ಕವಿಯಾದವನು ತಾನು ಬದುಕಿದ ಕಾಲದ ಸಂವೇದನೆಗಳಿಂದ ಪಾರಾಗಿ ಏಕಾಂತವಾಗಿ ಉಳಿಯಲಾರ ಏಕೆಂದರೆ ಅವನು ಬದುಕಿದ ಕಾಲಘಟ್ಟದಲ್ಲಿನ ವ್ಯವಸ್ಥೆ ಅವನ ಮೇಲೆ ಖಚಿತವಾದ ಪರಿಣಾಮವನ್ನು ಬೀರಿರುತ್ತದೆ. ಅಂತೆಯೇ ಕವಿಯು ತನ್ನ ಕಾಲದ ವ್ಯವಸ್ಥೆಯನ್ನು ತಾನೇ ರೂಪಿಸಿಕೊಂಡ ಆಕೃತಿ(ದೃಷ್ಟಿಕೋನ)ಯ ನೆಲೆಯಲ್ಲಿ ವಿಶ್ಲೇಷಿಸುತ್ತಿರುತ್ತಾನೆ. ಹಾಗೆಯೇ ಬದುಕು ಮತ್ತು ಮನುಷ್ಯನನ್ನು ಸೂಕ್ಷ್ಮವಾಗಿ ಗಮನಿಸಿ ಅದಕ್ಕೆ ಮಾತು ಕೊಡುವ ಗುಣವನ್ನು ಬೆಳೆಸಿಕೊಂಡಿರುತ್ತಾನೆ. ಇದು ಒಂದು ರೀತಿಯಲ್ಲಿ ಕವಿಯ ಸಮಾಧಾನಕ್ಕೆ ದಾರಿ ಮಾಡಿಕೊಡುವಂತಹ ಸೃಜನಶೀಲ ಪ್ರಕ್ರಿಯೆ ಎನ್ನಬೇಕು.
ಪ್ರಸ್ತುತ ಈ ಮಾತಿಗೆ ಪೂರಕವಾದ ಗುಣಗಳನ್ನು ಮೈಗೂಡಿಸಿಕೊಂಡಿರುವ ಯುವಕವಿ ಸುರೇಶ್ ಎಲ್. ರಾಜಮಾನೆ ಅವರು ಇತ್ತಿಚಿಗೆ ‘ಕತ್ತಲ ಗರ್ಭದ ಬೆಳಕು’ ಎಂಬ ಗಜಲ್ ಸಂಕಲನವನ್ನು ಹೊರತಂದಿದ್ದಾರೆ. ಇಲ್ಲಿ ಕವಿ ಸುರೇಶ್ ಅವರು ತಮ್ಮ ಸುತ್ತಲ ಜಗತ್ತಿನ ಕುರಿತಾದ ಆತಂಕ, ತಲ್ಲಣ, ಚಡಪಡಿಕೆ , ಸಂತೋಷ ಸಂತೃಪ್ತಿ- ಹೀಗೆ ತಮ್ಮೊಳಗಿನ ಎಲ್ಲ ಭಾವಗಳನ್ನು ಸೇರಿಸಿ ಗಜಲ್ ಗಳ ರೂಪದಲ್ಲಿ ಹೊರಗಿನ ಅಭಿವ್ಯಕ್ತಿಯಾಗಿಸಿದ್ದಾರೆ. ಹೀಗೆ ತಮ್ಮ ಅನುಭವದ ಮೂಲಕವೇ ಕಾವ್ಯವನ್ನು ಅನಾವರಣ ಮಾಡುತ್ತಾರೆ ಇದು ಕವಿ ಸುರೇಶ್ ಅವರ ಹೆಗ್ಗಳಿಕೆ ಎನ್ನುಬೇಕು.
