ಬದುಕಿನ ಗೆಲುವಿಗೆ ಹೊಸ ದಿಕ್ಕು ತೋರಿಸುವ ಮಧುಕರ್‌ ಬಳ್ಕೂರ್‌ ಅವರ ’ಆಸೆಗಳು ಕನಸಾಗಿ ಬದಲಾಗಲಿ’: ರಾಘವೇಂದ್ರ ಅಡಿಗ ಎಚ್ಚೆನ್

’ಆಸೆಗಳು ಕನಸಾಗಿ ಬದಲಾಗಲಿ’ ಎಂತಹಾ ಅದ್ಭುತ ಮಾತು! ಮಾನವನ ಆಸೆಗಳಿಗೆ ಕೊನೆ ಮೊದಲಿರುವುದಿಲ್ಲ. ಆದರೆ ಅದೇ ಆಸೆ ಕನಸುಗಳಾಗಿ ಬದಲಾಗುವುದು ಎನ್ನುವ ಹಾಗಿದ್ದರೆ ಅದೆಷ್ಟು ಚೆನ್ನ? ಇಷ್ಟಕ್ಕೂ ಇಲ್ಲಿ ಇದನ್ನು ಹೇಳುತ್ತಿರುವುದಕ್ಕೆ ಕಾರಣವಿದೆ. ಉದಯೋನ್ಮುಖ ಲೇಖಕ ಮಧುಕರ್ ಬಳ್ಕೂರು ಅವರ ಚೊಚ್ಚಲ ಕೃತಿಯ ಹೆಸರು ’ಆಸೆಗಳು ಕನಸಾಗಿ ಬದಲಾಗಲಿ’ ಈ ಪುಸ್ತಕ ಸಹ ಶೀರ್ಷಿಕೆಯಷ್ಟೇ ಸುಂದರವಾಗಿದೆ.

ಮೂಲತಃ ಉಡುಪಿಯ ಕುಂದಾಪುರದ ಬಳ್ಕೂರು ಗ್ರಾಮದವರಾದ ಮಧುಕರ್ ವಿದ್ಯಾಭ್ಯಾಸ, ವೃತ್ತಿ ಸಂಬಂಧ ನಾನಾ ಊರುಗಳಲ್ಲಿದ್ದು ಅನುಭವ ಹೊಂದಿದವರು. ಕಳೆದ ಆರೇಳು ವರ್ಷಗಳಿಂದ ರಾಜ್ಯದ ವಿವಿಧ ಪತ್ರಿಕೆ, ನಿಯತಕಾಲಿಕಗಳಲ್ಲಿ ಅವರ ಲೇಖನಗಳು ಪ್ರಕಟವಾಗಿದ್ದು ಹೀಗೆ ಪ್ರಕಟವಾದ ಆಯ್ದ ಪ್ರಮುಖ ಲೇಖನಗಳನ್ನು ಒಟ್ಟುಗೂಡಿಸಿ ’ಆಸೆಗಳು ಕನಸಾಗಿ ಬದಲಾಗಲಿ’ ಎನ್ನುವ ಪುಸ್ತಕವನ್ನು ಹೊರತಂದಿದ್ದಾರೆ.

