ನಿಲುವಂಗಿಯ ಕನಸು (ಅಧ್ಯಾಯ ೬-೭): ಹಾಡ್ಲಹಳ್ಳಿ ನಾಗರಾಜ್

ಅಧ್ಯಾಯ ೬: ಕೃಷಿ ಎಂಬ ಧ್ಯಾನ

ಹೊಳೆಗೆ ಇಳಿದ ದನಗಳು ಬೆಳಗಿನ ಬಾಯಾರಿಕೆ ನೀಗಿಕೊಂಡು, ಹಾಗೆಯೇ ಸ್ವಲ್ಪ ದೂರ ಹೊಳೆಯೊಳಗೇ ಮುದದಿಂದ ನಡೆದು, ಬಲದ ದಂಡೆಗೆ ಹತ್ತಿ, ಅಲ್ಲಿಂದ ಮತ್ತೊಂದು ದಿಣ್ಣೆ ಏರತೊಡಗಿದವು. ಎರಡು ಪರ್ಲಾಂಗ್ ನಡೆದರೆ ಮತ್ತೊಂದು ತಳಾರ ಜಾಗ. ಕಡಿದಾದ ದಿಣ್ಣೆ ಏರಿ ದಣಿದ ದನಗಳು ದಾರಿಯಲ್ಲಿ ಮುಂದೆ ಹೋಗದೆ ವಿಶಾಲವಾದ ಆ ತಳಾರದಲ್ಲಿ ಮೇಯತೊಡಗಿದವು.
ಅಕ್ಕನೊಂದಿಗೆ ಲಘುವಾಗಿ ಕೀಟಲೆ ಮಾಡುತ್ತಾ ಬರುತ್ತಿದ್ದ ಸುಬ್ಬಪ್ಪ ದನಗಳು ಮುದದಿಂದ ಮೇಯುತ್ತಿದ್ದುದನ್ನು ನೋಡಿ, ‘ಓಹೋ, ಇದಕ್ಕೇ ನಮ್ಮ ಭಾವ ದನ ಬಾರಿ ಕಾಯದಿಕೆ ಅಂದ್ರೆ ಕುಣ್‍ಕಂಡು ಬರೊದು!’ ಎಂದು ಭಾವನನ್ನು ಕೆಣಕಿದ.
‘ಈಗ ಕಾಡಲಿ ಒಳ್ಳೆ ಮೇವು ಐತೆ ಹಿಂಗನ್ತೀಯಾ. ಉರಿ ಕಾಲ್ದಲ್ಲಿ ಒಂದೊಂದೂ ಕೈಗೆ ಸಿಕ್ಕದ ಹಂಗೆ ಕಾಡು ನುಗ್ಗಿ ಹೋಗುವಾಗ ಅವನ್ನ ತಡೆಯೋಕೆ ಆಗದೆ ಅಳೂನೆ ಬಂದ್ ಬಿಡುತ್ತೆ. ಇನ್ನು ಮುಂಗಾರಿನಲ್ಲಿ ಬೆಟ್ಟ ಕಣುಗಲು ಹಣ್ಣಿನ ವಾಸನೆಗೇ ಬೆಟ್ಟ ಬಿಟ್ಟು ಬೆಟ್ಟಕ್ಕೆ ನಾಗಾಲೋಟ ಶುರುಮಾಡಿದಾಗ ಯಾಕಾದ್ರೂ ಬೇಕು ಈ ಜನ್ಮ ಎನ್ನಿಸಿಬಿಡುತ್ತೆ’ ಎಂದು ತನ್ನ ಗೋಳು ತೋಡಿಕೊಂಡ.

ಅಷ್ಟರಲ್ಲಿ ತಲೆಯ ಮೇಲಿನ ಕುಕ್ಕೆ ಇಳಿಸಿ ‘ಉಸ್ಸಪ್ಪ’ ಎನ್ನುತ್ತಾ ಕುಳಿತ ಸೀತೆ ಮುಂದಿನ ಕಡಿದಾದ ಬೆಟ್ಟದ ದಾರಿಯ ಕಡೆಗೆ ನೋಡುತ್ತಾ ‘ಇನ್ನು ನನ್ನ ಕೈಲಿ ಆಗದಿಲ್ಲಪ್ಪ ನಡಿಯಕೆ’ ಎಂದಳು.
‘ಇನ್ನೂ ಅರ್ಧ ದಾರಿನೂ ಬಂದಿಲ್ಲ ಇಷ್ಟಕ್ಕೆ ಮುಕ್ಕಿರಿದು ಬಿಟ್ರೆ ಹೆಂಗಕ್ಕ. ಹಿಂದ್ಲವ್ರು ಈ ಗಡಿವಾಡದ ದಾರಿಲಿ ಹತ್ತಿ ಇಳ್ದು ಹೆಂಗೆ ಅಂತಂತಾ ತ್ವಾಟ ಮಾಡಿರಬಹುದು?’ ಅಕ್ಕನನ್ನು ಕೆಣಕುತ್ತಲೇ ಅಚ್ಚರಿ ವ್ಯಕ್ತಪಡಿಸಿದ ಸುಬ್ಬಪ್ಪ.
‘ಹಿಂದಿನ ತಲೆಮಾರಿನವರು ನಮ್ಮಂಗಲ್ಲ ಕಣೆ. ಹಿಡಿದ ಹಠ ಬಿಡದೇ ಸಾಧಿಸಿದ್ದರು’ ಚಿನ್ನಪ್ಪ ಹೆಂಡತಿ ಕುರಿತು ಹೇಳಿದ.
‘ಅವರದೂ ಒಂದು ತರಹ ಹಟಯೋಗ ಅಂತಾರಲ್ಲ ಹಾಗೆ ಅನ್ನಿ’ ಅಂದ ಸುಬ್ಬಪ್ಪ.

‘ಹಟಯೋಗ ಅಂತ ಅಲ್ಲ. ಏಳನೇ ಕ್ಲಾಸಿನಲ್ಲಿ ನಮ್ಮ ಮೇಷ್ಟ್ರು ಒಬ್ರು ಹೇಳತಾ ಇದ್ರು, ಯಾವುದೇ ಕೆಲಸವನ್ನು ಧ್ಯಾನದ ರೀತಿ ಪರಿಗಣಿಸಿ ಮಾಡಬೇಕು. ಆಗ ಯಶಸ್ಸು ಗ್ಯಾರಂಟಿ ಅಂತ. ನನಗನ್ನಿಸುತ್ತೆ ನಮ್ಮ ಹಿರೀಕರು ಕೃಷಿಯನ್ನು ಒಂದು ಧ್ಯಾನ ಅಂತಾ ಪರಿಗಣಿಸಿದ್ರು ಅಂತಾ…ಅಷ್ಟಿಲ್ಲದೆ ಇದ್ರೆ ನಮ್ಮವ್ವ ಒಬ್ಬರ ಕೈಲಿ ಈ ಕಾಡು ತ್ವಾಟವನ್ನು ಅಭಿವೃದ್ಧಿ ಮಾಡಿ ನಿಲ್ಸಕೆ ಹ್ಯಾಗೆ ಸಾಧ್ಯವಾಗ್ತಾ ಇತ್ತು?’ ಸೀತೆಗೆ ಹೇಗೋ ಹಾಗೆ ಸುಬ್ಬಪ್ಪನಿಗೂ ಕುತೂಹಲ ಮೂಡಿತು.
‘ಯಾಕೆ ಮಾವ ಇದ್ರಲ್ಲ’ ಎಂದ.
‘ನಮ್ಮಪ್ಪ ಬರೀ ಹೆಸ್ರಿಗೆ ಅಷ್ಟೆ. ನಾವು ಸಣ್ಣದರಿಂದ್ಲೂ ನೋಡಿದ್ವಲ್ಲ. ಈಗಿನಂಗೆ ದನ ಬಾರಿ ಕಾಯದು ಇರ್ಲಿಲ್ಲ. ಬೆಳಗಾಗಿ ಎದ್ದು ಅಪ್ಪ ಕೇಪಿನ ಕೋವಿ ಹೆಗಲ ಮೇಲೆ ಹಾಕಿಕೊಂಡು ದನಾ ಬಿಟ್ಟುಕೊಂಡು ಕಾಡಿನ ಕಡೆ ಹೊರಟರೆ ಆಯ್ತು. ಮತ್ತೆ ಸಂಜೆ ಕಣ್ಣಿಗೆ ಕತ್ತಲೆಗೆ ಮನೆಗೆ ಬಂದಾಗಲೇ ನಾವು ಕಾಣುತ್ತಿದ್ದುದು. ಏಲಕ್ಕಿ ಗಿಡ ಲೂಟಿಮಾಡುತ್ತಿದ್ದ ಕಪಿ ಓಡಿಸುವ ನೆಪದಲ್ಲಿ ಬರೀ ತಿರುಗಾಟವೇ. ಸೇಂದಿಗೆ ಖಾಯಮ್ಮಾಗಿ ಅವರೇ ಮಾಡಿಕೊಂಡಿರುತ್ತಿದ್ದ ಬೈನೆ, ಮುಂಗಾರಲ್ಲಾದರೆ ಅಬ್ಬಿಗೆ ಹ್ಯಾಪೆ ಕಟ್ಟಿ ಇಲ್ಲವೆ ಬೇಸಿಗೆಯಲ್ಲಿ ಕೂಳಿ ಹಾಕಿ ಹಿಡಿದ ಮೀನು, ಕಬ್ಬೆಕ್ಕು, ಬರ್ಕ, ಮೊಲ, ಕಾಡುಕೋಳಿ ಹೀಗೆ ಯಾವುದಾದರೂ ಸಣ್ಣಪುಟ್ಟ ಮಿಗ ಪಕ್ಷಿಗಳ ಮಾಂಸ. ಇನ್ನೇನು ಬೇಕು ಅವರ ಖುಷಿಗೆ’ ಚಿನ್ನಪ್ಪ ಹೇಳುತ್ತಲೇ ಇದ್ದ.

