ಯುದ್ದಕಾಗುವಷ್ಟು…
ಧರ್ಮದ ಜಾಗರಣೆಯಲ್ಲಿ ಯುದ್ದಕಾಗುವಷ್ಟು ಮದ್ದಿದೆ
ಆ ಫಕೀರನ ಜೋಳಿಗೆಯಲ್ಲಿ
ಜಗಕೆ ಹಂಚುವಷ್ಟು ಪ್ರೀತಿಯ ಧಾರಾಳತನ ಶಾಂತತೆ
ಸಂನ್ಯಾಸಿ ಜೋಳಿಗೆಯಲ್ಲಿದೆ ಪಡೆಯುವ ಮನಸುಗಳ ಬರವಿದೆ…!
ಇಂದೂ ನಾಳೆಗೂ ನಾಡಿದ್ದೂ ಹೇಳಹೆಸರಿಲ್ಲದೆ ಅಳಿದು ಹೋಗುವ
ದುಷ್ಟ ಬುದ್ದಿಯ ಗೀರುಗಳೆಷ್ಟು ಕುರುವುಗಳಷ್ಟು
ಆಕ್ರಂದನ ಮೊರೆತಗಳಷ್ಟು
ಯುದ್ದಕ್ಕೆ ಶಾಂತಿಯ ಹಂಗಿಲ್ಲ
ಪ್ರೀತಿಗೆ ಮಮತೆಗೆ ಗಡಿಯ ಹಂಗಿಲ್ಲ…!
ಆಯುಧ ತಾನೇ ಉತ್ಖನನ ಮಾಡಿದ್ದಾರೂ ಕೊಲ್ಲದೆ ಇರಲು ಸಾಧ್ಯವೇ
ನಿರಂತರವಾಗಿ ಅದರ ಬೆನ್ನು ನೇವರಿಸುತ್ತಾ ಮುದ್ದು ಮಾಡುತ್ತಾನೆ
ಯುದ್ಧದ ವ್ಯಸನಿ
ಅದೇ ಆಯುಧ ನಳಿಕೆಯ ತುದಿಯಲ್ಲಿ ಪಾರಿವಾಳ ಗೂಡು
ಕಟ್ಟಲಿ ಎಂದು ಕಾಯುತ್ತಾನೆ ಶಾಂತತೆ ವ್ಯಸನಿ
ಇಲ್ಲಿ ಇಬ್ಬರದು ಕನಸು
ಬಹುಷಃ ಜಗತ್ತು ಅಳಿದ ಮೇಲೆ ಇಬ್ಬರ ಕನಸು ನನಸಾಗಬಹುದೇನೋ..?
ಯುದ್ದದ ಹೆಮ್ಮಾರಿ ಮನುಷ್ಯ ಮೆದುಳು ಹೊಕ್ಕರೆ ಕುಲವೇ ಹಾಳು
ಶಾಂತಿ ಮತ್ತು ಯುದ್ಧ ಆ ಜನ್ಮ ವೈರಿಗಳಿರಬಹುದು
ಒಂದು ಇದ್ದಲ್ಲಿ ಇನ್ನೊಂದು ಇರುವುದಿಲ್ಲ…!
ಕೊಲ್ಲುಲು ಧರ್ಮದ ಹೆಸರಿನ ಹಣೆಪಟ್ಟಿ ಹಚ್ಚಿದರೆ
ಸಾಯಿವ ಜೀವಕ್ಕೆ ಪಾಪದ ಪುಣ್ಯದ ಲೆಕ್ಕಕ್ಕೆಬರುವುದಿಲ್ಲ
ಕೊಂದವರು ಸತ್ತವರು ಯಾರೂ ಶಾಶ್ವತವಲ್ಲ…!
