ಪ್ರೀತಿಯ ಬಿ……
ಅದೆಷ್ಟು ಹೇಳಿದರೂ ನೀನು ನನ್ನನ್ನು ನಂಬುವುದಿಲ್ಲವೆಂದು ಗೊತ್ತು…. ಗೊತ್ತು ಮಾಡಿಸಲೇಬೇಕೆಂಬ ಹಠವೂ ನನಗಿಲ್ಲ. ಅದ್ಯಾವಾಗ ಧಾರವಾಡದ ಮಳೆಯಂತೆ ಇರ್ತೀಯೋ. ಒಣ ಬಿಸಿಲ ಬಳ್ಳಾರಿಯಂತಾಗುತ್ತಿಯೋ…. ತಿಳಿಯುವುದಿಲ್ಲ. ಒಮ್ಮೊಮ್ಮೆಯಂತೂ ಚಾರ್ಮಡಿ ಘಾಟಿನಲ್ಲಿ ಸದಾ ತೊಟ್ಟಿಕ್ಕುವ ಮಳೆಯ ನಡುವೆ ಮುಸುಕಿನ ಮಂಜೋ ಮಂಜು. ಹೆಂಗೇ ನಿನ್ನ ಅರ್ಥ ಮಾಡಿಕೊಳ್ಳೋದು?
ಬರೀ ಸಂಜೆ, ಮುಂಜಾನೆ ಸೂರ್ಯಾನ ಫೋಟೋ ತೆಗೆದು ಹಂಚಿಕೊಳ್ಳುತ್ತಿದ್ದೆ ನಾನು. ನೀನು ಬಂದೆ ನೋಡು. ಒಳ್ಳೆಯ ಸೌಂದರ್ಯ ಪ್ರಜ್ಞೆ ಕಾಡಲು ಶುರು ಮಾಡಿದೆ. ಅಷ್ಟು ಫೋಟೋ ಹಾಕಿದರೂ ಒಂದೇ ಒಂದು ಲೈಕು ಕೊಡಲಿಲ್ಲ. ಕಾಮೆಂಟೂ ಮಾಡಲಿಲ್ಲ. ಉಳಿದವರು ಏನೆನೆಲ್ಲಾ ಹೊಗಳಿದರು. ನೀನು ಮಾತ್ರ ಊಹೂಂ….. ಅಸಲಿಗೆ ನೀನು ನನ್ನ ಫೋಟೋ ಕೂಡ ನೋಡುತ್ತಿಯೋ ಇಲ್ಲವೋ ಅನ್ನುವುದೇ ಡೌಟು ಕಾಡುತ್ತೆ. ಆದರೆ ನಂಗೊತ್ತು ನೀನು ನೋಡಿರ್ತೀಯಾ ಅಂತ. ಅದೊಂದಿನ ಇದ್ದಕ್ಕಿದ್ದಂತೆಯೇ ಒಂದು ಭಾನುವಾರ ನನ್ನ ಫೋಟೋ ನೋಡಿಯೇ ಒಬ್ಬ ಗೆಳೆಯ ಮನೆಗೆ ಬಂದು ಕ್ಯಾಮೆರಾ ಸಮೇತ ಮಳೇಮಲ್ಲೇಶ್ವರ ಗುಡ್ಡಕ್ಕೆ ನಡೆದಿದ್ದೇ ಬಂತು. ಅಲ್ಲಿಂದ ನಾನು ಬರೀಗೈಯಲ್ಲೇ ವಾಪಾಸ್ಸು ಬಂದೆ.
ಕ್ಯಾಮೆರಾ ಅವನ ಕೊರಳಲ್ಲಿತ್ತು.
