ಅನುರಣನ: ಡಾ. ಅನುಪಮಾ ದೇಶಮುಖ್

ಡಾ. ಪ್ರದೀಪ್ ಬಳ್ಳಾರಿಯ ಪ್ರಸಿದ್ಧ ವೈದ್ಯರು. ಅಕ್ಕರೆಯ ಹೆಂಡತಿ ಶಾಂತಾ ಹಾಗೂ ಮುದ್ದಾದ, ಮಿತಭಾಷಿಯಾದ ಮಗ ರಾಘವ ಅವರ ಪ್ರಪಂಚ. ಶಾಂತಾ ಅಚ್ಚುಕಟ್ಟಾಗಿ ಮನೆಯನ್ನೂ, ಮಗನನ್ನೂ ನೋಡಿಕೊಂಡು, ತಕ್ಕಮಟ್ಟಿಗೆ ಸಂಪ್ರದಾಯವನ್ನೂ ಪಾಲಿಸಿಕೊಂಡು, ಗಣ್ಯಸಮಾಜದ ರೀತಿನೀತಿಗಳಿಗೆ ಹೊಂದಿಕೊಂಡಂತಹ ಹೆಣ್ಣು. ಶಿಸ್ತು, ಕಟ್ಟುನಿಟ್ಟಿನ ಆಸಾಮಿಯಾದ ಡಾ ಪ್ರದೀಪ್ ಗೆ ಮುಂದೆ ತನ್ನ ಮಗ ಒಬ್ಬ ಒಳ್ಳೆಯ ವೈದ್ಯನೋ, ನ್ಯಾಯಮೂರ್ತಿಯೋ ಆಗಬೇಕೆಂಬ ಹಂಬಲ. ಆದ್ದರಿಂದಲೇ ಶಿಕ್ಷಣ, ಸಂಸ್ಕೃತಿಗಳಿಗೆ ಹೆಸರುವಾಸಿಯಾಗಿದ್ದ ತೋರಣಗಲ್ಲಿನ ಹತ್ತಿರದ ಪ್ರತಿಷ್ಠಿತ ವಸತಿ ಶಾಲೆಯೊಂದರಲ್ಲಿ ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣಕ್ಕಾಗಿ ರಾಘವನ ದಾಖಲಾತಿಯಾಯ್ತು. ಸನ್ನಡತೆಯ ರಾಘವನಿಗೆ ಚಿಕ್ಕಂದಿನಿಂದಲೂ ಸಾಹಿತ್ಯ,ಕಲೆ, ಸಂಸ್ಕೃತಿಯಲ್ಲಿ ಹೆಚ್ಚು ಆಸಕ್ತಿ. ಅಮ್ಮ ಹಾಡುತ್ತಿದ್ದ ಸಂಪ್ರದಾಯದ ಹಾಡುಗಳಂತೂ ಅವನಿಗೆ ಅಚ್ಚುಮೆಚ್ಚು. ಹಾಗಂತ ಓದುವುದರಲ್ಲೇನೂ ಹಿಂದೆ ಬೀಳುತ್ತಿರಲಿಲ್ಲ. ಅಪ್ಪನ ಭಯವೊಂದಿತ್ತಲ್ಲ!

ಅಂತೂ ರಾಘವನಿಗೆ ಹೊಸ ಶಾಲೆಯ ವಾತಾವರಣ ಇಷ್ಟವಾಯ್ತು. ಅಭ್ಯಾಸವೂ ಸರಿಯಾಗಿಯೇ ಮುಂದುವರಿಯಿತು. ವಾರದ ಮಧ್ಯದಲ್ಲಿ ರಜೆಯೇನಾದರೂ ಬಂದರೆ ಮಕ್ಕಳೆಲ್ಲಾಆಗಾಗ ಹತ್ತಿರದ ಹಂಪಿಗೆ ಹೋಗುವುದು ಸಾಮಾನ್ಯವಾಯ್ತು.ಗತವೈಭವದ ಕುರುಹು ನೀಡುವ ಹಂಪಿಯಲ್ಲಿ ಸಮಯ ಕಳೆಯುವುದು ಅವರಿಗೆಲ್ಲ ಒಂದು ತರಹದ ಖುಷಿ ನೀಡುತ್ತಿತ್ತು. ಪ್ರತಿಸಲ ಹಂಪಿಗೆ ಭೇಟಿ ನೀಡಿದಾಗಲೂ ಅಲ್ಲಿನ ಗೋಪುರಗಳು, ಕಲಾಕುಸುರಿ, ವಾಸ್ತುಶಿಲ್ಪ, ರಾಘವನಲ್ಲಿ ಒಂದು ರೀತಿಯ ಸಂಚಲನವನ್ನುಂಟು ಮಾಡುತ್ತಿದ್ದವು. ಅದರಲ್ಲೂ ವಿಜಯ ವಿಠ್ಠಲ ದೇವಸ್ಥಾನದ ಸಂಗೀತ ಸ್ತಂಭಗಳು ಆತನ ಆಕರ್ಷಣೆಯ ಬಿಂದು. ಅಲ್ಲಿಗೆ ಹೋದಾಗಲೊಮ್ಮೆ ಪ್ರತಿ ಸ್ತಂಭವನ್ನು ತನ್ನ ಎಳೆ ಬೆರಳಿನಿಂದ ತಟ್ಟಿದಾಗ ಹೊಮ್ಮುತ್ತಿದ್ದ ನಾದದ ಅಲೆ, ಅವನ ದೇಹದಲ್ಲೆಲ್ಲಾ ಹರಿದಾಡಿ, ಅಮೋಘ ಅನುಭವವನ್ನು ನೀಡುತ್ತಿತ್ತು.

