ಮೊದಲು ನಿನ್ನನ್ನು ಸರಿಯಾಗಿ ಬೈದು ಬಿಡಬೇಕು ಅನ್ನುವಷ್ಟು ಕೋಪ ಉಕ್ಕಿ ಬಂದರೂ ನನ್ನನ್ನು ನಾನು ನಿಯಂತ್ರಿಸಿಕೊಳ್ಳುತ್ತೇನೆ. ಅದೆಷ್ಟು ಬೈದರೂ ಅದು ನನ್ನ ಮೂಕವೇದನೆಗಷ್ಟೆ ಸಮಾ.ಈ ಮೌನಕ್ಕೂ ನಿನ್ನದೇ ಗುರುತು. ಅದಕ್ಕೆ ಸುಮ್ಮನಿದ್ದು ಬಿಡುತ್ತೇನೆ. ನಿನ್ನ ನೆನಪುಗಳನ್ನು ಮೂಟೆಕಟ್ಟಿ ಮೂಲೆಗೆಸದರೂ ನೀನು ಕಾಡುವುದನ್ನು ನಿಲ್ಲಿಸುವುದಿಲ್ಲ. ಅದೆಂತಹ ಹಠಮಾರಿ ನಿನ್ನ ನೆನಪುಗಳು. ಕಾಡಿಸಿ ಪೀಡಿಸಿ ಗೊಂದಲವಾಗಿಸುತ್ತದೆ. ನೀನು ಮತ್ತೆ ಬರಲಾರೆ ಅನ್ನುವ ಸತ್ಯವನ್ನು ಯಾವುದೇ ಕಾರಣಕ್ಕೂ ಈ ಮನಸ್ಸು ಒಪ್ಪುತ್ತಿಲ್ಲ. ನಿನ್ನ ತಲುಪುವ ಎಲ್ಲ ಮಾರ್ಗಗಳು ಮುಚ್ಚಿ ಹೋಗಿವೆ. ಆದರೂ ಅಲ್ಲಿ ಎಲ್ಲಾದರೂ ಸ್ವಲ್ಪವೇ ಸ್ವಲ್ಪ ಬೆಳಕಿನ ಕಿರಣವನ್ನು ಹುಡುಕುವ ಪ್ರಯತ್ನವನ್ನು ಮಾಡಿ ಸೋಲುತ್ತೇನೆ. ಒಂದು ಸಲವಾದರೂ ನನ್ನತ್ತ ತಿರುಗಿ ನೋಡಬೇಕಿತ್ತು ನೀನು. ನಿನ್ನ ಗೈರುಹಾಜರಿಯಲ್ಲಿ ನನ್ನ ಬದುಕು ಹೇಗಿದೆ ಎಂದು. ಬಹುಶಃ ಅದರ ಯೋಚನೆಯೂ ನಿನ್ನರಿವಿಗೆ ಬರಲಾರದು ಬಿಡು.
ಆದರೂ ನೀನೆಂಬ ನಿನ್ನನ್ನು ಅಷ್ಟು ಸುಲಭವಾಗಿ ಮನಸ್ಸಿನಿಂದ ದೂರ ಮಾಡಲು ಆಗುತ್ತಿಲ್ಲ. ನೀನು ಬಿಟ್ಟು ಹೋದ ನೆನಪುಗಳ ಹೊರತು ನನ್ನ ಬಳಿಯಲ್ಲಿ ನಿನ್ನೆದೆನ್ನುವುದು ಯಾವುದು ಉಳಿದಿಲ್ಲ. ನಡೆದು ಬಂದ ದಾರಿಯತ್ತ ನೋಡಿದರೂ ದಾರಿಯೇ ಸವೆದು ಹೆಜ್ಜೆ ಗುರುತುಗಳನ್ನು ಅಳಿಸಿ ಹಾಕಿದೆ. ಅದೆಷ್ಟು ಹುಡುಕಿದರೂ ಕಣ್ಣೀರಿನ ಬಿಂಬದೊಳಗೆ ಎಲ್ಲವೂ ಮಸುಕಾಗಿ ಕಾಣುತ್ತದೆ.