ಆದರೂ
ಯುದ್ಧ ನಾಳೆಗಾಗಿ ತಾಲೀಮು ನಡೆಸುತ್ತಿದೆ
ಶಾಂತಿ ತನ್ನ ಅಸ್ತಿತ್ವವನ್ನು ಹುಡುಕಿಕೊಳ್ಳಲು ಹೆಣಗುತ್ತಿದೆ…!
–ವೃಶ್ಚಿಕಮುನಿ
ದೂರದ ಸಂಭಂದಿ
ಆಲದ ಮರದಡಿ ಆಡುತ್ತಿದ್ದೆ ಗೆಳೆಯರ ಜೊತೆ
ಕೂಗಿಕೊಂಡು ಬಂದಳು ನನ್ನಮ್ಮ ನಾನಿರೋ ಕಡೆ
ಸರ್ರನೆ ಶೆಟ್ಟರ ಅಂಗಡಿಗೆ ಹೋಗು
ಕಾಲ್ ಕೆಜಿ ಸಕ್ರೆ, ಟೀ ಸೊಪ್ಪು, ಬಿಸ್ಕತ್ತು ತಾ
ಅಪ್ಪನ ಹೆಸರಲ್ಲಿ ಸಾಲ ಬರೆಸು
ನೀನು ಎರಡು ರುಪಾಯಿಗೆ ತಗೋ ತಿನಿಸು ಎಂದಳು
ಶೆಟ್ಟರ ಮಗ ಅಂಗಡೀಲಿ ಆಯಾಗಿ ಕೂತಿದ್ದ
ಅಪ್ಪನ ಹೆಸರಲ್ಲಿ ಸಾಲ ಬೇಕು ಅಂದೆ
ಸಾಲ ಕೇಳಿ ಸಂಭಂದ ಕಳ್ಕೊಬೇಡಿ ಬೋರ್ಡ್ ನಗುತ್ತಿತ್ತು
ಯಾರಿಗೂ ಸಾಲ ಕೊಡೋದಿಲ್ಲ ಎಂದ ಶೆಟ್ರ ಮಗ
ಮೊದಲು ನಿನ್ನಪ್ಪನ ಹಳೆ ಸಾಲ ತೀರಿಸು
ಆಮೇಲೆ ಹೊಸ ಸಾಲ ಬರೆಸು ಎಂದ
ಅವಮಾನ, ಕೋಪದಲ್ಲೇ ಮನಕಡೆ ಹೊರಟೆ
ಮನೆಮುಂದೆ ಹೊಸ ಜೋಡುಗಳು ಕಂಡೆ
ಅಡುಗೆ ಮನೆಯ ಕಿಟಕಿಯಲ್ಲಿ ‘ಅಮ್ಮಾ’ ಎಂದು ಪಿಸುಗುಟ್ಟಿದೆ
ಕಿಟಕಿಯ ಆಚೆಗೆ ಕೈ ಚಾಚಿದಳು ಅಮ್ಮ
ಶೆಟ್ಟರ ಮಗ ಕೊಡಲಿಲ್ಲಮ್ಮ ಸಾಲ
ಸಾಲಕ್ಕೆ ಕಳಿಸ್ಬೇಡ ನನ್ನ ಇನ್ನೊಂದ್ ಸಲ ಎಂದೆ.
ಸೀರೆ ಸೆರಗನ್ನು ಸುತ್ತಿಕೊಂಡು ಹೊರಟಳು ದಪ್ಪ ಹೆಜ್ಜೆಯಲ್ಲಿ ಹೊರಗೆ
ಮನೆಯೊಳಗೆ ಕಣ್ಣು ಹಾಯಿಸಿದೆ ಬಾಗಿಲಿನ ಸಂದಿಯಲ್ಲಿ
ಹರೇ,ಬಾರೋ ಮಗ ಎಂದು ಕರೆದರು ದೂರದ ಸಂಭಂದಿ
ನಾನು ಸಂಭಂದಿಯ ತೋಳು ಸೇರುವಷ್ಟರಲ್ಲಿ, ಅಮ್ಮ ಅಡುಗೆ ಮನೆ ಸೇರಿದ್ದಳು
ಟೀ, ಬಿಸ್ಕತ್ತು ಕೊಟ್ಟಳು ಸಂಭಂದಿಗಳಿಗೆ
ನಾನೂ ನಾಲ್ಕು ಬಿಸ್ಕತ್ತು ಅದ್ದಿದೆ ಬಿಸಿಯಾದ ಟೀಗೆ
ಸಂಭಂದಿ ಎದ್ದರು ಖುರ್ಚಿಗಳಿಂದ ಹೊರಡಲು
ನನ್ನ ಜೇಬಿಗೆ ಇಟ್ಟರು ಹತ್ತು ರೂಪಾಯಿ ನೋಟು
ಅಯ್ಯೋ ರೂಢಿ ಮಾಡ್ಬೇಡಿ ಇದನೆಲ್ಲ ಅಂದಳು ಅಮ್ಮ
ಪರ್ವಾಗಿಲ್ಲ ಬಿಡಮ್ಮ… ಚೆನ್ನಾಗಿ ಓದು ಮಗ ಎಂದು ಹೊರಟರು ಸಂಬಂದಿ
ಶೆಟ್ಟರ ಅಂಗಡೀಲಿ ಇಟ್ಟಿದ್ದ ಕಂಬರ್ಕೆಟು (ಸಿಹಿ ತಿನಿಸು )
ಬೇಕೆಂದು ಕುಣಿತ್ತಿತ್ತು ಜೇಬಲಿದ್ದ ಹತ್ತು ರೂಪಾಯಿ ನೋಟು
ಅಂಗಡಿಗೆ ಹೋಗಿ, ಕೈ ತುಂಬಾ ಮೀಠಾಯಿ ತಗೊಂಡೆ
ಕಾಸು ಕೊಡೋಕೆ ಹೋದೆ… ಸಾಲ ಬೇಕಿದ್ರೆ ಬರೀತೀನಿ ಎಂದ ಶೆಟ್ರ ಮಗ
ಬ್ಯಾಡ ತಗೋ ಎಂದು ದುಡ್ಡು ಕೊಟ್ಟು ಮನೆಗೆ ಬಂದೆ
ಅಮ್ಮ ಒಪ್ಪಾರ ದಲ್ಲಿದ್ದ ಒಂಟಿ ಕಂಬಕ್ಕೆ ಹೊರಗಿ ಕೂತಿದ್ದಳು
ಅಮ್ಮನ ಬಾಯಿಗೆ ಮೀಠಾಯಿ ಇಟ್ಟೆ
ಅವಳ ತೊಡೆಮೇಲೆ ಮೀಠಾಯಿ ಚೀಪುತ್ತ ಮಲಗಿದೆ
ಮೀಠಾಯಿಯ ಸಿಹಿಯನ್ನು ಬಾಯಿ ಕಣ್ಮುಚ್ಚಿ ಸವಿಯುತ್ತಿತ್ತು
ಅಮ್ಮನ ಎದೆ ಬಡಿತ ನನ್ನ ಕಿವಿಗೆ ಕೇಳುತ್ತಿತ್ತು
ಮುಚ್ಚಿದ್ದ ನನ್ನ ಕಣ್ಣುಗಳ ಮೇಲೆ ನೀರು ಜಾರಿ ಬಿತ್ತು
ಕಣ್ ತೆರೆದಾಗ… ಅಮ್ಮನ ಓಲೆಗಳು ಕಳುವಾಗಿದ್ದವು
ಓಲೆಗಳು ಎಲ್ಲಮ್ಮ ಅಂದೆ?!!!!
