ಓ.. ನನ್ನ ಹೃದಯ ನಿವಾಸಿಯೇ..!
ಹೇ, ಹೃದಯವೇ..! ನೀ ನನ್ನ ಹೃದಯದಲಿ ನೆಲೆಸಿ ಹಲವು ವರ್ಷಗಳೇ ಸರಿದಿವೆ.. ಇನ್ನಷ್ಟು ವಸಂತಗಳು ಕಳೆದರೂ ಅದೇ ಪ್ರೀತಿ, ಮತ್ತಷ್ಟು ಪಜೀತಿ…!
ಪ್ರೀತಿ ಓಕೆ ಪಜೀತಿ ಯಾಕೆ ಅಂತ ಯೋಚ್ನೆ ಮಾಡ್ತಿದ್ದೀಯಾ? ಒಂದು ತಗೊಂಡ್ರೆ ಮತ್ತೊಂದು ಫ್ರೀ ಅನ್ನೋ ಹಾಗೆ ಈ ಪ್ರೇಮಯಾನದಲಿ ಬರೀ ಸುಖವೇ ತುಂಬಿರೊಲ್ಲ ; ರೊಮ್ಯಾನ್ಸ್, ಆತ್ಮೀಯತೆ, ಒಂದಷ್ಟು ಕಾಳಜಿ, ಲೆಕ್ಕಕ್ಕೆ ಸಿಗದಷ್ಟು ಕೋಳಿ ಜಗಳಗಳು, ಕುಸಿದು ಬೀಳುವಂತಹ ಕ್ಲಿಷ್ಟ ಪರಿಸ್ಥಿತಿಗಳು ಎಲ್ಲದರ ಸಮ್ಮಿಶ್ರಣವೀ ಒಲುಮೆಯ ದಾರಿ. ಬದುಕು ಅಂದ್ಮೇಲೆ ಏಳು-ಬೀಳು ಸಹಜ ಹಾಗಂತ ಬದುಕಿಗೆ ಬೆನ್ನು ಮಾಡಿ ಓಡಿ ಹೋಗುವಂತಹ ಬಲಹೀನ ಮನಸ್ಸು ಆಗ್ಬಾರ್ದು. ಕಡಿದಾದ ಪ್ರದೇಶವಿದ್ರೂ ಸಂಗಾತಿಯ ಕೈಹಿಡಿದಿರಬೇಕು, ವಾತಾವರಣ ಬದಲಾದರೂ ಬದುಕಿನ ರಿವಾಜು ಬದಲಾಗಬಾರದು, ಸಮಾಜದ ವ್ಯಂಗ್ಯನುಡಿಗಳಿಗೆ ಮಾಡುವ ಕೆಲಸ ಮಾತ್ರವೇ ಉತ್ತರ ನೀಡಬೇಕು, ನಮ್ಮನ್ನು ನಂಬಿದ ಮನಗಳಿಗೆ ಪ್ರೀತಿಯ ಹೊಳೆ ಹರಿಸಬೇಕು, ಕಾಳಜಿಯಲ್ಲಿ ದಿಗ್ಬಂಧನ ಮಾಡಬೇಕು.
ಹೀಗೆ ಬದುಕನ್ನು ನಾನಾ ದೃಷ್ಟಿಯಲ್ಲಿ ನೋಡಿದಾಗ ಮಾತ್ರ ನಡೆಯುವ ದಾರಿಯಲ್ಲಿ ಸ್ಪಷ್ಟತೆ ಇರುತ್ತದೆ ; ಮನವೂ ನಿರಾಳವಾಗುತ್ತದೆ.