ವ್ಯಕ್ತಿತ್ವ ವಿಕಸನ ಅಥವಾ ಪರ್ಸನಾಲಿಟಿ ಡೆವಲಪ್‌ಮೆಂಟ್ ಎಂಬುದು ಇಂದಿನ ಯುವಜನತೆ ಇಷ್ಟಪಡುವ ಪ್ರಮುಖ ವಿಷಯಗಳಲ್ಲಿ ಒಂದು. ಇದನ್ನು ಸಧ್ಯ ಚಾಲ್ತಿಯಲ್ಲಿರುವ ಪ್ರಮುಖ ಟ್ರೆಂಡಿಂಗ್ ವಿಷಯವೆಂದರೂ ತಪ್ಪಲ್ಲ. ಅಂತಹ ವ್ಯಕ್ತಿತ್ವ ವಿಕಸನ ವಿಷಯಕ್ಕೆ ಸಂಬಂಧಿ ವಿವಿಧ ವಿಚಾರಗಳನ್ನು ಹೊಂದಿರುವ 32 ಲೇಖನಗಳು ಈ ಪುಸ್ತಕದಲ್ಲಿವೆ. ಆದರೆ ಆ ಒಂದೊಂದು ಲೇಖನವೂ ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ಜೀವನವನ್ನು ಯಾವ ಯಾವ ದೃಷ್ಟಿಕೋನದಿಂದ ನೋಡಿದಾಗ ಹೇಗೆಲ್ಲಾ ಕಾಣಬಲ್ಲುದು ಎನ್ನುವುದನ್ನು ಇಲ್ಲಿನ ಲೇಖನಗಳಲ್ಲಿ ಲೇಖಕರು ಸ್ವಾರಸ್ಯಕರವಾಗಿ, ಅಷ್ಟೇ ಸರಳವಾಗಿ ವಿವರಿಸಿದ್ದಾರೆ. ’ಗೆಲುವಿಗೆ ನಾವು ಬೇರೆ ದಾರಿ ಹುಡುಕಬೇಕಾಗಿಲ್ಲ. ನಮ್ಮೊಳಗೆ ನಮಗೇ ಗೊತ್ತಿಲ್ಲದೆ ಇರುವ ದಾರಿಗಳನ್ನೇ ಹುಡುಕಿಕೊಳ್ಳುವ ಸಮಯ ಈಗ ಬಂದಿದೆ’ ಎನ್ನುವ ಪುಸ್ತಕದ ಮುಖಪುಟದಲ್ಲಿರುವ ಸಾಲುಗಳು ಪುಸ್ತಕದ ಒಳಪುಟಗಳು ಏನನ್ನು ಹೇಳುತ್ತಿದೆ ಎನ್ನುವುದನ್ನು ತಿಳಿಸುತ್ತದೆ.

ಮೊದಲಿಗೆ ಪುಸ್ತಕದಲ್ಲಿನ ಕೆಲ ಲೇಖನಗಳನ್ನು ಬಿಡಿ ಬಿಡಿಯಾಗಿ ನೋಡುವುದಾದರೆ ಪುಸ್ತಕದ ಮೊದಲ ಲೇಖನ ’ಆಸೆಗಳು ಕನಸಾಗಿ ಬದಲಾಗಲಿ’ ಯಲ್ಲಿ ಲೇಖಕ ನಮ್ಮ ಆಸೆಗೂ ಕನಸಿಗೂ ಇರುವ ವ್ಯತ್ಯಾಸವನ್ನು ವಿವರಿಸುತ್ತಾರೆ. ಜೊತೆಗೆ ಕನಸುಗಳು ಆಸೆಗಳಿಗಿಂತ ಹೇಗೆ ಶ್ರೇಷ್ಠವಾದದ್ದೆನ್ನುವುದನ್ನು ಹೇಳಿದ್ದಾರೆ. “ಆಸೆಗಳನ್ನು ದುಡ್ಡು ಕೊಟ್ಟು ಕೊಳ್ಳಬಹುದು ಹಾಗೇ ಮಾರಿಕೊಳ್ಳಬಹುದು, ಆದರೆ ಯಾವ ಕನಸನ್ನೂ ದುಡ್ಡಿನಿಂದ ಖರೀದಿಸಲಾಗುವುದಿಲ್ಲ ಹಾಗೂ ಮಾರಿಕೊಳ್ಳಲು ಬರುವುದಿಲ್ಲ” ಎಂಬ ಲೇಖಕರ ಮಾತು ಆಸೆಗಳ ಕ್ಷಣಿಕತೆ ಹಾಗೂ ಕನಸುಗಳ ಮಹತ್ವವನ್ನು ಸಾರುತ್ತದೆ.

ಇನ್ನು ಇಮೇಜ್‌ಗಳ ಬಗ್ಗೆ, ಸೋಲು, ಗೆಲುವುಗಳ ಬಗ್ಗೆ, ಹಿರಿಯರ ಹಾರೈಕೆಗಳ ಬಗ್ಗೆ, ಒಳ್ಳೆತನವೇ ದೌರ್ಬಲ್ಯವಾಗುವ ಬಗ್ಗೆ ನಾನಾ ದೃಷ್ಟಿಕೋನಗಳಿಂದ ವಿವರಿಸಿದ ಲೇಖನಗಳು ಈ ಪುಸ್ತಕದಲ್ಲಿವೆ.