ಕುಡಿದು ಇಟ್ಟಿದ್ದ ಲೋಟಗಳು ಎಲ್ಲವನ್ನು ಹೇಳುತ್ತಿದವು
ಕರಿ ಇರುವೆಗಳು ಲೋಟದಲ್ಲಿ ಉಳಿದಿದ್ದ ಟೀ ನೆಕ್ಕುತ್ತಿದ್ದವು
ಅಮ್ಮನ ಕಣ್ಣುಗಳು ಬಡತನ ನೆನೆದು ಬಿಕ್ಕುತ್ತಿದ್ದವು.
-ದಯಾನಂದ
ನಾನು ಹೊರಗಿನವನು
(ಸ್ಮಶಾನದಲ್ಲಿ ಮೂಡಿದ ಕವಿತೆ)
ಭೂಮಿ ಗರ್ಭದಲ್ಲಿ ಕೊರಡುಗಟ್ಟುವಂಥ
ಚಳಿಯಲ್ಲಿ; ಭೂತ ಕಾಲದ
ಆತ್ಮೀಯರು ಸುಟ್ಟು ಕರಕಲಾಗಿ
ಮತ್ತು ಒಂದಷ್ಟು ಮಂದಿ ಮಣ್ಣ
ಹೊದ್ದು ಮಲಗಿದ್ದಾರೆ;
ದಿರಿಸಿನ ಗೊಡವೆಯಿಲ್ಲದೆ
ಬೆತ್ತಲಾಗಿ ಮತ್ತು ನಿಶ್ಚೇಷ್ಟಿತವಾಗಿ!
ಮತ್ತೆ ಸೇರಿರುವ ಖುಷಿಯಲ್ಲಿ
ಲೋಕಾಭಿರಾಮವಾಗಿ ಮಾತಿಗಿಳಿದಿದ್ದಾರೆ;
ಊಳಿಡುತ್ತಾ,ಆಕಳಿಸುತ್ತಾ ಮಗ್ಗಲು ಬದಲಿಸಿದ್ದಾರೆ;
ಬದುಕಿದ್ದಾಗ ಸಿಗದ ಈರ್ಷ್ಯೆಗಾಗಿ ಹಪ ಹಪಿಸಿದ್ದಾರೆ;
ಮುಖವಾಡ ಧರಿಸುವ ಜನರಿಗೆ
ಪ್ರವೇಶ ನಿರಾಕರಿಸಿ ಅಷ್ಟ ದಿಗ್ಭಂಧನ ಹೂಡಿದ್ದಾರೆ!
ಗೆಲ್ಲುವ ಮತ್ತು ದುಡಿಯುವ
ಹರಕತ್ತು ಅವರಲ್ಲಿಲ್ಲ ಈಗ;
ಹೆಣ ಎಂಬ ಹೆಸರು ಬಂದಾಯ್ತು! ಇನ್ನು ನಿರುಮ್ಮುಳವಾಗಿ ಉಸಿರಾಡ್ತಾರೆ;
ತಾಯಿ ಮೊಗವ ಕಾಣದ ಹಾಲು ಗಲ್ಲದ ಮಕ್ಕಳು ಖಿಲ್ಲೆನ್ನುತ್ತಿವೆ
ನೆರೆ ಕೂದಲಿನ ಮುದುಕ ಮುದುಕಿಯರು ಕ್ಯಾಕರಿಸುತ್ತಿದ್ದಾರೆ;
ಪ್ರಾಯದಲ್ಲಿಯೇ ಕಮರಿ ಹೋದ ಜೀವಗಳು ಕೊರಗುತ್ತಿವೆ
ನೇಣು ಬಿಗಿದುಕೊಂಡ ಭಗ್ನ ಪ್ರೇಮಿ ಬಿಕ್ಕುತ್ತಿದ್ದಾನೆ;
ಆದರೆ ತುಸುವಾದರೂ ಕೇಳಬಾರದೆ?
ಇದೇನಾ ಸ್ಮಶಾನ ಮೌನ ಅಂದ್ರೆ?