ಪ್ರೇಮ ಪತ್ರ ಅಂದ್ಬಿಟ್ಟು ಬದುಕಿನ ಬಗ್ಗೆ ಫಿಲಾಸಫಿ ಹೇಳ್ತಾ ಇದ್ದಾಳಂತ ಆಶ್ಚರ್ಯ ಆಗ್ತಿದ್ದೀಯಾ? ಬದುಕಿನಲ್ಲಿ ಪ್ರೇಮವೆಂಬುದು ಒಂದು ಹಂತವಷ್ಟೆ.. ಒಮ್ಮೊಮ್ಮೆ ಅದು ಮಾಯೆಯೂ ಹೌದು ಜೀವಸೆಲೆಯೂ ಅಹುದು..! ಇದಾಗಲೇ ನಾವು ಆ ಮಾಯೆಯಲ್ಲಿ ಮಿಂದೆದ್ದು ಉಡುಗೊರೆಗಳು ಮನೆ-ಮನ ತುಂಬಿವೆ. ಇದೀಗ ಜೀವಸೆಲೆಯ ಸರದಿ ಇಲ್ಲಿ ಜವಾಬ್ಧಾರಿಗೆ ಹೆಚ್ಚಿನ ಮನ್ನಣೆ ಅದರೊಂದಿಗೆ ಒಲುಮೆಯೂ ಮಿಳಿತವಾಗಿದೆ. ಕರ್ತವ್ಯವರಿತು ಮುನ್ನೆಡೆದಾಗ ಮಾತ್ರ ಒಲುಮೆ ಶಕ್ತಿಯುತವಾಗುತ್ತದೆ ಇಲ್ಲವದು ಬಲಹೀನವಾಗಿ ನೈಜತೆ ಕಳೆದುಕೊಂಡು ಅನಾಥವಾಗುತ್ತದೆ. ಅಂತಹ ಪರಿಸ್ಥಿತಿ ಘಟಿಸದಂತೆ ಒಲುಮೆಗೆ ಕಾವು ಕೊಡುವ ಜವಾಬ್ಧಾರಿ ಇಬ್ಬರ ಮೇಲೂ ಇದೆ. ನಾನಂತೂ ನನ್ನ ಪಾಲಿಗೆ ಬಂದದ್ದನ್ನು ಪಂಚಾಮೃತವೆಂದೇ ಭಾವಿಸಿ ಬಾಹ್ಯ ಪ್ರಪಂಚವನ್ನು ಮರೆತು ಈ ಗೂಡೇ ಸರ್ವಸ್ವವೆಂದು ತಿಳಿದು ಬದುಕುತ್ತಿದ್ದೇನೆ ; ನಿನ್ನ ಪಾಲಿನದರ ಬಗೆಗೆ ನಿನಗೂ ಅರಿವಿದ್ದರೆ ನನ್ನೊಲುಮೆ ಸಾರ್ಥಕ.
ಇನ್ನೂ ನಮ್ಮಿಬ್ಬರ ಪ್ರೀತಿ ವಿಷಯಕ್ಕೆ ಬಂದ್ರೆ ನಾನು ತುಂಬಾ ಲಕ್ಕಿ ಯಾಕಂದ್ರೆ ಪ್ರತಿಯೊಂದು ಹೆಣ್ಣು ಬಯಸುವ ಸ್ವಾತಂತ್ರ್ಯ, ಸಮಾನತೆ, ಆರಾಧನೆ, ಕಾಳಜಿ ಎಲ್ಲವೂ ನಿರೀಕ್ಷೆಗೂ ಮೀರಿದಷ್ಟು ನಿನ್ನಲ್ಲಿ ನಾನು ಕಂಡೆ. ಕಷ್ಟ ಏನಂತ ತಿಳಿದಿದ್ದೀಯಾ, ತುಂಬಾ ಯೋಚಿಸಿ ಮಾತಾಡ್ತೀಯಾ, ತಾಳ್ಮೆ ತುಸು ಹೆಚ್ಚೆ, ನಾಳೆಯ ಬಗ್ಗೆ ಚಿಂತೆಯಿಲ್ಲ ಹೀಗೆ ನಿನ್ನ ಒಳ್ಳೆ ಗುಣಗಳನ್ನು ಪಟ್ಟಿ ಮಾಡ್ತಾ ಹೋದ್ರೆ ಪದಗಳಿಗೂ ನಿನ್ ಮೇಲೆ ಲವ್ ಆಗುತ್ತೆ, ಅಷ್ಟು ಒಳ್ಳೆಯವನು ನೀನು. ಆದ್ರೆ ನಾನು ನಿನ್ನೆಲ್ಲಾ ಗುಣಗಳಿಗೆ ವ್ಯತಿರಿಕ್ತ. “Opposite poles attract each other” ಈ ಮಾತು ಸತ್ಯವಲ್ಲವೇ..! ಫಿಲ್ಟರ್ ಇಲ್ಲದ ಮಾತು, ಸದಾ ಆದರ್ಶಗಳೆಂದು ಬೊಬ್ಬಿಡೋದು, ಕೋಪ, ಹಠ ಅಬ್ಬಬ್ಬಾ…! ನೆನೆದರೆ ಒಮ್ಮೊಮ್ಮೆ ನನಗೆ ಇರಿಸುಮುರಿಸು ಅನ್ಸುತ್ತೆ, ಆದ್ರೆ ಏನ್ಮಾಡೋದು? ಹುಟ್ಟಿದ ಗುಣ ಸುಟ್ರೂ ಹೋಗಲ್ವಂತೆ? ಇತ್ತೀಚಿಗೆ ನೋಡು ನಮ್ಮ ಮುದ್ದು ಕಣ್ಮಣಿಗಳಿಗಾಗಿಯೇ ತಾಳ್ಮೆ ಬೆಳಿಸಿಕೊಳ್ಳುತ್ತಿದ್ದೇನೆ.
