ಆಭರಣಗಳು: ಜೆ.ವಿ.ಕಾರ್ಲೊ

ಮೂಲ: ಗೈ ಡಿ ಮೊಪಾಸಾ
ಅನುವಾದ: ಜೆ.ವಿ.ಕಾರ್ಲೊ

ಆ ದಿನ ಸಂಜೆ ಕಛೇರಿಯ ಮೇಲ್ವಿಚಾರಕರು ಇರಿಸಿದ್ದ ಔತಣಕೂಟದಲ್ಲಿ ‘ಆ’ ಹುಡುಗಿಯನ್ನು ನೋಡಿದ್ದೇ ಲ್ಯಾಂಟಿನ್ ಅವಳ ಮೋಹಪಾಶದಲ್ಲಿ ಸಿಲುಕಿ ನುಜ್ಜುಗುಜ್ಜಾಗಿಬಿಟ್ಟಿದ್ದ.

ಆಕೆ ಕೆಲವೇ ವರ್ಷಗಳ ಹಿಂದೆ ಗತಿಸಿದ್ದ ತೆರಿಗೆ ಅಧಿಕಾರಿಯೊಬ್ಬರ ಮಗಳಾಗಿದ್ದಳು. ಆಗಷ್ಟೇ ಅವಳು ತನ್ನ ತಾಯಿಯೊಂದಿಗೆ ಪ್ಯಾರಿಸಿಗೆ ಬಂದಿಳಿದಿದ್ದಳು. ಅವಳ ತಾಯಿ ಮಗಳಿಗೊಬ್ಬ ಯೋಗ್ಯ ವರನನ್ನು ಹುಡುಕುವ ಉದ್ದೇಶದಿಂದ ಹಲವು ಮಧ್ಯಮ ವರ್ಗದ ಕುಟುಂಬಗಳ ಸಂಪರ್ಕಗಳನ್ನು ಬೆಳೆಸಿಕೊಳ್ಳುತ್ತಾ ಕಾರ್ಯೊನ್ಮುಖಳಾಗಿದ್ದಳು. ಬಡವರಾಗಿದ್ದರೂ ಸುಸಂಸ್ಕøತ ಮನೆತನದವರಾಗಿದ್ದರು. ಹುಡುಗಿಯಂತೂ, ಯಾವನೇ ಹುಡುಗನು ತನ್ನ ವಧುವನ್ನಾಗಿ ಕಣ್ಣು ಮುಚ್ಚಿ ಆರಿಸಿಕೊಳ್ಳುವವಳಂತಿದ್ದಳು. ಅವಳ ಸಾಧಾರಣ ರೂಪ, ಸರಳ ವ್ಯಕ್ತಿತ್ವ, ತುಟಿಯಂಚುಗಳಲ್ಲಿ ಯಾವಾಗಲೂ ಮಾಸದಂತಿದ್ದ ಮಂದಹಾಸ ಅವಳ ಕಪಟವನ್ನರಿಯದ ಹೃದಯದ ಪ್ರತಿಫಲನವೆಂಬಂತೆ ಯಾರಿಗೂ ಭಾಸವಾಗುತ್ತಿತ್ತು.

ಅವಳ ಸಂಪರ್ಕಕ್ಕೆ ಬಂದವರೆಲ್ಲಾ ಅವಳನ್ನು ಹಾಡಿ ಹೊಗಳುತ್ತಿದ್ದರು.
“ಈ ಹುಡುಗಿಯನ್ನು ಮದುವೆಯಾಗುವವನು ನಿಜವಾಗಲೂ ಪುಣ್ಯವಂತ!” ಎನ್ನುತ್ತಿದ್ದರು.
ಲ್ಯಾಂಟಿನ್ ಆ ಹೊತ್ತಿಗೆ ಗೃಹ ಖಾತೆಯ ಕಛೇರಿಯಲ್ಲಿ ಹಿರಿಯ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ. ತಿಂಗಳಿಗೆ ಮೂರೂವರೆ ಸಾವಿರ ಫ್ರಾಂಕು ಸಂಬಳ ಪಡೆಯುತ್ತಿದ್ದ. ಲ್ಯಾಂಟಿನ್ ತಡ ಮಾಡದೆ ಹುಡುಗಿಗೆ ಪ್ರೊಪೋಸ್ ಮಾಡಿ ತಕ್ಷಣ ಮದುವೆಯಾಗಿಯೇ ಬಿಟ್ಟ.

ಲ್ಯಾಂಟಿನನ ವೈವಾಹಿಕ ಜೀವನ ಅವನೆಣಿಸಿಕೊಂಡಕ್ಕಿಂತಲೂ ಸುಗಮವಾಗಿ ಸಾಗತೊಡಗಿತು. ಗೃಹ ಕಾರ್ಯಗಳನ್ನು ನಡೆಸುವಲ್ಲಿ ಅವನ ಹೊಸ ಮಡದಿ ಚತುರಳಾಗಿದ್ದಳು. ನೋಡುಗರಲ್ಲಿ, ಅವರು, ಲ್ಯಾಂಟಿನನ ಆದಾಯಕ್ಕಿಂತಲೂ ಹೆಚ್ಚು ವೈಭವಯೋತವಾಗಿ ಜೀವಿಸುತ್ತಿರುವಂತೆ ಭಾಸವಾಗುತ್ತಿತ್ತು. ಲ್ಯಾಂಟಿನನೊಬ್ಬನೇ ತನ್ನ ಪಾಲಿನ ಏಕೈಕ ಸೂರ್ಯನೆಂಬಂತೆ ಅವಳು ತನ್ನ ಜೀವನವನ್ನು ಅವನ ಸುತ್ತ ಗಿರಕಿ ಹೊಡೆಯುವಂತೆ ರೂಪಿಸಿಕೊಂಡು, ಲ್ಯಾಂಟಿನನಿಗೆ ಅವಳಿಲ್ಲದೆ ತಾನಿಲ್ಲ ಎಂಬುದಾಗಿ ಮನದಟ್ಟಾಗತೊಡಗಿತು. ಅವನು ಸಂಪೂರ್ಣವಾಗಿ ಅವಳಿಗೆ ಶರಣಾದ. ಹೀಗೆಯೇ ಆರು ವರ್ಷಗಳು ಸರಿದು ಹೋದವು.

ಲ್ಯಾಂಟಿನನಿಗೆ ತನ್ನ ಮಡದಿಯ ಬಗ್ಗೆ ಎರಡೇ ಎರಡು, ಹಾಗಂತ ಕರೆಯುವುದಾದರೆ, ತಕರಾರುಗಳಿದ್ದವು: ಒಂದು, ಅವಳ ನಾಟಕ ನೋಡುವ ಗೀಳು. ಮತ್ತೊಂದು, ಅವಳ ಕೃತಕ ಆಭರಣಗಳ ವ್ಯಾಮೋಹ.

ಲ್ಯಾಂಟಿನನ ಸಹಧ್ಯೋಗಿಗಳ ಮಡದಿಯರು ಅವಳ ನಾಟಕ ನೋಡುವ ಗೀಳಿಗೆ ಸ್ಪಂದಿಸುತ್ತಾ ಹೊಸ ನಾಟಕಗಳು ರಂಗಮಂಚ ಏರುವಾಗಲೆಲ್ಲಾ ಅವಳಿಗೆ ಮತ್ತು ಲ್ಯಾಂಟಿನನಿಗೆಂದೇ ಖಾಸಗಿ ಬಾಕ್ಸ್ ಸೀಟುಗಳನ್ನು ಖರೀದಿಸಿಡುತ್ತಿದ್ದರು. ದಿನವಿಡೀ ಕಛೇರಿಯಲ್ಲಿ ದುಡಿದು ಸುಸ್ತಾಗಿ ಬರುತ್ತಿದ್ದ ಲ್ಯಾಂಟಿನನಿಗೆ ನಾಟಕಗಳ್ನು ನೋಡಿ ಆನಂದಿಸುವ ಯಾವುದೇ ಆಸಕ್ತಿ ಇರುತ್ತಿರಲಿಲ್ಲ. ನೀನೇ ಯಾರಾದರೂ ನಿನ್ನ ಗೆಳತಿಯರೊಂದಿಗೆ ಹೋಗಿ ಬಾರಮ್ಮ ಎಂದು ಅವನು ಗೋಗರೆಯುತ್ತಿದ್ದ. ಅಂತೂ, ಕೊನೆಗೊಮ್ಮೆ ಅವಳು ಅವನ ಸಲಹೆಯನ್ನು ಮನಸಿಲ್ಲದಿದ್ದರೂ ಒಪ್ಪಿಕೊಂಡಳು. ಲ್ಯಾಂಟಿನನಿಗೆ ಅತೀವ ಸಂತೋಷವಾಯಿತು. ಲ್ಯಾಂಟಿನನ ಹೆಂಡತಿಯ ನಾಟಕ ನೋಡುವ ಗೀಳು ಹೆಚ್ಚಾಗುತ್ತಿದ್ದಂತೆ, ಅವಳ ಕೃತ್ರಿಮ ಆಭರಣಗಳನ್ನು ಧರಿಸುವ ಹುಚ್ಚೂ ಹೆಚ್ಚಾಗತೊಡಗಿತು. ಆದರೆ ಅವಳು ಧರಿಸುತ್ತಿದ್ದ ಉಡುಪು ಮಾತ್ರ ತುಂಬಾ ಸರಳವಾಗಿದ್ದು, ಮಂದಹಾಸ ಬೀರುತ್ತಿದ್ದ ಅವಳ ವ್ಯಕ್ತಿತ್ವ ಎಲ್ಲರನ್ನೂ ಆಕರ್ಷಿಸುತ್ತಿತ್ತು.

