ನನ್ನ ಪ್ರಿಯೆ,
ಮುಂಬರುವ ‘ಪ್ರೇಮಿಗಳ ದಿನ’ ಕ್ಕೆ ನನ್ನ ಪ್ರೀತಿಯ ಶುಭಾಶಯಗಳು. ನೀನು ಸಾಗರದಾಚೆಯ ಆ ದೇಶದಲ್ಲಿ ಇದ್ದರೆ ನಾನು ಇಲ್ಲೇ, ನಮ್ಮ ತಾಯ್ನಾಡಿನಲ್ಲಿ ಇರುವ ಪರಿಸ್ಥಿತಿ ನಮಗಿಂದು. ಅದರ ಕಾರಣಗಳು ಇಲ್ಲಿ ಅಪ್ರಸ್ತುತ. ಪ್ರಿಯೆ, ನಿನಗೆ ನೆನಪಿದೆಯೇ ನಾವು ಕಳೆದ ವರುಷ ಕೊಂಡಾಡಿದ ಆ ‘ಪ್ರೇಮಿಗಳ ದಿನ’. ಇಗೋ ಆ ನೆನಪಿನೊಡನೆ ಮತ್ತಷ್ಟು ನೆನಪುಗಳ ಸರಮಾಲೆ ನಿನ್ನ ಕೊರಳಿಗೆ.
ನಿನ್ನನ್ನು ಬಣ್ಣಿಸಲು ಹೊರಟರೆ ಬಹುಶಃ ನಿಘಂಟಿನ ಗುಣವಾಚಕಗಳೆಲ್ಲವೂ ಖಾಲಿಯಾಗಬಹುದೇನೋ ಎಂಬ ಗುಮಾನಿ ನನ್ನನ್ನು ಕಾಡುತ್ತಿದೆ ಪ್ರಿಯೆ. ಹೀಗೆ, ‘ಪ್ರಿಯೆ’ ಎಂದು ಪದೇ ಪದೇ ಕರೆದರೆ ನಿನಗೆ ಮುಜುಗರ ಮತ್ತು ಸಂಕೋಚವಿಲ್ಲ ತಾನೆ ? ನನಗಂತೂ ಖಿಂಚಿತ್ತೂ ಇಲ್ಲ… ನಾನು ನಿನ್ನನ್ನು ಏನೆಂದು ಕರೆಯಬೇಕೆಂದು, ನಮ್ಮಿಬ್ಬರಲ್ಲಿ ಆದ ಆ ಚರ್ಚೆ ನೀನು ಮರೆತಿರಲಾರೆ ಅಲ್ಲವೇ ? ಇರಲಿ, ನಾನಿರುವುದೇ ನಿನ್ನ ನೆನಪು ಹಸಿರಾಗಿಸಲು ಅಲ್ಲವೇ? ಮದುವೆಯ ಸಡಗರವೋ ಸಡಗರ; ನನ್ನ ಸ್ನೇಹಿತನ ತಂಗಿಯ ಮದುವೆ. ಮದ್ಯಮ ವರ್ಗದ ಕುಟುಂಬದವರ ಮದುವೆ. ಎಲ್ಲ ಸಿದ್ದತೆಗಳನ್ನು ಆ ನನ್ನ ಸ್ನೇಹಿತ ಮತ್ತು ನಾವುಗಳೆಲ್ಲರೂ ಕೂಡಿ ಮಾಡಿ ಮುಗಿಸಿದ್ದೆವು. ಆ ದಿನ, ಅಂದರೆ ಮದುವೆಯ ಹಿಂದಿನ ದಿನ, ವರಪೂಜೆಯ ದಿನ, ವರನ ಕಡೆಯವರನ್ನು ಬರಮಾಡಿಕೊಳ್ಳುವ ದಿನ; ಇದ್ದುದ್ದರಲ್ಲೇ ಚೆನ್ನಾಗಿ ಕಾಣುವ ಉಡುಪು ಧರಿಸಿ ನಾವೆಲ್ಲರೂ ವರನ ಕಡೆಯವರ ಆಗಮನಕ್ಕೆ ಕಾತುರದಿಂದ ಕಾಯುತ್ತಿದ್ದೆವು. ಹರೆಯಕ್ಕೆ ಕಾಲಿಡುತ್ತಿದ್ದ ನಾವು, ಅಂದರೆ, ಎಂಟು ಜನರಿದ್ದ ನಮ್ಮ ಗುಂಪಿನಲ್ಲಿ ಎಲ್ಲರೂ ಆದಷ್ಟೂ ಸುಂದರವಾಗಿ ಕಾಣಬೇಕೆಂದು; ಕ್ರಾಪನ್ನು ತೀಡುತ್ತಾ, ಶರಟಿನ ಕಾಲರನ್ನು ಪದೇ,ಪದೇ ನೀವುತ್ತಾ ಮದುವೆಗೆಂದು ಬರುತ್ತಿದ್ದ ಹುಡುಗಿಯರಿಗೆ ಫೋಸು ಕೊಡುತ್ತಾ, ಒಬ್ಬರಿಗೊಬ್ಬರು ಪೈಪೋಟಿಯಂತೆ ಛತ್ರದ ಬಾಗಿಲು ಕಾಯುತ್ತಿದ್ದೆವು. ಇನ್ನೇನು ವರನ ಕಡೆಯವರ ಆಗಮನ ಆಗೇಬಿಟ್ಟಿತು ಎನ್ನುವಷ್ಟರಲ್ಲಿ ಛತ್ರದ ಮುಂದೆ ಒಂದು ಆಟೋ ಬಂದು ನಿಂದಿತು. ಮೊದಲು ಆಟೋದಿಂದ ಇಳಿದಿದ್ದು ಒಬ್ಬರು ಅಜ್ಜಿ, ಮತ್ತೊಬ್ಬರು ಸುಮಾರು ನಲವತ್ತರ ಹರೆಯದ ಹೆಂಗಸು ಮತ್ತು… ಯಾರು ? ಮಟ್ಟಸ ಎತ್ತರದ, ದುಂಡು ಮುಖದ,ಹಾಲುಗೆನ್ನೆಯ ಚೆಲುವನ್ನು ನೂರ್ಮಡಿಸುವಂತೆ ರೇಶಿಮೆಯ ಹಳದಿ ಸೀರೆಯನುಟ್ಟು, ಅದಕ್ಕೊಪ್ಪುವಂತೆ ಹಸಿರು ಕುಪ್ಪುಸ ತೊಟ್ಟು, ಕುಪ್ಪುಸಕ್ಕೆ ಗುಲಾಬಿ ಕೆಂಪನ್ನು ನಾಚಿಸುವ ಕೆಂಪನೆಯ ದಾರವನ್ನು ಬೆನ್ನಿಗೆ ಇಳಿಬಿಟ್ಟು, ತಲೆಯ ಗುಂಗುರು ಕೂದಲನ್ನು ಹಿಂಬದಿಗೆ ಕಟ್ಟಿ, ಸುರುಗಿ ಹೂದಂಡೆ ಮುಡಿದ ನಗುಮೊಗದ ಚೆಲುವೆ, ಆಟೋದಿಂದ ಇಳಿದೊಡನೆ ನೋಡುತ್ತಿದ್ದ ನನ್ನ ಮನದಲ್ಲಿ ಸವಿ ಮಿಂಚೊಂದು ಸುಳಿದಂತಾಯ್ತು!
ಇದೇನಿದು ? ಚಂದ್ರನೇ ಧರೆಗೆ ಬಂದಂತೆ ; ಮನಸ್ಸೆಲ್ಲಾ ಹರುಡಿಯಾಗಿ, ಕೋಮಲ,ಶೀತಲ ಗಾಳಿಗೆ ಮೈಯೊಡ್ಡುತ್ತಾ ಎಲ್ಲೋ ಕಳೆದೆ ಹೋದೆನೇ ? ಎಲ್ಲಿ? ಮತ್ತೆ ಸೇರಿದೆನೇ ತಾಯ ಗರ್ಭ ? ಇಲ್ಲ. ಅದಲ್ಲ. ಇದು ಬೇರೆಯೇ… ಇಲ್ಲಿ; ತಾಯ ವಾತ್ಸಲ್ಯದ, ಮಮತೆಯ ಕರೆಯ ಬದುಲು ಪ್ರೀತಿಯ ಕರೆ ಕೂಗಿ ಕರೆದಿದೆ, ಪ್ರೇಮ ಕೈ ಬೀಸಿ ಕರೆದಿದೆ. ಮನಸ್ಸು ನಿನ್ನೆಡೆಗೆ ತುಯ್ಯುತ್ತಿದೆ. ಕಾರಣ ತಿಳಿಯುತ್ತಿಲ್ಲ. ಮನುಷ್ಯನ ಜೀವನದಲ್ಲಿಯ, ಒಂದು ಆಯಾಮದಿಂದ ಮತ್ತೊಂದಕ್ಕೆ ಜಿಗಿಯುವ ಸಿದ್ಧತೆ ಇರಬಹುದಲ್ಲವೇ ಇದು? ಪ್ರೀತಿಗೆ, ಪ್ರೇಮಕ್ಕೆ, ಮಮತೆಗೆ, ವಾತ್ಸಲ್ಯಕ್ಕೆ ಓ ಗೊಡಲೇ ಬೇಕಲ್ಲವೇ ಮಾನವ ? ಅದೇ ಅಲ್ಲವೇ ಜೀವನ ಪ್ರೀತಿ ? ಅದೇ ಜೀವನದ ಸಾರ್ಥಕತೆ. ನಿರ್ಜನ ಸ್ಥಳದಲ್ಲಿ ನಮ್ಮಿಬ್ಬರ ಜೊತೆಗೆ ಬರೀ ಮೌನ, ಮುಗುಳು ನಗೆಗಳು ನಮ್ಮ ಸಂಗಾತಿಗಳು ; ಮನಸ್ಸುಗಳು ಮಾತ್ರ ಮಾತನಾಡುವ ಸಮಯವದು. ಅಂದು ಆಷಾಡದ ಗಾಳಿಯೂ ಕೂಡ ಮಂದ ಗತಿಯಿಂದ ಬೀಸಲಾರಂಭಿಸಿತು ; ನಮ್ಮಿರ್ವರ ಮಿಲನದ ಮೌನದ ಮಾತುಗಳು ನಮಗೆ ಸ್ಪಷ್ಟವಾಗಿ ಕೇಳಲೆಂದೂ ಏನೋ! ಅಥವಾ ಗಾಳಿಯೂ ನಮ್ಮ ಒಲವಿನ ಮಾತುಗಳ ಆಲಿಸಲೆಂದೋ ! ಆ ಕ್ಷಣದಲ್ಲಿ ನನಗಾದ ಮನೋಲ್ಲಾಸ ವರ್ಣಿಸಲಾಸಾಧ್ಯ. ಹೇಗೆ ಹೇಳಲಿ ಅದನ್ನು? ನುಡಿಯಲು ಪದಗಳೆ ಇಲ್ಲದಂತಾಗಿ; ಮನಸ್ಸು ಬತ್ತಲು ಕುದುರೆಯಂತೆ, ಕೀಲು ಕುದುರೆಯಾಗಿ ಗಗನದಲ್ಲೆಲ್ಲಾ ತೇಲಿದಂತೆ, ಇಷ್ಟು ದಿನಗಳ ಕನಸುಗಳಿಗೆ ರೆಕ್ಕೆ ಪುಕ್ಕ ಬಂದಂತೆ; ಜೀಕುತ್ತಾ, ರೆಕ್ಕೆ ಬಡಿಯುತ್ತಾ. ಬಾನಾಡಿಯಾಗಿ ಗಗನದ ತುಂಬೆಲ್ಲಾ ನಾವಿಬ್ಬರೇ ಎಂದೆನಿಸಿ ಉಲ್ಲಸಿತನಾದ ಕ್ಷಣ.
ಪ್ರಿಯೆ, ನೆನೆಪಿದೆಯೇ ನಿನಗೆ, ನಮ್ಮ ಹಲವು ಭೇಟಿಯಲ್ಲಿ ಇಬ್ಬರೂ ಕೂಡಿ ಕಬ್ಬನ್ ಪಾರ್ಕಿನ ಕಲ್ಲು ಬೆಂಚಿನ ಮೇಲೆ ಕುಳಿತು ಮನಸ್ಸುಗಳನ್ನು ಅದುಲು, ಬದುಲು ಮಾಡಿಕೊಂಡು, ನನ್ನ ಅಂತರಾಳಕ್ಕೆ ನೀನಿಳಿದು, ನಾನು ನಿನ್ನಂತರಾಳವಾ ಹೊಕ್ಕು, ನೀನು ನನ್ನನ್ನು, ನಾನು ನಿನ್ನನ್ನು ಹುಡುಕಿಕೊಂಡಿದ್ದು. ಹುಡುಕಾಡುವ ಪರಿ. ಅದೆಂಥ ತಾದ್ಯುತ್ಮಾ ಭಾವವದು; ಮನಸ್ಸುಗಳು ಒಂದಕ್ಕೊಂದು ಬೆಸೆಯುವ ಸವಿ ಕಾಲ. ಹೃದಯಗಳು ಒಂದನ್ನೊಂದು ಕೂಗಿ ಕರೆವ ವಸಂತ ಕಾಲ. ಆಗಲೇ ಅಲ್ಲವೇ ನಮಗನಿಸಿದ್ದು ‘ನಾನು ನೀನೇ, ನೀನು ನಾನೇ’ ಎಂದು !
