”ನನ್ನಲ್ಲಿ ಕೇಳದೆ ನೀವು ಅದು ಹ್ಯಾಗೆ ಬರಲು ಹೇಳಿದ್ರಿ? ನನಗೆ ಒಪ್ಪಿಗೆ ಇಲ್ಲ. ಜುಜುಬಿ ಇಂಜನಿಯರು ಆತ. ಬೇಡವೇ ಬೇಡ. ಹೈಲಿ ಕ್ವಾಲಿಫೈಡ್ ಆದವರು ನಿಮ್ಮ ಕಣ್ಣಿಗೆ ಬೀಳುವುದೇ ಇಲ್ವಾ? ಬಿ. ಇ. ಮುಗಿಸಿದವನನ್ನು ನಾನು ಒಪ್ತೇನೆ ಎಂದು ಹೇಗೆ ಅಂದ್ಕೊಂಡ್ರಿ?ಹೋಗಲಿ, ಎಂ. ಟೆಕ್ ಆದ್ರೂ ಒಪ್ಪಬಹುದು. ಡಾಕ್ಟರು, ಅದರಲ್ಲೂ ಎಂ. ಡಿ. ಆದ ಡಾಕ್ಟರ್ಸ್, ಅಮೆರಿಕಾದಲ್ಲೇ ಕೆಲಸ ಮಾಡ್ತಿರುವ ಇಂಜನಿಯರ್ಸ್ ಅಂಥವರ ಸಂಬಂಧ ಬೇಡಾ ಅಂತ ನಾನು ಹೇಳಲ್ಲ. ನಿಮ್ಮ ಹಳೆ ಸ್ನೇಹಿತನ ಮಗ ಬೇಡವೇ ಬೇಡ. ನಾನು ಇನ್ನು ಆರು ತಿಂಗಳಿನಲ್ಲಿಇಂಜನಿಯರ್ ಆಗುವವಳು. ವಿದೇಶದಲ್ಲಿ ಕೆಲಸ ಮಾಡುವ ಅವಕಾಶ ಬಂದೇಬರುತ್ತದೆ. ನಾನು ಹೋಗುವವಳೇ. ಅಂಥಾದ್ದರಲ್ಲಿ ಜನ್ಮ ಪೂರ್ತಿ ಈ ಊರಿಗೇ ಜೋತು ಬಿದ್ದಿರು ಅಂತೀರಲ್ವಾ? ಸಾಧ್ಯವೇ ಇಲ್ಲ. ”
ಮೈನಾಳ ಅಬ್ಬರಕ್ಕೆ ಪೆಚ್ಚಾದರು ಶ್ರೀನಿವಾಸ. ಮಹಾ ನಿಷ್ಟುರವಾದಿ ಮಗಳು. ಹೆತ್ತ ತಾಯ್ತಂದೆ, ಒಡಹುಟ್ಟಿದ ತಂಗಿಯರು ಅನ್ನುವ ಮುಲಾಜು ಇಲ್ಲ. ಕೇವಲ ತನ್ನದು ಮಾತ್ರಾ. ಇವಳ ಹಿಂದೆಯೇ ಇನ್ನಿಬ್ಬರಿದ್ದಾರೆ ಹೆಣ್ಣುಮಕ್ಕಳು. ಏನಾಗಿದೆ ಗೆಳೆಯ ಗಜಾನನನ ಸಂಬಂಧಕ್ಕೆ. ಮುನ್ನಾ ದಿನ ಅಕಸ್ಮಾತ್ ಆಗಿ ಸಿಕ್ಕಿದ್ದ. ಅದೆಷ್ಟು ಕಾಲದ ನಂತರದ ಭೇಟಿ. ಪ್ರಾಥಮಿಕ ಶಾಲೆಗೆ ಅತ್ತೆಯ ಮನೆಯಲ್ಲಿ ಅಪ್ಪ ತನ್ನನ್ನು ಬಿಟ್ಟಾಗ ನೆರೆಮನೆಯ ಗಜಾನನ ಅದೇ ಶಾಲೆಯ ಹೈಸ್ಕೂಲು ವಿದ್ಯಾರ್ಥಿ. ಅತ್ತೆ ಅವನ ಜೊತೆಯಲ್ಲಿ ಕಳಿಸುತ್ತಿದ್ದರು. ಪ್ರೀತಿಯಿಂದ ತಾನೇ ಸ್ಕೂಲ್ ಬ್ಯಾಗ್ ಎತ್ತಿಕೊಂಡು ಕೈ ಹಿಡಿದು ಕರೆದೊಯ್ಯುತ್ತಿದ್ದ ಸಹೃದಯಿ. ಮೂರ್ನಾಲ್ಕು ವರ್ಷಗಳ ನಂತರ ಕಾಲೇಜಿಗಾಗಿ ಮಂಗಳೂರು ಸೇರಿದ್ದ ಗಜಾನನ. ಮತ್ತೊಂದಿಷ್ಟು ಸಮಯ ಪತ್ರ ವ್ಯವಹಾರ ಇದ್ದಿತ್ತು. ಆಮೇಲಾಮೇಲೆ ಕಾಣಲೇ ಇಲ್ಲ. ನೆನಪಿನಂಗಳದಲ್ಲಿ ಮಾತ್ರಾ ಭದ್ರವಾಗಿದ್ದ ಅವನು. ಇಂದಿಗೂ ಅದೇ ರೂಪ, ತಿಳಿಮನಸ್ಸು. ಆರ್ಥಿಕವಾಗಿ ಸಾಕಷ್ಟು ಗಟ್ಟಿ. ಮಗನಾದರೇನು ಮತ್ತೆ? ಅದೇ ರೂಪ, ನಿಲುವು. ಅದೇ ಸಹೃದಯತೆ. ಅವನು ಕೇಳಿದ್ದ.
“ನಾಡಿದ್ದು ಒಂದು ಕನ್ಯೆ ನೋಡಲಿದೆ. ಹಾಗೇ ಈ ಊರಿಗೆ ಬಂದವರು ನಾವು. ಇವನಿಲ್ಲಿಗೆ ಟ್ರಾನ್ಸ್ ಫರ್ ಆಗಿ ಆರು ತಿಂಗಳಾಯ್ತು. ನಿನಗೆ ಮಗಳೇನಾದರೂ ಇದ್ದರೆ ಹೇಳಿಬಿಡು. ಅವಳನ್ನೇ ತಂದುಕೊಳ್ತೇವೆ. ಆಗ ನಮ್ಮ ಸ್ನೇಹ, ಸಂಬಂಧವಾಗಿ ಬಿಗಿಯಾಗುತ್ತದೆ. ” ಅಂತ ನಕ್ಕಿದ್ದ. ಆಗ ಆಗಿದ್ದ ಹಿಗ್ಗಿಗೆ ಮಿತಿಯೇ ಇರಲಿಲ್ಲ. ಇದೀಗ ನೋಡಿದರೆ ಮೈನಾ ಜಗಮೊಂಡು. ಕೊನೇಪಕ್ಷ ಅವರೆಲ್ಲ ಬರುವಾಗ ಮನೆಯಲ್ಲಿ ಇರಲೂ ಒಪ್ಪಿಲ್ಲ ಅವಳು. ಸಪ್ಪಗಾಗಿತ್ತು ಶ್ರೀನಿವಾಸರಿಗೆ. ಪತ್ನಿ ಮೀನಾಗೂ ನಿರಾಶೆ. ಆದರೂ ಅವರು ಕೊನೆಯದಾಗಿ ಮಗಳಿಗೆ ಅನುನಯಿಸಿದರು.
” ಮೈನಾ, ಅಪ್ಪ ಅವರಿಗೆ ಮಾತೇನೂ ಕೊಟ್ಟಿಲ್ಲ. ಮುಖ್ಯ ತೀರ್ಮಾನ ನಿನ್ನದೇ. ಅದೇನೇ ಅಸಮಧಾನ ಇದ್ದರೂ ಅವರೆಲ್ಲ ಬರುವ ಹೊತ್ತಿಗೆ ಮನೆಯಲ್ಲಿರು. ಜೊತೆಯಾಗಿ ಕೂತು ನಾಲ್ಕು ಮಾತಾಡೋಣ. ಅವರೆದುರಿಗೆ ನಮ್ಮ ಅಸಮಧಾನದ ಪ್ರದರ್ಶನ ಬೇಡ. . ಬರುವವರಿಗೆ ಮತ್ತು ನಿನ್ನಪ್ಪನಿಗೆ ಅವಮಾನವಾಗಬಾರದು. ನಮ್ಮದೇನಿದ್ದರೂ ಆಮೇಲೆ ಬಗೆಹರಿಸೋಣಂತೆ. ಇಂದು ಮನೆಯಲ್ಲಿರು”
ಮನಸ್ಸಿಲ್ಲದ ಮನಸ್ಸಿಂದ ಒಪ್ಪಿದಳು ಮೈನಾ.
ಲೀನಾ ಮತ್ತು ಶೈನಾ ಸೇರಿ ಮನೆಯನ್ನು ಓರಣವಾಗಿರಿಸಿದರು. ಅವರು ಅಕ್ಕ ಮೈನಾಳಷ್ಟು ಗಡುಸಲ್ಲ. ಮೃದು ಮನದ ಹುಡುಗಿಯರು. ಲೀನಾ ಕೊನೆಯ ವರ್ಷದ ಬಿ. ಎಸ್ಸಿ. ಆದರೆ ಶೈನಾ ಹತ್ತನೆಯ ತರಗತಿ. ಮೈನಾ ಉಂಡ, ತಿಂದ ತಟ್ಟೆಯನ್ನು ಬಿಟ್ಟು ಎದ್ದರೆ ಲೀನಾ ಸದ್ದಿಲ್ಲದೆ ತೆಗೆದು ತೊಳೆದಿಡುವ ಹುಡುಗಿ ಲೀನಾ. ಮೈನಾ ಗದರಿದರೆ, ಹೀಯಾಳಿಸಿದರೆ ತೆಪ್ಪಗಿರುವುದೇ ಜಾಸ್ತಿ. ಮನೆಯಲ್ಲಿ ಬೆಳಗ್ಗೆ ಬೆಳಗ್ಗೆ ಆದ ಘರ್ಷಣೆ ಕೇಳಿ ಅವರಿಗೂ ಬೇಸರವಾಯಿತು. ಅಭಿಪ್ರಾಯ ಅದೇನೇ ಇದ್ದರೂ ಬರುವ ಅತಿಥಿಗಳನ್ನು ಆದರಿಸಿ ಕಳಿಸುವುದಕ್ಕೆ ಏನಾಗಬೇಕು. ಅಮ್ಮ ಹೇಳಿದ ಸಣ್ಣಪುಟ್ಟ ಕೆಲಸ ಮಾಡಿಕೊಟ್ಟು ಊಟವಾದ ನಂತರ ಲೀನಾ ಮೆತ್ತಗೆ ಅಮ್ಮನ ಬಳಿ ಸಾರಿದಳು.
”ಅಮ್ಮಾ, ನಾನು ಸಂಗೀತದ ಕ್ಲಾಸಿಗೆ ಹೋಗಲಾ?”
ಶಾಸ್ತ್ರೀಯ ಸಂಗೀತದ ವಿದ್ಯಾರ್ಥಿನಿ ಅವಳು. ಅವಳಿಷ್ಟದ ಕ್ಷೇತ್ರ ಅದು. ಮಧುರವಾಗಿ ಹಾಡುವ ಇಂಪಿನ ದನಿ.
