾಡಲೇ
ಓ ಕುಹೂ ಕುಹೂ ಕೋಗಿಲೆ

ಬದಲಾವಣೆ ಬೆನ್ನೇರಿ ಹೊರಟಿಹನು
ಹಸಿರ ಬಸರಿಗೆ ಮಾರಕನಾಗಿಹನೋ
ಹೊಡೆಯುವುದು ಒಮ್ಮೆ ಪಾಪದ ಕೊಡ ಹಾಡಲೇ
ಓ ಕುಹೂ ಕುಹೂ ಕೋಗಿಲೆ

-ಚಂದ್ರು ಪಿ ಹಾಸನ್

ಒಂದಿಡಿ ಬೆಳಕಿಗಾಗಿ…!

ಕನಸುಗಳು ಮೊಟ್ಟೆ ಒಡೆದು
ಮರಿ ಆಚೆ ಬರುವ ಹೊತ್ತು
ಕತ್ತಲನು ಸೀಳಬೇಕಯ್ಯ

ಅಲ್ಲಿ ಹುಲಿ ನಡೆದ ಹೆಜ್ಜೆಯ ಮೇಲೆ
ಹೂವೊಂದು ಬಿದ್ದಿರುವಂತಿದೆ
ಗಾಂಧಿ ಅಂಬೇಡ್ಕರ್ ಬುದ್ಧ ಸೇರಿ
ಮಹಾಮನೆ ಸ್ಥಾಪಿಸಿದಂತಿದೆ

ಕರುಳ ಕರೆಯ ಧ್ವನಿಯೊಂದು
ಬಿಡುಗಡೆಗಾಗಿ ಆಲಾಪಿಸುವಂತಿದೆ
ಯಾರದೋ ಹಸಿನೆತ್ತರ ವಾಸನೆ
ಗಾಳಿಯ ಕೈಹಿಡಿದಂತಿದೆ
ಅಟ್ಟೆ ಹರಿದ ಮೆಟ್ಟಿನ ಜರ ಜರ ಸದ್ದಿಗೆ
ಜಗದ ಜಂಜಡಗಳೇ ಎಚ್ಚರಗೊಳ್ಳಬೇಕಿದೆ

ಗರಿ ಗರಿ ಬಿಳಿ ಅಂಗಿತೊಟ್ಟ
ಮುಚ್ಚಿಟ್ಟ ಮೌನ ರಾಜಕೀಯ
ಬೊಬ್ಬೆಯೆದ್ದು ಕರೆಗಟ್ಟಿದ ಅಂಗೈಗಳ
ನಾಡಿ ಹಿಡಿದು ಉಜ್ವಲ ಬೆಳಕಿಗೆ
ಕಡ್ಡಿಗೀರಬೇಕಿದೆ

ಬೆಳಕುಡುಗಿದ ರೆಂಬೆಕೊಂಬೆಗಳ ಮೇಲೆ
ಕಣ್ಣುಕಾಣದ ಹಕ್ಕಿಯೊಂದು ಕೂಗುತಿದೆ
ತಾನಿರುವ ಕೊಂಬೆಯೇ ಒಣಗಿ ಬಣಗುಡುವ
ನೋವು ಹೆಪ್ಪುಗಟ್ಟಿರುವಾಗ
ನೋಡುವ ದಿಕ್ಕುಗಳೂ ಕೆಂಡಕಟ್ಟಿ ಕೂತಿವೆ

ಅಕ್ಷರ ಜ್ಞಾನವಿಲ್ಲದವರ ಹೆಜ್ಜೆಗಳು
ಆದಿ ಅಂತ್ಯವಿಲ್ಲದ ದಿಕ್ಕಿನತ್ತ ಚಲಿಸುವ ಸದ್ದು ಕೇಳುತ್ತಿದೆ
ಮತ್ಸರವಿಲ್ಲದ ಹಕ್ಕಿಚಿತ್ರಬಿಡಿಸಿದವನು
ಹಿಡಿಬೆಳಕಿಗಾಗಿ ಹಂಬಲಿಸುತ್ತಿದ್ದಾನೆ