ಕಬ್ಬನ್ ಪಾರ್ಕಿನಿಂದ ಹೊರಟ ನಾವು, ನಿನ್ನ ಚಿಕ್ಕಮ್ಮಳ, ಅದಾಗ ತಾನೇ ಜನಿಸಿದ ನವಜಾತ ಶಿಶುವನ್ನು ಕಂಡು ಆಸ್ಪತ್ರೆಯಿಂದ ಹೊರ ಬರುತ್ತಿದ್ದಾಗ, ಯಾರದೋ ಶವವನ್ನು ಹೊತ್ತ ಆಂಬುಲೆನ್ಸ್ ವಾಹನ ನಮ್ಮ ಮುಂದೆ ಸಾಗಿದಾಗ; “ನಾವು ಎಲ್ಲಿದ್ದೇವೆ ? ಎಂಬುದನ್ನು, ನಾವಿನ್ನೂ ಅರಿಯಬೇಕಿದೆ” ಎಂದು, ನೀನು ಮಾರ್ಮಿಕವಾಗಿ ನುಡಿದು ನನಗೆ ಪ್ರಶ್ನೆಯಾದೆ. ಜೀವನದ ಆದಿಯಿಂದ ಅಂತ್ಯದೆಡೆಗೆ ನಡೆದಂತೆ ಭಾಸವಾಯಿತು ನನಗೆ. ನೀನೇನೋ ಹಾಗೆಂದು ತಟಸ್ಥಳಾಗಿ ನನ್ನಿಂದ ವಿದಾಯಗೊಂಡು ಅಲ್ಲಿಂದ ನಿರ್ಗಮಿಸಿದೆ, ಆದರೆ ನಾನು ? ಅಲ್ಲಿಯೇ ಸುಮಾರು ಸಮಯ ಕಳೆದೆ, ನಂತರ ಮನೆಗೆ ಬಂದು ನಿದ್ರೆ ಇಲ್ಲದೆ ನಿನ್ನ ಪ್ರಶ್ನೆಗೆ ಉತ್ತರ ಹುಡುಕುತ್ತಾ ರಾತ್ರಿ ಕಳೆದೆ. ನಿನ್ನ ಪ್ರಶ್ನೆಗೆ ಉತ್ತರ ಸಿಗಲಿಲ್ಲ; ಇನ್ನೂ ಸಿಕ್ಕಿಲ್ಲ.
ನಮಗೀಗ ಪ್ರಾಯ ಕಳೆದು ವಯಸ್ಸು ಅರವತ್ತಾದರೂ, ನಿನ್ನ ಪ್ರೀತಿಗೆ ನಾನು, ನನ್ನ ಪ್ರೀತಿಗೆ ನೀನು ಹಾತೊರೆಯುವ ರೀತಿ ಏನೆಂಬುದು ನನಗಿನ್ನೂ ಅರ್ಥವಾಗಿಯೇ ಇಲ್ಲ ಪ್ರಿಯೆ. ಯವ್ವನದ ಬಿಸಿ ಆರಿದ್ದರೂ, ಕಳೆದ ‘ವ್ಯಾಲೆಂಟೈನ್ ದಿನ’ ಗಳಂದು ನಾವು ಯುವ ಪ್ರೇಮಿಗಳಂತೆ ಕೈ-ಕೈ ಹಿಡಿದು ರೋಡು ಸುತ್ತಿದ ಪರಿ ಮತ್ತು ಹಿಂಗದ ಪ್ರೀತಿಗೆ ಏನು ಕಾರಣ? ಎಂದು ಕೇಳಿಕೊಳ್ಳುವಂತೆಯೇ ನಾವು, ‘ಪ್ರೇಮಿಗಳ ದಿನ’ ಕೊಂಡಾಡಲು ಹೋಗಿದ್ದ ಆ ದೊಡ್ಡ ಮಾಲಿನಲ್ಲಿ ನಡೆದ ಆ ಮಧುರವಾದ ಘಟನೆ ನೆನಪು ಬರುತ್ತಿದೆ. ಬೆಂಗಳೂರು ನಗರದ ಆ ಪ್ರತಿಷ್ಠಿತ ಮಾಲಿನಲ್ಲಿ ಅಂದು ಯುವತಿ,ಯುವಕರದೇ ಗುಂಪು. ಎಲ್ಲ ನವ ಜೋಡಿಗಳು ‘ಪ್ರೇಮಿಗಳ ದಿನವನ್ನು’ ಆಚರಿಸಲು ಸಡಗರದಿಂದ ಬಂದು ನೆರೆದಿದ್ದರು. ಯವ್ವನದ ಹೊಸ್ತಿಲಿನಲ್ಲಿರುವ ಆ ಜೋಡಿಗಳನ್ನು ಕಂಡಾಗ ನಮ್ಮಂಥ ವೃದ್ಧ ಜೋಡಿಗೆ ಅದೆಂಥ ಸಂಭ್ರಮ, ಮನೋಲ್ಲಾಸ; ಅವರೊಡನೆ ನಾವು ಅವರಂತರೆಯೇ ಎನಿಸಿ, ನಮಗೆಲ್ಲಿಲ್ಲದ ಉತ್ಸಾಹ ಚಿಮ್ಮಿತ್ತಲ್ಲವೇ?