ಇನ್ನು ನಿನ್ನತ್ರ ‘ಅದೇ ರಾಗ ಅದೇ ತಾಳ’. ಕೋಪದ ಮಾತುಗಳು ಮತ್ತೊಬ್ಬರಿಗೆ ಹೇಗೆ ಹರ್ಟ್ ಮಾಡ್ತಾವೆ ಅಂತ ಇತ್ತೀಚೆಗೆ ಮನವರಿಕೆ ಆಗ್ತಿದೆ. ಅದಕ್ಕಾಗಿ ಈಗೀಗ ನಾನು ಭಾವನೆಗಳನ್ನು ಬಚ್ಚಿಟ್ಟ ಮಹಾ ಮೌನಿ..! ಮೊದ್ಲು ಕೂಡ ಮೌನಿಯಾಗಿದ್ದೆ ಆದ್ರೆ ಎರಡು ವರ್ಷದಿಂದ ಬರವಣಿಗೆ ನನ್ನೊಳಗೆ ಆವರಿಸಿ ಹೊಸ ಲೋಕ ಸೃಷ್ಟಿಸಿಕೊಂಡಿದ್ದೇನೆ. ಅಲ್ಲಿ ಏಕಾಗ್ರತೆಗೆ ಪ್ರಥಮ ಆದ್ಯತೆ. ಈ ನನ್ನ ಹೊಸ ಯಾನದಲ್ಲಿ ಸಾಧನೆಯ ಹುಚ್ಚು ಇಲ್ಲದಿದ್ದರೂ ಖುಷಿಗಾಗಿ ಬರೆಯುತ್ತಾ ಇದ್ದೀನಿ, ಸ್ಪೂರ್ತಿಯೊಂದಿಗೆ ಬದುಕುತ್ತಿದ್ದೇನೆ. ಈ ಹವ್ಯಾಸ – ಅಭ್ಯಾಸಗಳು ನನಗರಿವಿಲ್ಲದೆ ನನ್ನುಸಿರಿನಲ್ಲಿ ಬೆರೆತೋಗಿದೆ ಹಾಗೆಯೇ ಅವು ನನ್ನುಸಿರಿನೊಂದಿಗೆ ಮಾತ್ರ ಅಂತ್ಯವಾಗಲು ಸಾಧ್ಯ. ಈ ಬದಲಾವಣೆ ನಂಗೆ ತುಂಬಾ ಅಗತ್ಯ ; ನೀನಿದಕ್ಕೆ ಪ್ರೋತ್ಸಾಹ ಕೊಡ್ತೀಯಾ ಅಂತಾನೂ ಗೊತ್ತು. ನನ್ನದೇ ಪರಿಮಿತಿಯೊಳಗೆ ನನಗಾಗಿಯೂ ಸ್ವಲ್ಪ ಬದುಕಲೇಬೇಕಾಗಿದೆ ಯಾಕಂದ್ರೆ ಭವಿಷ್ಯದಲ್ಲಿ ನಿಮ್ಮೆಲ್ಲರ ಮುಂದೆ ನಾ ತ್ಯಾಗಿಯಂತೆ ಬಡಬಡಿಸುವುದು ನಂಗಿಷ್ಟ ಇಲ್ಲ ; ಎಲ್ಲವನ್ನೂ ಮನಃಪೂರ್ವಕವಾಗಿ ಸ್ವೀಕರಿಸಿದ್ದೇನೆ. ನಿಮ್ಮಿಂದ ಈ ಅಮೂಲ್ಯ ಸಮಯವನ್ನು ಕಸಿದುಕೊಂಡದ್ದಕ್ಕಾಗಿ ಕ್ಷಮೆಯಿರಲಿ.