ವಿಜಯ ವಿಠ್ಠಲ ದೇವಸ್ಥಾನದಿಂದ ಅನತಿ ದೂರದಲ್ಲೇ ಒಂದು ನಾಟ್ಯ ಶಾಲೆ. ರಾಘವ ಸ್ತಂಭವನ್ನು ಮೀಟುವಾಗ “ತಾಂ, ಧಿತ್ತಾಂ…ತಿರಕಿಟ ಥೈ..ತಥ್ ಥೈ…” ಎಂದು ಸಣ್ಣದಾಗಿ ಕಿವಿಗೆ ಬೀಳುವ ತಾಳ, ಅವನರಿವಿಲ್ಲದಂತೆಯೇ ಹೆಜ್ಜೆಗಳು ಆ ಕಡೆ ತಿರುಗುವಂತೆ ಮಾಡುತ್ತಿದ್ದವು. ಮೆಲ್ಲಗೆ ನಾಟ್ಯ ಶಾಲೆಯ ಹೊರಗೆ ನಿಂತು ಅಲ್ಲಿ ನೃತ್ಯ ಮಾಡುವ ಪುಟಾಣಿ ಹುಡುಗಿಯರನ್ನೊಮ್ಮೆ ಮತ್ತು ಗುರುಗಳನ್ನೊಮ್ಮೆ ನೋಡುತ್ತಾ, ತನ್ನ ಮುಖದಲ್ಲೂ ಹಾವಭಾವಗಳನ್ನು ಮೂಡಿಸುತ್ತಾ ತಲ್ಲೀನನಾಗಿಬಿಡುತ್ತಿದ್ದ. ಆ ದಿನದಿಂದ ಭರತನಾಟ್ಯದಲ್ಲಿ ಆತನಿಗೆ ವಿಶೇಷ ಆಸಕ್ತಿ ಶುರುವಾಯಿತು. ಗ್ರಂಥಾಲಯದಲ್ಲಿ ಹೋಗಿ ಭರತನಾಟ್ಯದ ಬಗ್ಗೆ ಮಾಹಿತಿ ಕೊಡುವಂಥ ಪುಸ್ತಕಗಳನ್ನೆಲ್ಲಾ ಜಾಲಾಡಿ, ತನ್ನ ಬಿಡುವಿನ ಸಮಯದಲ್ಲಿ ಅವುಗಳನ್ನು ಓದಲು ಶುರು ಮಾಡಿದ.
ಎಲ್ಲಿ ಕೂತರೂ “ಕಿಟತಕ ತಾ ತೈ..ತೈ….ತಕ್ ತಾಮ್..”ಎನ್ನುವ ತಾಳದ ಅನುರಣನ.

ಅದೇ ಆಸಕ್ತಿಯೊಂದಿಗೆ ಆತ ವಿವಿಧ ಅಡವುಗಳು, ಕೈ ವಿನ್ಯಾಸ, ಚತುರಶ್ರ ಅಲರಿಪು, ಭರತನಾಟ್ಯ ನೃತ್ಯಬಂಧಗಳು, ಭಂಗಿಗಳು, ಅಭಿನಯ, ಮುದ್ರೆ, ಭರತನಾಟ್ಯ ಶಾಸ್ತ್ರದ ಶ್ಲೋಕಗಳು ಹೀಗೆ ಹಲವಾರು ವಿಷಯಗಳ ಬಗ್ಗೆ ಗ್ರಂಥಾಲಯದ ಪುಸ್ತಕಗಳಿಂದ ಮನನ ಮಾಡಿಕೊಳ್ಳತೊಡಗಿದ. ಶಾಲೆಯ ಕೆಲವು ನೃತ್ಯ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸತೊಡಗಿದ. ನೃತ್ಯದಲ್ಲಿನ ಆತನ ಆಸಕ್ತಿಯನ್ನು ಕಂಡು ಶಾಲೆಯ ಕಲಾ ಗುರುಗಳು ಭರತನಾಟ್ಯವನ್ನು ಕಲಿಯಲು ಸೂಚಿಸಿದ್ದಲ್ಲದೇ, ಅದರಿಂದ ಉಂಟಾಗಬಹುದಾದ ವಿರೋಧಗಳ ಬಗ್ಗೆಯೂ ಸುಳಿವು ನೀಡಿದರು. ಏಕೆಂದರೆ ಇಡೀ ಬಳ್ಳಾರಿಯಲ್ಲಿ ಒಬ್ಬರೇ ಒಬ್ಬ ಭರತನಾಟ್ಯ ನರ್ತಕರಿರಲಿಲ್ಲ. ನೃತ್ಯ ಎಂದರೆ ಹೆಣ್ಣುಮಕ್ಕಳಿಗಷ್ಟೇ ಎನ್ನುವ ಧೋರಣೆ ಅಲ್ಲಿಯ ಜನರಾದಾಗಿತ್ತು. ಸಾಧನೆಯ ಹಾದಿಯಲ್ಲಿ ಯಾರೂ ಜೊತೆಗಿರದಿದ್ದರೂ ನಮ್ಮ ಛಲ ನಮ್ಮ ಜೊತೆ ಇರಬೇಕು. ಹಾಗಿದ್ದಾಗ ಮಾತ್ರ ಯಶಸ್ಸು ನಮ್ಮದಾಗುತ್ತದೆ.
“ ಒರ್ವನೇ ನಿಲುವೆ ನೀನುತ್ಕಟಕ್ಷಣಗಳಲಿ ।
ಧರ್ಮಸಂಕಟಗಳಲಿ, ಜೀವಸಮರದಲಿ ।।
ನಿರ್ವಾಣದೀಕ್ಷೆಯಲಿ, ನಿರ್ಯಾಣಘಟ್ಟದಲಿ।
ನಿರ್ಮಿತ್ರನಿರಲು ಕಲಿ – ಮಂಕುತಿಮ್ಮ ।।” ಎಂಬ ಕಗ್ಗ ರಸಧಾರೆಯ ಅರಿವನ್ನು ಕಲಾ ಗುರುಗಳು ಆತನಿಗೆ ನೀಡಿದರು.

ಸ್ತ್ರೀ ಪ್ರಧಾನ ಈ ನೃತ್ಯ ಜಗತ್ತಿನಲ್ಲಿ ಪುರುಷ ಕಲಾವಿದರನ್ನು ಒಪ್ಪಿಕೊಳ್ಳುವುದು ಬಳ್ಳಾರಿಯಂತಹ ಊರಲ್ಲಿ ಸುಲಭವಾಗಿರಲಿಲ್ಲ. ಅದಕ್ಕೂ ಮಿಗಿಲಾಗಿ ರಾಘವನ ಒತ್ತಾಸೆಗೆ ಅವನ ಹೆತ್ತವರು ಇಂಬು ಕೊಡುವರೇ ಎನ್ನುವುದು ಪ್ರಶ್ನಾರ್ಹವಾಗಿತ್ತು. ಇಷ್ಟೆಲ್ಲ ವಿರೋಧಾಭಾಸಗಳ ನಡುವೆಯೂ ರಾಘವ ನೃತ್ಯ ಕಲಿಯುವ ಒಲವು ತೋರಿದ್ದು ಗುರುಗಳಿಗೆ ಅಚ್ಚರಿಯೇ ಆಯ್ತು. ಸರಿ ನೃತ್ಯವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಆತನ ಕಲಿಕೆ ಶುರುವಾಯ್ತು. ಅಚ್ಚರಿಯೆಂದರೆ ರಾಘವನ ಗುರು ಬೇರೆ ಯಾರೂ ಅಲ್ಲ! ಆತ ಹಂಪಿಯಲ್ಲಿ ನೋಡಿದ ಗುರುಗಳೇ! ರಾಘವನ ಆನಂದಕ್ಕೆ ಪಾರವೇ ಇರಲಿಲ್ಲ. ಆದರೆ ತಂದೆಯ ಮೇಲೆ ಅಪಾರ ಭಯ-ಭಕ್ತಿಗಳಿದ್ದುದರಿಂದ, ಸರಿಯಾದ ಸಮಯ ಬರುವವರೆಗೂ ತನ್ನ ಸಮ್ಮತಿಯಿಲ್ಲದೇ ತನ್ನ ಮನೆಯವರಿಗೆ ಈ ವಿಷಯ ತಿಳಿಸಬಾರದು ಎಂದು ಗುರುಗಳಿಂದ ಮಾತು ತೆಗೆದುಕೊಂಡ.

ಆತನ ಗುರು ವಿದುಷಿ ಮಯೂರಿ- ತುಂಬಾ ಕಟ್ಟು ನಿಟ್ಟು. ಸಮಯ ಪರಿಪಾಲನೆ ಮತ್ತು ನೃತ್ಯಾಭ್ಯಾಸ ಮಾಡಿಸುವಲ್ಲಿ ಎತ್ತಿದ ಕೈ. ಸ್ವತಃ ಸಂಯೋಜಿಸಿ ಪ್ರದರ್ಶಿಸಿದ ಅನೇಕ ನೃತ್ಯಗಳು, ದಕ್ಷಿಣ ಭಾರತದಲ್ಲಿ ಅವರು ಒಳ್ಳೆಯ ಹೆಸರು ಗಳಿಸುವಂತೆ ಮಾಡಿತ್ತು.
ಆಕೆಗೆ ಈ ಹುಡುಗನ ನೃತ್ಯಾಸಕ್ತಿ ಮತ್ತು ಆತ ತಿಳಿದುಕೊಂಡ ವಿಷಯಗಳ ಬಗ್ಗೆ ಸಂತೋಷವಾದರೂ ಅದನ್ನು ಆತನಿಗೆ ತೋರ್ಪಡದೇ ನೃತ್ಯಾಭ್ಯಾಸ ಶುರು ಮಾಡಿಸಿದರು. ನರ್ತನದ ಅಡಿಪಾಯವಾದ ನೃತ್ತ, ಕಾಲಿನ ಘಾತ, ಹಸ್ತ ವಿನ್ಯಾಸ, ಲಾಲಿತ್ಯ ಭಾವ ಎಲ್ಲ ಸೂಕ್ಷ್ಮಗಳನ್ನು ಗುರುಗಳು ಎಷ್ಟು ಶಿಸ್ತಿನಿಂದ ಹೇಳಿಕೊಡುತ್ತಿದ್ದರೋ, ಅಷ್ಟೇ ಶಿಸ್ತಿನಿಂದ ರಾಘವ ಕಲಿಯಲಾರಂಭಿಸಿದ.

ಅಂತೂ ಹಂಪಿ ಉತ್ಸವದಲ್ಲಿ ಆತನ ನೃತ್ಯ ಪ್ರದರ್ಶನದ ಸಮಯ ಬಂದೇ ಬಿಟ್ಟಿತು. ಅವನ ಗುರುಗಳು ಸಂಯೋಜಿಸಿದ್ದ ‘ಗೋವರ್ಧನ ಗಿರಿಧಾರಿ’ ನೃತ್ಯಬಂಧ ಮನೋಜ್ಞವಾಗಿ ಮೂಡಿ ಬಂತು. ಮೊದಲ ಬಾರಿ ಕಣ್ಣ ಮುಂದೆ ತಮ್ಮ ಬಳ್ಳಾರಿ ಹುಡುಗನ ನೃತ್ಯ ನೋಡಿ ಅಲ್ಲಿನ ಕೆಲ ಜನಕ್ಕೆ ಸಂತೋಷ-ಆಶ್ಚರ್ಯವೆನಿಸಿದರೆ, ಇನ್ನೂ ಕೆಲವರಿಗೆ ತಾತ್ಸಾರವೆನಿಸಿತು.

ಕಾರ್ಯಕ್ರಮದ ಕೊನೆಗೆ ಕಲಾವಿದರನ್ನು ಸನ್ಮಾನ ಮಾಡಲು ಮುಖ್ಯ ಅತಿಥಿಯನ್ನು ವೇದಿಕೆಗೆ ಕರೆದಾಗ, ರಾಘವನ ಕಾಲಡಿಯ ನೆಲ ಕುಸಿದಂತಾಯಿತು. ಅದು ಬೇರೆ ಯಾರೂ ಅಲ್ಲ. ಸ್ವತಃ ರಾಘವನ ತಂದೆ ಡಾ.ಪ್ರದೀಪ್!! ಸದ್ದಿಲ್ಲದೇ ಆತನಿಗೆ ಸ್ಮರಣಿಕೆಯನ್ನು ಕೊಟ್ಟು, ಕೆಂಡಾಮಂಡಲವಾಗಿದ್ದ ಕಣ್ಣುಗಳಿಂದ ಆತನನ್ನೊಮ್ಮೆ ದುರುಗುಟ್ಟಿ, ಭುಸುಗುಡುತ್ತಾ ವೇದಿಕೆಯಿಂದ ಇಳಿದು ಅವರು ಹೊರಟೇ ಹೋದರು. ಭಯ, ಆತಂಕದಿಂದ ತಗ್ಗಿಸಿದ್ದ ತಲೆಯನ್ನು ರಾಘವ ಮೇಲೆತ್ತಲಿಲ್ಲ.