‘ಬರೀ ಅವರ ಖುಷಿಗೆ ಅಲ್ಲ ನಿಮ್ಮ ಖುಷಿಗೆ ಅನ್ನಿ’ ಚಿನ್ನಪ್ಪನ ಮಾತು ತುಂಡರಿಸಿ ಹೇಳಿದ ಸುಬ್ಬಪ್ಪ.
‘ಹೌದೌದು, ಶಾಂತೇಗೌಡ್ರ ಮನೇಲಿ ಯಾವತ್ತೂ ಹೊಲಸಿನ ಪಾತ್ರೆ ತೊಳಿಯೋದೇ ಇಲ್ಲ ಅಂತ ಜನ ಮಾತಾಡಿಕೊಳ್ತಾ ಇದ್ರು. ಆದರೆ ಅವ್ವ ಮಾತ್ರ ಅಪ್ಪ ಬರುವುದು ರಾತ್ರಿ ತಡವಾದ ದಿನ ನಮ್ಮನ್ನೆಲ್ಲಾ ಕೂರಿಸಿಕೊಂಡು ‘ನಾನಾಗ ಹೊತ್ತಿಗೆ ನಿಮ್ಮ ಅಪ್ಪನಂತ ಬೇಜವಾಬ್ದಾರಿ ಮನುಷ್ಯನನ್ನು ಕಟ್ಟಿಕೊಂಡು ಏಗ್ತಾ ಇದೀನಿ. ದಿಣ್ಣೆ ಮೇಲೆ ಕೊಳ್ಳೂದಿಕೊಂಡು ದನಾ ಕಾಯ್ತಾ ಇದ್ದ ಇವ್ನಿಗೆ ನನ್ನ ಕಟ್ಟಿ ಬಿಟ್ಟರು’ ಎಂದು ವಿಷಾದಿಸುತ್ತಿದ್ದಳು.
ಕೇರಳದ ನಾಯಮ್ಮಾರರನ್ನ ಕರೆಸಿ ಕಾಡು ಕಡಿಸಿಕೊಟ್ಟರೆ ಅಪ್ಪನ ಜವಾಬ್ದಾರಿ ಮುಗಿಯಿತು. ಇನ್ನುಳಿದಂತೆ ತನ್ನ ತಂಗಿಯರನ್ನು ಕಟ್ಟಿಕೊಂಡು ಊರಬಳಿ ಗದ್ದೆಯಲ್ಲಿ ಮಡಿ ಮಾಡಿ ಏಲಕ್ಕಿ ಸಸಿ ಬೆಳೆಯುವುದು, ಜೋರು ಮಳೆ ಹಿಡಿಯಿತೆಂದರೆ ಗಿಡಗಳನ್ನು ಈ ಗಡಿವಾಡದ ದಾರಿಯಲ್ಲಿ ಗಾಳಿ ಮಳೆಯ ಅಬ್ಬರವನ್ನು ಎದುರಿಸಿ ಹೊತ್ತುತಂದು ಗುದ್ದಲಿಯಲ್ಲಿ ಅಗೆದು ಗುಂಡಿಮಾಡಿ ಹಾಕುವುದು ಎಲ್ಲ ಕೆಲಸ ಅವ್ವನದೇ. ದಿನವಿಡೀ ಸುರಿಯುವ ಮಳೆಯಲ್ಲಿ ಆ ಭಯಂಕರ ಕಾಡಿನಲ್ಲಿ ಹೆಣ್ಣು ಹೆಂಗಸೊಬ್ಬಳು ತನ್ನ ವಯಸ್ಸಿಗೆ ಬಂದ ತಂಗಿಯರನ್ನು ಕಟ್ಟಿಕೊಂಡು ಕೆಲಸ ಮಾಡುತ್ತಿದ್ದಳೆಂದರೆ ಈಗ ಕಲ್ಪಿಸಿಕೊಳ್ಳಲೂ ಭಯವಾಗುತ್ತೆ.

ನಮ್ಮ ಅವ್ವನ ಅದೃಷ್ಟಕ್ಕೆ ತೌರುಮನೆಯಲ್ಲಿ ಅವಳ ಹಿಂದೆ ಹುಟ್ಟಿದ ಐದು ಜನ ತಂಗಿಯರು! ಒಬ್ಬಳು ಮದುವೆಯಾಗಿ ಹೋದರೆ ಮತ್ತೊಬ್ಬಳು ಬಂದು ನೆರವಿಗೆ ಇರುತ್ತಿದ್ದಳು.
‘ನಮ್ಮ ಬಡ್ಡೆಯವರಿಗೆಲ್ಲಾ ಊರ ಮುಂದ್ಲ ಜಮೀನು ಐತೆ. ನಮಗ್ಯಾಕಿಂತ ಕಾಡು. ಅಂತಾ ಗಟ್ಟಿಗಿತ್ತಿ ನಮ್ಮತ್ತೆ ತನಗೂ ಪಾಲಲ್ಲಿ ಸ್ವಲ್ಪ ಊರ ಬಡ್ಡೆ ಜಮೀನು ತಗಳ್ಬಹುದಾಗಿತ್ತಲ್ಲ’ ಚಿನ್ನಪ್ಪನ ಗಂಭೀರ ಮಾತಿನ ನಡುವೆ ಸೀತೆ ತನ್ನ ಮನಸ್ಸಿನ ಅನುಮಾನ ವ್ಯಕ್ತಪಡಿಸಿದಳು.
‘ಪಾಪ ಅವಳಾದ್ರೂ ಏನ್ಮಾಡಕೆ ಸಾಧ್ಯ ಇತ್ತು. ಸಣ್ಣ ವಯಸ್ಸಿನಲ್ಲೇ ತಾಯಿ ತಂದೆಯರನ್ನು ಕಳೆದುಕೊಂಡಿದ್ದ ನಮ್ಮ ಅಪ್ಪ ತನ್ನ ಚಿಕ್ಕಪ್ಪನ ಮಾತಿನ ಅಧೀನ. ಅವ್ವ ಮೊದಲನೇ ಹೆರಿಗೆಗೆ ಹೋಗಿ ಬರುವ ವೇಳೆಗೆ ಪಂಚಾಯಿತಿ ನಡೆಸಿ ಪಾಲುಮಾಡಿ ಹೊರಹಾಕಿ ಆಗಿತ್ತು.
ವಯಸ್ಸು, ಅನಾರೋಗ್ಯದ ನೆಪ ಹೇಳಿ ಊರ ಮುಂದಲಿನ ಒಳ್ಳೆಯ ಜಮೀನನ್ನು ನಮ್ಮ ಸಣ್ಣಜ್ಜ ಅವರೇ ಉಳಿಸಿಕೊಂಡಿದ್ದರು. ನಮಗೆ ಉಳಿದದ್ದು, ಅವ್ವನೇ ಆಗಾಗ ಹೇಳುತ್ತಿದ್ದಂತೆ, ಎರಡು ದದ್ದ ಮಡಕೆ; ವನವಾಸಕ್ಕೆ ಕಾಡು, ಅದರ ಜತೆಗೆ ಸಾಲದ ಸಂಕೋಲೆ!’
ಅವ್ವನಿಗೆ ಸೋಲಲು ಇಷ್ಟವಿರಲಿಲ್ಲ. ಬದುಕನ್ನು ಎದುರಿಸಲು ಸಿದ್ಧವಾಗಿದ್ದಳು. ಕಾಡು ತೋಟವಾಗತೊಡಗಿತ್ತು. ಸೊಂಟಕ್ಕೆ ಕುಡುಗೋಲು ಸಿಕ್ಕಿಸಿ ತಂಗಿಯರನ್ನು ಹಿಂದೆ ಬಿಟ್ಟುಕೊಂಡು ಹೊರಟಳೆಂದರೆ ಯಾವ ಕುಡಿಮೀಸೆ ಗಂಡಸೂ ಅವಳ ಕಡೆ ಕತ್ತೆತ್ತಿ ನೋಡಲು ಅಂಜಬೇಕು!
ಹಿಂದೊಮ್ಮೆ ಇದೇ ಜಾಗದಲ್ಲಿ ನಡೆದ ಘಟನೆಯೊಂದು ಚಿನ್ನಪ್ಪನ ಮನಸ್ಸಿನಲ್ಲಿ ಒತ್ತರಿಸಿಕೊಂಡು ಬರತೊಡಗಿತು.

