ನಮ್ಮ ಚಳ್ಳಕೆರೆ(ಚಿತ್ರದುರ್ಗ ಜಿಲ್ಲೆ) ಅರಣ್ಯ ಪ್ರದೇಶವು ಅಂದಾಜು ಒಂದು ಸಾವಿರ ಹೆಕ್ಟೇರ್ ಕಾಯ್ದಿಟ್ಟ ಅರಣ್ಯ ಪ್ರದೇಶವಾಗಿದೆ ಹಾಗೂ ಅನೇಕ ಪ್ರಾಣಿ ಪಕ್ಷಿಗಳಿಗೆ, ಬಯಲುಸೀಮೆಯ ವನ್ಯಜೀವಿಗಳಿಗೆ ಆವಾಸ ಸ್ಥಾನವಾಗಿದೆ. ಇಲ್ಲಿನ ಅಪರೂಪದ ಅರಣ್ಯ ಪ್ರದೇಶದಲ್ಲಿ ಓಡಾಡುವುದೆಂದರೆ ನನಗೆ ಒಂದು ಖುಷಿಯ ವಿಷಯವಾಗಿದೆ. ಕೆಲವೊಮ್ಮೆ ಕಾನನದ ಒಳಗೆ ಹೋಗಿ ಹೆದರಿದ್ದೂ ಉಂಟು, ಜೋರು ಗಾಳಿ ಬೀಸುವಾಗ ನೀಲಗಿರಿಮರದ ಎಲೆಯ ಶಭ್ಧಕ್ಕೆ ಹೆದರಿ ಓಡಿದ್ದೂ ಉಂಟು, ಅದೆಷ್ಟೋ ಬಾರಿ ನನ್ನ ಹೆಜ್ಜೆಯ ಸಪ್ಪಳಕ್ಕೆ ನಾನೇ ಭಯದಿಂದ ನಡುಗಿದ್ದೇನೆ, ದೂರದಲ್ಲೆಲ್ಲೋ ಕೇಳುವ ಕೋಗಿಲೆ ನವಿಲಿನ ಇಂಪಾದ ಕೂಗಿಗೆ ಮನಸೋತಿದ್ದೇನೆ. ಇಳಿಸಂಜೆಯ ಹುಣ್ಣಿಮೆಯ ಕತ್ತಲಲ್ಲಿ ಪ್ರಕೃತಿ ಸೌಂದರ್ಯ ಸವಿಯುತ್ತಾ ಏಕಾಂಗಿಯಾಗಿ ಎಲ್ಲವನ್ನೂ ಮರೆತು ಇಲ್ಲಿ ಸಮಯ ಕಳೆಯುವುದೇ ಒಂದು ಅಮರ ಖುಷಿ ನನಗೆ. ಅದಕ್ಕೆ ಸಮವಾದ ನೆಮ್ಮದಿ ಇನ್ನಾವುದೂ ಇಲ್ಲ. ಈ ನಮ್ಮ ಕುರುಚಲು ಕಾಡಲ್ಲಿ ಹುಲಿ ಆನೆ ಸಿಂಹಗಳಂತಹ ಪ್ರಾಣಿಗಳಿರದಿದ್ದರೂ ಕಾಡು ಎಂದಿಗೂ ಭಯಾನಕವೇ.
ಸದಾ ಒಣಗಿರುವ ಈ ಅರಣ್ಯಪ್ರದೇಶ ಮುಂಗಾರಲ್ಲಿ ಸುರಿದ ಆಲಿಕಲ್ಲುಮಳೆಗೆ ಕೊಂಚ ಹಸಿರಿನಿಂದ ಕಂಗೊಳಿಸುತ್ತಿತ್ತು. ಎಂದಿನಂತೆ ಒಂದು ಇಳಿಸಂಜೆಯಲ್ಲಿ ಅರಣ್ಯ ಇಲಾಖೆಯ ಸಸ್ಯಕ್ಷೇತ್ರದಲ್ಲಿರುವ ನಾಯಿಮರಿಗಳಿಗೆ ಊಟ ನೀಡಿ ಅಲ್ಲೇ ಸುತ್ತಮುತ್ತ ಓಡಾಡುತ್ತಿದ್ದೆ. ಮುಳ್ಳಿನ ಪೊದೆಯೊಳಗೆ ಒಂದು ನವಿಲು ಅಲುಗಾಡದೇ ಕುಳಿತಿದ್ದು ಕಾಣಿಸಿತು. ಗಾಬರಿಯಿಂದ ಹತ್ತಿರ ಹೋಗಿ ನೋಡಿದೆ. ತನ್ನ ರೇಋ್ಮೆಯಂತಹ ಗರಿಗಳು ಆ ಕತ್ತಲಲ್ಲೂ ಪಳ ಪಳ ಹೊಳೆಯುತ್ತಿದ್ದವು. ಹತ್ತಿರ ಹೋಗುತ್ತಿದ್ದ ನನ್ನ ಹೆಜ್ಜೆಯ ಶಬ್ಧ ಕೇಳಿದರೂ ಆ ನವಿಲು ಹೆದರದೇ ಅಲ್ಲೇ ಕುಳಿತಿದ್ದನ್ನು ಕಂಡು ಆಶ್ಚರ್ಯ ಅನುಮಾನ ಎರೆಡೂ ಆಯಿತು, ದೂರದಿಂದ ಕಂಡರೇನೇ ಶಬ್ಧಕ್ಕೆ ಹಾರಿ ಹೋಗುವ ಈ ನವಿಲುಗಳು ನಾನು ಇಷ್ಟು ಹತ್ತಿರ ಹೋದರೂ ಕದಲದೇ ಕುಳಿತಿದ್ದನ್ನು ಕಂಡು ಮೆಲ್ಲಗೆ ಅದರ ಬಳಿ ಹೋದೆ. ಹತ್ತಿರ ಬಂದದ್ದನ್ನು ಅರಿತು ಅದು ಸ್ವಲ್ಪ ಹೆದರಿ ಮುಂದೆ ಹಾರಿ ಒಂದು ಮತ್ತೊಂದು ಪೊದೆಯಲ್ಲಿ ಅವಿತುಕೊಂಡಿತು. ಆ ಕ್ಷಣ ಏನು ಮಾಡೋದು ಅಂತ ತಿಳಿಲೇ ಇಲ್ಲ. ಇಲ್ಲೇ ಬಿಡೋದಾ? ಬಿಟ್ಟರೇ ಏನಾಗುತ್ತೋ, ಹಿಡುಯೋದಾ? ನಾ ಹಿಡಿದರೆ ಏನಾಗುತ್ತೋ, ಹೀಗೇ ನಾನಾ ವಿಧವಾದ ಗೊಂದಲಗಳಲ್ಲಿಯೇ ಅದರ ಹತ್ತಿರ ಹೋಗಿ ಧೈರ್ಯದಿಂದ ಮೆಲ್ಲಗೆ ಮುಳ್ಳಿನ ಪೊದೆಯಿಂದ ನವಿಲನನ್ನು ಬಿಡಿಸಿ ಕೈಯಲ್ಲಿ ಹಿಡಿದು ಎದೆಗೆ ಅಪ್ಪಿಕೊಂಡೆ…!! ಆಹಾ…! ಆ ಕ್ಷಣ ಬಣ್ಣಿಸಲಾರೆ…!
