ಗಂಧ ಲೇಪಿತ ಸುರಭಿ ಘಮವಾಗಿ ಮನ ಮನ ವ್ಯಾಪಿಸಿದವಳೇ…
ಒಲವೆಂದರೆ ಮುಳ್ಳು
ಎದೆಗೆ ಚುಚ್ಚಿದರೂ ಹಿತ ಹಿತ
ಸುರಿದ ರಕುತ ಲೆಕ್ಕವಿಲ್ಲ ಸಾಕಿ
ಮದಿರೆಯ ಬಟ್ಟಲ ತುಂ-ತುಂಬಿ ಕೊಡು
ಇಷ್ಟು ಗಾಯಕ್ಕೆ, ಮತ್ತಿಷ್ಟು ಒಲವ ಉತ್ಪಾದಿಸುವ ಹೃದಯ
ಗೂಡಿಗೆ ಸುರಿದು ನಗುವೆ!
ಅದ್ಯಾರೋ ಬರೆದ ಪದ್ಯವಿದು ಅದೆಷ್ಟು ಬಾರಿ ಓದಿಕೊಂಡೆನೋ ಸಖಿ.. ..ಮುಳ್ಳ ಒಲವೇ ನಮ್ಮದು, ಚುಚ್ಚಿದರೇನಂತೆ ಹಿತ ಇದೆಯೆಂದ ಮೇಲೆ ಆಹಾ ಆನಂದವೇ ಸರಿ! ವಿರಹಕ್ಕೂ ಪ್ರೇಮ ಶಾಸ್ತ್ರದಲ್ಲಿ ಒಂದು ಒಲವ ಚೌಕಟ್ಟಿದೆ. ಇದ್ಯಾವುದೋ ವಿಚಿತ್ರ ಹೆಸರಿನ ಕಾಯಿಲೆ ಬಂದು ನೋಡು, ಬರೋಬ್ಬರಿ ಹತ್ತು ತಿಂಗಳು ದಾಟಿಯಾಯಿತು. ಚೌಕಟ್ಟು ಒದ್ದು ನಿನ್ನೊಲವಿಗೆ ಬೊಗಸೆಯೊಡ್ಡಿ ಓಡಿ ಬರಲಾಸೆ.. ..
ನೀನಿಲ್ಲದೇ ನನಗೇನಿದೆ
ಮನಸೆಲ್ಲಾ ನಿನ್ನಲ್ಲೇ ನೆಲೆಯಾಗಿದೆ
ಕನಸೆಲ್ಲಾ ಕಣ್ಣಲ್ಲೆ ಸೆರೆಯಾಗಿದೆ
ವ್ಯಾಸರಾಯರು ನಮ್ಮಿಬ್ಬರ ಹಕೀಕತ್ತು ನೋಡಿಯೇ ಬರೆದಿದ್ದಾರೇನೋ..ಪ!
ಅಕ್ಷರ ಬರೆಯೋ ಬೆರಳಲ್ಲೆಲ್ಲಾ ಇದೋ ಅದೆಂಥದೋ ದ್ರಾವಣ ಸುರಿ ಸುರಿದುಕೊಂಡು ನಿನ್ನ ಬಗ್ಗೆ ಬರೆಯ ಹೊರಟರೂ ದರಿದ್ರ ಕರೋನಾ ಜಾಗೃತಿ ಬಗ್ಗಯೇ ವಾಲುತ್ತಿದೆ ಮನಸ್ಸು! ಎದೆಗೂಡಲ್ಲಿಯೇ ನಮ್ಮ ಪ್ರೀತಿ ‘ಹಾರ್ಟಕ್ವಾರಂಟೈನಾ’ಗಿ ಬಲಿತಿದೆ ಸಖಿ!
ಆಡಿದ ಮಾತುಗಳು ,ಕೂತೆದ್ದ ಆ ನುಣುಪು ಕಲ್ಲು ಬೆಂಚುಗಳು, ಹಾಡಿದ ಹಾಡುಗಳು ಮರೆತೇ ಹೋಗಿವೆ. ಎಲ್ಲಿ ನೋಡಿದರೂ ಈಗಲೂ ಬೀದಿ ಬೀದಿಯ ತಿರುವಲ್ಲೂ ಗುಲಾಬಿ ಸೀರೆಯ ಆಶಕ್ಕ, ಬಿದಿರ ಬೇಲಿಗಳು, ಸಾಲಿಗರಿಗೆ ಹೆದರಿ ಮುಖ ಮುಚ್ಚಿ ಓಡಾಡೋ ಕಳ್ಳರಂತೆ ಮುಖಗವಸಿನ ಮುಸುಕುಧಾರಿಗಳು, ಲಾಠಿ ಹಿಡಿದ ಪೊಲೀಸಪ್ಪಗಳು ಎದುರಾಗುತ್ತಿದ್ದಾರೆ
ನೀ ಮಾತ್ರ ಕಾಣುತ್ತಿಲ್ಲ? ಒಲವಿಗೆ ದರ್ಶನವಾದರೂ ಯಾಕೆ ಬೇಕು? ಅನ್ನುತ್ತಿದ್ದ ಮಾತಿಗೆ ಇದೀಗ ನನಗೆ ಈ ಕರೋನ ಪುಷ್ಠಿ ಒದಗಿಸಿದೆ.