ಆದರೆ ಲ್ಯಾಂಟಿನನ ಮಡದಿಗೆ ನೈಜ ಆಬರಣಗಳ ಬದಲಿಗೆ ವಜ್ರದಂತೆ ಹೊಳೆಯುವ ಕಲ್ಲುಗಳ ಕಿವಿಯೋಲೆ, ಕೃತಕ ಮುತ್ತಿನ ಹಾರ, ನಕಲಿ ಚಿನ್ನದ ಕೈಕಡಗಗಳು, ಮತ್ತು ವರ್ಣರಂಜಿತ ಗಾಜಿನಿಂದ ತಯಾರಿಸಿದ ಹೆಣಿಗೆಗಳನ್ನು ತನ್ನ ಹೇರಳ ಕೂದಲ ರಾಶಿಯನ್ನು ಅಂಕೆಯಲ್ಲಿಡಲು ಬಳಸುವುದೆಂದರೆ ಬಲು ಇಷ್ಟವಾಗಿತ್ತು.
ಇದನ್ನು ನೋಡಿ ಲ್ಯಾಂಟಿನನಿಗೆ ಇರಿಸುಮುರಿಸಾಗುತ್ತಿತ್ತು.

ಅವನು ಹೆಂಡತಿಗೆ ಹೇಳುತ್ತಿದ್ದ:
“ಡಾರ್ಲಿಂಗ್, ನಮಗೆ ನೈಜ ಆಭರಣಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲವೆನ್ನುವುದು ನಿಜ. ಆದರೂ, ನಿನ್ನಂತ ಸಹಜ ಸುಂದರ ಹೆಣ್ಣಿಗೆ ನಿನ್ನ ನೈಜ ಸೌಂದರ್ಯವೇ ಎಲ್ಲಕ್ಕಿಂತ ಮಿಗಿಲಾದ ಆಭರಣ. ನಿನಗೆ ಇವೆಲ್ಲಾ ಕೃತ್ರಿಮ ಸಾಧನಗಳ ಅವಶ್ಯಕತೆಯೇ ಇಲ್ಲ!”

ಅವಳು ಸುಮ್ಮನೇ ಮುಗುಳ್ನಕ್ಕು: “ಡಿಯರ್, ನೀನು ಹೇಳುವುದು ಸರಿಯೇ. ಆದರೂ, ಯಾಕೋ ಏನೋ ನನಗೆ ಈ ಇಮಿಟೇಶನ್ ಆಭರಣಗಳು ಕೊಡುವ ತೃಪ್ತಿ ನೈಜ ಆಭರಣಗಳು ಕೊಡುತ್ತಿಲ್ಲ. ನೀನು, ಇದೊಂದು ನನ್ನ ದೌರ್ಬಲ್ಯ ಎಂದರೂ ಪರವಾ ಇಲ್ಲ. ಅದನ್ನು ಅಷ್ಟು ಬೇಗ ಮುರಿಯುವುದು ನನ್ನಿಂದ ಸಾಧ್ಯವಾಗುತ್ತಿಲ್ಲ. ನನಗೆ ಕೃತ್ರಿಮ ಆಭರಣಗಳೆಂದರೆ ಬಲು ಇಷ್ಟ. ಹಾಗಂತ ನನಗೆ ನೈಜ ಆಭರಣಗಳನ್ನು ಧರಿಸಿಕೊಳ್ಳಲು ಇಷ್ಟವಿಲ್ಲವೆಂದಲ್ಲ” ಎಂದು ಅವನ ಬಾಯನ್ನು ಮುಚ್ಚಿಸಿ, ಅವಳ ಕೃತ್ರಿಮ ಆಭರಣಗಳನ್ನು ಅವನ ಮುಂದಿರಿಸಿ, ಬಿಡಿಸುತ್ತಾ, “ನೋಡು ಡಿಯರ್, ಎಷ್ಟೊಂದು ಸುಂದರವಾಗಿವೆ?! ನೀವು ಹೇಳಿದರಷ್ಟೇ ಅವು ನಕಲಿ ಎಂದು ಗೊತ್ತಾಗುವಷ್ಟು ನೈಜವಾಗಿವೆ, ಅಲ್ವಾ?” ಎನ್ನುತ್ತಾ ಮತ್ತೊಂದು ಲೋಕಕ್ಕೆ ಜಾರುತ್ತಿದ್ದಳು.

ಕೆಲವೊಮ್ಮೆ ಸಂಜೆಯ ಹೊತ್ತಿನಲ್ಲಿ ಅವರಿಬ್ಬರು ಬೆಂಕಿಗೂಡಿನ ಬಳಿ ಕುಳಿತುಕೊಂಡು ಟೀ ಕುಡಿಯುತ್ತಾ ಹರಟುತ್ತಿದ್ದಾಗ ಅವಳು ತನ್ನ ಆಭರಣಗಳನ್ನು ಜೋಡಿಸಿಟ್ಟಿದ್ದ ಚರ್ಮದ ಪೆಟ್ಟಿಗೆಯನ್ನು ಟೀಪಾಯಿ ಮೇಲೆ ಬಿಚ್ಚಿಡುತ್ತಾ ಒಂದೊಂದೇ ಆಭರಣಗಳನ್ನು ತೃಪ್ತಿಯಿಂದ ಹೊರತೆಗೆದು ನವಿರಾಗಿ ತಡವುತ್ತಾ ಮತ್ತೆ ಜೋಡಿಸಿಡುತ್ತಿದ್ದಳು.

“ನಿನ್ನದಂತೂ ಲಂಬಾಣಿ ಹುಡುಗಿಯರ ಅಭಿರುಚಿನೇ ಕಣೇ!” ಅವನು ನಕ್ಕು ಹೇಳುತ್ತಿದ್ದ. ಅವನ ಪಾಲಿಗೆ ಅವಳ ಆಭರಣಗಳ ಪೆಟ್ಟಿಗೆ ಕಸದ ಬುಟ್ಟಿಯಾಗಿತ್ತು. ಆದರೆ ಅವಳದನ್ನು ಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ. ಅವನು ಎಷ್ಟು ಪ್ರತಿಭಟಿಸಿದರೂ ಲೆಕ್ಕಕ್ಕೆ ತೆಗೆದುಕೊಳ್ಳದೆ ಅವಳ ನೆಚ್ಚಿನ ಒಂದು ಕಂಠಹಾರವನ್ನು ಅವನ ಕುತ್ತಿಗೆಯ ಮೇಲೆ ಇಳಿ ಬಿಟ್ಟು,
“ಎಷ್ಟು ಚೆಂದಾಗಿ ಕಾಣಿಸುತ್ತಿದ್ದೀಯಾ ಗೊತ್ತಾ ಲ್ಯಾಂಟಿನ್?!” ಎಂದು ಖುಶಿಯಿಂದ ಜೋರಾಗಿ ನಗುತ್ತಾ ಅವನನ್ನು ಅಪ್ಪಿಕೊಂಡು ಮುತ್ತಿನ ಮಳೆಗೆರೆಯುತ್ತಿದ್ದಳು.

