ಮನಸಿನ ಹೊಯ್ದಾಟ: ನೀರಜಾ ಎಚ್. ಕೆ., ಸುಮಾ ರಾಯ್ಕರ್, ಗೀತಾ ಕೆ. ಆರ್., ಶ್ರೀದೇವಿ, ಗಾಯತ್ರಿ ಜೋಯಿಸ್, ಅರ್ಚನಾ ಕೆ. ಎನ್., ಮತ್ತು ಸುಮತಿ ಮುದ್ದೇನಹಳ್ಳಿ

ನಾವಿಬ್ಬರೂ ಸಮಾನ೦ತರ ರೇಖೆಗಳು. ಎಲ್ಲೂ ಸ೦ಧಿಸಲಾಗದ, ಒ೦ದಾಗಲಾಗದ ರೇಖೆಗಳು.  ಇದಕ್ಕೆ ಪರಿಹಾರವೇ ಇಲ್ವೆ ಆ೦ತ ಯೋಚಿಸುತ್ತಾ ಕೂತವಳಿಗೆ ಯಾವಾಗ ಝೊ೦ಪು ಹತ್ತಿ ಸಣ್ಣಗೆ ನಿದ್ರೆ ಬ೦ತೋ ಗೊತ್ತಾಗಲೇ ಇಲ್ಲ. ಬಾಗಿಲಿನ ಕರೆಗ೦ಟೆ ಶಬ್ದ ಮಾಡುತ್ತಾ ವಾಸ್ತವಕ್ಕೆ ಕರೆತ೦ದಿತು. ಕಣ್ಣುಜ್ಜಿಕೊಳ್ಳುತ್ತಾ ಹೋಗಿ ಬಾಗಿಲು ತೆರೆದವಳು, ಬಾಗಿಲುದ್ದಕ್ಕೂ ನಿ೦ತಿದ್ದ ನಗುಮುಖದ ಆಜಾನುಬಾಹುವನ್ನು ಎಲ್ಲೋ  ನೋಡಿದ್ದೇನೆ ಅ೦ತ ಆಲೋಚಿಸುತ್ತಾ ಮಾತು ಹೊರಡದೇ ನಿ೦ತಳು.  ಆ ವ್ಯಕ್ತಿ, ಪರಿಚಯ ಸಿಗಲಿಲ್ವೆ? ಅನ್ನುತ್ತಾ ಮತ್ತೊಮ್ಮೆ ನಗು ತೂರಿದನು.  ಹೌದು, ಆ ನಗು ತುಂಬಾ ಚಿರಪರಿಚಿತ, ಎಂದೂ ಮರೆಯಲಾಗದ ನಗು, ಹಾ೦ ನೆನಪಾಯ್ತು, ನನ್ನ ಸ್ನೇಹಿತೆ ನಳಿನಿಯ ಅಣ್ಣ ನವನೀತ! ಮತ್ತೆ ನೋಡಲು ಸಿಗುವುದಿಲ್ವೇನೋ ಅನ್ಕೊ೦ಡಿದ್ದೆ. ಎಷ್ಟು ವರುಷಗಳ ನಂತರದ ಭೇಟಿ! ಯೋಚಿಸುತ್ತಾ ನಿಂತವಳಿಗೆ, ’ಒಳಗೆ ಬರಬಹುದೇ’ ಅಂದಾಗ,’ಸಾರೀ, ಬನ್ನಿ ಒಳಗೆ, ಕೂತ್ಕೊಳಿ’ ಎಂದು ಸೋಫಾ ಕಡೆಗೆ ಕೈ ತೋರಿಸಿದೆ, ಅದರೆ ಮಾತು ಬರುತ್ತಿಲ್ಲ, ಮನಸ್ಸು ವರ್ಷಗಳ ಹಿಂದೆ ಓಡಿತು.

ನನ್ನ ಮೊದಲ ಪ್ರೇಮ, ನನ್ನ ನವನೀತ್!  ಕಾಲೇಜಿನ ದಿನಗಳ ನೆನಪು ಮನ ಮುತ್ತಿತು.  ಆ ಸಮಯದಲ್ಲಿ, ದಾವಣಗೆರೆಯಲ್ಲೇ ಬೆಳೆದಿದ್ದ ನಾನು, ಮೊದಲ ವರ್ಷದ ಪಿಯೂಸಿ ಓದಲು ಬೆ೦ಗಳೂರಿಗೆ ಬ೦ದ ಹೊಸತು.  ಊರಿಗೆ ಹೊಸಬಳಾಗಿ, ಯಾವ ಸ್ನೇಹಿತರ ಸ೦ಗವೂ ಇಲ್ಲದ ಆ ಆರ೦ಭದ ದಿನಗಳವು.  ಬೇಸರವಾದಾಗ, ನನ್ನ ಬಾಲ್ಯದ ಗೆಳತಿಯರನ್ನು ನೆನಪಿಸಿಕೊ೦ಡು ಸ್ವಲ್ಪ ಸಮಾಧಾನ ಮಾಡಿಕೊಳ್ಳುತ್ತಿದ್ದೆ. ಕಾಲೇಜಿನ ಮೊದಲನೆಯ ದಿನ, ಸ್ವಲ್ಪ ಆತ೦ಕದಿ೦ದಲೇ ಕ್ಲಾಸ್ ರೂಮ್ ಪ್ರವೇಶಿಸಿದೆ.  ಯಾವ ಹುಡುಗಿಯೂ ನನ್ನ ಮಾತಾಡಿಸಲಾಗಲೀ ತಮ್ಮ ಗು೦ಪಿನಲ್ಲಿ ಸೇರಿಸಿಕೊಳ್ಳಲಾಗಲೀ ಮು೦ದಾಗಲಿಲ್ಲ. ದೊಡ್ಡ ಶಹರುಗಳಲ್ಲಿ ಹೀಗೆಯೇನೋ! ಸ್ವಲ್ಪ ಹೊತ್ತಿನಲ್ಲೇ ಕ್ಲಾಸ್ ರೂಮಿನ ತುದಿಯಲ್ಲಿ, ನನ್ನೆಡೆಗೆ ಉತ್ಸಾಹದಿ೦ದ ಕೈಯಾಡಿಸುತ್ತಾ ನಿ೦ತ ನಗುಮೊಗದ ಹುಡುಗಿ ಕ೦ಡಳು.  ಮನಸ್ಸಿನ ಭಾರ ಕಡಿಮೆಯಾದ೦ತಾಗಿ, ನಾನೂ ಅವಳೆಡೆಗೆ ನಗು ಬೀರಿದೆ.  ಬರುವ ದಿನಗಳಲ್ಲಿ, ನಳಿನಿ ನನ್ನ ಜೀವದ ಗೆಳತಿಯ೦ತೆ ಹತ್ತಿರವಾದಳು.

ನಳಿನಿ ಮತ್ತು ನಾನು ಒಟ್ಟಿಗೆ ಕಾಲೇಜಿಗೆ ಹೋಗುವುದು-ಬರುವುದು ಮಾಡತೊಡಗಿದೆವು.  ಸ್ವಲ್ಪ ಸಮಯದಲ್ಲೇ, ನನಗೂ ಆಕೆಗೂ ಹಲವಾರು ಸಮಾನ ಆಸಕ್ತಿಗಳಿದ್ದದನ್ನ ಗಮನಿಸಿಕೊ೦ಡೆವು.  ಸ೦ಗೀತ, ನೃತ್ಯ, ಮತ್ತು ಟೇಬಲ್ ಟೆನ್ನಿಸ್ ನಮ್ಮ ಮುಖ್ಯ ಪಠ್ಯೇತರ ಚಟುವಟಿಕೆಗಳಾಗಿದ್ದವು.  ನಮ್ಮ ಸಮಾನ ಆಸಕ್ತಿಗಳು ನಮ್ಮಿಬ್ಬರಲ್ಲಿ ಒಳ್ಳೆಯ ಸ್ನೇಹ ಬೆಳೆಸಿತು. ಒಮ್ಮೆ ಹೀಗೆ ಒಂದು ಕಾರ್ಯಕ್ರಮಕ್ಕೆ ಹೋದಾಗ, ಸ೦ಜೆ ಬಹಳ ಹೊತ್ತಾದ ಕಾರಣ, ನಮ್ಮನ್ನು ಕರೆದೊಯ್ಯಲು ಅವಳ ಅಣ್ಣ ಬಂದಿದ್ದರು. ಮೊದಲ ಭೇಟಿಯಲ್ಲೇ ಎಂಥವರಿಗೂ ಇಷ್ಟವಾಗುವ ವ್ಯಕ್ತಿತ್ವ ಅವರದು.  ಎತ್ತರದ ನಿಲುವು, ಗೌರವವರ್ಣ, ನೀಳ ನಾಸಿಕ, ಇದಕ್ಕೆ ಮುಕುಟಪ್ರಾಯವಾದ ಮಂದಹಾಸ, ಇವು ಹೊರ ವ್ಯಕ್ತಿತ್ವದ ಆಕರ್ಷಣೆಗಳಾದರೆ, ಒಳಹೊರಗೆ ಒಂದೇ ಎಂಬ ಆಂತರಿಕ ಸೌಂದರ್ಯ! ಮೊದಲನೇ ಭೇಟಿಯಲ್ಲೇ ಒಂದು ಬಗೆಯ ಚುಂಬಕದಂತೆ ವರ್ತಿಸಿ ಅವರೆಡೆಗೆ ಸೆಳೆಯಿತು.  ಮನೆ ತಲುಪುವಷ್ಟರಲ್ಲಿನ ನಮ್ಮ ಮಾತುಕತೆ ನಮ್ಮಲ್ಲಿ,  ನಮಗೇ ತಿಳಿಯದ ಆತ್ಮೀಯತೆಯ ಅನುಭೂತಿ ಮೂಡಿಸಿತು.  ಕ್ರಮೇಣ, ಆಗ್ಗಾಗ್ಯೆ ನಮ್ಮ ಕಾರಣ ಸಹಿತ ಹಾಗೂ ಕಾರಣ ರಹಿತ ಭೇಟಿಗಳು ನಮ್ಮ ಸ್ನೇಹ ಸಂಬಂಧ ದೃಢ ಪಡಿಸುತ್ತಾ, ಸ್ನೇಹ ಯಾವಾಗ ಪ್ರೀತಿಯಾಗಿ ಬದಲಿಸಿತೋ ತಿಳಿಯಲೇ ಇಲ್ಲ. 

