ಪಂಜು ಯೂಟ್ಯೂಬ್‌ ಚಾನಲ್

ಡಾ.ಮಹೇಂದ್ರ ಎಸ್ ತೆಲಗರಹಳ್ಳಿಯವರ ಒಂದು ಬೆಸ್ಟ್‌ ಕವಿತೆ

ಪುಸ್ತಕ ರೂಪದಲ್ಲಿ ಪ್ರಕಟಗೊಂಡಿರುವ ಕನ್ನಡದ ಉತ್ತಮ ಕವಿತೆಗಳನ್ನು ಓದುಗರಿಗೆ ತಲುಪಿಸುವ ಒಂದು ಪ್ರಯತ್ನ ಇದು. ಈ ಪೋಸ್ಟ್‌ ನಲ್ಲಿ ಕವಿತೆ, ಯೂಟ್ಯೂಬ್‌ ನಲ್ಲಿ ಪ್ರಕಟಗೊಂಡಿರುವ ಕವಿತೆಯ ವಾಚನದ ಲಿಂಕ್ ಮತ್ತು ಪುಸ್ತಕ ದೊರೆಯುವ ವಿವರಗಳನ್ನು ನೀಡಲಾಗಿದೆ. ಡಾ. ಮಹೇಂದ್ರ ಎಸ್.‌ ತೆಲಗರಹಳ್ಳಿಯವರ ಈ ಕವಿತೆ ನಿಮಗೆ ಇಷ್ಟವಾದರೆ ಅವರ ಕೃತಿ “ಬೇವರ್ಸಿಯ ಬಯೋಡೇಟಾ”ದ ಪ್ರತಿಗಳಿಗಾಗಿ ಅವರ ಮೊಬೈಲ್‌ ಸಂಖ್ಯೆ: 8431110644 ಅನ್ನು ಸಂಪರ್ಕಿಸಿ. ಪುಸ್ತಕದ ಬೆಲೆ ಕೇವಲ 80/- ರೂಪಾಯಿ ಮಾತ್ರ. ದುಡ್ಡು ಇಲ್ಲ ಅಂದ್ರೂ ಓದೋ ಆಸಕ್ತಿ ಇರೋರಿಗೆ ಡಾ. ಮಹೇಂದ್ರರವರು ಪುಸ್ತಕವನ್ನು ಉಚಿತವಾಗಿಯೂ ನೀಡಲು ಸಿದ್ಧರಿದ್ದಾರೆ.

ಅಪ್ಪ ನೀನಿರಬೇಕಿತ್ತು:

ನಿನ್ನೆ ಅಪ್ಪ ಉಳುತ್ತಿದ್ದ
ಜೋಡಿ ಎತ್ತಿನ ಬಾಲ ತಿವಿಯುತ್ತ
ಅವನ ಮೈ ಬೆವರಿನ ಗ್ರಂಥಿಗಳೇ
ನಾಚಿ ಮಳೆಗರೆಯುವ ಹಾಗೆ

ಯಾವುದಕ್ಕೂ ಅಂಜದ ಆಸಾಮಿ
ಅವನು ಉತ್ತಿ ಬೆಳೆದ ನೆಲದೆಲ್ಲೆಲ್ಲಾ
ಭೂ ತಾಯಿ ತಕರಾರು ಮಾಡದೆ
ಮುತ್ತಿನ ಬೆಳೆಕೊಟ್ಟು
ಸುಮ್ಮನೆ ಗಿರಕಿ ಹೊಡೆಯುತ್ತಿದ್ದಳು

ಸುಗ್ಗಿ ಕಾಲದಲ್ಲಿ ಅಪ್ಪ
ಎಗ್ಗಿಲ್ಲದೆ- ಸಿಗ್ಗಿಲ್ಲದೆ ಕಣದ ತುಂಬಾ
ರಾಶಿಯ ಮೊಗ್ಗು ಅರಳಿಸುತ್ತಿದ್ದ
ಥೇಟು ಅಬ್ರಾಕಾ-ಡಬ್ರಾದ ಮಾಂತ್ರಿಕನಂತೆ

ಊರ ಸರೀಕರ ಮುಂದೆ
ತಲೆ ಎತ್ತಿ ಬದುಕುತ್ತಿದ್ದ
ಭೂ-ತಾಯಿಯ ಹೀಯಾಳಿಸುವವರ
ಹಿಂದು-ಮುಂದು ನೋಡದೆ ತದುಕುತ್ತಿದ್ದ.

ಇಂದು ಅಪ್ಪನಿಲ್ಲ
ಅವನೇ ಉತ್ತ ಜಾಗದಲ್ಲಿ
ಅವನನ್ನು ಹೂತಿದ್ದೇನೆ

ಭೂ ತಾಯಿಯ ಎದೆಬಗೆದು
ಹಡಗಿಗೆ ತುಂಬಿ ದೂರದೂರಿಗೆ
ಸಾಗಿಸುವ ಜನ ನನ್ನೂರಿನಲ್ಲೀಗ
ನಾಯಿಕೊಡೆಗಳಂತೆ ಹುಟ್ಟಿಕೊಂಡಿದ್ದಾರೆ

ಅವರ ಗುಂಡಿಯನ್ನು
ಅವರೇ ತೋಡಿಕೊಳ್ಳಲು
ಎಷ್ಟೊಂದು ಅವಸರ?
ಹಾಳು ಮನೆ ಕಂಪನಿಯ
ಯಜಮಾನನ ಕೈ
ಬೆರಳುಗಳಿಗೆಲ್ಲಾ ಚಿನ್ನದ ಉಂಗುರ

ಇವತ್ತು ಅಪ್ಪ ಇದ್ದಿದ್ದರೆ
ಅದೇನು ಮಾಡುತ್ತಿದ್ದನೋ?
ಆದರೆ ಗೋರಿಯಲ್ಲೇ ಮಲಗಿ
ಅತ್ತ ಅಪ್ಪನ ಆತ್ಮದ ಕಣ್ಣೀರು
ಅವನ ತಲೆಯ ಭಾಗದಲ್ಲೊಂದು
ಮಲ್ಲಿಗೆ ಹೂವ ಅರಳಿಸಿದೆ

ಆ ಮಲ್ಲಿಗೆಯ ಆಯಸ್ಸು
ಅದೆಷ್ಟು ದಿನವೋ?
ಎಲ್ಲವೂ ಭೂ ತಾಯಿಯ
ಎದೆ ಬಗೆಯುವ ಯಂತ್ರದ
ಕೈಯೊಳು ಅಡಗಿದೆ.
-ಡಾ.ಮಹೇಂದ್ರ ಎಸ್ ತೆಲಗರಹಳ್ಳಿ


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *