Act -1978, ನಾತಿಚರಾಮಿ, ಹರಿವು ಚಿತ್ರ ನಿರ್ದೇಶಕ ಮಂನ್ಸೋರೆ ಅವರ ‘The Critic’ ಸದ್ಯ ಈಗ ಸದ್ದು ಮಾಡುತ್ತಿರುವ ಒಂದು ಕಿರುಚಿತ್ರ. ಹಾಗೆ ’19 20 21′ ಮತ್ತು ‘ಅಬ್ವಕ್ಕ’ ಬಹು ನಿರೀಕ್ಷೆಯ ಮುಂದಿನ ಚಿತ್ರಗಳು ಎಂಬ ಸುದ್ದಿ ಇದೆ.
ಸಿನಿಮಾದಲ್ಲಿ ಎರಡು ಬಗೆ. ಒಂದು length movie ಇನ್ನೊಂದು Short movie. ಸದ್ಯ Short movie ಗಳದೇ ಕಾರುಬಾರು. ಏಕೆಂದರೆ ವೆಚ್ಚದ ದೃಷ್ಟಿಯಿಂದಲೂ ಮತ್ತು ಪ್ರಯಾಣ ರಹಿತವಾಗಿಯೂ ಒಂದು ನಿಗದಿತ ಸ್ಥಳದಲ್ಲಿ ತಮ್ಮ ಕಲ್ಪನೆಯ ಒಂದಿಡೀ ಚಿತ್ರವನ್ನು ಚಿತ್ರಿಸುವ ಸುಲಭ ಮಾರ್ಗವಿದು. ಹಾಗಾಗಿ ಹೊಸ ಆಲೋಚನೆಯ ಚಿಂತನಾರ್ಹವಾದ ಸೃಜನಶೀಲ ಕಲೆಯ ವ್ಯಕ್ತತೆಗೆ ಅದರಲ್ಲು ಅವಕಾಶ ವಂಚಿತ ಯುವ ಪ್ರತಿಭೆಗಳಿಗೆ Short movie ಒಂದು ವೇದಿಕೆಯಾಗಿದೆ. ಈ ಮೂಲಕ ಈ ಸಿನಿಮಾ (ಪರದೆ ಮೇಲಿನ – short or length movie) glamour ನ ವ್ಯಾಕರಣ ಕಾಲದಿಂದ ಕಾಲಕ್ಕೆ ಬದಲಲಾಗುತ್ತಲೇ ಇದೆ. ಅದು ಬದಲಾಗಬೇಕು. ಪರಿವರ್ತನೆಯೇ ಜಗದ ನಿಯಮ ಅನ್ನುವ ಹಾಗೆ ಈ ಬದಲಾಗುವ/ಬದಲಾದ ಬಗೆಯೇ ಸೃಜನಶೀಲ ಲಕ್ಷಣ!
‘ಗಂಡಸಲ್ಲದ ಗಂಡನಿಂದ ನಾನು ವಿಚ್ಛೇದನ ಬಯಸಿದ್ದೇನೆ’ ಎಂದು ಹೇಳಿದ ದಿನಕ್ಕೆ ಆಕೆಗೆ ಮುಟ್ಟು ನಿಂತು ಅರ್ಧಮಾಸ ಕಳೆದಿತ್ತು ಎಂಬ ಸತ್ಯ ಮನೆಗೆಲಸದಾಕೆಯಿಂದ ಆಕೆಯ ವಕೀಲನಿಗೆ ತಿಳಿಯಿತು” ಎಂಬ ಜರ್ಮನ್ ನ ಅತೀ ಸಣ್ಣಕಥೆಯೊಂದು ಒಬ್ಬ ಪರಿಣಿತ ನಿರ್ದೇಶಕನಿಂದ ಹಿಗ್ಗಲಿಸಿಕೊಂಡು ಒಂದೂವರೆ ಗಂಟೆ ಅವಧಿಯ ಸಿನಿಮಾ ಆಗಿದ್ದಿದೆ. ಇದೇ ಕಥೆಯಾಧರಿಸಿ ಇನ್ನೊಬ್ಬ ಜರ್ಮನ್ ನಿರ್ದೇಶಕನ ಕೈಚಳಕದಿಂದ ಹದಿನೆಂಟು ನಿಮಿಷಗಳ ಕಿರುಚಿತ್ರವಾಗಿ ಸಂಚಲನ ಸೃಷ್ಟಿಸಿದ್ದಿದೆ. ಹಾಗೆ ಫ್ರಾನ್ಸ್ ನ ಮುನ್ನೂರು ಪುಟಗಳ ಕಾದಂಬರಿಯೊಂದು ಕೇವಲ ಇಪ್ಪತ್ತು ನಿಮಿಷಗಳ ಡಾಕ್ಯುಮೆಂಟರಿ ರೂಪದ ಕಿರುಚಿತ್ರವಾಗಿದೆ.