” ಇಂದು ಬೇಡಮ್ಮ. ಮೈನಾ ಸ್ವಭಾವ ಅದು ಹ್ಯಾಗೆ ತಿರುಗೀತು ಅಂತ ಹೇಳಕ್ಕಾಗುವುದಿಲ್ಲ. ನನಗೇನಾದರೂ ನೆರವಾಗಬೇಕಾದರೆ ನೀನಿರು. ಬಂದವರಿಗೆ ಮನೆಯವರೆಲ್ಲರನ್ನೂ ನೋಡುವ ಹಂಬಲವಿದೆ. ”
ಅಮ್ಮನಿಗಿಷ್ಟು ನೆರವಾಗಿ ಲೀನಾ ತನ್ನ ಕೋಣೆಯಲ್ಲಿ ಕೂತು ಗುನುಗುನಿಸುತ್ತಿದ್ದಳು. ”
ಲೀನಾ, ಮೈನಾ ಎಲ್ಲೇ? ಕಾಣ್ತಾ ಇಲ್ಲ?”
” ರಂಜನಿ ಮನೆಗೆ ಹೋಗಬೇಕು ಅಂತ ಹೋದ್ಲು”
” ಹೋದ್ಲಾ ಅಲ್ಲಿಗೆ? ಮನೇಲಿರು ಅಂದಿದ್ದೆ”
” ನಾ ಕೇಳಿದ್ದಕ್ಕೆ ಬೇಗ ಬರ್ತೀನಿ ಅಂದಳು”
” ಸ್ಸರಿ. ಅವಳಿನ್ನು ಬಂದ ಹಾಗೇ” ಸಪ್ಪಗಾದರು ಅವರು. ಪತಿಗೆ ತಿಳಿದರೆ ಅದೆಷ್ಟು ನೋಯುತ್ತಾರೆ. ಹೀಗೇಕೆ?
” ಲೀನಾ, ಅವಳನ್ನು ಬರಹೇಳಮ್ಮ. ಚೆನ್ನಾಗಿರುವುದಿಲ್ಲ ಇದು. ” ಸಪ್ಪಗಾಯ್ತು ಅವರ ಮುಖ. ಹೆತ್ತವರಿಗೆ ಮರ್ಯಾದೆ ಬರುವುದಿಲ್ಲ ಇವಳಿಂದ.
“ಮಗಳೇ, ಒಮ್ಮೆ ಹೋಗಿ ಕರೆದು ತಾ. ಲಾಸ್ಯನ ಮನೆಯಲ್ಲೇನಾದರೂ ಇದ್ದಾಳಾ ಅಂತ ನೋಡಿಯೇ ಹೋಗು”
ಅಮ್ಮನ ಬೆವರಿದ ಮೋರೆ, ಸೋತ ಭಾವ ಕಂಡ ಲೀನಾಗೆ ಅಕ್ಕನ ಮೇಲೆ ಕೋಪ ಉಕ್ಕಿತು. ಸ್ವಭಾವತ ಸೌಮ್ಯ ಗುಣದ ಹುಡುಗಿ ಅವಳು. ವರ್ಷದ ಬಿ, ಎಸ್ಸಿ. ವಿದ್ಯಾರ್ಥಿನಿ. ಇಬ್ಬರನ್ನೂ ಇಂಜನೀರಿಂಗ್ ಕಲಿಸಲಾರೆ ನಾನು ಅಂತ ಅಪ್ಪ ಕೈ ಚೆಲ್ಲಿದಾಗ ತಾನಾಗೇ ಒಪ್ಪಿ ಬಿ. ಎಸ್ಸಿ. ಗೆ ಸೇರಿದ್ದಳು. ಬಿ. ಎಡ್. ಮುಗಿಸಿ ಅಪ್ಪನ ಹೊರೆ ಸ್ವಲ್ಪ ತಗ್ಗಿಸಬೇಕು ಅನ್ನುವ ಯೋಚನೆ ಅವಳಿಗೆ. ಮೈನಾಳಿಗಿಂತ ಎರಡು ವರ್ಷಕ್ಕೆ ಸಣ್ಣವಳು. ಅಪ್ಪ ಒಬ್ಬರೇ ದುಡಿದು ಐದು ಜನರ ಸಂಸಾರ ನಡೆಸಬೇಕಾದರೆ ಇರುವ ಆರ್ಥಿಕ ಮಿತಿ ಸಾಲದು ಅನ್ನುವುದು ಬಲ್ಲ ಯುವತಿ. ಎಳೆಯ ವಯಸ್ಸಿನಿಂದಲೇ ಅಕ್ಕನ ದಬ್ಬಾಳಿಕೆ ಅವಳ ಮೇಲೆ ನಿರಂತರವಾಗಿ ಸಾಗುತ್ತಿತ್ತು. ಹೊಡೆಯುವುದು, ಗದರುವುದು, ಜಿಗುಟುವುದು, ಪರಚುವುದು, ನೂಕಿ ಬೀಳಿಸುವುದು ಮೈನಾಳಿಗೆ ಆಟ. ದನಿಯೆತ್ತಿ ಅಳುತ್ತಿದ್ದ ಎರಡನೆಯ ಮಗಳ ನೋವು ಕಂಡ ಅಪ್ಪ ಅದೆಷ್ಟೋ ಬಾರಿ ತಿದ್ದಿ ಬುದ್ಧಿ ಹೇಳಿದ್ದುಂಟು. ಶೈನಾ ಹಾಗಲ್ಲ. ಅಕ್ಕ ಒಂದೆರಡು ಬಾರಿ ಚಿವುಟಿ, ಹೊಡೆದು, ಬೀಳಿಸಿದಾಗ ತಾನೂ ತಿರುಗಿ ಬಿದ್ದು ಜಿಗುಟುವ ಹುಡುಗಿ. ಒಂದೇಟು ಬಿದ್ದರೆ ತಿರುಗಿ ಎರಡೇಟು ಹಾಕುವ ಬಾಲೆ. ಅದರಿಂದಾಗಿ ಮೈನಾ ಅವಳ ತಂಟೆಗೆ ಹೋಗುತ್ತ ಇರಲಿಲ್ಲ. ದೊಡ್ಡವಳಾದ ಮೇಲೆ ಲೀನಾ ಅಕ್ಕ ಗದರುವ ಮುನ್ನವೇ ಅವಳ ಕೆಲಸ ಮಾಡಿ ಕೊಡುತ್ತಿದ್ದಳು. ಇಂದು ಮಾತ್ರ ಅವಳಿಗೆ ವಿಪರೀತ ನೋವಾಯಿತು. ಅಕ್ಕ ಮಾಡಿದ್ದು ತಪ್ಪಲ್ವಾ? ಅಮ್ಮ, ಅಪ್ಪ ಅಷ್ಟೆಲ್ಲ ಹೇಳಿದ ಮೇಲೂ ಇವತ್ತು ಎದ್ದು ಹೋಗಿದ್ದು ಅವರಿಗೆ ಅಪಮಾನ, ಮಗಳಾಗಿ ಅವರು ನೋಯುವಂತೆ ಯಾಕೆ ಮಾಡ್ತಾಳೆ ಇವಳು. ಲಾಸ್ಯ ಆಗಲಿ, ರಂಜನಿಯಾಗಲೀ ಸ್ವಲ್ಪಾನೂ ಸರಿ ಇಲ್ಲ. ಅವರಿಬ್ಬರು ಒಟ್ಟಾದಾಗ ತಾನು ಎದುರಾದರೆ ತನ್ನನ್ನೇ ಲೇವಡಿ ಮಾಡಿ ನಗ್ತಾರೆ. . ತೊಟ್ಟ ಚೂಡಿದಾರ್ ಕೈಯಿಂದ ಸವರಿ ಕೊಂಡು ಲಾಸ್ಯಾ ಮನೆಗೆ ನಡೆದಳು. ಅವಳ ಮನೆಯ ಹೊರಗಿದ್ದ ಕಲ್ಲುಬೆಂಚಿನಲ್ಲಿ ಕೂತು ಹರಟುತ್ತಿದ್ದ ಮೈನಾ ತಂಗಿಯ ತಲೆ ಕಂಡೊಡನೇ ಎದ್ದು ಒಳನುಗ್ಗಿದಳು.
” ಲಾಸ್ಯ, ಅಮ್ಮ ಅಕ್ಕನನ್ನು ಕರಕೊಂಡು ಬಾ ಅಂದಿದ್ದಾರೆ. ಕರೀ ಅವಳನ್ನು”
“ಅವಳು ಬರುವುದಿಲ್ಲ. ನಿಮ್ತಾಯಿ ತಂದೆ ತೋರಿಸುವ ಜುಜುಬಿಗಳನ್ನೆಲ್ಲ ಅವಳ್ಯಾಕೆ ನೋಡಬೇಕು?ಅಷ್ಟಕ್ಕೂ ಅವಳ ಒಪ್ಪಿಗೆ ಮೊದಲೇ ತೆಗೆದುಕೊಳ್ಳದೆ ಇದೆಲ್ಲ ಏರ್ಪಾಡು ಮಾಡಿದ್ದು ತಪ್ಪು. “
” ಮೈನಾ, ಬಾ, ಅಮ್ಮ ಕರಕೊಂಡು ಬರಲು ಕಳಿಸಿದ್ದಾಳೆ” ಉತ್ತರವಿಲ್ಲ.
ಪುನ ಪುನ ಕರೆದಾಗ ಕಿಟಿಕಿಯ ಹಿಂದೆ ಕಾಣಿಸಿದಳು ಅವಳು. ಮುಖ ಗಂಟಿಕ್ಕಿ
” ನಿನ್ನನ್ನು ಇಲ್ಲಿಗೆ ಬಾ ಅಂತ ಕರೆದವರು ಯಾರು ಹೋಗಿಲ್ಲಿಂದ. ಹೇಳು ಅಮ್ಮನಿಗೆ. ನಾ ಬರುವುದಿಲ್ಲ. ನನಗೆ ತಿಳಿಯದ ಹಾಗೆ ಇದೆಲ್ಲ ಬೇಕಿತ್ತಾ ಅವರಿಗೆ?ನೀ ಎಷ್ಟೇ ಗಂಟಲು ಹರಕೊಂಡರೂ ನಾನು ಬರುವುದಿಲ್ಲ. ಹೊರಡೇ ಬೇಗ. “
” ಅಕ್ಕನೇ ಉತ್ತರ ಕೊಟ್ಟಳಲ್ಲ. ಇನ್ಯಾಕೆ ನಿಂತಿದ್ದೀ?ಹೋಗು. ನಾವೀಗ ಇಲ್ಲಿಂದ ಹೊರಗೆ ಹೋಗ್ತೀವಿ. ತೊಂದರೆ ಕೊಡಬೇಡ. “
ಇನ್ನು ಎಷ್ಟೇ ಅಂಗಲಾಚಿದರೂ ಪ್ರಯೋಜನವಿಲ್ಲ. ಅದು ಲೀನಾಗೆ ಗೊತ್ತು. ಅವಳಿಗೆ ಮೈನಾಳ ಮೇಲೆ ಅತೀವ ತಿರಸ್ಕಾರ ಉಕ್ಕಿಬಂತು. ಬರುವ ಅತಿಥಿಗಳ ಎದುರು ಹೆತ್ತವರ ಮರ್ಯಾದೆ ತೆಗೆಯುವ ಇವಳು ಅದೆಂಥ ಮಗಳು! ಕಾಯುವ ಅಮ್ಮನ ನೆನಪಾಗಿ ಮನೆಯತ್ತ ವೇಗವಾಗಿ ಹೆಜ್ಜೆ ಹಾಕಿದಳು. ಹತ್ತಿರ ಬಂದಾಗ ಅಂಗಳದಲ್ಲಿ ನಿಂತ ಕಾರು ಕಾಣಿಸಿತು. ಆಗಲೇ ಬಂದಿರಬೇಕು ಹಾಗಿದ್ದರೆ!ಅಮ್ಮ, ಅಪ್ಪ ಚಡಪಡಿಸುತ್ತಿರಬಹುದು. ಛೆ. ಛೇ. ಮೆಲ್ಲನೆ ಹೆಜ್ಜೆ ಹಾಕುತ್ತ ಮನೆಯ ಒಳಗೆ ಅಡಿಯಿಟ್ಟಾಗ ಅಲ್ಲಿ ಕೂತಿದ್ದ ಅಷ್ಟೂ ಜನರ ಕಣ್ಣು ಅವಳತ್ತ ತಿರುಗಿತು. ಒಮ್ಮೆಲೇ ಅವರೆಲ್ಲ ತನ್ನ ಕಡೆ ನೋಟ ನೆಟ್ಟಾಗ ಮುಖ ಕೆಂಪೇರಿತು. ಬಿಸಿಲಿನ ಝಳಕ್ಕೆ ಸಿಕ್ಕಿದ ಮುಖ ತೊಟ್ಟ ತಿಳಿಗೆಂಪಿನ ಚೂಡಿದಾರ್ ನ ಬಣ್ಣಕ್ಕೆ ತಿರುಗಿತ್ತು. ಅದು ಅವಳಿಗೆ ವಿಶಿಷ್ಟ ಸೊಬಗನ್ನು ಕೊಟ್ಟಿತು. ಒಮ್ಮೆ ಅತಿಥಿಗಳತ್ತ ಕಣ್ನು ಹಾಯಿಸಿದವಳೇ ಸರ್ರನೆ ಒಳಕ್ಕೆ ಹೋಗಲು ತಿರುಗಿದಳು. ಅವಳನ್ನೇ ನೋಡುತ್ತಲಿದ್ದ ಹಿರಿಯ ಮುತ್ತೈದೆ ಕರೆದರು.
