ಹೆಣದ ಗಾಡಿ: ಜಯರಾಮಚಾರಿ

ಅಲ್ಲೊಂದು ಸಾವಾಗಿದೆ.

ಸತ್ತವನ ದೇಹ ಮನೆಯ ಹೊರಗೆ ಇದೆ, ಸತ್ತವನು ಕೆಲವು ವರ್ಷಗಳಿಂದ ಯಾವ ಕೆಲಸವೂ ಮಾಡದೇ ಕುಡಿಯುತ್ತಾ, ಮನೆಯವರನ್ನು ಪೀಡಿಸುತ್ತಾ, ತನ್ನ ಕುಡಿತದ ಚೇಷ್ಟೇಗಳಿಂದ ಪರರನ್ನು ನಗಿಸುತ್ತ ಬದುಕಿದ್ದಾಗಲೇ ಸತ್ತಿದ್ದ. ಈ ಸಂಜೆ ಮತ್ತೆ ಸತ್ತ. ಸತ್ತವನನ್ನು ಮಂಚದ ಮೇಲೆ ಮಲಗಿಸಲಾಗಿದೆ, ಅವನ ದೇಹವನ್ನು ಹಳೇ ಕಂಬಳಿಯಿಂದ ಮುಚ್ಚಲಾಗಿದೆ, ಆ ಕಂಬಳಿಗೆ ಸುಮಾರು ಆರರಿಂದ ಏಳು ತೂತುಗಳಿವೆ. ಅವನ ದೇಹದ ಕೆಳಗೆ ಮಾಸಲಾದ ಬೆಡ್ ಶೀಟ್ ಅದರ ಕೆಳಗೆ ಉಪಯೋಗಿಸದೇ ಇದ್ದ ಹಳೆಯ ಚಾಪೆಯಿದೆ. ಅವನ ಬಾಯಿ ತುಸು ತೆರೆದಿದ್ದು ಒಂದೆರಡು ನೊಣಗಳು ಒಳ ಹೋಗಲು ಅವಣಿಸುತ್ತಿವೆ ಅದನ್ನು ಅವನ ಹೆಂಡತಿ ಸಾಗಹಾಕಲು ಪ್ರಯತ್ನಿಸಿ ಸೋಲುತ್ತಿದ್ದಾಳೆ, ಬಿಡದೇ ಸತ್ತವನ ಕಳೇಬರವನ್ನು ದಿಟ್ಟಿಸುತ್ತಾ ಕೂತಿದ್ದಾಳೆ. ವಿಷಯ ತಿಳಿದು ಬಂದ ಜನರೆದುರು ಗೋಳಾಡುವ, ಕಿರುಚಿಕೊಳ್ಳುವ ಅನಿವಾರ್ಯಕ್ಕೆ ಸಿಲುಕಿದ್ದಾಳೆ. ಕೆಲವೊಮ್ಮೆ ಕೆಲವೊಂದು ನೆನಪುಗಳಿಂದ ಅವಳ ಗೋಳಾಡುವಿಕೆಗೆ, ಕಿರುಚಿವಿಕೆಗೆ, ಅಳುವಿಗೆ ಯಾವುದೇ ಮುಖವಾಡವಾಗಲೀ, ಅನಿವಾರ್ಯವಾಗಲೀ ಇಲ್ಲ. ಇರುವಾಗ ತುಂಬಾ ಪೀಡನೆಗೊಳಗಾಗಿ ಸತ್ತವನಿಗೆ ’ಸಾಯಿ’ ಎಂದು ಶಾಪ ಹಾಕಿದವಳಿಗೆ ಅಚಾನಕ್ಕಾಗಿ ಎದುರಾದ ಸಾವು ಶೂನ್ಯವನ್ನು ಬಾಚಿ ಬಳಿದು ಎಸೆದು ನಿಂತಿದೆ. ಮುಂದೇನು ? ಎಂಬ ಪ್ರಶ್ನೆ ಅವಳ ಹಣೆಯ ಮೇಲಿನ ಚಿಂತೆಯ ಗೆರೆಗಳಾಗಿ ನಿಂತಿದೆ. ಪ್ರಶ್ನೆಗೆ ಅಸಹಾಯಕತೆಯಿಂದ ಮಕ್ಕಳತ್ತ ತಿರುಗುತ್ತಾಳೆ.

ಸತ್ತವನ ತಲೆಯ ಹಿಂದೆ ಒಂದೇ ದಿಕ್ಕಿಗೆ ಅವಳ ಮಗಳು ಕೂತಿದ್ದಾಳೆ, ಸಾವು ಅವಳಿಗೆ ಅಪರಿಚಿತ ಅತಿಥಿ. ಅವಳು ಒಂದು ಕಾಲದಲ್ಲಿ ಚೆನ್ನಾಗಿ ಓದುತ್ತಿದ್ದವಳು, ಅವಳನ್ನು ಕಂಡ ಆಸುಪಾಸಿನವರು ಮುಂದೆ ಒಳ್ಳೆ ಕೆಲಸ ದಕ್ಕಿಸಿಕೊಂಡು ಕೈ ತುಂಬಾ ದುಡಿಯುತ್ತಾಳೆ ಎಂಬ ಭ್ರಮೆಯಲ್ಲಿದ್ದರು, ಕಳೆದ ಮೂರು ವರ್ಷಗಳಲ್ಲಿ ಅದನ್ನು ಸುಳ್ಳಾಗಿಸಿದ್ದಾಳೆ. ತನ್ನ ಗಡಿಯನ್ನು ತಾನೇ ದಾಟದೆ ಬಂಧಿಯಾದವಳಂತೆ ಕಾಣುತ್ತಿದ್ದಾಳೆ. ಆಗ್ಗಾಗ್ಗೆ ತನ್ನ ಸತ್ತ ತಂದೆಯ ತಲೆಯನ್ನು ನೇವರಿಸುತ್ತಾಳೆ ಅದೆಂತಹುದೋ ನೆನಪುಗಳ ದಾಳಿಗೆ ಸಿಕ್ಕು ಕಣ್ಣಂಚಲ್ಲಿ ಬಂದ ನೀರನ್ನು ಕಿರುಬೆರಳಲ್ಲಿ ನೀವುತ್ತಿದ್ದಾಳೆ.