ಒಂದು ಕಿರುಚಿತ್ರ ‘The Black Hole.’ ಸಂಭಾಷಣೆಯೇ ಇಲ್ಲದ ಒಂದು ಪಾತ್ರದ ಹಲವು ಆಯಾಮಗಳ ಒಂದು ಗುಚ್ಛವಿದು! ಈ ಗುಚ್ಛ ಮನುಷ್ಯನ ದುರಾಸೆಯ ದುರಂತದ ಚಿತ್ರವನ್ನು ತೆರೆದಿಡುತ್ತದೆ. ಮೆಷಿನ್ ನಿಂದ ತೆಗೆದಿಟ್ಟ ಜ಼ೆರಾಕ್ಸ್ ಪ್ರಿಂಟ್ ನ ಹಾಳೆಯ ಮೇಲೆ ವೃತ್ತಾಕಾರದ ಕಪ್ಪು ಪ್ರಿಂಟ್ ಇದೆ. ಅದನ್ನು ಪಕ್ಕದ ಮೆಷಿನ್ ಮೇಲೆ ಇಡುತ್ತಾನೆ. ಜೊತೆಜೊತೆಗೆ ತುಟಿಗೆ ಅಂಟಿಸಿ ಕುಡಿಯುತ್ತಿದ್ದ ಗ್ಲಾಸ್ ನ್ನು ಅದರ ಮೇಲೆ ಇಟ್ಟನಷ್ಟೆ. ಆದರೆ ಕಣ್ಕಟ್ಟಿನಂತೆ ಕುಡಿದಿಟ್ಟ ಆ ಗ್ಲಾಸ್ ಕಣ್ಣಿಗೆ ಕಾಣದೆ ಆಶ್ಚರ್ಯಚಕಿತನಾಗಿ ಪ್ರಿಂಟ್ ಹಾಳೆಯ ಮೇಲಿನ ಕಪ್ಪಾದ ವೃತ್ತಾಕಾರದತ್ತ ನೋಟ ಬೀರುತ್ತಾನೆ. ಅದರ ಮೇಲೆ ಬೆರಳಿಟ್ಟು ಪರೀಕ್ಷಿಸುತ್ತಾನೆ. ಆತನ ಕೈ ರಂಧ್ರದೊಳಗೆ ಹೋದಂತ ಭಾವ. ಅರೆ ಸಲೀಸು ಕೈ ಒಳಹೋಗಿ ತಾನು ಕುಡಿದಿಟ್ಟ ಗ್ಲಾಸು ಸಿಗುತ್ತದೆ. ಕುತೂಹಲಗೊಂಡ ಆತ ಕಪ್ಪಾದ ಪ್ರಿಂಟ್ ಹಾಳೆಯನ್ನು ಮೇಲೆತ್ತಿ ಬೆಳಕಿಗೆ ಹಿಡಿಯುತ್ತಾನೆ. ಆದರೆ ಅದು ಪ್ರಿಂಟ್ ತೆಗೆದ ಹಾಳೆಯಷ್ಟೆ! ಮತ್ತೆ ಮತ್ತೆ ಕಪ್ಪು ಭಾಗದ ಮಧ್ಯೆ ಕೈತೂರಿಸಿ ಪರೀಕ್ಷಿಸುತ್ತಾನೆ. ಅದು ರಂಧ್ರದಂತೆ ಮತ್ತೆ ಭಾಸ! ಆ ರಂಧ್ರ ಕಣ್ಣಿಗೆ ನೇರವಾಗಿ ಕಾಣುವುದಿಲ್ಲ. ಇರಲಿ ನೋಡುವ ಅಂತ ಪ್ರಿಂಟ್ ಹಾಳೆಯನ್ನು ಆ ಕಪ್ಪುರಂಧ್ರದ ಮೂಲಕ ಎಲ್ಲೆಂದರಲ್ಲಿ ತನಗೆ ಬೇಕಾದ ಪದಾರ್ಥ ಪಡೆಯುತ್ತಾನೆ. ಇದರಿಂದ ಆತನಿಗೆ ಖುಷಿಯಾಗುತ್ತದೆ. ಇದರ ಮೂಲಕ ತಾನು ಬಯಸಿದ್ದನು ಪಡೆಯುವ ಆಸೆ ಹಂಬಲಿಕೆ ಇಮ್ಮಡಿ ಮುಮ್ಮಡಿ ಹೆಚ್ಚುತ್ತದೆ. ಆ ಹಾಳೆಯನ್ನು ಗೋಡೆಗೆ ತಾಕಿಸಿ ಕಪ್ಪುವೃತ್ತದಲ್ಲಿ ಕೈ ಇಡುತ್ತಾನೆ. ಕೈ ಸಲೀಸು ಗೋಡೆಯೊಳಗೆ ಹೋದಂತ ಭಾವ ಭಾಸವಾಗುತ್ತದೆ. ವಾವ್ಹ್ ಎಂಥ ಚಮತ್ಕಾರದ ರಂಧ್ರ! ಅಲ್ಲೆ ಹತ್ತಿರ ಲಾಕರ್ ಇದೆ. ಅದರ ಹತ್ತಿರ ಹೋಗುತ್ತಾನೆ. ಕಪ್ಪುರಂಧ್ರದ ಹಾಳೆಯನ್ನು ಲಾಕರ್ ಗೆ ತಾಕಿಸಿ ಇಟ್ಟು ಕೈ ಹಾಕುತ್ತಾನೆ. ಕೈ ಲಾಕರ್ ಒಳಗೆ ಹೋಗುತ್ತದೆ. ಅಲ್ಲಿ ದುಡ್ಡಿನ ಕಂತೆಗಳೇ ಸಿಗುತ್ತವೆ. ಮತ್ತೆ ಮತ್ತೆ ಹಾಕಿ ದುಡ್ಡಿನ ಕಂತೆ ತೆಗೆದಂತೆಲ್ಲ ಅವನಿಗೆ ಅಲ್ಲಿರುವ ಎಲ್ಲ ಸಂಪತ್ತನ್ನು ಬಾಚುವ ಆಸೆಯಾಗುತ್ತದೆ. ಮತ್ತೆ ಮತ್ತೆ ಕೈತೂರಿಸಿ ದುಡ್ಡಿನ ಕಂತೆ ಎಳೆದೆಳೆದು ಎರಡೂ ಕೈಯಿಂದ ಬಾಚಲು ಸಾವಕಾಶವಾಗಿ ತನ್ನಿಡೀ ದೇಹದ ಸಮೇತ ಒಳಗೆ ತೂರಿಕೊಳ್ಳುತ್ತಾನೆ. ಅವನು ಒಳ ತೂರಿದಾಕ್ಷಣ ಕಪ್ಪುರಂಧ್ರದ ಹಾಳೆ ಅವನ ಹಿಡಿತದಿಂದ ಕಳಚಿ ಕೆಳಕ್ಕೆ ಜಾರಿ ಬೀಳುತ್ತದೆ. ಲಾಕರ್ ಯಥಾಸ್ಥಿತಿಗೆ ಮರಳುತ್ತದೆ. ಅಲ್ಲಿಗೆ ತೆರೆ ಬೀಳುತ್ತದೆ. ಇದು The Black Hole ನ ಚಿತ್ರದೃಶ್ಯ.