” ಬಾಮ್ಮ, ಇಲ್ಲೇ ಕೂತ್ಕೋ ನನ್ನ ಪಕ್ಕ” ಗಲಿಬಿಲಿಯಿಂದ ತೊದಲಿದಳು ಅವಳು.
” ನಾನು ಲೀನಾ, “
“ನಿನ್ನೇ ಕರೆದಿದ್ದು. ಬಾ ಇಲ್ಲಿ”
ತಬ್ಬಿಬ್ಬಾಗಿ ನಿಂತವಳ ನೋಟ ಅಲ್ಲಿ ಕುಳಿತಿದ್ದವರ ಮೇಲೆ ಮಿಂಚಿನಂತೆ ಹರಿಯಿತು. ನಗುಮೊಗದ ಯುವಕನ ದೃಷ್ಟಿ ಇವಳತ್ತಲೇ ಇತ್ತು. ಆಕೆ ತಾವಾಗೇ ಎದ್ದು ಬಂದು ಲೀನಾವಿನ ಕೈಹಿಡಿದು ಪಕ್ಕದಲ್ಲಿ ಕೂರಿಸಿಕೊಂಡರು.
” ಸ್ನೇಹಿತೆ ಕರೆದ್ಲು ಅಂತ ಹೋಗಿದ್ದಾಳೆ. ಇದೀಗ ಬಂದು ಬಿಡುತ್ತಾಳೆ ಅಂದ್ರು ನಿಮ್ಮಮ್ಮ. ನಾವು ನಿನ್ನ ನೋಡಲಿಕ್ಕೇ ಬಂದಿರುವುದು ಇವರು ನನ್ನ ಯಜಮಾನರು, ಅಲ್ಲಿ ಕುಳಿತವನು ಮಗ. ನೋಡಮ್ಮ”.
ಲೀನಾ ಒಳಬಾಗಿಲಲ್ಲಿ ನಿಂತ ಅಮ್ಮನತ್ತ ನೋಡಿದಳು. ಆಕೆ ಇವಳಿಗೆ ಕಣ್ಸನ್ನೆ ಮಾಡಿ ಒಳ ಕರೆದರು.
“ಇದೀಗ ಬಂದೆ ಅಮ್ಮ. ಒಳಗೆ ಹೋಗಿ ಬರ್ತೇನೆ”
ನಯವಾಗಿ ನುಡಿದು ಒಳಗೆದ್ದು ಹೋದವಳ ಎದೆ ಢವ ಢವ ಗುಡುತ್ತಿತ್ತು. ಒಳಗೆ ಬಂದು ಇಳಿದನಿಯಲ್ಲಿ ಲಾಸ್ಯಳ ಮನೆಯಲ್ಲಿ ನಡೆದ ಸಂಗತಿಯನ್ನು ತಿಳಿಸಿದಳು. ಅದನ್ನು ಕೇಳಿದ ಶ್ರೀನಿವಾಸ್ ಗೆ ಸಿಟ್ಟು ಕೆರಳಿತು. ಹಳೆಯ ಸ್ನೇಹಿತ. ಮುಂದೆ ಸಂಬಂಧ ಮಾಡುವ ಉದ್ದೇಶದಿಂದ ಬಂದರೆ ಹೀಗಾ ಇವಳ ನಡವಳಿಕೆ! ಗಿಳಿಗೆ ಹೇಳುವ ಹಾಗೆ ತಿಳಿಸಿ ಹೇಳಿದರೂ ಅಹಂಕಾರ ಎಷ್ಟು!! ಮಗಳತ್ತ ಅಸಹನೆ ಮೂಡಿತು. ಕ್ರೋಧದಿಂದ ಕೆಂಪಾದ ಅವರ ಮುಖ ಕಂಡ ಲೀನಾ ಬೆಚ್ಚಿದಳು. ಸಾತ್ವಿಕರಾದ ಅಪ್ಪನಿಗೆ ಅಪಮಾನ ಮಾಡಿದ ಅಕ್ಕನ ಮೇಲೆ ಅವಳಿಗೂ ಸಿಟ್ಟು ಎದ್ದೆದ್ದು ಬಂತು. ಐದೇ ನಿಮಿಷ. ಅಪ್ಪ ಸಾವರಿಸಿದರು. ಉಕ್ಕಿನಂತೆ ಬಿಗಿದ ದನಿಯಲ್ಲಿ ಅಪ್ಪಣೆ ಮಾಡಿದರು.
” ಮಗಳೇ, ಅಪ್ಪನ ಮಾನ, ಮರ್ಯಾದೆ ಈಗ ನಿನ್ನ ಕೈಲಿದೆ. ಅದನ್ನು ಉಳಿಸುತ್ತೀಯೋ ಬಿಡುತ್ತೀಯೋ ಅದು ನಿನಗೆ ಬಿಟ್ಟಿದ್ದು. ಬಂಗಾರದಂಥ ಸಂಬಂಧ ಕಾಲಿನ ಬುಡಕ್ಕೇ ಬಂದಿದೆ. ಎಡಗಾಲಿನಲ್ಲಿ ಒದ್ದು ನೂಕಿದ್ದಾಳೆ. ಬಾ ಇತ್ತ. ಹೊರಗೆ ಹೋಗೋಣ ಕಾಫಿ, ಟೀ ಕೊಡು ಎಲ್ಲರಿಗೆ. ಚೆನ್ನಾಗಿ ಕೇಳಿಸಿಕೊಳ್ಳಿ. ಲೀನಾ ಮದುವೆಗೆ ಇರುವ ಹುಡುಗಿ. ಅವಳನ್ನು ನೋಡಲು ಬಂದಿದ್ದಾರೆ ಈಗ. ಅರ್ಥವಾಯಿತಲ್ವಾ ಮೀನಾ?ಗಂಡನ ಮರ್ಯಾದೆ ನಿನ್ನದೂ ಹೌದಾದರೆ ಒಪ್ಪಿ ಸುಮ್ಮನಿರು. ಏಳಮ್ಮ ಲೀನಾ. ಬಾ”
” ಅಪ್ಪ. . . . ಅದು. . . ಹಾಗಲ್ಲ. . ” ತೊದಲಿದಳು.
” ಸುಮ್ಮನಿರು ನೀನು. ನನ್ನ ಮಗಳಾಗಿ ಅಪ್ಪನ ಮಾತು ಮೀರಕೂಡದು”
ಮುಜುಗರಪಡುತ್ತಲೇ ಲೀನಾ ಚಹಾ, ತಿಂಡಿ, ಹಣ್ಣು ನೀಡಿದಳು. ಸರಳ ಉಡಿಗೆಯಲ್ಲಿ ಮುಗ್ಧ ಭಾವ ಬೀರುತ್ತ ನಿಂತವಳನ್ನು ನವೀನ ಕಣ್ತುಂಬಿಸಿಕೊಳ್ಳುತ್ತಿದ್ದ. ಅರೆಕ್ಷಣ ಮಿಂಚಿನ ವೇಗದಲ್ಲಿ ಅವನತ್ತ ದೃಷ್ಟಿ ಹಾಯಿಸಿದ ಲೀನಾ ಮತ್ತೆ ಅಪ್ಪಿತಪ್ಪಿಯೂ ಅತ್ತ ನೋಡಲೇ ಇಲ್ಲ.
” ನೋಡಮ್ಮ. ನನ್ನ ಮಗನನ್ನು. ನವೀನ ಅಂತ. ಕಲಿತಿದ್ದು ಎಂ. ಟೆಕ್. ಎರಡು ವರ್ಷ ಲೆಕ್ಚರರ್ ಆಗಿ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆಲಸ ಮಾಡಿದ್ದಾನೆ. ಅಷ್ಟರಲ್ಲಿ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೆಲೆಕ್ಷನ್ ಆಯ್ತು. ಅವನಿಷ್ಟದ ಆ ಜಾಬ್ ನಲ್ಲಿ ಹಾಯಾಗಿದ್ದಾನೆ. ನಮಗೆ ಊರಿನಲ್ಲಿ ಧಾರಾಳವಾಗಿ ಆದಾಯವಿದೆ. ಮದುವೆ ಮಾಡಿಬಿಡುವಾ ಅಂತ ಯೋಚಿಸ್ತಿರುವಾಗ ಅಚಾನಕ್ ಆಗಿ ನಿಮ್ಮಪ್ಪ ಸಿಕ್ಕಿದ್ರು. ಅವನು ಪ್ರೈಮರಿಗೆ ಹೋಗುವಾಗ ನಾನು ಹೈಸ್ಕೂಲು ವಿದ್ಯಾರ್ಥಿ. ನಾನೇ ದಿನಾ ಸ್ಕೂಲಿಗೆ ಕರಕೊಂಡು ಹೋಗ್ತಿದ್ದೆ. ನಿರ್ದಾಕ್ಷಿಣ್ಯವಾಗಿ ಅವನ ಸ್ಕೂಲ್ ಬ್ಯಾಗ್ ನನ್ನ ಹೆಗಲಿಗೆ ಹಾಕಿ ಕೈ ಬೀಸುತ್ತ ಹೋಗ್ತಿದ್ದ ಮಹಾನುಭಾವ ನಿನ್ನಪ್ಪ. ನಾವು ಪರಮಾಪ್ತ ಸ್ನೇಹಿತರು. ಅಕಸ್ಮಾತ್ ನಿನ್ನೆ ಸಿಕ್ಕಿದ ನೋಡು. ಅದಕ್ಕೇ ಅಲ್ವಾ ಯೋಗ ಅನ್ನುವುದು.
ಮಗಳು ಮದುವೆ ವಯಸ್ಸಿಗೆ ಬಂದಿದ್ದಾಳೆ ಎಂದಾಗ ನಾವ್ಯಾಕೆ ನೋಡಬಾರದು ಅನ್ನಿಸ್ತು. ಇಂಥ ಚೆಂದದ ಮುದ್ದು ಹುಡುಗಿ ಸೊಸೆಯಾಗಿ ಬಂದರೆ ಅವಳು ಸೊಸೆಯೂ ಹೌದು; ಮಗಳೂ ಅವಳೇ. ನಮಗೆಲ್ಲ ಒಪ್ಪಿಗೆ. ನಮ್ಮ ಸ್ನೇಹ ಸಂಬಂಧದಲ್ಲಿ ಮುಕ್ತಾಯವಾದರೆ ನಮಗೆ ಸಂತೋಷ. ಯಾತಕ್ಕೂ ನೀವಿಬ್ರೂ ಒಮ್ಮೆ ಮಾತಾಡಿಕೊಳ್ಳಿ”
ನಿರ್ಮಲವಾಗಿ ನಕ್ಕು ಹೇಳಿದ ಅವರತ್ತ ನೋಡಿದಳು. ತಲೆಗೂದಲು ಅರೆಬರೆ ಬಿಳಿಯಾಗಿತ್ತು. ಮುಖದ ತುಂಬ ನಗು ಹರಡಿತ್ತು. ಗೌರವ ಹುಟ್ಟಿಸುವ ವ್ಯಕ್ತಿತ್ವ. ಅವರ ಮಾತಿಗೆ ಅಪ್ಪ ಎಳೆಯ ಮಗುವಿನ ಹಾಗೆ ಹಾಯಾಗಿ ನಗು ನಗುತ್ತಲಿದ್ದರು. ಅಪ್ಪ ಅದೆಷ್ಟು ಸಂತೋಷದಲ್ಲಿದ್ದಾರೆ ಈಗ. ಅರ್ಧ ಘಂಟೆಯ ಮೊದಲು ಹತಾಶರಾಗಿ ನೆತ್ತಿಗೆ ಕೈ ಹೊತ್ತು ಕೂತಿದ್ದ ಅಪ್ಪ ಈಗ ಸ್ನೇಹಿತನ ಹೆಗಲಿಗೆ ಕೈ ಇರಿಸಿ ಹಸನ್ಮುಖಿಯಾಗಿದ್ದಾರೆ. ಆತಂಕ, ಕಳವಳದ ಮುಖ ಹೊತ್ತು ನಿಂತ ಅವಳತ್ತ ಬಂದ ನವೀನ ಮೆಲುವಾಗಿ ನುಡಿದ.
“ನಿಮಗೇನೂ ಆಕ್ಷೇಪವಿಲ್ಲವಾದರೆ ಸ್ವಲ್ಪ ಹೊತ್ತು ಮಾತಾಡಬಹುದೇ ನನ್ನ ಜೊತೆಗೆ?”
ತನಗರಿವಿಲ್ಲದೆ ಎದ್ದಳು ಆಕೆ. ಅಪ್ಪನತ್ತ ನೋಡಿದಾಗ ನಕ್ಕರು.
” ಹೋಗಮ್ಮ. ಒಳಗಿನ ಕೋಣೆಯಲ್ಲಿ ಮಾತಾಡಿಕೊಳ್ಳಿ”
ಮೆಲ್ಲಗೆ ಅಡಿಯಿಡುತ್ತ ಹಿಂಬಾಲಿಸಿದಳು ಲೀನಾ. ಅಲ್ಲಿದ್ದ ಕುರ್ಚಿಯಲ್ಲಿ ಕುಳಿತ ನವೀನ. ಲೀನಾಳಿಗೆ ಕೂರಲು ಹೇಳಿದ. ಸಮೀಪದಲ್ಲಿ ಕುಳಿತ ಅವನ ಆಕರ್ಷಕ ಮುಖ, ಗಂಭೀರ ನಿಲುವು ಮತ್ತೊಮ್ಮೆ ನೋಡುವಂತೆ ಮಾಡಿತು. ಅದ್ಯಾಕೋ ಆ ತನಕ ಇಲ್ಲದ ಲಜ್ಜೆ ಕವಿಯಿತು.
“ನನ್ನ ಬಗ್ಗೆ ಈಗಾಗಲೇ ನಿಮಗೆ ಗೊತ್ತಿದೆ ಅಂದ್ಕೊಳ್ಳಬಹುದಾ ನಾನು? ಊರಿನಲ್ಲಿ ನಮಗೆ ಸ್ವಂತ ಮನೆ ಅಲ್ಲದೆ ನಾಲ್ಕಾರು ಅಂಗಡಿ ಮಳಿಗೆ ಬಾಡಿಗೆಗೆ ಕೊಟ್ಟಿದ್ದೇವೆ. ಸದ್ಯಕ್ಕೆ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇದ್ದೇನೆ. ಅಮ್ಮ ಹೇಳಿದ್ರಲ್ಲ. ಕಲಿತಿದ್ದು ಇಂಜಿನಿಯರಿಂಗ್, ಹವ್ಯಾಸ ಹಲವಾರಿದೆ. . ಓದಿದ್ದು, ಬೆಳೆದಿದ್ದು ಎಲ್ಲ ಬೆಂಗಳೂರಿನಲ್ಲಿ. ಸದ್ಯಕ್ಕೆ ಅಪ್ಪ, ಅಮ್ಮ ಊರಿನಲ್ಲಿದ್ದಾರೆ. ನಿಮ್ಮಪ್ಪ ಮತ್ತು ಅಪ್ಪ ಬಲು ಆಪ್ತ ಗೆಳೆಯರಂತೆ. ಅವರದು ಒಂದೇ ಹಟ- ಹೋಗಿ ಕನ್ಯೆ ನೋಡಿ ಬರೋಣ ಅಂತ. ಅಪ್ಪಾ, ನಂಗಿನ್ನೂ ಒಂದೆರಡು ವರ್ಷ ಹೋಗಲಿ ಲಗ್ನಕ್ಕೆ ಅಂದರೆ ಒಪ್ಪಲೇ ಇಲ್ಲ. ಹೊರಟು ಬಂದಿದ್ದು ಅಪ್ಪ, ಅಮ್ಮನ ಒತ್ತಾಯಕ್ಕೆ. ” ಅರೆಕ್ಷಣ ನಿಲ್ಲಿಸಿದ.
ತಲೆ ಎತ್ತಿದಳು ಲೀನಾ. ತುಸು ಸಂಕೋಚ ಕಡಿಮೆಯಾಯಿತು. ಏನಿದು ಈತ ಹೇಳ್ತಿರೂದು!
“ಅಪ್ಪ ಹೇಳಿದಂತೆ ಇಂದು ಇಲ್ಲಿಗೆ ಬರದೆ ಹೋಗಿದ್ದರೆ ನನಗೆ ಅದೆಂಥ ಹೆವಿ ಲಾಸ್ ಆಗ್ತಿತ್ತು ಅಂತ ಈಗ ತಿಳೀತಾ ಇದೆ” ನಕ್ಕ. ಹರ್ಷದಿಂದ ಅರಳಿದ ಅವನ ಮುಖ ಆಪ್ತವಾಯಿತು ಅವಳಿಗೆ. ಕೆಂಪೇರಿದ ಮುಖ ಲಜ್ಜೆಯಿಂದ ಬಾಗಿತು.
” ಹೇಳಿ ಲೀನಾ. ನಿಮ್ಮ ಅಭಿಪ್ರಾಯ. ಸ್ವಚ್ಚ ನಡೆನುಡಿಯ ಯಾವೊಂದು ಕೆಟ್ಟ ಹವ್ಯಾಸಗಳೂ ಇಲ್ಲದ ಯುವಕ ನಾನು. ಅಪ್ಪ, ಅಮ್ಮನ ಧೀಮಂತ ವ್ಯಕ್ತಿತ್ವನನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಅವರನ್ನು ಬಹುವಾಗಿ ಪ್ರೀತಿಸಿ ಗೌರವಿಸುತ್ತೇನೆ ನಾನು. ನನ್ನ ಮಡದಿಯಾಗಿ ಬರುವವಳೂ ಅವರನ್ನು ಆದರಿಸಿ, ಚೆನ್ನಾಗಿ ನೋಡಿಕೊಳ್ಳಬೇಕು. ನಿಮಗೆ ಹೆಚ್ಚು ಹೇಳಬೇಕಿಲ್ಲ. ಸುಸಂಸ್ಕೃತ ಮನೆತನದ ಕನ್ಯೆ. ನನಗೆ ನೀವು ಸಂಪೂರ್ಣ ಒಪ್ಪಿಗೆ. ನಿಮ್ಮನ್ನು ನೋಡ್ತಾ ನೋಡ್ತಾ ಮದುವೆ ಆದರೆ ಇದೇ ಹುಡುಗಿಯನ್ನು ಅಂತ ತೀರ್ಮಾನ ಮಾಡಿದೆ. ನಾನು ನಿಮಗೆ ಸರಿಯಾದ ಜೀವನ ಸಂಗಾತಿ ಆಗಬಲ್ಲೆ ಅಂತ ನಿಮಗನ್ನಿಸಿದರೆ ಹೇಳಿಬಿಡಿ. ಸಂಕೋಚ ಬೇಡ. ಸಮಯ ಬೇಕಾದರೆ ತೆಗೆದುಕೊಳ್ಳಿ. ಧಿಡೀರನೆ ಒಪ್ಪಿಗೆ ಕೊಡಿ ಅಂತ ಕೇಳುವುದು ತಪ್ಪಾಗುತ್ತದೆ ಅಲ್ವಾ? ಸಮ್ಮತಿ ಇಲ್ಲ ಅಂದರೆ ನನಗೆ ಆ ಅದೃಷ್ಟವಿಲ್ಲ ಅಂದ್ಕೊಳ್ತೇನೆ”
” ಹಾಗೇನಿಲ್ಲ” ತಟಕ್ಕನೆ ಅವಳಿಗರಿವಿಲ್ಲದೆ ಉತ್ತರ ಬಂತು.
” ಅಂದರೆ ಒಪ್ಪಿಗೆ ಅಂತಲಾ?” ಮುಖದ ತುಂಬ ಸಂಭ್ರಮ ಹರಡಿತು ಅವನಿಗೆ.
” ಅದಕ್ಕೆ ಮೊದಲು ನಾನೊಂದು ವಿಷಯ ತಿಳಿಸಬೇಕು ನಿಮಗೆ” ತಲೆ ತಗ್ಗಿಸಿ ಉಗುರಬಣ್ಣ ನೋಡುತ್ತ ಹೇಳಿದಳು.
ಬಹುಶ ಈಗಾಗಲೇ ಯಾರನ್ನಾದರೂ ಪ್ರೀತಿಸುತ್ತ ಇರಬಹುದೇನೋ! ಅವನನ್ನೇ ಮದುವೆ ಆಗ್ತೀನಿ. ಇದು ಕೇವಲ ಅಪ್ಪನ ಒತ್ತಾಯಕ್ಕೆ ಅಂತ ಹೇಳಿಬಿಡ್ತಾಳಾ ಅಂತಾಅಯಿತು ಅವನಿಗೆ.
” ಅದಕ್ಕೇಕೆ ಸಂಕೋಚ. ಹೇಳಿ. ಪರವಾಗಿಲ್ಲ. ಬಿಚ್ಚು ಮನಸ್ಸಿಂದ ಮಾತಾಡಿಕೊಳ್ಳಿ ಅಂತಲೇ ನಮ್ಮನ್ನು ಇಲ್ಲಿಗೆ ಕಳಿಸಿದ್ದು. ” ತುಸು ಸಪ್ಪಗಾಯಿತು ಉತ್ಸಾಹ.
” ನಾನು. . . . . . ನಾನು. . . ನನಗೆ. . . . ಇದು. . . ” ತೊದಲಿದಳು.
” ಬೇರೆ ಯಾರಾದರೂ ಈಗಾಗಲೇ ಮನಸ್ಸಲ್ಲಿದ್ದರೆ ನೇರವಾಗಿ ತಿಳಿಸಿಬಿಡಿ. ನಾನೇನೂ ತಿಳಿದುಕೊಳ್ಳುವುದಿಲ್ಲ” ಸಪ್ಪೆ ದನಿಯಲ್ಲಿ ನುಡಿದ. ಅವನ ದನಿಯಲ್ಲಾದ
ವ್ಯತ್ಯಾಸ ಅರಿವಾಯಿತು ಲೀನಾಳಿಗೆ.