ನವಿಲನ್ನು ಎದೆಗೆ ಅಪ್ಪಿದ್ದರಿಂದ ನನ್ನೆದೆಯ ಭಾಗವೂ ಕಂಪಿಸುತಿತ್ತು…. ಭಯದಿಂದ ಅದರ ಹೃದಯ ಡವ ಡವ ಬಡಿದುಕೊಳ್ಳೋದು ಗೊತ್ತಾಗುತ್ತಿತ್ತು. ಅದು ಗಂಡು ನವಿಲಾಗಿತ್ತು… ಆಹಾ ಅದರ ಅಂದ ಚೆಂದ, ಆಕಾರ, ರೇಷ್ಮೆಯನ್ನೂ ಬಂಗಾರವನ್ನೂ ಮೀರಿಸುವ ಚೆಲುವು ಸೌಂದರ್ಯ ಅದರದಾಗಿತ್ತು, ಹಾಗೆಯೇ ಕಣ್ತುಂಬಾ ನೋಡುತ್ತಾ ನಿಂತೆ… ನವಿಲನ್ನು ಹತ್ತಿರದಿಂದ ನೋಡಿದನ್ನು ಬಿಟ್ಟರೆ ಯಾವತ್ತೂ ಕೈಯಲ್ಲಿ ಹಿಡಿದಿರಲಿಲ್ಲ…. ಅದೇನೋ ಮನಸಲ್ಲಿ ಕಳವಳ.. ನಾನು ಮಾಡುತ್ತಿರುವುದು ತಪ್ಪೋ ಸರಿಯೋ ಎಂದು… ಇದೇ ಗೊಂದಲದಲ್ಲಿ ಪರಿಚಯವಿದ್ದ ಅರಣ್ಯ ಇಲಾಖೆಯವರಿಗೆ ಕರೆಮಾಡಿ ವಿಷಯ ತಿಳಿಸಿದೆ, ಕೂಡಲೇ ಅವರು ಸ್ಥಳೀಯ ಅರಣ್ಯಾಧಿಕಾರಿಯ ಫೋನ್ ನಂಬರ್ ಕೊಟ್ಟರು ಅವರನ್ನು ಸಂಪರ್ಕಿಸಿದಾಗ ಅದನ್ನು ಅಲ್ಲಿಯೇ ಬಿಡಿ ನವಿಲು ಹಾರಬಹುದೇನೋ ಎಂದರು, ಅವರು ಹೇಳಿದಂತೆಯೇ ಮಾಡಿದೆ. ಉಹೂ ಅದು ಹಾರಲಿಲ್ಲ!! ಸ್ವಲ್ಪ ದೂರವೇ ಹೋಗಿ ಮತ್ತೆ ಅಲ್ಲಿಯೇ ಕಾಲು ಎಡವಿ ಕುಳಿತುಕೊಂಡಿತು, ಮೇಲ್ನೋಟಕ್ಕೆ ಅದರ ಎಡಗಾಲಿಗೆ ಪೆಟ್ಟಾಗಿರುವುದು ಕಾಣುತ್ತಿತ್ತು ಭಯದಲ್ಲಿ ನೀರು ಕೊಟ್ಟರೂ ಕುಡಿಯಲಿಲ್ಲ…. ಅದನ್ನು ಅಲ್ಲಿಯೇ ಬಿಟ್ಟರೆ ನಾಯಿ ಅಥವಾ ಕಾಡುಪ್ರಾಣಿಗೆ ಆಹಾರವಾಗುತ್ತದೆಂದು ಮತ್ತೆ ಅವರಿಗೆ ಕರೆ ಮಾಡಿದಾಗ ಇಲಾಖೆಯ ಕಛೇರಿಗೆ ತರಲು ಹೇಳಿದರು, ಮೆಲ್ಲಗೆ ಅದನ್ನು ಇಲಾಖೆಯ ಕಛೇರಿ ಬಳಿ ತೆಗೆದುಕೊಂಡುಹೋದಾಗ ಅಲ್ಲಿಯೇ ಇದ್ದ ಸಿಬ್ಬಂದಿಯು ಅದನ್ನು ಹುಷಾರಾಗಿ ರೂಮಿನಲ್ಲಿಟ್ಟು ನಾಳೆ ವೈಧ್ಯರಿಗೆ ತೋರಿಸುವುದಾಗಿ ಭರವಸೆ ನೀಡಿದರು.