ಈ ಸತ್ತವನ , ಅವನ ಹೆಂಡತಿಯ, ಮಗಳ ಆಸುಪಾಸಿನಲ್ಲಿ ಸುಳಿಯದೇ, ದೂರದಲ್ಲಿ ಯಾವ ದುಃಖವೂ ಹಾಕಿಕೊಳ್ಳದ ಸತ್ತವನ ಮಗನಿದ್ದಾನೆ. ತೀರ ಚಿಕ್ಕ ವಯಸ್ಸಿನಲ್ಲಿಯೇ ಒಂದಷ್ಟು ಅವಮಾನ, ಕಷ್ಟ, ಸಾವು ನೋವನ್ನು ಕಂಡು ಮಾಗಿದ್ದಾನೆ. ಈ ಸಾವು ಬರುವುದೆಂದು ಅವನಿಗೆ ತಿಳಿದಿತ್ತು. ಸದ್ಯ ತನ್ನ ಭವಿಷ್ಯದ ಕತೆ ಏನು? ಎತ್ತ ಸಾಗುತ್ತಿದೆ ಎಂದು ಯೋಚಿಸುತ್ತಿದ್ದಾನೆ. ಅವನನ್ನು ಅವನಷ್ಟೇ ವಯಸ್ಸಿನ ಚಿಗುರಿ ಮೀಸೆಯ ಹುಡುಗರು ಸುತ್ತುವರಿದಿದ್ದಾರೆ. “ಏನೂ ಆಗೋಲ್ಲ” ಎಂದು ಧೈರ್ಯ ತುಂಬುತ್ತಿದ್ದಾರೆ. ಸಂತೈಸುತ್ತಿದ್ದ ವೇಳೆಗೆ ಯಾರಿಗೋ ವಾಟ್ಸಾಪಿನಲ್ಲಿ ಮೆಸೇಜು ಬಂದು ಆತ ಸ್ವಲ್ಪವೇ ದೂರ ಹೋಗಿ ನಿಂತು ನಗುತ್ತಲೇ ಟೈಪಿಸುತ್ತಿದ್ದಾನೆ.

ಸತ್ತವನಿಗೊಬ್ಬಳು ತಂಗಿಯಿದ್ದಾಳೆ. ಅವಳಿಗೆರಡು ಮಕ್ಕಳು ಹಿರಿಯವಳಿಗೆ ಎರಡು ವರ್ಷದ ಹೆಣ್ಣುಮಗುವಿದೆ, ಮಗುವಿಗೆ ಜ್ವರವಂತೆ ಹಾಗಾಗಿ ಶವ ನೋಡಲು ಬಂದಿಲ್ಲ. ಮಗ ಕೆಲಸದಿಂದ ಈಗಷ್ಟೇ ಹೊರಟಿದ್ದಾನಂತೆ. ಗಂಡ ಅಲ್ಲಿಯೇ ಓಡಾಡುತ್ತಿದ್ದಾನೆ ಆತನೂ ಕೂಡ ಒಂದು ಕಾಲದಲ್ಲಿ ತೀರ ಕುಡಿಯುತ್ತಿದ್ದವನು ಈ ಮಧ್ಯೆ ಬಿಟ್ಟಿದ್ದಾನೆ. ಸತ್ತವನ ತಂಗಿಗೆ ಅಣ್ಣನ ಸಾವಿನ ನೋವೂ ಜೊತೆಗೆ ಗಂಡ ಕುಡಿತ ಬಿಟ್ಟಿರುವುದರ ಸಮಧಾನ ಒಟ್ಟೊಟ್ಟಾಗಿ ಬಂದಿದೆ. ಸತ್ತವನಿಗೆ ನಾಲ್ವರು ತಮ್ಮಂದಿರರಿದ್ದಾರೆ ಮೊದಲನೆಯವನು ಮನೆ ಬಿಟ್ಟು ಹೋಗಿದ್ದಾನೆ ಎರಡನೆಯವನಿಗೆ ಅಣ್ಣನೆಂದರೆ ತಂದೆ ಸಮಾನ ಆತ ಅಲ್ಲಿಯೇ ಬಳಿ ಇರುವ ಒಂದಷ್ಟು ಡಾಕ್ಟರುಗಳನ್ನ ಅಂಗಲಾಚುತ್ತಿದ್ದಾನೆ ಒಂದು ಸಾರಿ ಬಂದು ನೋಡಿ ಅಂತ. ಅವನಿಗೆ ಅಣ್ಣ ಇನ್ನೂ ಸತ್ತಿಲ್ಲ ಎಂಬ ನಂಬಿಕೆ. ಯಾವ ಡಾಕ್ಟರು ಬರಲು ಒಪ್ಪುತ್ತಿಲ್ಲ, ಕೊನೆಗೆ ಡಾಕ್ಟರನ್ನೊಬ್ಬ ಒಪ್ಪಿದ್ದಾನೆ ಇಬ್ಬರು ಗಾಡಿಯಲ್ಲಿ ಸಾವಿನ ಮನೆಯತ್ತ ಬರುತ್ತಿದ್ದಾರೆ. ಮೂರನೆಯವನು ಅಣ್ಣನನ್ನು ನೆನ್ನೆ ತಾನೇ ಮಾತನಾಡಿಸಿ ಕೈಗೂ ನೂರು ಕೊಟ್ಟು ಬಂದಿದ್ದಾನೆ ಹಾಗಾಗಿ ಅಣ್ಣ ಈಗ ಬರೀ ಶವವಷ್ಟೇ ಎಂದು ನಂಬಲೂ ಅಸಾಧ್ಯವಾಗಿ ಪದೇ ಪದೇ ಮುಖವನ್ನು ನೋಡುತ್ತಿದ್ದಾನೆ. ಬಾಯಿ ತೆರೆದ ಶವದ ಹತ್ತಿರ ಮತ್ತಷ್ಟು ನೊಣಗಳು ಸುತ್ತುವರಿದಿವೆ ನಾಲ್ಕನೆಯವನು ಆ ನೊಣಗಳನ್ನು ಅದರ ಹಾರಾಟವನ್ನೂ ಸೂಕ್ಷ್ಮವಾಗಿ ನೋಡುತ್ತಿದ್ದಾನೆ

ಡಾಕ್ಟರು ಬಂದರು, ಅವರು ಬರುತ್ತಿದ್ದ ಹಾಗೇ ಅಲ್ಲಲ್ಲಿ ಚದುರಿದ ಅವರವರ ನೆನಪುಗಳಲ್ಲಿ ಮುಳುಗಿದವರೆಲ್ಲ ಮತ್ತೆ ಹೆಣದತ್ತ ಬರುತ್ತಿದ್ದಾರೆ. ಡಾಕ್ಟರನು ಕೈಯಲ್ಲಿ ಸ್ಕೆತ್ತಸ್ಕೋಪು ಹಿಡಿದಿದ್ದಾನೆ, ಬಂದ ಹಾಗೇ ಯಾವಾಗ ಹೊರಡುತ್ತಿನೋ ಎಂಬ ಧಾವಂತ ಆತಂಕ ಅವನ ಮುಖದಲ್ಲಿದೆ. ಡಾಕ್ಟರನ ಹಿಂದೆ ಗಾಬರೀಲಿ ಎರಡನೆಯ ತಮ್ಮ ನಿಂತಿದ್ದಾನೆ. ಡಾಕ್ಟರು ಹೆಣದ ನಾಡಿಯನ್ನೊಮ್ಮೆ ಪರೀಕ್ಷೀಸಿ ಮುಖವನ್ನೊಮ್ಮೆ ನೋಡಿ ಕಣ್ಣುಗಳನ್ನು ನೋಡುತ್ತಾ “ಚೇ ಜೀವ ಹೋಗಿದೆ ಕಣ್ರೀ” ಎನ್ನುತ್ತ ಕಣ್ಣನ್ನು ಮತ್ತಷ್ಟು ಅಗಲಿಸುತ್ತಾ ” ಓ ಅಲ್ ರೆಡಿ ಡಯಲಿಟ್ ಆಗಿದೆ ನೋಡಿ”ಎಂದು ಹೇಳುತ್ತಿದ್ದಾರೆ. ಅಲ್ಲಿ ನೆರೆದ ಎಷ್ಟೋ ಮಂದಿಗೆ ಡಯಲಿಟ್ ಎಂಬುದು ಗೊತ್ತಿಲ್ಲವಾದರೂ ಡಾಕ್ಟರು ಏನೂ ಹೇಳಲು ಬರುತ್ತಿದ್ದಾರೆ ತಿಳಿಯುತ್ತಿದೆ. ಡಾಕ್ಟರು ತನ್ನ ಸ್ಮಾರ್ಟ್ ಫೋನ್ ತೆಗೆದು , ಫ್ಲಾಷ್ ಲೈಟ್ ಆನ್ ಮಾಡಿ ಸತ್ತವನ ಕಣ್ಣಿಗೆ ಬಿಟ್ಟ ” ನೋಡಿ ಬದುಕಿದ್ರೆ ಆ ಕಣ್ಣು ಇದ್ಯಲ್ಲ ಅದು ರಿಯಾಕ್ಟ್ ಮಾಡಬೇಕಿತ್ತು” ಎಂದು ಹೇಳಿ ಹೊರಡಲು ನಿಂತಿದ್ದಾರೆ, ಕರೆದು ತಂದ ಎರಡನೆಯ ತಮ್ಮ ಡಾಕ್ಟರನಿಗೆ ನೂರರ ಒಂದು ನೋಟನ್ನು ಕೊಡಲು “ಪ್ಲೀಸ್ ಬೇಡ ಐ ವೋಂಟ್ ಟೇಕ್ ಇಟ್” ಎಂದು ನಿರಾಕರಿಸಿದ್ದಾರೆ. ” ಸರಿ ನಡೀರಿ ಸರ್ ಬಿಡ್ತೀನಿ” ಎಂದು ಡಾಕ್ಟರನ್ನು ಕೂರಿಸಿಕೊಂದ ತಮ್ಮ ಗಾಡಿ ಬಿಡಲು ಅದರಿಂದ ಬಂದ ತೆಳು ಬಿಳಿ ಹೊಗೆಬಂದ ವಿರುದ್ದ ದಿಕ್ಕಿಗನುಸಾರವಾಗಿ ಬದಲಿಯಾಗಿ ಸತ್ತವನತ್ತಿರ ಹೋದಂತೆ ಕಾಣುತ್ತಿದೆ