ಕತ್ತಲು ಸೀಳಲು
ಜಗದೊಳು ಕನ್ನಡಿಯ ಬಿಂಬವಾದರೂ
ಎಚ್ಚರಗೊಳ್ಳಬೇಕಯ್ಯ
ಯಾರದೋ ಭಯಕೆ
ಪೊದರಲಿ ಅವಿತು ಕೂತ ಮೊಲ
ನಿರ್ಭಿಡೆಯಾಗಿ ನೆಗೆವ ಕಾಲ
ಕೂಡಬೇಕಯ್ಯ.

-ಬಿದಲೋಟಿ ರಂಗನಾಥ್

ಉರಿವ ಬಿಸಿಲಿಗೆ ಬೆವರ ಹನಿಗಳ ತೆತ್ತು ಬೆಳದಿಂಗಳ ಕೊಳ್ಳುವ ಗಿರಾಕಿ ನಾನು
ಮಳೆಯ ಒಂದು ಹನಿಗಾಗಿ ಮುಗಿಲನೇ ಖರೀದಿಸುವ ಗಿರಾಕಿ ನಾನು

ನನ್ನ ಹೆಸರು ಗುರುತುಗಳ ಬರೆದಿಟ್ಟುಕೊಂಡು ಕಾಯುತ್ತಿದ್ದಾರೆ ಜಗದ ವ್ಯಾಪಾರಿಗಳು
ವ್ಯಾಪಾರಿಗಳಿಗೆ ಖಜಾನೆಗೆ ಬರಿ ಶೂನ್ಯ ತುಂಬಿರುವ ಗಿರಾಕಿ ನಾನು

ನಮೂದಿಸಲಾಗಿದೆ ಬದುಕಿನ ಒಂದೊಂದು ಸರಕಿಗೂ ಒಂದೊಂದು ದರವನು
ದರದ ನಿರ್ದಯಕೆ ಕರುಣೆ ಪ್ರೀತಿ ನೀಡುತ ನಡೆವ ಗಿರಾಕಿ ನಾನು

ವ್ಯಾಪಾರದರಿವಿದೆ ಬಂದು ನಿಂತಿರುವೆ ಬರಿಗೈಯಲ್ಲಿ ಜಾತ್ರೆಗೆ
ನೋಟುಗಳ ಬಣ್ಣ ಸದ್ದು ಆಸೆ ಕನಸುಗಳ ಕಳೆದುಕೊಂಡಿರುವ ಗಿರಾಕಿ ನಾನು

ದರವಿಲ್ಲದೆ ದೊರಕುವುದಾದರೆ ಒಂದು ಮುಗುಳುನಗು ವಾದರೂ ಸಾಕು
ಯಾರದೋ ನಗುವಿನಲಿ ನೋವು ನಿರಾಸೆಗಳ ಮರೆವ ಗಿರಾಕಿ ನಾನು

ಹರಿದ ಜೇಬುಗಳೊಳಗೆ ತುಂಬಿಕೊಂಡಿವೆ ಹರಿಯದ ಕನಸ ಚೂರುಗಳು
ಉಕ್ಕುಕ್ಕಿ ಹರಿಯವ ನದಿಗಳಿಗೆ ಹನಿಸಲೆಂದೇ ಹನಿ ಒಲವ ತಂದಿರುವ ಗಿರಾಕಿ ನಾನು!