ಅತ್ತ ಕೋಪ, ಅವಮಾನ, ಅಸಹನೆಯಿಂದ ಮನೆಗೆ ತೆರಳಿದ ಡಾ.ಪ್ರದೀಪ್ ಗೆ ನಿದ್ದೆಯೇ ಬರಲಿಲ್ಲ. ಮಗನನ್ನು ವೈದ್ಯನೋ ಅಥವಾ ಇನ್ನಾವುದೋ ಪ್ರತಿಷ್ಠಿತ ವ್ಯಕ್ತಿಯನ್ನಾಗಿ ನೋಡಬೇಕೆಂದು ಕನಸು ಕಂಡಿದ್ದ ಅವರಿಗೆ ಮಗ ಹೆಣ್ಣಿಗನಂತೆ ಬಣ್ಣ ಬಳಿದುಕೊಂಡು ವೇದಿಕೆಯ ಮೇಲೆ ನರ್ತಿಸಿದ್ದು ಕಿಂಚಿತ್ ಹಿಡಿಸಿರಲಿಲ್ಲ. ಅದಕ್ಕಿಂತ ಮಿಗಿಲಾಗಿ ಆತ ನೃತ್ಯ ಕಲಿಯುತ್ತಿರುವ ಮಾಹಿತಿಯೇ ರಾಘವನಾಗಲೀ, ಶಾಲೆಯವರಾಗಲೀ ತಿಳಿಸದೇ ಇದ್ದದ್ದು ಅವರ ಕೋಪವನ್ನು ಇಮ್ಮಡಿಗೊಳಿಸಿತ್ತು.

ಮರುದಿನ ಸರಿಯಾಗಿ ತಿಂಡಿಯನ್ನೂ ತಿನ್ನದೇ ಆಸ್ಪತ್ರೆಗೆ ಹೊರಟ ಪತಿಯನ್ನು ನಿಲ್ಲಿಸಿ ಶಾಂತಾ ಅವರ ಚಿಂತೆಯ ಕಾರಣವನ್ನು ಕೇಳಿಯೇ ಬಿಟ್ಟರು.
“ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕುಣಿಯುತ್ತಾ ಹೊರಟಿರುವ ನಿನ್ನ ಮಗನನ್ನೇ ಕೇಳು” ಎಂದು ಹಿಂತಿರುಗಿಯೂ ನೋಡದೇ, ಕಾಲನ್ನಪ್ಪಳಿಸುತ್ತಾ ಡಾ.ಪ್ರದೀಪ್ ಹೋದರು.ಶಾಂತಾರಿಗೆ ವಿಷಯ ಸರಿಯಾಗಿ ಅರ್ಥವಾಗದೇ ಪೆಚ್ಚಾಗಿ ಕುಳಿತರು.

ಕಾಲಾನಂತರ ರಾಘವ ಪದವಿಯನ್ನು ಮುಗಿಸಿ, ಬೆಂಗಳೂರಿನಲ್ಲಿ ಫೈನಾನ್ಸ್ ಕಂಪನಿಯೊಂದರ ಮ್ಯಾನೇಜರ್ ಆಗಿ ಕೆಲಸ ಶುರು ಮಾಡಿದ. ಒಳ್ಳೆಯ ಸಂಬಳ, ವಾರಕ್ಕೆರಡು ದಿನ ರಜೆ. ತನ್ನ ಕಲೆಯ ಕಡೆ ಗಮನ ಹರಿಸಲು ಸಮಯ. ಇನ್ನೇನು ತಾನೇ ಬೇಕು?

ರಾಘವ ಒಳ್ಳೆಯ ಕೆಲಸದಲ್ಲಿದ್ದರೂ, ತಾನು ಬಯಸಿದ ಕಲೆಯಲ್ಲಿ ತಕ್ಕ ಮಟ್ಟಿಗೆ ಹೆಸರು ಮಾಡಿದ್ದರೂ ಕೂಡ ಆತನ ತಂದೆಯ ಕೋಪ ತಣಿದಿರಲಿಲ್ಲ. ರಾಘವನ ಓರಿಗೆಯವರು ಆತನನ್ನು ಹಿಜಡಾ ಅಂತ ಕೂಗುತ್ತಿದ್ದುದು, ಸಂಬಂಧಿಕರು ರಾಘವನ ಆರೋಗ್ಯ ತಪಾಸಣೆ ಮಾಡಲಿಕ್ಕೆ ಹೇಳಿದ್ದು ಎಲ್ಲ ಅವರ ಕಿವಿಯಲ್ಲಿ ಅನುರಣಿಸುತ್ತಿತ್ತು. ತಾಯಿ ಶಾಂತಾ ತನ್ನ ಏಕೈಕ ಸಂತಾನದ ಆಕಾಂಕ್ಷೆ ಮತ್ತು ಪತಿಯ ನಿರಾಸೆ, ನೋವಿನ ನಡುವೆ ತೊಳಲಾಡುತ್ತಿದ್ದರು. ಅದರಲ್ಲೂ ವಿನಮ್ರನಾಗಿದ್ದ ರಾಘವ ತಪ್ಪು ಮಾಡಲಾರ ಎಂಬ ಭರವಸೆ ಬೇರೆ.

