ಹಂಸಭಾವಿಯ ಹಸಿ ಸುಳ್ಳು ..!: ಶರಣಗೌಡ ಬಿ ಪಾಟೀಲ ತಿಳಗೂಳ

ಊರ ಜನಾ ಹಸಿ ಸುಳ್ಳು ಹೇಳತಿದ್ದಾರೆ ನಾನು ಹೇಳುವ ಮಾತು ಖರೇ ಅಂತ ಯಾರೂ ನಂಬತಿಲ್ಲ ಯಾಕಂದ್ರೆ ನಾನೊಬ್ಬ ಹುಚ್ಚ ಅಂತ ಹರಿದ ಅಂಗಿ, ಗೇಣುದ್ದ ಗಡ್ಡ ಅಸ್ತವ್ಯಸ್ತ ಮುಖದ ಹುಚ್ಚನೊಬ್ಬ ಹಂಸ ಬಾವಿ ಕಟ್ಟೆಗೆ ಕುಳಿತು ತನ್ನಷ್ಟಕ್ಕೆ ತಾನೇ ವಟಗುಟ್ಟಿದ. ಜನರ ಮಾತು ಸುಳ್ಳು ಅಂತಾನೆ ನೋಡ್ರೋ ಎಂಥಾ ಹುಚ್ಚನಿವನು ಅಂತ ಆತನ ಮಾತು ಕೇಳಿಸಿಕೊಂಡ ಕೆಲವರು ಗಹಿಗಹಿಸಿ ನಗತೊಡಗಿದರು. ನಗರೋ ನಗರಿ ಯಾರ ಬ್ಯಾಡ ಅಂತಾರೆ ಮುಂದೊಂದಿನ ಸುಳ್ಯಾವದು ಖರೇ ಯಾವುದು ಅಂತ ಸಮಯ ಬಂದಾಗ ನಿಮಗೇ ಗೊತ್ತಾಗ್ತಾದೆ ಆವಾಗಲಾದರು ನನ್ನ ಮಾತಿನ ಮ್ಯಾಲ ನಂಬಕೀ ಬಂದೀತು ಅಂತ ತನ್ನ ಮಾತು ಸಮರ್ಥಿಸಿಕೊಳ್ಳಲು ಮುಂದಾದ. ನಿನ್ನ ಮಾತು ಯಾರು ಖರೇ ತಿಳೀತಾರೆ ನೀನು ನೂರು ಬಾರಿ ಹೇಳಿದರೂ ಅಷ್ಟೇ ಅಂತ ಪುನಃ ಗೇಲಿ ಮಾಡಿ ನಕ್ಕರು. ಹುಚ್ಚನ ಮುಖದ ಮೇಲೆ ಕೋಪ ಆವರಿಸಿತು, ಅವರ ಕಡೆ ವಕ್ರದೃಷ್ಟಿ ಬೀರುತ್ತಾ ಆಯಿತು ಈಗ ನಿಮ್ಮ ಮಾತೆ ಖರೇ ಆಗಲಿ ಅಂತ ಹರಕು ಕೌದಿ ಹೆಗಲ ಮ್ಯಾಲ ಹಾಕಿಕೊಂಡು ಅಲ್ಲಿಂದ ಜಾಗಾ ಖಾಲಿ ಮಾಡಿ ಹೊರಟು ಹೋದ. ಅವನು ಹುಚ್ಚನಾಗಿ ವರ್ಷವೇ ಕಳೆದುಹೋಗಿತ್ತು. ಹೊಟ್ಟೆ ಹಸಿದಾಗ ಅವರಿವರ ಮನೆಗೆ ಹೋಗಿ ಅನ್ನ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತಿದ್ದ. ರಾತ್ರಿ ಅದೇ ಹಂಸಭಾವಿಯ ಕಟ್ಟೆಗೆ ಬಂದು ಮಲಗುತಿದ್ದ. ಮನೆ ಇದ್ದರೂ ಇಲ್ಲದಂತಾಗಿ ಹಾಳುಬಿದ್ದು ಸ್ಮಶಾನವಾಗಿತ್ತು. ಹುಚ್ಚನಂತೂ ಆ ಕಡೆ ಸುಳಿಯುತಿರಲಿಲ್ಲ. ನಾನು ಹೇಳುವ ಸತ್ಯ ಯಾರೂ ನಂಬತಿಲ್ಲ ಅಂತ ದೀನಾಲೂ ನೂರಾರು ಬಾರಿ ತನ್ನ ಮಾತು ಪುನರುಚ್ಛರಿಸುತಿದ್ದ. ಅವನದೇನು ಮಾತು ತಲೀ ಕೆಟ್ಟಾದ ಏನೇನೋ ಬಾಯಿಗೆ ಬಂದಂಗ ಮಾತನಾಡತಾನೆ. ಆತನ ಮಾತಿನ ಕಡೆ ಗಮನ ಕೊಡೋದು ಬೇಡ ಅಂತ ಜನ ಗಮನ ಕೊಡುತಿರಲಿಲ್ಲ. ಹೋಟೆಲು, ಕಿರಾಣಿ ಅಂಗಡಿ, ಗುಡಿಗುಂಡಾರದ ಹತ್ತಿರ ಕುಳಿತವರ ಹತ್ತಿರ ಹೋಗಿ ಒಂದೆರಡು ರುಪಾಯಿ ಬೇಡುತಿದ್ದ ಕೆಲವರು ಕೊಡುತಿದ್ದರು ಇನ್ನೂ ಕೆಲವರು ಕೊಡದೇ ಹೋಗೋ ಹುಚ್ಚ ನಿನ್ನದೇನು ಬ್ಯಾಸರ ದಿನಾ ಹಿಂಗೇ ರೊಕ್ಕಾ ಬೇಡತಿ ನಿನಗ್ಯಾವ ಕೆಲಸಾನೂ ಇಲ್ಲ ಅಂತ ಬೆದರಿಸಿ ಕಳಿಸುತಿದ್ದರು. ಆಗ ಹುಚ್ಚ ಅಲ್ಲಿಂದ ಜಾಗಾ ಖಾಲಿ ಮಾಡಿ ತೆರಳುತ್ತಿದ್ದ.

ಒಂದು ವರ್ಷದ ಹಿಂದೆ ಊರಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗಿತ್ತು. ಹುಚ್ಚನ ಕುಟುಂಬದ ಎಂಟು ಜನ ಹಂಸಭಾವಿಯ ನೀರಿಗೆ ಬಿದ್ದು ಜೀವ ಕಳೆದುಕೊಂಡಿದ್ದರು. ಅವರಲ್ಲಿ ಏಳು ಹೆಣ್ಣು ಮಕ್ಕಳು ಮತ್ತು ಹುಚ್ಚನ ಹೆಂಡತಿ ಗುರವ್ವ ಕೂಡ ಸೇರಿದ್ದಳು. ಘಟನೆಯಿಂದ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಿ ಅವನು ಹುಚ್ಚನಾಗಿದ್ದಾನೆ ಅಂತ ಬಹುತೇಕ ಜನ ಹೇಳುತಿದ್ದರು. ಘಟನೆ ನಡೆದಾಗ ಊರಿಗೂರೇ ದಿಗ್ಭ್ರಾಂತವಾಗಿತ್ತು ಹಂಸ ಬಾವಿ ಹತ್ತಿರ ಸೇರಿ ಜನ ಆ ಎಂಟೂ ಶವ ಹೊರ ತೆಗೆದು ಶವಸಂಸ್ಕಾರ ಮಾಡಿದ್ದರು. ಸುತ್ತ ಮುತ್ತಲಿನ ಊರುಗಳಿಗೂ ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಎಲ್ಲರೂ ಘಟನೆ ಬಗ್ಗೆ ತೀವ್ರ ಹಳಾಳಿ ವ್ಯಕ್ತಪಡಿಸಿದ್ದರು. ಏಕಾಏಕಿ ಹಿಂಗ ಆಗಿ ಹೋದದ್ದು ಜನರ ಮನಸ್ಸಿನಿಂದ ಮಾಸದಂತಾಗಿತ್ತು. ಅವತ್ತಿನಿಂದಲೇ ಹಂಸ ಭಾವಿಯ ಬಗ್ಗೆ ಊರ ಜನರಿಗೆ ಒಂದು ರೀತಿಯ ಭಯ ಶುರುವಾಯಿತು ಭಾವಿಯ ನೀರು ಯಾರೂ ಕುಡಿಯಬಾರದು ಆ ಕಡೆ ಯಾರೂ ಸುಳಿಯಬಾರದು, ಅದು ಮನುಷ್ಯರನ್ನು ನುಂಗುವ ಬಾವಿ ಅಂತ ಪರಸ್ಪರ ಮಾತಾಡಿಕೊಂಡರು. ಊರ ಪ್ರಮುಖರು ಅಂದು ಸಭೆ ಸೇರಿ ಡಂಗೂರ ಭಾರಿಸಿ ಜನರಲ್ಲಿ ಜಾಗೃತಿ ಮೂಡಿಸಿದರು. ಇನ್ನೂ ಎಷ್ಟು ಜನರ ಜೀವ ನುಂಗತಾದೊ ಏನೋ ಈ ಹಂಸಭಾವಿ ಅನ್ನುವ ಆತಂಕ ಪ್ರತಿಯೊಬ್ಬರಲ್ಲೂ ಮನೆಮಾಡಿತ್ತು. ಗುರವ್ವ ತಾನು ಬಾವಿಗೆ ಬೀಳೋದಲ್ಲದೆ ತನ್ನ ಮಕ್ಕಳೊಂದಿಗೆ ಬಾವಿಗೆ ಹಾರಿ ದೊಡ್ಡ ತಪ್ಪು ಮಾಡಿದಳು ಅಂತ ಕೆಂಚವ್ವ ಓಣಿಯ ಹೆಂಗಸರ ಮುಂದೆ ಆಪಾದನೆ ಮಾಡಿದಳು. ಅವಳಿಗೆ ಯಾರು ಹೆಂಗಸ ಅಂತಾರೆ? ಹೆಂಗಸಲ್ಲ ಹೆಮ್ಮಾರಿ ಕೂಸಗೋಳ ಹಸೀ ಜೀವಾ ನುಂಗಿ ಬಿಟ್ಟಳು ತನಗ ತ್ರಾಸ ಆಗಿದ್ದರೆ ತಾನೊಬ್ಬಳೇ ಬಿದ್ದು ಸುಡಗಾಡ ಸೇರಬೇಕಾಗಿತ್ತು ಏನೂ ಅರಿಯದ ಆ ಮಕ್ಕಳಿಗೆ ಶಿಕ್ಷಾ ಕೊಟ್ಟಳು ಅಂತ ಅಕ್ಕಮ್ಮ ಸಿಟ್ಟು ಹೊರ ಹಾಕಿದಳು.

ಗುರವ್ವ ಮಾಡಿದ ಕೆಲಸಾ ಆ ದೇವರೂ ಮೆಚ್ಚಂಗಿಲ್ಲ ಮಕ್ಕಳ ಸಾಯಿಸಿದ್ದಲ್ಲದೇ ಗಂಡಗನೂ ಹುಚ್ಚ ಮಾಡಿದಳು ಅವಳಿಗಂತೂ ಕ್ಛಮಾನೇ ಇಲ್ಲ ಅಂತ ಕಮಲಾಬಾಯಿ ಕೂಡ ದನಿಗೂಡಿಸಿದಳು. ಗುರವ್ವ ದೆವ್ವ ಆಗಿ ಬಹಳ ಮಂದಿಗಿ ಬಡಕೊಂಡು ತ್ರಾಸ ಕೊಡಾಕತ್ಯಾಳ ಅವಳು ಸತ್ತು ಗಂಡಗನೂ ಸುಖ ಮಾಡಲಿಲ್ಲ ಮಂದಿಗಿನೂ ಸುಖ ಮಾಡತಿಲ್ಲ ಅಂತ ನಾಗಮ್ಮ ಬೈಗುಳಗಳ ಸುರಿಮಳೆಗೈದಳು. ಭೂತಾಳೆಪ್ಪನ ಹತ್ರ ದೀನಾಲೂ ದೆವ್ವ ಬಿಡಿಸಿಕೊಳ್ಳಲು ಬರೋರ ಸಂಖ್ಯೆ ಹೆಚ್ಚಾಗಿದೆ ಅಂತ ಆತನ ಪಕ್ಕದ ಮನೆ ಭಾಗಮ್ಮ ವಾಸ್ತವ ವಿವರಿಸಿದಳು. ಅವಳು ಬರೀ ದೆವ್ವ ಆಗಿಲ್ಲ ಏಳು ಮಕ್ಕಳ ತಾಯಿ ದೆವ್ವಂತ ಬಡಕೊಂಡರ ಅವರ ಕತೆನೇ ಮುಗಿಸಿ ಬಿಡ್ತಾಳೆ ಅಂತ ಶಿವಮ್ಮ ಮತ್ತಷ್ಟು ಭಯ ಮೂಡಿಸಿದಳು. ಹಿಂಗೇ ಆದರೆ ಊರು ಸ್ಮಶಾನ ಆದೀತು ಆ ದೆವ್ವಿಗಿ ಏನಾದರೂ ಬಂದೋಬಸ್ತ ಮಾಡಬೇಕು ಅಂತ ಚಂದ್ರಮ್ಮ ಗಾಬರಿಯಾಗಿ ಹೇಳಿದಳು. ಭೂತಾಳೆಪ್ಪನಿಗೆ ಇದೇ ಒಂದು ನೆವ ಬೇಕಾಗಿತ್ತು ಸದಾ ಕಾಲ ಮಾಟ ಮಂತ್ರ ಅಂತ ಮೋಡಿ ಮಾಡಿ ಜನರಿಂದ ದುಡ್ಡು ಮಾಡುವ ಕಾಯಕ ಮಾಡಿಕೊಂಡಿದ್ದ ಘಟನೆ ಆದ ಮ್ಯಾಲ ಅವನ ಹತ್ತಿರ ಬರುವವರ ಸಂಖ್ಯೆ ಹೆಚ್ಚಾಯಿತು ತನ್ನ ಬಳಿ ಬಂದವರಿಗೆಲ್ಲ ಗುರವ್ವಳ ದೆವ್ವ ಬಡಿದಾದ ಅದು ಅಂತಿಂಥ ದೆವ್ವ ಅಲ್ಲ ಏಳುಮಕ್ಕಳ ತಾಯಿ ಪಾಮಾರ ದೆವ್ವ. ಅದನ್ನು ಬಿಡಿಸಬೇಕಾದರೆ ಬಹಳ ಹೈರಾಣ ಪಡಬೇಕು. ಹೆಚ್ಚಿನ ಖರ್ಚು ಬರ್ತಾದೆ ಅಂತ ಏನೇನೋ ಹೇಳುತಿದ್ದ. ಅವನ ಮಾತಿಗೆ ಜನ ಬೆವರಿ ಕೇಳಿದಷ್ಟು ರೊಕ್ಕಾ ಕೊಟ್ಟು ಚೀಟಿ ತಾಯಿತ ಹಾಕಿಸಿಕೊಂಡು ಹೋಗುತಿದ್ದರು. ಇದರಿಂದ ಭೂತಾಳೆಪ್ಪನ ಗಂಟು ದಿನದಿಂದ ದಿನಕ್ಕೆ ಬೆಳೆಯತೊಡಗಿತು. . ಭೂತಾಳೆಪ್ಪನ ಮನೆಯ ಪಕ್ಕದಲ್ಲೇ ಕರಿಬಸವ ಸಣ್ಣ ಕಿರಾಣಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತಿದ್ದ. ಸಣ್ಣ ಪುಟ್ಟ ಗಿರಾಕಿ ಆಗುತ್ತಿತ್ತು ಆದರೀಗ ಭೂತಾಳೆಪ್ಪನಿಂದ ಇವನ ಗಿರಾಕಿಯೂ ಹೆಚ್ಚಾಯಿತು.

ಕಿರಾಣಿ ಸಾಮಾನಿಗಿಂತಲೂ ಭೂತಾಳೆಪ್ಪನ ಮಾಟ ಮಂತ್ರದ ಸಾಮಾನುಗಳೇ ಕಿರಾಣಿ ಅಂಗಡಿಯಲ್ಲಿ ಹೆಚ್ಚಾಗಿ ಮಾರಾಟವಾಗತೊಡಗಿದವು. ಕರಿಬಸವನ ವ್ಯಾಪಾರ ನೋಡಿ ನನ್ನಿಂದಲೇ ಗಿರಾಕಿ ಹೆಚ್ಚಾಗಿದೆ ಅಂತ ಭೂತಾಳೆಪ್ಪನ ಕಣ್ಣು ಕೆಂಪಾದವು. ನಿನ್ನ ಲಾಭದಲ್ಲಿ ನನಗೂ ಪಾಲು ಕೊಡು ಇಲ್ಲದಿದ್ದರೆ ನನ್ನ ಹತ್ತಿರ ಬರುವವರಿಗೆ ನಿನ್ನ ಅಂಗಡ್ಯಾಗ ಸಾಮಾನು ಖರೀದಿಸಲು ಬಿಡುವದಿಲ್ಲ ಅಂತ ಬೆದರಿಕೆ ಹಾಕಿದ. ಭೂತಾಳೆಪ್ಪನ ಮಾತು ಕರಿಬಸವನಿಗೆ ಆತಂಕ ಮೂಡಿಸಿತು. ಹಂಗೆಲ್ಲ ಮಾಡಬೇಡ ನಿನಗೂ ಕಮೀಷನರ್ ಕೊಡತೀನಿ ಅಂತ ಒಪ್ಪಿಕೊಂಡ. . ಈ ಊರಿಗಿರೋದು ಕುಡಿಯುವ ನೀರಿನ ಇದೊಂದೇ ಭಾವಿ. ಇಲ್ಲಿಂದಲೇ ಎಲ್ಲರೂ ನೀರು ಒಯ್ಯುತಿದ್ದರು. ಘಟನೆ ಆದಮೇಲೆ ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಯಿತು. ಸಾಹುಕಾರ್ ತೋಟದ ಬಾವಿಯಿಂದ ನೀರು ತಂದು ಕುಡಿದರಾಯಿತು ಸ್ವಲ್ಪ ದೂರ ಆದರು ಪರವಾಗಿಲ್ಲ ಆಮೇಲೆ ಏನಾದರೂ ಪರಿಹಾರ ಕಂಡುಕೊಂಡರಾಯಿತು ಅಂತ ನಿರ್ಧರಿಸಿದರು. ಸಾಹುಕಾರ ಬಾವಿಯಿಂದ ನೀರು ತರುವದು ಕೂಡ ಹೈರಾಣ ಕೆಲಸವೇ ಆಗಿತ್ತು ದಿನವಿಡೀ ನೀರು ತರುವದರಲ್ಲೇ ಜನ ಕಾಲಕಳೆದಾಗ ಸಮಯ ವ್ಯರ್ಥವಾಗತೊಡಗಿತು. ಇತರ ಕೆಲಸ ಕಾರ್ಯಗಳಿಗೆ ಅಡಚಣೆಯಾಗಿ ಬಡ ಕುಟುಂಬಗಳು ಸಂಕಷ್ಟ ಎದುರಿಸಿದವು. ತನ್ನ ಬಾವಿಯಿಂದ ನೀರು ಒಯ್ದರೂ ಆರಂಭದಲ್ಲಿ ಸಾಹುಕಾರ ಸುಮ್ಮನಿದ್ದ ಸ್ವಲ್ಪ ದಿನದ ನಂತರ ಆತ ತನ್ನ ವರಸೆ ಬದಲಿಸಿ ನಮ್ಮ ಬಾವಿಯಲ್ಲಿ ನೀರು ಕಡಿಮೆಯಾಗುತ್ತಿದೆ ಹೀಗೇ ದಿನಾ ಒಯ್ದರೆ ತೋಟದ ಬೆಳೆಗಳಿಗೆ ನೀರುಣಿಸುವದು ಹೇಗೆ? ಬೆಳೆ ಒಣಗಿ ಇಳುವರಿ ಕಡಿಮೆಯಾದರೆ ಆ ನಷ್ಟ ಯಾರು ಕೊಡುತ್ತಾರೆ. ಇನ್ನು ಮುಂದೆ ಯಾರೇ ನೀರು ಒಯ್ದರೂ ನಮ್ಮ ಬಾವಿಯಿಂದ ಪುಕ್ಕಟೆ ಒಯ್ಯುವ ಹಾಗಿಲ್ಲ ರೊಕ್ಕಾ ಕೊಟ್ಟು ಒಯ್ಯಬೇಕು ಅಂತ ತಾಕೀತು ಮಾಡಿದ.