ಗಣೇಶ ಹೊಸ್ಮನೆ

ಕವಿ ಮನದ ವೇದನೆ

ನಾ ಬರೆದ ಕವಿತೆಗಳಿಗೆ
ಯಾರ ಮನದಲ್ಲೂ ಜಾಗವಿಲ್ಲ
ಯಾವ ಆಸ್ತಿತ್ವವಿಲ್ಲ
ಭರವಸೆಯ ಭವಿಷ್ಯವಂತು
ಮೊದಲೇ ಇಲ್ಲ

ಬದುಕಿರುವಂತೆಯೇ ಎಂದೋ
ಜೀವಂತ ಸಮಾಧಿಯಾಗಿವೆ
ಇನ್ನೂ ಸತ್ತಿಲ್ಲವಾದರೂ
ಸತ್ತಂತೆಯೇ ಆಗಿವೆ

ಕೇವಲ ಕನಸು ಕಲ್ಪನೆಗಳಲ್ಲ
ನನ್ನ ಕವಿತೆಗಳು
ವಾಸ್ತವದ ಮಿಡಿತಗಳು
ಭಾವ ಬೇಗುದಿಯ ಮೊರೆತಗಳಲ್ಲ
ಅನುಭವದ ಬೆಂಕಿಯಲ್ಲಿ ಉರಿದು ಮಾಗಿದ
ಅನುಭಾವದ ಮಿಳಿತಗಳು

ಪ್ರಕಟಣೆಯ ಯೋಗ ನನ್ನ ಕವಿತೆಗಳಿಗಿಲ್ಲ
ಯಾರ ಕಣ್ಣಿಗೋ ಬಿದ್ದು
ಎಲ್ಲೋ ಓದಿಸಿಕೊಂಡರೆ
ಅಷ್ಟೇ ಅವುಗಳ ಭಾಗ್ಯ

ಓದಿನ ಸ್ಪರ್ಶ ಕವಿತೆಯನ್ನಾಗಿಸುವುದು ಇನ್ನಷ್ಟು ಜೀವಂತ
ಹಾಗೆಯೇ ಕವಿಯನ್ನು ಸಹ
ಆದರೆ ಇಲ್ಲಿ
ಇಬ್ಬರಿಗೂ ಯಾವ ಮನ್ನಣೆಗಳಿಲ್ಲ
ಪ್ರೋತ್ಸಾಹಿಸುವ ಮುನ್ನುಡಿಗಳೂ ಇಲ್ಲ

ಅಸ್ತಿತ್ವದ ಪ್ರಶ್ನೆ
ಮತ್ತೆ ಮತ್ತೆ ಮೊದಲಾಗುವುದಲ್ಲ
ಸಾರ್ಥಗೊಳ್ಳುವ ಮುನ್ನ
ಸಂಜೆಗೆ ಮೊದಲೇ
ಹೂ ಬಾಡಿದಂತೆ
ಹುಟ್ಟಿದ ಮರುಕ್ಷಣವೇ
ನನ್ನಯ ಕವಿತೆಗಳು ಅಸುನೀಗುವುವಲ್ಲ ಇನ್ನ

ಪರಿತಪನೆಯಲ್ಲ
ಕವಿ ಮನದ ವೇದನೆ
ಇದ್ದು ಇಲ್ಲದಂತೆ
ಬದುಕುವ ಅನಿವಾರ್ಯತೆಯ
ಮದ್ದಿಲ್ಲದ ಬೇನೆ

ಜಬೀವುಲ್ಲಾ ಎಮ್. ಅಸದ್

ಮರ ಮತ್ತು ದಾರಿ

ಉರಿ ಬಿಸಿಲಿನ ಹೊತ್ತಲ್ಲಿ
ದಾರಿಯನ್ನನುಸರಸಿ
ಕಾಲ್ನಡಿಗೆಯಲ್ಲಿ ಬಾಯಿಗಳಿಗೆ ಬೀಗ ಜಡಿಯದೇ
ಜಗದ ಪರಿವೆಯೇ ಇಲ್ಲದೆ ಪಟಪಟನೆ
ಮಾತಾಡುತ್ತಾ ಪಯಣಿಸುತ್ತಿದ್ದಾಗ