ಸುಮಾರು ಹನ್ನೊಂದು ಗಂಟೆಯ ಸಮಯಕ್ಕೆ ಸರಿಯಾಗಿ ‘ಪ್ರೇಮಿಗಳ ದಿನದ ‘ ಕಾರ್ಯಕ್ರಮಗಳು ಆರಂಭಗೊಂಡವು. ಕಾರ್ಯ ಕರ್ತರು ಮತ್ತು ನಿರೂಪಕಿ ತಮ್ಮ ಕರ್ತವ್ಯವನ್ನು ಪ್ರಾರಂಭಿಸಿದರು. ಎಲ್ಲ ಜೋಡಿಗಳು ಅಲ್ಲಿ ನಡೆಸುವ ಸ್ಪರ್ಧೆಗಳಲ್ಲಿ ಭಾಗಿಯಾಗಲು ಸಿದ್ಧವಿರುವಂತೆಯೇ, ನಿರೂಪಕಿ ಹತ್ತು ಜೋಡಿಗಳನ್ನು ವೇದಿಕೆಗೆ ಕರೆಯ ಹತ್ತಿದಳು. ಸುಮಾರು ಒಂಬತ್ತು ಜೋಡಿ ಪ್ರೇಮಿಗಳು ವೇದಿಕೆಯನ್ನು ಏರಿದರು. ಹತ್ತರ ಜೋಡಿಗಾಗಿ ಮತ್ತೆ ನಿರೂಪಕಿ ಕರೆಯುತ್ತಿದ್ದಂತೆ ನಾವು ಕೈ-ಕೈ ಹಿಡಿದು ವೇದಿಕೆಗೆ ನಡೆದೇ ಬಿಟ್ಟೆವಲ್ಲ! ಅಲ್ಲಿ ನೆರೆದಿದ್ದ ಎಲ್ಲ ಯುವ ಪ್ರೇಮಿಗಳು ಮತ್ತು ವೇದಿಕೆಯ ಮೇಲೆ ಸೇರಿದ್ದ ಪ್ರೇಮಿಗಳೂ ಕೂಡ ನಮ್ಮನ್ನು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ನಮಗೆ ಒಂದು ರೀತಿಯ ನಾಚಿಕೆಯಾದರೂ ಅದನ್ನು ತೋರ್ಪಡಿಸದೆ ವೇದಿಕೆ ಏರಿದ್ದೆವು. ನೀನು ನಾಚಿಕೆಯಿಂದ ಕೆಂಪಾಗಿದ್ದೆ. ನಾವು ವೇದಿಕೆಯನ್ನು ಏರಿ ಆ ಪ್ರೇಮಿಗಳೊಡನೆ ಸಾಲಿನಲ್ಲಿ ನಿಲ್ಲುತ್ತಿದ್ದಂತೆ ನಮ್ಮ ಬಳಿಗೆ ಆತುರದಿಂದ ಧಾವಿಸಿದ ನಿರೂಪಕಿ “ಸಾರ್ ನೀವು ಈ ಸ್ಪರ್ಧೆಗೆ ಅರ್ಹರಲ್ಲ, ದಯವಿಟ್ಟು ತಪ್ಪು ತಿಳಿಯಬೇಡಿ, ವೇದಿಕೆಯಿಂದ ಇಳಿದು ಬಿಡಿ, ಕೊನೆಗೆ ನಿಮಗೇ ತಿಳಿಯುತ್ತದೆ ” ಎಂಬ ಆಘಾತಕರವಾದ ವಾರ್ತೆಯನ್ನು ನಮ್ಮ ಕಿವಿಯಲ್ಲಿ ಉಸುರಿದಳು. ನಮಗೆ ಅವಳ ಮಾತುಗಳನ್ನು ಕೇಳಿ, ಇದ್ದ ಉತ್ಸಾಹವೆಲ್ಲ ಕರಗಿ ನೀರಾಗಿ, ನಾವೂ ನಾಚಿ ನೀರಾದೆವು. ಈ ಘಟನೆಯಿಂದ ನಿನಗಂತೂ ಕೋಪ ನೆತ್ತಿಗೇರಿಬಿಟ್ಟಿತ್ತು. ನೀನು, ನಿರೂಪಕಿಯನ್ನು ನಮ್ಮ ಅನರ್ಹತೆಯ ಬಗೆಗೆ ಕಾರಣ ಕೇಳತೊಡಗಿದೆ. ಕೊನೆಗೂ ನಾವು ವೇದಿಕೆಯಿಂದ ಇಳಿಯಬೇಕಾಯಿತು. ಅಲ್ಲಿ ನೆರೆದಿದ್ದ ಇತರೆ ಜೋಡಿಗಳು ನಮ್ಮನು ವೇದಿಕೆಯಿಂದ ಇಳಿಸಲು ಕಾರಣವೇನೆಂದು ನಿರೂಪಕಿಯನ್ನು ಕೂಗಿ ಕೇಳತೊಡಗಿದರು. ಅದಕ್ಕೆ ಉತ್ತರವಾಗಿ ನಿರೂಪಕಿ ನಗುತ್ತಲೇ ಸ್ಪರ್ಧೆಯನ್ನು ಆರಂಭಿಸಿದಳು.