ಏನಾಗುತ್ತಿದೆ ಹೀಗೇಕೆ ನೀನು ಕಾಡುತ್ತಿರುವೆ ಎಂದು ಮನಸ್ಸನೇ ಪ್ರಶ್ನಿಸುತ್ತೇನೆ. ಅಲ್ಲೂ ಉತ್ತರವಿಲ್ಲದ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದು ಹೋಗುತ್ತದೆ. ಬದುಕು ತೀರ ಗೋಜಲಾಗಿ ಬಿಡುತ್ತದೆ. ಅಷ್ಟೊಂದು ಹಚ್ಚಿಕೊಂಡು ಬಿಟ್ಟ ನಿನ್ನಲ್ಲಿ ಅದೇನಿದೆ.? ಬಹುಶಃ ಉತ್ತರಕ್ಕೆ ನೀನೇ ಬರಬೇಕಾದಿತೇನೋ.? ನೀನೇ ಇಲ್ಲದ ಮೇಲೆ ಬದುಕು ಖಾಲಿಯಾಗಿದೆ. ಇನ್ನೇನಿದ್ದರೂ ಅಲ್ಲಿ ನೀನು ಇದ್ದಂತೆ ಅನಿಸುವುದಿಲ್ಲ. ನನ್ನ ಭಾವನೆಗಳೆಲ್ಲ ಗುಜುರಿಯಾದಾಗ ಮನಸ್ಸು ಖಿನ್ನವಾಗುತ್ತದೆ. ನಿನ್ನ ನೆನಪುಗಳ ದಾಳಿ ಅದೆಷ್ಟು ವೇಗವಾಗಿರುತ್ತದೆ ಅನ್ನುವ ಕಿಂಚಿತ್ತು ಕಲ್ಪನೆಯೂ ನಿನಗಿರಲಾರದು.ಭಾವನೆಗಳನ್ನು ಬಚ್ಚಿಟ್ಟು ಬದುಕುವುದು ಅದೆಷ್ಟು ಕಷ್ಟ. ಇದರಲ್ಲಿ ನಿನ್ನ ತಪ್ಪಿಲ್ಲ ಬಿಡು. ನಿನ್ನ ಜೊತೆ ಬದುಕುವ ಭಾಗ್ಯವನ್ನು ಒಡಲಲ್ಲಿ ಹೊತ್ತು ಬರಬೇಕಿತ್ತು ನಾನು.
ಇಡೀ “ಬದುಕ”ಲ್ಲಿ ನನಗಾಗಿ ನಾನು ಬೇಡಿದರೂ ಸಿಗಲಾರದ “ವರ” ನೀನು. ನಿನ್ನ ಜೊತೆ ಇಟ್ಟ ಹೆಜ್ಜೆಗಳ ನೆನಪಷ್ಟೆ ಬದುಕಿಗೆ ಉಳಿದ ಸಾರ್ಥಕ ಕ್ಷಣಗಳು. ಅದೆಲ್ಲವೂ ಬದುಕಿಗೆ ಸಿಕ್ಕ ಅದ್ಭುತ ನೆನಪುಗಳು. ನಿನ್ನನ್ನು ಕೊನೆವರೆಗೂ ಉಳಿಸುವ ಯೋಗವೊಂದು ಬಿಟ್ಟು ಮತ್ತೆಲ್ಲವನ್ನೂ ನಾನು ಪಡೆದು ಬಂದಿದ್ದೆ ಅನಿಸುತ್ತೆ. ನನ್ನದೆನ್ನುವ ಬದುಕನ್ನು ನಿನ್ನ ಹೃದಯದೂರಲ್ಲಿ ಬದುಕಬೇಕು ಅನ್ನುವ ಮಹದಾಸೆಯೊಂದು ಬದುಕಲ್ಲಿ ಹಾಗೇ ಉಳಿದು ಹೋಯಿತು. ಈ ಬದುಕು ನನಗೇನು ಕೊಡದಿದ್ದರೂ ಬೇಜಾರಿಲ್ಲ. ನಾನು ಕೇಳೋದು ನಿನ್ನ ನೆನಪಿನಲ್ಲಿ ನನ್ನ ಹೆಸರೊಂದು ಮಾಸದಿರಲಿ. ಆ ನಿನ್ನ ಗಂಭೀರತೆಯಲ್ಲೂ ನನ್ನ ನೆನಪು ಸುಳಿದಾಡಿದಾಗ ಹುಸಿನಗುವೊಂದು ಹಾಸಿ ಹೋಗಲಿ. ಇಂತಹ ಕನಸುಗಳನ್ನೇ ಪ್ರೀತಿ ಅನ್ನುವುದಾದರೇ ಅದು ನನಗೆ ಸಮ್ಮತವೇ..