ಒಂದು ರಂಧ್ರದ ಮೂಲಕ ಮನುಷ್ಯನೊಳಗಿನ ಆಸೆಯ ಒಂದಂಶವು ದುರಾಸೆಯ ರೂಪದಲ್ಲಿ ಬದುಕಿನ ಸತ್ಯವನ್ನು ತೆರೆದಿಡುತ್ತದೆ. ಜಗತ್ತಿಗೆ ಅಹಿಂಸೆಯ ಮಹತ್ವ ಸಾರಿದವನು ಬುದ್ಧ. ಬುದ್ಧನ ತತ್ವಗಳು ಯಾವತ್ತಿಗೂ ಸಾರ್ವಕಾಲಿಕ. ಹಾಗೆ ಇಲ್ಲಿ ಬುದ್ಧನ ‘ಆಸೆ ದುಃಖದ ಮೂಲ’ದ ಗುರುತಿದೆ. ನಿರ್ದೇಶಕನೊಬ್ಬ ಕ್ಲಿಷ್ಟಕರ ಬದುಕಿನ ಘಟ್ಟದಲ್ಲಿ ಕಾಣುವ ನೂರಾರು ಕಪ್ಪರಂಧ್ರಗಳ ಒಳ ಸೂಕ್ಷ್ಮಗಳನ್ನು ಏಕಪಾತ್ರದ ಭಾವದೊಳಕ್ಕೆ ಸೇರಿಸಿ ಅದಕ್ಕೆ ಬೆಳಕು ಕತ್ತಲಿನ ರಂಗಸಜ್ಜಿಕೆಯ ಕ್ಯಾನ್ವಾಸ್ ಟಚ್ ಕೊಟ್ಟು ಕಿರು ಪರದೆಯಲ್ಲಿ ಚಲನೆಯ ರೂಪ ನೀಡಿದ್ದಾನೆ. ಈ ಕಿರುಚಿತ್ರದ ಅವಧಿ ಎರಡು ನಿಮಿಷ ನಲವತ್ತೊಂಭತ್ತು ಸೆಕೆಂಡ್! ಇದು ಜಗತ್ತಿನ ಶ್ರೇಷ್ಠ ಕಿರುಚಿತ್ರಗಳ ಸಾಲಿನಲ್ಲಿ ದಾಖಲಾಗಿದೆ. ಈ ಕಿರುಚಿತ್ರದಲ್ಲಿ ಅಚಾನಕ್ಕಾಗಿ ಘಟಿಸಿದ ಒಂದು ಸಣ್ಣ ವಸ್ತು ವಿಷಯವನ್ನು ಇಟ್ಟುಕೊಂಡು ವ್ಯಕ್ತಿ, ಮತ್ತು ವ್ಯಕ್ತಿತ್ವದೊಂದಿಗಿನ ಭಾವನೆಗಳು ನಿರ್ದೇಶಕನ ನೈಪುಣ್ಯತೆಯಿಂದ ಪರದೆಯ ಮೇಲೆ ಹೇಗೆ ದೃಶ್ಯಕಾವ್ಯವಾಗಿದೆ ಎಂಬುದು ಇದರ ಅಗ್ಗಳಿಕೆ.
ಹೀಗಾಗಿ ಕಿರುಚಿತ್ರಗಳಿಗೆ ಅದರದೇ ಆದ ಇತಿಹಾಸವಿದೆ. ಅದರದೇ ಆದ ಚೌಕಟ್ಟಿದೆ. ಕಿರುಚಿತ್ರದ ದೃಶ್ಯರೂಪ/ದೃಶ್ಯಕಾವ್ಯವಾಗಿಸುವ ಬಗೆ ಸುಲಭದ್ದಲ್ಲ. ಅದೊಂದು ಚಮತ್ಕಾರಿ ಕೆಲಸ. ಒಂದು ಅಥವಾ ಎರಡು ಪಾತ್ರಗಳ ಹೆಣಿಗೆಯೊಳಗೆ ಅದರ ನೈಪುಣ್ಯತೆ ಅಡಗಿದೆ. ಇಲ್ಲಿ ಮುಖಭಾವದಲ್ಲೆ ಅಭಿವ್ಯಕ್ತಿಸುವಂಥ ಕಲೆ. ಇದರ ಅನಾವರಣಕ್ಕೆ ಕ್ಯಮರಾ ಸೆರೆ ಕೂಡ ಮುಖ್ಯ. ಚಿತ್ರ ನಿರ್ದೇಶಕನ ಕಲ್ಪನೆ ಅವನ ಸಖ್ಯದಲ್ಲಿನ ಕ್ಯಮರಾ ನೇಯ್ಗೆಯಲ್ಲಿ ರೂಪು ಪಡೆಯುತ್ತದೆ. ಇದೇ ಇದರ ಪ್ರಧಾನತೆ. ಅದರಲ್ಲು ಕೆಲ ಕಿರುಚಿತ್ರಗಳು ಸಂಭಾಷಣೆ ರಹಿತವಾಗಿರುತ್ತವೆ. ಅದಕ್ಕೆ ಉದಾಹರಣೆಯಾಗಿ The Black Hole ಇದೆ. ಇಲ್ಲಿ ಪಾತ್ರಗಳ ಸನ್ನೆ ಮತ್ತು ಭಾವಾಭಿವ್ಯಕ್ತಿಯೇ ಪ್ರಮುಖಾಂಶ. ಇದು ನೋಡುಗನಿಗೆ ಬಹಳ ಪರಿಣಾಮಕಾರಿ ಅನುಭವವನ್ನು ಒದಗಿಸುತ್ತವೆ. ಇದೆಲ್ಲವು ನಿರ್ದೇಶಕನ ಸೂಕ್ಷ್ಮತೆ ಮೇಲೆ ನಿಂತಿದೆ. ಇಲ್ಲಿ ನಿರ್ದೇಶಕನೇ ಹೀರೋ!