ರಾಕ್ ಸಂಗೀತದೊಡನೆ ಸ್ಪರ್ಧೆ ಪ್ರಾರಂಭವಾಯಿತು. ಸ್ಪರ್ಧೆಯಲ್ಲಿ, ಹೆಣ್ಣು, ಗಂಡಿನ ತಲೆಯ ಕೂದಲಿಗೆ ರಬ್ಬರ್ ಬ್ಯಾಂಡುಗಳನ್ನು ಹಾಕುವ ಸ್ಪರ್ಧೆ ಅದು. ಯಾವ ಜೋಡಿ ಹೆಚ್ಚಿನ ಸಂಖ್ಯೆಯ ರಬ್ಬರ್ ಬ್ಯಾಂಡ್ ಹಾಕುತ್ತಾರೋ ಆ ಜೋಡಿ ಆ ಸ್ಪರ್ಧೆಯಲ್ಲಿ ಗೆದ್ದಂತೆ. ಎಲ್ಲರೂ ವೇದಿಕೆಯಲ್ಲಿದ್ದ ಸ್ಪರ್ದಾಳುಗಳನ್ನು ನೋಡದೆ, ನನ್ನ ‘ಬಕ್ಕ’ ತಲೆಯನ್ನು ಕಂಡು ನಗ ಹತ್ತಿದರು. ಆಗ ತಿಳಿಯಿತು ನಿರೂಪಕಿಯ ಇಂಗಿತ. ನೀನಂತೂ ಅವಮಾನದಿಂದ ಮತ್ತಷ್ಟು ಕೆಂಪಡರಿಹೋದೆ. ನೀನು ಅವಡುಗಚ್ಚುತ್ತ ನಿಂದೆ. ಸ್ಪರ್ಧೆಯಲ್ಲಿ ಗೆದ್ದ ಜೋಡಿಯೂ ಸೇರಿದಂತೆ ಎಲ್ಲ ಪ್ರೇಮಿಗಳೂ ಬಂದು ನಮ್ಮನು ಸುತ್ತುವರೆದು ತಮಗೆ ಹಾಕಿದ್ದ ಆ ವಿಜಯಮಾಲೆಯನ್ನು ನಮಗೆ ಅರ್ಪಿಸಿದರು. ಅದೆಂಥ ಕ್ಷಣವದು ! ಅತಿ ಮಧುರವಾದ ಕ್ಷಣವಲ್ಲವೇ? ನಮಗೆ ಅವರದೇ ವಯಸ್ಸಿನ ಮಕ್ಕಳಿದ್ದಾರೆಂದು ತಿಳಿದು ಆ ಜೋಡಿಗಳು ಅದೆಷ್ಟು ಸಂತಸ ಹೊಂದಿದರಲ್ಲವೇ? ನಮ್ಮ ಬಾಳಿನ ಮರೆಯಲಾಗದ ದಿನವಲ್ಲವೇ ಅದು? ಅಂದು, ಆ ಮದುವೆಯ ದಿನದಂದು ನಿನ್ನನ್ನು ಕಂಡು ನಾನು ಗಲಿಬಿಲಿ ಗೊಂಡಿದ್ದೆ, ಜೊತೆಗೆ ನವಿರಾಗಿ ಪುಳುಕಗೊಂಡಿದ್ದೆ. ಪ್ರಿಯೆ, ನನಗೆ ಮೊದಲ ಬಾರಿ ಜೋಗ ಜಲಪಾತದ ಆ ಪ್ರಕೃತಿಯ ರಮಣೀಯ ಸೌಂದರ್ಯವನ್ನು ಕಂಡು ಆನಂದ ಭಾಷ್ಪ ನನ್ನ ಕಣ್ಣುಗಳಿಂದ ನನಗರಿವಿಲ್ಲದಯೇ ಇಳಿದಿತ್ತು. ಆಗಲೂ ನಾನು ಪುಳಕಿತಗೊಂಡಿದ್ದೆ.