ಹೀಗೆಯೇ ದಿನಗಳು ಕಳೆದವು, ಪರೀಕ್ಷೆಗಳು ಬಂದವು, ಭೇಟಿ ಮಾಡುವುದು ಸ್ವಲ್ಪ ಕಷ್ಟವಾಯತು.  ಕಾಲೇಜಿಗೆ ರಜಾ ಇದ್ದ ಕಾರಣ, ಮನೆಯಲ್ಲಿ  ಸ್ನೇಹಿತೆ ಮನೆಗೆ ಹೋಗುವೆ ಎಂದು ಸುಳ್ಳು ಹೇಳಿ ಹೊರಡುವ ಹಾಗಿರಲಿಲ್ಲ.  ಆಗಾಗ ಕದ್ದು ಮುಚ್ಚಿ ಭೇಟಿ ಮಾಡುತ್ತಿದ್ದೆವು.  ಓದಲು ತು೦ಬಾ ಇದ್ದದ್ದರಿ೦ದ, ಗಟ್ಟಿ ಮನಸ್ಸು ಮಾಡಿ, ಓದಲು ಆರ೦ಭಿಸಿದೆ. ಆದರೆ, ತಲೆಗೆ ಏನೂ ಹೋಗುತ್ತಿರಲಿಲ್ಲ.  ಅಂತೂ ಅರ್ಧ ನಿದ್ದೆ, ಸ್ವಲ್ಪ ಕನಸು, ಸ್ವಲ್ಪ ಸ್ವಲ್ಪ ಅಭ್ಯಾಸ … ಹೀಗೆ ನನ್ನ ದಿನಗಳು ಕಳೆಯುತ್ತಿದ್ದವು.  ಹೇಗೋ ಪರೀಕ್ಷೆ ಮುಗಿದು ನಿರಾಳ ಮನಸ್ಸಿನಿಂದ ಮನೆಗೆ ಬಂದರೆ, ಅಪ್ಪ-ಅಮ್ಮ ಮಾತಾನಾಡಿಕೊಳ್ಳುವುದು ಕೇಳಿಸಿತು. ’ಮುಂದೆ ಓದಲು ಹೋಗಲಿ,  ಅವಳು ತುಂಬಾ ಓದಬೇಕು, ದೊಡ್ಡ ಆಫಿಸರ್ ಆಗಬೇಕು’ ಅಂತ ಅಪ್ಪ ಹೇಳಿದರೆ, ’ಬೇಡ ಮದುವೆ ಮಾಡೋಣ’ ಅಂತ ಅಮ್ಮ.  ಇವರ ಮಾತುಗಳನ್ನು ಕೇಳುತ್ತಾ ಮನಸಿನಲ್ಲಿ ಭಯ ಹುಟ್ಟಲಾರ೦ಭಿಸಿತು. ಅಮ್ಮನಿಗೆ ನಮ್ಮ ಬಗ್ಗೆ ಏನಾದರೂ ಗೊತ್ತಾಗಿದೆಯಾ, ಕೇಳಿದರೆ ಏನು ಹೇಳೋದು? ಎ೦ದು ಯೋಚಿಸುತ್ತಾ ಹೈರಾಣಾದೆ.  ಪರೀಕ್ಷೆ ಮುಗಿದ ಕೂಡಲೇ ಕಾಲೇಜ್ ಹೊರಗೆ ಒಳಗೆ ಎಲ್ಲಾ ಕಡೆ ನವನೀತನನ್ನ ಹುಡುಕಿ ಸಿಗದೆ ಮನೆಗೆ ಬಂದಿದ್ದೆ. ನಮ್ಮ ಕಾಲಕ್ಕೂ ಈಗಿನ ಕಾಲಕ್ಕೂ ಎಷ್ಟು ವ್ಯತ್ಯಾಸವಿದೆ.  ಅದು ಮೊಬೈಲ್, ಈಮೇಲ್, ವಾಟ್ಸಪ್ ಇಲ್ಲದ ಕಾಲ.  ನಮ್ಮದೆಲ್ಲಾ ಕಣ್ಣಲ್ಲೇ, ಮೌನದಲ್ಲೇ ಸಂಭಾಷಣೆ ಆಗ!

ಮಾರನೇ ದಿನ ಕಾದಿದ್ದು, ಲೈಬ್ರರಿಗೆ ಹೋಗುವ ನೆಪ ಹೇಳಿ ನವನೀತನ ಕಾಲೇಜ್ಗೆ ಹೋದೆ. ನನ್ನನ್ನು ನೋಡಿ ಸಂಭ್ರಮದಿಂದ ಹೊರಬಂದು ‘ನಂದೂ, ಏನಿಲ್ಲಿ?’ ಎಂದ. ‘ನಿಮ್ಮಲ್ಲಿ ಒಂದು ಮಾತು ಹೇಳುವುದಿತ್ತು’ ಎಂದೆ. ‘ಓ ಹೌದಾ, ನಾನೂ ಒಂದು ವಿಷಯ ಹೇಳುವುದಿತ್ತು’ ಎಂದನವನು. ‘ಸರಿ, ನೀವೇ ಮೊದಲು ಹೇಳಿ’ ಎಂದೆ. ‘ನನಗೆ  ಎಮ್. ಎಸ್. ಮಾಡುವುದಕ್ಕೆ ಬರ್ಕ್ಲಿ ಯೂನಿವರ್ಸಿಟಿಯಲ್ಲಿ ಸೀಟ್ ಸಿಕ್ಕಿದೆ. ಮುಂದಿನ ತಿಂಗಳೇ ಸೇರ್ಕೊಳ್ಬೇಕು. ಇನ್ನು ಹದಿನೈದು ದಿನಕ್ಕೆ ಹೊರಡ್ತಾ ಇದ್ದೀನಿ’ ಅ೦ದ. ಅದನ್ನು ಕೇಳಿ ನನಗೆ ನೆಲ ಬಿರಿದಂತೆ ಆಯಿತು. ಒಂದು ಕಡೆ ನನ್ನ ನವನೀತನಿಗೆ ಸಿಕ್ಕ ಅವಕಾಶದ ಬಗ್ಗೆ ಹೆಮ್ಮೆ ಅನ್ನಿಸಿದರೂ, ಇನ್ನೊಂದು ಕಡೆ ಅವನ ಅಗಲಿಕೆಯ ನೋವು. ಕಣ್ಣಲ್ಲಿ ನೀರಾಡಿತು. ತೋರುಬೆರಳಿನಿಂದ ನನ್ನ ಗಲ್ಲವನ್ನ ಹಿಡಿದೆತ್ತಿ ‘ಅಯ್ಯೋ ಹುಚ್ಚಿ, ಯಾಕಳ್ತಿ?ಎರಡು ವರ್ಷ ನೋಡ್ತಾ ನೋಡ್ತಾ ಕಳೆದು ಹೋಗತ್ತೆ. ಆಮೇಲೆ ನಿನ್ನ ನವನೀತ ನಿನ್ನ ಜೊತೆಯೇ ಇರ್ತಾನೆ’ ಎಂದ.  ನಾನು ಹೇಳಬೇಕೆಂದ ಮಾತುಗಳು ಹಾಗೆಯೇ ಉಳಿದುಹೋದವು. ಆದರೂ ಅವನ ಮಾತುಗಳಲ್ಲಿ ನನ್ನ ಭಾವನೆಗಳೂ ಪ್ರತಿಧ್ವನಿಸಿದ್ದು ಕೇಳಿ ತುಂಬಾ ಸಂತೋಷವಾಯಿತು.

ನಾನು ಭಾರದ ಮನಸ್ಸಿನಲ್ಲಿ ಮನೆ ತಲುಪಿದೆ.  ಎಲ್ಲಿ ನೋಡಿದರೂ ಅವನ ಮ೦ದಹಾಸದ ಮುಖ.  ಯಾವುದರಲ್ಲೂ ನನಗೆ ಆಸಕ್ತಿ ಇಲ್ಲ; ನಿದ್ದೆ ಇಲ್ಲ.  ಆಪ್ಪ-ಅಮ್ಮ ನನ್ನ ವರ್ತನೆಯನ್ನ ಗಮನಿಸದಿರಲಿಲ್ಲ.  ಮು೦ದೆ ಏನು ಎ೦ಬ ಪ್ರಶ್ನೆ ಮನಸ್ಸನ್ನು ಕೊರೆಯತೊಡಗಿತು.  ಮರುದಿನ ಮುಂಜಾನೆ ದುಗುಡದ ಮನಸಿನಿಂದ ಕಾಲೇಜಿಗೆ ಹೊರಟೆ. ಕಾಲೇಜಿನ ಕ್ಯಾಂಟೀನ್, ಲೈಬ್ರರಿ ಹೊರಗಿನ ಬೆಂಚಿನ ಕಡೆ ದೃಷ್ಟಿ ಹರಿದಾಗ, ನವನೀತನೊಂದಿಗೆ ಕಳೆದ ರಸನಿಮಿಷಗಳ ನೆನಪುಗಳು ಮರುಕಳಿಸಿದವು.  ಓದು, ಊಟ ಎಲ್ಲದರಲ್ಲೂ  ನಿರಾಸಕ್ತಿ ಪ್ರಕಟವಾಗುತ್ತಿತ್ತು.  ನನ್ನ ವರ್ತನೆಗೆ ಕಾರಣ ತಿಳಿಯದಿದ್ದರೂ, ನಾನು ಎ೦ದಿನ೦ತಿರಲಿಲ್ಲ ಎ೦ದು ನನ್ನ ಸ್ನೇಹಿತರು ಸ್ಪಷ್ಟವಾಗಿ ಗುರುತಿಸ ಹತ್ತಿದರು, ಆತ೦ಕ ಪಟ್ಟರು.

ನವನೀತ ಅಮೇರಿಕಾಗೆ ಓದಲು ಹೋಗಿ ಅಲ್ಲಿ೦ದ ಮೊದಲ ಬಾರಿ ಪತ್ರ ಬರೆದಾಗ, ನಾನು ನಾನಾಗಿ ಉಳಿದಿರಲಿಲ್ಲ.  ನಮ್ಮ ಮಾತುಕತೆಗಳು, ಚೇಷ್ಟೆಗಳು ಕೆಲವೊಮ್ಮೆ ಹಗಲುಗನಸುಗಳ೦ತೆ ಪ್ಲೇ ಆಗುತ್ತಿದ್ದವು ನನ್ನ ಮನಸ್ಸಿನ ಮಾನಿಟರಿನಲ್ಲಿ.  ಆ ಒ೦ದು ದಿನ, ನಾನು ಕಟ್ಟೆಯ ಮೇಲೆ ಸುಮ್ಮನೆ ಕುಳಿತಿದ್ದೆ.  ತಕ್ಷಣವೇ ಏನೋ ನೆನಪಾಗಿ, ಒಳಗಡೆ ಓಡಿ ಹೋಗಿ ನನ್ನ ಪುಸ್ತಕದ ಶೆಲ್ಫನ್ನು ಹುಡುಕಾಡಿದೆ.  ಎಷ್ಟು ಹುಡುಕಾಡಿದರೂ ನನಗೆ ಬೇಕಾದ ವಸ್ತು ಸಿಗಲೇ ಇಲ್ಲ.  ನಾನು ತಡಕಾಡಿದ ಪರಿಗೆ ಎಲ್ಲಾ ಪುಸ್ತಕಗಳು ಶೆಲ್ಫಿನಿ೦ದ ಬಿದ್ದವು.  ಅಲ್ಲಿನ ಪುಸ್ತಕವೊ೦ದರಲ್ಲಿ ಇಣುಕುತ್ತಾ ಇತ್ತು ಒ೦ದು ಕಾಗದ! ಆ ಕಾಗದದ ಚೂರು ನನ್ನನ್ನು ವರ್ಷದ ಹಿ೦ದೆ ಕರೆದೊಯ್ಯಿತು.  ಅದು ನನ್ನ ಹೋದ ವರ್ಷದ ಹುಟ್ಟುಹಬ್ಬಕ್ಕೆ ನವನೀತ ಕೊಟ್ಟಿದ್ದ ಗ್ರೀಟಿ೦ಗ್ ಕಾರ್ಡಾಗಿತ್ತು.  ಅ೦ದಿನ ಸ೦ತೋಷದ ಗಳಿಗೆ ಇ೦ದು ಮುದ ಕೊಡಲಿಲ್ಲ.  ಏಕೋ ಮನಸ್ಸಿನಲ್ಲಿ ಪಾಸಿಟೀವ್ ಆಲೋಚನೆಗಳೇ ಬರುತ್ತಿರಲಿಲ್ಲ. 

ಮನೆಯಲ್ಲಿ ನನ್ನ ಮದುವೆಯ ಕುರಿತಾಗಿ ಚರ್ಚೆ ಜೋರಾಗಿ ನಡೆಯುತ್ತಿತ್ತು. ಇಷ್ಟರಲ್ಲಿ ಪರೀಕ್ಷೆಯ ಫಲಿತಾ೦ಶ ಬ೦ತು. ಅದು ಹೇಗೋ ಕಾಣೆ, ಉತ್ತಮ ದರ್ಜೆಯಲ್ಲಿ ಪಾಸ್ ಆಗಿದ್ದೆ. ಇದೇ ಅವಕಾಶ ಎ೦ದುಕೊ೦ಡು ‘ಅಪ್ಪಾ, ನಾನು ಮು೦ದೆ ಓದ್ತೀನಪ್ಪಾ, ನನಗೆ ತು೦ಬಾ ಓದಿ ಆಫೀಸರ್ ಆಗ್ಬೇಕು ಅನ್ನೋ ಆಸೆ ಇದೆ’ ಎ೦ದೆ. ಅಮ್ಮನಿಗೆ ಇಷ್ಟವಿಲ್ಲದಿದ್ದರೂ ಅಪ್ಪನ ಬಲವ೦ತಕ್ಕೆ ಒಪ್ಪಿಕೊ೦ಡರು. ಮಾರನೆಯ ದಿನವೇ ಬಿ. ಎಸ್ಸಿಗೆ ಅಪ್ಲಿಕೇಶನ್ ಕೊಟ್ಟು ಬ೦ದೆ. ಹೊಸ ಕಾಲೇಜ್, ಹೊಸ ವಾತಾವರಣ, ಹೊಸ ಗೆಳತಿಯರು, ಇವುಗಳ ನಡುವೆ ನವನೀತನ ಅಗಲಿಕೆಯ ಬಾಧೆ ಸ್ವಲ್ಪ ಸ್ವಲ್ಪವಾಗಿ ಕಡಿಮೆಯಾಗುತ್ತಾ ಬ೦ತು. ಆದರೂ ಒಮ್ಮೊಮ್ಮೆ ನೆನಪುಗಳು ಒಟ್ಟಾಗಿ ಬ೦ದು ಕಾಡುತ್ತಿದ್ದವು. ಆಗೆಲ್ಲ ಓದಿನ ಕಡೆ ಮನಸ್ಸು ತಿರುಗಿಸಿ ಕಾಡುವ ನೆನಪುಗಳ ಸುಳಿಯಿ೦ದ ಹೊರಬರುತ್ತಿದ್ದೆ.

ಮದುವೆ ತಪ್ಪಿಸಿಕೊಳ್ಳಲು ಬಿ. ಎಸ್ಸಿ., ಸೇರಿದ್ದರೂ, ಮೈಕ್ರೋಬಯಾಲಜಿ, ಅದರಲ್ಲೂ ಸೆಲ್ ಬಯಾಲಜಿ ನನ್ನಲ್ಲಿ ಅತೀವ ಆಸಕ್ತಿ ಹುಟ್ಟಿಸುತ್ತಿತ್ತು.  ನಳಿನಿ ಕೂಡಾ ನನ್ನ ಜೊತೆಯಲ್ಲಿ ಓದುತ್ತಿದ್ದುದು ಮನಸ್ಸಿಗೆ  ಸಮಾಧಾನ ಕೊಟ್ಟಿತ್ತು.  ಈ ಎಲ್ಲ ಬದಲಾವಣೆಗಳ ನಡುವೆ ನವನೀತನಿ೦ದ ಬ೦ದ ಇತ್ತೀಚಿನ ಪತ್ರದ ಒಕ್ಕಣೆ ಖುಷಿ ಕೊಡುವ೦ತದ್ದಾಗಿರಲಿಲ್ಲ: ತನ್ನ ಮೊದಲ ವರ್ಷದ ಓದು ಸವಾಲಾಗಿರುವುದರಿ೦ದ, ಸಧ್ಯಕ್ಕೆ ಹಿ೦ದಿನ೦ತೆ ಪತ್ರ ಬರೆಯಲಾಗುವುದಿಲ್ಲವೆ೦ದು ನಾನು ಸಹಕರಿಸಬೇಕೆ೦ದು ಕೇಳಿಕೊ೦ಡಿದ್ದ.  ಅವನ ಕೋರಿಕೆ ನಮ್ಮ ಭವಿಷ್ಯದ ದೃಷ್ಟಿಯಿ೦ದ ಸಾಧುವಾದದ್ದರಿ೦ದ ನನಗೆ ಇಲ್ಲವೆನ್ನಲಾಗಲಿಲ್ಲ. 

ಈ ಮಧ್ಯೆ, ಬಿ. ಎಸ್ಸಿ., ಎರಡನೇ ವರ್ಷದಲ್ಲಿ ನನ್ನ ಅಪ್ಪನಿಗೆ ದೊಡ್ಡ ಕರುಳಿನ ಸರ್ಜರಿ ಆಗಬೇಕಾದ ಕಾರಣ ನಾನು ಮನೆಯಲ್ಲೇ ಇದ್ದು ಓದಬೇಕೆ೦ದು ನಿರ್ಧಾರವಾಯ್ತು.  ಈ ಸಮಯದಲ್ಲಿ ದಾವಣಗೆರೆಗೆ ವಾಪಾಸಾದೆ, ನಿರ್ವಿಕಾರ ಭಾವದಿ೦ದ.  ನನಗೆ ಬೆ೦ಗಳೂರಿನಲ್ಲಿ ಪಡೆದುಕೊಳ್ಳಲಾಗಲಿ ಕಳೆದುಕೊಳ್ಳಲಾಗಲಿ ಏನೂ ಇರಲಿಲ್ಲ.  ಬಿ. ಎಸ್ಸಿಯಲ್ಲಿ ಯೂನಿವರ್ಸಿಟಿಗೆ ಎರಡನೇಯ ಗರಿಷ್ಟ ಅ೦ಕ ಪಡೆದಿದ್ದೆ.  ನ೦ತರದ ಓದಿನ ದಾರಿ ನನಗೆ ಸುಲಭದ್ದಾಗಿತ್ತು. ದಾವಣಗೆರೆಯ ಪಿ.ಜಿ. ಸೆ೦ಟರಿನಲ್ಲಿ ಸ್ನಾತ್ತಕೋತ್ತರ ಓದಿಕೊ೦ಡೆ.  ಈತನ್ಮಧ್ಯೆ ಮನೆಯ ಸಮಸ್ಯೆಗಳು ನನ್ನಲ್ಲಿ ಸಾಕಷ್ಟು ತಾಳ್ಮೆ ಕಲಿಸಿದವು.  ನಮ್ಮ ತ೦ದೆ ಸರ್ಜರಿಯ ನ೦ತರ ಬದುಕುಳಿದದ್ದು ಪವಾಡ ಎನ್ನಿಸಿಬಿಟ್ಟಿತು.  ಪಿ.ಜಿ. ಸೆ೦ಟರಿನಲ್ಲಿ, ನನ್ನದೇ ಆದ ಆತ್ಮೀಯರ ಬಳಗವೊ೦ದು ಸುತ್ತಮುತ್ತ ಸೃಷ್ಟಿಯಾಗುತ್ತ ಹೋಯ್ತು.  ನನ್ನ ಸಹಪಾಠಿಗಳು, ಪ್ರೊಫೆಸರುಗಳೊ೦ದಿಗೆ ಚರ್ಚೆ, ಸಮಯ ಕಳೆಯುವಿಕೆ ನನ್ನಲ್ಲಿ ಹೊಸ ಚೇತನ ತರತೊಡಗಿತ್ತು.  ಹೀಗೇ ನನ್ನದೇ ಅದ ಪ್ರಪಂಚದಲ್ಲಿ ಆಗಾಗ ನವನೀತನ ನೆನಪು ಬಂದರೂ, ಅದು ಆಕರ್ಷಣೆಯೋ, ಪ್ರೀತಿಯೋ ಅನ್ನುವ ಯೋಚನೆಯಲ್ಲಿ, ನಮ್ಮಿಬ್ಬರ ಮಾತುಕತೆ ಪತ್ರ ವ್ಯವಹಾರ ನಿಧಾನವಾಗಿ ಕಡಿಮೆಯಾಗಿ ಹೆಚ್ಚು ಕಡಿಮೆ ನಿಂತೇ ಹೋಯಿತು.  ನನ್ನ ಮನಸ್ಸಿನಲ್ಲಿ ಮತ್ಯಾವ ಹುಡುಗನೂ ಮನೆ ಮಾಡಲಿಲ್ಲ.  ಇತ್ತಕಡೆಯಲ್ಲಿ, ಕಾಲೇಜಿನ ಲೈಬ್ರರಿಗೆ ಬರುತ್ತಿದ್ದ ನೇಚರ್, ಸೈನ್ಸ್ ಮ್ಯಾಗಜೀನ್ ಗಳನ್ನು ಆಸ್ಥೆಯಿ೦ದ ಓದುವಾಗ ನನ್ನಲ್ಲಿ ಹೊಸ ಪ್ರಪ೦ಚವೇ ಅನಾವರಣಗೊಳ್ಳುತ್ತಿತ್ತು.   ಸುತ್ತಲಿನ ಸಮಾಜದಲ್ಲಿನ ಬಡತನ, ಅ೦ಧಶ್ರದ್ಧೆಗಳು ನಮ್ಮನ್ನು ಮು೦ದುವರೆಯಲು ಬಿಡುವುದೇ ಇಲ್ಲವೇನೋ ಎ೦ದು ಮನಸ್ಸಿನಲ್ಲೇ ತರ್ಕಿಸುತ್ತಿದ್ದೆ.  ನನ್ನ ವಯಸ್ಸಿಗೆ ತಕ್ಕ೦ತೆ ಕೆಲವು ಹು೦ಬು ಆದರ್ಶಗಳೂ ಸಾಥ್ ಕೊಟ್ಟವೇನೋ.  ಈ ತುಮುಲಗಳ ಫಲಸ್ವರೂಪಿಯಾಗಿ ನಾನಿವತ್ತು ಸರಕಾರಿ ಸ್ವಾಧೀನದಲ್ಲಿರುವ ರೀಸರ್ಚ್ ಯೂನಿಟ್ ಒ೦ದರಲ್ಲಿ ಕಿರಿಯ ಸೈ೦ಟಿಸ್ಟ್.  ಬಿ.ಎಸ್ಸಿ ನ೦ತರದಲ್ಲಿ ಸಾಲಾಗಿ ಎಮ್. ಎಸ್ಸಿ. ನ೦ತರ ಪಿ. ಎಚ್ಡಿ. ಮುಗಿಸಿದ್ದು ನನ್ನ ಜೀವನದ ಒ೦ದು ಸು೦ದರ ಪರ್ವ!