ಅಲ್ಲಿಂದ ಸರಿಸುಮಾರು ಎರಡು ವರ್ಷ ಬರೀಗೈಯಲ್ಲೇ ತಿರುಗಿದೆ. ಆಗ ಬಂತು ನೋಡು ನಿನ್ನ ಸಿಟ್ಟು ಹೊರಗೆ. ಆ ದಿನ ಕೆಂಪು ಬಣ್ಣದ ಆ್ಯಪಲ್ ಕಟ್ ಟಾಪ್ ಧರಿಸಿ, ಬಿಳಿ ಲೆಗ್ಗಿನ್ಸ್ ಹಾಕಿದ್ದೆ ನೀನು.. ಅಷ್ಟೇನೂ ಎತ್ತರದ ಚಪ್ಪಲಿಯೂ ಅಲ್ಲ. ಗವಿಸಿದ್ದಪ್ಪನ ಗುಡ್ಡದ ಮೇಲೆ ಕೈಲಾಸ ಮಂಟಪಕ್ಕೆ ಹತ್ತಿರದ ಕಲ್ಲು ಬಂಡೆಯೊಂದಕ್ಕೆ ಆತು ಕೂತಿದ್ದೆವು. ಗರ್ಭಗುಡಿಗೆ ಹೋಗಿ ಬಂದದ್ದಕ್ಕೆ ಹಣೆಗೆ ಚಿಕ್ಕದಾಗಿ ಕುಂಕುಮವಿತ್ತು. ಅಜ್ಜ ಕೊಟ್ಟಿದ್ದ ಕಲ್ಲುಸಕ್ಕರೆ ಹರಳುಗಳು ಕೈಯಲ್ಲಿ ತೇವಗೊಂಡಿದ್ದವು. ಮೆಟ್ಟಿಲಿಳಿದು ಹೋಗುವ ಬದಲು ಸಂಜೆಯ ತಂಪಿಗೆ ಕಾಲಿಳೆಬಿಟ್ಟು ಒಬ್ಬಳೇ ಕೂತಿದ್ದೆ ನೀನು. ನಿನ್ನ ಪಕ್ಕ ಮಾತಿಲ್ಲದೇ ನಾನು.
“ಇವತ್ತಿಂದ ಕ್ಯಾಮೆರಾ ಇಲ್ಲ” ಅಂದಾಗ ನೋಡಬೇಕಿತ್ತು ನಿನ್ನ ಮುಖ. “ ಅಷ್ಟು ಫೋಟೋ ತೆಗೆದ್ರಿ.. ಊರ ಮಂದಿಯೆಲ್ಲಾ ನೋಡಿದ್ರು… ಎದುರಿಗೇ ಇರ್ತಿದ್ದೆ… ಒಂದೇ ಒಂದು ನನ್ ಫೋಟೋ ತೆಗೀಬೇಕು ಅನ್ನಿಸಲಿಲ್ವಾ ನಿಮ್ಗೆ?” ಅಂದೆಯಲ್ಲಾ? ಅವತ್ತೇ ನಾನು ನಿನ್ನ ಧುಸುಮುಸು ಮಾದರಿಯ ಪರಾಕಾಷ್ಠೆ ನೋಡಿದ್ದು.
ಸ್ಸಾರಿ… ಅಂದೆ. “ಈಗಂದ್ ಏನ್ ಪ್ರಯೋಜ್ನ? ಇದ್ದಾಗ ಒಂದು ಫೋಟೋ ತೆಗೀಲಿಲ್ಲ, ಈಗ ಸ್ಸಾರಿ ಕೇಳ್ತಿದ್ದೀರಾ?” ಇದೊಂದು ಗುಣಕ್ಕೆ ನೀನು ಸಿಟ್ಟಾದರೂ ಇನ್ನೂ ಇಷ್ಟವಾಗ್ತಿ… ಏನ್ ಗೊತ್ತಾ? ನಾನು ನಿನ್ನ ದುಬ್ಬಿ, ಸಿಡುಕಿ, ಬಡ್ಡಿ ಬಂಗಾರಮ್ಮ, ಲೇ ಹೋಗೇ, ಬಾರೆ ಏನೆಲ್ಲಾ ಅಂದ್ರೂ, ನನ್ನನ್ನ ಏಕವಚನದಲ್ಲಿ ಎಂದೂ ಮಾತಾಡಿಸಿದವಳಲ್ಲ ನೀನು. LOVE YOU.