ಸಾಹುಕಾರ ಮಾತು ಜನರಿಗೆ ಬೇಸರ ತರಿಸಿತು ಆದರೆ ನೀರಿಲ್ಲದೆ ಜೀವನ ಸಾಗಿಸೋದು ಅಸಾಧ್ಯ ಅಂತ ಆತ ಹೇಳಿದಂತೆ ರೊಕ್ಕಾ ಕೊಡಲು ಒಪ್ಪಿಕೊಂಡರು. ಹಂಸಭಾವಿಯ ನೀರು ಬಳಕೆ ಮಾಡದೇ ಹೋದಾಗ ಬಾವಿಯಲ್ಲಿ ಹಸಿರು ಪಾಚಿ ಚಾಚಿಕೊಂಡಿತು. ಮುಳ್ಳಿನ ಗಿಡಗಂಟಿ ಬಾವಿಯ ಸುತ್ತಲೂ ಬೆಳೆದು ನಿಂತವು. ಬಾವಿಯು ಪಾಳುಬಿದ್ದಂತೆ ಕಾಣತೊಡಗಿತು. ನೀರಿನಲ್ಲಿ ಸ್ವಚ್ಛಂದವಾಗಿ ವಿಹರಿಸುತಿದ್ದ ಹಂಸಗಳ ಸಂತತಿ ಕ್ರಮೇಣ ನಸಿಶಿ ಹೋದವು. ಬಾವಿಯ ಸುತ್ತಲೂ ಗಿಡಗಂಟಿ ಬೆಳೆದು ಬಾವಲಿಗಳು ನೇತಾಡತೊಡಗಿದವು. ಜೊತೆಗೆ ಕ್ರಿಮಿಕೀಟ ವಿಷಪೂರಿತ ಜಂತುಗಳು ಆಶ್ರಯ ಪಡೆದು ವಿಚಿತ್ರವಾಗಿ ಸದ್ದು ಮಾಡಲು ಆರಂಭಿಸಿದವು. ಇದರಿಂದ ಊರ ಜನರಿಗೆ ಮತ್ತಷ್ಟು ಭಯ ಶುರುವಾಯಿತು. ಬಾವಿ ಹತ್ತಿರ ಬಂದು ನೀರು ಒಯ್ಯಲು ನಿಮಗ ಭಯ ಆಗ್ತಿರಬೇಕು ನನಗ್ಯಾವ ಭಯವೂ ಇಲ್ಲ ನಾನು ಒಬ್ಬನೇ ಈ ಬಾವಿ ನೀರು ಕುಡೀತೀನಿ ರಾತ್ರಿ ಹೊತ್ತು ಇಲ್ಲೇ ಮಲಗತೀನಿ ನನಗ್ಯಾವ ಏಳುಮಕ್ಕಳ ತಾಯಿ ದೆವ್ವನೂ ಬಡಿಯೋದಿಲ್ಲ. ಯಾಕಂದ್ರೆ ನಾನು ದೆವ್ವದ ಗಂಡ ಅಂತ ಈ ಹುಚ್ಚ ಗಹಿಗಹಿಸಿ ನಗುತಿದ್ದ. ಹುಚ್ಚನ ಮಾತು ಜನರಿಗೆ ಕೋಪ ಬರಿಸುತಿತ್ತು. ಆದರೆ ಹುಚ್ಚನ ಜೊತೆ ಯಾರೂ ವಾದಕ್ಕಿಳಿಯುತ್ತಿರಲಿಲ್ಲ. ಹೆಂಡತಿ ಮಕ್ಕಳ ಕಳಕೊಂಡು ನೀನೊಬ್ಬನೇ ಯಾಕ ಬದಕೀದಿ ನೀನೂ ಸತ್ತು ಹೋಗಬಾರದಾ? ಅಂತ ಗಂಗವ್ವ ಹುಚ್ಚನ ಕಡೆ ನೋಡಿ ಒಮ್ಮೆ ಸಿಟ್ಟು ಹೊರ ಹಾಕಿದಳು. ಹುಚ್ಚನ ಬಾಯಾಗ ಮಣ್ಣು ನಮಗ ದೂರದಿಂದ ನೀರು ಹೊತ್ತು ತರೋದು ಹತ್ಯಾದ ಇದಕ್ಕೆ ಒದರೋದು ಹತ್ಯಾದ ಅಂತ ಪಾರವ್ವ ಹುಚ್ಚನ ಕಡೆ ನೋಡಿ ಕೆಂಗಣ್ಣು ಬೀರಿದಳು. ಹುಚ್ಚ ಮಾತ್ರ ತಲೆ ಕೆಡೆಸಿಕೊಳ್ಳದೆ ಗಹಿಗಹಿಸಿ ನಗುತಿದ್ದ ಅವತ್ತು ಸಾಹುಕಾರ ಮಗನಿಗೂ ಆರಾಮ ತಪ್ಪಿತು.