ಮನುಷ್ಯನಿಗೆ ಅಪರಿಮಿತವಾದ ಸೌಂದರ್ಯನ್ನು ಕಂಡು, ನುಡಿಯುವ ಮಾತೇ ನಿಂತು ಹೋಗಿ, ಆಡುವ ಬಾಯಿ ಮಾತು ಕಟ್ಟಿಬಿಡುವುದು, ಎದೆಯ ಬಡಿತ ನೂರ್ಮಡಿಸುವುದು, ಕಣ್ಣುಗಳಲ್ಲಿ ನೂರ್ಮಿಂಚು ಹೊಳೆಯುವುದು, ಮನಸ್ಸು ಯದ್ವಾ ತದ್ವಾ ಲಂಗು ಲಗಾಮಿಲ್ಲದೆ ಓಡುವುದು,ಕೊನೆಗೆ ದಿಗ್ಬ್ರಮಿಸುವುದು ಸಾಮಾನ್ಯ ಎಂಬುದು ನನ್ನರಿವಿಗೆ ಬಂದದ್ದು ಆಗಲೇ. ಪರಮಾತ್ಮನಿಗಾಗಿ ಘೋರ ತಪಸ್ಸು ಮಾಡಿ, ಅವನು ಪ್ರತ್ಯಕ್ಷವಾದಾಗ, ಆತನ ದಿವ್ಯ ತೇಜಸ್ಸನ್ನು ಕಂಡು ತಬ್ಬಿಬ್ಬಾಗಿ ತಪ್ಪು ವರವನ್ನು ಕೇಳುತ್ತಿದ್ದ ಅಸುರ ರಾಜರಂತೆ ನನ್ನ ಸ್ಥಿತಿಯಾಗಿತ್ತು. ನನಗಂತೂ ನಿನ್ನನ್ನು ಕಂಡ ಆ ಕ್ಷಣ ಹಾಗೆಯೇ ಆಗಿತ್ತು. ‘ಏ ಥಿಂಗ್ ಆಫ್ ಬ್ಯೂಟಿ ಈಸ್ ಜಾಯ್ ಫಾರ್ ಎವರ್’ ಎಂದು ಅಂದು ನುಡಿದ ಆಂಗ್ಲ ಬಾಷೆಯ ಕವಿ, ಜಾನ್ ಕೀಟ್ಸ್. ಸೌಂದರ್ಯ ಯಾವಾಗಲೂ ಸಂತಸವನ್ನು ಕೊಡುತ್ತದೆ. ಈ ಭೂಮಿಯಲ್ಲಿ ಸೌಂದರ್ಯವಾದುದನ್ನು ಪಡೆಯಲು ಎಲ್ಲರೂ ಹಾತೊರೆಯುತ್ತಾರೆ, ಸೌಂದರ್ಯ ; ಹೊಳೆಯುವ ತಾರೆಗಳನ್ನೋ, ಹುಣ್ಣಿಮೆಯ ಚಂದ್ರನನ್ನೋ ನೋಡಿದೊಡನೆ ನಮ್ಮ ಮನಸ್ಸು ಪ್ರಫುಲ್ಲಿತವಾಗಿ ಶಾಂತತೆಯನ್ನು ಹೊಂದುವ ಹಾಗೆ ತನ್ನ ನವಿರಾದ ಬಾಹುಗಳಿಂದ ನಮ್ಮನ್ನು ಬಳಸುತ್ತದೆ. ಪ್ರಿಯೆ, ಬಾಹ್ಯ ಸೌಂದರ್ಯದಿಂದ ಮನಸ್ಸು ಮುದ ಹೊಂದಿ, ಆ ವಸ್ತು ಅಥವಾ ವ್ಯಕ್ತಿಯ ಒಡನಾಟದಿಂದ ಅಂತರಾಳದ ಸೌಂದರ್ಯದ ಪರಿಚಯವಾಗಿ, ಅದು ನೋಡುಗನ ಮನಸ್ಸಿಗೆ ಸರಿದೂಗಿ, ಸೌಂದರ್ಯೋಪಾಸನೆಯಲ್ಲಿ ಅಂತ್ಯವಾದರೆ ಅಲ್ಲಿ ಪ್ರೀತಿಯ ಸಾಕಾರವಾಗುತ್ತದೆ. ಪ್ರೇಮದ ಸಾಕ್ಷಾತ್ಕಾರವಾಗುತ್ತದೆ. ಅಂತೆಯೇ ಆ ವ್ಯಕ್ತಿ ಅಥವಾ ಆ ವಸ್ತು ಒಡನಾಡಿಯಾಗಿ ಜೊತೆಯಾಗುತ್ತಾನೆ ಅಥವಾ ಜೊತೆಯಾಗುತ್ತದೆ.