ಈ ಸಂಕಲನದ ‘ಒಲವ ಹನಿ ಒಲುಮೆಯ ಮಣ್ಣು’ ಎಂಬ ಗಜಲ್ ಕವಿಸುರೇಶ್ ಅವರ ಆಲೋಚನಾ ಕ್ರಮಕ್ಕೆ ಕನ್ನಡಿ ಹಿಡಿಯುತ್ತದೆ ಇಲ್ಲಿ ‘ಮಳೆ’ ಎಂಬುದನ್ನು ಮನುಷ್ಯನ ಬದುಕನ್ನು ಸಾಂದ್ರವಾಗಿ ರೂಪಿಸುವುದಕ್ಕೆ ಕಾರಣವಾಗುವ ಹಲವಾರು ಕ್ರಿಯೆಗಳಿಗೆ ರೂಪಕವಾಗಿಸಿದ್ದಾರೆ. ಮನುಷ್ಯನ ಆಸೆ, ಕಾರಣವಾಗಿ ಉಂಟಾಗುವ ರಾಗ-ದ್ವೇಷ ಏನಕೇನ ಕಾರಣವಾಗಿ ಚಿಗುರೊಡೆಯದ ಬದುಕು, ಸುಡುಬಿಸಿಲನೇ ಉಂಡುಟ್ಟು ಬೆಳೆಯುವ ರೈತನ ಹತಾಶೆ, ಭಾವನೆಗಳೇ ಇಲ್ಲದ ಬರಡು ಹೃದಯದಲ್ಲಿ ಜಿನುಗಬೇಕಾಗಿರುವ ಒಲವ ಹನಿ- ಹೀಗೆ ಪ್ರತಿಯೊಂದು ಕ್ರಿಯೆಗೂ ‘ಮಳೆ’ಯನ್ನು ಸಮಾಧಾನ ಸೂಚಕ ರೂಪಕವಾಗಿ ಗಜಲ್ ನಲ್ಲಿ ತರಲು ಪ್ರಯತ್ನಿಸಿದ್ದಾರೆ. ನೆಮ್ಮದಿ, ಸಂತೃಪ್ತಿ ಮತ್ತು ಸಮಾಧಾನವನ್ನು ಸಂಕೇತಿಸುವ ‘ಮಳೆ’ಯು ಆಯಾ ವಿಚಾರಕ್ಕೆ ಸಂಬಂಧಿಸಿದಂತೆ ವಿಭಿನ್ನ ಅರ್ಥವನ್ನು ಧ್ವನಿಸುತ್ತದೆ. ಗಜಲ್ ನ ಈ ಸಾಲುಗಳನ್ನು ಗಮನಿಸಿ:
ನನ್ನೊಳಗಿನ ಕೋಪ ತಣ್ಣಗಾಗಲಿ ಎಂದು ಕಾಯುತ್ತಿರುವೆ ಮಳೆಗಾಗಿ
ಹೊತ್ತುರಿಯುತ್ತಿರುವ ಬೆಂಕಿ ಆರಲೆಂದು ಕಾಯುತ್ತಿರುವೆ ಮಳೆಗಾಗಿ
ಈ ಸಾಲುಗಳು ಮನುಷ್ಯನನ್ನು ಆವರಿಸಿಕೊಂಡಿರುವ ಅರಿಷಡ್ವರ್ಗಗಳ ಕಾರಣವಾಗಿ ಮನುಷ್ಯ ಸಂಬಂಧಗಳು ಸಹ ಹೇಗೆಲ್ಲಾ ಶಿಥಿಲಗೊಳ್ಳುತ್ತವೆ ಎಂಬುದನ್ನು ಥಟ್ಟನೆ ಅರಿವಿಗೆ ತರುತ್ತವೆ. ತನ್ನ ಸಿಟ್ಟನ್ನು ನಿಗ್ರಹಿಸದ ವಿನಃ ಮನುಷ್ಯನು ನೆಮ್ಮದಿಯ ಅನುಭವವನ್ನು ಹೊಂದಲಾರ. ಹಾಗೆಯೇ ರಾಗ ದ್ವೇಷಗಳನ್ನು ತ್ಯಜಿಸದಿದ್ದಲ್ಲಿ ಆದ್ರ್ರವಾದ ಸಂಬಂಧಗಳು ಬೆಸೆದು ಕೊಳ್ಳಲಾರವು ಇದಕ್ಕೆ ನಾವು ಸಂತೃಪ್ತ ಭಾವನೆಯನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ ಎಂಬ ಅರ್ಥವನ್ನು ಗಜಲ್ ನ ಈ ಸಾಲುಗಳು ಧ್ವನಿಸುತ್ತವೆ.