ನಾನು ಬದುಕುವ ರೀತಿ ನಿನಗೂ ಅರಿವಿದೆ. ಈ ಬದುಕಿಗೆ ನನ್ನದೇ ಆದ ನಿಯಮಗಳಿವೆ. ನನಗೆ ನಾನೇ ಹಾಕಿಕೊಂಡ ಶರತ್ತುಗಳಿವೆ. ನಿನ್ನನ್ನು ತಲುಪಲೇಬಾರದು ಅನ್ನುವ ನಿರ್ಬಂಧಗಳಿವೆ. ಪ್ರೀತಿಸಿದ್ದೀನಿ ಆರಾಧಿಸಿದ್ದೀನಿ.ಆದರೆ ಯಾವತ್ತು ನೀನೆ ಬೇಕು ಅಂತ ಹಂಬಲಿಸಿಲ್ಲ.ನಾನು ಕಾಣುವ ಕನಸುಗಳಿಗೆ ಜೀವ ತುಂಬಲು ನಿನ್ನ ಸಾಂಗತ್ಯವೇ ಬೇಕು. ಅದಿಲ್ಲದೇ ಹೋದರೆ ಈ ಕನಸಿಗಾದರೂ ಅರ್ಥ ಏನಿದೆ. ಪ್ರೀತಿಯೆಂದರೆ ನಾನು ಮಾಡುವ ದೇವರ ಪೂಜೆಯಂತೆ ಅಲ್ಲಿ ನಿಯಮಗಳಿಲ್ಲ. ಮಂತ್ರಘೋಷಗಳಿಲ್ಲ. ಅಲ್ಲಿರುವುದು ಶುದ್ಧಾನು ಶುದ್ಧ ಭಾವವಷ್ಟೆ. ಪ್ರೀತಿ ಬರಿ ಸುಖವನ್ನೆ ಕೊಡುತ್ತದೆ ಅನ್ನೋ ಕಲ್ಪನೆಯೆಲ್ಲ ತಲೆಕೆಳಗಾಗಿದೆ. ಒಲವು ಒಲಿಯುವವರೆಗಷ್ಟೆ ನಂದನ. ಮತ್ತೆಲ್ಲವೂ ನೋವಿನದೇ ರೋದನ. ನಾನು ಬಯಸಿದ್ದು ನನಗೆ ಸಿಗಲಾರದು ಅಂದಾಗ ಅದರ ಬೆನ್ನತ್ತಿ ಹೋಗುವ ಮನಸ್ಸು ನನ್ನದಲ್ಲ. ನಿನ್ನ ನೆನಪಿನ ತಂಗಾಳಿಗೆ ಮುಖವೊಡ್ದಿ ಕುಳಿತರೆ ಸಾಕು ಬದುಕು ಉಲ್ಲಾಸವಾಗಿ ಬಿಡುತ್ತದೆ.