ಸರಿ ಸತ್ತದ್ದು ಅಧಿಕೃತವಾಗಿದೆ. ಅಲ್ಲಿಯೇ ನೆರೆದವರೆಲ್ಲ ಬಿಟ್ಟಿದ್ದ ಚಪ್ಪಲಿ ಹಾಕಿಕೊಂಡು ಹಾರ ತರಲು ಹೊರಟಿದ್ದಾರೆ, ಹಾರ ಎಷ್ಟರದು ತರಬೇಕೆಂಬ ಸಣ್ಣ ಯೋಚನೆಯೊಂದು ಮೂಡಿದೆ. ಅಲ್ಲೇ ಇದ್ದ ಹಿರಿಯನೊಬ್ಬ “ಸೌದೆಗೆ ಬೆಂಕಿ ಹಾಕ್ರಪ್ಪ” ಎಂದ ಅಲ್ಲೇ ನೆನಪುಗಳಲ್ಲಿ ಮಿಂದಿದ್ದ ನಾಲ್ಕನೆಯ ತಮ್ಮ ಅಲ್ಲೇ ಬಿದ್ದಿದ್ದ ಕಡ್ಡಿ ತುಂಡುಗಳ ಹಾಯ್ದು ಸ್ವಲ್ಪ ಸೀಮೆಎಣ್ಣೆ ಸುರಿದು ಬೆಂಕಿ ಹಾಕಿದ್ದಾನೆ, ಹತ್ತಿದ ಎರಡು ನಿಮಿಷಕ್ಕೇನೆ ಬೆಂಕಿ ಆರಿಸಲಾಗಿದ್ದು ಅದರಿಂದ ಹೊರಬಿದ್ದ ಹೊಗೆ ದೇಹ ಬಿಟ್ಟ ಆತ್ಮದಂತೆ ಆಗಸದೆಡೆಗೆ ಚಲಿಸುತ್ತಿದೆ. ಹೋದವರೆಲ್ಲ ಮತ್ತೆ ಕೈಲೀ ಹಾರ ಹಿಡಿದು ಮರಳಿ ಬರುತ್ತಿದ್ದಾರೆ ಹೆಚ್ಚು ಕಡಿಮೆ ಒಂದೇ ಕಡೆ ತಂದ ಹಾರಗಳವು ಎಲ್ಲವೂ ಒಂದೇ ಗಾತ್ರದಲ್ಲಿವೆ. ಹಾರಗಳನ್ನು ಹೆಣಕ್ಕೆ ಹಾಕಿ ಕೈ ಮುಗಿದು ಹೊರಬೀಳುತ್ತಿದ್ದಾರೆ. ವಿಷಯ ತಿಳಿದ ಇನ್ನೊಂದಷ್ಟು ಆಪ್ತ ವಲಯದವರು ಆಟೋ ಬೈಕು ಕಾರುಗಳಲ್ಲಿ ಇಳಿದು ಹೆಣಕ್ಕೆ ಹೂವಿನ ಹಾರ ಹಾಕಿ ಕೈ ಮುಗಿದು ಸತ್ತವನ ಹೆಂಡತಿಗೆ ಸಮಧಾನ ಹೇಳುತ್ತಿದ್ದಾರೆ. ಸುಮ್ಮನಿದ್ದ ಅವಳು ಸಮಧಾನ ಹೇಳುತ್ತಿದ್ದಂತೆ ಮತ್ತೆ ಜೋರಾಗಿ ಅಳಲು ಶುರು ಮಾಡುತ್ತಾಳೆ, ಅವಳ ಅಳು ಅಲ್ಲೆಲ್ಲ ಆವರಿಸುತ್ತದೆ, ಬಂದವರ ಕರುಳು ಚುರುಕ್ ಎನಿಸಿ ಭಾವುಕರು ತಾವೂ ಕೂಡ ಒಂದಷ್ಟು ಅತ್ತು ಕಣ್ಣೊರೆಸಿಕೊಂಡು ಹೊರಡುತ್ತಿದ್ದಾರೆ

ಸತ್ತವನಿಗೆ ಅವನದೇ ಆದ ಒಂದು ಇತಿಹಾಸವಿದೆ.

ಸುಮಾರು ನಾಲ್ಕು ದಶಕಗಳ ಹಿಂದೆ ಕೊಡಗಿನ ಕಾಫಿ ತೋಟದಿಂದ ಬೆಂಗಳೂರಿಗೆ ಓಡಿ ಬಂದವನು ಇಲ್ಲೇ ಅಲೆದಾಡಿ ಮರಗೆಲಸಕ್ಕೆ ಸೇರಿ ಅಲ್ಲಿಯೇ ಕೆಲಸ ಕಲಿತು ಸ್ವಂತವಾಗಿ ಮರಗೆಲಸ ಆರಂಭಿಸಿ ಊರಿಂದ ಅಪ್ಪ ಅಮ್ಮ ತಂಗಿ ತಮ್ಮಂದಿರರನ್ನು ಕರೆಸಿಕೊಂಡು ಸಾಕಿ ಸಲುಹಿದನು. ಅವನ ಮನೆಯಲ್ಲೀ ಕೆಲಸ ಕಲಿಯಲೆಂದೇ ಒಂದಿಪ್ಪತ್ತು ಮಂದಿ ಬಂದು ಕೆಲಸ ಕಲಿತು ಅವರ ಕಾಲ ಮೇಲೆ ನಿಂತಿದ್ದಾರೆ ಒಟ್ಟಿನಲ್ಲಿ ಸುಮಾರು ಮಂದಿಗೆ ಕೆಲಸ ಕಲಿಸಿ ಅನ್ನ ಗಳಿಸಿಕೊಳ್ಳಲು ನೆರವಾದವನು ಇಂದು ಸತ್ತವನಾಗಿದ್ದಾನೆ.

ಒಬ್ಬೊಬ್ಬರಾಗಿ ಹೆಣ ನೋಡಿ ಹೋಗುತ್ತಿದ್ದಾರೆ ಈ ನಡುವೆ ಸತ್ತವನ ಹೆಂಡತಿಗೆ ಅತ್ತು ಅತ್ತು ಬಾಯಿ ಒಣಗಿ ನೀರು ಕೇಳಲು ಅಲ್ಲಿಯೇ ಇದ್ದ ನಾದಿನಿ ಹೋಗಿ ತಂದು ಕೊಡುತ್ತಾಳೆ ಕುಡಿದ ಲೋಟವನ್ನು ನಿಶ್ಯಕ್ತಿಯಿಂದ ಪಕ್ಕಕ್ಕೆ ಇಡುತ್ತಾಳೆ. ಒಂದೇ ಕಡೆ ಕುಳಿತ ಮಗಳಿಗೆ ಕಾಲು ನೋವಂತಾಗಿ ಭಂಗಿ ಬದಲಿಸುತ್ತಾಳೆ. ಸತ್ತವನ ಮಗನು ಗೊತ್ತಿರುವವರಿಗೆಲ್ಲ ಯಾವುದೇ ಉದ್ರೇಕವಿಲ್ಲದೇ ಫೋನಿನ ಮೂಲಕ “ಅಣ್ಣ ಹೋಗಿಬಿಡ್ತು “ ಎಂದು ಸಾವಿನ ಸುದ್ದಿ ತಿಳಿಸುತ್ತಿದ್ದಾನೆ , ಶವದ ಬಳಿ ಮತ್ತಷ್ಟು ನೊಣಗಳು ಸೆರುತ್ತಿವೆ ಹೊರಗೆ ಕತ್ತಲಾಗುತ್ತಿದೆ ಸಾವಿನ ಭಾವ ಮರೆಯಾಗುತ್ತ ವಾಸ್ತವದ ಸ್ಥಿತಿ ಎಲ್ಲರನ್ನೂ ಆವರಿಸುತ್ತಿದೆ. ವಾಟ್ಸಾಪ್ಪು , ಫೇಸ್ಬುಕ್ಕು, ಆಫೀಸು, ಮನೆ, ಕೆಲಸ, ಊಟ, ಸೀರಿಯಲ್ಲು, ಬಾರು, ಹೆಂಡತಿ, ಸಾಲ, ಮನೆ ಬಾಡಿಗೆ ಎಂಬ ಪದಗಳು ಸಾವಿನ ಗಾಢವನ್ನು ಕಮ್ಮಿ ಮಾಡುತ್ತಿವೆ.