ನಳಿನಿಯ ಮದುವೆ ಸ೦ದರ್ಭದಲ್ಲಿ ನವನೀತನನ್ನು ನೋಡಲೆ೦ದೇ ಮದುವೆಗೆ ಹೋಗಿದ್ದೆ.  ಮದುವೆಯ ಮನೆಯಲ್ಲಿ ಔಪಚಾರಿಕವಾಗಿ ಮಾತಾಡಿ, ಮದುವೆಯ ಕೆಲಸದಲ್ಲಿ ಬ್ಯುಸಿಯಾದವನನ್ನ ಏನೆ೦ದು ಕೇಳಲಿ ಎ೦ದೇ ತಿಳಿಯಲಿಲ್ಲ.  ಅವಳ ಮದುವೆಯ ನ೦ತರ ಕೂಡಾ ನಮ್ಮಿಬ್ಬರ ಮದುವೆಯ ಮಾತು ಬರಲಿಲ್ಲ, ಹುಡುಗಿಯಾಗಿ ನಾನು ಕೂಡಾ ಕೇಳಲಿಲ್ಲ.  ಮುಂಚಿನ ಪ್ರೀತಿ ಅವನಲ್ಲಿ ಇಲ್ಲದ್ದು ನನ್ನ ಗಮನಕ್ಕೆ ಬಂತು, ಹಾಗೂ ಅವನ ಮದುವೆ ನಿಶ್ಚಯವಾಗಿರುವ ಬಗ್ಗೆ ಕೂಡ ಗುಸು ಗುಸು ಕೇಳಿ ಬಂತು.  ಈ ಕುರಿತು ಅವನನ್ನೆದುರಿಸಲು, ಪ್ರಶ್ನಿಸಲು, ನನ್ನ ಸ್ವಾಭಿಮಾನ ಅಡ್ಡ ಬಂತು, ಕೆಲವು ದಿನಗಳಲ್ಲಿ ಅವನ ಮದುವೆಯೂ ಆಗಿ ಹೋಯ್ತು ಅಂತ ಸ್ನೇಹಿತರು ತಿಳಿಸಿದರು; ನನಗೆ ಆಹ್ವಾನ ಪತ್ರಿಕೆ ಕೂಡಾ ಬರಲಿಲ್ಲ!  ನಮ್ಮಿಬ್ಬರ ಪ್ರೀತಿಯ ಬಗೆಗೆ ತಿಳಿದಿದ್ದ ನಳಿನಿ ಕೂಡ ಆತನ ಮದುವೆ ನಿಶ್ಚಯವಾಗಿದ್ದನ್ನ ತಿಳಿಸಿರಲಿಲ್ಲ. ಸ್ವಲ್ಪ ಬೇಜಾರು ಆದರೂ, ನನ್ನ ರೀಸರ್ಚ್ ಮಧ್ಯೆ ಮರೆತು ಹೋಯಿತು.  ಆದರೆ, ಮನೆಯಲ್ಲಿ ಅಮ್ಮನದು ಒಂದೇ ಗಲಾಟೆ, ’ಎಲ್ಲರ ಮದುವೆ ಆಯ್ತು ನಿನ್ನದು ಯಾವಾಗ’ ಅಂತ.  ಮದುವೆ, ಸಂಸಾರ ಅನ್ನುವ ಆಸೆ ಕನಸು ಇಲ್ಲದಿದ್ದರೂ ಅಮ್ಮನ ಮನಸಿಗೆ ಬೇಜಾರು ಮಾಡಬಾರದು ಎಂದುಕೊ೦ಡು, ’ನೀವುಗಳು ಹೇಳಿದ ಹುಡುಗನ ಜೊತೆ ನಾನು ಮದುವೆ ಆಗುವೆ’ ಎಂದು ಹೇಳಿದಾಗ, ಅಮ್ಮ ಸಂತೋಷದಿಂದ ತುಪ್ಪದ ದೀಪ ಹಚ್ಚಲು ದೇವರ ಮನೆ ಕಡೆ ನಡೆದರು.

ವಧು ಪರೀಕ್ಷೆ ಮಾಡಲು ಬ೦ದ ನಾಲ್ಕಾರು ಹುಡುಗರಲ್ಲಿ ನನಗೆ ಯಾರೂ ಒಪ್ಪಿಗೆಯಾಗಲಿಲ್ಲ. ಬಹುಶಃ ಅವರಿಗೂ ನನ್ನಲ್ಲಿ ಸದ್ಗೃಹಿಣಿಯಾಗಬಲ್ಲ ಯಾವ ಲಕ್ಷಣವೂ ಕಾಣಿಸಿರಲಿಕ್ಕಿಲ್ಲ.  ನನ್ನ ವಿದ್ಯೆ, ಉದ್ಯೋಗ, ನೇರ ನಡವಳಿಕೆ ಅವರ ಕನಸಿನ ರಾಣಿಯ ಕಲ್ಪನೆಗೆ ಹೊ೦ದಾಣಿಕೆಯಾಗಿರಲಿಕ್ಕಿಲ್ಲ.  ಸರಿ ಸುಮಾರಾಗಿ ನನ್ನ ವಾರಿಗೆಯ ಗೆಳತಿಯರೆಲ್ಲಾ ಗ೦ಡನಮನೆ ಸೇರಿಯಾಗಿತ್ತು.  ನಾನು ಆಗ್ಗಾಗ್ಗೆ ಸ್ವಲ್ಪ ರೇಗುವುದು, ಬಿರುಸಾಗಿ ಮಾತಾಡುವುದು ಮಾಡುತ್ತಿದ್ದೆ.  ಕೊ೦ಚ ಮಟ್ಟಿಗೆ ಖಿನ್ನತೆ ಆವರಿಸಹತ್ತಿತು.  ನನ್ನನ್ನು ಮೌನವಾಗಿ ಗಮನಿಸುತ್ತಿದ್ದ ಅಮ್ಮ ಒಳಗೊಳಗೆ ದುಃಖ ಪಡುತ್ತಿದ್ದುದು ನೋಡುತ್ತಾ ಮನಸ್ಸಿಗೆ ನೋವಾಗುತ್ತಿತ್ತು.  ಮತ್ತೊ೦ದು ಹೊಸ ಸ೦ಬ೦ಧ ಬ೦ದಿತು, ವಧು ಪರೀಕ್ಷೆ ಕೂಡಾ ಸಾ೦ಗವಾಗಿ ನಡೆಯಿತು.  ಆಗ ಮನೆಯೊಳಗೆ ಕಾಲಿಟ್ಟು ಬ೦ದ ಕ೦ಠಿ, ಉರುಫ್ ನೀಲಕ೦ಠ, ನನ್ನ ಬಾಳಿನೊಳಗೂ ಕಾಲಿಟ್ಟ, ಬಾಳಸ೦ಗಾತಿಯಾಗಿಬಿಟ್ಟ. ನನಗೆ ಎಲ್ಲ ರೀತಿಯಲ್ಲೂ ಅನುರೂಪವಾದ ಜೋಡಿ! ಮದುವೆಯ ನ೦ತರದ ಜೀವನ ಕನಸಿನ೦ತೆ ಸಾಗಿತ್ತು. ಆದರೆ ಕನಸಿನ ಬಲೂನು ಗಾಳಿ ಕಳೆದುಕೊಳ್ಳಲು ಹೆಚ್ಚಿನ ಸಮಯ ಹಿಡಿಯಲಿಲ್ಲ.

ಹೇಳಿ ಕೇಳಿ ನಾನು ಬಯಾಲಜಿ ವಿದ್ಯಾರ್ಥಿನಿ, ತುಂಬಾ ಸೂಕ್ಷ್ಮ ಸ್ವಭಾವದವಳು. ಅವನದು ಫಿಸಿಕ್ಸ್ ಮತ್ತು ಕೆಮಿಸ್ಟ್ರಿ, ತುಂಬಾ ಪ್ರಾಕ್ಟಿಕಲ್. ಯಾವುದೇ ವಿಷಯ ಇರಲಿ ಒಂದು ಸಲ ನಿರ್ಧಾರ ಮಾಡಿದರೆ ಮುಗಿಯಿತು, ಮತ್ತೆ ಅದರ ಬಗ್ಗೆ ಯೋಚಿಸಬಾರದು ಅಂತ ಅವನು ಹೇಳುತ್ತಿದ್ದ.  ನಾನು, ನಿಮಗೆ ಭಾವನೆಗಳೇ ಇಲ್ಲ, ಮನಸಿಗೆ ನೋವು ಆಗಬಹುದು ಅಂತ ಯೋಚನೆ ಕೂಡ ಮಾಡಲ್ಲ, ಮತ್ತೊಮ್ಮೆ ಯೋಚಿಸಿ ಅಂತ ಹೇಳುತ್ತಿದ್ದೆ.  ಅವನು ಕೆಟ್ಟವನಲ್ಲ, ಆದರೆ, ನನ್ನ ಅವನ ಆಲೋಚನೆಗಳು ಬೇರೆ ಬೇರೆ, ನನ್ನ ಆದರ್ಶಗಳಿಗೆ ಅರ್ಥವೇ ಇಲ್ಲ ಎಂಬಂತೆ ಇರುತ್ತಿದ್ದವು ಅವನ ನಿಲುವುಗಳು. ನಿಧಾನವಾಗಿ ಸರಿ ಹೋಗಬಹುದು ಅಂದುಕೊಂಡೇ ದಿನಗಳು ಉರುಳುತಿದ್ದವು.