ಚಳಿಗಾಲದ ಒಂದು ಸಂಜೆ ಒಪೆರಾಕ್ಕೆ ಹೋಗಿದ್ದವಳು ಅವಳು ಶೀತದಿಂದ ನಡುಗುತ್ತಾ ಮನೆಗೆ ಬಂದಳು.
ಮರುದಿನ ಬೆಳಿಗ್ಗೆ ಅವಳಿಗೆ ಕೆಮ್ಮು ಶುರುವಾಗಿ ಒಂದು ವಾರದ ನಂತರ ನ್ಯುಮೋನಿಯದಿಂದಾಗಿ ತೀರಿಕೊಂಡೇ ಬಿಟ್ಟಳು.
ಇದರಿಂದಾಗಿ ಲ್ಯಾಂಟಿನನಿಗೆ ತೀವ್ರ ಅಘಾತವಾಯಿತು. ಅವನ ಆರೋಗ್ಯವೂ ದಿನೇ ದಿನೇ ಕ್ಷೀಣಿಸತೊಡಗಿತು. ಒಂದು ತಿಂಗಳೊಳಗೆ ಅವನ ಕೂದಲು ಸಂಪೂರ್ಣವಾಗಿ ಬೆಳ್ಳಗಾಯಿತು. ಮನೆಯ ಮೂಲೆ ಮೂಲೆಯಲ್ಲೂ ಅವನಿಗೆ ತನ್ನ ಗತಿಸಿದ ಹೆಂಡತಿಯ ಮುಖ, ಅವಳ ನಗು, ಅವಳ ಸ್ವರವೇ ಕೇಳಿಸುತ್ತಿತ್ತು.

(ಹಿಂವೆ ಕಾಳಾಚಾ ಎಕಾ ಸಾಂಜೆರ್ ಒಪೆರಾಕ್ ಗೆಲ್ಲಿ ಲ್ಯಾಂಟಿನಾಚಿ ಬಾಯ್ಲ್ ಶೆಳಿನ್ ಆಂಕುಡ್ನ್ ಘರಾ ಆಯ್ಲಿ. ದುಸ್ರೆ ದೀಸ್ ಥಾವ್ನ್ ತಿಕಾ ಖೊಂಕ್ಲಿ ಸುರು ಜಾಲಿ. ದಾಕ್ತೆರಾನ್ ನ್ಯುಮೋನಿಯ ಮ್ಹಳೆಂ ಆನಿ ಹಫ್ತ್ಯಾ ನಂತರ್ ಸರ್ಲಿ. ಲ್ಯಾಂಟಿನಾಕ್ ವ್ಹಡ್ ಅಘಾತ್ ಜಾಲೊ. ತಾಚಿ ಭಲಾಯ್ಕಿಯೀ ದಿಸಾನ್ ದೀಸ್ ಭಿಗ್ಡೊನ್ ಗೆಲಿ.)

ಕಾಲವು ಎಂತಾ ಗಾಯಗಳನ್ನೂ ಮಾಸಿಸುತ್ತದೆ ಎನ್ನುವ ಗಾದೆ ಮಾತು ಲ್ಯಾಂಟಿನನ ಪಾಪಿಗೆ ಸುಳ್ಳಾಗತೊಡಗಿತು. ಕಛೇರಿಯಲ್ಲೂ ಕೂಡ ಸಹಪಾಠಿಗಳು ಮಧ್ಯೆ ಮಧ್ಯೆ ಅವನೊಟ್ಟಿಗೆ ಹರಟಲು ಬರುತ್ತಿದ್ದರು. ಆಗ ಅಚಾನಕ್ಕಾಗಿ ಅವನ ಗಂಟಲು ಉಬ್ಬಿ ಬರುತ್ತಿತ್ತು. ಕಣ್ಣುಗಳಲ್ಲಿ ಪಸೆ ಮೂಡಿ ಅವನುಜೋರಾಗಿ ಬಿಕ್ಕಲುಪಕ್ರಮಿಸುತ್ತಿದ್ದ.

(ಕಸಲೆ ಭಿರಾಂಕುಳ್ ಘಾಯ್ ಸಯ್ತ್ ಕಾಳ್ ಕ್ರಮೇಣ್ ಗೂಣ್ ಜಾತಾತ್ ಮ್ಹಣ್ತಾತ್. ಪುಣ್ ಲ್ಯಾಂಟಿನಾಚಾ ವಾಂಟ್ಯಾಕ್ ತಿ ಗಾದ್ ಫಟ್ ಜಾಲಿ ಮ್ಹಣ್ಯೆತ್. ಒಫಿಸಾಂತ್ ದಿಸಾ ಮಧೆಂ ತಾಚೆ ಸಾಂಗಾತಿ ತಾಚೆ ಲಾಗ್ಗಿಂ ಗಪ್ಪೆ ಮಾರುಂಕ್ ಯೆತಾಲೆ. ತೆದ್ನಾ ತಾಚೊ ಗಳೊ ಬಿಗ್ದೊನ್ ಯೆತಾಲೊ, ದೊಳ್ಯಾ ಖಾಂಚಿನಿಂ ದುಕಾಂ ಭರ್ತಾಲಿಂ. ಆನಿ ತೊ ಹುಸ್ಕಾರ್ತಾಲೊ.)

ಲ್ಯಾಂಟಿನ್ ತನ್ನ ಹೆಂಡತಿಯ ಖಾಸಗಿ ಕೋಣೆಯನ್ನು, ಅವಳು ತೀರಿಕೊಂಡ ದಿನ ಅದು ಹೇಗಿತ್ತೋ ಹಾಗೆಯೇ ಬಿಟ್ಟಿದ್ದ. ಪ್ರತಿದಿನ ಕೆಲವು ಸಮಯ ಅದರೊಳಗೆ ಬಂಧಿಯಾಗಿದ್ದು ಅವಳ ಬಗ್ಗೆಯೇ ಧ್ಯಾನಿಸುತ್ತಿದ್ದ.

(ಲ್ಯಾಂಟಿನಾನ್ ಆಪ್ಲ್ಯಾ ಬಾಯ್ಲೆಚೆಂ ಖಾಸ್ಗಿ ಕೂಡ್ ತಿ ಸರ್‍ಲ್ಲೆ ದೀಸ್ ಕಶೆಂ ಆಸ್ಲೆಂ ತೆಂ ತಶೆಂಚ್ ಸೊಡ್‍ಲ್ಲೆಂ. ದಿಸಾ ಮಧೆಂ ಥೊಡೊ ವೇಳ್ ತೊ ಥೈಂ ಖರ್ಚಿತಾಲೊ. ಆಪ್ಲ್ಯಾ ಬಾಯ್ಲೆ ವಿಶಿಂ ಚಿಂತುನ್ ಭಾವುಕ್ ಜಾತಾಲೊ.)

ದಿನಗಳು ಸರಿದು ಹೋದಂತೆ ಲ್ಯಾಂಟಿನನಿಗೆ ತನಗೆ ಬರುತ್ತಿರುವ ಸಂಬಳದಲ್ಲಿ ತಿಂಗಳನ್ನು ನೂಕುವುದು ದುಸ್ತರವೆನಿಸತೊಡಗಿತು. ಹೆಂಡತಿ ಜೀವಂತವಿದ್ದಾಗ ಅವನು ಪ್ರತಿ ತಿಂಗಳು ತನ್ನ ಸಂಬಳವನ್ನು ತಂದು ಅವಳ ಕೈಗಿಡುತಿದ್ದ. ಮನೆ ಖರ್ಚನ್ನು ಅವಳು ಹೇಗೆ ಸರಿದೂಗಿಸುತ್ತಿದ್ದಳೆಂದು ವಿಚಾರಿಸುವ ಗೋಜಿಗೆ ಅವನೆಂದೂ ಹೋಗಿರಲಿಲ್ಲವಷ್ಟೇ ಅಲ್ಲದೆ ಅವನಿಗೆ ಕುತೂಹಲವೂ ಇರಲಿಲ್ಲ. ತಾನು ಕುಡಿಯುತ್ತಿದ್ದ ಉತ್ತಮ ದರ್ಜೆಯ ದ್ರಾಕ್ಞಾಮಧ್ಯವಾಗಲೀ ಇತರೆ ಆಹಾರ ಪದಾರ್ಥಗಳನ್ನು ಅವಳು ತನ್ನ ಜುಜುಬಿ ಸಂಬಳದಿಂದ ಹೇಗೆ ಸರಿದೂಗಿಸುತ್ತಿದ್ದಳು ಎಂದು ಅವನಿಗೆ ಸೋಜಿಗವೆನಿಸಿತು.