ಇಷ್ಟೆಲ್ಲ ಪೀಠಿಕೆಗೆ ಕಾರಣ ಆರಂಭದಲ್ಲೆ ಹೇಳಿದಂತೆ The Critic. ಅದು ಬಿ.ಎಂ.ಬಶೀರ್ ಅವರ ಒಂದು ವಿಷಯದ ಮೇಲಿನ ಅತೀ ಸಣ್ಣಕಥಾ ಹಂದರವುಳ್ಳ ಹನ್ನೊಂದು ನಿಮಿಷ ನಲವತ್ತೊಂಭತ್ತು ಸೆಕೆಂಡ್ಸ್ ಗಳ ಕಿರುಚಿತ್ರ. ‘ದಿ ಕ್ರಿಟಿಕ್’ (The Critic) – ವಿಮರ್ಶಕ, ಕೃತಿ ಪರಾಮರ್ಶಕ, ಕೃತಿ ಮೌಲ್ಯ ಶೋಧಕ ಅನ್ನುವುದು. ಸಾಹಿತ್ಯದ ಪ್ರಕಾರ ಅಥವಾ ಇನ್ನಾವುದೊ ರೂಪದ ಬರಹವನ್ನು ವಿಮರ್ಶೆಗೆ ಒಡ್ಡುವವ.
ಈ ‘critic’ ನಿರ್ದೇಶಕ ಮಂಸೋರೆ ಬಿ.ಎಂ.ಬಷೀರರ ಕಥೆಗೆ ನ್ಯಾಯ ದೊರಕಿಸಿದ್ದಾರೆಯೇ ಎಂಬುದು. ಇವರು ಈಗಾಗಲೇ ಭಿನ್ನ ನಿರ್ದೇಶಕರ ಪಟ್ಟಿಯಲ್ಲಿದ್ದಾರೆ. ಸಾಹಿತಿ ಮತ್ತು ಬುದ್ದಿಜೀವಿ ವಲಯದ ಒಡನಾಟದಲ್ಲಿದ್ದಾರೆ. ಹಾಗಾಗಿಯೇ ಈ critic ಅನೇಕರ ಗಮನ ಸೆಳೆದಿದೆ. ಈ critic ‘ಕಥೆಯೊಳಗೆ’ ಕನ್ನಡದ್ದೇ ಆದ ಸೊಗಡಿದೆ. ಕನ್ನಡ ಸಾಹಿತ್ಯ ವಲದೊಳಗೆ ಬೇರುಬಿಟ್ಟ ‘ಆತ್ಮವಂಚಕ ವಿಮರ್ಶೆ’ ಮತ್ತು ವಿಮರ್ಶಾ ಮೀಮಾಂಸೆಯ ಸುತ್ತ ವಿಮರ್ಶಕನೊಬ್ಬನ ‘ಆತ್ಮ ವಿಮರ್ಶೆ’ಯ ಆತ್ಮಾವಲೋಕನದ ಎಳೆಯೇ critic ನ ಪ್ರಧಾನ ಅಂಶ. ಕನ್ನಡದ classic ನಿರ್ದೇಶಕ ಎಂದೇ ಹೆಸರಾದ ಟಿ.ಎಸ್.ನಾಗಾಭರಣ, ನಟಿ ಉಮಾ ಮುಖ್ಯಭೂಮಿಕೆಯಲ್ಲಿರುವ ಈ ಕಿರುಚಿತ್ರದ ಕಥಾವಸ್ತು ಅತ್ಯಂತ ಪರಿಣಾಮಕಾರಿಯಾಗಿದೆ. ಈ ಪರಿಣಾಮಕಾರಿಗೆ ಟೇಬಲ್ ಮೇಲೆ ಇಟ್ಟಿದ್ದ ಹಣ ಕಳುವಾಗಿದೆ/ ಅದನ್ನು ಆ ಲೇಖಕಿ ಕದ್ದಿದ್ದಾಳೆ ಎಂಬುದರ ಮೂಲದಲ್ಲಿದೆ. ಹಾಗಾಗಿ ‘ ದಿ ಕ್ರಿಟಿಕ್’ ನ ಕೇಂದ್ರವೇ ನಾಪತ್ತೆಯಾದ ‘ವಿಮರ್ಶಕ’ನ ಹಣ!