‘ನಮ್ಮ ಅವ್ವ ಕೃಷಿಯ ಬಗ್ಗೆ ಇಟ್ಟುಕೊಂಡಿದ್ದ ನಿಷ್ಠೆ. ಹಾಗೇ ಎಂತದೇ ಪ್ರತಿಕೂಲ ಸನ್ನಿವೇಶದಲ್ಲೂ ಅದನ್ನು ಉಳಿಸಿಕೊಳ್ಳಲು ತೋರುತ್ತಿದ್ದ ಧೈರ್ಯ, ಸಾಹಸ, ಅದರ ಬಗ್ಗೆ ನಿಮಗೆ ಹೇಳಲೇಬೇಕು ಎನಿಸಿದೆ ಕೇಳಿ’ ಎನ್ನುತ್ತಾ ಚಿನ್ನಪ್ಪ ಹೇಳಲು ಅಣಿಯಾದ. ಸೀತೆ ಹಾಗೂ ಸುಬ್ಬಪ್ಪ ಮೈಯೆಲ್ಲಾ ಕಿವಿಯಾಗಿ ಕುಳಿತರು.
ಜೋರು ಮಳೆ ಹಿಡಿದು ಒಂದು ತಿಂಗಳಾಗಿತ್ತು. ಆಗ ಮಳೆಗಾಲವೆಂದರೆ ಈಗಿನಂತಲ್ಲ. ಜೂನ್ ತಿಂಗಳಲ್ಲಿ ಮರೆಯಾದ ಸೂರ್ಯ ಮತ್ತೆ ಪ್ರತ್ಯಕ್ಷವಾಗಲು ಅಕ್ಟೋಬರ್ ಕಳೆಯಬೇಕಾಗಿತ್ತು. ಅದು ಆರಿದ್ರಾ ಮಳೆ. ಏಲಕ್ಕಿ ಗಿಡ ಹಾಕುವ ಕಾಲ. ಭೂಮಿಯ ಎಲ್ಲೆಡೆ ವರತೆ ಕಿತ್ತುಬಂದು ಸಣ್ಣಸಣ್ಣ ಕೊಲ್ಲಿಗಳೂ ಸಹ ತುಂಬಿ ಹರಿಯತೊಡಗಿದ್ದವು. ಅವ್ವ ಅವಳ ಮೂರನೇ ತಂಗಿ ಬಿಳುಗಮ್ಮನೊಂದಿಗೆ ಹಿಂದಿನ ದಿನವೇ ಹೋಗಿ ಮಡಿಯಲ್ಲಿದ್ದ ಸಸಿಗಳನ್ನು ಕಿತ್ತು ಒಂದು ಬಾರಿ ತೋಟಕ್ಕೆ ಇಟ್ಟು ಬಂದಿದ್ದಳು.
ಅಂದು ಗಿಡ ನೆಡುವ ಕೆಲಸ. ಅವ್ವ ಹಾಗೂ ಚಿಕ್ಕಮ್ಮ ಒಂದೊಂದು ಹೊರೆ ಹೊತ್ತುಕೊಂಡು ತೋಟಕ್ಕೆ ಹೋಗಲು ಅಣಿಯಾದರು. ಎಂದೂ ತೋಟದ ದಾರಿ ನೋಡದ ನಾನು ಹಠಮಾಡಿ ಅವರ ಹಿಂದೆ ಹೊರಟೆ. ಕೊಡಗಿನ ಕಲ್ಲಯ್ಯ ನನಗಾಗಿ ಹೆಣೆದುಕೊಟ್ಟಿದ್ದ ಪುಟಾಣಿ ಗೊರಗ ಹಾಕಿಕೊಂಡು ಸಂಭ್ರಮದಿಂದ ಹಿಂಬಾಲಿಸಿದೆ.

ಅಬ್ಬರಿಸಿ ಸುರಿಯುವ ಮಳೆಯಲ್ಲಿ ಅವರಿಬ್ಬರೂ ಗೊರಗದ ಮೇಲೆ ಗಿಡದ ಹೊರೆ ಹೊತ್ತು ಬಿರಬಿರನೆ ನಡೆಯುತ್ತಿದ್ದರು. ಇನ್ನೇನು ಈ ಹಳ್ಳ ಸಮೀಪವಾಯಿತು ಎನ್ನುವಷ್ಟರಲ್ಲಿ ಅವ್ವ ಇದ್ದಕ್ಕಿದ್ದಂತೆ ನಮಗೆ ನಿಲ್ಲುವಂತೆ ಕೈ ಅಡ್ಡ ಹಿಡಿದಳು. ಪಕ್ಕದ ಕಾಡಿನ ಆಳದಲ್ಲಿ ‘ಸರ್‍ಭರ್’ ಸದ್ದು ಆ ಮಳೆ ಗಾಳಿಯ ಗದ್ದಲದಲ್ಲೂ ಕೇಳತೊಡಗಿತು. ನಮಗೆ ಮಾತನಾಡದಂತೆ ಸಂಜ್ಞೆ ಮಾಡುತ್ತ ‘ಮರ ಕುಯ್ಯುವವರು ಇದಾರೆ’ ಎನ್ನುತ್ತಾ ಪಿಸುಮಾತಿನಲ್ಲಿ ಹೇಳಿ ನಡಿಗೆಯ ವೇಗ ಹೆಚ್ಚಿಸಿದ್ದಳು.
ಇದೇ ಮುಂಡಿಗೆ ಹಳ್ಳ ಪ್ರವಾಹದುಂಬಿ ಸೊಕ್ಕಿ ಹರಿಯುತ್ತಿತ್ತು. ದಾಟಲು ಮಾಡಿದ್ದ ಮರದ ಮೆಟ್ಟಿನ ಮೇಲೆ ಸರ್ಕಸ್ ಮಾಡುತ್ತಾ ನಡೆದು ದಾಟಿ ಹೋದೆವು. ತೋಟದೊಳಗೆ ಕತ್ತಲೆ ಕವಿದಿತ್ತು. ಕೆಳಗೆ ತುಂಬಿ ಹರಿಯುವ ಅಬ್ಬಿಯ ಭೋರ್ಗೆರೆತ. ಆಕಾಶವೇ ತೂತು ಬಿದ್ದ ಮಾದರಿಯಲ್ಲಿ ಮೇಲಿನಿಂದ ಎಡೆಬಿಡದೆ ಸುರಿವ ಮಳೆ. ಅಡಿಗಡಿಗೆ ಬೆಳೆದು ನಿಂತಿದ್ದ ರಾಕ್ಷಸಾಕಾರದ ಮರಗಳು. ಆ ನಿಭಿಡ ಅರಣ್ಯದ ಮಧ್ಯೆ ಅವ್ವ ಹಾಗೂ ಚಿಕ್ಕವ್ವ ಮಾತ್ರ. ಆಗಾಗ ಬೆಟ್ಟದೋರೆಯಿಂದ ನುಗ್ಗಿ ಬರುವ ಬಿರುಸಾದ ಗಾಳಿಗೆ ಪರಸ್ಪರ ಉಜ್ಜಿ ‘ಕಿರ್ರೋ’ ಎಂದು ಸದ್ದು ಹೊರಡಿಸುವ ಕೊಂಬೆಗಳು.