ಸಡನ್ನಾಗಿ ಎರಡು ಇನ್ನೋವಾ ಗಾಡಿಗಳು ಬಂದು ನಿಂತಿವೆ ಒಂದರಲ್ಲಿ ಐದು ಜನ ಹುಡುಗರು ಇಳಿದರೆ, ಇನ್ನೊಂದರಲ್ಲಿ ಬಿಳಿ ಶರ್ಟು ಪೈಜಾಮ ತೊಟ್ಟ ಆ ಏರಿಯಾದ ಕಾರ್ಪೊರೇಟರು ಇಳಿದಿದ್ದಾನೆ ಅವನು ಮುಂದೆ ಬರಲು ಉಳಿದ ಐವರು ಬಾಗಿ ಹಿಂದೆ ಬರುತ್ತಿದ್ದಾರೆ . ಸೇರಿದ ಜನ ಜಂಗುಳಿಯಲ್ಲಿ ಪರಿಚಿರರೆಡೆಗೆ ನಗು ಚೆಲ್ಲುತ್ತ ಸಾವಿನ ಮನೆಯೊಳಗೆ ಬಂದಿದ್ದಾನೆ ಎಲ್ಲರೂ ಎದ್ದು ನಿಲ್ಲುತ್ತಾರೆ ಅವನ ಚೇಲನೊಬ್ಬ ಕಿವಿಯಲ್ಲಿ ಏನನ್ನೋ ಒದುರಿ ಕೈಗೆ ಹಾರ ಕೊಡುತ್ತಾನೆ. ಹಾರ ಹಾಕಿ ಸತ್ತವನ ಹೆಂಡತಿಗೆ ಮಗಳಿಗೆ ಒಂದಷ್ಟು ಒಣ ಭರವಸೆ ಹೇಳಿ ಜೇಬಿನಿಂದ ಸಾವಿರದ ಮೂರು ನೋಟು ಕೈಗಿತ್ತು “ಪಾಪ ಒಳ್ಳೇ ಮನುಷ್ಯ ಅವಗಾವಾಗ ಮನೆ ಕಡೆ ಬರ್ತಿದ್ದ” ಎಂದು ಹೇಳಿ ಹೊರಟಿದ್ದಾನೆ ಅವನ ಹಿಂದೆ ಬಂದವರು ಮತ್ತೆ ಬಾಗಿ ಹಿಂದೆ ಹೋಗುತ್ತಿದ್ದಾರೆ. ಅವನು ಕೊಟ್ಟ ಮೂರು ನೋಟು ಸತ್ತವನ ಹೆಂಡತಿಯ ಕಣ್ಣೀರಿಗೆ ತೊಯ್ದು ಒದ್ದೆಯಾಗತೊಡಗಿದೆ, ಸತ್ತವನ ಮೊದಲನೆ ತಮ್ಮ ಹನ್ನೊಂದಾದರೂ ಬಾರದ್ದು ಕಂಡು ಬಂದವರೆಲ್ಲ ಹೊರಟಿದ್ದಾರೆ . ಅಲ್ಲೀ ಕೇವಲ ಸತ್ತವನ ಸಂಸಾರ ತಮ್ಮಂದಿರರು, ತಂಗಿ , ಭಾವ, ಸತ್ತವನ ಮಗನ ಒಂದಿಬ್ಬರು ಸ್ನೇಹಿತರಷ್ಟೇ ಉಳಿದುಕೊಂಡಿದ್ದಾರೆ