ಇದ್ದಕ್ಕಿದ್ದಂತೆ ತಂಪಾಗಿ ವಿಚಲಿತರಾದಾಗ
ತಲೆಯೆತ್ತಿ ಮೇಲೆ ನೋಡಿ ಎನ್ನುವ
ಮಾರ್ದವವಾದ ಉಲುಹನ್ನು ಆಲಿಸಿ
ನಮ್ಮ ಬಲಭಾಗದಲ್ಲಿ ಕಂಡ
ತನ್ನ ಸ್ನಿಗ್ಧ ಸೌಂದರ್ಯದಿಂದ ನಳನಳಿಸುತ್ತಿದ್ದ
ದೈತ್ಯಕಾರದ ಮರವನ್ನು ನೋಡಿದಾಗ
ಅದು ನಮ್ಮ ಕಡೆಗೊಮ್ಮೆ ನೋಡಿ!
ಬರುವಾಗ ದಾರಿ ತಪ್ಪದಿರಲು ನನ್ನನ್ನು
ಸರಿಯಾಗಿ ನೋಡಿ ನೆನಪಿಟ್ಟುಕೊಳ್ಳಿ
ಎಂದು ಹೇಳಿದಂತೆ ಭಾಸವಾಗಿ
ಆ ಅದ್ಭುತವಾದ ಮರಕ್ಕೆ ಮನಸೋತಿದ್ದೆವು.

ನಮ್ಮ ಪಯಣ ಮುಂದುವರೆಸಿ
ಸೇರಬೇಕಾದ ಕಡೆ
ಸೇರುವವರೆಗೂ ನಮ್ಮ ಮಾತುಕತೆ
ಮರದ ಕುರಿತೇ ಆಗಿತ್ತು.

ದಾರಿಗುಂಟ ಮತ್ತೆ ವಾಪಸ್ಸು ಬರುವಾಗ
ಮರದ ಜಾಡನ್ನು ಹುಡುಕುತ್ತಿರುವಾಗ
ನಮ್ಮ ಎಡಭಾಗದಲ್ಲಿ ಕಂಡ ಆ ಮರ
ಮತ್ತೂ ಅದ್ಬುತವೆನಿಸಿತು

ದಾರಿಯಿಂದ ಮರದ ಸೊಬಗೊ? ಅಥವಾ
ಮರದಿಂದ ದಾರಿಯ ಸೊಬಗೊ?
ಎನ್ನುವ ಪ್ರಶ್ನೆ ಉದ್ಭವವಾಯಿತು.
ಕಾಲ ಕಳೆದಂತೆ ಕಾಲ್ನಡಿಗೆಯು ಮಾಯವಾಗಿ
ವಾಹನಗಳಲ್ಲಿ ನಮ್ಮ ಸಂಚಾರವಾದಂತೆ
ದಾರಿಯ ಬದಿಯಲ್ಲಿದ್ದ ಮರವನ್ನು
ನೋಡುವುದು ವಿರಳವಾಯಿತು
ವಾಹನಗಳಲ್ಲಿನ ಸಂಚಾರ
ದಾರಿಯನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಿ
ಹೋಗುವಾಗ ಬರುವಾಗ ನನ್ನ ಕಡೆಗೊಮ್ಮೆ ಕಣ್ಣಾಯಿಸಿ
ಎಂದು ಹೇಳಿದ್ದ ಮರವನ್ನು ಮರೆತಂತೆ ಮಾಡಿತ್ತು

ಮುಂದೊಂದು ದಿನ
ಆ ಮರ ಮಾಯವಾಗಿ ದಾರಿಯು ಬಿಕೋ ಎನ್ನುವಂತಿತ್ತು
ಪಯಣ ನೀರಸವಾಯಿತು
“ಯಾಕಾಗಿ ಆ ಮರ ಮಾಯವಾಯಿತು ?”
ಎನ್ನುವುದು ಪ್ರಶ್ನೆಯಾಗಿಯೇ ಉಳಿದು
“ಮರದಿಂದ ದಾರಿಯ ಸೊಬಗು”
ಎನ್ನುವ ಮೇಲಿನ ಪ್ರಶ್ನೆಗೆ ಉತ್ತರ ಕೊಟ್ಟಿತ್ತು.

ಶೈಲಜ ಮಂಚೇನಹಳ್ಳಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x