ಕವಿ ಸುರೇಶ್ ಅವರಿಗೆ ತಮ್ಮ ಸುತ್ತಲ ವಸ್ತು ಪ್ರಪಂಚವನ್ನು ನೋಡುವ ಮತ್ತು ಗ್ರಹಿಸುವ ಕಲೆ ಕರಗತವಾಗಿದೆ. ತಮ್ಮನ್ನು ಬಿಡದೇ ಕಾಡುವ ಅನೇಕ ಸಂಗತಿಗಳನ್ನು ವಿಭಿನ್ನ ನೆಲೆಯಲ್ಲಿ ಗ್ರಹಿಸಿ ಆ ಮೂಲಕ ಹೊಸದೊಂದು ಸಾಧ್ಯತೆಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಈ ಸಂಕಲನದಲ್ಲಿ ‘ಸೆರಗ ಮರೆಯಲ್ಲಿ’ ಎಂಬ ಗಜಲ್ ಓದಿಗೆ ದಕ್ಕುತ್ತದೆ. ಕವಿಸುರೇಶ್ ಅವರು ಏನಕೇನ ಕಾರಣವಾಗಿ ಲೋಕದ ವಕ್ರದೃಷ್ಟಿಗೆ ಈಡಾಗುವ ವ್ಯಕ್ತಿಯ ಮನೋತಲ್ಲಣವನ್ನು ಈ ಗಜಲ್ ನಲ್ಲಿ ಅಷ್ಟೇ ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ ಅದೂ ತಮ್ಮ ಗೆಳತಿಯಲ್ಲಿ ಬಿನ್ನವಿಸಿಕೊಳ್ಳುವ ನೆಪದಲ್ಲಿ ಇಲ್ಲದಂಗೆ ಆವರಿಸಿಕೊಂಡಿರುವ ನೋವು, ಸಂಕಟ, ಹತಾಶೆಗಳನ್ನು ಕುರಿತಾಗಿ ಕಣ್ಣೀರಾಗುತ್ತಾರೆ.
ಅವರಿವರ ಬಾಯಿಗೆ ಸಿಕ್ಕು ನಾ ಪ್ರತಿದಿನವೂ ಸಾಯುತ್ತಲಿರುವೆ
ಸೆರಗ ಮರೆಯಲ್ಲಿ ಮರೆಮಾಡಿ ನನ್ನ ಅಡಗಿಸಿಕೊಂಡುಬಿಡು
ಹೀಗೆ ಲೋಕ ನಿಂದನೆಗೆ ಗುರಿಯಾಗಿ ಅಸಹಾಯಕ ಸ್ಥಿತಿ ತಲುಪಿರುವ ಕವಿಯು ತನ್ನ ಸಮಾಧಾನಕ್ಕೆ ಸೆರಗಿನ ಮರೆಯಲ್ಲಿ ಅಡಗಿಸಿಟ್ಟುಕೊಳ್ಳಲು ಸಖಿಯಲ್ಲಿ ನಿವೇದಿಸಿಕೊಂಡಿರುವ ಪರಿ ಅನನ್ಯವಾಗಿದೆ.
ಹಾಗೆ ನೋಡಿದರೆ ಕವಿ ಸುರೇಶ್ ಅವರಿಗೆ ಈ ವ್ಯವಸ್ಥೆಯನ್ನು ಆಳುತ್ತಿರುವ ಅನಿಷ್ಟ ವಿಚಾರಗಳ ಬಗ್ಗೆ ಇನ್ನಿಲ್ಲದ ಅಸಮಾಧಾನವಿದೆ. ಅಂತೆಯೇ ಆ ಅನಿಷ್ಟ ವಿಚಾರ ಧೋರಣೆಗಳನ್ನು ಪ್ರಶ್ನಿಸುವ ನಿಟ್ಟಿನಲ್ಲಿ ‘ಉತ್ತರಕ್ಕಾಗಿಯೇ ಪ್ರಶ್ನೆಗಳು’ ಎಂಬ ಗಜಲ್ ಒಂದನ್ನು ಈ ಸಂಕಲನದಲ್ಲಿ ಕಾಣಬಹುದು. ಮುಗ್ದ ಪ್ರಜೆಗಳನ್ನೇ ತಮ್ಮ ಅಸ್ತ್ರವಾಗಿಸಿಕೊಂಡಿರುವ ಭ್ರಷ್ಟ ರಾಜಕಾರಣ, ಕೆಳವರ್ಗದವರ ಶೋಷಣೆ, ದೇವರು-ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಅಂಧಾನುಕರಣೆ ಇತ್ಯಾದಿ ಸಂಗತಿಗಳ ಕುರಿತಾಗಿ ಈ ಗಜಲ್ ಮತ್ತೆ ಮತ್ತೆ ಮಾತಾಗುತ್ತದೆ.