ಕಂಡು, ಎದುರಿದ್ದು ಪ್ರೀತಿಸೋದು ತೀರಾ ಸಲೀಸು. ಕಾಣದೇ, ಎದುರ್ಗೊಳ್ಳದೇ ಕೋಟಿ ಕನಸಿಗೆ ಆಗರವಾದ ನಿನ್ನ ‘ಒಲವ ಕಣ್ಣ’ ನೋಡದೇ ಅತಿ ಸೂಕ್ಷ್ಮತೆಯಲ್ಲಿ ಕರೋನದಿಂದ ನಮ್ಮನ್ನು ನಾವು ಕಾಪಾಡಿಕೊಂಡಂತೆ , ಗರ್ಭಗುಡಿಯ ಚಿರಂತನ ದೀಪದಂತೆ ಎದೆಯೊಲವ ಜತನು ಮಾಡಿಕೊಳ್ಳುವುದು ಆಹಾ , ಈ ಕರೋನ ಕಲಿಸಿದೆಯೆಂದರೆ ನೀ ನಂಬಲೇಬೇಕು!
ಹುಣ್ಣಿ ಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡು
ನಿನ್ನೊಳಿದೆ ನನ್ನ ಮನಸು.. .. ..
ನಮ್ಮ ಮನದ ಮಾತುಗಳನ್ನೇ ಕೆ.ಎಸ್.ನರಸಿಂಹಸ್ವಾಮಿಗಳು ನಮಗಾಗಿ ಬರೆದ ಸಾಲುಗಳೇನೋ ಅನ್ನಿಸುವಂತಿದೆ.
ಅದೆಷ್ಟು ಪ್ರೇಮಿಗಳು ಈ ವಿರಹದುರಿಯಲ್ಲಿ ಉರಿದುರಿದು ಬೂದಿಯಾದರೋ ಗೆಳತಿ.. .. ಈ ಕರೋನಾಕ್ಕಿಷ್ಟು ಬೆಂಕಿ ಹಾಕ! ಅಕ್ಷರ ಬಲ್ಲ ಎಲ್ಲರೂ ಕವಿಗಳದರೋ, ಸಿರಿಕಂಠದವರು ಗಾಯಕರಾದರೋ, ಕುಂಚದ ಮಂದಿ ತಂ-ತಮ್ಮ ಪ್ರಿಯತಮೆಯ ಸ್ನಿಗ್ಧ ಚಿತ್ರ ಬರೆದು ಸಂತಸ ಪಟ್ಟರೋ.. ..ಏನೋ…. ನಾ ಅದೇನೂ ಇಲ್ಲದ ದಡ್ಡ, ನಿನ್ನ ಜಪಿಸುತ್ತಾ ಮನೆಯ-ಮನದ ನಡುಗಡ್ಡೆಯಲ್ಲಿ ಬಂಧಿಯಾದೆ!