ನಿನ್ನ ಕಣ್ಣು ದಿಟ್ಟಿಸಿ ನೋಡಲಾಗಲಿಲ್ಲ, ಆ ದಿನ. ಅವತ್ತು ಫೋಟೋ ತೆಗಿಲಿಲ್ಲಾ ಅಂತ ಸಿಟ್ಟಿತ್ತಾ? ಅಥವಾ ನಿನ್ನನ್ನು ಇಷ್ಟಪಟ್ಟೂ ಕೂಡ ನಾನು ನಿನ್ನ ಬಗ್ಗೆ ಹೊರಳಿ ನೋಡಲಿಲ್ಲ ಅಂತ ಬೇಜಾರಿತ್ತಾ? ನೀನೇ ಹೇಳ್ಬೇಕು. ನಿಜ ಹೇಳ್ತೀನಿ ನೀನು ನನ್ನಿಂದ ಕೆಲ ತಿಂಗಳಲ್ಲೇ ದೂರ ಹೋಗ್ತಿದಿಯಾ ಅನ್ನೋದು ನನಗಾಗಲೇ ಖಾತರಿ ಆಗಿತ್ತು. ಕೊನೆ ದಿನಗಳು ಹತ್ತಿರಾದಂತೆ ನಾನು ನಿನ್ನ ಮಿಸ್ ಮಾಡಿಕೊಳ್ಳತೊಡಗಿದೆ. ಒಮ್ಮೆ ಮೇಸೇಜ್ ಕೂಡ ಕಳ್ಸಿದೆ. “ಆದಷ್ಟು ಬೇಗ ಇಲ್ಲಿಂದ ನೀ ಹೊರಡು”. ಹಿಂದೆಯೇ ರಿಪ್ಲೈ ಬಂದಿತ್ತು;” ನಾನು ನಿಮ್ಮನ್ನು ಅಷ್ಟು ಕಾಡುತ್ತೇನಾ?” .
ನಿಜ ಅದು.
ಕಾಡುತ್ತಿದ್ದುದ್ದು ನಿಜ ಆದರೆ, ನೀನಲ್ಲ, ನಿನ್ನ ಕಣ್ಣು. ಅವಕ್ಕೆ ನಾನು ಲವಂಗ ಅಂತ ಹೆಸರಿಟ್ಟಿದ್ದೆ. ಅದನ್ನು ಹಿಂದೆ ಒಮ್ಮೆ ನಿನಗೆ ಹೇಳಿದ್ದೆ. ಕೆನ್ನೆಯನ್ನು ಸೇಬಿಗೆ, ತುಟಿಯನ್ನು ತೊಂಡೆ ಹಣ್ಣಿಗೆ, ಮೂಗನ್ನು ಸಂಪಿಗೆಗೆ ಕಣ್ಣನ್ನು ಕಮಲಕ್ಕೆ, ಮೀನಿಗೆ, ಹೊಳಪಿಗೆ ಹೋಲಿಸುವುದನ್ನು ಕೇಳಿದ್ದೇನೆ. ಅದೇನು? ಕಣ್ಣನ್ನು ಮಾತ್ರ ಲವಂಗ ಅಂತೀಯಾ ಅಂತ ನೀನು ಕೇಳಬಹುದೇನೋ. ಕಣ್ಣನ್ನು ಲವಂಗ ಅನ್ನದೆಯೇ ಗೋಡಂಬಿ ಅನ್ನೊಕಾಗುತ್ತೇನೆ ಬಂಗಾರ…
ಅದು ಕಣ್ಣು, ಲವ್ ಹುಟ್ಟುವ ಅಂಗ. ಹಾಗಾಗಿ ಅದು ಲವಂಗ… ಹಾಗಂತ ಡುಂಡೀರಾಜ್ ಅವರು ಬರೆದದ್ದನ್ನು ಓದಿದ ನೆನಪು.
ಥೂ… ಪೋಲಿ ಬಿದ್ದಿದ್ದಿಯಾ ಅಂತ ಬೈದುಕೊಳ್ತಿದಿಯಾ? ಬೇಜಾರಿಲ್ಲ. ಆ ನಿನ್ನ ಕಣ್ಣುಗಳೇ ಕಣೇ ನನ್ನ ಪೋಲಿ ಬೀಳೋ ಥರಾ ಮಾಡಿರೋದು. ನಾನೇನು ಅಷ್ಟು ದೊಡ್ಡ ದುಡಿಮೆ ಮಾಡೋ ಕೆಲ್ಸದಲ್ಲೂ ಇಲ್ಲ. ನೀನು ಮಾತ್ರ ಹೊರಟೆ. ಆ ದಿನ ಬಸ್ಟ್ಯಾಂಡ್ ನಲ್ಲಿ ನಿನ್ನ ಲಗೇಜ್ ಹೊತ್ತು ಬಸ್ಸಲ್ಲಿಟ್ಟು ಬೈ ಹೇಳಿ ಬಂದೆ. ಅದಾಗಿ ದಿನಕ್ಕೆರಡು ಬಾರಿ ಅಲಾರ್ಮ್ ಹೊಡೆದಂತೆ ಮಾತು ಶುರುವಾಗುತ್ತಿದ್ದವು.. ಒಮ್ಮೆ ಹಾಸಿಗೆ ಬಿಟ್ಟು ಎದ್ದೇಳುವ ಮುಂಚೆ… ರಾತ್ರಿ ನಿದ್ದೆಗೆ ಜಾರುವ ಮೊದಲು. ಎರಡು ಹೊತ್ತಲ್ಲೂ ನಿನ್ನ ಮಿಸ್ ಮಾಡಿಕೊಂಡ ಮಾತು. “ಸಾಕ್ಸಾಕು, ಕಡ್ಲಿ ಇದ್ದೋರಿಗೆ ಹಲ್ಲಿಲ್ಲ, ಹಲ್ಲಿದ್ದೋರಿಗೆ ಕಡ್ಲಿಲ್ಲ… ಸಧ್ಯಕ್ಕೆ ನಿದ್ದೆ ಬರ್ತಿದೆ, ಬೈ” ಹೇಳುತ್ತಿದ್ದುದು ನೀನೇ ಅಲ್ವಾ?