ತೊಟ್ಟು ಹರಿದ ಚಪ್ಪಲಿಗಳು ಬಾಗಿಲ ಬಳಿಯಲ್ಲಿ ಬಿದ್ದು ಬಿಕ್ಕುತ್ತಿವೆ
ಗರ್ಭಗುಡಿಯಲ್ಲಿ ಕಲ್ಲಾಗಿ ಕುಳಿತ ದೇವರನ್ನು ಕೊಲ್ಲುವವರು ಯಾರಿದ್ದೀರಿಲ್ಲಿ
ಅರೆಕ್ಷಣ ಓದುಗನ ಅಂತಃಕರಣವನ್ನೇ ಕಲಕಿ ಬಿಡುವ ಈ ಸಾಲುಗಳು ದೇವರು-ಧರ್ಮದ ಹೆಸರಿನಲ್ಲಿ ಅಮಾಯಕ ಭಕ್ತರ ಶೋಷಣೆಯೂ ಹೇಗೆಲ್ಲ ನಡೆಯುತ್ತದೆ ಎಂಬುದನ್ನು ಥಟ್ಟನೆ ಅರಿವಿಗೆ ತರುತ್ತದೆ. ಭಕ್ತರಿಗೆ ಕಲ್ಲು ದೇವರನ್ನೇ ನಂಬಿಸಿ ತಮ್ಮ ಹೊಟ್ಟೆನ್ನು ತುಂಬಿಸಿಕೊಳ್ಳುವ ಪೂಜಾರಿಗಳ ಕುತ್ಸಿತ ಬುದ್ಧಿಯನ್ನು ತೆಗಳುವ ನಿಟ್ಟಿನಲ್ಲಿರುವ ಈ ಸಾಲುಗಳು ಕಲ್ಲು ದೇವರನ್ನು ಕೊಂದಾದರೂ ಸರಿ ಇಂತಹ ಶೋಷಣೆಯಿಂದ ಮುಕ್ತವಾಗಬೇಕಿದೆ ಎಂಬ ಗಟ್ಟಿಯಾದ ಆಶಯ ಕವಿ ಸುರೇಶ್ ಅವರದಾಗಿದೆ.
‘ಕತ್ತಲ ಗರ್ಭದ ಬೆಳಕು’ ಈ ಸಂಕಲನದಲ್ಲಿ ‘ಅವ್ವ ಮೊದಲ ಗುರು’ ಎಂಬ ಅವ್ವನ ಬಗ್ಗೆ ಬರೆದಿರುವ ಗಜಲ್ ಇದೆ ಅವ್ವನ ಅಗಾಧವಾದ ಪ್ರೀತಿಯನ್ನು ಹೊಂದಿರುವ ಕವಿ ಸುರೇಶ್ ಅವರು ಅತ್ಯಂತ ಆಪ್ತವಾಗಿ ಈ ಗಜಲನ್ನು ಕಟ್ಟಿಕೊಟ್ಟಿದ್ದಾರೆ. ನಮ್ಮನ್ನೆಲ್ಲ ಪೆÇರೆಯುವ, ಸದಾ ಒಳಿತನ್ನೇ ಬಯಸುವ, ನಮ್ಮೆಲ್ಲ ಏಳ್ಗೆಯನ್ನು ಸಂಭ್ರಮಿಸಿ ಸುಖಿಸುವ ಎಲ್ಲರ ಪಾಲಿನ ದೇವರೆಂದರೆ ತಾಯಿ ಎನ್ನಬೇಕು. ತಾಯಿಯಲ್ಲಿ ದೇವರುಗಳನ್ನು ಕಾಣುವುದು ಒಂದು ತೆರನಾದರೆ ತಾಯಿಯನ್ನೇ ದೇವರೆಂದುಕೊಳ್ಳುವುದಕ್ಕೆ ಹಲವಾರು ಕಾರಣಗಳನ್ನು ಕವಿಸುರೇಶ್ ಅವರು ತಮ್ಮ ಗಜಲ್ಲ್ ನಲ್ಲಿ ಕಟ್ಟಿಕೊಟ್ಟಿದ್ದಾರೆ. ಇಡಿಯಾಗಿ ಗಜಲ್ ಅನ್ನು ಓದಿದಾಗ ತಾಯಿಯ ಮಮತೆ ಎಂಬುದು ಅದೆಷ್ಟು ಆದ್ರ್ರವಾಗಿರುತ್ತದೆ ಎಂಬುದು ಅನುಭವಕ್ಕೆ ಬರುತ್ತದೆ. ಅಲ್ಲದೆ ಈ ಅನುಭವದಿಂದಾಗಿ ಇತ್ತಿಚಿಗೆ ನಮ್ಮನ್ನು ಅಗಲಿದ ಮಹಾರಾಷ್ಟ್ರದ ಅನಾಥ ಮಕ್ಕಳ ತಾಯಿ ಸಿಂಧುತಾಯಿ ಸಪ್ಕಾಲ್ ಅವರ ಮಾತೃತ್ವದ ಬಗ್ಗೆ ನೆನಪಾಗುತ್ತದೆ.