ಬೆಳಗ್ಗೆ ಆರಕ್ಕೇನೆ ಎಲ್ಲರೂ ಎದ್ದಿದ್ದಾರೆ. ರಾತ್ರಿಯಿಡೀ ಸತ್ತವನ ಮಗಳು ಮಗ ಹೆಂಡತಿ ಮಲಗಿಲ್ಲ. ಸಂಬಂದಿಯೊಬ್ಬ ಬ್ರಾಹ್ಮಣನೊಬ್ಬನನ್ನು ಹಿಡಿದು ಕರೆತಂದಿದ್ದಾನೆ ಅವನ ಹೊಟ್ಟೆ ಅಲ್ಲಿದವರೆಲ್ಲರಿಗಿಂತ ದೊಡ್ಡದಿದೆ, ತಲೆ ಬೋಳಾಗಿದ್ದು ಹೊಳೆಯುತ್ತಿದೆ, ಕೈಯಲ್ಲಿ ಕೈಚೀಲವೊಂದು ಇದೆ. ಕೆಂಪು ಶರ್ಟು ಹಳದಿ ಪಂಚೆ ಧರಿಸಿದ್ದಾನೆ ಬಂದೊಡನೆ ಕಾರ್ಯಕ್ಕೆ ಬೇಕಾಗುವ ಸಾಮಾನುಗಳ ಪಟ್ಟಿ ಕೊಟ್ಟಿದ್ದಾನೆ. ಅದನ್ನು ಹಿಡಿದು ಒಂದಿಬ್ಬರು ಮಾರ್ಕೆಟ್ಟು ಕಡೆ ಹೊರಟಿದ್ದಾರೆ ಅವರು ಬರುವಷ್ಟರಲ್ಲಿ ಗೋ ಮೂತ್ರ, ಸಗಣಿ, ಸೀಮೆ ಎಣ್ಣೇ, ಸೌದೆ, ಮಡಿಕೆ ಗಡಿಗೆಗಳು ಬೇಕು ಎಂದು ಆರ್ಡರ್ ಮಾಡಿದ್ದಾನೆ. ಅದನ್ನು ಹುಡುಕಲು ಇನ್ನೊಂದಿಬ್ಬರು ಹೊರಟಿದ್ದಾರೆ, ರಾತ್ರಿ ಬರಲಾಗದವರು ಒಬ್ಬೊಬ್ಬರಾಗಿ ಬೆಳಗ್ಗೆ ಬರುತ್ತಿದ್ದಾರೆ ಹಾರ ಹಾಕಿ ಹೊರಡುತ್ತಿದ್ದಾರೆ, ಸದ್ಯ ಶವವನ್ನು ತುಂಬ ಹಾರಗಳು ಅಪ್ಪಿಕೊಂಡಿದ್ದು ಒಂದಷ್ಟು ದುಂಬಿಗಳು ಕೂಡ ಬಂದಿವೆ. ಬ್ರಾಹ್ಮಣ ತನ್ನ ಶರ್ಟು ಬಿಚ್ಚಿ, ಜನಿವಾರವನ್ನೊಮ್ಮೆ ಮುಟ್ಟಿಕೊಂಡು ಅದೆಂತಹುದೋ ಮಂತ್ರ ಹೇಳುತ್ತಾ ತಂದ ಸಾಮಾನುಗಳನ್ನು ನೋಡುತ್ತಿದ್ದಾನೆ. ಗೋಮೂತ್ರ ಸಗಣಿ ಸೌದೆ ಸೀಮೆಣ್ಣೇ ಮಡಿಕೆ ಕುಡಿಕೆಗಳು ಹೊಂದಿಸಲಾಗಿದೆ. ಹೆಣವನ್ನು ಹೊತ್ತಯ್ಯಲು ಬಿದಿರಿನ ಚಟ್ಟ ರೆಡಿಯಾಗಿದೆ, ಅದಕ್ಕೆ ಮಲಗಿಸುವ ಮುಂಚೆ ಹೆಣವನ್ನು ಕೂರಿಸಿ ತಲೆಗೆ ನೀರು ಹುಯ್ಯುತ್ತಿದ್ದಾರೆ, ಹೆಣದ ಕತ್ತನ್ನು ಪಕ್ಕದ ಮನೆಯವನು ಹಿಡಿದಿದ್ದಾನೆ . ಸಂಪ್ರದಾಯದ ಪ್ರಕಾರ ಒಬ್ಬೊಬ್ಬರೆ ಬಂದು ತಂಬಿಗೆಯಲ್ಲಿ ಮೂರು ಸಾರಿ ತಲೆಗೆ ಉಯ್ದು ಪಕ್ಕಕ್ಕೆ ನಿಲ್ಲುತ್ತಿದ್ದಾರೆ ಹಾಕಿದವರ ಕೆಲವರ ಕಣ್ಣು ನೀರಾಗುತ್ತಿದೆ, ಒಂದಿಬ್ಬರು ತೀರ ಆಪ್ತರು ನೀರು ಹಾಕುತ್ತಲೇ ಕುಸಿಯುತ್ತಿದ್ದಾರೆ ಅವರನ್ನು ಹಿಡಿದು ಒಂದೆಡೆ ಕೂರಿಸಿ ಕೆಲವರು ಸಂತೈಸುತ್ತಿದ್ದಾರೆ. ಶವಕ್ಕೆ ನೀರು ಹಾಕಿ ಚಟ್ಟಕ್ಕೆ ಮಲಗಿಸಿದ್ದಾರೆ ಶವದ ಮೇಲೆ ಬಿಳಿ ಪಂಚೆಯೊಂದೇ ಇದೆ. ಬ್ರಾಹ್ಮಣ ಹೇಳಿದ ದಿಕ್ಕಿಗೆ ಮಲಗಿಸಿದ್ದಾರ? ಎಂದು ಕೆಲವು ಹಿರಿಯರು ಲೆಕ್ಕ ಹಾಕುತ್ತಿದ್ದಾರೆ