ಇವತ್ತಿನ ಸಾಹಿತ್ಯ ವಿಮರ್ಶೆ ಎಂಬುದು critic ಮನಸ್ಥಿತಿಯ ಮಾದರಿಯದ್ದು. ಇದು ಎಂದೊ ಗೊತ್ತಿರುವ ಸತ್ಯ. ಇದರಿಂದ ಅನೇಕ ಕೃತಿಗಳು ವಂಚಿತವಾಗಿದ್ದಿದೆ. ಇದರೊಂದಿಗೆ ಎಡಬಲ ತಾಕಲಾಟಗಳಲ್ಲಿ ಸಿಲುಕಿಕೊಂಡಿರುವಂತೆ ಎಲ್ಲ ಕೃತಿಗಳಿಗೂ ಅರ್ಥಾತ್ ಕಥೆ, ಕವಿತೆ, ನಾಟಕ, ಕಾದಂಬರಿ, ಪ್ರಬಂಧ, ಮಹಾಕಾವ್ಯ, ಹನಿಗವನ, ಆತ್ಮಕಥೆ, ಪ್ರವಾಸ ಕಥನ, ಹೀಗೆ ಎಲ್ಲಕ್ಕು ಒಂದೇ ತರಹದ ವಿಮರ್ಶೆ. ಇದು ಸಾಹಿತ್ಯ ವಲಯಕ್ಕೆ ಗೊತ್ತಾಗದಷ್ಟು/ಗೊತ್ತಿದ್ದೂ ಸುಮ್ಮನಿರುವ ಮನಸ್ಥಿತಿ/ಇದನ್ನು ಪ್ರಶ್ನಿಸಲಾಗದ ತೀರಾ ಸಂಕೀರ್ಣವಾದ ವಿಚಾರವಾಗಿದೆ. ವಿಮರ್ಶಕನ ಈ ವಿಮರ್ಶೆ ಎನ್ನುವುದು ದೋಷಪೂರಿತ ಟೀಕೆ, ವಿಡಂಬನೆ, ವ್ಯಂಗ್ಯದಲ್ಲಿ ಸಾಹಿತ್ಯವಲಯವನ್ನು ಜಡ್ಡುಗಟ್ಟಿಸಿದೆ. ಹಾಗೆ ಹೆಸರಾಂತ ಸಾಹಿತಿಯ ಐನೂರು ಪುಟಗಳ ಕಾದಂಬರಿಯೊಂದು ಇಂದು ಬಿಡುಗಡೆಯಾಗಿದೆ ಎಂದು ವರದಿಯಾದ ಒಂದೇ ವಾರದಲ್ಲಿ ಪ್ರಮುಖ ಪತ್ರಿಕೆಯಲ್ಲಿ ಅದೊಂದು ಮಹತ್ವದ ಕೃತಿ ಎನುವಂಥ ಅರ್ಧಪುಟದ ವಿಮರ್ಶೆ ಅಚ್ಚಾಗಿರುತ್ತದೆ. ಅದರ ರೂಪ ಹೇಗಿರುತ್ತದೆ ಎಂದರೆ ಹಿಂದೆ ಅದೇ ಪತ್ರಿಕೆಯಲ್ಲಿ ವಿಮರ್ಶೆಯಾದ ಇತರ ಕೃತಿಗಳ ವಿಮರ್ಶೆಯ ವಾಕ್ಯಗಳೇ ರಿಪೀಟ್ ಆಗಿರುತ್ತವೆ. ಕೃತಿ ಏನು ಹೇಳಲು ಬಯಸಿರುತ್ತದೊ ಅದನ್ನು ಮೀರಿದ ಅಥವಾ ಸ್ವಕಲ್ಪಿತ ವಿಚಾರವನ್ನೆ ಎತ್ತರದ ಸ್ಥಾನದಲ್ಲಿರಿಸಿ ಲೇಖಕನನ್ನೆ ಹುಬ್ಬೇರಿಸುವ ಗುಣವಿಶೇಷಣದೊಂದಿಗೆ ವಿಮರ್ಶಕ ಹೇಳಿರುತ್ತಾನೆ. ಹಾಗೆ ಅದೇ ವಿಮರ್ಶಕ, ಕಿರಿಯ/ ಆಗತಾನೆ ಸಾಹಿತ್ಯ ಲೋಕಕ್ಕೆ ಅಡಿ ಇಡುತ್ತಿರುವ ಲೇಖಕನೊಬ್ಬನ ಒಂದು ಅತ್ಯುತ್ತಮ ಕೃತಿಯನ್ನು ಕಾಟಾಚಾರಕ್ಕೆ ಒಂದೆರಡು ಪುಟ ತಿರುವಿ ಅದಕ್ಕೆ ಸಂಬಂಧಿತ ಮುನ್ನುಡಿಯೋ ಬೆನ್ನುಡಿಯೊ ಸಾಲುಗಳನ್ನೇ ಎಕ್ಕಿಕೊಂಡು ಪರವೊ ವಿರೋಧವೊ ಅಥವಾ ತೀರಾ ಬಾಲಿಶವಾಗಿ ವಿಮರ್ಶಿಸಿ ಅವನ ಬರೆಯುವ/ ಸಾಹಿತ್ಯದ ಬಗ್ಗೆ ಚಿಂತಿಸುವ, ಯೋಚಿಸುವ ಮನಸ್ಥಿತಿಯನ್ನೇ ತಳ ಸೇರಿಸಿರುತ್ತಾನೆ. ಅದು ವಿಮರ್ಶಕನ ‘ಕೆಪ್ಯಾಸಿಟಿ’ ಮತ್ತು ‘ದೌರ್ಬಲ್ಯ!’. ಇಂಥ ವಿಮರ್ಶಕನ ಕೆಪ್ಯಾಸಿಟಿ ಮತ್ತು ದೌರ್ಬಲ್ಯದ ಆತ್ಮಾವಲೋಕನ ಮಾಡಿಸುವ ‘ವಿಮರ್ಶಕ ಕಥೆ’ಯೇ – The Critic!