ಸಂಕಲನದಲ್ಲಿನ ‘ಕೂಗು’ ಎಂಬ ಶಿರ್ಷಿಕೆಯ ಇನ್ನೊಂದು ಮಹತ್ವದ ಗಜಲ್ ಕವಿಸುರೇಶ್ ಅವರ ವಿಭಿನ್ನ ಆಲೋಚನಾ ಕ್ರಮಕ್ಕೆ ಕನ್ನಡಿ ಹಿಡಿಯುತ್ತದೆ. ವ್ಯವಸ್ಥೆಯ ಅತ್ಯಂತ ಕೆಳಸ್ತರದ ಜನರ ನಿರ್ದಯಿ ಬದುಕಿನ ಮೇಲೆ ಬೆಳಕು ಚೆಲ್ಲಲೆತ್ನಿಸುತ್ತದೆ. ತಮಗೆ ಬಂದ ದಯನೀಯ ಬದುಕಿನಿಂದಾಗಿ ಹತಾಶಯದ ಸ್ಥಿತಿ ತಲುಪಿದ ಇಂಥವರ ನೋವು ಅದಾವ ಪರಿ ಇರುತ್ತದೆ ಎಂಬುದನ್ನು ಓದುಗನಿಗೆ ಮನದಟ್ಟು ಮಾಡುತ್ತದೆ. ಹೀಗೆ ಅವರ ಕಣ್ಣೀರ ಹನಿಯೂ ಸಹ ಕರಗಿ ಕಣ್ಣೀರಾಗಿ ಹರಿಯುತ್ತಿದೆ ಎಂಬ ರೂಪಕದ ಮೂಲಕ ಅವರ ಕರಾಳ ಬದುಕಿನ ವಿವಿಧ ಮುಖಗಳನ್ನು ಕಾಣಿಸಲು ಪ್ರಯತ್ನಿಸಿದ್ದಾರೆ. ಇದಲ್ಲದೆ ಓದುಗರನ್ನು ಆಪ್ತವಾಗಿ ಅವರಿಸಿ ಬಿಡದೇ ಕಾಡುವ ಗುಣವನ್ನು ಹೊಂದಿರುವ ಇನ್ನಷ್ಟು ಗಜಲ್ಗಳು ಈ ಸಂಕಲನದಲ್ಲಿವೆ. ಗಜಲ್ ಕಟ್ಟುವ ಕ್ರಮದ ಹೊರತಾಗಿ ಗಜಲ್ ಒಂದಕ್ಕೆ ಅಳವಡಿಸುವ ವಸ್ತು ವಿಷಯದ ಕುರಿತಾಗಿಯೂ ಕವಿಸುರೇಶ್ ಅವರು ಇನ್ನಷ್ಟು ಗಮನವಹಿಸಬೇಕಿದೆ. ಕವಿಯನ್ನು ಕಾಡುವ ತನ್ನ ಲೋಕದ ಸಂಗತಿಗಳನ್ನು ಒಳಗಣ್ಣಿನಿಂದ ನೋಡಿ ಗ್ರಹಿಸುವ ಗುಣವನ್ನು ವಿಶಾಲಗೊಳಿಸಿಕೊಂಡು ಗಜಲ್ ನ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಕವಿ ಇನ್ನಷ್ಟು ಶ್ರಮವಹಿಸಿದರೆ ನಾಡಿನ ಪ್ರಮುಖ ಗಜಲ್ ಕವಿಯಾಗಿ ಗುರುತಿಸಿಕೊಳ್ಳುವುದರಲ್ಲಿ ಸಂದೇಹವಿಲ್ಲ.
-ಕಲ್ಲೇಶ್ ಕುಂಬಾರ್