ಸತ್ತವನ ಮಗ ತಲೆಗೆ ಐದು ಬಾರಿ ನೀರು ಹಾಕಿಕೊಂಡ ಹೊಸದಾಗಿ ತಂದ ಪಂಚೆ ಟವೆಲ್ಲು ನೀಡಿದ್ದಾರೆ ಪಂಚೆ ಉಡಲು ತಿಳಿಯದೇ ಬೆಪ್ಪಾಗಿ ನಿಂತ ಅವನಿಗೆ ಯಾರೋ ಹಿರಿಯರು ಬಂದು ಪಂಚೆ ಉಡಿಸಿದ್ದಾರೆ. ಆತ ಬ್ರಾಹ್ಮಣನೆದುರು ನಿಂತಿದ್ದಾನೆ ಬ್ರಾಹ್ಮಣ ಹೇಳಿದಂತೆ ಪೂಜೆ ಮಾಡಿ , ಮಂತ್ರವನ್ನು ಯಾಂತ್ರಿಕವಾಗಿ ಹೇಳುತ್ತಿದ್ದಾನೆ. ಸತ್ತವನ ಹೆಂಡತಿಗೆ ಹೂ ಮುಡಿಸಿ ಕೈ ತುಂಬಾ ಬಳೆ ತೊಡಿಸಿ ಅದನ್ನು ಹೊಡೆದು ಹಾಕಿ, ಹೂ ಕಿತ್ತು , ಕುಂಕುಮ ಅಳಿಸಿ ವಿಧವೆಯಾಗಿಸಿದ್ದಾರೆ. ಶವದ ಸುತ್ತ ಬಲದಿಂದ ಎಡಕ್ಕೆಂಬಂತೆ ಕಡ್ಡಿ ಹಿಡಿದು, ಕಾಲು , ಉಗಿದು, ಅಲ್ಲೇ ಇಟ್ಟ ಅಕ್ಕಿ ಕಾಳನ್ನು ಬಾಯಿಗೆ ಹಾಕುತ್ತಿದ್ದಾರೆ, ಎಲ್ಲರ ಸರದಿ ಮುಗಿದಿರಲು ಸರಿ ಹೆಣ ಹೊರುವವರ್ಯಾರು ಎಂಬ ಪ್ರಶ್ನೆ ಮೂಡಿದೆ. ಅವರ ತಮ್ಮಂದಿರರೇ ಹೊರಲಿ ಎಂಬ ತೀರ್ಪು ಹಿರಿಯರದು ಮೊದಲನೆಯವನು ಬಾರದ ಕಾರಣ ಸತ್ತವನ ಮನೆಯಲ್ಲಿ ಕೆಲಸ ಕಲಿತ ಸಂಬಂದಿಯೊಬ್ಬ ಹೆಗಲು ಕೊಡಲು ಮುಂದೆ ಬಂದಿದ್ದಾನೆ, ಹೆಣ ಹೇಗೆ ಹೊರಬೇಕೆಂದು ಬ್ರಾಹ್ಮಣನು ಹಿರಿಯರು ಕಟ್ಟುನಿಟ್ಟಾಗಿ ಹೇಳುತ್ತಿದ್ದಾರೆ. ಹೆಣ ಹೊರುವ ೪೦೭ ಗಾಡಿ ಸ್ವಲ್ಪ ದೂರದ ರಸ್ತೆಯಲ್ಲಿ ನಿಂತಿದೆ ದಾರಿಯುದ್ದ ಹಾಕಲು ಪುಡಿಗಾಸು ಕಡ್ಲೆಪುರಿ ಹೂವ ಸಿದ್ದವಾಗಿ ಅದನ್ನು ಹಿಡಿದು ಇಬ್ಬರು ನಿಂತಿದ್ದಾರೆ ಹೆಣದೊಳಗಿನ ಆತ್ಮ ಒಂಟಿಯಾಗಿ ಮೇಲೆ ಹೋಗಬಾರದೆಂದು ಕೋಳಿಯೊಂದನ್ನು ಹಿಡಿದು ತಂದಿದ್ದಾರೆ ಅದು ಕೂಡ ಚಿತೆಗೆ ಬೀಳಲಿದೆ ಎಂಬ ಅರಿವು ಅದಕ್ಕಿಲ್ಲ

“ಸರಿ ಈಗ ಎತ್ತಿ” ಎಂದೊಡನೆ ನಾಲ್ವರು ಒಂದೇ ಸಮನೆ ಹೆಣ ಎತ್ತಿದ್ದಾರೆ, ಎತ್ತಿದೊಡನೆ ಒಂದಷ್ಟು ಮಂದಿ ಅಳಲು ಶುರು ಮಾಡಿದ್ದಾರೆ, ಸತ್ತವನ ಹೆಂಡತಿ ಎದೆ ಬಡಿದುಕೊಳ್ಳುತ್ತಾ ಅಳುತ್ತಿದ್ದಾಳೆ, ಅವಳನ್ನು ಸಾವರಿಸಲು ಬಂದ ಮಗಳಿಗೆ ಅಳು ಉಮ್ಮಳಿಸಿ ಬರುತ್ತಿದೆ, ಹೆಣ ಹೊತ್ತ ಇಬ್ಬರು ಹೆಗಲು ಬೇರೆಯವರಿಗೆ ಬದಲಿಸಿ ಅವರು ಅಳುತ್ತಿದ್ದಾರೆ. ಹೆಣವನ್ನು ಗಾಡಿಯ ಮಧ್ಯೆ ಇಳಿಸಿದ್ದಾರೆ ಅದರ ಸುತ್ತ ಕೂರಲು ಅವಕಾಶವಿದ್ದು ಆಪ್ತರೆಲ್ಲ ಹತ್ತಿ ಕೂತಿದ್ದಾರೆ

ಹೆಣದ ಗಾಡಿ ಹೊರಟಿದೆ, ಅದರಿಂದ ಹೂ ಕಡ್ಲೆಪುರಿ ನಾಣ್ಯಗಳು ಉದುರುತ್ತಿವೆ. ಹೆಣದ ಗಾಡಿಯನ್ನು ಒಂದಷ್ಟು ಬೈಕುಗಳು ಹಿಂಬಾಲಿಸಿವೆ

****

ಸತ್ತವನನ್ನು ಮಣ್ಣು ಮಾಡುತ್ತಿಲ್ಲ, ಕಾರಣ ಯಾವ ಭೂಮಿಯಿಲ್ಲ. ಸುಡುವುದೆಂದು ನಿರ್ಧರಿಸಲಾಗಿತ್ತು, ಅದಕ್ಕೂ ದುಡ್ಡಿನ ಕೊರೆತೆಯಾಗಿ, ಕೊನೆಗೆ ಕರೆಂಟಿ ಗೆ ಕೊಟ್ಟುಬಿಡುವುದೇ ಒಳ್ಳೆಯದು ಮತ್ತು ಸೂಕ್ತ ಎಂದು ಬೆರಳಣಿಕೆಯ ಹಿರಿ ತಲೆಗಳು ನಿರ್ಧರಿಸಿದವು, ಅದಕ್ಕೆ ಕಿರಿ ತಲೆಗಳು ಅಲ್ಲಾಡಿಸಿದ್ದವು. ಹೆಣ ಹೊತ್ತ ಗಾಡಿ ಸುಮ್ಮಾನಹಳ್ಳಿಯ ವಿದ್ಯುತ್ ಚಿತಾಗಾರಾದತ್ತ ಹೊರಟಿತ್ತು, ಹೆಣದ ಸುತ್ತ ಜನ, ಸತ್ತವನ ಹೆಂಡತಿಯ ಕಣ್ಣಲ್ಲಿ ಎಂದು ಕಾಣದ ಶೂನ್ಯ, ಮಗಳ ಕಣ್ಣಲ್ಲಿ ಕಣ್ಣೀರು, ಮಗ ಮೌನ. ಗಾಡಿಯ ಡೋರಿನಲ್ಲಿ ಕೂತವರು ಚಿಲ್ರೆ ದುಡ್ಡನ್ನು ಕಡ್ಲೆಪುರಿಯನ್ನು ಜೊತೆಗೆ ಹೂ ಸೇರಿಸಿ ರೋಡಿಗೆ ಎಸೆಯುತ್ತಿದ್ದರು, ಅದು ಖಾಲಿ ಆಗಿ ಸುಮ್ಮನೆ ಕೂತಿದ್ದರು. ಹೆಣದ ಗಾಡಿ ಕೊನೆಗೂ ಚಿತಾಗಾರ ತಲುಪಿತ್ತು.