ಅವಸರದಿಂದ ಮಗನಿಗೆ ದವಾಖಾನಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ ಆದರೆ ಮೂರ್ನಾಲ್ಕು ದಿನವಾದರೂ ಜ್ವರ ಕಡಿಮೆಯಾಗಲಿಲ್ಲ. ರಾತ್ರಿ ಹಾಸಿಗೆ ಮೇಲೆ ಎದ್ದು ಕುಳಿತು ಏನೇನೋ ಬಡಬಡಿಸುತಿದ್ದ ಒಬ್ಬನೇ ಮಗ ಏನಾದರೂ ಜೀವಕ್ಕೆ ಹೆಚ್ಚು ಕಮ್ಮಿ ಆದರೆ ಏನು ಮಾಡೋದು ಅಂತ ಚಿಂತಾಕ್ರಾಂತನಾದ. ಭೂತಾಳೆಪ್ಪನ ಹತ್ತಿರ ಹೋಗಿ ಚೀಟಿ ಹಾಕಿಸಿಕೊಂಡು ಬರ್ರಿ ಯಾರಿಗೆ ಗೊತ್ತು ದೆವ್ವ ಭೂತ ಏನಾದರೂ ಬಡೆದಿರಬೇಕು ಅಂತ ಹೆಂಡತಿ ಸಲಹೆ ನೀಡಿದಳು. ಹೆಂಡತಿ ಮಾತಿಗೆ ತಲೆಯಾಡಿಸಿ ಮರುದಿನ ಮಗನಿಗೆ ಭೂತಾಳೆಪ್ಪನ ಹತ್ತಿರ ಕರೆದುಕೊಂಡು ಹೋದ. ಛೊಲೊ ಆಸಾಮಿ ಬಂದಿದೆ ಅಂತ ಭೂತಾಳೆಪ್ಪ ಮನಸ್ಸಿನಲ್ಲಿ ಯೋಚಿಸಿದ. ಇವನಿಗೆ ನೀನೇ ಕಾಪಾಡಬೇಕು ಅಂತ ಸಾಹುಕಾರ ಮಗನಿಗೆ ಆತನ ಮುಂದೆ ಕೂಡಿಸಿದ. ನಿಮ್ಮ ಮಗನಿಗೆ ಬಡದ ದೆವ್ವ ಸಾಮಾನ್ಯ ದೆವ್ವ ಅಲ್ಲ. ಏಳುಮಕ್ಕಳ ತಾಯಿ ಗುರವ್ವನ ದೆವ್ವ ಇದನ್ನು ಬಿಡಿಸೋದು ಸುಲಭದ ಮಾತಲ್ಲ ಅಂತ ಅಸಹಾಯಕನಂತೆ ನಟಿಸಿದ. ಭೂತಾಳೆಪ್ಪನ ಮಾತು ಕೇಳಿ ಸಾಹುಕಾರನ ಎದೆ ಝಲ್ ಎಂದಿತು ಈಗ ಏನು ಮಾಡೋದು ಅಂತ ಗಾಬರಿಯಾಗಿ ಕಣ್ಣಂಚಿನಲ್ಲಿ ನೀರು ತಂದ. ಭೂತಾಳೆಪ್ಪ ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ನನ್ನ ಎಲ್ಲಾ ಶಕ್ತಿ ಉಪಯೋಗಿಸಿ ನಿನ್ನ ಮಗನಿಗೆ ಬಡಿದ ಆ ದೆವ್ವ ಬಿಡಿಸಲು ಪ್ರಯತ್ನ ಮಾಡತೀನಿ ಆದರೆ ಹೆಚ್ಚಿನ ಖರ್ಚು ಬರ್ತಾದೆ ಅಂತ ಹೇಳಿದ. ರೊಕ್ಕಾ ಎಷ್ಟು ಖರ್ಚಾದರೂ ಪರವಾಗಿಲ್ಲ ಮಗನಿಗಿಂತ ರೊಕ್ಕಾ ಹೆಚ್ಚಿಂದಲ್ಲ ಅಂತ ಸಾಹುಕಾರ ಹೇಳಿದ. ಆಗ ಭೂತಾಳೆಪ್ಪ ದೆವ್ವ ಬಿಡಿಸಲು ಒಪ್ಪಿ ಅಮವಾಸೆಯ ಮಧ್ಯೆ ರಾತ್ರಿ ಹಂಸಭಾವಿಯ ಮುಂದೆ ಪೂಜೆ ಮಾಡಲು ಶುರುಮಾಡಿದ. ಬಾವಿ ಕಟ್ಟೆಗೆ ಮಲಗಿದ್ದ ಹುಚ್ಚನಿಗೆ ಭೂತಾಳೆಪ್ಪನ ಮಂತ್ರೋಚ್ಚಾರ ಕೇಳಿ ದಿಢೀರನೇ ಎಚ್ಚರಾಯಿತು ಎದ್ದು ಕುಳಿತು ಕತ್ತಲಲ್ಲೇ ಆತನ ಕಡೆ ಕಣ್ಣು ಹಾಯಿಸಿದ. ಭೂತಾಳೆಪ್ಪ ಮಂತ್ರದುದ್ದಕ್ಕೂ ಗುರವ್ವಳಿಗೆ ಜೋರಾಗಿ ಬೈಯುವದು ಕೇಳಿಸಿತು.