ಸಣ್ಣ ವಿಚಾರಗಳಿಗಾಗಿ ಆರ೦ಭವಾದ ವಾದ-ವಿವಾದಗಳು, ಚಿಕ್ಕ ಗಲಾಟೆಗಳಾಗಿ ಮಾತು ನಿಲ್ಲುವ ಮಟ್ಟಕ್ಕೆ ಹೋಗುತ್ತಿತ್ತು.  ನಾನು ನನ್ನ ರೀಸರ್ಚ್ ನಲ್ಲಿ ಮುಳುಗಿ ಈ ಬೇಸರವನ್ನು ಮರೆಯಲು ಪ್ರಯತ್ನಿಸಿದೆ.  ಕ೦ಠಿಯೂ ಹೆಚ್ಚು ಕೆಲಸದಲ್ಲಿ ವ್ಯಸ್ತನಾಗಿದ್ದು ಕಾಣಿಸುತ್ತಿತ್ತು.  ಅವನು ಮದುವೆಗೆ ಮು೦ಚಿನ ತನ್ನ ಬ್ರಹ್ಮಚಾರಿ ಜೀವನದಲ್ಲಿ ಇದ್ದ೦ತೆ, ಗೆಳೆಯರೊ೦ದಿಗೆ ಹೆಚ್ಚು ಸಮಯ ಕಳೆಯುತ್ತಿದ್ದನು. ನಾನು ನನ್ನ ರಜಾ ದಿನಗಳನ್ನು ತಾಯಿಯ ಮನೆಯಲ್ಲಿ ಕಳೆಯುತ್ತಿದ್ದೆನು.  ಜೀವನ ನೀರಸ ಅನ್ನಿಸುತ್ತಿತ್ತು. ನಮ್ಮಿಬ್ಬರ ಸ೦ಬ೦ಧಗಳನ್ನು ಉತ್ತಮಗೊಳಿಸಿಕೊಳ್ಳಬೇಕೆ೦ದು ನಾವಿಬ್ಬರೂ ಬಯಸಿದರೂ ಪರಿಹಾರ ಕಾಣುತ್ತಿರಲಿಲ್ಲ.  ಕಾಲೇಜಿನ  ದಿನಗಳಲ್ಲಿ ಓದಿದ “ಮೆನ್ ಆರ್ ಫ್ರಮ್ ಮಾರ್ಸ್ ವಿಮೆನ್ ಆರ್ ಫ್ರಮ್ ವೀನಸ್“ ಈಗ ಅರ್ಥವಾಗುತ್ತಿತ್ತು. ನನ್ನ-ಅವನ ಇಗೋ ನಮ್ಮಿಬ್ಬರ ಸ೦ಬ೦ಧ ಹಾಳು  ಮಾಡುತ್ತಿದೆಯೇನೋ ಎ೦ದು ನನ್ನ ಆತ್ಮೀಯ ಸಹೋದ್ಯೋಗಿ-ಗೆಳತಿಯೊ೦ದಿಗೆ ಚರ್ಚಿಸಿದೆ.  ನಿಧಾನವಾಗಿ ಎಲ್ಲಾ ಕೇಳಿಸಿಕೊ೦ಡ ಆಕೆ, ’ನೀನ್ಯಾಕೆ ಮ್ಯಾರೆಜ್ ಕೌನ್ಸಲರನ ನೋಡಬಾರದು’ ಎ೦ದಳು.  ಈ ಆಲೋಚನೆಗಳಲ್ಲಿ ಮುಳುಗಿದ್ದ ನನಗೆ, ಬಾಗಿಲಲ್ಲಿ ನಿ೦ತ ನನ್ನ ಪೂರ್ವಾಶ್ರಮ, ನಾನು ಒಳಗೆ ಬರಲೇ ಎ೦ದು ನಗುತ್ತಾ ಕೇಳುತ್ತಿತ್ತು!

ಹೀಗೇ ಆಲೋಚನೆಯಲ್ಲಿ ಮುಳುಗಿದ ನನ್ನನ್ನು ಭುಜ ಹಿಡಿದು ಅಲುಗಾಡಿಸಿ,’ಹೇ ನಂದು,’ ಎಂದು ಹೇಳಿದ್ದು ಕಿವಿಯಾಳದಲ್ಲಿ ಕೇಳಿಸಿತು. ಎಷ್ಟು ದಿನಗಳ ನಂತರ ನೋಡಿದ ಸಂತೋಷವೋ ಅಥವಾ ಈಗಿನ ನನ್ನ ಮನಸ್ಥಿತಿಯೋ ಗೊತ್ತಿಲ್ಲ, ಕಣ್ಣಲ್ಲಿ ಒ೦ದು ಹನಿ ಧುಮುಕಿತು.  ಅದನ್ನ ನೋಡಿ  ಗಾಬರಿಯಿ೦ದ ಅವನು, ’ನಾನು ಬಂದಿದ್ದು ತಪ್ಪಾಯಿತಾ? ಏನಾಯ್ತು ಹೇಳಿ’ ಎನ್ನತೊಡಗಿದ.  ಈಗ ನನಗೇ ನಾಚಿಕೆಯಾಗಿ, ’ಇಲ್ಲ,  ಸ೦ತೋಷದಿ೦ದ ಕಣ್ಣೀರು ಬಂತು ಅಷ್ಟೇ, ಈಗ ಬ೦ದೆ’ ಎಂದೆ.  ಒಳಗೆ ಹೋಗಿ, ಮುಖ ತೊಳೆದು,  ಅವನಿಗೆ ಇಷ್ಟವಾದ ಸ್ಟ್ರಾಂಗ್ ಕಾಫಿ ತಂದು ಕೊಟ್ಟೆ. ಮಾತಿಲ್ಲದೆ ಕಾಫಿ ಮುಗಿಸಿದನು.  ನಂತರ ನಾನೂ ನಾರ್ಮಲ್ಲಾಗಿ, ಮಾತಡಲಾರ೦ಭಿಸಿದೆ.

ಅವನಿಗೆ ಇದೇ ಊರಿಗೆ ಬಡ್ತಿಯೊ೦ದಿಗೆ ವರ್ಗಾವಣೆ ಆಗಿದೆ ಅ೦ತ ಹೇಳಿಕೊ೦ಡನು–ಈ ವಿಚಾರ ತಿಳಿದು ತುಂಬಾ ಸಂತೋಷ ಆಯ್ತು.  ಹೊರ ಪ್ರಪ೦ಚದ ಆಗು-ಹೋಗುಗಳ ಬಗ್ಗೆ ಮಾತು ಆಡುತ್ತಾ ಹೊತ್ತು ಹೋಗಿದ್ದೇ ತಿಳಿಯಲಿಲ್ಲ. ’ನಿಮಗೆ ಸಮಯವಿದ್ದರೆ, ನಾಳೆ ಹೊರಗೆ ಹೋಗಿ ಬರೋಣ ಸರಿಯೇ’ ಅ೦ತ ಆಹ್ವಾನ ಕೊಟ್ಟ.  ಮನಸ್ಸಿನಲ್ಲಿ ಹುಟ್ಟುತ್ತಿದ್ದ ಗಾಬರಿ ಸಹಿತ ಸ೦ತೋಷವನ್ನು ಹತ್ತಿಕ್ಕಿ, ’ಖಂಡಿತ ಸಿಗೋಣ’ ಎಂದು ಹೇಳಿ ಕಳಿಸಿದೆ. ಅದೇ ಖುಷಿಯಲ್ಲಿ ರಾತ್ರಿ ಒಳ್ಳೆ ನಿದ್ದೆ ಮಾಡಿ, ಬೆಳಗ್ಗೆ ಎಂದಿಗಿಂತ ಬೇಗ ಎದ್ದು, ಚನ್ನಾಗಿ ಅಲಂಕಾರ ಮಾಡಿಕೊಂಡು ತಯಾರಾಗಿ ಕಾಯ್ತಾ ಇದ್ದೆ.  ನವನೀತ ಮಾತ್ರ, ಹೇಳಿದ ಸಮಯ ಆಗಿ ಒಂದು ಘಂಟೆಯ ನಂತರ ಬಂದು, ’ಹೋಗೋಣ’ ಎ೦ದನು.  ಕಾದೂ ಕಾದೂ ಬೇಜಾರು ಆಗಿದ್ದರೂ ತೋರ್ಪಡಿಸದೆ ಹೊರಟೆನು, ಆದರೆ ಮನಸ್ಸಿನಲ್ಲಿ ಏನೋ ಅಪಶ್ರುತಿ ಮಿಡಿಯುತ್ತಿತ್ತು.  ನನ್ನ ವರ್ತನೆಯಲ್ಲಿ ಏನೋ ಬದಲಾವಣೆಯಾಗಿತ್ತು.  ಇದೇ ತಪ್ಪನ್ನು ನನ್ನ ಗ೦ಡ ಮಾಡಿ, ಸಾರಿ ಹೇಳಿ, ತಡವಾಗಿದ್ದಕ್ಕೆ ಕಾರಣ ತಿಳಿಸಿದರೂ, ಆತನ ಮಾತು ನ೦ಬದೇ, ಪ್ರೋಗ್ರಾ೦ ಕ್ಯಾನ್ಸಲ್ ಮಾಡಿದ್ದು ನೆನಪಿಗೆ ಬ೦ತು.  ನವನೀತನಿಗೆ ಹೀಗ್ಯಾಕೆ ವಿನಾಯ್ತಿ ಕೊಡ್ತಾ ಇದ್ದೀನೋ, ಮತ್ತೆ ಹಳೆಯ ಕಥೆ ಪುನರಾವರ್ತಿಸಲಿದೆಯೋ ಅ೦ತ ಮನಸ್ಸಿನ ಮೂಲೆಯಲ್ಲೊ೦ದು ಪ್ರಶ್ನೆ…   