“ಛೆ ಛೇ ಹಾಗೇನಿಲ್ಲ. ಅದಲ್ಲ, ಬೇರೆ. . . . ” ಈಗ ಉಸಿರು ಬಂತು ನವೀನನಿಗೆ.
” ಏನಿದ್ದರೂ ಹೇಳಿ. ನಾನು ಇಷ್ಟವಾಗಿಲ್ಲ, ಸ್ಮಾರ್ಟ್ ಅಲ್ಲ ಅಂತಲಾ”
” ಶಿ! ಶೀ. ಅಂಥದ್ದೇನೂ ಇಲ್ಲ” ಅಪಾರ್ಥವಾಗುವ ಮೊದಲು ತಿಳಿಸಿಬಿಡುವುದು ಕ್ಷೇಮ. ಅಲ್ಲದೆ ಮೈನಾಗೆ ಇವನು ಇಂಜಿನಿಯರಿಂಗ್ ನಲ್ಲಿ ಮಾಸ್ಟರ್ಸ್ ಡಿಗ್ರಿ ಮಾಡಿದವನೆಂದು ತಿಳಿಯದು. ಗೊತ್ತಾದಾಗ ತನ್ನಲ್ಲಿ ಜಗಳಕ್ಕೇ ಬರಬಹುದು. ತನಗೆ ಬಂದ ವರ, ಇವನನ್ನು ತಾನೇ ಮದುವೆ ಆಗುತ್ತೇನೆ ಅಂತ ನಿಶ್ಚಿತವಾಗೂ ರಂಪವೆಬ್ಬಿಸುತ್ತಾಳೆ. ನಂತರ ಫಜೀತಿ ಆಗುವ ಮೊದಲು ಸತ್ಯ ತಿಳಿದಿರಲಿ. ಲೀನಾ ಅಕ್ಕ ಮೈನಾಳ ಹಟ, ಆಕೆ ಮನೆಗೆ ಬಾರದೆ ಲಾಸ್ಯಳ ಮನೆಯಲ್ಲಿ ಹೋಗಿ ಕೂತಿದ್ದು. ಸಿಟ್ಟಿಗೆದ್ದ ಅಪ್ಪ ತನ್ನನ್ನು ವಧುಪರೀಕ್ಷೆಗಾಗಿ ಒಪ್ಪಿಸಿ ಕಳಿಸಿದ್ದು ಒಂದೇ ಉಸಿರಲ್ಲಿ ಹೇಳಿದಳು. ತಗ್ಗಿಸಿದ ತಲೆ ಎತ್ತಲೇ ಇಲ್ಲ. ತೀರಾ ಅನಿರೀಕ್ಷಿತವಾಗಿ ಇದೆಲ್ಲ ಎದುರಿಸಿದ ಕಾರಣ ತನ್ನ ಮನಸ್ಸಿನ್ನೂ ಅದಕ್ಕೆ ಸಿದ್ಧವಾಗಿಲ್ಲ. ಆದ ಕಾರಣ ಉತ್ತರ ಹೇಳಲಾಗುತ್ತಿಲ್ಲ ತನಗೆ ಎಂದಳು.
ಅದು ತನಕ ಆತಂಕದಿಂದ ಕೇಳುತ್ತಿದ್ದ ಅವನಿಗೆ ಸಿಳ್ಳೆ ಹೊಡೆಯುವ ಹಾಗಾಯ್ತು.
” ನಿಜ ಹೇಳಲಾ? ನಿಮಗೊಬ್ಬ ಅಕ್ಕ ಇರುವುದು ನನಗೆ ತಿಳಿದಿಲ್ಲ ಈ ತನಕ. ನಾನು ಅವರನ್ನು ಕಾಣಲೂ ಇಲ್ಲ; ಮೆಚ್ಚಿಕೊಳ್ಳಲೂ ಇಲ್ಲ. ನಿಮ್ಮ ಸರಳತನ, ಮುಗ್ಧ ಚೆಲುವು ನೋಡಿ ಒಪ್ಪಿದೆ. ಮೊದಲ ನೋಟದಲ್ಲೇ ನೀವು ನನ್ನವರು ಅನ್ನಿಸಿತು. ಆತ್ಮೀಯತೆ, ಪ್ರೀತಿ ಮೂಡಿತು. ಅಪ್ಪ ಹೇಳುವುದು ನಿಜ ಅನ್ನಿಸ್ತಿದೆ ಇಲ್ಲಿನ ಘಟನೆ ಕೇಳುವಾಗ. ದೈವ ನಿಯಾಮಕ ಇದು ಆಗಿರಬೇಕು. ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ; ನಾವು ನಿಮಿತ್ತ ಮಾತ್ರಾ. ಅದೇ ಪ್ರಕಾರವಾದರೆ ನಿಮ್ಮಕ್ಕನಿಗೆ ಋಣಾನುಬಂಧ ಇರಲಿಲ್ಲ; ಅದು ನಿಮಗಿತ್ತು. ನನ್ನ ಬದುಕಿನುದ್ದಕ್ಕೂ ಧರ್ಮ, ಅರ್ಥ, ಕಾಮ, ಮೋಕ್ಷದಲ್ಲಿ ಜೊತೆಯಾಗಿ ನಿನಗೆ ನಾನು; ನನಗೆ ನೀನು ಎಂದು ಹೆಜ್ಜೆ ಹಾಕಲು ಒಪ್ಪಿದರೆ ನಾನು ಅದೃಷ್ಟವಂತ. ಒಬ್ಬ ಮಗಳು ಹೆತ್ತವರ ಗೌರವ, ಮರ್ಯಾದೆಯನ್ನು ನಾಲ್ಕು ಮಂದಿಯ ನಡುವೆ ಕಳೆದರೆ, ಇನ್ನೊಬ್ಬ ಮಗಳು ಅದನ್ನು ಉಳಿಸಿದ್ದಾಳೆ. ಅದಕ್ಕೆ ನಿಮ್ಮನ್ನು ಗೌರವಿಸುತ್ತೇನೆ. ಇಂಥ ವಿವೇಚನೆ ಇರುವ ಹುಡುಗಿ ನನ್ನ ಜೀವನ ಸಂಗಾತಿಯಾದರೆ ನಾನು ಹೆಮ್ಮೆ ಪಡುತ್ತೇನೆ. ಇಂದು. ಭಾನುವಾರ. ಬುಧವಾರ ಸಂಜೆಯ ತನಕ ಯೋಚನೆ ಮಾಡಿ. ನನ್ನ ಒಪ್ಪಿ ವಿವಾಹವಾದರೆ ಬದುಕಿಡೀ ಪ್ರೀತಿ, ಆದರ, ಗೌರವದಿಂದ ಎದೆಯಲ್ಲಿ ಮುಚ್ಚಿಟ್ಟು ನಿಮ್ಮನ್ನು ನೋಡಿಕೊಳ್ಳುತ್ತೇನೆ. ಲೀನಾ ನವೀನ್ ಆಗುವ ನಿರ್ಧಾರ ಮಾಡಿದ್ದರೆ ಫೋನ್ ಮಾಡಿ, ಕಾಯುತ್ತಿದ್ದೇನೆ ಉತ್ತರಕ್ಕೆ. ನೆನಪಿರಲಿ. “
ಮನಸ್ಸಿನ ತುಂಬಾ ಹಿತದ ತಂಗಾಳಿ ಬೀಸಿತು ಅವಳಿಗೆ. ಅವನ ಉನ್ನತ ಮನಸ್ಸು ಒಪ್ಪಿಗೆಯಾಯಿತು. ತೀರಾ ಸಮೀಪ ನಿಂತವನತ್ತ ಲಜ್ಜೆಯಿಂದಲೇ ನೋಡಿದಳು. ಮನಸ್ಸು ಮಧುರವಾಗಿ ಮಿಡಿಯಿತು. ತನಗೂ ಮೊದಲ ನೋಟದಲ್ಲೇ ಒಪ್ಪಿಗೆಯಾಗಿದ್ದಾನೆ; ಸುಸಂಸ್ಕೃತ ಮನೆತನ, ಹೆತ್ತವರು, ಉನ್ನತ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿದ ವ್ಯಕ್ತಿ. ಮನೆಯವರಿಗೆ ಈ ಸಂಬಂಧ ಮನಪೂರ್ತಿ ಒಪ್ಪಿಗೆ. ತನಗೂ ಮೊದಲ ನೋಟದಲ್ಲೇ ಮನಸ್ಸು ಸೆರೆ ಹಿಡಿದ ಸುಸಂಸ್ಕೃತ ಯುವಕ. ಬುಧವಾರದ ತನಕ ನಿಧಾನಿಸುವ ಅವಶ್ಯಕತೆ ಇಲ್ಲಿಲ್ಲ.
“ಲೀನಾ, ಇಲ್ಲಿ ಕೇಳಿ. ನಿಮ್ಮ ಅಕ್ಕ ಉದ್ದೇಶಪೂರ್ವಕವಾಗಿ ಇಂದು ತಪ್ಪಿಸಿದ್ದಾರೆ ಅಂತ ಅನ್ಸುತ್ತದೆ ಹಾಗೆಂದರೆ ಇಂದಿನ ಭೇಟಿ ಆಕೆಗೆ ಒಪ್ಪಿಗೆ ಇಲ್ಲ ಅಂತ ಅರ್ಥ. ಬರುವ ಅತಿಥಿಗಳ ಎದುರಿಗೆ ಹೆತ್ತವರನ್ನು ಅಪಮಾನಿಸಲು ಹಿಂಜರಿಯದ ಯುವತಿ ಮೈನಾ. ಅವರಿಗೆ ಆಗುವ ಅಪಮಾನ ತಪ್ಪಿಸಲು, ಅವರು ತಲೆ ತಗ್ಗಿಸುವಂತಾಗಕೂಡದು ಎನ್ನುವ ಕಾರಣಕ್ಕೆ ನೀವು ಪರಿಸ್ಥಿತಿ ನಿಭಾಯಿಸಿದಿರಿ. ಬರಿದೇ ತನ್ನ ಸ್ವಾರ್ಥ ನೋಡಿಕೊಳ್ಳುವ ಹೆಣ್ಣು ಆಕೆ ಎನಿಸುತ್ತದೆ ನನಗೆ. ಅದನ್ನು ತೋರಿಸಿಕೊಟ್ಟಳು. ಆಕೆ ಹೇಗೇ ಇದ್ದರೂ ಅಂಥವರ ಜೊತೆ ಬದುಕು ಹಂಚಿಕೊಳ್ಳಲಾರೆ ನಾನು. ಆಕೆಗಾಗಿ ನಾನು ಇಲ್ಲಿಗೆ ಬಂದೆ ಎಂದು ನೀವಂದುಕೊಂಡರೆ ಅದು ಸರಿಯಲ್ಲ
ಸರಿ, ಬುಧವಾರದ ಸಂಜೆಯ ತನಕ ನಿಮ್ಮ ಉತ್ತರಕ್ಕೆ ಕಾಯುತ್ತೇನೆ ನಾನು. ಸಿಹಿ ಸುದ್ದಿ ಕೊಡುತ್ತೀರಿ ಅಂತ ನಿರೀಕ್ಷಿಸಬಹುದಾ ನಾನು?