ನನ್ನ ಬದುಕಿನ ಪಯಣದಲ್ಲಿ ನೀ ಅಮ್ಮ- ಅಪ್ಪ ನಿಗಿಂತಲೂ ಹೆಚ್ಚಿನ ಪಾತ್ರ ವಹಿಸಿದ್ದೀಯಾ..! ಅದಕ್ಕಾಗಿ ನೀನು ನನ್ನ “ಅಸ್ತಿತ್ವ” ನೀನಿಲ್ಲದ ಈ ಹೃದಯ ಅನಾಥವೇ ಸರಿ. ನಿನ್ನ ಮೇಲಿನ ಪ್ರೀತಿಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಮೊದ್ಲೆ ನಾನು ಬಾಯಿ ಬಿಡೊಲ್ಲ ; ನೀ ಪ್ರಶ್ನೆ ಮಾಡೊಲ್ಲ.. ಅದಕ್ಕಾಗಿ ನೀನಂದರೆ ನನಗೆ ಕೆಟ್ಟ ಸಲಿಗೆ ಎಷ್ಟೆಂದರೆ ‘ವಟವಟ’ ಎನ್ನುವಷ್ಟು.
ಯಾವಾಗ್ಲೂ ಬೈಯ್ತೀನಿ ಅಂದ್ರೆ ಪ್ರೀತಿ ಇಲ್ಲ ಅಂತಲ್ಲ ; ನಾನು ಬೈಯೋದು ಕೇವಲ ನನ್ನವರಿಗಾಗಿ ಮಾತ್ರ.. ಅದರಲ್ಲಿ ನಿನ್ನ ಪಾಲೇ ಹೆಚ್ಚು. “ಬೈಯ್ಯೋರು ಯಾವಾಗ್ಲೂ ಪ್ರೀತಿಸುವ ಮನಗಳ ಶ್ರೇಯಸ್ಸನ್ನೇ ಬಯಸ್ತಾರೆ” ಅದರ ಹಿಂದೆ ವಿವರಿಸಲಾರದಷ್ಟು, ಬೆಟ್ಟದಷ್ಟು ಪ್ರೀತಿ ಇರುತ್ತೆ ಅದನ್ನ ನೀ ಅರ್ಥ ಮಾಡ್ಕೊಂಡ್ರೆ ಸಾಕು ಮತ್ತೆ ನನ್ನ ಪ್ರೀತಿಯನ್ನು ವಿವರಿಸಿ ಹೇಳೊ ಅಗತ್ಯಾನೆ ಇಲ್ಲ..!
ನಾವಿಬ್ರೂ ಒಳ್ಳೆ ಜೋಡಿ, ಫ್ರೆಂಡ್ಸ್ ಕೂಡ ಹೌದು. ನಮ್ಮಿಬ್ಬರಲ್ಲಿ ಆತ್ಮೀಯತೆ ಹೆಚ್ಚಾಗಲು ಈ ಅನುಬಂಧದಲ್ಲಿ ನಾನೆಂದೂ ನಿನ್ನ ‘ರೀ…’ ಅಂತ ಕರೆಯದೆ ಇರೋದು ಇರ್ಬೋದು. ಹೆಸರಿನ ಕರೆಯಿಂದ ಶುರುವಾದ ಸಲಿಗೆ ಬೆಚ್ಚಗಿನ ಬಾಂಧವ್ಯಕ್ಕೆ ಅಡಿಪಾಯವಾಯ್ತೆನೊ ತಿಳಿಯದು? ಮತ್ತೊಮ್ಮೆ ಧನ್ಯವಾದ ಈ ಆತ್ಮೀಯ ಭಾವದ ಕರೆಯ ಉಡುಗೊರೆಯಾಗಿ ನೀಡಿದ್ದಕ್ಕಾಗಿ… ಸ್ವಾತಂತ್ರ್ಯದ ಅರ್ಥ ತಿಳಿಸಿಕೊಟ್ಟದ್ದಕ್ಕಾಗಿ..! ಧೀರ್ಘವಾದ ಈ ಯಾನದಲ್ಲಿ ಜವಾಬ್ಧಾರಿ ತುಸು ಹೆಚ್ಚಾಗಿದೆ ಅದಕ್ಕೆ ಕಾರಣಳು ನಾ ಅಂತಲೂ ಗೊತ್ತು. ಹಣದ ಬಗ್ಗೆ ವ್ಯಾಮೋಹ ಬೇಡ ಅದು ಬರುತ್ತೆ, ಹೋಗುತ್ತೆ.. ಮುಂದೆ ಮಕ್ಕಳು ಸಂಪಾದಿಸಬಹುದು/ಇರದಿರಬಹುದು ಆದರೆ ಆರೋಗ್ಯವೆಂಬುದು ಬಲು ದುಬಾರಿ. ಅದೊಂದು ಚೆನ್ನಾಗಿದ್ರೆ ಬದುಕು ‘ಹಾಯ್’ ಎನಿಸುತ್ತೆ ಬಂಧಗಳು ತಂಗಾಳಿ ಬಿಸುತ್ತವೆ ಇಲ್ಲವಾದಲ್ಲಿ ಎಲ್ಲಾ ಇದ್ದು ; ಬದುಕೇ ತಲ್ಲಣಿಸಿದಂತಹ ಶೂನ್ಯಭಾವ ಉಂಟಾಗುತ್ತೆ ಹಾಗಾಗಿ ನಿನ್ನ ಅನಗತ್ಯ ಚಿಂತೆಗೊಂದಿಷ್ಟು ಮಿತಿಯಿರಲಿ, ಆಯಸ್ಸು ಏರುತಿರಲಿ.