ಈ ವರೆಗೆ ಸಾಲ ಮಾಡದಿದ್ದವನು ಸಹಧ್ಯೋಗಿಗಳ ಮುಂದೆ ಹಲ್ಲುಗಿಂಜುತ್ತಾ ಕೈಚಾಚತೊಡಗಿದ. ಆದರೂ ಸಾಲುತ್ತಿರಲಿಲ್ಲ. ಕೊನೆಗೆ ಬೇಸತ್ತು, ‘ಕಸದ ಬುಟ್ಟಿ’ ಎಂದು ಅವನು ಹಂಗಿಸುತ್ತಿದ್ದ ಅವನ ತೀರಿಕೊಂಡ ಹೆಂಡತಿಯ ಚರ್ಮದ ಪೆಟ್ಟಿಗೆಯೊಳಗಿನ ಕೃತಕ ಆಭರಣಗಳನ್ನು ಯಾರಿಗಾದರೂ ಮಾರೋಣವೆಂದು ಹೊರತೆಗೆದ. ಆ ಆಭರಣಗಳ ಮೇಲಿನ ತಾತ್ಸಾರ, ಜಿಗುಪ್ಸೆ ಅವನಲ್ಲಿನ್ನೂ ಇತ್ತು! ಅವುಗಳನ್ನು ನೋಡುತ್ತಿದ್ದಂತೆ ಕೆಲವು ಕ್ಷಣ ಅವನ ಮನೋಪಟಲದಿಂದ ತನ್ನ ಮುದ್ದಿನ ಹೆಂಡತಿಯ ಚಿತ್ರ ಮಸುಕಾಯಿತು.

ಲ್ಯಾಂಟಿನ್, ಪ್ರತಿದಿನವೆಂಬಂತೆ ಅವಳು ಖರೀದಿಸಿ ತರುತ್ತಿದ್ದ ಈ ಆಭರಣಗಳನ್ನು ಕಂಡು ‘ಸಂತೆ ಮಾಲುಗಳು’ ಎಂಬಂತೆ ಮುಖ ಕಿವುಚಿಕೊಳ್ಳುತ್ತಿದ್ದರೂ ಅವಳು ಅದನ್ನು ಪರಿಗಣನೆಗೇ ತೆಗೆದುಕೊಂಡಿರಲಿಲ್ಲ. ಸಿಟ್ಟೂ ಮಾಡಿಕೊಂಡಿರಲಿಲ್ಲ. ಬೇಸರಿಸಿಯೂ ಇರಲಿಲ್ಲ!

ಅವಳ ಪೆಟ್ಟಿಗೆಯನ್ನು ಜಾಲಾಡಿ ಲ್ಯಾಂಟಿನ್, ಅವಳು ತುಂಬಾ ಇಷ್ಟಪಡುತ್ತಿದ್ದ, ವಿಶೇಷ ಸಂದರ್ಭಗಳಲ್ಲಿ ಧರಿಸುತ್ತಿದ್ದ ಒಂದು ಕಂಠಹಾರವನ್ನು ಎತ್ತಿಕೊಂಡ. ಇದ್ದುದರಲ್ಲಿ ಕೊಂಚ ಚೆನ್ನಾಗಿದೆ ಎನ್ನಬಹುದಾದ ಅದಕ್ಕೆ ಕನಿಷ್ಠ ಆರೇಳು ಫ್ರಾಂಕುಗಳಾದರೂ ಸಿಗಬಹುದು ಎಂದು ಅವನು ಅಂದಾಜಿಸಿದ.

ಅದನ್ನು ಜೇಬಿಗಿಳಿಸಿ ಅವನು ಲಗುಬಗೆಯಿಂದ ಚಿನ್ನ-ಬೆಳ್ಳಿ ಅಂಗಡಿಗಳನ್ನುಡುಕುತ್ತಾ ಹೊರಟ. ಕೊನೆಗೂ ಅವನು ಹುಡುಕುತ್ತಿದ್ದ ಅಂಗಡಿ ಸಿಕ್ಕಿತು. ತನ್ನ ಬಡತನವನ್ನು ಹೀಗೆ ಹರಾಜಾಕಬೇಕಲ್ಲಪ್ಪಾ ಎಂದು ಅಳುಕುತ್ತಾ ಲ್ಯಾಂಟಿನ್ ಆ ಅಂಗಡಿಯನ್ನು ಹೊಕ್ಕ.

“ಮಾನ್ಯರೇ, ಈ ಕಂಠಹಾರ ಮಾರಿದರೆ ಎಷ್ಟು ದುಡ್ಡು ಸಿಗಬಹುದು ಹೇಳಬಲ್ಲಿರಾ?” ತನ್ನನ್ನು ಸಾಧ್ಯವಿದ್ದಷ್ಟು ಕುಬ್ಜಗೊಳಿಸುತ್ತಾ ಲ್ಯಾಂಟಿನ್ ಅಂಗಡಿಯ ಮಾಲಿಕನಿಗೆ ಕೇಳಿದ.

ಅಂಗಡಿಯ ಮಾಲಿಕ ತನ್ನ ದಪ್ಪ ಗಾಜಿನ ಕನ್ನಡಕವನ್ನು ಹೊರತೆಗೆದು, ಮೂಗಿನ ಮೇಲೆ ಏರಿಸಿ, ಲ್ಯಾಂಟಿನ್ ಕೊಟ್ಟ ಕಂಠಹಾರವನ್ನು ತಿರುವು ಮರುವು ಮಾಡಿ ಸೂಕ್ಷ್ಮವಾಗಿ ಪರಿಶೀಲಿಸಿದ. ತಕ್ಕಡಿಯ ಮೇಲೆ ಇಟ್ಟು ಗಮನಿಸಿದ. ಭೂತ ಕನ್ನಡಿ ಹೊರತೆಗೆದು ಮತ್ತೊಮ್ಮೆ ಪರಿಶೀಲಿಸಿದ. ತೃಪ್ತಿಯಾಗದೆ ಕೊನೆಗೆ ತನ್ನ ಸಹಾಯಕನನ್ನು ಕರೆದು ಅವನ ಕಿವಿಯೊಳಗೆ ಏನನ್ನೋ ಉಸುರಿದ. ಕೊನೆಗೆ ಕಂಠ ಹಾರವನ್ನು ಕೌಂಟರಿನ ಮೇಲಿರಿಸಿ ವಿವಿಧ ಕೋನಗಳಿಂದ ವಿಚಿತ್ರ ಭಂಗಿಗಳಿಂದ ಪರಿಶೀಲಿಸತೊಡಗಿದ.

ಇವನೆಲ್ಲಿ ಅಂಗಡಿಯೊಳಗೆ ನೆರೆದಿರುವ ಜನರ ಮುಂದೆ ತನ್ನ ಮರ್ಯಾದೆ ತೆಗೆಯುತ್ತಾನೋ ಎಂದು ಲ್ಯಾಂಟಿನನಿಗೆ ಆತಂಕವಾಗತೊಡಗಿತು. ಅವನು, “ಸರ್, ಈ ಕಳಪೆ ಸಂತೇ ಮಾಲನ್ನು ನಿಮ್ಮ ಮೇಜಿನ ಮೇಲಿಟ್ಟು ಮೈಲಿಗೆಗೊಳಿಸಿದ್ದಕ್ಕಾಗಿ ದಯವಿಟ್ಟು ನನ್ನನ್ನು…” ಎಂದು ಹೇಳಲು ಬಾಯ್ದೆರೆಯುವಷ್ಟರಲ್ಲಿ ಅಂಗಡಿಯವನು ಕೊನೆಗೂ ಬಾಯಿಬಿಟ್ಟ: “ಮೊಸ್ಸಿಯುರ್ (ಒoಟಿsieuಡಿ) ಲ್ಯಾಂಟಿನ್, ಈ ಕಂಠಹಾರ ಸುಮಾರು ಹನ್ನೆರಡದಿಂದ ಹದಿನೈದು ಸಾವಿರ ಫ್ರಾಂಕ್ ಬೆಲೆ ಬಾಳುತ್ತದೆ. ನಿಮಗೆ ಇದು ಎಲ್ಲಿಂದ ಬಂತೆಂದು ಹೇಳದ ಹೊರತು ನಾನಿದನ್ನು ಖರೀದಿಸಲಾರೆ!” ಎಂದ.