ಆತನ ಮುಖದ ತುಂಬಾ ಕಾತುರದ ಹೊಂಗಿರಣ. ಲೀನಾವಿನ ಎದೆಯ ಮೇಲಿದ್ದ ಹೆಬ್ಬಂಡೆಯ ಭಾರ ಇಳಿಯಿತು. ಹಾಗಿದ್ದರೆ ತನ್ನದು ತಪ್ಪಾಗುವುದಿಲ್ಲ. ಅಕ್ಕ ಅಪ್ಪ, ಅಮ್ಮನಿಗೆ ಅತಿಥಿಗಳ ಎದುರಿಗೆ ಅವಮಾನಿಸಲು ಹೊರಟಿದ್ದಳು. ಅವಳಿಗಾಗಲೀ, ನವೀನ್ ಗಾಗಲೀ ಅದು ಬೇಕಿಲ್ಲದ ಸಂಬಂಧ. ತಾನು ಒಪ್ಪಿದರೆ ಅವಳಿಗಾಗಿ ಬಂದ ನೆಂಟಸ್ತಿಕೆಯನ್ನು ಕಿತ್ತುಕೊಂಡ ಅಪವಾದವಿಲ್ಲ. ಸರಿಯಾಗಿ ಹೇಳಿದ್ದಾರೆ ನವೀನ್. ತಾನ್ಯಾಕೆ ಅವರನ್ನು ಬುಧವಾರದ ತನಕ ಕಾಯಿಸಲಿ ?
ಲಜ್ಜಾನ್ವಿತೆಯಾಗಿ ಬಲಗೈ ನೀಡಿದಳು ಅವಳು. ನವೀನನ ಮುಖದಲ್ಲಿ ಹರ್ಷದ ಹೊನಲು ಮೂಡಿತು. ಚಾಚಿದ ಅವಳ ಬಲಗೈಯನ್ನು ತನ್ನ ಸದೃಢ ಹಸ್ತದಲ್ಲಿ ಹಿಡಿದನು. ಹಿಡಿದ ಕೈಯನ್ನು ಬಿಡದೆ ಹಾಗೆ ಹೊರಗೆ ಲಜ್ಜೆಯಿಂದ ಕೆಂಪೇರಿದ ಲೀನಾ ತಲೆಯೆತ್ತಲೇ ಇಲ್ಲ. ಪರಸ್ಪರರ ಕೈಯನ್ನು ಒಟ್ಟಾಗಿ ಜೋಡಿಸಿ ಹಿಡಿದು ಮೇಲೆತ್ತಿದ.
“ನಮ್ಮಿಬ್ಬರ ವಿವಾಹಕ್ಕೆ ಲೀನಾ ಮತ್ತು ನನ್ನ ಸಂಪೂರ್ಣ ಸಮ್ಮತಿ ಇದೆ. ಉಳಿದಂತೆ ಹಿರಿಯರು ನಡೆಸಿಕೊಡಬೇಕು.
ಆತ ಸರಿದು ಹೋಗಿದ್ದೂ ಅರಿವಾಗಲಿಲ್ಲ. ಎದೆಯ ತುಂಬ ಪುಲಕ. ಅವನ ಮಾತು, ನಿಲುವು, ನಡವಳಿಕೆ ಮೋಡಿ ಹಾಕಿತ್ತವಳಿಗೆ. ನವೀನನೇ ಮೈನಾಳಂಥ ಯುವತಿ ತನಗೆ ಬೇಡವೆಂದ ಮೇಲೆ ತಾನೇನು ತಪ್ಪು ಮಾಡಿದ ಹಾಗಾಗುವುದಿಲ್ಲ. ಹಿಂಜರಿಕೆ ಅನಗತ್ಯ. ಮೈ ಮನ ಹೂವಿನಂತೆ ಹಗುರಾಯಿತು.
” ಲೀನಾ, ಅವರೆಲ್ಲ ಹೊರಟರು. ಬಾ ಹೊರಗೆ. ನಾಡಿದ್ದು ಗುರುವಾರ ಬೆಳಗ್ಗೆ ಉತ್ತರಕೊಡುತ್ತೇವೆ ಅಂದರು. ಯೋಚಿಸಲು ಹುಡುಗಿಗೂ ಸಮಯ ಕೊಡಿಅಂತ ತಿಳಿಸಿದರು. ಅವರ ಮುಖ ನೋಡಿದರೆ ಒಪ್ಪಿಗೆ ಅಂತ ಗೊತ್ತಾಗುತ್ತದೆ. ಏನ್ಮಾಡುವುದೀಗ. ಮೈನಾ ಬರುವ ಮೊದಲು ತೀರ್ಮಾನವಾಗಬೇಕು. “
ಅತಿಥಿಗಳನ್ನು ಬೀಳ್ಕೊಟ್ಟವರೇ ಮೀನಾ ಪತಿಯ ಜೊತೆ ಚರ್ಚಿಸಲು ಹೋದರು. ಲೀನಾವಿಗೆ ರೋಮಾಂಚನವಾಯಿತು. ಇಂಥಾ ವಿದ್ಯಾವಂತ, ಉತ್ತಮ ಉದ್ಯೋಗ, ಸುಸಂಸ್ಕೃತತೆ ಇರುವವರು ತಾವು ಒಪ್ಪಿದರೂ ಅವಳಿಗಾಗಿ, ಅವಳ ಸಮ್ಮತಿಗಾಗಿ ಮುಂದೆ ಹಾಕಿದ್ದರು. ಹಿರಿಯರು ಅವಳನು ತಪ್ಪು ತಿಳಿಯದೆ ಇರಲಿ ಎಂದುಅದನ್ನು ತನಗೇ ಅನ್ವಯಿಸಿದ್ದ. ಕಾಲೇಜಿನಲ್ಲಿ ಲೆಕ್ಚರರ್ ವಸುಧಾ ಮೇಡಮ್ ಹೇಳುವ ಮಾತು ನೆನಪಾಯಿತು. ” ಅದೃಷ್ಟ ನಿಮ್ಮ ಬಳಿಗೆ ಬಂದಾಗ ಬಿಟ್ಟರೆ ಮತ್ತೆ ಬಾರದೆ ಇರಲೂಬಹುದು. ನೆನಪಿಡಿ. ಅಪ್ಪನ ಮಾತು ಕಿವಿಗೆ ಬಿತ್ತು ಆಗ. ಅವರು ಹೇಳ್ತಿದ್ದರು. – ಇಷ್ಟು ಉತ್ತಮ ಸಂಬಂಧ ಕಾಲ ಬುಡಕ್ಕೆ ಬಂದಿರುವಾಗ ಬಿಡಲು ತಯಾರಿಲ್ಲ ನಾನು. ಮೈನಾ ವಿಚಾರ ಈಗ ಬೇಡ. ಲೀನಾ ಇದ್ದ ಕಾರಣ ಮನೆ ಮತ್ತು ನಮ್ಮ ಮರ್ಯಾದೆ ಉಳಿಯಿತು. ಮಗಳು ಅಂದಿದ್ದೆ ಹೊರತು ಹಿರಿ ಮಗಳೋ, ಕಿರಿ ಮಗಳೋ ಅಂತ ಹೇಳಿಲ್ಲ ನಾನು. ಇವರು ಇಲ್ಲಿಗೆ ಬರುವಾಗಲೇ ದೇವಸ್ಥಾನದಲ್ಲಿ ಪ್ರಸಾದ ಕೇಳಿಸಿ ಬಂದಿದ್ದಾರೆ ಶುಭ ಅಂತ ಕಂಡಿದೆ. ಇನ್ನು ಜಾತಕ ಅನಾವಶ್ಯಕ ಅಂದರು. ಲೀನಾವಿಗೆ ಹತ್ತೊಂಭತ್ತು ವರ್ಷ ಈಗ. ಮದುವೆಗೆ ಸರಿಯಾದ ಪ್ರಾಯ. ನಂತರ ಓದಬಹುದು ಅವಳಿಗೆ. ಮೀನಾ ಇನ್ನೊಂದು ವಿಚಾರ ವೆಂದರೆ ನಮಗೆ ಅಳಿಯನೆ ಮಗನೂ. ನಮಗೆ ಗಂಡು ಮಕ್ಕಳಿಲ್ಲ. ಇಂಥ ಸಂಬಂಧ ಮತ್ತೆ ಸಿಕ್ಕದು. ನವೀನಂಥವ ಸಿಗಬೇಕಾದರೆ ಲೀನಾ ಪುಣ್ಯ ಮಾಡಿದ್ದಾಳೆ”.
“ಎಲ್ಲ ಸರಿ ಅಂತ ನನಗೂ ಕಾಣ್ತಿದೆ. ಆದರೆ ಮೈನಾ ಬಂದು ಗಲಾಟೆ ಮಾಡಿದರೆ?”
” ಅವಳೇ ಬೇಡ ಅಂತ ಬಿಟ್ಟ ಸಂಬಂಧಕ್ಕೆ ಗಲಾಟೆ ಯಾಕ್ಮಾಡ್ತಾಳೆ? ನಾನು ಮುಂದುವರೆಸುವುದೇ ನಿಜ”
ಮೈನಾ ಮನೆಗೆ ಹಿಂದಿರುಗಿದಾಗ ಏಳು ಘಂಟೆ. ಅಪ್ಪ, ಅಮ್ಮನ ರೇಗಾಟ, ಕೂಗಾಟ, ಬೈಗಳು ನಿರೀಕ್ಷೆಯಲ್ಲಿದ್ದ ಅವಳಿಗೆ ಮನೆ ಶಾಂತವಾಗಿದ್ದು ಕಂಡು ಅಚ್ಚರಿಯಾಯಿತು. ಸುಮ್ಮನಿರಿ ಏನೂ ಹೇಳಬೇಕಿಲ್ಲ ಅವಳಿಗೆ ಎಂದು ಶ್ರೀನಿವಾಸ್ ಮೊದಲೇ ಎಚ್ಚರಿಸಿದ್ದರು. ಮೀನಾ ತೆಪ್ಪಗಿದ್ದರು. ಅಮ್ಮ ವಿಚಾರಿಸಿದಾಗ ಹೇಗೆಲ್ಲ ರೇಗಾಡಬೇಕು ಎಂದುತಯಾರಿ ಮಾಡಿ ಬಂದ ಮೈನಾಗೆ ನಿರಾಸೆಯಾಯಿತು. ಅತಿಥಿಗಳು ಬಂದು ಹೋಗಿದ್ದಾರೆ ಎನ್ನುವುದನ್ನು ಸಿಹಿ ತಿಂಡಿ, ತೊಳೆಯಲು ಇಟ್ಟ ತಟ್ಟೆಗಳು ಹೇಳಿದವು. ಲೀನಾಳನ್ನು ಅರಸುತ್ತ ಬಂದಳು. ಅವಳೋ ಮುಖವಡಿಯಾಗಿ ಮಲಗಿದ್ದಳು. ಕೊನೆಗೆ ಕುತೂಹಲ ತಡೆಯಲಾಗದೆ ಶೈನಾಳನ್ನು ಪುಸಲಾಯಿಸಿದಳು.
” ಬಂದಿದ್ದರು ಮೈನಕ್ಕ. ತುಂಬಾ ಹ್ಯಾಂಡ್ ಸಮ್ ಆದವರು ಲೀನಾ ಅಕ್ಕನ ಹತ್ರ ಮಾತಾಡಿದರು. ಎಲ್ಲ ನಗ್ ನಗ್ತಾ ಇದ್ದರು. ಹೋಗಿ ಸ್ವಲ್ಪ ಹೊತ್ತಾಯ್ತು. ನನ್ನ ಹತ್ರಾನೂ ಯಾವ ಸ್ಕೂಲು; ಕ್ಲಾಸ್ ಯಾವುದು ಅಂತೆಲ್ಲ ಕೇಳಿದರು. “
ನಡೆದಿದ್ದು ಸ್ವಲ್ಪ ಅ ಮಟ್ಟಿಗೆ ಅರ್ಥವಾಯ್ತು ಅವಳಿಗೆ. ಮನಸ್ಸು ಚಿವುಕ್ಕೆಂದಿತು ತನ್ನನ್ನು ಲೆಕ್ಕಕ್ಕೇ ತೆಗೆದುಕೊಂಡಿಲ್ಲ. ಡಾಕ್ಟರ್ ಇಂಜನಿಯರ್ ಅಥವಾ ಸಿ. ಎ ಆದವರು ಬರಲಿ. ಅಂಥವರು ಬಂದರೆ ನಾನ್ಯಾಕೆ ಲಾಸ್ಯ ಮನೆಗೆ ಓಡಿ ಹೋಗ್ತೇನೆ. ಈ ಪುಟಕೋಸಿ ಕ್ಲರ್ಕ್ ಗಳಿಗೆ ಲೀನಾವೇ ಸೈ. ಅವಳ ಯೋಗ್ಯತೆಗೆ ಸರಿಯಾದವನು.
ಲೀನಾವಿಗೆ ನಿದ್ದೆ ಬಳಿ ಸುಳಿಯಲಿಲ್ಲ. ಕಣ್ಣು ಮುಚ್ಚಿದರೆ, ತೆರೆದರೆ ಅಲ್ಲಿ ನವೀನ ನಿಲ್ಲುತ್ತಿದ್ದ. ಖಾಲಿಯಿದ್ದ ತನ್ನ ಮನಸ್ಸನ್ನು ಭದ್ರವಾಗಿ ಆವರಿಸಿದ್ದ. ಅವನ ನೋಟ, ನಗು, ಮಾತು ನೆನಪಾಗಿ ಕಚಗುಳಿ ಇಟ್ಟಂತಾಗುತ್ತಿತ್ತು. ತನ್ನ ಮನಸ್ಸು ಅವನ ಹಿಂದೆಯೇ ಓಡುತ್ತದೆ. ಕೇವಲ ಅರ್ಧ ಘಂಟೆಯ ಭೇಟಿ. ಹೀಗಾಗುತ್ತದೆ ಎಂದು ತಿಳಿದೇ ಇರಲಿಲ್ಲ. ಈ ಪರಿಯಲ್ಲಿ ಕಾಡಬೇಕಾದರೆ ತಮ್ಮದು ಜನ್ಮಾಂತರದ ಸಂಬಂಧವೇ ಇರಬೇಕು. ಸುಂದರವಾದ ಗುಬ್ಬಿಗೂಡಿನಂಥ ಸಂಸಾರದಲ್ಲಿ ತಾನೂ, ನವೀನ. ಅವನಿಲ್ಲದೆ ತಾನಿಲ್ಲ. ತನಗೆ ನವೀನ ಬೇಕೇಬೇಕು. ಮಧ್ಯಾಹ್ನದ ತನಕ ಕಲ್ಪನೆಯಲ್ಲೂ ಇಲ್ಲದವ ಇದೀಗ ಮೈಮನ ತುಂಬ ತುಂಬಿ ನಗುತ್ತಾನೆ. ಅದೆಷ್ಟು ಚೆಲುವ. ಹಾಗೆ ನೋಡಿದರೆ ತಾನೇ ಅವನಿಗೆ ಸಾಲದು. ನಿರ್ಧಾರ ಅದಾಗಲೇ ಆಗಿತ್ತು ಅವಳಿಗೆ. ಅವನಿಲ್ಲದೆ ತಾನಿಲ್ಲ ಎಂದ ಮೇಲೆಅವನನ್ನು ಬುಧವಾರದ ತನಕ ಕಾಯಿಸುವ ದುರ್ಬುದ್ಧಿ ಯಾಕೆ ತನಗೆ? ಬೆಳಗ್ಗೆ ಎದ್ದ ಅವಳು ಅಮ್ಮನಿಗೆ ತುಸು ಸಹಾಯ ಮಾಡಿ ಕೋಣೆಗೆ ಬಂದಳು. ಮೊಬೈಲ್ ಕೈಗೆ ಬಂತು. ನವೀನನ ನಂಬರ್ ನೋಡಿ ಒತ್ತಿದಳು. ಎದೆ ಜೋರಾಗಿ ಬಡಿದುಕೊಂಡಿತು. ಅತ್ತ ಸುಮಾರು ಸಮಯ ಯಾರೂ ಎತ್ತಲಿಲ್ಲ. ಕೊನೆಗೆ ಎತ್ತಿ ಹಲ್ಲೋ ಅಂದ ದನಿ. ನಾಚಿಕೆ ನುಗ್ಗಿ ಬಂದು ಕಾಲ್ ಕಟ್ ಮಾಡಿದಳು. ಜುಮುಗುಡುವ ಮೈ ಮನ. ಪುನಹ ಧೈರ್ಯವೆಲ್ಲ ಒಗ್ಗೂಡಿಸಿ ಕರೆ ಮಾಡಿದಳು ಮೊದಲ ರಿಂಗ್ ಗೆ ಎತ್ತಿದ ಅವನು ಹಲ್ಲೋ ಅಂದ. ಲಜ್ಜೆ ಆವರಿಸಿ ಕಾಲ್ ಕಟ್ ಮಾಡಿದಳು ಮರಳಿ. ಮೈತುಂಬ ನವಿರಾದ ನಡುಕ, ಪುಲಕ. ಅರೆಕ್ಷಣದಲ್ಲಿ ಅವನ ಕಾಲ್ ಬಂತು. ತಡವರಿಸುತ್ತ ಹಲ್ಲೋ ಎಂದಳು. ಲೀನಾ ನೀನಾ? ಪ್ಲೆಸೆಂಟ್ ಸರ್ ಪ್ರೈಸ್ ಎಂದ. ಉತ್ತರವಿಲ್ಲ. ” ಇವತ್ತೇ ಉತ್ತರ ಹೇಳಿಬಿಡ್ತೀ ಅಲ್ವಾ?” ಅದು ಹ್ಯಾಗೆ ಗೊತ್ತಾಯ್ತು ಅಂತ ಅಚ್ಚರಿ. ” ಲೀನಾವಿಗೆ ಶಬ್ದ ಹೊರಡಲಿಲ್ಲ. ” ಲೀನಾ, ಈ ಹುಡುಗ ಬೇಡ ಅಂತ ತೀರ್ಮಾನ ಮಾಡಿದ್ಯಾ ಪುಟ್ಟಾ?” ಸರಕ್ಕನೆ ಉತ್ತರಿಸಿದಳಾಗ ಅವಳು. ” ಊಹೂಂ. ಹಾಗಲ್ಲ”
“ಹಾಗಿದ್ದರೆ ಹೇಳು. ನಿನ್ನ ಬಾಯಿಂದಲೇ ಕೇಳಬೇಕು ನಾನು”
ನಾಚಿಕೆ ಒತ್ತರಿಸಿ ಬಂತು. ” ನನಗೆ ಒಪ್ಪಿಗೆ. ಆದರೆ. . . “
” ವಾವ್. ಸ್ವೀಟ್ ನ್ಯೂಸ್. ಆದರೆ ಏನು. . . ಹೇಳಿಬಿಡು”
” ನನಗೆ. . . ನಾನು ಓದು ಮುಂದುವರೆಸಬೇಕು”
” ಅಷ್ಟೇ ಅಲ್ವಾ?ನನ್ನ ಹೆಂಡತಿ ಆದ ಮೇಲೆ ಓದು. ಎಷ್ಟು ಬೇಕೋ ಅಷ್ಟು. ನನಗೂ ಅದೇ ಇಷ್ಟ. ಲೀನಾ. ನಾನೀಗ ಅಪ್ಪ, ಅಮ್ಮನಿಗೆ ಹೇಳುವೆ. ಅವರು ನಿನ್ನ ಅಪ್ಪನ ಬಳಿ ಮಾತಾಡಲಿ. ಬೆಳಗ್ಗೇ ಸಿಹಿ ಸುದ್ದಿ ಕೊಟ್ಟದ್ದಕ್ಕೆ ಏನು ಕೊಡಲಿ” ನಕ್ಕ ಸದ್ದು.
ಅರ್ಧ ಘಂಟೆಯಲ್ಲಿ ಶ್ರೀನಿವಾಸ್ ಗೆ ಗಜಾನನ ಮಗನ ಒಪ್ಪಿಗೆ ತಿಳಿಸಿದರು. ಮನೆ ತುಂಬ ಹರ್ಷದ ಹೊನಲು. ಲೀನಾಗೆ ವಿವಾಹ ಎಂದಾಗ ಕಣ್ಣು ಕಣ್ಣು ಬಿಟ್ಟ ನವ್ಯಾಗೆ ಅದು ನವೀನ್ ಜೊತೆಗೆ ಎಂಬ ಹಿಗ್ಗು. ಮೈನಾ ಇನ್ನೂ ಎದ್ದಿರಲಿಲ್ಲ. ಮೀನಾ ಮತ್ತು ಶ್ರೀನಿವಾಸ್ ಗೆ ಮೊದಲು ಮೈನಾಗೆ ಮಾಡದೆ ಲೀನಾಗೆ ಬೇಡ ಎನ್ನುವ ಅಭಿಪ್ರಾಯ. ಅವಳಿಗೆ ಮುನ್ನಾ ದಿನದ ಕಾರ್ಯಕ್ರಮದ ಫಲಿತಾಂಶ ನವ್ಯಾ ಮುಟ್ಟಿಸಿದಳು. ” ಅಂಥವರು ಕಾಸಿಗೊಂದು; ಕೊಸರಿಗೆರಡು. ನನಗೆ ಗೊತ್ತಿಲ್ವಾ?ಇವಳ ಯೋಗ್ಯತೆಗೆ ಸರಿಯಾದವ, ” ಸಿಡುಕಿದಳು. ಲೀನಾವಿಗೆ ನೋವಾಯಿತು. ಅವಳಿಂದಾಗಿ ಅಲ್ಲವೇ ತನಗೆ ನವೀನ ಸಿಕ್ಕಿದ್ದು ಎಂದು ಸುಮ್ಮನಾದಳು.