ಯಾರಾದರೂ ಕಳ್ಳಕಾಕರು ಬಂದರೆ! ಯಾವುದಾದರೂ ಕಾಡುಪ್ರಾಣಿ ಬಂದು ಹಿಡಿದು ತಿಂದರೆ! ಭಯ ಆವರಿಸತೊಡಗಿ ‘ಅಪ್ಪಾ’ ಎಂದು ಅಳತೊಡಗಿದೆ.
‘ಏ ಅಳಬೇಡ ಕನಾ ಮಗ, ಅಪ್ಪ ಇಲ್ಲೇ ಕಾಡೊಳಗೆ ಎಲ್ಲೋ ಕೋವಿ ಹಿಡಿದು ತಿರುಗಾಡ್ತಾ ಇರ್ತಾರೆ ಹೆದರಬೇಡ’ ಎಂದು ಅವ್ವ ಗೊರಗದೊಳಗೆ ನನ್ನ ಕೈ ಹಿಡಿದು ಹೇಳಿದರು. ದಿನವೂ ಇದೇ ಮಾತು ತನಗೆ ತಾನೇ ಹೇಳಿಕೊಂಡು ಧೈರ್ಯ ತಂದುಕೊಳ್ಳುತ್ತಿದ್ದಳು ಎಂದುತೋರಿತು.
ಅವ್ವ ಅಗೆಯುವುದು, ನಾನು ಗುಂಡಿಗೆ ಒಂದೊಂದೇ ಗಿಡ ತಂದು ಇಡುವುದು, ಚಿಕ್ಕವ್ವ ನೆಡುವುದು. ಎಷ್ಟೇ ಅವಸರದಿಂದ ಕೆಲಸ ಮಾಡಿದರೂ ಸಂಜೆಯಾಗಿಯೇ ಹೋಗಿತ್ತು. ಜೀರುಂಡೆಗಳು ಇದ್ದಕ್ಕಿದ್ದಂತೆ ಕಾಡೆಲ್ಲಾ ನಡುಗುವಂತೆ ಅಬ್ಬರಿಸಿ ಕೂಗತೊಡಗಿದವು.
‘ಆರು ಗಂಟೆ ಆಗಿಹೋಯ್ತು, ಬೇಗ ಬೇಗ ನಡೀರಿ ಕತ್ತಲೆ ಆಗಿಬಿಡುತ್ತೆ’ ಎನ್ನುತ್ತಾ ಅವ್ವ ನನ್ನ ಕೈ ಹಿಡಿದು ಎಳೆಯುತ್ತಾ ಓಡುನಡಿಗೆ ನಡೆಯತೊಡಗಿದಳು. ಚಿಕ್ಕವ್ವನನ್ನು ಮುಂದೆ ಬಿಟ್ಟುಕೊಂಡಿದ್ದಳು. ಈಗ ಕೂತಿದೀವಲ್ಲ ಈ ಜಾಗದಿಂದ ಕೆಳಗಿಳಿದು ಆ ಮಳೆಗತ್ತಲಲ್ಲಿ ಹೊಳೆ ಸಮೀಪಿಸಿದೆವು. ಮುಂಡಿಗೆ ಹಳ್ಳ ಭಯ ಹುಟ್ಟಿಸುವಂತೆ ತುಂಬಿ ಹರಿಯುತ್ತಿತ್ತು. ಇನ್ನೇನು ಕೆಲವೇ ಗಜ. ಮರದ ಮೆಟ್ಟಿನ ಮೇಲೆ ಪ್ರವಾಹ ದಾಟಿದರೆ ಊರಿಗೆ ಒಂದೇ ಮೈಲಿ!
ಇದ್ದಕ್ಕಿದ್ದಂತೆ ಅವ್ವ ಮುಂದೆ ನಡೆಯುತ್ತಿದ್ದ ತಂಗಿಯನ್ನು ಹಿಡಿದೆಳೆದು ನಿಲ್ಲಿಸಿಕೊಂಡಳು. ಇಬ್ಬರನ್ನೂ ಬಳಿ ನಿಲ್ಲಿಸಿಕೊಂಡು ನಮ್ಮ ಬಾಯನ್ನು ಮುಚ್ಚಿ ಹಿಡಿದುಕೊಂಡಳು.

ಹೊಳೆಯೆಡೆಗೆ ಆ ಮಳೆಯ ಮಬ್ಬಿನಲ್ಲಿ ದಿಟ್ಟಿನೆಟ್ಟು ನೋಡಿದೆವು. ಎತ್ತರದ ಬಂಡೆಯ ಮೇಲೆ ಏನೋ ಚಲನೆ! ಬಂಡೆಗಳ ಮೇಲೆ ಬಂಡೆಯಷ್ಟೇ ಕಪ್ಪಾದ ಆಕೃತಿಗಳು!
‘ಮರ ಕುಯ್ಯುವವರು’ ಅವ್ವ ಪಿಸುಗುಟ್ಟಿದಳು. ಅವಳೂ ನಮ್ಮಂತೆ ಭಯಗೊಂಡಿದ್ದಳು. ಎದುರಿಗೆ ಮರದ ಕೊರಡಿನಂತಹಾ ಅಂಗಾಂಗಗಳನ್ನು ಹೊಂದಿದ ದೈತ್ಯರು! ಮೂವರು ಬಂಡೆಗಳ ಮೇಲೆ ಕುಳಿತು ಮೈ ಉಜ್ಜಿಕೊಳ್ಳುತ್ತಿದ್ದಾರೆ. ಇನ್ನೊಬ್ಬ ಹೊಳೆ ದಾಟುವ ಮರದ ಮೆಟ್ಟಿನ ಮೇಲೆಯೇ ಕುಳಿತುಬಿಟ್ಟಿದ್ದಾನೆ.
ಬೆಳಗಿನಿಂದ ಗರಗಸ ಎಳೆದು ಸುಸ್ತಾದ ಅವರು ಆ ಮಳೆಯಲ್ಲೂ ನೀರಾಟದ ಮಜ ಅನುಭವಿಸುತ್ತಿದ್ದಾರೆ.
‘ಮದುವೆ ನಿಶ್ಚಯವಾದ ತಂಗಿ, ಪುಟ್ಟ ಬಾಲಕ ಜೊತೆಗೆ ನಾನು ಹೆಣ್ಣು ಹೆಂಗಸು! ಅವರ ದೃಷ್ಟಿಗೆ ನಾವೇನಾದರೂ ಬಿದ್ದರೆ ನನ್ನ ಕುಡ್ಲು ಏನು ಮಾಡಬಲ್ಲದು ಈ ಪರಿಸ್ಥಿತಿಯಲ್ಲಿ!’
ನಮ್ಮನ್ನು ಬಂದ ದಾರಿಯಲ್ಲೇ ಹಿಂದಕ್ಕೆ ಓಡಿಸುತ್ತಾ ಅವ್ವ ಭಯದಿಂದ ಪಿಸುಗುಟ್ಟಿದಳು. ಇನ್ನೊಂದು ಸಣ್ಣ ಬೆಟ್ಟವನ್ನು ಬಳಸಿ ಓಡತೊಡಗಿದೆವು. ಒಂದು ಮೈಲಿ ಓಡಿದ ನಂತರ ಮತ್ತೆ ಪ್ರವಾಹದ ಸಪ್ಪಳ ಕೇಳತೊಡಗಿತು. ಅಲ್ಲೊಂದು ಮರದ ಮೆಟ್ಟಿರುವುದು ಅವ್ವನಿಗೆ ತಿಳಿದಿತ್ತು. ಅದರ ಮೇಲಿಂದ ಪ್ರವಾಹವನ್ನು ದಾಟಿ ಕತ್ತಲಲ್ಲಿ ಮಳೆಯನ್ನು ಲೆಕ್ಕಿಸದೆ ಊರದಾರಿಯಲ್ಲಿ ಓಡಿದೆವು!
ಚಿನ್ನಪ್ಪ ಹೇಳಿ ಮುಗಿಸಿದ. ಉಸಿರು ಬಿಗಿಹಿಡಿದು ಕೇಳುತ್ತಾ ಎದುರು ಕೂತಿದ್ದವರು ನಿಟ್ಟುಸಿರು ಬಿಟ್ಟರು.

ವಿಷಯ ಗಂಭೀರವಾದುದರಿಂದ ಸುಬ್ಬಪ್ಪನ ಮಾತಿನ ಚಪಲಕ್ಕೆ ಆಸ್ಪದವಿರಲಿಲ್ಲ.
‘ಅಕ್ಕಾ ನಿನ್ನ ಗಂಡನ ಪುರಾಣ ಕೇಳ್ತಾ ಕೂತ್ಗಂಡ್ರೆ ರಾತ್ರಿ ಇಲ್ಲೇ ಮಲಗಬೇಕಾಗುತ್ತೆ…ಏಳಿಏಳಿ…ನೀವು ನಿಧಾನಕ್ಕೆ ದನಗಳ ಜೊತೆ ಬನ್ನಿ. ನಾನು ಮುಂದೆ ಹೋಗಿ ಒಂದೆರಡು ಹೊರೆ ತೀನ ಕಡಿದಿರ್ತೀನಿ’ ಎಂದು ಹೊರಡುವ ಅವಸರ ತೋರಿದ.
‘ಸರಿ ಮಾರಾಯ, ದನ ಮಾಮೂಲಿ ದಾರಿ ಬಿಟ್ಟು ಆಚೆ ದಿಂಬಕ್ಕೆ ಹೋಗಿ ಮೇಯ್ತಾ ಇದಾವೆ. ಅವನ್ನ ಅಲ್ಲಿಂದ ಹೊರಡಿಸಿಕೊಂಡು ಬರಾಕೆ ಸುಮಾರು ಹೊತ್ತು ಹಿಡಿಯುತ್ತೆ…ಹುಷಾರು, ತೀರಾ ಹೊಳೆ ಅಂಚಿಗೆ ಹೋಗಬ್ಯಾಡ. ಆನೆ, ಕಾಟಿ ಹಿಂಡು ಅಲ್ಲೇ ಬೀಡುಬಿಟ್ಟಿದಾವಂತೆ’
ಚಿನ್ನಪ್ಪನ ಎಚ್ಚರಿಕೆಯ ಮಾತು ಕೇಳಿದ ಸುಬ್ಬಪ್ಪ ಹುಸಿ ನಗುತ್ತಾ ‘ನನ್ನ ಯೋಚನೆ ಬಿಡಿ, ನೀವಿಬ್ರೂ ಜೋಪಾನ’ ಎನ್ನುತ್ತಾ ಬೆಟ್ಟದ ದಾರಿ ಹಿಡಿದ.
ಆ ಕಡಿದಾದ ಕಾಡು ದಾರಿಯಲ್ಲಿ ದನಗಳನ್ನು ಅಟ್ಟಿಕೊಂಡು ಗಂಡ ಹೆಂಡತಿ ಎಮ್ಮೆ ಗುಂಡಿ ತಲುಪಿದಾಗ ಸೂರ್ಯ ಆಗಲೇ ನಡು ನೆತ್ತಿಯಲ್ಲಿದ್ದ. ಚಿನ್ನಪ್ಪ ತೋಟದ ಕಡೆ ಮುಖಮಾಡಿ ಭಾವಮೈದುನನಿಗಾಗಿ ಕೂಗು ಹಾಕಿದ. ಕಾಡಿನ ಆಳದಿಂದ ‘ಕೂ’ ಎಂಬ ದನಿ ಹೊರಟಿತು.
ಸೀತೆ ಕುಕ್ಕೆಯನ್ನು ಕೆಳಗಿಳಿಸಿ ನೆರಳಲ್ಲಿ ಕುಳಿತು ದಣಿವಾರಿಸಿಕೊಳ್ಳತೊಡಗಿದಳು. ದನಗಳು ಹೊಳೆಯ ದಿಕ್ಕಿಗೆ ಮುಖಮಾಡಿ ಬೆಟ್ಟದ ಇಳಾಲಿನಲ್ಲಿ ಮೇಯತೊಡಗಿದವು.