ಲ್ಯಾಂಟಿನನ ಕಣ್ಣುಗಳು ಆಶ್ಚರ್ಯದಿಂದ ಹಿರಿದಾದವು. ಬಾಯಿ ತೆರೆದುಕೊಂಡಿತು. ಅಘಾತಗೊಂಡವನಂತೆ ಅವನು ಅಂಗಡಿಯವನನ್ನೇ ನೆಟ್ಟ ಕಂಗಳಿಂದ ನೋಡತೊಡಗಿದ. ಕೊನೆಗೆ,
“ನೀವು ಏನಂದಿರಿ?” ಎಂದ ತೊದಲುತ್ತಾ.
“ನನ್ನ ಬೆಲೆ ನಿಮಗೆ ಹಿಡಿಸಲಿಲ್ಲವೆಂದಾದರೆ ನೀವು ಬೇರೆ ಕಡೆ ಹೋಗಬಹುದು.” ಗಂಭೀರದಿಂದ ಅವನು ಹೇಳಿದ. “ಕೊನೆಯದಾಗಿ ಹದಿನೈದು ಸಾವಿರ! ಯಾರಾದರೂ ಅದಕ್ಕಿನ್ನ ಹೆಚ್ಚು ಕೊಟ್ಟರೆ ಅವರಿಗೇ ಕೊಡಿ. ಇಲ್ಲದಿದ್ದರೆ ಇಲ್ಲಿ ಬನ್ನಿ.” ಎಂದ ಅಂಗಡಿಯವನು.

ಲ್ಯಾಂಟಿನನಿಗೆ ಏನು ಹೇಳುವುದೆಂದೇ ತೋಚಲಿಲ್ಲ. ಅವನು ಮೂಕವಿಸ್ಮಿತನಾಗಿದ್ದ. ತಬ್ಬಿಬ್ಬಾಗಿದ್ದ. ಏನೂ ಮಾಡಲು ತೋಚದೆ ತಾನು ತಂದಿದ್ದ ಕಂಠಹಾರವನ್ನು ಎತ್ತಿಕೊಂಡು ಹೊರನಡೆದ. ಅವನಿಗೆ ತನ್ನ ಬುದ್ಧಿಯನ್ನು ಸ್ತಿಮಿತಕ್ಕೆ ತರಲು ಕೊಂಚ ಕಾಲವಕಾಶ ಬೇಕಿತ್ತು.

ಅವನು ಅಲ್ಲಿಂದ ಹೊರಗೆ ಬಂದ.

“ಎಂತಾ ಮೂರ್ಖ!!” ಅವನಿಗೆ ಜೋರಾಗಿ ನಗಬೇಕಂತೆನಿಸಿತು. “ವಜ್ರ ಯಾವುದು ಕಲ್ಲು ಯಾವುದು ಎಂದು ತಿಳಿಯಲೊಲ್ಲದ ಆಭರಣ ವ್ಯಾಪಾರಿಗಳೂ ಇದ್ದಾರಾ?” ಅವನಿಗೆ ಆಶ್ಚರ್ಯವಾಯಿತು. ಆದರೂ, ಅವನ ಮಾತನ್ನು ಏಕೆ ಪರೀಕ್ಷೆಗೊಡ್ಡಬಾರದು?.. ಎಂದವನು ಯೋಚಿಸಿ ಅದೇ ರಸ್ತೆಯಲ್ಲಿದ್ದ ಮತ್ತೊಂದು ಆಭರಣದಂಗಡಿಗೆ ಹೋದ.
ಅವನು ತನ್ನಲ್ಲಿದ್ದ ಕಂಠಹಾರವನ್ನು ತೊರಿಸುತ್ತಲೇ ಆಭರಣದಂಗಡಿಯ ಮಾಲಿಕ ದಂಗು ಬಡಿದವನಂತೆ: “ಓಹ್, ಈ ಕಂಠಹಾರ ನನಗೆ ಚಿರಪರಿಚಿತ!.. ಯಾಕೆಂದರೆ, ಇದನ್ನು ನಾನೇ ಮಾರಿದ್ದು!!”
ಈಗ ದಂಗಾದವನು ಲ್ಯಾಂಟಿನ್. ಅವನು ಕಣ್ಣುಗಳನ್ನು ಅರಳಿಸುತ್ತಾ, “ಇದರ ಬೆಲೆ ಎಷ್ಟಾಗಬಹುದು?” ಎಂದು ಕೇಳಿದ.

“ಮೊಸ್ಸಿಯುರ್, ನಾನು ಇದನ್ನು ಇಪ್ಪತ್ತೈದು ಸಾವಿರ ಫಾಂಕುಗಳಿಗೆ ಮಾರಿದ್ದೆ. ನಿಮಗೆ ಮಾರುವುದಿದ್ದರೆ, ಮತ್ತು ನಿಮ್ಮಲ್ಲೇನಾದರೂ ಇದರ ಖರೀದಿ ರಸೀದಿ ಪತ್ರಗಳಿದ್ದರೆ ಹದಿನೆಂಟು ಸಾವಿರಕ್ಕೆ ಖರೀದಿಸುತ್ತೇನೆ.” ಎಂದ.

ಲ್ಯಾಂಟಿನನಿಗೆ ಬವಳಿ ಬಂದಂತಾಯಿತು. ಅವನು ಅಲ್ಲಿದ್ದ ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಾ ಸಾವರಿಸಿ, “ಏನೇ ಇರಲಿ, ಇದರ ಅಸಲಿಯತ್ತನ್ನ ಒಮ್ಮೆ ಪರೀಕ್ಷಿಸಿ ನೋಡಿದ್ದರೆ ಚೆನ್ನಾಗಿತ್ತು. ಇದು ನಕಲೀ ಎಂದೇ ನಾನು ಈವರೆಗೆ ಭಾವಿಸಿದ್ದೆ.” ಎಂದ ಕ್ಷೀಣ ದನಿಯಲ್ಲಿ.

“ಅಭ್ಯಂತರವಿಲ್ಲದಿದ್ದರೆ ನಿಮ್ಮ ಹೆಸರು ಕೇಳಬಹುದೇ ಮೊಸ್ಸಿಯುರ್?” ಅಂಗಡಿಯ ಮಾಲಿಕ ಕೇಳಿದ.
“ಖಂಡಿತ, ಖಂಡಿತ.. ನನ್ನ ಹೆಸರು ಲ್ಯಾಂಟಿನ್. ಗೃಹ ಮಂತ್ರಾಲಯದಲ್ಲಿ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ವಿಳಾಸ, 16, ರ್ಯೂ ದೆ ಮಾರ್ಟಿರ್ಸ್, ಪ್ಯಾರಿಸ್.”
ಅಂಗಡಿಯ ಮಾಲಿಕ ತನ್ನ ಆರ್ಡರ್ ಪುಸ್ತಕವನ್ನು ಹೊರತೆಗೆದು ಪುಟಗಳನ್ನು ತಿರುವತೊಡಗಿದ. ಕೊನೆಗೆ ಅವನು ಹುಡುಕುತ್ತಿದ್ದ ಪುಟ ಸಿಕ್ಕಿತು.
“ಸರಿ, ಸರಿ. ಸಿಕ್ಕಿತು. ಮದಾಮ್ ಲ್ಯಾಂಟಿನ್. ಇದೇ ಕಂಠಹಾರವನ್ನು ನಾವು ಜುಲೈ 20, 1876 ರಂದು ನೀವು ಹೇಳಿದ್ದ ವಿಳಾಸಕ್ಕೆ ತಲುಪಿಸಿದ್ದೆವು.” ಎಂದ.
ಲ್ಯಾಂಟಿನ್ ಬಿಟ್ಟ ಕಂಗಳಿಂದ ಅವನನ್ನೇ ನೊಡತೊಡಗಿದ. ಮಾಲಿಕನೂ ಅವನನ್ನೇ ನೋಡತೊಡಗಿದ. ಅವನ ಕಣ್ಣುಗಳಲ್ಲಿ ಲ್ಯಾಂಟಿನನ ಬಗ್ಗೆ ಸಂಶಯ ಕಾಣಿಸುತ್ತಿತ್ತು.

“ಮೊಸ್ಸಿಯುರ್ ಲ್ಯಾಂಟಿನ್ ನಿಮಗೆ ಅಭ್ಯಂತರವಿಲ್ಲದಿದ್ದರೆ ನಿಮ್ಮ ಕಂಠಹಾರವನ್ನು ಇವತ್ತೊಂದು ದಿನ ನಮ್ಮಲ್ಲಿಯೇ ಇಟ್ಟುಕೊಳ್ಳುತ್ತೇವೆ, ಆಗದೇ?… ನೀವು ಗಾಬರಿ ಪಡುವುದು ಬೇಡ. ನಿಮಗೆ ರಸೀತಿಯನ್ನು ಕೊಡುತ್ತೇನೆ.” ಎಂದ.
“ನನ್ನದೇನು ಅಭ್ಯಂತರವಿಲ್ಲ.” ಎಂದು ಲ್ಯಾಂಟಿನ್ ಅವನು ಹರಿದು ಕೊಟ್ಟ ರಸೀತಿಯನ್ನು ಜೇಬಿಗಿಳಿಸಿ ರಸ್ತೆಗಿಳಿದ.

ಅವನ ತಲೆ ಕೆಟ್ಟುಹೋಗಿತ್ತು. ನಶೆಯಲ್ಲಿದ್ದವನಂತೆ ನಡೆಯುತ್ತಾ ಹೋಗುತ್ತಿದ್ದವನಿಗೆ, ಒಮ್ಮೆಲೆ ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿದ್ದೆನೆಂಬ ಅರಿವಾಗಿ ತಕ್ಷಣ ವಾಪಸ್ಸು ನಡೆಯತೊಡಗಿದ. ಅವನ ತಲೆಯೊಳಗೆ ಒಂದೇ ವಿಚಾರ ಕೊರೆಯುತ್ತಿತ್ತು. ‘ಅವಳಿಗೆ ಇಷ್ಟೊಂದು ಬೆಲೆ ಬಾಳುವ ಕಂಠಹಾರವನ್ನು ಕೊಳ್ಳಲು ಹೇಗೆ ಸಾಧ್ಯವಾಯಿತು?… ಖಂಡಿತ ಸಾಧ್ಯವಿಲ್ಲ!! ಅಂದ ಮೇಲೆ…? ಅಂದ ಮೇಲೆ…? ಯಾರೋ ಪ್ರೆಸೆಂಟ್ ಮಾಡಿರಬೇಕು! ಬೇರೆ ಯಾವ ವಿವರಣೆಯೂ ಸಾಧ್ಯವಿಲ್ಲ.’ ಅವನ ತಲೆ ಗೊಂದಲದ ಗೂಡಾಗಿತ್ತು.

“ಯಾರಾದರೂ ಅವಳಿಗೆ ಏಕ್ ಪ್ರೆಸೆಂಟ್ ಕೊಡಬೇಕು?” ಮತ್ತೊಂದು ಪ್ರಶ್ನೆ ಅವನ ತಲೆ ತಿನ್ನ ತೊಡಗಿತು.
ಗಕ್ಕನೇ ಅವನು ನಡು ರಸ್ತೆಯಲ್ಲೇ ನಿಂತುಕೊಂಡ. ಅವನಿಗೆ ತಲೆ ತಿರುಗಿದಂತಾಯಿತು. ‘ಅದಕ್ಕೆ’ ಆಗಿರಬಹುದೇ? ಅವನಿಗೆ ಸಂಶಯ ಮೂಡಿತು. ಅದೂ, ತನ್ನ ಮುದ್ದು, ಪ್ರೀತಿ ಪಾತ್ರ ಮಡದಿ? ಹಾಗಾದರೆ ಅವಳ ಉಳಿದೆಲ್ಲ ಆಭರಣಗಳೂ ಪ್ರೆಸೆಂಟುಗಳೇ?… ಅವನ ಸುತ್ತಲ ಭೂಮಿ ತಿರುಗತೊಡಗಿತು. ಕಣ್ಣುಗಳು ಮಂಜಾಗಿ ಅವನು ದೊಪ್ಪನೆ ಕೆಳಗೆ ಕುಸಿದು ಬಿದ್ದ. ಅವನು ಎಚ್ಚರಗೊಂಡಾಗ ಅವನನ್ನು ಯಾರೋ ಪುಣ್ಯಾತ್ಮರು ಒಂದು ಔಷದಿ ಅಂಗಡಿಯ ಎದುರಿದ್ದ ಬೆಂಚಿನ ಮೇಲೆ ಮಲಗಿಸಿದ್ದರು. ಅವನು ಎದ್ದು ಒಂದು ಗಾಡಿಯನ್ನು ಹಿಡಿದು ಮನೆ ಸೇರಿಕೊಂಡ. ತನ್ನ ಕೋಣೆಯನ್ನು ಹೊಕ್ಕು ಮಂಚದ ಮೇಲೆ ಬಿದ್ದುಕೊಂಡ.

ಕಿಟಕಿಯೊಳಗಿನಿಂದ ತೂರಿಕೊಂಡು ಬಂದ ಸೂರ್ಯನ ಕಿರಣಗಳು ಅವನ ಮೇಲೆ ಬಿದ್ದಾಗಲೇ ಅವನಿಗೆ ಎಚ್ಚರವಾಗಿದ್ದು. ಗೊಂದಲದ ಗೂಡಾಗಿದ್ದ ಮನಸ್ಥಿತಿಯಲ್ಲಿ ಅವನಿಗೆ ಆ ದಿನ ಕಛೇರಿಗೆ ಹೋಗಿ ಕೆಲಸ ಮಾಡುವುದು ಅಸಾಧ್ಯವೆನಿಸಿತು. ತನ್ನ ಮೇಲಾಧಿಕಾರಿಗೆ ಒಂದು ರಜೆ ಚೀಟಿಯನ್ನು ಬರೆದಿಟ್ಟ. ಆಗವನಿಗೆ ಹಿಂದಿನ ದಿನ ಬಿಟ್ಟು ಬಂದಿದ್ದ ಕಂಠಹಾರದ ನೆನಪಾಯಿತು. ಅದನು ನೆನೆದಾಗಲೇ ಅವನಿಗೆ ಮುಜಗರವಾಯಿತು. ತುಂಬಾ ಯೋಚಿಸಿದ ನಂತರ, ಅದನ್ನು ಅಲ್ಲೇ ಬಿಟ್ಟು ಬಿಡುವುದೂ ಸಾಧ್ಯವಿರಲಿಲ್ಲ. ಅವನು ಎದ್ದು ಬಟ್ಟೆ ಬದಲಾಯಿಸಿ ಹೊರ ನಡೆದ.

ಹೊರಗೆ ಬಿಸಿಲು ಹರಡಿತ್ತು. ವಾತಾವರಣ ಪ್ರಶಾಂತವಾಗಿತ್ತು. ರಸ್ತೆಯಲ್ಲಿ ಜನರೂ ಕೂಡ ಯಾವುದೇ ಚಿಂತೆಗಳಿಲ್ಲದಂತೆ ಜೇಬಿನೊಳಗೆ ಕೈಗಳನ್ನು ಇಳಿಬಿಟ್ಟು ಪ್ರಸನ್ನವದನರಾಗಿ ಓಡಾಡುತ್ತಿದ್ದರು. ‘ಕೈತುಂಬಾ ಹಣವಿದ್ದವರಿಗೆ ಯಾವುದೇ ಚಿಂತೆ, ದುಃಖ ದುಮ್ಮಾನ ನೋವು ಇರುವುದಿಲ್ಲ! ಎಷ್ಟೊಂದು ಆರಾಮವಾಗಿದ್ದಾರೆ! ಅದೃಷ್ಟವಂತರು.’ ಅವನು ಯೋಚಿಸುತ್ತಿದ್ದ.
ಅವನ ಹೊಟ್ಟೆ ಚುರುಗುಟ್ಟುತ್ತಿತ್ತು. ಎರಡು ದಿನಗಳಿಂದ ಅವನು ಸರಿಯಾಗಿ ಊಟನೇ ಮಾಡಿರಲಿಲ್ಲ. ಜೇಬಲ್ಲಿ ದುಡ್ಡೂ ಇರಲಿಲ್ಲ!