ಈ ಮಧ್ಯೆ ಒಂದೆರಡು ಕಡೆಯ ಸಂಬಂಧ ಮೈನಾಳಿಗೆ ತಪ್ಪಿ ಹೋಯ್ತು. ಅದರ ಮಧ್ಯೆ ನವೀನ ಅವರ ಮನೆಗೆ ಬಂದು ಲೀನಾವನ್ನು ಒಂದೆರಡು ಬಾರಿ ಹೊರಗೆ ಕರೆದೊಯ್ದ. ಮರಳಿ ಬಂದ ಅವಳ ಮೋರೆಯಲ್ಲಿ ಲಕಲಕಿಸುವ ಸಂತೋಷ, ಸಂಭ್ರಮ ಕಂಡ ಮೈನಾಳಿಗೆ ಅಸಹನೆ. ವಿವಾಹಕ್ಕೆ ಪ್ರಯತ್ನಿಸಿದಾಗ ಇಂಜಿನಿಯರ್ ಮನೆಯವರಿಗೆ ಅವಳ ಮಾರ್ಕ್ಸ್ ವಿಚಾರಿಸಿಕೊಂಡು ಸಮಾಧಾನವಿಲ್ಲ; ಜೊತೆಗೆ ಅವಳು ಓದುವ ಕಾಲೇಜು ಪ್ರತಿಷ್ಟಿತ ಕಾಲೇಜುಗಳ ಸಾಲಿನಲ್ಲಿಲ್ಲದ್ದು ನಿರಾಕರಿಸುವಂತಾಯ್ತು. ಡಾಕ್ಟರ್ಸ್ ತಮ್ಮದೇ ವೃತ್ತಿಯವರನ್ನು ವಿವಾಹವಾಗುವ ಅಪೇಕ್ಷೆ ಹೊಂದಿದವರೇ ಜಾಸ್ತಿ. ಒಬ್ಬಾತ ಸ್ವಂತ ನರ್ಸಿಂಗ್ ಹೋಂ ಗೆ ಬೇಡಿಕೆ ಇಟ್ಟಿದ್ದ. . ಲೀನಾ ಮತ್ತು ನವೀನನ ನಿಶ್ಚಿತಾರ್ಥ ಮಾಡಿ ಮುಗಿಸಿಬಿಡೋಣ; ಅಲ್ಲದೆ ವಿವಾಹವನ್ನೂ ಶೀಘ್ರ ಮಾಡಿ ಸೊಸೆಯನ್ನು ಕಳಿಸಿಕೊಡಿ ಎಂಬ ಅಪೇಕ್ಷೆ ಬಂತು. ಶ್ರೀನಿವಾಸ್ ಅವರಿಗೆ ನಿಶ್ಚಯವಾದ ಮದುವೆಯ ನಿಶ್ಚಿತಾರ್ಥ ಮಾಡಿಬಿದುವ ಉತ್ಸಾಹ. ಅದೆಷ್ಟು ಕಡೆಗಳಲ್ಲಿ ಅಕ್ಕನನ್ನು ಬಿಟ್ಟು ತಂಗಿಗೆ ಆಗುತ್ತದೆ; ಹಾಗೆಂದು ತಾವು ಉತ್ತಮ ಸಂಬಂಧ ಕೂಡಿ ಬಂದರೆ ಮೈನಾಳದು ಮುಗಿಸಿಬಿಡುವುದೇ ತಾನೇ? ಅಂದು ಕಾಲೇಜಿಂದ ಬರ್ತಿದ್ದ ಲೀನಾವನ್ನು ಕಾಯುತ್ತಿದ್ದ ನವೀನ ಹೊರಗೆ ಸುತ್ತಾಡಿ ರೆಸ್ಟುರಾಕ್ಕೆ ಕರೆದೊಯ್ದ. ನಗು ನಗುತ್ತ ಒಳಗೆ ಬಂದು ಕುಳಿತ ಜೋಡಿಯನ್ನು ಅವಲೋಕಿಸಿದ ಕಣ್ಣುಗಳಲ್ಲಿ ಮೈನಾಳೂ ಇದ್ದಳು. ಅರೆಕ್ಷಣ ಅವನಿಂಡ ಕಣ್ಣು ತೆಗೆಯಲಾಗಲಿಲ್ಲ. ಅದೆಂಥ ಪರ್ಸನಾಲಿಟಿ! ಹ್ಯಾಂಡ್ ಸಂ. ಪೆದ್ದಿ ಹಾಗಿರುವ ಲೀನಾಗೆ ಇವನಂಥ ಮನ್ಮಥ ಪತಿಯಾ? ಅಸೂಯೆ ಭುಗಿಲೆದ್ದಿತು. ಅವರು ಇತ್ತ ನೋಡದ ಕಾರಣ ಗೊತ್ತಾಗಲಿಲ್ಲ. ಮೈನಾ ಜೊತೆಗೆ ಇದ್ದ ಅವಳ ಅವಳ ಫ್ರೆಂಡ್ ಹೇಳಿದ. ” ನಮ್ಮ ಸರ್ ಅವರು. ನಾನು ಬಿ. ಇ. ಗೆ ಸೇರಿದಾಗಿಂದ ಅವರೇ ಪ್ರಾಧ್ಯಾಪಕರು. ತುಂಬಾ ಚೆನ್ನಾಗಿ ಕ್ಲಾಸ್ ಹ್ಯಾಂಡಲ್ ಮಾಡ್ತಿದ್ದರು. ನಿಂಗೊತ್ತಾ ಚೆಸ್ ಆಟದಲ್ಲಿ ಅವರಿಗೆ ಸರಿಗಟ್ಟುವವರೆ ಇಲ್ಲ. ಅವರಿಗೇಕೋ ಟೀಚಿಂಗ್ ನಲ್ಲಿ ಆಸಕ್ತಿ ತಗ್ಗಿ ಬ್ಯಾಂಕಿಂಗ್ ಆಯ್ಕೆ ಮಾಡಿ ಅದರಲ್ಲಿ ಕೆಲಸ ಮಾಡ್ತಿದ್ದಾರೆ. ಮದುವೆ ನಿಶ್ಚಯ ಆಗಿದೆ ಅಂತ ತಮ್ಮ ಹೇಳ್ತಿದ್ದ. ಪೇರ್ ಚೆನ್ನಾಗಿದೆ ಅಲ್ವಾ?”
ಅವನು ಹೇಳಿದ್ದೇನು ಎಂಬುದು ಅರಿವೇ ಅಗಲಿಲ್ಲ. ಇವನು ಇಂಜಿನಿಯರಿಂಗ್ ಕಾಲೇಜು ಪ್ರಾಧ್ಯಾಪಕನಾಗಬೇಕಾದರೆ ಎಂ. ಟೆಕ್ ಮುಗಿಸಿರಲೇಬೇಕು. ಅದೆಷ್ಟು ಎದ್ದು ಕಾಣಿಸ್ತಿದ್ದ. ಹಾಗಾದರೆ ಬ್ಯಾಂಕ್ ಕ್ಲರ್ಕ್ ಎಂದು ತಾನು ತಪ್ಪಾಗಿ ಅರ್ಥೈಸಿ ನಿರಾಕರಿಸಿದೆ. ಆಫೀಸರ್ ಅಂದನಲ್ಲ ರಾಕೇಶ್. ತನಗೆಂದು ತೀರ್ಮಾನವಾಗಿದ್ದವ ಈತ. ಲೀನಾ ಅನಾಯಾಸವಾಗಿ ಹೊಡ್ಕೊಂಡು ಬಿಟ್ಲಲ್ಲ. ಅನ್ಯಾಯ ಇದು. ಅಪ್ಪ, ಅಮ್ಮನೂ ಮೋಸ ಮಾಡಿದರು ತನಗೆ. ಕೇಳಬೇಕು; ವಿಚಾರಿಸಬೇಕು. ಆದ ಅನ್ಯಾಯ ಸರಿಪಡಿಸದೆ ಇದ್ದರೆ ತಾನು ಮೈನಾ ಅಲ್ಲವೇಅಲ್ಲ.
ಮನೆ ತಲುಪಿದವಳೇ ಮೈನಾ ಲೀನಾವನ್ನು ಹಿಗ್ಗಾಮುಗ್ಗಾ ನಿಂದಿಸಿ ಜಗಳ ತೆಗೆದಳು. ವಿಚಾರಿಸಲು ಬಂದ ಅಮ್ಮನನ್ನು ದಾಕ್ಷಿಣ್ಯವೇ ಇಲ್ಲದೆ ಛೀಮಾರಿ ಹಾಕಿದಳು. ಲೀನಾ ಅವಳ ಕೂಗಾಟ, ಬೈಗಳು ಕೇಳಲಾಗದೆ ಅತ್ತತ್ತು ರೂಮು ಸೇರಿ ಕಂಬನಿ ಹರಿಸಿದಳು. ಮನೆ ಯುದ್ಧಭೂಮಿಯಾದುದು ಶ್ರೀನಿವಾಸ್ ಗೆ ಗೊತ್ತಾದುದು ನವ್ಯಾ ಫೋನು ಮಾಡಿ ತಿಳಿಸಿದಾಗಲೆ. ಮೈನಾ ಅಪ್ಪನ ಜೊತೆ ಸಮಾಧಾನವಾಗಿ ಮಾತಾಡಲೂ ತಯಾರಿಲ್ಲದಾಗ ರೋಸಿದ ಅವರು ಅಂದರು. ” ನಿನಗಾಗಿ ಬಂದ ವಿವಾಹ ಸಂಬಂಧ ಅದು ಎನ್ನುವುದು ಮಾತ್ರಾ ನಿಜ. ಅವರೆಲ್ಲ ಬಂದಾಗ ನೀನು ಲಾಸ್ಯ ಮನೆಗೆ ಹೋಗಿ ಕೂತವಳು. ಲೀನಾ ಕರೆದಾಗ ಬರಲಿಲ್ಲ. ಅಪ್ಪ. ಅಮ್ಮನಿಗಾಗುವ ಅಪಮಾನ ನೀನು ಲೆಕ್ಕಿಸಲಿಲ್ಲ. ಲೀನಾ ನಮ್ಮ ಮರ್ಯಾದೆ ಉಳಿಸಿದವಳು. ನವೀನ ಅವಳನ್ನು ಸಮ್ಪೂರ್ಣವಾಗಿ ಮೆಚ್ಚಿಯೇ ಸಮ್ಮತಿಸಿದ. ಅವನು ಹೇಳಿದಾಗಲೆ ನಮಗೆ ಅವನು ಇಂಜಿನಿಯರಿಂಗ್ ನಲ್ಲಿ ಮಾಸ್ಟರ್ಸ್ ಡಿಗ್ರಿ ಅಂತ ಗೊತ್ತಾದ್ದು. ನೀನು ಏನಂದೆ- ಜುಜುಬಿ ಗುಮಾಸ್ತರನ್ನು ಒಪ್ಪಲಾರೆ ಅಂತ ಹೇಳಿದೆ. ಲೀನಾ ಆಗಬಹುದು ಅಂತ ಹೇಳಿದ ಮೇಲೇ ಅವನೇ ಅವಳಿಗೆ ಅದೆಲ್ಲ ಹೇಳಿದ್ದ. ಕಾಸಿಗೊಂದು; ಕೊಸರಿಗೆರಡು ನವೀನನಂಥವರು ಅಂತ ಲೀನಾ ಎದುರಿಗೇ ಹೀಯಾಳಿಸಿದ ನಿನಗೆ ಇದೀಗ ಅವನ ಮೇಲೆ ಹಂಬಲವ್ಯಾಕೆ? ತಂಗಿಗೆ ನಿಶ್ಚಯವಾದ ವರ. ವಾರದಲ್ಲಿ ಎಂಗೇಜ್ ಮೆಂಟ್ ನಡೆಸುತ್ತೇವೆ. ವಿವಾಹವೂ ಬೇಗ ಮಾಡಿಕೊಡಿ ಅಂತ ಕೇಳಿದ್ದಾರೆ. ಸಂತೋಷವಾಗಿ ಭಾಗವಹಿಸುವ ಮನಸ್ಸು ಬೆಳೆಸಿಕೋ. ಇನ್ನೇನು ನಿನ್ನ ಕೋರ್ಸ್ ಮುಗೀತಾ ಬಂತು. ಹೆತ್ತವರಾಗಿ ನಮ್ಮ ಶಕ್ತಿ ಇದ್ದ ಮಟ್ಟಿಗೆ ಉತ್ತಮ ಸಂಬಂಧ ಹುಡುಕಿ ಮಾಡಿಬಿಡುವ ಜವಾಬ್ದಾರಿ ನಮ್ಮದು. ಸುಮ್ಮನೆ ನಿಷ್ಟುರ ಮಾಡಿ, ಅವಳನ್ನು ಅಂದು ಆಡಿ ಮಾಡಿ ಕೀಳಾಗಬಾರದು. ನಮಗೆ ನೀವು ಮೂವರು ಒಂದೇ ಅಲ್ವಾ?”
ನವೀನನನ್ನು ನಿರಾಕರಿಸಬಾರದಿತ್ತು ತಾನು ಎನ್ನುವ ನೋವು ಹೃದಯದಲ್ಲಿ ಆಳವಾಗಿ ಮೂಡಿಸಿದ ಗಾಯದ ಯಾತನೆ ಮಾಯುವ ನೋವಲ್ಲ ಎನ್ನುವುದು ಸ್ಪಷ್ಟವಾಗಿ ಅರ್ಥವಾಯಿತು ಮೈನಾಳಿಗೆ.
-ಕೃಷ್ಣವೇಣಿ ಕಿದೂರ್.