Rescue ಎಂಬ ಪದದ ನಿಜ ಅರ್ಥ ನನಗೆ ಗೊತ್ತಾಗಿದ್ದೇ ಇತ್ತೀಚೆಗೆ…! ಇಷ್ಟು ಬೇಗ ಅದರ ನೈಜ ಅನುಭವ ಆಗುತ್ತದೆಂದು ನಾನು ಊಹಿಸಿರಲಿಲ್ಲ… ಮರುದಿನ ವೈದ್ಯರು ನವಿಲಿಗೆ ಏನೂ ಆಗಿಲ್ಲ ಕಾಲಿಗೆ ಪೆಟ್ಟಾಗಿ ಜ್ವರ ಬಂದಿದೆಯಷ್ಟೇ ಸುಸ್ತಾಗಿದೆ ಅಂತ ಹೇಳಿ ಚುಚ್ಚುಮದ್ದನ್ನು ನೀಡಿದ್ದರು. ಇನ್ನೂ ಎರೆಡು ದಿನ ವಿಶ್ರಾಂತಿ ಪಡೆಯಲಿ ನಂತರ ನೋಡೋಣ ಅಂತ ಹೇಳಿದ್ದರು. ನಮ್ಮ ಆರೈಕೆ ಪಡೆದ ನವಿಲು ಕೇವಲ ಮೂರೇ ದಿನದಲ್ಲಿ ಮೇಲೆದ್ದು ನಡೆದಾಡುತ್ತಿತ್ತು, ಪುಟ್ಟ ರೂಮಲ್ಲಿ ಅದನ್ನು ಕೂಡಿ ಹಾಕಿದ್ದರಿಂದ ಅದು ಹಾರಲು ಕಷ್ಟ ಪಡುತ್ತಿತ್ತು. ಉದ್ದದ ಕತ್ತು ಮತ್ತು ಉದ್ದದ ಗರಿಗಳು ಗೋಡೆಗಳುಗೆ ತಗುಲುತ್ತಿದ್ದವು. ಅದನ್ನು ಕಂಡ ನಾನು ತಕ್ಷಣ ಇಲಾಖೆಗೆ ತಿಳಿಸಿದೆ. ಕೆಲಸದ ನಿಮಿತ್ತ ದೂರ ಇದ್ದ ಅರಣ್ಯಾಧಿಕಾರಿಯು ಆ ನವಿಲನ್ನು ಹುಶಾರಾಗಿ ನೀವೇ ತೆಗೆದುಕೊಂಡು ಹೋಗಿ ಕಾಡಿಗೆ ಬಿಟ್ಟುಬಿಡಿ ನಿಮ್ಮ ಮೇಲೆ ನಂಬಿಕೆಯಿದೆ ನಮಗೆ ಎಂದು ಹೇಳಿದಾಗ ನನಗೆ ಮತ್ತು ನವಿಲಿಗೆ ಆದ ಸಂತೋಷ ಅಷ್ಟಿಷ್ಟಲ್ಲ… ತಕ್ಕಷಣ ತಡಮಾಡದೇ ಅದನ್ನು ಮುದ್ದು ಮಾಡಿ ಮೆಲ್ಲಗೆ ಕೈಯಿಂದ ಅದನ್ನು ಹಿಡಿದು ಎದೆಗೆ ಒರಗಿಸಿಕೊಂಡು ಕಾಡಿನ ಕಣಿವೆಗೆ ನಡೆದೆ… ದೇವರನ್ನು ಮನದಲ್ಲಿ ನೆನೆದು ಮೆಲ್ಲಗೆ ನೆಲದ ಮೇಲೆ ನಾ ಇರಿಸಿದೆ ಅಷ್ಟೇ…!
ಅದು ತಕ್ಷಣವೇ ತನ್ನೆಲ್ಲಾ ಗರಿಗಳನ್ನು ಬಿಚ್ಚಿ ರಭಸದಿಂದ ಓಡಿದ ಪರಿ ನೋಡಿದ ನಾನು ಆಶ್ಚರ್ಯಚಕಿತನಾಗಿ ನಿಂತಿದ್ದೆ…. ಎದೆಯಲ್ಲಿ ನಿರಾಳತೆ…. ಏನೋ ಸಾಧಿಸಿದ ಭಾವನೆ ನನ್ನನ್ನು ತೇಲಾಡುವಂತೆ ಮಾಡಿತ್ತು . ನಾವು ಅದೆಷ್ಟೇ ಆರೈಕೆ ಮಾಡಿದರೂ ವನ್ಯಜೀವಿಗಳಿಗೆ ಅದರ ತೆರೆದ ಮನೆಯೇ ಚೆಂದ ಮತ್ತು ಅವಕ್ಕೆ ಇಷ್ಟವೆಂಬುದು ನನಗೆ ಅರಿವಾಯ್ತು. ದೇವರಕೃಪೆಯಿಂದ ಅದು ಸಂಪೂರ್ಣ ಗುಣಮುಖವಾಗಿ ಕಾಡಿಗೆ ಮರಳಿ ಸ್ವಚ್ಚಂದವಾಗಿ ಎಂದಿನಂತೆ ಹಾರಾಡುತ್ತಾ ನಲಿಯುತ್ತಾ ಅದರ ಸಂಸಾರದ ಜೊತೆ ಮೊದಲಿನಂತೆ ನೆಮ್ಮದಿಯಿಂದ ಜೀವಿಸಲಿ ಎಂಬುದು ನನ್ನ ಆಶಯ….💚
-ಹರೀಶ್ ಆರ್ ಅಡವಿ