ನನ್ನದೇ ಮನೆಯಲ್ಲಿ ಸಿಗದ
ಕೋಟಿ ಕೋಟಿ ವೆಚ್ಚದಲ್ಲಿ ನಿರ್ಮಿಸುವ ಸೌಧದಲ್ಲೂ ಕಾಣದ ಶಾಂತಿ ಇಲ್ಲಿದೆ!
ಬಣ್ಣ ಬಣ್ಣದ ಮಾತುಗಳನ್ನಾಡುವ ಜನ ಇಲ್ಲಿಲ್ಲವಲ್ಲ ಅದಕ್ಕಿರಬಹುದ?
ಇಲ್ಲಿಯ ಜನರ ನಾಲಿಗೆಯೂ ಸತ್ತು ಹೋಗಿದೆ ಪುಣ್ಯ!
ಒಳಗೆ ಕಾಲಿಡುವಾಗ ಇದ್ದ
ನಿಗಿ ನಿಗಿ ಬೆವರು ಈಗಿಲ್ಲ;
ಮಣ್ಣ ತೋಡಿ ಅವರೊಂದಿಗೆ
ಇಡೀ ದಿನ ಮಲಗುವ ಧೈರ್ಯ ಬಂದಿದೆ; ಆದರೂ ಒಂದು ರೀತಿಯ ವ್ಯಾಕ್ಯುಲತೆ!
ಅರ್ಧರ್ಧ ತಿಂದ ಕನಸನ್ನು ನನಸು ಮಾಡುವ ಉಮ್ಮೇದಿ ಮೂಡಿದೆ;
ಇಲ್ಲ್ಯಾರು ಕಾಲೆಳೆಯುವವರಿಲ್ಲವಲ್ಲ?
ಕಪ್ಪನೆ ಗೋರಿಯ ಮೇಲೆ
ಟಿಸಿಲೊಡೆದಿದೆ ಪ್ರೇಮವೆಂಬುದು;
ಅಲ್ಲಲ್ಲಿ ಬಿದ್ದ ಪುರಿ, ಒಣಗಿದ ಹೂವುಗಳ ನೋಡುತ್ತಲೇ ಹಸಿವು ನೀಗಿದೆ
ಆದರೆ ಇಲ್ಲಿ ವಾಸಿಸುವ ಅರ್ಹತೆ ನನಗೆಲ್ಲಿದೆ?
ಎಷ್ಟೆ ಆದರೂ ನಾನು ಹೊರಗಿನವನು
ನಾನು ಹೊರಗಿನವನು!
-ದೀಕ್ಷಿತ್ ನಾಯರ್
ಹೆಣ್ಣಿಗೆ ಎಲ್ಲಿದೆ ಸ್ವಾತಂತ್ರ
ಅತ್ಯಾಚಾರವು ಅಳಿದಿಲ್ಲ
ವರದಕ್ಷಿಣೆ ಕಿರುಕುಳ ಮುಗಿದಿಲ್ಲ
ಬಾಲ್ಯ ವಿವಾಹವು ನಿಂತಿಲ್ಲ
ಇಂದಿಗೂ ಹೆಣ್ಣಿಗೆ ಸ್ವಾತಂತ್ರ್ಯ ಸಿಕ್ಕಿಲ್ಲ
ನ್ಯಾಯ ದೇವಿಯ ಕಣ್ಣಿನ ಬಟ್ಟೆ ಬಿಚ್ಚಿಲ್ಲ
ಸಂಪ್ರದಾಯದ ಮೂಢ ನಂಬಿಕೆ ದೂರಾಗಿಲ್ಲ
ಹೆಣ್ಣು ಭ್ರೂಣಹತ್ಯೆ ನಿಂತಿಲ್ಲ
75 ವರುಷವೆ ಉರುಳಿದರು ಸ್ವಾತಂತ್ರ್ಯ ಸಿಗಲಿಲ್ಲ
ಅವಳಿಚ್ಛೆಯಂತೆ ಉಡುಗೆ ತೊಡುವಂತಿಲ್ಲ