ಇದಲ್ಲದೆ ‘ಟಿ ಟ್ವೆಂಟಿ ವೇಗಕ್ಕೆ ಸಾಯದಿರಲಿ ಕನಸು’, ‘ಕ್ರಿಕೆಟ್ಟು ನಮ್ಮ ಬದುಕಿಗೆ ಹೇಳಿ ಕೊಡಲಿದೆ ಸಾಕಷ್ಟು’ ಎನ್ನುವ ಲೇಖನಗಳಲ್ಲಿ ಜೀವನವನ್ನು ಕ್ರಿಕೆಟ್ ಆಟದೊಡನೆ ಹೋಲಿಸಿರುವುದು ವಿಶೇಷ. ಕ್ರಿಕೆಟ್ಟಿನಲ್ಲಿ ಹೇಗೆ ಸೋಲು ಗೆಲುವುಗಳಿರುತ್ತದೆಯೋ ಹಾಗೇ ಜೀವನದಲ್ಲಿಯೂ ಸೋಲು ಗೆಲುವುಗಳಿರುತ್ತವೆ, ಅದನ್ನು ನಾವು ಕ್ರಿಕೆಟ್ಟಿನ ಸೋಲು ಗೆಲುವಿನಂತೇ ಸಾಮಾನ್ಯವಾಗಿ ಸ್ವೀಕರಿಸಬೇಕು ಎಂದು ಹೇಳಿರುವ ಲೇಖಕರು ಇದು ಕ್ರಿಕೆಟ್ಟಿನಿಂದ ನಾವು ಕಲಿಯಬೇಕಾಗಿರುವ ಆಶಾವಾದದ ಪಾಠ ಎಂದಿದ್ದಾರೆ.

‘ಐ ಡೋಂಟ್ ಕೇರ್ ಎನ್ನುವ ಮೊದಲು…’ ಎನ್ನುವ ಲೇಖನದಲ್ಲಿ ಹಾಗೆನ್ನುವವರ ಮನದಾಳದಲ್ಲಿರುವ ತಮ್ಮನ್ನು ಅರ್ಥ ಮಾಡಿಕೊಳ್ಳದವರ” ಬಗೆಗಿನ ನಿರಾಶೆಯ ಕುರಿತಂತೆ ಲೇಖಕರು ಆಪ್ತ ಮಾತುಗಳನ್ನಾಡಿದ್ದಾರೆ.

‘ನೀವು ನಿಮ್ಮ ಮೊಬೈಲ್ ಬಿಟ್ಟು ಇರಬಲ್ಲಿರಾ?‘ ಎಂಬ ಲೇಖನದಲ್ಲಿ ಬರಹಗಾರ ಇಂದು ನಾವೆಷ್ಟು ಮೊಬೈಲಿಗೆ ಅಡಿಯಾಳಾಗಿದ್ದೇವೆ, ಸ್ಮಾರ್ಟ್ ಫೋನ್ ಗೆ ನಾವೆಷ್ಟು ಒಗ್ಗಿ ಹೋಗಿದ್ದೇವೆ, ಆ ಮೂಲಕ ನಮ್ಮ ನೆಮ್ಮದಿಯನ್ನು ಹೇಗೆ ಕೆಡಿಸಿಕೊಂಡಿದ್ದೇವೆ ಎಂದು ವಿವರಿಸಿದ್ದಾರೆ.

ಇನ್ನು ‘ಬದುಕಲ್ಲಿ ಸ್ಪಷ್ಟತೆ ಇರಲಿ, ಉತ್ತರದಲ್ಲೂ,’ ‘ನಿಮ್ಮ ಗುರಿ, ನಿರೀಕ್ಷೆ ಎರಡೂ ಒಂದೇನಾ?’ ’ನಂಬಿಕೆ ಅಂದ್ರೆ ನಂಬಿಕೆ ಅಷ್ಟೇ’ ಎಂಬ ಲೇಖನಗಳೂ ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು ವಿಚಾರಪೂರ್ಣವಾಗಿದೆ.