ಬದುಕಲ್ಲಿ ನಿನ್ನಿಂದ ನಾ ಹೆಚ್ಚೇನೊ ಬಯಸೊಲ್ಲ. “ನಾನಿದ್ದೇನೆ” ಎಂಬ ಭರವಸೆಯೊಂದಿಗೆ.. ನೀ ನನ್ನೊಂದಿಗೆ ಇದ್ದರೇ ಅಷ್ಟೇ ಸಾಕು ಎಂತಹ ಏರಿಳಿತಗಳು ಬಂದರೂ ಕುಗ್ಗದೇ ಧೈರ್ಯವಾಗಿ ಮುನ್ನೆಡೆಯುತ್ತೇನೆ. ನಾನು ತುಂಬಾ ದುಬಾರಿ ಅಲ್ಲ ಕಣೊ ಗೆಳೆಯ ಆರಾಮಾಗಿ ಈ ಪ್ರೀತಿಯ ತೇರನ್ನ ಎಳಿಯಬಹುದು ಅದಕ್ಕೆ ಒಂದಿಷ್ಟು ಬುದ್ಧಿವಂತಿಕೆ, ಸಮಯಪ್ರಜ್ಞೆ, ಕೆಲವೊಂದಿಷ್ಟು ಮಂತ್ರಗಳು(ಪ್ರೀತಿ) ಅಗತ್ಯ. ಹೆಚ್ಚಿಗೆ ಇನ್ನೇನ್ ಹೇಳ್ಲಿ..? ಕಣ್ಸನ್ನೆಯಲ್ಲೆ ಅಡಕವಾಗಿದೆ ನನ್ನೊಲುಮೆ.. ಓದಲು ಪ್ರಯತ್ನಿಸು ಇಲ್ಲವಾದಲ್ಲಿ ನಿನ್ನ ಜೀವಂತ ಉಡುಗೊರೆಗಳ ನಡುವಲೂ ಝೇಂಕರಿಸುತಿದೆ.. ಅರ್ಥ ಮಾಡ್ಕೊ. ಬದುಕು ಬಂಗಾರವಾಗುವ ದಿನವೂ ಬಂದೇ ಬರುತ್ತದೆ.. ಅದಕ್ಕಾಗಿ ಜೊತೆಯಾಗಿಯೇ ಕಾಯೋಣ.
ಅಂದಿನ ಗುಲಾಬಿಗೆ ಸೊಬಗಿತ್ತು,
ಆಹ್ಲಾದತೆಯ ಘಮಲಿತ್ತು..
ಇಂದಿನ ಗುಲಾಬಿ ರಂಗು ರಂಗಾಗಿದೆ,
ಘಮಲು ರಾಸಾಯನಿಕದಲಿ ಮರೆಯಾಗಿದೆ..!
ಎಂದೆಂದಿಗೂ ಅಂದಿನ ಗುಲಾಬಿಯನ್ನೇ ಆರಾಧಿಸುವ ಅಂಜುಮಲ್ಲಿಗೆ.
ಇಂತಿ
ನಿನ್ನ ಹಠಮಾರಿ ಹೃದಯ
-ಆಶಾ ಆರ್ ಸುರಿಗೇನಹಳ್ಳಿ