ಆ ಕ್ಷಣದಲ್ಲೇ ಅವನಿಗೆ ಕಂಠಹಾರದ ನೆನಪಾಯಿತು. ಹದಿನೆಂಟು ಸಾವಿರ!! ಹದಿನೆಂಟು ಸಾವಿರ ಜುಜುಬಿ ಮೊತ್ತವೇನಲ್ಲ.
ನಡೆಯುತ್ತಾ ಅವನು ಆ ಆಭರಣದ ಅಂಗಡಿಯನ್ನು ಮುಟ್ಟಿದ. ಒಳಗೆ ಹೋಗಲು ಅವನಿಗೆ ದಿಗಿಲಾಯಿತು. ಅಂಗಡಿಯ ಎದುರಿನ ಫೂಟ್‍ಪಾತಿನಲ್ಲಿ ಮೇಲೆ ಕೆಳಗೆ ನಡೆಯತೊಡಗಿದ. ಹದಿನೆಂಟು ಸಾವಿರ ಫ್ರಾಂಕುಗಳು!!.. ಅಂಗಡಿಯೊಳಗೆ ಹೆಜ್ಜೆ ಇಡಲು ಹಲವು ಭಾರಿ ಯತ್ನಿಸಿದನಾದರೂ ಎಂತಾದ್ದೊ ಹಿಂಜರಿಕೆ ನಾಚಿಕೆÉ ಅವನನ್ನು ತಡೆಯುತ್ತಿತ್ತು.
ಹಸಿವು ಎಲ್ಲವನ್ನೂ ಮರೆಸುತ್ತದೆ.

ಗಟ್ಟಿ ಮನಸ್ಸು ಮಾಡಿ ಅವನು ಒಳಕ್ಕೆ ಹೋದ. ಅವನನ್ನು ಕಂಡೊಡನೆ ಅಂಗಡಿಯ ಮಾಲಿಕ ಮುಗುಳ್ನಗುತ್ತಾ ಅವನೆಡೆಗೆ ಬಂದು ಕುಳಿತುಕೊಳ್ಳಲು ಕುರ್ಚಿಯನ್ನು ತೋರಿಸಿದ. ಅಂಗಡಿಯೊಳಗಿದ್ದ ಕೆಲಸಗಾರರೂ ಕೂಡ ಅವನೆಡೆಗೆ ವಿಚಿತ್ರವಾಗಿ ಮುಗುಳ್ನಗೆ ಸೂಸುತ್ತಿರುವಂತೆ ಅವನಿಗೆ ಭಾಸವಾಯಿತು.

“ಮೊಸ್ಸಿಯುರ್ ಲ್ಯಾಂಟಿನ್, ನಾನು ನನ್ನ ಪಾಲಿನ ತನಿಖೆಯನ್ನು ನಡೆಸಿದ್ದೇನೆ. ನಿಮಗೆ ಈ ಕಂಠಹಾರವನ್ನು ಮಾರುವುದಿದ್ದರೆ ನಾನು ನಿಮಗೆ ನಿನ್ನೆ ಹೇಳಿದ ಬೆಲೆಗೇ ಕೊಂಡುಕೊಳ್ಳಲು ತಯಾರಿದ್ದೇನೆ.” ಅವನು ಹೇಳಿದ.

“ನಾನೂ ತಯಾರಾಗಿದ್ದೇನೆ.” ಲ್ಯಾಂಟಿನ್ ನಡುಗುವ ಸ್ವರದಿಂದ ಹೇಳಿದ.

ಅಂಗಡಿಯವನು ತನ್ನ ಡ್ರಾವರಿನಿಂದ ಹದಿನೆಂಟು ಸಾವಿರ ಫ್ರಾಂಕುಗಳನ್ನು ಎಣಿಸಿ ಲ್ಯಾಂಟಿನನ ಅದರುವ ಕೈಗಿತ್ತು ಕೆಲವು ಪತ್ರಗಳಿಗೆ ಸಹಿ ಹಾಕಿಸಿಕೊಂಡ. ಲ್ಯಾಂಟಿನ್ ಹೊರ ನಡೆಯುತ್ತಿದ್ದವನು ಏನೋ ನೆನಪಾದವನಂತೆ ಹಿಂದಿರುಗಿ,
“ಮೊಸ್ಸಿಯುರ್, ನನ್ನ ಪಾಲಿಗೆ ಬಂದಿರುವ ಇನ್ನೂ ಕೆಲವು ಆಭರಣಗಳು ಇವೆ. ಕೊಳ್ಳುತ್ತಿರಾ?” ಎಂದ.
ಅಂಗಡಿಯವನು ನಾಟಕೀಯವಾಗಿ ತಲೆ ಬಾಗಿಸುತ್ತಾ, “ಖಂಡಿತವಾಗಿಯೂ ಮೊಸ್ಸಿಯುರ್!” ಎಂದ.

ಒಬ್ಬ ಕೆಲಸದವನು ನಗು ತಡೆದುಕೊಳ್ಳಲಾರದೆ ಹೊರಗೆ ಹೋಗಿ ಜೋರಾಗಿ ಮೂಗನ್ನು ಸೀಟುತ್ತಾ ಒಳಗೆ ಬಂದ.
ಲ್ಯಾಂಟಿನನ ಮೋರೆ ಕೆಂಪಗಾದರೂ ಅವನು ವಿಚಲಿತನಾಗಲಿಲ್ಲ.
“ಈಗಲೇ ತರುತ್ತೇನೆ.” ಎಂದು ಅವನು ಒಂದು ಗಾಡಿಯನ್ನು ಹಿಡಿದು ಮನೆಗೆ ಹೋದ.
ಒಂದು ಗಂಟೆ ಕಳೆದು ಅವನು ಅಂಗಡಿಗೆ ಬರುವಾಗಲೂ ಹೊಟ್ಟೆಗೆ ಏನೂ ತಿಂದಿರಲಿಲ್ಲ. ಲ್ಯಾಂಟಿನ್, ತನ್ನ ತೀರಿ ಕೊಂಡ ಹೆಂಡತಿಯ ತೊಗಲ ಪೆಟ್ಟಿಗೆಯನ್ನೇ ಹೊತ್ತು ತಂದಿದ್ದ. ಆ ಹೊತ್ತಿನಲ್ಲಿ ಅಂಗಡಿಯಲ್ಲಿ ಹೆಚ್ಚು ಗಿರಾಕಿಗಳು ಇರಲಿಲ್ಲ. ಎಲ್ಲರೂ ಸೇರಿ ಲ್ಯಾಂಟಿನ್ ತಂದಿದ್ದ ಒಂದೊಂದೇ ಆಭರಣಗಳನ್ನು ವಿಂಗಡಿಸಿ ಬೆಲೆ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡರು. ಹೆಚ್ಚು ಕಮ್ಮಿ ಎಲ್ಲಾ ಆಭರಣಗಳು ಅದೇ ಅಂಗಡಿಯಲ್ಲಿ ಕೊಂಡಿದ್ದಾಗಿದ್ದವು. ಒಂದೊಂದು ಆಭರಣಕ್ಕೂ ಅಂಗಡಿಯವರು ಕಟ್ಟುತ್ತಿದ್ದ ಬೆಲೆಯನ್ನು ಲ್ಯಾಂಟಿನ್ ಪ್ರಶ್ನಿಸತೊಡಗಿದ. ಈಗ ಅವನು ನಾಚಿಕೆ, ಮುಜುಗರವನ್ನು ತೊರೆದು ಪಕ್ಕಾ ವ್ಯಾಪಾರಿಯಾಗಿದ್ದ. ಏರು ದನಿಯಲ್ಲಿ ಅರಚತೊಡಗಿದ. ನಿಮ್ಮ ಸೇಲ್ಸ್ ರೆಕಾರ್ಡು ತೋರಿಸಿ ಎಂದು ದಬಾಯಿಸಿದ. ಆಭರಣದಂಗಡಿಯೊಳಗಿದೇನು ಗಲಾಟೆ ಎಂದು ದಾರಿಹೋಕರು ಕುತೂಹಲ ತಡೆಯಲಾರದೆ ಒಂದರೆಗಳಿಗೆ ಇಣುಕಿ ಹೋದರು.

ವಜ್ರದ ದೊಡ್ಡ ಕಿವಿಯುಂಗುರಗಳಿಗೆ ಇಪ್ಪತ್ತು ಸಾವಿರ, ಕೈಕಡಗಗಳಿಗೆ ಮುವ್ವತ್ತೈದು ಸಾವಿರ, ಬ್ರೂಚು, ಉಂಗುರಗಳು, ಲಾಕೆಟ್ಟುಗಳಿಗೆ ಹದಿನಾರು ಸಾವಿರ, ವಿವಿಧ ಹರಳುಗಳಿಗೆ ಹದಿನಾಲ್ಕು ಸಾವಿರ, ಚಿನ್ನದ ಸರ ಮತ್ತು ಮತ್ತು ಅದಕ್ಕೆ ತೂಗುವ ಸೊಲಿಟೇಯ್ರ್ ಹರಳಿನ ಪೆಂಡೆಂಟ್ ಗೆ ನಲ್ವತ್ತು ಸಾವಿರ… ಹೀಗೆ ಒಟ್ಟು ನೂರಾ ತೊಂಭತ್ತಾರು ಸಾವಿರ ಫ್ರಾಂಕುಗಳು..