ಸ್ವಲ್ಪ ಹೊತ್ತಿನಲ್ಲೇ ಕೆಳಗಿನ ಕಾಡಿನಿಂದ ಮತ್ತೆ ‘ಕೂ’ ಎಂಬ ಧ್ವನಿ ಕೇಳಿಬಂದಿತು. ಅದರಲ್ಲಿ ಗಾಬರಿ ತುಂಬಿದ್ದಂತೆನಿಸಿತು. ಚಿನ್ನಪ್ಪ ಹಾಗೂ ಸೀತೆ ಭಯದಿಂದ ಒಬ್ಬರ ಮುಖ ಒಬ್ಬರು ನೋಡಿಕೊಂಡರು.
‘ಕಾಡುಕೋಣದ ಹಿಂಡು ಆ ಕಡೆಗೇ ಓಡಿ ಬರ್ತಾ ಐತೆ. ಅಡೆಗೆ ನಿಂತ್ಕಳಿ ಜೋಪಾನ’ ಸ್ವಲ್ಪ ಹತ್ತಿರದಲ್ಲೇ ತಮ್ಮನ ಧ್ವನಿ ಕೇಳಿದ ಸೀತೆ ಓಡಿಬಂದು ಗಂಡನ ಬಳಿ ನಿಂತಳು.
ಕಾಡುಕೋಣಗಳ ಹಿಂಡು ಎದುರಾದರೆ ಏನು ಗತಿ? ಎಂದುಕೊಳ್ಳುತ್ತಾ ಚಿನ್ನಪ್ಪ ಪಕ್ಕದ ಮರಗಳ ಕಡೆ ನೋಡತೊಡಗಿದ. ಎಲ್ಲಾ ದೊಡ್ಡ, ಎತ್ತರದ ಮರಗಳೇ! ಕಾಡುಕೋಣಗಳಿಂದ ಬಚಾವಾಗಲು, ಏರಿ ಅಡಗಿಕೊಳ್ಳಬಲ್ಲ ಮರಕ್ಕಾಗಿ ಕಣ್ಣಾಡಿಸಿದ. ತಬ್ಬಿ ಹತ್ತಬಲ್ಲ ಒಂದು ಗ್ವಾಜೆ ಮರ ಹತ್ತಿರದಲ್ಲೇ ಕಂಡಿತು. ಎಂಟು ಹತ್ತು ಅಡಿ ಎತ್ತರದಲ್ಲಿ ಅತ್ತಿತ್ತ ಅಡ್ಡ ಕವಲೊಡೆದಿತ್ತು. ಕವಲೊಡೆದ ಜಾಗದಿಂದ ಹೊರಟ ಒಂದು ರಟ್ಟೆಗಾತ್ರದ ಕೊಂಬೆ ಆಕಾಶದ ಕಡೆ ಮುಖ ಮಾಡಿತ್ತು.
ಬದಿಕಿದೆಯಾ ಬಡಜೀವವೇ ಎಂದುಕೊಳ್ಳುತ್ತಾ ಚಿನ್ನಪ್ಪ ಸೀತೆಯನ್ನು ಎಳೆದುಕೊಂಡು ಆ ಕಡೆ ಓಡಿದ.

ಸರಸರನೆ ಆ ಮರ ಏರಿ ಅಡ್ಡಕೊಂಬೆಯ ಮೇಲೆ ಕುಳಿತ ಚಿನ್ನಪ್ಪ ಕೆಳಗೆ ಬಾಗಿ ಕೈ ನೀಡಿ ಹೆಂಡತಿಯನ್ನು ಮೇಲೆಳೆದುಕೊಂಡ. ಸೀತೆ ಅಡ್ಡಕೊಂಬೆಯಿಂದ ಮೇಲ್ಮುಖವಾಗಿ ಹೊರಟಿದ್ದ ಸಣ್ಣ ಕೊಂಬೆಯನ್ನು ತಬ್ಬಿ ಕುಳಿತು ನಡುಗತೊಡಗಿದಳು. ಭಯದಿಂದ ಅವಳು ನಡುಗುವ ಭರಕ್ಕೆ ಆ ಇಡೀ ಮರವೇ ಅಲುಗಾಡುತ್ತಿತ್ತು. ಚಿನ್ನಪ್ಪನೂ ಭಯದಿಂದ ಬೆವತು ಹೋಗಿದ್ದ. ಸೀತೆ ಎಲ್ಲಾದರೂ ಉದುರಿ ಹೋದಾಳೆಂದು ಅವಳನ್ನು ತಬ್ಬಿಹಿಡಿದು ಕುಳಿತುಕೊಂಡ.
‘ಭಾವಾ ಕಾಡುಕೋಣಗಳಿಗೆ ಎದುರಿಗೆ ಸಿಕ್ಕಿಬಿಟ್ಟೀರಿ ಜೋಪಾನ. ಯಾವ್ದಾದ್ರೂ ಮರ ಇದ್ರೆ ಹತ್ತಿಕೊಳ್ಳಿ’ ಸುಬ್ಬಪ್ಪನ ದನಿ ಸನಿಹದಲ್ಲೇ ಕೇಳಿತು.
ಭಯದಿಂದ ಉಬ್ಬಸಪಡುತ್ತ ಪರಸ್ಪರ ತಬ್ಬಿ ಕುಳಿತಿದ್ದ ಗಂಡ ಹೆಂಡಿರಿಗೆ ಮಾತನಾಡಲು ಉಸಿರೇ ಹೊರಡದಂತಾಗಿತ್ತು.
‘ಹೂಂ ಹೂಂ ಇಲ್ಲೇ…’ ಪ್ರಯಾಸಪಡುತ್ತ ಮಾತನಾಡಿದ ಚಿನ್ನಪ್ಪನಿಗೆ ಮಾತು ಪೂರೈಸಲು ಆಗಲೇ ಇಲ್ಲ.

‘ಗೊತ್ತಾಯ್ತು, ಗೊತ್ತಾಯ್ತು. ಮರದ ಮೇಲೆ ಕೂತಿದೀರಿ ಅಲ್ವಾ’ ಮರದ ಬುಡಕ್ಕೆ ಬಂದು ನಿಂತಿದ್ದ ಸುಬ್ಬಪ್ಪನಿಗೆ ನಗು ತಡೆಯಲಾಗಲಿಲ್ಲ.
ಮರದ ಮೇಲಿದ್ದವರಿಗೆ ತುಸು ಧೈರ್ಯ ಬಂದಂತಾಯ್ತು, ಕೆಳಗಿಣುಕಿದರು.
‘ಹುಂ ಹುಂ ಹಂಗೇ ಕೂತ್ಕಳಿ ಅಲ್ಲಾಡಬೇಡಿ ಒಂದ್ ಪೋಟೋ ತಗಳ್ತೀನಿ’ ಎನ್ನುತ್ತಾ ತನ್ನ ಮೊಬೈಲನ್ನು ಕಣ್ಣಿನ ಮುಂದೆ ಹಿಡಿದು ಕ್ಲಿಕ್ಕಿಸಿದ ಸುಬ್ಬಪ್ಪ.
‘ಒಳ್ಳೆ ಧೈರ್ಯಸ್ಥರು! ಈ ಚೋಟುದ್ದ ಮರ ಕಾಡುಕೋಣ ಬಂದ್ರೆ ತಡೀತಿತ್ತಾ!’ ನಗು ತಡೆಯಲಾರದೆ ಸುಬ್ಬಪ್ಪ ನೆಲದ ಮೇಲೆ ಹೊರಳಾದತೊಡಗಿದ.
‘ಥೂ ನಿನ್ನ ಬಾಯಿಗ್ ಮಣ್ಣಾಕ. ಹೆದ್ರಿ ಹೊಟ್ಟೆ ಕಳ್ಳೆಲ್ಲಾ ಬಾಯಿಗ್ ಬಂದಿದ್ವಲ್ಲ!’ ಎನ್ನುತ್ತಾ ತಮ್ಮನ ಬೆನ್ನಿಗೆ ಮೆಲ್ಲಗೆ ಗುದ್ದತೊಡಗಿದಳು ಸೀತೆ. ಬೇಸ್ತು ಬಿದ್ದ ಚಿನ್ನಪ್ಪ ಬೆಪ್ಪನಂತೆ ನಿಂತಿದ್ದ.