ಈ ‘critic’ ಬಗ್ಗೆ ಹೇಳಬೇಕಾದ ಇನ್ನೊಂದು ವಿಚಾರ – ಈ ಕಿರುಚಿತ್ರದ ‘critic character’ – ವಿಮರ್ಶಕನ ಪಾತ್ರಧಾರಿಯ ಸಂಭಾಷಣೆ. ಇಲ್ಲಿ ಪಾತ್ರದ ಬಾಡಿ ಲಾಂಗ್ವೇಜ್ ನಲ್ಲಿ ಒಂದು ರೀತಿಯ ನಾಟಕೀಯತೆ, ಅಸಹಜತೆ, ಕೃತಕತೆ ಇದೆ! ಈ ಕೃತಕತೆಯಿಂದಾಗಿ ಒಂದು ಪಾತ್ರವಾಗಿ ‘critic’ ನ Characteristic ಅಥವಾ Characterize ನ್ನು ನೋಡುಗನಿಗೆ ಮುಟ್ಟಿಸುವಲ್ಲಿ ನಿರ್ದೇಶಕ ಸೋತಿರುವುದು. ಹಾಗೆ ಸೂಕ್ಷ್ಮ ಸನ್ನವೇಶದ ಚಿತ್ರಣವನ್ನು ಅಸೂಕ್ಷ್ಮವಾಗಿಸಿರುವುದು! ಅಷ್ಟರ ಮಟ್ಟಿಗೆ ‘critic’ನ ಪಾತ್ರ ‘ಡಿಸ್ಟರ್ಬ್’ ಮಾಡುತ್ತದೆ. critic ನಲ್ಲಿ ಢಾಳಾಗಿ ಬಿಂಬಿತವಾಗಿರುವ ‘disturb’ ನ್ನು ಭಿನ್ನ ಕೋನದಲ್ಲಿಯೂ ಊಹಿಸಬಹುದಾ ಅಂತನ್ನಿಸಿದರು ಅದರಾಚೆಗೂ ದಿ ಕ್ರಿಟಿಕ್ disturb ಮಾಡುತ್ತದೆ.
ಈ ಡಿಸ್ಟರ್ಬ್ ನ್ನು ಇನ್ನಷ್ಟು ಅರಿಯಲು ಕನ್ನಡದ್ದೇ ಆದ ‘Assistant Director’ ಅನ್ನುವುದೊಂದು ಕಿರುಚಿತ್ರವಿದೆ. ಕಳೆದ ಲಾಕ್ ಡೌನ್ ಸಂದರ್ಭದಲ್ಲಿ ನನ್ನ ಮೆಸೆಂಜರ್ ಗೆ ಬಂದು ಕೂತ ಚಿತ್ರವಿದು. ದಿವಾಕರ್ ಇದರ ನಿರ್ದೇಶಕ. ಕುತೂಹಲಕ್ಕೆ ನೋಡಿದೆ. ಹೊಸ ಪ್ರಯೋಗ ಅನ್ನಬಹುದು. ಪ್ರೋತ್ಸಾಹದ ನೆಲೆಯಲ್ಲಿ ಸಾಹಿತ್ಯಾಸಕ್ತರು, ಸಿನಿಮಾ ತಂತ್ರಜ್ಞರು, ಸ್ಕ್ರೀನ್ ಪ್ಲೇ ರೈಟರ್ಸ್, ಅಸೋಸಿಯೇಟ್ಸ್ ಗಳು ಎಲ್ಲರೂ ನೋಡಬೇಕಾದ Short movie ಇದು ಅನ್ನಿಸಿತು ಇದನ್ನು ಅದರ ನಿರ್ದೇಶಕರಿಗೂ ಹೇಳಿದೆ. ಈಗದು length movie ಆಗುತ್ತಿರುವಂತಿದೆ. ಇಲ್ಲಿ ಪ್ರೀತಿಸಿದ ಎರಡು ಪಾತ್ರಗಳ ನಡುವಿನ ಬಹು ಗಂಭೀರ ಜೀವನಗಾಥೆ ಇದೆ. ಈ ಗಾಥೆ ಜೀವ ಜೀವನಕ್ಕೆ ಸಂಬಂಧಿಸಿದ್ದು. ಹೀಗೆ ರೂಪಿತಗೊಂಡ ಈ ಕಿರುಚಿತ್ರ ನೀಡುವ ಗಾಢ ಅನುಭವ critic ನೀಡುವುದಿಲ್ಲ ಎಂಬುದು! ‘Assistant Director’ ಸಿನಿಮಾ ನಿರ್ದೇಶಕನಾಗುವ ಕನಸು ಕಟ್ಟಿಕೊಂಡು ಯುನಿಟ್ ಸೆಟ್ ನಲ್ಲಿ ನಿರ್ಮಾಪಕ ನಿರ್ದೇಶಕನ ಆಣತಿಯಂತೆ ಕೆಲಸ ನಿರ್ವಹಿಸುವ ಅಸಿಸ್ಟಂಟ್ ಡೈರೆಕ್ಟರ್ ಒಬ್ಬನ ಮನೋಸ್ಥಿತಿ ಮತ್ತು ಆ ಮನೋಸ್ಥಿತಿಗೆ ತಂದೊಡ್ಡುವ ಆತನ ಪ್ರಿಯತಮೆಯ ತನ್ನ ಜೀವನ ರೂಪಿಸಿಕೊಳ್ಳುವ ಮನೋಭಿಲಾಸೆಯ ಮಾತುಗಳಿಗೆ ಉತ್ತರಿಸಲಾಗದ ಅಸ್ಸಹಾಯಕತೆ! ನಿರ್ದೇಶಕ ಒಂದು ನಿಗದಿತ ಒಳಾಂಗಣ ಸಿನಿಮಾ ಶೂಟಿಂಗ್ ಯುನಿಟ್ ಸೆಟ್ ನಲ್ಲಿ ಬಹಳ ಸೂಕ್ಷ್ಮವಾಗಿ ಇದನ್ನು ಚಿತ್ರಿಸಿದ್ದಾರೆ. ಪ್ರಯೋಗಾತ್ಮಕವಾಗಿ/ ತಾನು ನಿರ್ದೇಶಿಸಬಲ್ಲೆ ಎಂಬುದನ್ನು ತೋರಿಸುವ ಸಲುವಾಗಿ ಚಿತ್ರಿತವಾದ ‘Assistant Director’ ಒಂದು ಅತ್ಯುತ್ತಮ ಕಿರುಚಿತ್ರ. ಅದರ ಲೇಔಟ್ ರೂಪದಲ್ಲೆ The critic ದೃಶ್ಯರೂಪವಿದೆ. ಆದರು ಕ್ರಿಟಿಕ್ ‘Assistant Director’ ನ್ನು ಸರಿಗಟ್ಟಲಾರದು. Assistant Director ವಿಶಾಲವಾದ ಒಳಾಂಗಣ ಶೂಟಿಂಗ್ ಸೆಟ್ ನ ಲೈಟ್ ಬಾಯ್ಸ್, ಕ್ಯಮರಾ ಮನ್, ಕ್ಯಮರಾ, ಲೈಟಿಂಗ್ ಸೆಟ್ ಇರುವ ಜಾಗೆಯಲ್ಲಿ ಶೂಟ್ ಮಾಡಿದ್ದರೆ The Critic ಕೂಡ ಅಂತದ್ದೇ ಒಳಾಂಗಣದಲ್ಲಿ ಸಾಹಿತ್ಯ ಸಂಬಂಧಿ ಪುಸ್ತಕಗಳ ರಾಶಿಯ ನಡುವೆ ಚಿತ್ರಿತವಾಗಿರುವುದು ಹಾಗು ಈ ಎರಡೂ ಕಿರುಚಿತ್ರಗಳಲ್ಲಿ ಎರಡು ಪಾತ್ರಗಳ ಸಂಶೋಜನೆಯ ಸಾಮ್ಯತೆ ಇರುವುದು.. ಆದರೆ Assistant Director ನ ಎರಡು ಪಾತ್ರಗಳ ಸಂಭಾಷಣೆ ಒಪ್ಪಿಸುವ ರೀತಿಗು, The critic ನ ‘ವಿಮರ್ಶಕ’ ಮೊಬೈಲ್ ನಲ್ಲಿ ಸಂಭಾಷಿಸುವ ರೀತಿಗೂ ವ್ಯತ್ಯಾಸವಿದೆ. ಅದು ಉರು ಹೊಡೆದ ಪಠ್ಯವನ್ನು ವಿದ್ಯಾರ್ಥಿಯೊಬ್ಬ ಶಿಕ್ಷಕನಿಗೆ ಒಪ್ಪಿಸುವ ರೀತಿಯಲ್ಲಿದೆ. ಆದರೆ ಇದರ ನಡುವೆ ಎಂಟ್ರಿಯಾಗಿ ವಿಮರ್ಶಕನನ್ನು ಮುಖಾಮುಖಿಯಾಗುವ ಲೇಖಕಿಯ ಮುಖದಲ್ಲಿ ವ್ಯಕ್ತವಾಗುವ ಸಹಜ ಭಾವ, ನಟನೆ, dialoue ಅದ್ಭುತವಾಗಿದೆ. ಇಲ್ಲಿ ಲೇಖಕಿ ಪಾತ್ರದ ಮುಂದೆ critic ಪಾತ್ರ ಪೇಲವವಾಗಿ ಕಾಣುತ್ತದೆ. ಬಿ.ಎಂ.ಬಷೀರರ ಒಂದೊಳ್ಳೆ ಕಥೆಗೆ ನಿರ್ದೇಶಕ ಮಂಸೋರೆಯ ಜಾಳು ನಿರೂವಣಾ ಶೈಲಿ ಅಡ್ಡಿಯಾಗಿದೆ ಪರದೆಯ ಮೇಲೆ ಮುಕ್ಕರಿಸಿದೆ. ನಿರ್ದೇಶಕ ಮಂಸೋರೆ ಲೇಖಕಿ ಪಾತ್ರಕ್ಕೆ ಕೊಟ್ಟ ಮಹತ್ವವನ್ನು ‘ವಿಮರ್ಶಕ’ನ ಪಾತ್ರದ ಕಡೆಗೂ ಗಮನ ಹರಿಸಿದ್ದರೆ ಕಥೆಯ ಮಹತ್ವದಷ್ಟೆ ಚಿತ್ರಕ್ಕು ದಕ್ಕುತ್ತಿತ್ತು.