ನಿನ್ನ ನೆನಪಲ್ಲಿ ಬರಿ ಕೈಗಳ ತೊಳೆ ತೊಳೆದು, ಸ್ಯಾನಿಟರ್ ಸುರಿದು ಮುಖ ಮುಚ್ಚಿ ನಿನ್ನ ಬೀದಿಯಲ್ಲಿ ಅದೆಷ್ಟು ಸಾರಿ ಪೊಲೀಸರ ಕಣ್ತಪ್ಪಿಸಿ ಓಡಾಡಿದೆನೋ ಗೊತ್ತಿಲ್ಲ. ನಿನ್ನ ಎದೆ ಮೇಲೆ ಬಿದ್ದು ಮೆರೆಯುವ ಆ ದಟ್ಟ ಕಡು ಬಿಳಿ ಮೊಲ ಬಣ್ಣದ ದಾವಣಿ ಯಾದರೂ ಮನೆ ಮುಂದಿನ ಹಸಿರು ಹಗ್ಗಕ್ಕೆ ನೇತಾಡುತ್ತಿದ್ದರೆ ಕಣ್ತುಂಬಿಕೊಳ್ಳುವ ಮನದಿಂದ ಎಷ್ಟೋ ಸಾರಿ ಬಂದಿದ್ದೆ. ಬಂದರೆ ಕಿಟಕಿ,ಗೇಟು ಸಮೇತ ಎಲ್ಲಾ ಬಂದ್ ಬಂದ್; ನಿಮ್ಮ ಮನೆಯವರನ್ನು ಕೇಳಿಯೇ ಇಡೀ ಊರನ್ನು ಲಾಕ್ ಡೌನ್ ಮಾಡಿದ್ದಾರೆನೋ ಅನ್ನಿಸಿತ್ತು. ಕಡಲಲಿ ಮುಳುಗಿ ಮರೆಯಾಗೋ ಸಂಜೆ ಸೂರ್ಯನಂತೆ ಹ್ಯಾಪ್ ಮೋರೆ ಹಾಕಿ ಹಿಂದಿರುಗುತ್ತಿದ್ದದ್ದು ನಿಂಗೂ ಗೊತ್ತಂತ ನಂಗೂ ಗೊತ್ತು!
ಕಾಗದಗಳು ಇಲ್ಲವಾದವು
ಆದರೆ ನಿನ್ನ ಪ್ರಶಂಸೆ ಇನ್ನೂ ಬಾಕಿ ಇದೆ
ದೋಣ ಬೇಕಾಗಿದೆ ದಡವಿಲ್ಲದ ಸಾಗರದಲ್ಲಿ ವಿಹರಿಸಲು
-ಮಿರ್ಜಾ ಗಾಲೀಬ್
ಎದೆ ತುಂಬಾ ನೋವ ಕಡಲಿಟ್ಟುಕೊಂಡೇ ಮುರಿದೊಲವಿನ ಕವಿ ಗಾಲಿಬನೂ ಕೂಡಾ ಪ್ರೇಮದ ಹಂಬಲದಿ ತತ್ತರಿಸಿದ್ದಾನೆಂದರೆ ನಾನು ನೀನು ಯಾವ ಲೆಕ್ಕ ಹೇಳು.. .. ಕಣ್ಣೊಳಗಿನ ಹೂ ಬೊಂಬೆಯೇ!
ಕಾದು ಕಾದು ಕಾದು ಹೌದು, ಬರಿ ಕಾದು ಕ್ಷಣಗಳನ್ನು ಕಳೆದ ನನಗೆ ನೀನಷ್ಟೇ ಯುಗ ಕ್ಷಣವಾಗಿಸುವ, ಚಣವ ಯುಗ ಮಾಡಿ ಬಿಸಾಕುವ ಜಾದೂಗಾರಿಣಿ ! ನಮ್ಮೊಲವಿಗೆ ಅದೇನೇನು ಅಡ್ಡಿಯಾದವು..
ದಾಟಿದೆವಲ್ಲ, ಮೇಣ ತುಂಬಿದ
ಕಡಲನು
ನಮ್ಮ ಕೈಯಲ್ಲಿದ್ದದ್ದು ಒಲವ ಮಧುರ ಪಂಜು!
ಫೈಜ್ ನ ಈ ಸಾಲು ಓದಿಯೇ ಬಂದ ಅಡ್ಡಿ ಸಾಮಾಜಿಕವಾಗಿ ಎದುರಿಸಿ ಎರಡೂ ಮನೆಗಳಲ್ಲಿ, ಮನಗಳಲ್ಲಿ ಹಣತೆಗಾಗುವಷ್ಟು ಜಾಗ ಮಾಡಿಕೊಂಡೆವು. ಕೂಡುವಾಗಲೇ ಬಂದು ದೂರ ಮಾಡೋ ಹಳೆಯ ಸಿನಿಮಾದ ಕೇಡಿಯಂತೆ ಬಂತಲ್ಲ ಕೊಂದೂ ಕೊಲ್ಲದ ಈ ಕರೋನಾ!