ಬಾಹ್ಯ ಸೌಂದರ್ಯ ಮತ್ತು ಆಂತರಿಕ ಸೌಂದರ್ಯ ಎರಡೂ ಸರಿಸಮಾನವಾಗಿ ತೂಗಿದರೆ ಮಾತ್ರ ಶಾಶ್ವತ ಪ್ರೀತಿಯ ಆಂಕುರವಾಗುತ್ತದಲ್ಲವೇ ? ಒಂದು ಗಂಡು, ಹೆಣ್ಣನ್ನೂ ಅಥವಾ ಹೆಣ್ಣು, ಗಂಡನ್ನೂ ಅದಮ್ಯವಾಗಿ ಪ್ರೀತಿಸಿದರೆ, ಆ ಪ್ರೀತಿಯು ಶಾಶ್ವತವಾಗಿ ಉಳಿಯುವುದು ಪ್ರಾಯಶಃ ಆಂತರ್ಯದ ಬೇರುಗಳು ಬೆಳೆದು ಹೃದಯದಲ್ಲಿ ಬೀಡು ಬಿಟ್ಟಿರುವುದೇ ಕಾರಣ. ಸ್ನೇಹಿತನ ತಂಗಿಯ ಮದುವೆಗೆಂದು ಬಂದ ನೀನು ನನ್ನ ಬಾಳ ಸಂಗಾತಿಯಾಗುವೆಯೆಂದು, ನಾನು ಎಣಿಸಿಯೇ ಇರಲಿಲ್ಲ. ನಾನು ಈ ಪತ್ರದ ಮೊದಲನೆಯ ಸಾಲುಗಳಲ್ಲಿ ತಿಳಿಸಿದಂತೆ ‘ನಾನು ನಿನ್ನನ್ನು, ಏನೆಂದು ಕರೆಯಬೇಕೆಂಬುದರ’ ಚರ್ಚೆ. ನಾನು, ನಿನ್ನ ಹೆಸರನ್ನು ಮೊಟಕು ಮಾಡಿ ಕರೆದರೆ ಹೇಗೆ ? ಎಂದೊಡನೆ, “ನಮ್ಮ ಅಪ್ಪ ಇಟ್ಟ ಹೆಸರನ್ನು ನೀನು ಹೇಗೆ ಮೊಟಕು ಮಾಡಿ ಕರೆವೆ ?” ಎಂದಾಗ, ನಾನು ತಬ್ಬಿಬ್ಬಾದೆ. ನಿನ್ನ ಹುಸಿ ಮುನಿಸಿನ ಪರಿಚಯ ಆಗಲೇ ನನಗಾದದ್ದು. ಅಂತೂ ಏನಾದರೂ ಕರೆ, ಆದರೆ, ಕರೆ ‘ನನ್ನವಳೆಂದು’ ಎಂದು ಹೇಳಿ, ನಾನೆಂದೋ ಓದಿದ್ದ ಒಂದು ಆಂಗ್ಲ ಭಾಷೆಯ ಪದ್ಯವನ್ನು ನೆನಪಿಸಿದೆ ನೀನು. ಹಾಗಾಗಿ ನಾನು, ನಿನ್ನನ್ನು, ‘ಪ್ರಿಯೆ’ ಎಂದೇ ಕರೆಯಹತ್ತಿದೆ. ಪ್ರಿಯೆ, ಅಂದು ಅಂಕುರಿಸಿದ ಆ ‘ಪ್ರೀತಿ’ ; ನಮ್ಮ ಜೀವನದ ಜಂಜಾಟದಲ್ಲಿ, ಏರಿಳಿತಗಳಲ್ಲಿ, ತಾಪತ್ರಯಗಳಲ್ಲಿ ಎಲ್ಲಿಯೂ ಕಳೆದು ಹೋಗದೆ ನಮ್ಮ ಜೊತೆಯಾಗಿಯೇ ಬರುತ್ತಿದೆಯಲ್ಲವೇ ? ಒಮ್ಮೊಮ್ಮೆ ಬರುವ, ‘ನಾನೆಂಬ’ ಅಹಂ ಅನ್ನು ನಾವು ಗೆದ್ದೆವೆಂದೇ ಹೇಳಿದರೆ, ಅದೂ ಒಂದು ರೀತಿಯ ಅಹಂ ಆಗುವುದೇನೋ. ಪ್ರೀತಿಯನ್ನು ಇಷ್ಟೇ ಎಂದು ಹೇಳುವುದೂ, ಗಣಿತದಲ್ಲಿಯ ಇಂಫಿನಿಟಿಯನ್ನು ಕಿರಿದು ಮಾಡಲು ಪ್ರಯತ್ನ ಪಡುವುದೂ ಒಂದೇ ತಾನೇ ?
ಇಂತೂ ನಿನ್ನ ಪ್ರೀತಿಯನ್ನು ಅನವರತ ಬಯಸುವ,
ನಿನ್ನೊಲವಿನ ಬಾಳ ಗೆಳೆಯ. ನಿನ್ನೊಲವಿನ ಪ್ರೇಮಿ.
-ಶ್ರೀ ಕೊ ಯ