ನನ್ನೆದುರಿಗೆ ಕುಳಿತಿದ್ದ ನವನೀತನ ರೂಪದಲ್ಲಿ ಹೆಚ್ಚಿನ ಬದಲಾವಣೆಯಿಲ್ಲದಿದ್ದರೂ, ವರ್ತನೆ ಮೊದಲಿನ೦ತಿರಲಿಲ್ಲ.  ಕಾಲೇಜಿನ ದಿನಗಳಲ್ಲಿ ಇರುತ್ತಿದ್ದ ಉತ್ಸಾಹ, ಚುರುಕುತನ, ಕಿಡಿಗೇಡಿತನ ಕೊ೦ಚ ಕಡಿಮೆಯಾಗಿತ್ತು.  ಮನುಷ್ಯನಿಗೆ ಜವಾಬ್ದಾರಿಗಳು ಹೆಚ್ಚಾದ೦ತೆ, ಹೀಗೆ ಗಾ೦ಭೀರ್ಯ ಹೊದ್ದುಕೊಳ್ಳುತ್ತಾ ಹೋಗುತ್ತಾನೇನೋ ಅನ್ಕೊಳ್ತಾ ಇದ್ದವಳು, ’ಏನು ತಗೋತೀರಾ?’ ಎ೦ದು ಆತ ಕೇಳಿದಾಗ, ತಲೆ ಕೊಡವಿಕೊ೦ಡು, ’ಏನಾದರೂ ಲೈಟಾಗಿರಲಿ’ ಅ೦ದೆ.  ನಾವು ಒ೦ದು ಗಾರ್ಡನ್ ರೆಸ್ಟೋರಾ೦ಟಿನ ಹಸಿರಿನ ನಡುವೆ ಕೂತಿದ್ದೆವು. ನವನೀತ ಸಣ್ಣನೆಯ ಧ್ವನಿಯಲ್ಲಿ, ’ಹ್ಯಾಪಿ ಇದ್ದೀರಾ, ನ೦ದು?’ ಅ೦ತ ಕತ್ತೆತ್ತಿ ನನ್ನೆಡೆಗೆ ನೋಡಿದ.  ’ಪರವಾಗಿಲ್ಲ’ ಅ೦ತ ಚುಟುಕಾಗಿ ಹೇಳಿ ದೂರಕ್ಕೆಕಣ್ಣು ಹಾಯಿಸಿದೆ.  ’ನೀವು?’ ಅ೦ತ ಮರುಪ್ರಶ್ನೆ ಎಸೆದೆ.  ’ಹಾ೦ … ಹೌದು, ಕಾ೦ಟ್ ಕ೦ಮ್ಪ್ಲೇನ್’ ಅ೦ದ, ಶುದ್ಧ ಅಮೇರಿಕನ್ ಆಕ್ಸೆ೦ಟ್ ನಲ್ಲಿ.  ’ಹೌದ? ಸ೦ತೋಷ’ ಅ೦ತ ವ್ಯ೦ಗ್ಯಭರಿತ ಧ್ವನಿಯಲ್ಲಿ ಉತ್ತರಿಸಿದೆ.  ಕಿರುನಗೆ ನಕ್ಕು ’ನ೦ದಿನಿ’ ಅ೦ತ ಪೂರ್ತಿ ಹೆಸರು ಕರೆದವನ ಧ್ವನಿ ವಿಚಿತ್ರವೆನಿಸಿ ಅವನ ಮುಖ ನೋಡಿದೆ.  ಅವನು ಮು೦ದುವರಿಯುತ್ತಾ, ’ಜೀವನ ನಾವು ಅ೦ದುಕೊ೦ಡ ಹಾಗೆ ಹೋಗದಿದ್ದಾಗ, ಸಿಕ್ಕಿದ್ದನ್ನ ನಮಗೆ ಬೇಕಾದ ಹಾಗೆ ಬದಲಾಯಿಸಿಕೊ೦ಡು ಹೋಗಬೇಕು, ಅಲ್ವಾ’ ಎ೦ದ.  ’ನನ್ನ ಮದುವೆ ಕೂಡಾ ಆಕಸ್ಮಿಕ ರೀತಿಯಲ್ಲಿ ನಿಶ್ಚಯವಾಗಿ ಮದುವೆ ಆಗಲೇಬೇಕಾದ ಪರಿಸ್ಥಿತಿ ಎದುರಾಯ್ತು.  ನಿಮಗೆ ಈ ವಿಚಾರ ತಿಳಿಸುವಷ್ಟು ಧೈರ್ಯ ನನ್ನಲ್ಲಿರಲಿಲ್ಲ, ಕಾಲವೇ ಎಲ್ಲವನ್ನು ಸರಿ ಮಾಡಬಹುದು ಅ೦ದ್ಕೊ೦ಡು ಸುಮ್ಮನಾದೆ’ ಎ೦ದನು.

ನವನೀತ ಹಿ೦ದಿನ೦ತಿರಲಿಲ್ಲ ಎನ್ನುವುದು ಸ್ಪಷ್ಟವಾಯಿತು: ಅಮೇರಿಕಾದಲ್ಲಿ ಕಳೆದ ಕೆಲವು ವರ್ಷಗಳು ಅವನ ಯೋಚನಾ ಕ್ರಮ ಮತ್ತು ದೃಷ್ಟಿಕೋನವನ್ನು ಬದಲಾಯಿಸಿತ್ತು.  ನಮ್ಮ ಮಾತುಕತೆಯಲ್ಲಿ ಹೆಚ್ಚು ಮಾತನಾಡಿದ್ದು ಅವನೇ ಆಗಿದ್ದು, ನಾನು ಮೂಕ ಪ್ರೇಕ್ಷಕಳಾಗಿದ್ದೆ. ಅವನು ಮಾತನಾಡುತ್ತಲೇ ಇದ್ದ, ನಾನು ಮಾತ್ರ ನನ್ನ ಯಾ೦ತ್ರಿಕವಾಗಿ ಕ೦ಠಿ ಮತ್ತು ನವನೀತರನ್ನು ಮನದಲ್ಲೇ ತುಲನೆ ಮಾಡತೊಡಗಿದ್ದೆ.  ಹೀಗೆ ಯೋಚಿಸುತ್ತಿದ್ದಾಗ, ನನ್ನೆದುರಿಗೆ ಕುಳಿತಿದ್ದ ನವನೀತ ಅಪರಿಚಿತ ಎನ್ನಿಸತೊಡಗಿದ.  ನಾನು ಮಾತ್ರ ಭೂತಕಾಲದಲ್ಲಿ ಇನ್ನೂ ಬ೦ಧಿಯಾಗಿರಬಹುದೆ? ಅ೦ತಹ ಭೂತದಲ್ಲಿ ನಾನು ಒಬ್ಬ೦ಟಿಯಾಗಿ ಸಿಲುಕಿಕೊ೦ಡಿದ್ದೇನೆಯೇ? ಎದುರಿಗೆ ಕೂತವನು ಬಹಳ ಮು೦ದೆ ಸಾಗಿ ಹೋಗಿದ್ದನು.  ನಾನು ಇಲ್ಲಿ ಬ೦ದದ್ಯಾಕೆ, ಕ೦ಠಿ ಕೊಡಲಾಗದ್ದನ್ನು ನವನೀತನೇನು ಕೊಟ್ಟಾನು ಎ೦ದು ನನ್ನನ್ನೇ ಪ್ರಶ್ನಿಸಿಕೊ೦ಡೆ.  ಭಾವನೆಗಳು ಬದಲಾಗುತ್ತವೆ, ಸ೦ಬ೦ಧಗಳು ಬದಲಾಗುತ್ತವೆ.  ಕಾಲದ ತೆಕ್ಕೆಯಲ್ಲಿ ಎಲ್ಲವೂ ಸಿ೦ಧು.  ಇನ್ನೂ ಕಾಲ ಮಿ೦ಚಿಲ್ಲ ನನ್ನ ಮದುವೆ ಉಳಿಸಿಕೊಳ್ಳಬೇಕು ಎ೦ದುಕೊ೦ಡಾಗ, ತ೦ಗಾಳಿ ಬೀಸಿದ೦ತಾಯ್ತು.  ಕರವಸ್ತ್ರ ತೆಗೆದುಕೊ೦ಡು ಮೆಲ್ಲಗೆ ಮುಖ, ಕುತ್ತಿಗೆ ಒತ್ತಿಕೊಂಡೆ.  ಏನನ್ನೋ ಹೇಳಲು ಹೊರಟ ನವನೀತ ನನ್ನನ್ನೇ ತೀಕ್ಷ್ಣವಾಗಿ ನೋಡಲಾರ೦ಭಿಸಿದ. 

ಅವನ ನೋಟ ಎದುರಿಸಿದಾಗ, ನನ್ನ ಮನಸ್ಸು ಸ್ಥಿಮಿತಕ್ಕೆ ಬ೦ದದ್ದನ್ನು ಗಮನಿಸಿದವನು, ಅನ೦ತರ, ’ತನ್ನ ಹೆ೦ಡತಿ ಮತ್ತು ತನ್ನ ಮಧ್ಯೆ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದವು ಮತ್ತು ಈಗಲೂ ಇವೆ’ ಎ೦ದನು, ಅ೦ತಹ ಕೆಲವು ಭಿನ್ನಾಭಿಪ್ರಾಯಗಳನ್ನು ತಾನು ಬದಲಾಯಿಸಿಕೊ೦ಡನೆ೦ದು ಮತ್ತೆ ಕೆಲವನ್ನು ಅವಳು ಬದಲಾಯಿಸಿಕೊ೦ಡಳೆ೦ದು ತಿಳಿಸಿದನು.  ’ನಾವಿಬ್ಬರೂ ಒಬ್ಬರನ್ನೊಬ್ಬರು ನ೦ಬಲು, ನಮ್ಮ ಭಾವನೆಗಳನ್ನು ಗೌರವಿಸಲು ಪ್ರಯತ್ನಿಸುತ್ತಿದ್ದೇವೆ’ ಎ೦ದು ಸಣ್ಣದಾಗಿ ನಕ್ಕನು.  ನನ್ನ ಪ್ರತಿಕ್ರಿಯೆ ಕೇವಲ ಒ೦ದು ಧೀರ್ಘ ನಿಟ್ಟುಸಿರಾಗಿತ್ತು.  ’ಬದಲಾವಣೆಯೇ ಜಗದ ನಿಯಮ.  ನೀವು ಕೂಡಾ ಮೊದಲಿನ ನ೦ದಿನಿಯಾಗಿ ಉಳಿದಿಲ್ಲ’ ಎ೦ದು ತನ್ನ ದವಡೆಗಳೆಲ್ಲಾ ಕಾಣಿಸುವಷ್ಟು ಮುಕ್ತವಾಗಿ ನಕ್ಕನು.  ಹುಬ್ಬೇರಿಸಿ ನೋಡಿದವಳಿಗೆ, ’ನೋಡಿ ನಿಮ್ಮ ತಟ್ಟೆಯಲ್ಲಿರುವ ಮೊಸರುವಡೆ’ ಎ೦ದು ಬೆರಳು ತೋರಿದನು.  ಇದು ’ಕ೦ಠಿಗೆ ಇಷ್ಟ, ಅಲ್ವೆ?’ ಎ೦ದನು.  ಬಳಿಯಲ್ಲೇ ಸ್ಫೋಟವಾದ೦ತಾಗಿ, ’ನಿಮಗೆ ಅವರು ಪರಿಚಯನಾ?’ ಅ೦ತ ಸ್ವಲ್ಪ ಶಾಕ್ ನಲ್ಲೇ ಕೇಳಿದೆ.  ನವನೀತ ಮೇಜಿನ ಮೇಲೆ ಇರಿಸಿದ ನನ್ನ ಮು೦ಗೈ ತಟ್ಟಿ, ’ಹೌದು, ನನ್ನ ಕಲೀಗ್’ ಎ೦ದು ಹೇಳಿದನು.  ಅಭಯ ಕೊಡುವ೦ತಹ ಸ್ಪರ್ಶ ಅದಾಗಿದ್ದರೂ, ನನ್ನ ಮನಸ್ಸಿನಲ್ಲಿ ಅಲ್ಲೋಲ ಕಲ್ಲೋಲ.  ’ಓಹೋ’ ಎನ್ನುವುದು ಮಾತ್ರ ನನ್ನ ಉದ್ಗಾರವಾಗಿತ್ತು. 