ಇದೆಲ್ಲದರ ಮಧ್ಯೆ ರಾಘವ ವಾರಾಂತ್ಯದಲ್ಲಿ ಬೆಂಗಳೂರಿನ ಕಲಾನಿಧಿ ಶ್ರೀ ಅನಂತಶಯನ ಅವರ ಬಳಿ ಭರತನಾಟ್ಯದ ಇತರೆ ಶೈಲಿಗಳನ್ನು ಶುರುಮಾಡಿದ. ಇಲ್ಲಿ ಬಳ್ಳಾರಿಯಂತಹ ವಾತಾವರಣವಿರಲಿಲ್ಲ. ಸಂಸ್ಕೃತಿ, ಸಂಗೀತ, ಸಾಹಿತ್ಯ ಕಲೆಯ ಬಗ್ಗೆ ಬೆಂಗಳೂರಿಗರಿಗೆ ವಿಶೇಷ ಒಲವು. ಬಳ್ಳಾರಿಯಲ್ಲಿ ಆತ ಅನುಭವಿಸಿದ್ದ ಮೂದಲಿಕೆ, ಅವಮಾನ ಯಾವುದೂ ಇಲ್ಲಿರಲಿಲ್ಲ.

ಆದರೂ ಭರತನಾಟ್ಯ ನೃತ್ಯ ಜಗತ್ತಿನಲ್ಲಿ ಪುರುಷ ಕಲಾವಿದರು ತಮ್ಮ ಛಾಪು ಮೂಡಿಸಲು ಪ್ರತಿಭೆಯ ಜೊತೆ ಕಲಾರಸಿಕರ ಮನಸ್ಸನ್ನುಆವರಿಸಿಕೊಳ್ಳುವುದು ಒಂದು ಸವಾಲೇ ಆಗಿತ್ತು. ರಂಗಪ್ರವೇಶ ಆದಾಗಿನಿಂದ ಸಂಗೀತ, ತಾಳಲಯದ ಜ್ಞಾನ, ಅಭಿನಯ, ಹಾವಭಾವ, ಅಂಗಶುದ್ಧಿ ಪ್ರತಿಯೊಂದರಲ್ಲೂ ರಾಘವ ವಿಶೇಷ ಕಾಳಜಿಯಿಂದ ಅಭ್ಯಾಸ ಮಾಡುತ್ತಿದ್ದ. ಹೀಗಾಗಿ ಆತನೇ ಸಂಯೋಜಿಸಿ ಪ್ರದರ್ಶಿಸಿದ “ಅರ್ಧನಾರೀಶ್ವರ” ನೃತ್ಯ ದೇಶ ವಿದೇಶಗಳಲ್ಲಿ ಪ್ರಖ್ಯಾತವಾಯಿತು.

ಪ್ರತಿಭೆಯನ್ನು ಸಾಬೀತುಪಡಿಸದ ಹೊರತು ಕಲಾರಸಿಕರ, ವಿಮರ್ಶಕರ ಗಮನ ಸೆಳೆಯುವುದು, ಮೆಚ್ಚುಗೆ ಗಳಿಸುವುದು ಸಾಧ್ಯವಿಲ್ಲ. ಹಾಗೆ ಅಪರಿಮಿತ ನೃತ್ಯದ ಒಲವಿನಿಂದ, ವಿಶಿಷ್ಟ ಸಾಧನೆಯ ಛಲದಿಂದ ಕರಗತಮಾಡಿಕೊಂಡ ವಿದ್ಯೆ ಯಿಂದ ಎಲ್ಲವೂ ಸಾಧ್ಯವಾಗಿ ರಾಘವನನ್ನು ಎತ್ತರಕ್ಕೆ ಕೊಂಡೊಯ್ಯಲಾರಂಭಿಸಿತು.

ಈ ಮಧ್ಯೆ ತನ್ನ ಗೆಳೆಯ ಡಾ. ಅನಿಲ್ ಅವರ ಗೃಹಪ್ರವೇಶಕ್ಕೆ ಬೆಂಗಳೂರಿಗೆ ಬಂದ ಡಾ. ಪ್ರದೀಪ್ ಕಣ್ಣಿಗೆ ಬಿದ್ದದ್ದು ಗೆಳೆಯನ ಮಗಳು ಆವಂತಿಕಾ! ಸಾಫ್ಟ್ ವೇರ್ ಉದ್ಯೋಗಿಯಾಗಿದ್ದ ಆವಂತಿಕಾ “ವೈಲ್ಡ್ ಅಂಡ್ ಸ್ಮಾರ್ಟ್ ಗರ್ಲ್” ಅಂತ ಸ್ವತಃ ಅವಳ ತಂದೆಯೇ ಹೊಗಳಿದ್ದರಿಂದ ರಾಘವನ ನೃತ್ಯದ ಗೀಳು ಬಿಡಿಸಲು ಇವಳೇ ಸರಿಯಾದ ಜೋಡಿ ಎಂದು ಡಾ. ಪ್ರದೀಪ್ ಗೆ ಅನ್ನಿಸಿ, ಗೆಳೆಯನಿಗೆ ತನ್ನ ಮನದಿಂಗಿತವನ್ನುಪ್ರಸ್ತಾಪ ಮಾಡಿದರು. ಅವರೂ ಅದಕ್ಕೆ ಒಪ್ಪಿಕೊಂಡು ಬರುವ ಭಾನುವಾರ ಇಬ್ಬರನ್ನೂ ಭೇಟಿ ಮಾಡಿಸುವುದು ಅಂತ ನಿರ್ಧಾರವಾಯ್ತು.

ಭಾನುವಾರ ಡಾ. ಅನಿಲ್ ಅವರ ಮನೆಯಲ್ಲಿ ಬೆಳಿಗ್ಗೆ ೯.೩೦ ಗಂಟೆಗೆ ಉಪಹಾರ ಮುಗಿಸಿ ರಾಘವ ಮತ್ತು ಡಾ. ಪ್ರದೀಪ್, ಡಾ. ಅನಿಲ್ ಅವರ ಜೊತೆ ಹಾಲ್ ನಲ್ಲಿ ಬಂದು ಕೂತು ಮಾತಿಗಿಳಿದರು. ಡಾ. ಅನಿಲ್ ಗೆ ಹುಡುಗನ ಮುಖ ಬೋಳು ಬೋಳು ಅನಿಸಿದರೂ ಆತನ ವಿನಮ್ರ ನಡವಳಿಕೆ ಇಷ್ಟವಾಯಿತು. ಇತ್ತ ರಾಘವನ ಕಣ್ಣುಗಳು ಹುಡುಗಿಯ ಬರುವಿಕೆಗೆ ಕಾಯುತ್ತಿದ್ದವು.