ಮನಸ್ಸು ಬಂದೆಡೆ ಸುತ್ತಾಡುವಂತಿಲ್ಲ
ಮಾತು ಮೀರಿದರೆ ಸಮಾಜದಲಿ ಬೆಲೆಯಿಲ್ಲ
ಎದ್ದರು, ನಿಂತರು, ಕುಳಿತರು ಆಕೆ ಅಂಜಬೇಕಲ್ಲ
ಇಂದಿಗೂ ಪಂಜರದ ಗಿಣಿ ಅವಳು
ಸಂಬಂಧಗಳ ಬೇಡಿ ತೊಟ್ಟಿಹಳು
ಸ್ವಾರ್ಥ ಗಂಡಸರ ಅಟ್ಟಹಾಸದಲಿ ಮರುಕಿಹಳು
ಸ್ವ ಸ್ವಾತಂತ್ರ್ಯಕ್ಕಾಗಿ ಕಾದಿರುವಳಲ್ಲ
ಹೆಣ್ಣವಳು ಸಹಿಸಲಾರಳು
ಆದಿ ಮಾತೆಯ ಪ್ರತಿ ರೂಪದವಳು
ಇನ್ನಾದರೂ ಕೊಟ್ಟುಬಿಡಿ ಸಮಾನ ಹಕ್ಕುಗಳ
ಇನ್ನಾದರೂ ಕೊಟ್ಟುಬಿಡಿ ಸ್ವ ಸ್ವಾತಂತ್ರ್ಯಗಳ
–ಮಾನಸಪ್ರವೀಣ್ ಭಟ್
ಕವಿತೆಯ ವಸ್ತು ಸಕಾಲಿಕ ಮತ್ತು ಸಾಮುದಾಯಿಕ….ಕವಿಯು ಒಂದು ದೂರವನು ಕಾಯ್ದುಕೊಳ್ಳದೇ ಇರುವುದರಿಂದ ಅತಿ ವಾಚ್ಯದಿಂದ ನರಳಿದೆ….
ಯಾವ ನರಳುವಿಕೆಯನ್ನು ಕವಿ ವರ್ಣಿಸುತಿರುವರೋ ಅದಕೆ ಅವರೂ ಪಾಲುದಾರರೇ….ಜೊತೆಗೆ ಓದುತಿರುವ ನಾವೂ…..!
ಕೆಲವು ಅಕ್ಷರ ಸ್ಖಾಲಿತ್ಯಗಳು ಉಳಿದುಕೊಂಡಿವೆ…..
(ಯಾರು ತನ್ನನ್ನು ಸರ್ಕಲಿನ ಹೊರಗಿಟ್ಟು ಜಗವ ನೋಡುವರೋ ಅವರಿಗೆ ಸತ್ಯ ಸಿಕ್ಕುವುದಿಲ್ಲ ; ಓದುಗರಾದ ನಮಗೆ ಕಾವ್ಯಸತ್ಯ ದಕ್ಕುವುದಿಲ್ಲ )
ಮರೆತಿದ್ದೆ : ಇಂಥದನ್ನು ಬಹಳ ಹಿಂದೆಯೇ ಬಸವಣ್ಣನವರು ವಚನದಲಿ ಅಭಿವ್ಯಕ್ತಿಸಿದ್ದಾರೆ…
ಹಬ್ಬಕೆ ತಂದ ಹರಕೆಯ ಕುರಿ ಎಂದು ಶುರುವಾಗುವ ಇದು ಕೊಂದವರುಳಿದರೇ ? ಎಂದು ಕೊನೆಯಾಗುವುದು.
ಶೇರಿಸಿದ್ದಕ್ಕೆ ಧನ್ಯವಾದಗಳು
-ಮಂಜುರಾಜ್