ಆಗ ಇದ್ದಕ್ಕಿದ್ದಂತೆ ಇವನ ಪಿತ್ತ ನೆತ್ತಿಗೇರಿ ತಕ್ಷಣ ಭೂತಾಳೆಪ್ಪನ ಕುತ್ತಿಗೆಗೆ ಕೈ ಹಾಕಿ ನನ್ನ ಹೆಂಡತಿ ದೆವ್ವ ಆಗ್ಯಾಳಂತ ಯಾಕೆ ಸುಳ್ಳು ಹೇಳತಿ ? ಅವಳೆಲ್ಲಿ ದೆವ್ವ ಆಗ್ಯಾಳ ? ದೆವ್ವ ಆಗಿದ್ದರೆ ಮೊದಲು ನನ್ನನ್ನೇ ಬಡಕೊಳ್ಳಬೇಕಾಗಿತ್ತು. ಅವಳಿಗೆ ಬಾವಿಗೆ ತಳ್ಳಿ ಸಾಯಿಸಿದ್ದು ನಾನೇ. ಏಳು ಮಕ್ಕಳು ಹಡೆದರು ಅವಳು ಒಂದೇ ಒಂದು ಗಂಡು ಮಗು ಹಡೆಯಲಿಲ್ಲ. ಇದರಿಂದ ಬ್ಯಾಸರಾಗಿ ನಾವ್ಯಾರೂ ಬದುಕಿರಬಾರದು ಅಂತ ಒಬ್ಬೊಬ್ಬರಿಗೆ ಬಾವಿಗೆ ತಳ್ಳಿ ನಾನೂ ಜಿಗಿದೆ. ಅಷ್ಟರಲ್ಲಿ ಜನರಿಗೆ ವಿಷಯ ಗೊತ್ತಾಗಿ ಬಾವಿಗೆ ಬಂದರು ಹೊರ ತೆಗೆಯುವಷ್ಟರಲ್ಲಿ ನನ್ನ ಹೆಂಡತಿ ಮಕ್ಕಳು ಬದುಕದೆ ಹೆಣವಾಗಿದ್ದರು. ನಾನು ಮಾತ್ರ ಬಚಾವಾದೆ. ಅವರಿಗೆಲ್ಲ ಉಳಿಸುವ ಸಲುವಾಗಿ ನಾನು ಬಾವಿಗೆ ಹಾರಿದ್ದೆ ಅಂತ ಜನ ಭಾವಿಸಿದರು. ಆದರೆ ಸತ್ಯ ಮಾತ್ರ ಯಾರಿಗೂ ಗೊತ್ತಾಗಲಿಲ್ಲ ನನಗೆ ಹುಚ್ಚನ ಪಟ್ಟ ಕಟ್ಟಿದರು ಹಂಸಭಾವಿಯ ಬಗ್ಗೆ ಎಲ್ಲರೂ ಹಸಿ ಸುಳ್ಳೇ ಹೇಳತೊಡಗಿದರು. ಅವರ ಸುಳ್ಳಿನ ಮುಂದೆ ನನ್ನ ಖರೇ ಮಾತು ನಾಟದೇ ಹೋಯಿತು. ಯಾವ ದೆವ್ವನೂ ಇಲ್ಲ ಭೂತನೂ ಇಲ್ಲ ಅಂತ ಪುನಃ ಭೂತಾಳೆಪ್ಪನ ಕುತ್ತಿಗೆಗೆ ಜೋರಾಗಿ ಅದುಮಿದ. ಭೂತಾಳೆಪ್ಪ ಆ ನೋವು ತಾಳದೆ ನಾನು ಸಾಯತೀನಿ ನನಗೆ ಉಳಿಸಿರಿ ಅಂತ ಒಂದೇ ಸವನೆ ಕಿರಚಲು ಆರಂಭಿಸಿದ. ಆತನ ಕಿರುಚಾಟ ಕೇಳಿ ಜನ ಸೇರಿಕೊಂಡರು. ಸತ್ಯ ಗೊತ್ತಾಗಿ ಹೋಯಿತು. ಯಾರೋ ಪೋಲೀಸರಿಗೆ ಫೋನ ಮಾಡಿ ವಿಷಯ ತಿಳಿಸಿದರು. ಪೋಲೀಸರು ಕೂಡ ದೌಡಾಯಿಸಿ ಹುಚ್ಚ ಮತ್ತು ಭೂತಾಳೆಪ್ಪ ಇಬ್ಬರ ಕೈಗೂ ಬೇಡಿ ಹಾಕಿ ಎಳೆದೊಯ್ದರು. ತಾವು ತಿಳಿದುಕೊಂಡ ಹಂಸ ಬಾವಿಯ ಆ ಹಸಿ ಸುಳ್ಳಿಗೆ ತೆರೆ ಬಿದ್ದು ಜನ ನಿಟ್ಟುಸಿರು ಬಿಡುವಂತಾಯಿತು.

ಶರಣಗೌಡ ಬಿ ಪಾಟೀಲ ತಿಳಗೂಳ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x