ಎದೆಯ ಹಾಡಿಗೆ ನಮ್ಮ ಪ್ರೀತಿ ಪದಗಳಾಗಬೇಕಿತ್ತು
ಕಪ್ಪು ಹಲಗೆಗೆ ಸೀಮೆ ಸುಣ್ಣದಂತೆ ಒಲವಿದು ಅಕ್ಷರವಾಗಬೇಕಿತ್ತು
ಮುಟ್ಟಲಾರದ ಆ ಕಾಲದ ರಿವಾಜು ಬಂದಂತೆ ಕರೋನಾ ಬರಬಾರದಿತ್ತು
ಬರಲಿ…..ಬಂದು, ಗೀತಾ ಸಿನಿಮಾದಲ್ಲಿ ತುಂಡಾದ ಹಗ್ಗದ ಸೇತುವೆಯಾಗಿದ್ದು ದುರಂತ! ಬಿಡು ಹುಡುಗಿ ಆಗೋದೆಲ್ಲಾ ಒಳ್ಳೆಯದಕ್ಕೆ ಅಂತಿದ್ದ ಅವ್ವನ ಮಾತೂ ನೀನೂ ನಂಬುತ್ತಿದ್ದೆ.
ಲಗ್ನ ಆದ ಮೇಲೆ ಆಷಾಡದ ದಿನಗಳಲ್ಲಿ ದೂರ ಆದಂತೆಯೇ ಆದೆವು ಅಂದುಕೊಂಡು ಕರೋನಾ ವಿರಹವೇದನೆ ಕಳೆದಿದ್ದೇವೆ.
ತಂದ ತರಕಾರಿ, ಬಂದ ಅಂಚೆ ಮನೆ ಮುಂದಿನ ಕಟ್ಟೆಗಳ ಮೇಲೆ ಗಂಟೆಗಟ್ಟಲೆ ಇಟ್ಟು ಒಳಗೊಯ್ದು ಬಳಸುವಂತೆ ಇದೋ ಈ ಪತ್ರ ಈಗಾಗಲೇ ಮಧುರ ಒಲವಿನಿಂದಲೇ ಸ್ಯಾನಿಟೈಸ್ ಮಾಡಿ ಬಿಸಿಲಿಗಿಟ್ಟು ನಂತರ ನಿನ್ನ ಒಳ ಒಲವನ್ನೇ ಉಸಿರಾಗಿಸಿ ಅಕ್ಷರವಾಗಿಸಿ ಬರೆದು ಕಳಿಸಿರುವೆ.
ನಾ ಇಷ್ಟು ಹೇಳಿದರೂ , ಹೇಳದಿದ್ದರೂ ಇದು ಕಟ್ಟೆಯ ಬಿಸಿಲಿಗಿಟ್ಟೇ ನಿನ್ನ ಕೈಗೆ ನಿಮ್ಮ ಅಮ್ಮ ಕೊಡುವುದೆಂದು ಗೊತ್ತು. ಆಗಲಿ ಒಂದರಗಳಿಗೆ ನಾನಿರುವ ಆ ನಿನ್ನ ಗುಂಡಿಗೆಯ ಬಳಿ ಒತ್ತಿಟ್ಟುಕೊಂಡು ನಂತರ ಓದು ಸಖಿ!
ಲೋಕಾದ್ಯಂತ ಎಲ್ಲವೂ ಸಡಿಲಾಗುತ್ತಿದೆ. ಒಲವದು ಶಾಸನದ ಗೀರುಗಳು ಸಡಿಲಾಗಲು ಸಾಧ್ಯವೇ? ಸಾಧ್ಯವಾದಷ್ಟು ಬೇಗ ಸೀಮಿತ ತಲೆಗಳ ನಡುವೆಯೇ ಮನೆ ಮುಂದೆ ಹಸಿರ ಚಪ್ಪರದಡಿಯಲ್ಲಿ ಅಂತರವಿಟ್ಟೇ ಒಂದಾಗುವ. ಒಲವಿಗಿಲ್ಲದ ಮುಹೂರ್ತ ಕಲ್ಯಾಣಕ್ಕಾದರೂ ಏಕೆ!
ಬರುವ ಕ್ಷಣ ಕ್ಷಣವನ್ನೂ ಹೃದಯದ ಗೂಡಿನ ಕ್ವಾರೆಂಟೈನಲ್ಲಿ ಕಳೆಯೋಣವೇ?
ನಾಳೆಗಳು ನಮ್ಮವೇ ಅನ್ನುವ ಭರವಸೆಯಲ್ಲಿ ಉಸಿರಾಡುತ್ತಿರುವ ನಮಗೆ ದೇವರಾದರೂ ಯಾಕೆ ಅಡ್ಡ ಬಂದಾನು?
ಒಲವೇ ಒಲವಾಗು ಸಾಕು
ಇಂತಿ
ನಿನ್ನವ,
ನಿನ್ನೊಳಗೇ ಸೀಲ್ ಡೌನಾಗಲು ಕಾಯುತ್ತಿರುವ ಪ್ರೀತಿಯ ದಡ್ಡ!
-ಸಂತೆಬೆನ್ನೂರು ಫೈಜ್ನಟ್ರಾಜ್