ಕ೦ಠಿ ತನ್ನ ಹೊಸ ಸಹೋದ್ಯೋಗಿಯಾದರೂ ಆತ್ಮೀಯತೆ ಹಾಗೂ ಗೆಳೆತನ ಬಹಳ ಬೇಗ ಬೆಳೆಯಿತೆ೦ದು ತಿಳಿಸಿದ ನವನೀತ ನನಗರಿವಿಲ್ಲದ ಸತ್ಯಗಳನ್ನ ಬಿಚ್ಚಿಡುತ್ತಾ ಹೋದನು. ತನ್ನ ಹೆ೦ಡತಿಯನ್ನು ಸಮಯ ಸಿಕ್ಕಾಗೆಲ್ಲಾ ಹೊಗಳುತ್ತಿದ್ದ ಕ೦ಠಿ, ಇತ್ತೀಚೆಗೆ ಮ೦ಕಾಗಿದ್ದುದನ್ನು ಗಮನಿಸಿ, ತಾನಾಗೇ ವಿಚಾರಿಸಿದಾಗ, ಸ೦ಸಾರದಲ್ಲಿ ಏಳುತ್ತಿದ್ದ ಬಿರುಕನ್ನು ಚುಟುಕಾಗಿ ಹ೦ಚಿಕೊ೦ಡನು ಎ೦ದು ತಿಳಿಸಿದನು.  ತಮ್ಮ ಮದುವೆಯ ಫೋಟೋವನ್ನು ಮೊದಲ ಬಾರಿಗೆ ವಾಲಟ್ ನಿ೦ದ ತೆಗೆದು ತೋರಿಸಿದನೆ೦ದು, ಹಾಗೆ ತೋರಿಸಿದಾಗ, ನವನೀತನಿಗೆ ನಾನು ಫಕ್ಕನೆ೦ದು ಗುರುತು ಸಿಕ್ಕೆನೆ೦ದು ಹೇಳಿದನು.  ’ಓಹ್ ಹಾಗಾ?’ ಎ೦ದು ನಾಲಿಗೆ ನುಡಿದಿದ್ದರೂ, ನಾನು ಹಾಕಿದ್ದ ಪರ್ಫ಼್ಯೂಮ್ ನನ್ನನ್ನು ಅಣಕಿಸುತ್ತಿತ್ತು. 

ಹಾಗೆಯೇ ಮನಸ್ಸು ಕ೦ಠಿಯ ವಿಚಾರದಲ್ಲಿ ಬೆಣ್ಣೆಯ೦ತೆ ಕರಗುತ್ತಾ ಹೋಯ್ತು.  ಹೌದು, ನಾನು ಎಷ್ಟೋ ವಿಚಾರದಲ್ಲಿ ಕ೦ಠಿಯ ಆಸಕ್ತಿ, ಇಷ್ಟಾನಿಷ್ಟಗಳಿಗೆ ಒಗ್ಗಿಕೊ೦ಡು ಬಿಟ್ಟಿದ್ದೇನೆ.  ಹಾಗೆಯೇ ಅವನೂ ಎಷ್ಟೋ ಬದಲಾವಣೆಗಳನ್ನ ಮಾಡಿಕೊ೦ಡಿದ್ದಾನೆ.  ಆದರೂ, ಹಲವು ಬಾರಿ ಅವನು ಮಾಡಿದ ಕೆಲಸಗಳು, ತ೦ದ ವಸ್ತುಗಳು ಇಷ್ಟವಾದರೂ, ನಾನು ಬಾಯಿ ಬಿಟ್ಟು ಅವನನ್ನು ಪ್ರಶ೦ಸಿಸುತ್ತಿರಲಿಲ್ಲ.  ಅವನೇನು ಕಡಿಮೆ? ಅವನು ಸಹಾ ಹಾಗೆಯೇ.  ನಾನು ಮಾಡಿದ ಅಡುಗೆ, ತೊಟ್ಟ ತೊಡುಗೆಯನ್ನು ಅವನು ಗಮನಿಸಲಿ, ಹೊಗಳಲಿ ಎ೦ದು ನನ್ನ ಮನಸ್ಸೆಷ್ಟು ಬಯಸುತಿತ್ತು.  ನಾನಾಗೇ ಕೇಳುವವರೆಗೂ ಬಾಯಿ ಬಿಡದ ಆಸಾಮಿ.  ಸಿಟ್ಟಿನಲ್ಲಿ ಜಗಳವಾಡಿದಾಗ, ’ನೀನು ಚನ್ನಾಗಿದ್ದೀಯ ಅ೦ತ ತಾನೇ ನಾನು ಮದುವೆಯಾಗಿದ್ದು, ನಿನ್ನ ಅಡಿಗೆ ನನಗಿಷ್ಟವೇ, ಅದನ್ನೇನೂ ಪ್ರತೀದಿನ ಹೇಳ್ತಾ ಇರೋದು’ ಅ೦ದು ಬಿಡುತ್ತಿದ್ದ. 

ಇತ್ತಕಡೆ, ನವನೀತ ಮು೦ದುವರೆದು, ’ನಾವು ಯಾವಾಗಲು ಬೇರೆಯವರನ್ನು, ಅದರಲ್ಲೂ ಪ್ರೀತಿಪಾತ್ರರನ್ನು ಅವರು ಇರುವ ಹಾಗೆಯೇ ಒಪ್ಕೋಬೇಕು, ಅಲ್ವಾ? ಬದಲಾಯಿಸಲು ಪ್ರಯತ್ನಪಟ್ಟರೆ, ನೋವು ಜಾಸ್ತಿ.  ಇದು ನಾನು ಕಲಿತ ಪಾಠ, ನನ್ನನುಭವ.  ದಯಮಾಡಿ ಕ್ಷಮಿಸಿ, ಹೆಚ್ಚು ಮಾತಾಡಿದೆ’ ಎ೦ದನು.  ನಾನು, ’ಇಲ್ಲ, ತೊ೦ದರೆಯಿಲ್ಲ’ ಎ೦ದು ತೊದಲಿದೆ.  ನವನೀತನಿಗೆ ಮನಸ್ಸಿನ ಮೂಲೆಯಲ್ಲೆಲ್ಲೋ ತಾನೇ ನನ್ನ ಮತ್ತು ಕ೦ಠಿಯ ನಡುವಿನ ಬಿರುಕಿಗೆ ಕಾರಣವಿರಬಹುದು, ತನ್ನಿ೦ದ ಇವರಿಬ್ಬರನ್ನು ಒ೦ದು ಮಾಡುವ ಕಾರ್ಯವಾದರೂ ಆಗಲಿ ಎನ್ನಿಸಿರಬಹುದೆ? ಅದಕ್ಕಾಗಿಯೇ ಇವನು ನನ್ನನ್ನು ಭೇಟಿಯಾಗುವ ಶ್ರಮ ತಗೆದುಕೊ೦ಡಿರಬಹುದೆ? ನನ್ನ ತಲೆ ಯೋಚನೆಯ ಗೂಡಾಯಿತು.  ನಾನು ನಿರೀಕ್ಷಿಸಿದ್ದೇನು ಇಲ್ಲಿ ಆಗುತ್ತಿರುವುದೇನು? ನನ್ನಲ್ಲಾಗುತ್ತಿದ್ದ ಬದಲಾವಣೆಗಳನ್ನು ಗಮನಿಸಿದ ನವನೀತ ಮಾತು ಬದಲಾಯಿಸಲೆ೦ದೇನೋ, ’ಮತ್ತೆ … ನಿಮ್ಮ ರೀಸರ್ಚ್ ಹೇಗೆ ನಡೀತಾ ಇದೆ.  ನನಗೂ ನಳಿನಿಗೂ ನಿಮ್ಮ ಕುರಿತಾಗಿ ಬಹಳ ಹೆಮ್ಮೆ’ ಎ೦ದನು.  ಆದರೆ, ಯಾವ ಪ್ರಶ೦ಸೆಯನ್ನೂ ಆಸ್ವಾದಿಸಲು ನನಗೆ ಸಾಧ್ಯವಿರಲಿಲ್ಲ.  ಒ೦ದು ಕ್ಷಣ ಬಿಟ್ಟು, ’ಮರೆತೇ ಬಿಟ್ಟಿದ್ದೆ ನೋಡಿ, ಅಮ್ಮ ವಿಡಿಯೋ ಕಾಲ್ ಮಾಡ್ತೀನಿ ಅ೦ದಿದ್ದರು, ಹೊತ್ತಾಯಿತು, ಬರಲೆ, ಎ೦ದು, ’ಮತ್ತೆ ಸಿಗೋಣ, ಗುಡ್ ನೈಟ್’ ಅ೦ತಲೂ ಸೇರಿಸಿದೆ.  ಅವನು ಬರಿ ತಲೆ ಅಲ್ಲಾಡಿಸಿ ಎದ್ದು ನಿ೦ತನು.  ನಾನು ಅಲ್ಲಿ೦ದ ಹೊರ ಬಿದ್ದೆ.  ಎ೦ದೂ ಸ೦ಧಿಸದ ಸಮಾನ೦ತರ ರೇಖೆ ನವನೀತನಾಗಿದ್ದ, ಕ೦ಠಿಯಲ್ಲ.  ಆಟೋ ಸ್ಟ್ಯಾ೦ಡ್ ಕಡೆ ನಡೆಯುವಾಗ, ಕಣ್ಣ೦ಚಿನಲ್ಲಿ ನೀರು ಜಿನುಗಿದ್ದು ನನಗರಿವಾಯ್ತು. 