***

ಅಧ್ಯಾಯ ೭: ಮಕ್ಕಳ ರಾಜ್ಯ

ಸುತ್ತಲೂ ಬೆಟ್ಟಸಾಲು. ಕಣಿವೆಯಿಂದ ಆಕಾಶದೆಡೆಗೆ ಮುಖಮಾಡಿದ ವನಸಮೂಹ. ನಡುವೆ ಅಚ್ಚರಿಯೆನಿಸುವಂತೆ ಹರಡಿಕೊಂಡಿರುವ ಎಮ್ಮೆಗುಂಡಿ ಹರೆ ಎಂಬ ಬಯಲು ಪ್ರದೇಶ.
ಸುತ್ತಲಿನ ಪರಿಸರ ಮನಸ್ಸಿಗೆ ಅಪ್ಯಾಯಮಾನವೆನಿಸತೊಡಗಿತು. ನೆರಳಲ್ಲಿ ಕುಳಿತ ಅವರಿಗೆ ಆ ವಿಶಾಲವಾದ ಬಯಲಿನಲ್ಲಿ ಬೀಸಿ ಬರುತ್ತಿದ್ದ ಗಾಳಿ ಪ್ರೀತಿಯಿಂದ ಮೈಸವರಿ ಹಿತ ನೀಡುತ್ತಿತ್ತು. ಕೆಲಕಾಲ ಸುಬ್ಬಪ್ಪನ ನಗೆಸಾರದ ಮಾತಿಗೆ ಕಿವಿತೆರೆದು ಕೂತ ದಂಪತಿಗಳಿಗೆ ಹೊತ್ತು ಹೋದದ್ದೇ ತಿಳಿಯಲಿಲ್ಲ.
ದನಗಳ ಮೇಯುವ ಸದ್ದು ದೂರಾಗಿ ಬಯಲು ನಿಶ್ಶಬ್ದವಾಗಿತ್ತು.
ದನಗಳಾಗಲೇ ಹೊಳೆಯಲ್ಲಿ ನೀರು ಕುಡಿದು ವಿಶಾಲವಾದ ದಂಡೆಯಲ್ಲಿ ಮರಳಿನ ಮೇಲೆ ಕಣ್ಮುಚ್ಚಿ ಧ್ಯಾನ ಮಾಡುವವರಂತೆ ಮಲಗಿ ಮೆಲುಕು ಹಾಕುವ ಖುಷಿ ಅನುಭವಿಸುತ್ತಿದ್ದವು.

ತುಸು ಮೇಲ್ಭಾಗದಲ್ಲಿ ಅಬ್ಬಿಯಲ್ಲಿ ನೀರು ಅಬ್ಬರಿಸಿ ಧುಮ್ಮಿಕ್ಕುತ್ತಿತ್ತು. ಅಗಲವಾಗಿ ಹರಡಿಕೊಂಡಿದ್ದ ಒಂದು ಬಂಡೆಯ ಮೇಲೆ ಕುಳಿತ ಅವರು ಬುತ್ತಿ ಬಿಚ್ಚಿದರು.
‘ಇಲ್ಲಿಂದಲೇ ನಮ್ಮ ತೋಟ ಶುರು’ ಊಟ ಮುಗಿಸಿ ಕೈ ತೊಳೆಯುತ್ತಾ ಹೇಳಿದ ಚಿನ್ನಪ್ಪ, ಹೀಗೆಯೇ ಹೊಳೆ ಹರಿದು ಹೋದಂತೆ ಸಾಗಿದರೆ ಬಲಭಾಗಕ್ಕಿರುವ ಬೆಟ್ಟದೋರೆಯೇ ನಮ್ಮದು…ಏನು ಮಾಡದು ನಮ್ಮ ಅವ್ವ ಹಟಬಿದ್ದು ಮಾಡಿದ ತೋಟದೊಳಗೆ ಹೋಗಿಯೇ ಏಳೆಂಟು ವರ್ಷವಾಗಿಹೋಯಿತು’ಎನ್ನುತ್ತಾ ಚಿನ್ನಪ್ಪ ವಿಷಾದ ವ್ಯಕ್ತಪಡಿಸಿದ.
‘ಅಲ್ಲಾ ಭಾವ, ಇಂತಾ ಹೊಳೆ ಬದಿ ತೋಟ. ನಿಮ್ಮವ್ವ ಅಷ್ಟು ಕಷ್ಟಪಟ್ಟು ದುಡಿದ್ರು ಅಂತಾ ಹೇಳ್ತೀರಿ… ಆದ್ರೆ ಅದ್ಯಾಕೆ ಮಧ್ಯದಲ್ಲಿ ಕೈ ಬಿಡೋ ಅಂತದ್ದು ಏನಾಯ್ತು?’ ಹಿಂದಿನ ಬಂಡೆಗೊರಗಿ ಸುಬ್ಬಪ್ಪ ಮನಸ್ಸಿನ ಶಂಕೆ ಹೊರಗೆಡವಿದ. ಸೀತೆಗೂ ಕೇಳುವ ಕುತೂಹಲವಾಗಿತ್ತು. ಗಂಡನ ಮುಖ ನೋಡಿದಳು.

ಹಿಂದಿನ ಘಟನೆಗಳು ಚಿನ್ನಪ್ಪನ ಕಣ್ಣಮುಂದೆ ಹಾದುಹೋಗತೊಡಗಿದವು. ತಾನು ಕಂಡದ್ದು, ಅನುಭವಿಸಿದ್ದು, ಕೇಳಿದ್ದು ಎಲ್ಲವನ್ನೂ ಕಣ್ಣಾರೆ ಕಂಡವನಂತೆ ಹೇಳತೊಡಗಿದ.
ಪಾಲಾದಾಗಲೇ ಸಾಲವೂ ಬಳುವಳಿಯಾಗಿ ಬಂದಿತ್ತಲ್ಲ! ತೀರಿಸುವುದಕ್ಕೆ ಸಾಧ್ಯವಾಗದೆ ಅದು ವರ್ಷ ವರ್ಷ ಬೆಳೆಯುತ್ತಲೇ ಹೋಗುತ್ತಿತ್ತು. ಮನೆ ತುಂಬಾ ಮಕ್ಕಳು. ಬೆಳೆದ ಭತ್ತ ಆರು ತಿಂಗಳಿಗೇ ಮುಗಿದುಹೋಗುತ್ತಿತ್ತು. ಮತ್ತೆ ಆರು ತಿಂಗಳಿಗೆ ಹೊಟ್ಟೆ ತುಂಬಿಸಲು ಅಕ್ಕಿ, ವರ್ಷದಲ್ಲಿ ಒಮ್ಮೆಯಾದರೂ ಹೊಲೆಸಲೇಬೇಕಾಗಿದ್ದ ಚೀಟಿ ಬಟ್ಟೆ, ವಾರದ ಅಂಗಡಿ ಸಾಮಾನು, ಖಾಯಿಲೆ ಕಸಾಲೆ, ವರ್ಷಕ್ಕೊಂದು ಬಾಣಂತನ ಇವೆಲ್ಲದರ ಖರ್ಚು ನಿಭಾಯಿಸುವಷ್ಟರಲ್ಲಿ ಅಪ್ಪ ಹೈರಾಣಾಗಿ ಹೋಗುತ್ತಿದ್ದ.
ನಮ್ಮಪ್ಪ ಬೇರೆಲ್ಲಾ ವಿಚಾರದಲ್ಲೂ ಉದಾಸೀನ ಭಾವದವನಾದರೂ ಇದೊಂದು ವಿಚಾರದಲ್ಲಿ ನಿಪುಣ. ಮನೆಯಲ್ಲಿ ವರ್ಷಕ್ಕೊಂದು ಹಸುಗೂಸು ತಪ್ಪಿದ್ದಲ್ಲ. ವರ್ಷಕ್ಕೆ ಒಂದೇನು, ಒಂದೇ ವರ್ಷದಲ್ಲಿ ಎರಡು ಮಕ್ಕಳು ನಮ್ಮ ಮನೆಯಲ್ಲಿ ಹುಟ್ಟಿದ್ದವೆಂದರೆ ಈಗಿನವರು ಯಾರೂ ನಂಬುವುದಿಲ್ಲ. ನಮ್ಮ ಎರಡನೇ ಅಕ್ಕ ಪನ್ನಮ್ಮ ಜನವರಿಯಲ್ಲಿ ಹುಟ್ಟಿದ್ದರೆ, ಮೂರನೇ ಅಕ್ಕ ಹುಟ್ಟಿದ್ದು ಅದೇ ವರ್ಷದ ಡಿಸೆಂಬರ್‍ನಲ್ಲಿ!

ಇದು ನಮ್ಮೊಬ್ಬರ ಮನೆ ಸಮಸ್ಯೆಯಲ್ಲ. ಕೊಚ್ಚೆಯಲ್ಲಿ ಹುಳ ಮಿಚಿಗುಟ್ಟಿದಂತೆ ಎಲ್ಲರ ಮನೆಯ ಹಟ್ಟಿಯಲ್ಲಿ ತಲೆ ಕೆದರಿದ, ಗೊಣ್ಣೆಸುರಿಸುವ, ಹರಕು ಬಟ್ಟೆಯ ಮಕ್ಕಳ ಹಿಂಡು.
ಮಕ್ಕಳೇ ದೇಶದ ಎಲ್ಲ ಸಮಸ್ಯೆಗೆ ಮೂಲ ಎಂಬ ಸತ್ಯವನ್ನು ತಡವಾಗಿಯಾದರೂ ಸರ್ಕಾರದವರು ಕಂಡುಕೊಂಡಿದ್ದರು. ಇದಕ್ಕೆ ತಡೆಯೊಡ್ಡದಿದ್ದರೆ ಉಳಿಗಾಲವಿಲ್ಲ. ಇನ್ನೂ ಕೆಲವು ವರ್ಷ ಹೀಗೆಯೇ ಬಿಟ್ಟರೆ, ದೇಶ ಅಭಿವೃದ್ಧಿ ಪಥದಲ್ಲಿ ಹೋಗುವುದಿರಲಿ, ಪ್ರತಿ ಪ್ರಜೆಗೂ ಕಾಲೂರಿ ನಿಲ್ಲಲೂ ಸ್ಥಳವಿರುವುದಿಲ್ಲ ಎಂದು ಪ್ರಧಾನಮಂತ್ರಿ ದಿಗಿಲುಗೊಂಡಿದ್ದರು. ಆಗಲೇ ಕುಟುಂಬ ಯೋಜನೆ ಎಂಬ ಕಾರ್ಯಕ್ರಮ ಜಾರಿಗೆ ತಂದದ್ದು.
ಮಕ್ಕಳಾಗದಂತೆ ತಡೆಯಲು ಸರ್ಕಾರ ಯೋಜನೆ ತಂದಿದೆ ಎಂದು ತಿಳಿದದ್ದೇ ಹೆಂಗಸರೊಂದಿಗೆ ಮಲಗಲು ಬಿಡುತ್ತಾರೋ ಇಲ್ಲವೋ ಎಂದು ಗಂಡಸರು ಗಾಬರಿಗೊಂಡರು.
ಕಾರ್ಯಕ್ರಮ ವೇಗ ಪಡೆದುಕೊಂಡಿತು. ನರ್ಸ್ ಪೂವಮ್ಮ ಮನೆ ಮನೆಗೆ ಹೋಗಿ ಮೂರು ಮಕ್ಕಳಿಗಿಂತ ಹೆಚ್ಚು ಮಕ್ಕಳಿರುವವರ ಪಟ್ಟಿ ತಯಾರಿಸಿ ದೊಡ್ಡೂರ ಡಾಕ್ಟರಿಗೆ ತಲುಪಿಸಿದಳು. ಆ ಪಟ್ಟಿ ಹಾಸನಕ್ಕೆ ತಲುಪಿತು.

ಆ ಪಟ್ಟಿಯಲ್ಲಿ ಹೆಸರಿದ್ದ ಎಲ್ಲ ಗಂಡಸರಿಗೆ ದೊಡ್ಡೂರ ಆಸ್ಪತ್ರೆಯಿಂದ ಕರೆ ಬಂತು.
ಹಾಸನದಿಂದ ದೊಡ್ಡ ಡಾಕ್ಟರುಗಳು ಬಂದಿಳಿದರು. ಹಿರಿಯ ಅಧಿಕಾರಿಗಳ ಆದೇಶದಂತೆ ಅಂದು ದೊಡ್ಡೂರ ಆಸ್ಪತ್ರೆಯಲ್ಲಿ ಕುಟುಂಬ ಯೋಜನೆಯ ಅವಶ್ಯಕತೆಯ ಬಗ್ಗೆ ಮನವರಿಕೆ ಕಾರ್ಯಕ್ರಮ. ಮಕ್ಕಳಾಗದಂತೆ ತಡೆಗಟ್ಟುವ ಬಗ್ಗೆ ಪ್ರಾತ್ಯಕ್ಷಿಕೆ!
ಜಿಲ್ಲಾ ವೈದ್ಯಾಧಿಕಾರಿಗಳು ಕುಟುಂಬ ಯೋಜನೆಯ ಕುರಿತು ಸೇರಿದ್ದ ಗಂಡಸರಿಗೆ ಸಣ್ಣ ಭಾಷಣ ಮಾಡಿದರು. ನಂತರ ಪ್ರಾತ್ಯಕ್ಷಿಕೆಯ ಜವಾಬ್ದಾರಿ ತಾಲ್ಲೂಕಿನ ವೈದ್ಯಧಿಕಾರಿಗಳದ್ದು.
ಅಲ್ಲಿ ನೆರೆದಿದ್ದ ಗಂಡಸರಿಗೆಲ್ಲಾ ಬೆಲೂನಿನಂತಹ ವಸ್ತುವೊಂದನ್ನು ವಿತರಿಸಲಾಯಿತು.
ಇದಕ್ಕೆ ನಿರೋದ್ ಎನ್ನುತ್ತಾರೆ. ಇದೇ ಕುಟುಂಬ ಯೋಜನೆಯಲ್ಲಿ ಬಳಸುವ ಮುಖ್ಯ ಸಾಧನ. ಇದನ್ನು ಹೇಗೆ ಬಳಸಬೇಕೆಂಬುದನ್ನು ನಾನು ಈಗ ಹೇಳಿಕೊಡುತ್ತೇನೆ ಎಂದು ಮೊದಲೇ ಸಿದ್ಧವಾಗಿರಿಸಿದ್ದ ಗೂಟವೊಂದನ್ನು ಕೈಗೆ ತೆಗೆದುಕೊಂಡರು.
ನೋಡಿ ಇದು ಇದು… ಎನ್ನುತ್ತಾ ಮುಂದೆ ಹೇಳಲು ತಡಬಡಾಯಿಸತೊಡಗಿದರು. ಗಂಡಸರ ಜನನಾಂಗದ ಹೆಸರನ್ನು ಕನ್ನಡದಲ್ಲಿ ಹೇಳಲು ಅವರಿಗೆ ಮುಜುಗರವಾಗಿತ್ತು. ಅಷ್ಟರಲ್ಲಿ ಇಂಗ್ಲಿಷ್ ಅವರಿಗೆ ನೆರವಿಗೆ ಬಂದಿತ್ತು. ನೋಡಿ ಇದು ‘ಪೀನಿಸ್’ ಎಂದರು. ಎದುರಿಗೆ ಕುಳಿತಿದ್ದ ಗಂಡಸರು ಗೂಟಕ್ಕೆ ಇಂಗ್ಲಿಷಿನಲ್ಲಿ ಪೀನಿಸ್ ಎನ್ನುತ್ತಾರೇನೋ ಎಂದು ಒಬ್ಬರ ಮುಖ ಒಬ್ಬರು ನೋಡಿಕೊಂಡರು. ನೋಡಿ ನೀವೆಲ್ಲರೂ ನಿಮ್ಮ ಹೆಂಗಸರುಗಳ ಜೊತೆ ಮಲಗುವ ಮುನ್ನ ಈ ನಿರೋಧನ್ನು ಇದಕ್ಕೆ ಹೀಗೆ ತೊಡಿಸಬೇಕು. ನಂತರ ಜೊತೆಗೆ ಮಲಗುವುದರಿಂದ ಮಕ್ಕಳಾಗುವ ಯಾವುದೇ ಅಪಾಯವಿಲ್ಲ. ಬೆಳಗಾಗುತ್ತಲೇ ಈ ರೀತಿ ಉಪಯೋಗಿಸಿದ ಈ ನಿರೋಧನ್ನು ದೂರ ಎಸೆದುಬಿಡಬೇಕು’ ಎಂದು ಹೇಳಿ ಕುಳಿತುಕೊಂಡರು.