ಆಶ್ಚರ್ಯಕ್ಕೆ, ಸತ್ತವನ ಮೊದಲನೆಯ ತಮ್ಮ ಅಲ್ಲಿಗೆ ಬಂದಿದ್ದ, ಕುಡಿದಿದ್ದ, ಅವನ ಕಣ್ಣು ಕೆಂಪಾಗಿದ್ದವು, ಸ್ವಲ್ಪ ತೂರಾಡುತ್ತಿದ್ದಂತೆ ಕಾಣುತ್ತಿತ್ತು. ಅವನು ಅಣ್ಣನನ್ನು ನೋಡಲು ಬಂದು ಸುಮಾರು ಹತ್ತು ಹನ್ನೆರಡು ವರ್ಷಗಳಾಗಿತ್ತು, ಹನ್ನೆರಡು ವರುಷಗಳ ಹಿಂದೆ, ಅಪ್ಪನ ಪಕ್ಷದಲ್ಲಿ ಹೀಗೆ ಕುಡಿದು ಮಾತಿಗೆ ಮಾತು ಬೆಳೆದು ಮೊದಲನೆಯ ತಮ್ಮ ಅಲ್ಲೇ ಉರಿಯುತ್ತಿದ್ದ ಸೌದೆಯಿಂದ ಸತ್ತವನ ತೊಡೆಗೆ ಬಾರಿಸಿದ್ದ, ಜೋರು ಗಲಾಟೆ ಅದು, ಅವತ್ತು ಹಾಗೆ ಕುಡಿದು ತೂರಾಡಿ ನೀನು ಸತ್ರೂ ನಾನು ಬರೋಲ್ಲ ಎಂದು ಹೋದವನು, ಸತ್ತ ಮೇಲೆ ಕುಡಿದು ಬಂದಿದ್ದ, ಸತ್ತವನ ಹೆಂಡತಿ ಅವನನ್ನು ನೋಡಿ ಕೈಯನ್ನು ಮೇಲೆ ಮಾಡಿ ನಿಮ್ಮಣ್ಣ ಹೋದ ಎಂದು ಭಾಷೆಯ ಹಂಗಿಲ್ಲದೆ ಹೇಳಿದಳು, ಅವನು ಬಿಕ್ಕಳಿಸಿ ಅತ್ತ.

ಚಿತಾಗಾರದಲ್ಲಿ ನಾಲ್ಕೈದು ಹೆಣಗಳು ಬಂದಿದ್ದವು, ಇವರದು ಮೂರನೇ ಸರದಿ, ಹೆಣವನ್ನು ನೆಲದಲ್ಲಿ ಇಟ್ಟು, ಕಾದು ಕೂತರು, ಮತ್ತೆ ಎಲ್ಲರೂ ಮೊಬೈಲು ಗಳಲ್ಲಿ ಮುಳುಗಿದರು, ಒಂದನೆಯ ಹೆಣ , ಎರಡನೆಯ ಹೆಣ ಸುಡಾಲಾಯ್ತು, ಇವರನ್ನ ಕರೆದರು, ಅಲ್ಲಲ್ಲಿ ಹೋದವರೆಲ್ಲ ಮತ್ತೆ ಹೆಣದ ಬಳಿ ಬಂದರು, ಸತ್ತವನ ತುಂಬಾ ಹಚ್ಚಿಕೊಂಡ ತಮ್ಮನು ಜೊತೆಗೆ ಒಂದು ಕೋಳಿ ಕೂಡ ಹಿಡಿದಿದ್ದ ಅಲ್ಲಿ ಬೆಂಕಿಗೆ ನೂಕುವವನಿಗೆ ನೂರು ರೂಪಾಯಿಯ ಎರಡು ನೋಟು ನೂಕಿ ಕೋಳಿ ಜೊತೆಗೆ ಕಳಿಸಲು ಹೇಳಿದ, ನೋಟು ಅವಸರವಾಗಿ ಜೇಬಿಗೆ ಬಿಟ್ಟು ಸರಿ ಎಂದ, ಕೊನೆಗೂ ಹೆಣವನ್ನು ಬೆಂಕಿಗೆ ನೂಕಿ ಅದರ ಡೋರು ಮುಚ್ಚಿದ್ದಾಗ ಧಡಾರ್ ಎಂದು ಸದ್ದು ಬಂತು.

ಅಲ್ಲಿವರೆಗೂ ಸುಮ್ಮನಿದ್ದ ಕೊನೆಯ ತಮ್ಮನಿಗೆ ಎಲ್ಲ ನೆನಪುಗಳು ಉಕ್ಕಿಬಂದು ಕಣ್ಣೀರು ನುಗ್ಗಿ ಬಂತು.

***

ಇತ್ತ ಸತ್ತವನ ಮನೆ ಶಾಂತವಾಗಿದೆ.

ಜಯರಾಮಚಾರಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x