ಇಷ್ಟೆಲ್ಲಾ ಹೇಳಿದ ಮೇಲೆ ಈ ಪುಸ್ತಕ ಮಧುಕರ್ ಬಳ್ಕೂರು ಅವರ ಚೊಚ್ಚಲ ಕೃತಿ ಎನ್ನುವುದನ್ನು ಗಮನಿಸಲೇಬೇಕು. ಒಬ್ಬ ಲೇಖಕ ತನ್ನ ಚೊಚ್ಚಲ ಕೃತಿಯಲ್ಲಿ ಏನೆಲ್ಲಾ ವಿಷಯಗಳನ್ನು ಹೇಗೆಲ್ಲಾ ಪ್ರಸ್ತುತಪಡಿಸಬಹುದು? ಎಂಬ ಕುತೂಹಲದಿಂದ ನೀವೇನಾದರೂ ಈ ಪುಸ್ತಕ ಓದಲು ಮುಂದಾದರೆ ನಿಮಗೆ ಖಂಡಿತಾ ನಿರಾಶೆಯಾಗುವುದಿಲ್ಲ. ಏಕೆಂದರೆ ಈ ಕೃತಿಯಲ್ಲಿರುವ ಲೇಖನಗಳನ್ನು ಓದಿದಾಗ ನಿಮಗೆ ಇದು ಹೊಸಬರ ಬರಹ ಎಂಬಂತೆ ಕಾಣಿಸುವುದೇ ಇಲ್ಲ. ಬದಲಿಗೆ ಪ್ರತಿಯೊಂದು ಲೇಖನದಲ್ಲಿಯೂ ಗಂಭೀರ ವಿಚಾರಗಳಿದ್ದು ಬರಹದ ಭಾಷೆ ಹಾಗೂ ಶೈಲಿ ಸಹ ಯಾವುದೇ ವಯೋಮಾನದವರೂ ಓದಿ ಅರ್ಥ ಮಾಡಿಕೊಳ್ಳಬಹುದಾದಷ್ಟು ಆಪ್ತ ಹಾಗೂ ಸರಳವಾಗಿದೆ.

ಇದನ್ನೇ ಲೇಖಕರು ತಮ್ಮ ಮಾತುಗಳಲ್ಲಿ “ಸಣ್ಣ ಸಣ್ಣ ಸಾಮಾನ್ಯವೆನ್ನಿಸುವ ವಿಚಾರಗಳೆಲ್ಲಾ ಈ ಪುಸ್ತಕದ ಲೇಖನದಲ್ಲಿ ಮುಖ್ಯವಾದ ಸಂಗತಿ ಎನಿಸುತ್ತದೆ…… ಈ ನಿಟ್ಟಿನಲ್ಲಿ ಈ ಪುಸ್ತಕ ಎಲ್ಲಾ ವರ್ಗದವರಿಗೂ ಎಲ್ಲಾ ವಯೋಮಾನದವರಿಗೂ ತಾಕುತ್ತದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಾರೆಯಾಗಿ ಆವಿ ಗ್ರಾಮೀಣ ಮತ್ತು ನಗರಾಭಿವೃದ್ದಿ ಸಂಸ್ಥೆ ಮೂಲಕ ಹೊರಬಂದಿರುವ ಮಧುಕರ್ ಬಳ್ಕೂರು ಅವರ ಈ ಕೃತಿ ಬದುಕಿನಲ್ಲಿ ಸೋತೆವೆಂದುಕೊಂಡವರಿಗೆ ಒಂದೇ ಒಂದು ಗೆಲುವಿಗಾಗಿ ಹಂಬಲಿಸುವವರಿಗೆ ಸ್ಫೂರ್ತಿ, ಭರವಸೆಗಳನ್ನು ನೀಡಬಲ್ಲ ಪುಸ್ತಕವಾಗಿದೆ.

ರಾಘವೇಂದ್ರ ಅಡಿಗ ಎಚ್ಚೆನ್.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x