“ಈ ಹೆಣ್ಣುಮಗಳು ಹೆಚ್ಚು ಕಮ್ಮಿ ನಮ್ಮ ಖಾಯಂ ಗಿರಾಕಿಯಾಗಿದ್ದಳು. ತನ್ನ ಜೀವಮಾನದ ಗಳಿಕೆಯನ್ನೆಲ್ಲಾ ಆಭರಣ ಖರೀದಿಗೆ ವಿನಿಯೋಗಿಸುತ್ತಿದ್ದಳು.” ಅವನ ದನಿಯೊಳಗಿನ ವ್ಯಂಗ್ಯ ಲ್ಯಾಂಟಿನನ್ನೇನೂ ಕಂಗೆಡಿಸಲಿಲ್ಲ.
“ಆಭರಣಗಳ ಖರೀದಿಯೂ ಒಂದು ತೆರನಾದ ಹೂಡಿಕೆಯೇ..” ಲ್ಯಾಂಟಿನ್ ಗಂಭೀರವಾಗಿಯೇ ಹೇಳಿದ.
ತಾನು ಬೇರೊಬ್ಬ ಬೇರೊಬ್ಬ ಮೌಲ್ಯಮಾಪಕನ ಸಲಹೆ ಪಡೆದು ಮಾರನೆಯ ದಿನ ಬರುವುದಾಗಿ ಹೇಳಿ ಲ್ಯಾಂಟಿನ್ ಅಲ್ಲಿಂದ ಹೊರಟ.

ಅವನ ಎದುರಿಗೆ ವೆಂಡೋಮ್ ಸ್ತಂಭಗಳು ಗಗನ ಮುಖಿಯಾಗಿ ಎದ್ದು ನಿಂತಿದ್ದವು. ಆ ಕ್ಷಣ ಲ್ಯಾಂಟಿನನಿಗೆ ಅದನ್ನು ಏರಿ ಮೇಲೆ ಕುಣಿಯಬೇಕೆನಿಸಿತು.
ಅವನಿಗೆ ಒಂದು ದುಬಾರಿ ಹೋಟೆಲಿನಲ್ಲಿ ಊಟ ಮಾಡಬೇಕೆಂದೆನಿಸಿತು. ಬಾಟಲಿಗೆ ಇಪ್ಪತ್ತು ಫ್ರಾಂಕು ಬೆಲೆಯ ದ್ರಾಕ್ಷಾ ಮದ್ಯವನ್ನು ತರಿಸಿದ. ಊಟವಾದ ನಂತರ ಒಂದು ಬಾಡಿಗೆ ಗಾಡಿಯನ್ನು ಕರೆಸಿ ಸಂಜೆವರೆಗೆ ಪ್ಯಾರಿಸಿಗೆ ಸುತ್ತು ಹಾಕಿದ. ಅವನು ಹಾದು ಹೋಗುತ್ತಿದ್ದ ಬೀದಿಗಳಲ್ಲಿ ಓಡಾಡುತ್ತಿದ್ದ ಜನರನ್ನು ಉದ್ದೇಶಿಸಿ.
“ನಾನೂ ಕೂಡ ಶ್ರೀಮಂತ ಕಣ್ರೊ!.. ಎರಡು ನೂರು ಸಾವಿರ ಫ್ರಾಂಕುಗಳ ಒಡೆಯ!!” ಎಂದು ಜೋರಾಗಿ ಕೂಗಿ ಹೇಳಬೇಕೆನಿಸಿತು.

ಅವನಿಗೆ ಒಮ್ಮೆಲೆ ತನ್ನ ಕಛೇರಿಯ ನೆನಪಾಯಿತು. ಅವನು ಅಲ್ಲಿಂದ ತ್ವರಿತವಾಗಿ ತನ್ನ ಕಛೇರಿಯ ಕಡೆಗೆ ಗಾಡಿಯನ್ನು ಚಲಾಯಿಸಲು ಅಣತಿ ಇತ್ತ. ಕಛೇರಿ ತಲುಪುತ್ತಲೇ ಅವನು ತನ್ನ ಮೇಲಾಧಿಕಾರಿಯ ಕೊಠಡಿಗೆ ನುಗ್ಗಿ, “ಮೊಸ್ಸಿಯುರ್, ನಾನು ನನ್ನ ಕೆಲಸಕ್ಕೆ ರಾಜಿನಾಮೆ ಕೊಡಲು ಬಂದಿದ್ದೇನೆ. ನನಗೆ ಸುಮಾರು ಮುನ್ನೂರು ಸಾವಿರ ಫ್ರಾಂಕುಗಳ ಬಳುವಳಿ ಸಿಕ್ಕಿದೆ.” ಎಂದ.

ಅವನು ಅಲ್ಲಿದ ಹೊರಗೆ ಬಂದು ತನ್ನ ಸಹಧ್ಯೋಗಿಗಳನ್ನು ಕಂಡು ತನಗೆ ಒದಗಿ ಬಂದ ಧನದ ಬಗ್ಗೆ ಹೇಳುತ್ತಾ ತನ್ನ ಮುಂದಿನ ಯೋಜನೆಗಳ ಬಗ್ಗೆ ರಸವತ್ತಾಗಿ ಬಣ್ಣಿಸಿ ಅವರ ಹೊಟ್ಟೆ ಉರಿಸಿ ಅಲ್ಲಿಂದ ಪ್ಯಾರಿಸಿನ ಗಣ್ಯರು ಎಡತಾಕುತ್ತಿದ್ದ ‘ಕೆಫೆ ಆಂಗ್ಲಿಕೇಯ್ಸ್’ ರೆಸ್ಟುರಂಟ್‍ಗೆ ಹೊರಟ.
.
ರೆಸ್ಟುÀರಂಟಿನಲ್ಲಿ ಲ್ಯಾಂಟಿನನ ಎದುರು ಕುಳಿತಿದ್ದ ವ್ಯಕ್ತಿ ಅವನಿಗೆ ಓರ್ವ ಗಣ್ಯ ವ್ಯಕ್ತಿಯಂತೆ ಕಂಡ. ಲ್ಯಾಂಟಿನನಿಗೆ ತಾನೂ ಯಾರೋ ಜುಜುಬಿ ವ್ಯಕ್ತಿಯಲ್ಲವೆಂದು ಸಾರುವ ಜರೂರತ್ತಿತ್ತು. ಲ್ಯಾಂಟಿನ್ ಅವನನ್ನು ಮಾತನಾಡಿಸಿ ತನಗೆ ಬಳುವಳಿಯಾಗಿ ಬಂದಿರುವ ನಾಲ್ಕು ನೂರು ಸಾವಿರ ಫ್ರಾಂಕುಗಳ ಬಗ್ಗೆ ಅವನಿಗೆ ಸಂಕೋಚದಿಂದೆಂಬಂತೆ ಹೇಳಿದ.

ಅಲ್ಲಿಂದ ಲ್ಯಾಂಟಿನ್, ತಾನು ಈವರೆಗೂ ‘ಬೋರೂ’ ಎಂದು ತನ್ನ ಮಡಿದಿಯೊಂದಿಗೆ ಹೋಗಲು ಹಿಂದೇಟು ಹಾಕುತ್ತಿದ್ದ ರಂಗಮಂದಿರಕ್ಕೆ ಹೊರಟು, ಆ ನಂತರ ರಾತ್ರಿಯೆಲ್ಲಾ ವೇಶ್ಯೆಯರೊಂದಿಗೆ ಕಳೆದ.

ಆರು ತಿಂಗಳ ನಂತರ ಲ್ಯಾಂಟಿನ್ ಮರು ಮದುವೆಯಾದ. ಆಕೆ ನಿಜವಾಗಿಯೂ ಗುಣವಂತೆ, ಶೀಲವಂತೆಯಾಗಿದ್ದಳು ಎಂಬುದರಲ್ಲಿ ಯಾವುದೇ ಸಂಶಯವಿರಲಿಲ್ಲ. ಆದರೆ, ಬಲು ಕೋಪಿಷ್ಠೆ! ಲ್ಯಾಂಟಿನ್ ಅವಳೊಡನೆ ಅಸಹನೀಯ ಬದುಕನ್ನು ಕಳೆಯತೊಡಗಿದ.

-ಜೆ.ವಿ.ಕಾರ್ಲೊ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x