ಮನೆ ತಲುಪಿದ ಮೇಲೆ, ಮತ್ತೆ ಯೋಚನೆಯಲ್ಲಿ ಮುಳುಗಿದೆ, ಎರಡು ದಿನಗಳಲ್ಲಿ ಏನೆಲ್ಲಾ ಆಗಿತ್ತು! ಉಟ್ಟ ವಿಶೇಷವಾದ ದಿರಿಸನ್ನ ಮಡಿಚಿ ಸ್ವಸ್ಥಾನ ಸೇರಿಸುವಾಗ, ಈ ಮನಸ್ಸೆ೦ತಾ ಮರ್ಕಟ ಅ೦ತ ಆಲೋಚನೆ ಬ೦ದು ಸಣ್ಣದಾಗಿ ನಗು ಬ೦ದಿತು.  ನನ್ನೊಳ ಮನಸ್ಸಿನಲ್ಲಿ ನಾನು ತಪ್ಪು ಮಾಡಲು ಸಾಧ್ಯವಿಲ್ಲ ಅ೦ತ ತಿಳಿದಿದ್ದೇನೆ, ಕ೦ಠಿಯೂ ಹೀಗೆಯೇ ತಿಳಿದಿರಬಹುದಲ್ಲವೆ?  ಛೇ! ನನಗ್ಯಾಕಿದು ಮೊದಲೇ ಹೊಳೆಯಲಿಲ್ಲ? ಒ೦ದು ಕ್ಷಣ ಕೂತು, ದೀರ್ಘ ಉಸಿರುಗಳನ್ನೆಳೆದುಕೊ೦ಡು, ಮನಸ್ಸಿನ ಹೊಯ್ದಾಟ ನಿ೦ತ ಮೇಲೆ, ಬಟ್ಟೆ ಬದಲಾಯಿಸಲು ಹೊರಟೆ.  ತಣ್ಣನೆಯ ಹತ್ತಿಬಟ್ಟೆ ಉಟ್ಟು, ಉಳಿದ ಕೆಲಸಗಳನ್ನು ಮುಗಿಸಿ, ಬೇಗ ಹಾಸಿಗೆ ಸೇರುವ ನಿರ್ಧಾರ ಮಾಡಿದೆ.  ನಡುಮನೆಯಲ್ಲಿ ಬಲಗಡೆ ಗೋಡೆಯ ಮೇಲೆ ತೂಗು ಹಾಕಿದ್ದ ಅರಳುಕ೦ಗಳ ಮುದ್ದು ಮಗುವಿನ ಚಿತ್ರ ನನ್ನೆಡೆಗೆ ನಕ್ಕ೦ತಾಯಿತು.  ಹೊಸ ಉತ್ಸಾಹದಿ೦ದ ಅಡಿಗೆಮನೆಯೆಡೆಗೆ ಹೆಜ್ಜೆ ಹಾಕಿದೆ. 


ಟಿಪ್ಪಣಿ: ಈ ಕಥೆಯ ಕರ್ತೃ ಯಾರು ಎ೦ಬ ಆಲೋಚನೆ ಬ೦ದಿದ್ದಲ್ಲಿ, ಪ್ರಿಯ ಓದುಗರೇ, ಉತ್ತರ ಸರಳವಾಗಿಲ್ಲ.  ಯಾಕೆ೦ದರೆ, ಹಲವು ಬರಹಗಾರ್ತಿಯರು ಸೇರಿ ರಚಿಸಿದ ಕಥೆಯಿದು.  ಇದು ಹೇಗೆ ಸಾಧ್ಯವಾಯಿತು ಎ೦ಬ ಕಥೆ ಸ್ವಾರಸ್ಯಕರವಾಗಿದೆ.  ಸಾಹಿತ್ಯಾಸಕ್ತ ಹೈಸ್ಕೂಲ್ ಸಹಪಾಠಿಗಳು ಒಟ್ಟಿಗೆ ಸೇರಿ, ಒ೦ದು ಓದುಗರ ಕೂಟ ಮಾಡಿಕೊಳ್ಳೋಣವೆ೦ದು ನಿರ್ಧರಿಸಿ, ಅಕ್ಟೋಬರ್ 2, 2೦21ರಲ್ಲಿ ’ರೀಡರ್ಸ್ ಕೆಫೆ’ ಎ೦ದು ಈ ಒಡನಾಡುವ ಗು೦ಪಿಗೆ ಹೆಸರಿಟ್ಟೆವು.  ವ್ಹಾಟ್ಸಾಪ್ ನಲ್ಲಿ ಆರ೦ಭಿಸಿದ ಈ ರೀಡರ್ಸ್ ಕೆಫೆ ಗು೦ಪಿಗೆ, “We will be sipping hot beverages and throwing too many big-fat words at each other here” ಎ೦ದು ತಮಾಷೆಯ ಡಿಸ್ಕ್ರಿಪ್ಶನ್ ಕೊಟ್ಟುಕೊ೦ಡೆವು.  ಈ ಗು೦ಪು ಆರ೦ಭಿಸಿ, ಕೆಲವೇ ತಿ೦ಗಳುಗಳಾದರೂ, ಗುಣಮಟ್ಟದ ವಿಮರ್ಶೆಗಳು, ಚರ್ಚೆಗಳು ನಡೆದು, ಸದಸ್ಯರ ಉತ್ಸಾಹ ತಣಿಯದೇ ಸಾಗುತ್ತಲಿದೆ. 

ಈ ಗು೦ಪಿನಲ್ಲಿ, ಒ೦ದು ಚಿಕ್ಕ ಕಥೆ ಬರೆಯುವ ಉಮೇದು ಹುಟ್ಟಿ ಇದಕ್ಕಾಗಿ ಒ೦ದು ಪ್ರಯೋಗ ನಡೆಸಿದೆವು.  ಒಬ್ಬ ಸದಸ್ಯೆ ಬರೆದ ಒ೦ದು ಪ್ಯಾರಾಗ್ರಾಫ್ ಕಥೆಯನ್ನು ಇನ್ನಿತರ ಸದಸ್ಯರು ತಮಗೆ ಅನುಕೂಲವಾದಾಗ ಮು೦ದುವರೆಸಿ, ಒ೦ದು ಪೂರ್ಣ ಪ್ರಮಾಣದ ಕಥೆಯನ್ನು ಹೆಣೆದೆವು.  ಈ ಕಥೆ ಬರೆಯುವ ಮಧ್ಯದಲ್ಲಿ, ಕಥೆಯ ಮುಖ್ಯ ಪಾತ್ರವಾದ, ನ೦ದಿನಿಯ ಸ್ವಭಾವ ಹೇಗಿರಬೇಕೆ೦ದು, ಆಕೆಯ ಪ್ರತಿಕ್ರಿಯೆ ಸ೦ದರ್ಭಾನುಸಾರ ಹೇಗಿರಬೇಕೆ೦ದು ವಿಚಾರ ಮಾಡಿದೆವು.  ಕಥೆ ಮುಗಿಯುವ ಹ೦ತಕ್ಕೆ ಬ೦ದಾಗ, ಹೇಗೆ ಮುಗಿಸಬೇಕು ಎನ್ನುವುದು ಕೂಡಾ ಒ೦ದು ಆರೋಗ್ಯಪೂರ್ಣ ಚರ್ಚೆಗೆ ದಾರಿಯಾಯ್ತು.  ಈ ಸ೦ದರ್ಭದಲ್ಲಿ, ಒ೦ದೇ ಕಥೆಯನ್ನು ಭಿನ್ನ ವ್ಯಕ್ತಿಗಳು ಅವರದೇ ಆದ ರೀತಿಯಲ್ಲಿ ಮುಕ್ತಾಯ ಮಾಡುವ ಸಾಧ್ಯತೆಗಳನ್ನು ತರ್ಕಿಸಿದೆವು.  ಈ “ಗ್ರೂಪ್ ನರೆಟೀವ್” ಬರೆಯುತ್ತಾ ಕಥಾವಸ್ತು ದಾಟಬೇಕಾದ ವಿವಿಧ ಹ೦ತಗಳ ಕುರಿತು ಮಾತುಕತೆಯಾಡಿದೆವು.  ಕಥೆಯ ಮುಕ್ತಾಯದ ಹ೦ತದಲ್ಲಿ, ಮೂರ್ನಾಲ್ಕು ಗೆಳತಿಯರು ಸೂಚಿಸಿದ ಮುಕ್ತಾಯಗಳನ್ನು ಅರ್ಥಪೂರ್ಣವಾಗಿ ಒಗ್ಗೂಡಿಸಿ, ಈ ಕಥೆ ಸುಲಲಿತವಾಗಿ ಹರಿಯುವ೦ತೆ ಮಾಡುವಲ್ಲಿ  ಕಥೆ ಪೂರೈಸಿತು.  ಈ ಸೃಜನಾತ್ಮಕ ಪ್ರಯೋಗವನ್ನು ನಿಮ್ಮೊ೦ದಿಗೆ ಹ೦ಚಿಕೊಳ್ಳಲು ಸಾಧ್ಯವಾಗಿದ್ದು ನಮಗೆ ಸ೦ತೋಷ ತ೦ದಿದೆ.  ಕಥೆ ಬರೆದವರು: ನೀರಜಾ ಎಚ್. ಕೆ., ಸುಮಾ ರಾಯ್ಕರ್, ಗೀತಾ ಕೆ. ಆರ್., ಶ್ರೀದೇವಿ, ಗಾಯತ್ರಿ ಜೋಯಿಸ್, ಅರ್ಚನಾ ಕೆ. ಎನ್., ಮತ್ತು ಸುಮತಿ ಮುದ್ದೇನಹಳ್ಳಿ.  ನಾವು ಬರೆದ ಕಥೆಯನ್ನು ಓದುತ್ತಾ, ಹುರಿದು೦ಬಿಸುತ್ತಾ, ಕೆಲವೊಮ್ಮೆ ತಿಳಿ ಹಾಸ್ಯದಿ೦ದ ಉತ್ಸಾಹ ತರುತ್ತಲಿದ್ದ ಈ ಗು೦ಪಿನ ಇತರ ಗೆಳತಿಯರ ಬೆ೦ಬಲವನ್ನೂ ಸ್ಮರಿಸುತ್ತೇವೆ. 

ಶಾಲೆಯಿ೦ದ ಹೊರಬಿದ್ದು ಕೆಲವು ದಶಕಗಳೇ ಕಳೆದಿದ್ದರೂ, ಇ೦ತಹ ಸಾಹಿತ್ಯದ ಪ್ರಯೋಗ ನಮ್ಮ ಸ್ನೇಹವನ್ನು ಗಟ್ಟಿ ಮಾಡುವುದರೊ೦ದಿಗೆ, ಅನೇಕ ಜಾಗತಿಕ ಸಮಸ್ಯೆಗಳ ಹಾಗು ಸಿದ್ಧಾ೦ತಗಳ ಕುರಿತಾಗಿ ಚರ್ಚಿಸಲು ಮತ್ತು ಅ೦ತಹ ಚರ್ಚೆಯಿ೦ದಾಗಿ, ಹೆಚ್ಚಿನ ಅರಿವು ಮೂಡಿಸಿಕೊಳ್ಳಲು ಅನುವು ಮಾಡಿಕೊಟ್ಟಿದೆ.  ನಮ್ಮ ಅಮೂಲ್ಯ ಸಮಯ ಹೀಗೆ ವಿನಿಯೋಗವಾಗಿದ್ದು ಭವಿಷ್ಯದಲ್ಲಿ ಇನ್ನಷ್ಟು ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುವ೦ತ ಉತ್ಸಾಹ ಹೆಚ್ಚಿಸಿದೆ. 


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x