ಕೃಷ್ಣೆಗೊಂದು ಪ್ರಶ್ನೆ: ಡಾ. ಗೀತಾ ಪಾಟೀಲ, ಕಲಬುರಗಿ

ನಮ್ಮ ಹಿಂದೂ ಧರ್ಮದ ಶ್ರೇಷ್ಠ ಮಹಾಕಾವ್ಯ ಮಹಾಭಾರತ! ಕೌರವ ಮತ್ತು ಪಾಂಡವರ ನಡುವೆ ನಡೆದ ಕುರುಕ್ಷೇತ್ರ ಯುದ್ಧದ ಫಲಿತಾಂಶವನ್ನು ವಿಸ್ತಾರವಾಗಿ ವಿವರಿಸುವ ಈ ಮಹಾಕಾವ್ಯದಲ್ಲಿ ನಾವು ಓದಿದ, ಕೇಳಿದ ಕೆಲವು ಪಾತ್ರಗಳು ವಿಶಿಷ್ಟ ಹಾಗೂ ಇಂದಿಗೂ ನಿಗೂಢವಾಗಿವೆ. ಅಂತಹ ಪಾತ್ರಗಳಲ್ಲಿ ದ್ರೌಪದಿಯ ಪಾತ್ರವೂ ಒಂದು!!

ದ್ರೌಪದಿ ದ್ರುಪದ ಮಹಾರಾಜನ ಮಗಳು, ದ್ರುಷ್ಟದ್ಯುಮ್ನನ ತಂಗಿ, ಪಾಂಡುರಾಜನ ಸೊಸೆ! ರಾಜಾಧಿರಾಜರನ್ನು ಗೆದ್ದು ರಾಜಸೂಯ ಯಾಗ ಮಾಡಿದ ವೀರರೈವರ ಪಟ್ಟದ ರಾಣಿ,, ಚಕ್ರವರ್ತಿನಿ! ಸೌಂದರ್ಯದಲ್ಲಿ, ವೈಭವದಲ್ಲಿ ಅವಳಿಗೆ ಸಮನಾದವರೇ ಇಲ್ಲ ಎನ್ನಿಸಿಕೊಂಡವಳು!! ಆದರೆ…ಅವಳ ವಿವಾಹದ ನಂತರದ ದಿನಗಳನ್ನೊಮ್ಮೆ ಅವ‌ಲೋಕಿಸಿದರೆ ಅಲ್ಲಿ ಆಕೆ ಬಹಳಷ್ಟು ಅಪಮಾನ, ಕಷ್ಟಗಳಿಂದ ಸಂಕಟಪಟ್ಟದ್ದನ್ನ ಕಾಣಬಹುದು. ರಾಜಸೂಯ ಯಾಗದ ಸಂದರ್ಭದಲ್ಲಿ ದುರ್ಯೋಧನನನ್ನು ಕಂಡು ಈಕೆ ಪರಿಹಾಸ ಮಾಡಿದ್ದೇ ಅವಳ ಸಂಕಷ್ಟಗಳಿಗೆ ಕಾರಣವಾಯ್ತಾ!! ಆಕೆ ಅಪಹಾಸ್ಯ ಮಾಡಿದ್ದು ಅಕ್ಷರಶಃ ತಪ್ಪು, ಆದರೆ ಆ ಸಂದರ್ಭದಲ್ಲಿ ಬೇರೆಯವರಿದ್ದರೂ ಹಾಗೆಯೇ ಮಾಡುತ್ತಿದ್ದರೇನೋ!? ಆದರೆ ದುರ್ಯೋಧನ ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು, ಮುಂದೊಮ್ಮೆ ದ್ಯೂತದಲ್ಲಿ ಪಾಂಡವರು ತಮ್ಮ ಸರ್ವಸ್ವವನ್ನೂ, ಪತ್ನಿ ದ್ರೌಪದಿಯನ್ನೂ ಸಹಿತ ಪಣವಾಗಿಟ್ಟು ಸೋತ ಸಂದರ್ಭದಲ್ಲಿ ದ್ರೌಪದಿಯನ್ನು ಕುರು ಸಭೆಗೆ ಕರೆಸಿ ವಸ್ತ್ರಾಪಹರಣ ಮಾಡಲು ಯತ್ನಿಸಿದ್ದು ಇನ್ನೂ ಘೋರ ತಪ್ಪಲ್ವೇ!?