“ಹಾಯ್ ಅಂಕಲ್” ಅಂತ ಹಿಂದಿನಿಂದ ಬಂದ ಧ್ವನಿಗೆ ಒಮ್ಮೆಲೇ ಮೂವರೂ ಹಿಂದಿರುಗಿ ನೋಡಿದರು. ಲೋಹದ ಝುಮುಕಿಗೆ ಸಿಕ್ಕಿ ಬಿದ್ದಿದ್ದ ಮುಂಗುರುಳನ್ನು ಬಿಡಿಸಲೆತ್ನಿಸುತ್ತಿದ್ದ, ನೀಳಕಾಯದ ಆವಂತಿಕಾ!! ಕಾಡಿಗೆಯಿಂದ ಸುಂದರವಾಗಿ ತೀಡಿದ ಕಣ್ಣುಗಳು, ಅಂದವಾದ ಗುಲಾಬಿ ರಂಗು ತೀಡಿದ ತುಟಿ…ಮೊದಲ ನೋಟಕ್ಕೆ ಯಾರದ್ದಾದರೂ ಹೃದಯಬಡಿತ ಒಂದು ಕ್ಷಣ ನಿಂತು ಬಿಡಬೇಕು ಎನ್ನುವಂಥ ಚೆಲುವು! ಬಿಟ್ಟ ಕಣ್ಣು ಬಿಟ್ಟ ಹಾಗೆ ರಾಘವ ಆಕೆಯನ್ನು ನೋಡುತ್ತಿರುವಾಗಲೇ “ ಹಾಯ್, ಐ ಆಮ್ ಆವಂತಿಕಾ” ಎಂದು ಕೈ ಕುಲುಕಿಸಲು ಕೈ ಮುಂದೆ ಮಾಡಿದ ಆವಂತಿಕಾಳನ್ನು ನೋಡಿ ಅರೆಕ್ಷಣ ರಾಘವನಿಗೆ ಕಸಿವಿಸಿಯಾದರೂ ಸುಧಾರಿಸಿಕೊಂಡು “ ಹಾಯ್, ಐ ಆಮ್ ರಾಘವ. ನೈಸ್ ಟು ಮೀಟ್ ಯು” ಅಂತ ಕೈ ಕುಲುಕಿದ. ಕುಶಲೋಪರಿಯ ಮಾತುಗಳ ನಂತರ, ಇಬ್ಬರೂ ಸ್ವಲ್ಪ ಕೂತು ಮಾತಾಡಲು ಬಾಲ್ಕನಿಗೆ ಹೋದರು. ಇಬ್ಬರೂ ತಮ್ಮ ಕೆಲಸ, ಹವ್ಯಾಸಗಳ ಬಗ್ಗೆ ಮಾತನಾಡುವಾಗ, ರಾಘವ ತನ್ನ ನೃತ್ಯಾಸಕ್ತಿಯ ಬಗ್ಗೆ ಹೇಳಿದ. ಅತ್ಯಂತ ಉತ್ಸಾಹದಲ್ಲಿದ್ದ ಆವಂತಿಕಾಗೆ ಅದು ತಲೆಗೆ ಹೋಗಲೇ ಇಲ್ಲ. ಇಬ್ಬರ ಒಪ್ಪಿಗೆಯ ಮೇರೆಗೆ ವಿವಾಹ ಸರಾಗವಾಗಿ ನೆರವೇರಿತು. ತಂದೆಯ ಒಂದು ಆಸೆಯನ್ನಾದರೂ ಪೂರೈಸಿದೆ ಎನ್ನುವ ಸಮಾಧಾನ ರಾಘವನಿಗಾಗಿತ್ತು.

ಆಧುನಿಕತೆಯೇ ಮೈವೆತ್ತಂತಿದ್ದ ಆವಂತಿಕಾಳಿಗೂ, ವಿನಮ್ರತೆ, ಸಂಸ್ಕೃತಿಯನ್ನು ನೆಚ್ಚಿಕೊಂಡಿದ್ದ ರಾಘವನಿಗೂ ಮೊದಲ ರಾತ್ರಿಯೇ ‘ಪ್ರಥಮ ಚುಂಬನಂ ದಂತ ಭಗ್ನಂ’ ಎಂಬಂಥ ಅನುಭವವಾಯ್ತು. ಅಲ್ಲಿಂದ ಶುರುವಾದ ಸಣ್ಣ ಬಿರುಕು, ಕಾಲ ಕಳೆದಂತೆ ಕಂದರವಾಗುತ್ತ ಹೋಯಿತು..

ಹೀಗೆ ಒಂದು ದಿನ ಆವಂತಿಕಾಳ ಸ್ನೇಹಿತರು ಮನೆಗೆ ಬಂದಿದ್ದಾಗ ಮೇಜಿನ ಮೇಲಿದ್ದ ದಿನಪತ್ರಿಕೆಯ ಕೆಳಗೆ ಇದ್ದ ಆಮಂತ್ರಣ ಪತ್ರಿಕೆ ನೋಡಿದರು. “ಹರಿ-ಹರ” ಭರತನಾಟ್ಯ ನೃತ್ಯ ಪ್ರದರ್ಶನ- ಕಲಾವಿದರು – ಕಲಾರತ್ನ ರಾಘವ ಎಂಬ ಹೆಸರು ನೋಡಿ “ಹೇ ಆವಿ, ಲುಕ್ ಆಟ್ ದಿಸ್! ಯು ನೆವರ್ ಟೋಲ್ಡ್ ಅಸ್ ಅಬೌಟ್ ದಿಸ್. ಲೆಟ್ಸ್ ಗೋ ಅಂಡ್ ವಾಚ್ ದಿಸ್ ” ಅಂದರು. ಮೊದಲ ಬಾರಿ ತಾನು ರಾಘವನ ಜೊತೆ ಮಾತಾಡಿದಾಗ ಆತ ಈ ವಿಷಯ ಹೇಳಿದ್ದರ ಬಗ್ಗೆ ಆಕೆ ಅಷ್ಟೊಂದು ಗಮನ ಹರಿಸಿರಲಿಲ್ಲವಾದ್ದರಿಂದ ಈಗ ಕಾರ್ಯಕ್ರಮ ನೋಡಲು ಸ್ನೇಹಿತರೊಡನೆ ಒಮ್ಮೆ ಹೋಗಿಯೇ ಬಿಡುವ ಅಂತ ಆವಂತಿಕಾಳಿಗೂ ಅನಿಸಿತು.