ಎರಡು ವರ್ಷದೊಳಗೆ ಏನೆನೆಲ್ಲಾ ಆಗಿಹೋದವು. ಅಪ್ಪನ ನೆನಪಂತೆ ಬಿಡದೇ ಕಾಡಿದ್ದು ಸ್ವಂತ ಮನೆ. ಹೇಗೆ ಹೊಂದಿಸಿಕೊಂಡೆನೋ ಅದ್ಹೇಗೆ ಸಿಕ್ಕಿತೋ ಅಂತೂ ನವೆಂಬರ್ ಅನ್ನೋದು ನನ್ನ ಪಾಲಿನ ಖುಷಿಯ ದಿನಗಳೂ ಹೌದು. ದು:ಖದ ಕಟ್ಟೆಯೊಡೆದ ಕೋಡಿಯೂ ಹೌದು. ಗೃಹಪ್ರವೇಶವಾಗಿದ್ದೂ ಆಗಲೇ…..
ಮತ್ತೆ
ಹೇಳದೇ ನಿನಗೀಗ ಹೇಗಿರಲಿ ಹೇಳೇ ಬಿ…. ಹೇಳಿದರೆ ನಿನಗೆ ಬೇಜಾರು.. ಹೇಳದಿದ್ದರೆ ನನ್ನೊಳಗೆ. ಬಂತಲ್ಲ ಛಳಿಗಾಲ. ಮತ್ತೆ ದುಡಿಮೆಗೆ, ಮತ್ತೆ ಹುಮ್ಮಸ್ಸಿಗೆ ಮತ್ತೆ ಕ್ಯಾಮೆರಾಗೆ ಮನಸ್ಸನ್ನು ಕೊರಳನ್ನೂ ಒಡ್ಡಿಬಿಟ್ಟೆ. ನೋಡಿದರೆ ಕೈಯಲ್ಲಿ ಕ್ಯಾಮೆರಾ ಇದೆ ಫೋಟೋ ತೆಗೆಯಲೂ ನೀನೇ ಕಣ್ಣೆದುರಿಗಿದ್ದಿಲ್ಲ. ಕಾಡಿದೆ, ಬೇಡಿದೆ. ಅದೇನಂತ ಮನಸ್ಸು ಮಾಡಿದೆಯೋ ಗೊತ್ತಿಲ್ಲ. ನೀನು ನನ್ನ ಮರೆಯದೇ ಸುಮ್ಮನಾದೆ. ನಾನು ನಿನ್ನ ನೆನಸುತ್ತಲೇ ದಿನ ಕಳೆದೆ. ಅದೊಮ್ಮೆ ನಿನ್ನ ಮೆಸೇಜ್ ನೋಡಿದವನೇ ಹುಚ್ಚೆದ್ದು ಹೋದೆ.