ಇಲ್ಲಿಂದಲೇ ನೋಡಿ ದ್ರೌಪದಿಯ ಕಷ್ಟದ ಕತೆ ಶುರುವಾದದ್ದು! ಅಣ್ಣನ ಆಣತಿಯಂತೆ ತನ್ನ ಮುಡಿಯನ್ನು ಹಿಡಿದೆಳೆದವನನ್ನು‌ ಆಹುತಿ ತೆಗೆದುಕೊಳ್ಳುವವರೆಗೂ ಮುಡಿಗಟ್ಟೆನೆಂದು ಆಕೆ ಪ್ರತಿಜ್ಞೆಗೈದಳು! ಅವಳಿಗಾಗಿ ಆ ಪಾಪಿ ದುರ್ಯೋಧನನ ತೊಡೆಗಳನ್ನು ಮುರಿಯುವುದಾಗಿ ಭೀಮನೂ ಕೂಡ ಪಣ ತೊಟ್ಟ! ಆ ಎರಡೂ ಪ್ರತಿಜ್ಞೆಗಳು ಪೂರೈಸುವವರೆಗೆ, ೧೨ ವರ್ಷ ವನವಾಸದಲ್ಲಿ, ಒಂದು ವರ್ಷ ಅಜ್ಞಾತವಾಸದಲ್ಲಿ ಅನಂತರದ ೧೮ ದಿನಗಳ ಭಾರತಯುದ್ಧ ಸಮಯದಲ್ಲಿ ದ್ರೌಪದಿಯೇ ಅತೀ ಹೆಚ್ಚು ನವೆದವಳು! ಧೈರ್ಯ, ತೇಜಸ್ಸು, ಶೂರತನ ಮೊದಲಾದ ರಾಜಸ ಗುಣಗಳ ಮತ್ತು ಪ್ರೀತಿ, ತಾಳ್ಮೆ, ವಾತ್ಸಲ್ಯ ಮೊದಲಾದ ಸಾತ್ವಿಕ ಗುಣಗಳ ಅಪರೂಪದ ಸಮನ್ವಯತೆಯ ಸಾಕಾರ ಮೂರ್ತಿ ದ್ರೌಪದಿಗೆ ಒಂದಾದ ಮೇಲೊಂದು ಕಷ್ಟಗಳು ಬೆಂಬತ್ತಿದವು! ನಾನಾ ಬಗೆಯ ಅಪಮಾನ, ಕ್ರೌರ್ಯ, ಅತ್ಯಾಚಾರ ಪ್ರಯತ್ನಗಳಿಗೆ ಆಕೆ ಬಲಿಯಾಗಬೇಕಾಯಿತು. ಪಾಂಡವರು ಮತ್ತು ಕೌರವರು ಪ್ರಧಾನತಃ ಹೆಣ್ಣು- ಹೊನ್ನು- ಮಣ್ಣಿಗಾಗಿ ಛಲ, ಮಾತ್ಸರ್ಯದಿಂದ ಕಾದಾಡಿದ್ದರ ಪರಿಣಾಮ, ಹಾಗೂ ಧರ್ಮ-ಅಧರ್ಮಗಳೆಂಬ ಸಿದ್ಧಾಂತಗಳ ಪ್ರತಿಫಲನದದಿಂದಲೇ ಮಹಾಭಾರತ ಯುದ್ಧ ನಡೆಯಿತು, ಆದರೆ ಆಗಿದ್ದಕ್ಕೆಲ್ಲ ದ್ರೌಪದಿಯನ್ನೇ ಕಾರಣವಾಗಿಸಿ, ಅವಳನ್ನು ನೋಯಿಸಿ ನವೆಸಿದ್ದು ಎಂಥ ವಿಪರ್ಯಾಸ!? ಇದೆಲ್ಲ ದ್ರೌಪದಿ ಎಂಬ ಸ್ತ್ರೀ ರತ್ನದ ದುರ್ದೈವವಲ್ಲದೆ ಮತ್ತಿನ್ನೇನು?? ‌

ರಜಸ್ವಲೆಯಾಗಿ ಏಕವಸ್ತ್ರಧಾರಿಣಿಯಾಗಿದ್ದ ಅವಳು ತುಂಬಿದ ಕುರುಸಭೆಯಲ್ಲಿ ವಸ್ತ್ರಾಪಹರಣದ ಪ್ರಯತ್ನಕ್ಕೆ ಬಲಿಯಾಗಿದ್ದು, ಹದಿಮೂರು ವರ್ಷಗಳ ಕಾಲ ತನ್ನ ಮಕ್ಕಳನ್ನು ಅಗಲಿ ಮಾತೃತ್ವದ ಸುಖದಿಂದ ವಂಚಿತಳಾಗಿ, ಅಜ್ಞಾತವಾಸದಲ್ಲಿ ಮತ್ತೇ ಕೀಚಕನಿಂದ ಅವಮಾನ, ಶೋಷಣೆಗಳಿಗೆ ಗುರಿಯಾದದ್ದು, ಕುರುಕ್ಷೇತ್ರ ಯುದ್ಧದ ಗೆಲುವನ್ನು ಸಂಭ್ರಮಿಸುವ ಮುನ್ನವೇ ತನ್ನ ಮಕ್ಕಳನ್ನು, ಸಹೋದರರನ್ನೂ ಕಳೆದುಕೊಂಡದ್ದು ಎಲ್ಲವೂ ಅವಳ ದುರಾದೃಷ್ಟ! ನತದೃಷ್ಟ ಯಜ್ಞಸೇನಿ ಅದೆಷ್ಟೆಲ್ಲ ನೋವು, ಹತಾಶೆ, ಅವಮಾನ, ಹಿಂಸೆಗಳನ್ನ ಸಹಿಸಿರಬಹುದು? ಸಹಿಸಿ, ಸಂಭಾಳಿಸಿಕೊಂಡು ಸಾಗುವ ಆಕೆಯ ಬಾಳಪಯಣ ಅದೆಷ್ಟು ಯಾತನಾಮಯ ವಾಗಿದ್ದಿರಬಹುದು? ಹೌದು ದ್ರೌಪದಿ ಯಾಕೆ ಸಹಿಸಿಕೊಂಡಳು!? ತಾನೊಬ್ಬ ಹೆಣ್ಣು, ಅಬಲೆ ಎಂದೇ? ಪರಿಹಾಸ ಮಾಡಿದ್ದಕ್ಕೆ ಸಿಕ್ಕ ಪ್ರತಿಫಲವೆಂದೇ !? ಹೀಗೆ…ನನ್ನಲ್ಲಿರುವಂತೆ ನಿಮ್ಮಲ್ಲೂ ಕೂಡ ನೂರಾರು ಪ್ರಶ್ನೆಗಳಿರಬಹುದಲ್ವೇ!? ಹಾಗಾದರೆ…ಬನ್ನಿ ಕೃಷ್ಣೆಗೇ ಕೇಳೋಣ, ಉತ್ತರ ನೀಡಿಯಾಳು ಎಂಬ ಆಶಯದಿಂದ !!