ನಿನಗಾಗಿ ಕಾಯುವ ಈ ಕಾಯುವಿಕೆಯಲ್ಲಿ ಬೇಜಾರಿಲ್ಲ.ಹಾಯಾಗಿ ಕಾಯುವಂತೆ ಮಾಡುವ ನಿನ್ನೊಲವು ಬಳಿಯಲ್ಲೇ ಇರುವಾಗ ಇನ್ನೇನೂ ಚಿಂತೆ. ನಿನ್ನ ನೋವಿಗೆ ನಿನ್ನ ಖುಷಿಗೆ ನಾನು ಇಲ್ಲಿಂದಲೇ ದನಿಯಾಗುತ್ತೇನೆ. ನನ್ನಂತೆಯೇ ನೀನು ವೇದನೆಯ ಬೇಗೆಯನ್ನು ಸಹಿಸದಿರು. ನಾ ಬೇಡುವ ಪ್ರತಿ ಪ್ರಾರ್ಥನೆಯಲ್ಲೂ ನಿನ್ನದೇ ಹೆಸರಿದೆ. ಮನಸ್ಸು ಮಂಕಾದಾಗಲೂ ಖಾಲಿತನವೇ ಕಾಡುತ್ತದೆ. ಏನೂ ಮಾಡಲಿ ನಿನ್ನ ತೀವ್ರತೆಯೇ ಅಂಥದ್ದು. ನನ್ನ ಸಾವಿರ ಕವಿತೆಗಳ ಸಾಲಿನಲ್ಲೂ ನೀನಿರುತ್ತೀಯಾ. ಅದಕ್ಕೆ ಇರಬೇಕು ನನ್ನ ಖುಷಿಗೆ ಕಾರಣಗಳೇ ಬೇಕಿಲ್ಲ. ನನ್ನ ಮಟ್ಟಿಗೆ ಖುಷಿಯೆಂದರೆ ಅದು ನೀನೇ. ಅದೆಷ್ಟೋ ಬಾರಿ ಅಂದುಕೊಳ್ಳುತ್ತೇನೆ. ನಿನ್ನ ಪ್ರೀತಿಯೇ ಸಿಗದ ಈ ಜನ್ಮಕ್ಕೆ ಅರ್ಥವಾದರೂ ಏನಿರುತ್ತದೆ ಅಂತ. ಆದರೂ ನಿನ್ನ ಜೊತೆ ಯಾವುದೇ ತಕರಾರುಗಳಿಲ್ಲ. ಅದಕ್ಕೆ ಇನ್ನಷ್ಟು ಒಲವಾಗುತ್ತದೆ. ನನ್ನ ಭಾವಗಳ ಸಾರ ನಿನಗರ್ಥವಾದರೆ ಸಾಕು. ಸೋಲಿನಲ್ಲೂ ಗೆಲುವಾಗಿರುತ್ತೇನೆ.
ಒಡಲಾಳದ ಒಲವಿಗೆ ನಿನ್ನ ನೆನಪುಗಳ ಬೆಚ್ಚನೆಯ ಸ್ಪರ್ಶ ಹಿತವೇ ತಾನೇ.. ನಿನ್ನ ಪ್ರೀತಿಸಿಕೊಂಡ ದಿನದಿಂದಲೇ ನೀನು ಜೀವದೊಳಗೆ ಜಮ ಆಗಿದ್ದೀಯ. ಕಾರಣಗಳೆ ಇಲ್ಲದೆ ಪ್ರೀತಿಸುವಾಗ ಒಂದಷ್ಟು ಖುಷಿಗಳನ್ನು ನಾನಷ್ಟೇ ಅನುಭವಿಸುತ್ತೇನೆ.ನನ್ನ ಮೌನದ ಮಾತು, ತುಟಿಯ ಕಂಪನ, ಕಣ್ಣಿನ ಕೋರಿಕೆ , ಇವೆಲ್ಲ ನಿನಗಷ್ಟೆ ಅರಿವಾದರೆ ಸಾಕು. ಬೊಗಸೆಯಷ್ಟು ಪ್ರೀತಿಯನ್ನು ಬೇಡುವ ಈ ಕಂಗಳ ನೋವು ನಿನ್ನರಿವಿಗೆ ಬಂದ ದಿನ ನೇರವಾಗಿ ಬಂದು ನನ್ನನ್ನು ಅಪ್ಪಿಬಿಡು. ನಿನ್ನ ಉಸಿರಿನ ವೇಗಕ್ಕೆ ಮೈ ಮರೆತು ನಿನ್ನೊಳಗೆ ಒಂದಾಗಬೇಕು. ಬಿಸಿಯುಸಿರಿಗೆ ವಿರಹವೂ ಕರಗಿ ಹೋಗಬೇಕು. ಇಂತಹ ಹಸಿ ಹಸಿ ಕನಸುಗಳನ್ನು ನಿನ್ನ ಜೊತೆ ಹಂಚಿಕೊಳ್ಳುವ ಆಸೆಗಾಗಿ ಮುಸ್ಸಂಜೆಯ ಆ ತಂಪಿಗೂ ನಿನ್ನ ಹೆಸರಿಟ್ಟು ಕಾಯುತ್ತಿದ್ದೇನೆ…
–ಪೂಜಾ ಗುಜರನ್, ಮಂಗಳೂರು.