ಹಾಗೆ ಒಬ್ಬ ಯಶಸ್ವಿ ನಿರ್ದೇಶಕನ ಎಲ್ಲ ಚಿತ್ರಗಳು ಯಶಸ್ವಿಯಾಗುತ್ತವೆ ಎಂದು ಹೇಳಲಾಗದು. ಕನ್ನಡದಲ್ಲಿ “A’ ಮೂಲಕ ಭಾರತೀಯ ಚಿತ್ರರಂಗಕ್ಕೆ ಪ್ರಯೋಗಾತ್ಮಕ/ ಪ್ರಯೋಗಶೀಲ (ಅತ್ಯುತ್ತಮ ಚಿತ್ರ ಎನ್ನಲಾರೆ) ರೂಪದಲ್ಲಿ ತೆರೆಗೆ ಅಪ್ಪಳಿಸಿ ಕಮರ್ಷಿಯಲ್ ಆಗಿಯೂ ಹೊಸ ಭಾಷ್ಯ ಬರೆದಿದೆ. ಹಾಗೆ ಉಪೇಂದ್ರ ಎಂಬ ನಿರ್ದೇಶಕ ತನ್ನ ಇತರ ಚಿತ್ರಗಳಿಗೂ ‘A’ ತಾಂತ್ರಿಕಾಂಶಕ್ಕೆ ಬೆನ್ನುಬಿದ್ದು ನೇಪಥ್ಯಕ್ಕೆ ಸರಿದ ಉದಾಹರಣೆ ಇದೆ. ಆದರೆ ಜಪಾನ್ ನ ಅಕಿರಾ ಈ ಮಿಥ್ ನ್ನು ಮಾಡಿರುವುದೂ ಇದೆ. ನಾನು ಬಲ್ಲಂತೆ ಆತನ ಬಹುತೇಕ ಸಿನಿಮಾಗಳು ಒಂದು ಸಿನಿಮಾದಿಂದ ಮತ್ತೊಂದು ಸಿನಿಮಾ ವಿಭಿನ್ನವಾಗಿಯೇ ಇವೆ. ಕ್ಯಾನ್ವಾಸ್ ರೂಪದಂತ ‘Dreams. ಮನಸ್ಸು ಮನಸ್ಸುಗಳ ಜಂಜಡತೆ ತಕಾಲಾಟಗಳ ನಡುವೆ ಮಾನವೀಯ ಮುಖಗಳ ಹುಡುಕಾಟದ ರಶೋಮನ್ ವಿಭಿನ್ನ ನಿರೂಪಣಾ ಶೈಲಿಯದ್ದಾಗಿದೆ. ಈ ತರಹದ ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಪ್ರಯೋಗದ ಮಟ್ಟು ಮಂಸೋರೆಯ The Critic ನಲ್ಲಿ ಕಾಣದೆ ಹಿಂದಿನ ಚಿತ್ರಗಳ ಲಯವನ್ನು ಬಿಡಿಸಿಕೊಳಲಾಗದೆ ಒಂದು ಸೀಮಿತ ಚೌಕಟ್ಟಿನೊಳಗೇ ಗಿರಕಿ ಹೊಡೆಯುತ್ತದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ critic ಪಾತ್ರ ನಿರ್ವಹಿಸಿರುವ ನಾಗಾಭರಣ ಒಬ್ಬ ಅತ್ಯುತ್ತಮ ನಿರ್ದೇಶಕರಷ್ಟೇ ಅಲ್ಲ ಅತ್ಯುತ್ತಮ ನಟರೂ ಹೌದು. ಹಾಗೆ ರಂಗಭೂಮಿಯ ನಟನಾ ಕೌಶಲವನ್ನು ಇಂಚಿಂಚೂ ಬಲ್ಲವರು. ಅವರ ರಂಗದ ಅಭಿನಯ ಮತ್ತು ನಿರ್ದೇಶಕನ ತಾಂತ್ರಿಕ ಕೌಶಲವನ್ನು ಮಂಸೋರೆ ಸರಿಯಾಗಿ ಬಳಸಿಕೊಂಡಿಲ್ಲ ಎಂಬುದು ಅವರ ಲೋಪ. ಹಾಗೆ ಕನ್ನಡ ಸಾಹಿತ್ಯದಲ್ಲಿ ನಾಸ್ತಿಕತೆಯ ಕಟು ವಾಸ್ತವವಾದಿ ಕೆ. ಶಿವರಾಮ ಕಾರಂತ ಮತ್ತು ಸಾಹಿತ್ಯದ ವಾಸ್ತವ ನೆಲೆಗಟ್ಟಿನ ಕಟು ವಿಮರ್ಶಕ ವಿಶ್ಲೇಷಕ ಡಿ.ಆರ್. ನಾಗರಾಜ್ ಹೆಸರು critic ನಲ್ಲಿ ಬಳಸಿರುವ ಉದ್ದೇಶ ಬಿ.ಎಂ.ಬಷೀರ್ ತರಹದ ಲೇಖಕರ ಸಾಹಿತ್ಯದ ಮನೋಸ್ಥಿತಿ ಬಲ್ಲವರಿಗೆ ಗೊತ್ತಿದೆ. ಅದು ಈಗಾಗಲೇ critic ಸಂದರ್ಭದಲ್ಲಿ ಚರ್ಚಿತ ವಿಷಯವಾಗಿದೆ. ಅಂದರೆ ಕನ್ನಡ ಸಾಹಿತ್ಯದೊಳಗಿನ critic ನ ಹೆಜ್ಜೆ ಗುರುತುಗಳ ಆತ್ಮಾವಲೋಕನಕ್ಕೆ ಇದು major ಅಂಶ. ಹಾಗೆ ಈ ಚಿತ್ರ ಕನ್ನಡ ಸಾಹಿತ್ಯ, ಸಾಹಿತಿಗಳು, ಪತ್ರಿಕೆ, ಪತ್ರಿಕೆ ಸಂಪಾದಕರು, ಪ್ರಕಾಶಕರು, ವಿಮರ್ಶಕರು, ವಿಶ್ಲೇಷಕರ ಹಲವು ಮುಖಗಳನ್ನು ಅನಾವರಣಗೊಳಿಸುವ ದಿಟ್ಟ ಹೆಜ್ಜೆ. ಹಾಗು ಇದು ಕನ್ನಡ ಸಾಹಿತ್ಯ ‘ವಿಮರ್ಶಕ’ನ ವಿಮರ್ಶೆಯ ದಿಕ್ಕುದೆಸೆಗಳಿಗೆ ಸವಾಲಿನದಾಗಿದೆ.
*
–ಎಂ.ಜವರಾಜ್