ಗಜಲ್: ಕೃಷ್ಣೆಗೊಂದು ಪ್ರಶ್ನೆ

೧) ಆ ದಿನ ಸುಮ್ಮನಿರಬೇಕಿತ್ತಲ್ಲ ಕೃಷ್ಣೆ ಆ ಪರಿ ಪರಿಹಾಸ ಯಾಕೆ ಬೇಕಿತ್ತು?
ಫಣಿಕೇತನನ ಕಣ್ಣಲ್ಲಿ ಕಿಸುರಾಗುವ ಉಪಹಾಸ ನಿನಗೆ ಯಾಕೆ ಬೇಕಿತ್ತು?

೨) ಪೃಥೆಯ ಆದೇಶದ ಮೇರೆಗೆ ಪಂಚ ಪುರುಷರನ್ನು ವರಿಸಿದೆಯಲ್ಲ ಪಾಂಚಾಲಿ!
ಲೋಕದೆದುರು ಹೊಸ ಉದಾಹರಣೆ ಇಡುವ ಆಭಾಸ ಯಾಕೆ ಬೇಕಿತ್ತು?

೩) ದ್ಯೂತದಲ್ಲಿ ಸೋತವರಿಂದಾಗಿ ಕುರುಸಭೆಯಲ್ಲಿ ಘೋರ ಕಷ್ಟಕ್ಕೀಡಾದೆಯಲ್ಲ!
ಹೇಡಿಗಳಂತೆ ತಲೆ ತಗ್ಗಿಸಿ ಕುಳಿತಿದ್ದ ಆ ಭಂಡರೈವರ ಸಹವಾಸ ಯಾಕೆ ಬೇಕಿತ್ತು?

೪) ಮುಡಿ ಹಿಡಿದೆಳೆದವ ವಿನಾಶವಾದ ಮೇಲೆಯೇ ಮುಡಿ ಕಟ್ಟುವೆನೆಂದೆಯಲ್ಲ!
ಯಜ್ಞಸೇನಿ ಈ ಪರಿಯ ವೀರ ಪ್ರತಿಜ್ಞೆ, ಪ್ರತೀಕಾರದ ಆವೇಶ ಯಾಕೆ ಬೇಕಿತ್ತು?

೫) ಉರುಬಿನಿಂದ ನಿನ್ನ ಕೆಣಕಿದವರೆಲ್ಲ‌ ಬವರದಲ್ಲಿ ಅಳಿಯುವರೆಂದರಿತ್ತಿದ್ದೆಯಲ್ಲ!
ಮುಡಿಬಿಚ್ಚಿ ರಕ್ತ ಮುಡಿಕಟ್ಟಿದ ಕಥಾ ನಾಯಕಿಯಾಗುವ ಪರಿಹಾಸ ಯಾಕೆ ಬೇಕಿತ್ತು?
-ಡಾ. ಗೀತಾ ಪಾಟೀಲ, ಕಲಬುರಗಿ


ಟಿಪ್ಪಣಿ: ಗಜಲ್ ನ ೫ ಮುಖ್ಯ ಅಂಗಗಳು:
ರದೀಫ್: ಯಾಕೆ ಬೇಕಿತ್ತು?; ಕಾಫಿಯಾ: ಉಪಹಾಸ,ರಾಜಸ, ಪರಿಹಾಸ…..
ರವಿ (ಕಾಫಿಯಾದ ಬೇರು): ಸ ; ಮತ್ಲಾ: ಮೊದಲ, ಮಖ್ತಾ: ಕೊನೆಯ ದ್ವಿಪದಿ
ಕೃಷ್ಣೆ, ಯಜ್ಞಸೇನಿ- ದೌಪದಿ; ಫಣಿಕೇತ- ದುರ್ಯೋಧನ; ಪೃಥೆ-ಕುಂತಿ;
ಬವರ- ಯುದ್ಧ; ಉರುಬು- ಸೊಕ್ಕು


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x