ಅಂದು ರಾತ್ರಿ ರಾಘವನ ಮುಂದೆ ತನ್ನಿಚ್ಛೆಯನ್ನು ತಿಳಿಸಿದಳು. ಮದುವೆಯಾದಾಗಿನಿಂದ ಇಬ್ಬರ ಮಧ್ಯ ನಡೆಯುತ್ತಿದ್ದ ಒಂದು ಬಗೆಯ ಶೀತಲ ಸಮರಕ್ಕೆ ಹೊರತಾಗಿದ್ದ ಮಾತು ಇದಾಗಿತ್ತು. ಆ ಶೀತಲ ಸಮರದ ಕಾರಣದಿಂದ ರಾಘವ ಈವರೆಗೆ ನಡೆದ ತನ್ನ ಯಾವ ಕಾರ್ಯಕ್ರಮದ ಬಗ್ಗೆ ಪ್ರಸ್ತಾಪವಾಗಲೀ, ನೃತ್ಯಾಭ್ಯಾಸವಾಗಲೀ ಮನೆಯಲ್ಲಿ ಮಾಡಿಯೇ ಇರಲಿಲ್ಲ. ಇಂದು ಆವಂತಿಕಾಳಿಂದಲೇ ಆ ಕೋರಿಕೆ ಬಂದಾಗ ಏನೂ ತೋಚದೇ ‘ಹ್ಞುಂ’ ಎಂದು ತಲೆ ಅಲ್ಲಾಡಿಸಿದ.

ಕಾರ್ಯಕ್ರಮದ ದಿನ ತನ್ನ ಸ್ನೇಹಿತರ ಜೊತೆ ಬಂದ ಆವಂತಿಕಾ, ಮೊದಲ ಸಾಲಿನಲ್ಲಿ ತಮಗಾಗಿ ಕಾದಿರಿಸಿದ್ದ ಆಸನಗಳ ಮೇಲೆ ಕುಳಿತರು. ಮೊದಲೊಂದೆರಡು ಸಲ ಭರತನಾಟ್ಯ ಕಾರ್ಯಕ್ರಮಗಳಿಗೆ ಹೋಗಿದ್ದರೂ ಕೂಡ ಆಕೆ ಯಾವ ಕಾರ್ಯಕ್ರಮವನ್ನೂ ಪೂರ್ತಿಯಾಗಿ ನೋಡಿರಲಿಲ್ಲ. ತನಗೆ ಹತ್ತಿರದವರ ನೃತ್ಯ ಪ್ರದರ್ಶನ ನೋಡುವುದು ಇದೇ ಮೊದಲಾಗಿತ್ತು.

ಗಣೇಶ ವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮ, ಒಂದೆರಡು ನೃತ್ಯಗಳ ನಂತರ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿದ್ದ “ಹರಿ-ಹರ” ನೃತ್ಯದೆಡೆಗೆ ಸಾಗಿತು. ಒಂದು ತ್ರಿಶದಲ್ಲಿ ಎರಡು ಜತಿಗಳಿಂದ ಸಂಯೋಜಿಸಿದ ನೃತ್ಯಅದಾಗಿತ್ತು. ಸಮರ್ಪಕ ಸಹವಾದ್ಯಗಳೊಂದಿಗೆ ಲಾಲಿತ್ಯ, ಭಂಗಿ, ಅಭಿನಯವನ್ನು ತುಂಬಿಸಿ ಪ್ರಸ್ತುತಿ ಪಡಿಸಿದ ನೃತ್ಯ ಪ್ರೇಕ್ಷಕರಲ್ಲಿ ದೈವಿಕ ಅನುಭೂತಿಯನ್ನೇ ಸೃಷ್ಟಿಸಿತು. ಎಲ್ಲೆಲ್ಲೂ ಕರತಾಡನ. ರೋಮಾಂಚನಗೊಂಡ ಆವಂತಿಕಾ ಸಂತೋಷದಿಂದ ಇನ್ನೇನು ರಾಘವನನ್ನು ತಬ್ಬಿಕೊಳ್ಳಬೇಕು ಅನ್ನುವಷ್ಟರಲ್ಲಿ ಆಕೆಯ ಗೆಳತಿಯರು “ವಾವ್!” ಅಂದಾಗ ಆವಂತಿಕಾಗೆ ಮಾಯದ ಹುಣ್ಣಿನ ಮೇಲೆ ಉಪ್ಪು ಸಿಂಪಡಿಸಿದಂತಾಯಿತು. ಅದೂ ಸಾಲದು ಎಂಬಂತೆ ಆಕೆಯ ಗೆಳೆಯನೊಬ್ಬ “ಆವಿ, ಈತ ಹೆಣ್ಣಾಗಿದ್ದರೆ ನಾನೇ ಮದುವೆಯಾಗಿಬಿಡ್ತಿದ್ದೆ” ಎಂದು ಹಲ್ಲು ಕಿರಿದ. ಆವಂತಿಕಾಗೆ ಮೈಯೆಲ್ಲಾ ಬೆಂಕಿ ಹೊತ್ತಿ ಉರಿದ ಹಾಗೆ ಭಾಸವಾಗಿ ಧಡಕ್ಕನೆ ಎದ್ದು ಕಾಲಪ್ಪಳಿಸುತ್ತ ಎಲ್ಲರನ್ನೂ ಅಲ್ಲೇ ಬಿಟ್ಟು ಹೊರಟಹೋದಳು.