“ನನ್ನದೊಂದು ಚೆಂದನೆ ಫೋಟೋ ತೆಗಿ”
ನಿಮ್ಮ ಮನೆಗೆ ಬಂದಾಗ ನೋಡಿದರೆ ಆಗತಾನೆ ಎದ್ದ ನೀನಿನ್ನೂ ಹಲ್ಲುಜ್ಜಿದ್ದಿಲ್ಲ. ಬಿಚ್ಚುಗೂದಲ ಗುಂಗುರು, ಮಂಪರು ಕಣ್ಣು, ಕೆನ್ನೆಯಲ್ಲಿ ಹಣೆಗೆ ಸಣ್ಣ ಬೊಟ್ಟಿಡುವಷ್ಟು ಅಗಲದ ಗುಳಿ. ಚೂರು ನಗೆ. ಪೂರ್ವದಿಕ್ಕಿನಿಂದ ಮುಂಬಾಲಿಗೆ ಬಿದ್ದ ಎಳೆಬಿಸಿಲು, ಕಪ್ಪು ಪರದೆ ಬಿಟ್ಟಂತೆ ಕತ್ತಲು, ಇನ್ನೇನು ಬೇಕು ಇಷ್ಟು ನ್ಯಾಚುರಲ್ ಆದ ನಿನ್ನ ಸೆರೆ ಹಿಡಿಯಲು….
ಶುರುವಾಯ್ತು ನೋಡು ಅಲ್ಲಿಂದ……
ಅದೆಷ್ಟು ಫೋಟೋ. ಅದೆಷ್ಟು ಜಾಗಗಳು, ಎಷ್ಟು ಮುಂಜಾವು, ಲೆಕ್ಕವಿಲ್ಲದಷ್ಟು ಸಂಜೆಗಳಲ್ಲಿ ಸುಂದರ ಚಿತ್ರಗಳು ನನ್ನ ತೆಕ್ಕೆಯಲ್ಲಿ ಬಿದ್ದವು. ಹರವಿ ಕುಂತರೆ ರಾಶಿ ರಾಶಿ.. ನೋಡಿದವರು ಪ್ರದರ್ಶನಕ್ಕೆ ಇಡುವಷ್ಟು ಸುಂದರವೆಂದರು. ಸ್ಪರ್ಧೆಗೆ ಕಳಿಸುವಷ್ಟು ಯೋಗ್ಯವೆಂದರು. ಒತ್ತಾಯಕ್ಕೆ ಬಿದ್ದು ಪ್ರದರ್ಶನವನ್ನೂ ಮಾಡಿದೆ. ಒಂದಲ್ಲ ಮೊನ್ನೆಯದೂ ಸೇರಿದಂತೆ ಲೆಕ್ಕವಿಟ್ಟರೆ ಇದು ಆರನೇಯದು. ಸಾವಿರಾರು ಜನ ಬಂದು ನೋಡಿದರು. ಬೆರಗಾದರು. ಪತ್ರಿಕೆಗಳಲ್ಲಿ, ನೋಡುಗರ ಬಾಯಲ್ಲಿ ಆಹಾ!….
ಎಲ್ಲರ ಮಧ್ಯೆ ನಿನ್ನವೇ ಎರಡು ಕಣ್ಣುಗಳಿರಲಿಲ್ಲ.
At least ಈಗ್ಲಾದ್ರೂ ಚೂರು ಮನಸ್ಸು ಮಾಡೇ…. ತುಂಗಭದ್ರೆ ನದಿ ದಂಡೆಯಲ್ಲಿ ಕೂತು ಚೂರು ಕಷ್ಟ ಸುಖ ಮಾತಾಡೋಣ…….
-ಪಿ.ಎಸ್. ಅಮರದೀಪ್.
ಬರಹ ಬಹಳ ಮೂಡಿ ಬಂದಿದೆ.. ಈಗ ಕಷ್ಟ ಸುಖ ಮತಾಡೋಕ್ಕೆ ತುಂಗಾ ನದಿ ದಂಡೆ ಸರಿಯಿರಲ್ಲ, ನಿಮ್ಮ ಮನೆಗೆ ಕರೆಸಿಕೊಂಡ್ರೆ ಒಳ್ಳೆದಿತ್ತು
ಹ್ಹ ಹ್ಹ ಹ್ಹ
ಚೆನ್ನಾಗಿ
ಚಂದ ವಿದೆ ನಿಮ್ಮ ಆಅಅ ಲವ್ ಅಂಗದ ಕಥೆ. ತುಂಗಭದ್ರ ದಂಡೆಗೆ ಹೋದರೆ ಕಷ್ಟ ಸುಖದ ಜೊತೆ ಒಂದಿಷ್ಟು ಕಣ್ಣುಗಳ ಫೋಟೋ ತೆಗಿರಿ ಸರ್
ತುಂಬಾ ಚೆನ್ನಾಗಿದೆ,,, ಅನುಭವದ ಅನುಭಾವಗಳು…..