ರಾಘವ ಕಾರ್ಯಕ್ರಮ ಮುಗಿಸಿ ಮನೆಗೆ ಹೊರಡಲು ಸಜ್ಜಾಗಿ, ಆವಂತಿಕಾ ಹಾಗೂ ಆಕೆಯ ಸ್ನೇಹಿತರನ್ನು ಹುಡುಕಿದಾಗ ಅವರಾರೂ ಅಲ್ಲಿ ಕಾಣಲಿಲ್ಲ. ಆವಂತಿಕಾಳ ಈ ತರಹದ ವರ್ತನೆ ಈಗಾಗಲೇ ನೋಡಿದ್ದರಿಂದ ರಾಘವ ಬೇಸರಿಸಿಕೊಳ್ಳದೇ ಮನೆಗೆ ಹೋದ. ಆದರೆ ಆವಂತಿಕಾ ಮನೆಯಲ್ಲೂ ಇರಲಿಲ್ಲ. ಫೋನ್ ಮಾಡಿದರೆ ಅದಕ್ಕೂ ಉತ್ತರಿಸಲಿಲ್ಲ. ಗೆಳತಿಯ ಮನೆಯಲ್ಲಿ ಸ್ಲೀಪ್ ಓವರ್ ಮಾಡಿರಬೇಕು ಅಂದುಕೊಂಡು ನಿದ್ದೆ ಹೋದ.

ನಂತರ ಎರಡು ದಿನವಾದರೂ ಅವಳ ಸುದ್ದಿಯೇ ಇಲ್ಲದ್ದರಿಂದ ತನ್ನ ಮಾವ ಡಾ. ಅನಿಲ್ ಅವರಿಗೆ ಫೋನಾಯಿಸಿದ. ಆಗ ಅವರು ಆವಂತಿಕಾಗೆ ನಿನ್ನ ಜೊತೆ ಬಾಳಲು ಇಷ್ಟ ಇಲ್ಲ. “ಶಿ ವಿಲ್ ಬಿ ಸೆಂಡಿಂಗ್ ದ ಡಿವೋರ್ಸ್ ನೋಟಿಸ್ ಶಾರ್ಟ್ಲಿ” ಎಂದು ಮಾತು ಮುಗಿಸಿಬಿಟ್ಟರು.
ತನ್ನ ತಂದೆಯ ಒಂದು ಇಚ್ಛೆಯನ್ನಾದರೂ ಪೂರೈಸಿದ್ದೇನಲ್ಲಾ ಎಂಬ ಸಂತೃಪ್ತಿಯಲ್ಲಿದ್ದ ರಾಘವನಿಗೆ ಅಲ್ಲೇ ಕುಸಿದು ಬೀಳುವಂತಾಯಿತು. ಎರಡು ದಿನ ಅದೇ ಬೇಸರದಲ್ಲಿದ್ದ ರಾಘವ ತುಂಬಾ ಯೋಚನೆ ಮಾಡಿ ತನ್ನ ಕೆಲಸಕ್ಕೆ ರಾಜಿನಾಮೆಯಿತ್ತು ಎಲ್ಲವನ್ನೂ, ಎಲ್ಲರನ್ನೂ ತ್ಯಜಿಸಿ, ಮದುರೈಗೆ ಹೋಗಿ ಕಲಾಸೇವೆಯಲ್ಲೇ ತನ್ನ ಜೀವನವನ್ನು ವ್ಯಯಿಸಬೇಕೆಂಬ ನಿರ್ಧಾರದಿಂದ ಎಲ್ಲವನ್ನೂ ಪ್ಯಾಕ್ ಮಾಡಿಕೊಳ್ಳತೊಡಗಿದ.

“ಒರ್ವನೇ ನಿಲುವೆ ನೀನುತ್ಕಟಕ್ಷಣಗಳಲಿ ।
ಧರ್ಮಸಂಕಟಗಳಲಿ, ಜೀವಸಮರದಲಿ ।।
ನಿರ್ವಾಣದೀಕ್ಷೆಯಲಿ, ನಿರ್ಯಾಣಘಟ್ಟದಲಿ ।
ನಿರ್ಮಿತ್ರನಿರಲು ಕಲಿ – ಮಂಕುತಿಮ್ಮ ।।”
ಎಂದು ಆತನ ಗುರುಗಳು ಹೇಳಿದ ಸಾಲುಗಳು ಮತ್ತೇ ಅನುರಣನವಾದಂತಾಯಿತು.

ಡಾ. ಅನುಪಮಾ ದೇಶಮುಖ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
Dr sridevi
Dr sridevi
2 years ago

ಸುಂದರ ಕಥಾ ಹಂದರ😊

ಡಾ ಅನುಪಮಾ
ಡಾ ಅನುಪಮಾ
2 years ago
Reply to  Dr sridevi

ಧನ್ಯವಾದಗಳು

Shailaja N Bagewadi
Shailaja N Bagewadi
2 years ago

ಅನುಪಮಾ ನೀನು ಬರೆದ ಕತೆ ಓದಿದೆ ಚೆನ್ನಾಗಿದೆ.ನಿರೂಪಣಾ ಶೈಲಿ ಸೊಗಸಾಗಿದೆ.ಕೂತುಹಲದಿಂದ ಓದಿಸಿಕೊಂಡು ಹೋಗುತ್ತದೆ.ಭರತನಾಟ್ಯ ದ ಕುರಿತು ಜನರ ಅವಜ್ಞೆ,ಅಸಡ್ಡೆ ಇನ್ನೂ ಇದೆ.ಅದರ ಮೂಲಪುರುಷ ಶಿವನೆ ಎಂಬುದು ಅರಿತಿಲ್ಲ.
ಕತೆಯ ಅಂತ್ಯದಲ್ಲಿ ಯುಟರ್ನ(ತಿರುವು) ಬೇಕಿತ್ತು. ಹೊಸ ಹೊಳಹಿನೊಂದಿಗೆ ಮುಕ್ತಾಯ ವಾದರೆ ಚೆನ್ನಾಗಿತ್ತು.ಆದರೂ ನೀನು ಕತೆ ಹೆಣದ ರೀತಿ ಅನನ್ಯ👌👍

Dr Anupama Deshmukh
Dr Anupama Deshmukh
2 years ago

ಧನ್ಯವಾದಗಳು.

4
0
Would love your thoughts, please comment.x
()
x