ತಲಾ ಎರಡೆರಡು ಪ್ಯಾಕೆಟ್ ನಿರೋಧ್ ಪಡೆದ ಗಂಡಸರು ‘ಓಹ್ ಕುಟುಂಬ ಯೋಜನೆ ಅಂದ್ರೆ ಇಷ್ಟ್ ಸುಲಭಾನ’ ಎಂದು ಖುಷಿಯಿಂದ ಮಾತಾಡಿಕೊಳ್ಳುತ್ತ ತಮ್ಮ ತಮ್ಮ ಮನೆಯ ಕಡೆ ಹೊರಟುಹೋದರು.
ಎರಡು ತಿಂಗಳು ಕಳೆಯಿತು. ಮನೆ ಮನೆ ತಿರುಗಿ ಫಲಿತಾಂಶದ ವರದಿ ತಯಾರಿಸುವ ಸರದಿ ನರ್ಸ್ ಪೂವಮ್ಮಳದು.
ಬೆಳಿಗ್ಗೆ ಊರಿಗೆ ಕಾಲಿಡುತ್ತಲೇ ನೋಡುತ್ತಾಳೆ…ವಾತಾವರಣ ಬದಲಾಗಿದೆ. ಅಂಗಳದ ತುಂಬೆಲ್ಲಾ ಗೆಲುವಿನಿಂದ ಕುಣಿದಾಡುತ್ತಿರುವ ಮಕ್ಕಳ ಸೈನ್ಯ! ಅವರ ಕೈಯಲ್ಲಿ ದೊಡ್ಡ ದೊಡ್ಡ ಬೆಲೂನುಗಳು. ದೊಡ್ಡೂರಿನ ಸಂಕ್ರಾಂತಿ ಜಾತ್ರೆಯಲ್ಲಿ ಕಣ್ಣಲ್ಲಿ ನೋಡಿದ್ದು ಬಿಟ್ಟರೆ, ಎಂದೂ ಕೈಯಲ್ಲಿ ಬೆಲೂನನ್ನು ಮುಟ್ಟಿ ಸಹ ನೋಡದ ಮಕ್ಕಳು ಸಂಭ್ರಮಿಸುತ್ತಿದ್ದಾರೆ. ಹತ್ತಿರ ಬಂದು ನೋಡುತ್ತಾಳೆ, ತಾನೇ ಹಂಚಿದ್ದ ನಿರೋಧ್!
‘ಏನೋ ಎಡವಟ್ಟಾಗಿದೆ’ ಎಂದುಕೊಳ್ಳುತ್ತಾ ಗಡಿಬಿಡಿಯಿಂದ ಮನೆ ಮನೆಗೆ ಎಡತಾಕಿದಳು. ಬಹುತೇಕ ಎಲ್ಲ ಹೆಂಗಸರೂ ಬಸುರಾಗಿದ್ದರು!

ವಿಷಯ ತಿಳಿದ ದೊಡ್ಡೂರಿನ ವೈದ್ಯರು ಕೈಗೆ ಸಿಕ್ಕ ಕೆಲ ಗಂಡಸರನ್ನು ಹಿಡಿ ತರಿಸಿ ವಿಚಾರಿಸಿದರು.
‘ನಮ್ಮದೇನೂ ತಪ್ಪಿಲ್ಲ ಸ್ವಾಮಿ. ನೀವು ಕೊಟ್ಟ ನಿರೋಧವ ರಾತ್ರಿ ಮಲಗುವಾಗ ಗೂಟಕ್ಕೆ ಸಿಕ್ಕಿಸಿಯೇ ಮಲಗುತಾ ಇದ್ವಿ’ ಎಂಬ ಸಮಜಾಯಿಸಿ ಕೇಳಿ ವೈದ್ಯರು ತಲೆ ಪರಚಿಕೊಳ್ಳುವಂತಾಯಿತು.
‘ಇದ್ಯಾಕೋ ಸರಿಹೋಗಲಿಲ್ಲ. ಏನಾದರೂ ಶಾಶ್ವತ ಪರಿಹಾರ ಕಂಡು ಹಿಡಿಯಬೇಕು’ ಎಂದುಕೊಂಡ ವೈದ್ಯರು ಸರ್ಕಾರಕ್ಕೆ ವರದಿ ಸಲ್ಲಿಸಿದರು.
‘ಮಕ್ಕಳಾಗದಂತೆ ಎಲ್ಲಾ ಗಂಡಸರನ್ನು ಹಿಡಿದು ಆಪರೇಷನ್ ಮಾಡ್ತಾರಂತೆ’ ಸುದ್ದಿ ಎಲ್ಲೆಡೆ ಬಿರುಗಾಳಿಯಂತೆ ಬೀಸತೊಡಗಿತು. ಇದು ಜನ್ಮದಲ್ಲಿ ಕಂಡುಕೇಳರಿಯದ ವಿಚಾರ! ತಮಗೆ ಪ್ರಿಯವಾದ ತಮ್ಮ ಗಂಡಸರ ಆ ಅಂಗವನ್ನು ಕತ್ತರಿಸಿ ಎಸೆದುಬಿಡುತ್ತಾರೇನೋ ಎಂದು ಹೆಂಗಸರು ದಿಗಿಲುಗೊಂಡರು.
ಗಾಬರಿಗೊಂಡ ಗಂಡಸರು ಅಲ್ಲಲ್ಲಿ ಸೇರಿ ಅದೇ ವಿಚಾರ ಚರ್ಚಿಸತೊಡಗಿದರು. ಪ್ರತಿಯೊಬ್ಬರೂ ತಮತಮಗೆ ಅನ್ನಿಸಿದಂತೆ ಗ್ರಹಿಸತೊಡಗಿದರು.

‘ಗಂಡು ಹಂದಿ ಮರಿಯ ಬೀಜ ತೆಗೆದಂತೆ ಬೀಜವನ್ನೇ ಕಿತ್ತು ಎಸೆದರೆ?’
ಹೋರಿಯನ್ನು ಕೆಡವಿಕೊಂಡು ಬೀಜ ಒಡೆದಂತೆ ಒಡೆದರೆ?
ಮದ ಬರುವ ಇಂಜೆಕ್ಷನ್ ಕೊಟ್ಟು ಮುಂದಿನ ಅಂಗವನ್ನೇ ‘ಚಕ್’ ಅಂತ ಕತ್ತರಿಸಿ ಬಿಸಾಡಿ ಬಿಟ್ಟರೆ?
ಇದರಿಂದ ಪಾರಾಗುವುದಾದರೂ ಹೇಗೆ? ಭಯಗೊಂಡಿದ್ದ ಅವರೆಲ್ಲಕಂಗಾಲಾಗಿ ಹಲುಬತೊಡಗಿದ್ದರು.
ಓಡೋಡುತ್ತಾ ಗುಂಪಿನೆಡೆಗೆ ಬಂದ ಪೋಲಿ ಕಾಳೇಗೌಡ ತಡವಾಗಿ ಚರ್ಗೆಗೆ ಸೇರಿಕೊಂಡ. ಒಂಬತ್ತು ಮಕ್ಕಳ ತಂದೆಯಾದ ಆತ ಕಳೆದ ತಿಂಗಳಷ್ಟೇ ಗಾರೆ ನಾರಾಯಿಣಿಯ ನಾದಿನಿಯನ್ನು ಹಿಡಿಯಲು ಹೋಗಿ ಸೋತು ಬಂದಿದ್ದು ಸುದ್ಧಿಯಾಗಿತ್ತು. ‘ನನಗೆ ಹೊಟ್ಟೆ ಬಂದರೆ ನೀನು ಮದುವೆಯಾಗುತ್ತೀಯಾ’ ಅಂತ ಆ ಹುಡುಗಿ ಆತನನ್ನು ಒದ್ದು ನೂಕಿದ್ದಳು.

ಅವರ ವಿಚಾರಗಳನ್ನೆಲ್ಲಾ ಗ್ರಹಿಸಿದ ಆತ ‘ನಾನು ನಿನ್ನೆ ಪೇಟೆಗೆ ಹೋಗಿದ್ನಲ್ಲ, ಅಲ್ಲಿ ಕಾಂಪೌಂಡರ್ ಸಿಕ್ಕಿದ್ರು. ಅವರು ನನ್ನ ಸ್ನೇಹಕಾರ. ‘ಆ ತರ ಏನೂ ಇಲ್ಲ ಬಿಡಿ’ ಎಂದರು. ಕೇವಲ ನರ ಕತ್ತರಿಸಿ ಬಿಡ್ತಾರಂತೆ. ಅದರಿಂದ ನಮಗೇ ಲಾಭ. ಎಂತಾ ಎಳೆ ಹುಡುಗೀರನ್ನ ಹಿಡಕೊಂಡ್ರೂ ಮಕ್ಕಳಾಗ ತೊಂದ್ರೆನೇ ಇಲ್ಲವಂತೆ’ ಜತೆಗಾರರಿಗೆ ಸಮಾಧಾನ ಮಾಡಲು ಯತ್ನಿಸಿದ್ದ.
‘ಅಯ್ಯಯ್ಯೋ ನರನೇ ಕತ್ತರಿಸ್ತಾರಂತಲ್ಲ. ಗಂಡಸ್ತನವೇ ಹೋದಮೇಲೆ ಬದುಕಿದ್ದೇನು ಪ್ರಯೋಜನ’ ದಿಕ್ಕೇ ತೋಚದವರಂತೆ ಪೇಚಾಡಿಕೊಳ್ಳತೊಡಗಿದರು.
ಕೊಡಗಿನ ಕಲ್ಲಯ್ಯ ಹದಿಮೂರು ಮಕ್ಕಳ ತಂದೆ! ದಿನವೂ ದೊಡ್ಡೂರಿನ ಹೊಲಗೇರಿಯಿಂದ ಬಂದು ಇಲ್ಲಿ ಗೊರಗ, ಕುಕ್ಕೆ, ಕೊಂಗ ಮುಂತಾದವನ್ನು ಹೆಣೆಯುತ್ತಿದ್ದ. ಅವನು ಎರಡು ದಿನದಿಂದ ಕಾಣೆಯಾಗಿದ್ದ. ‘ಹಿಂಗೇ ಮಕ್ಕಳ ಹುಟ್ಟಿಸ್ತಾ ಹೋದರೆ ನಿನಗೆಂತಲೇ ಒಂದು ಪ್ರತ್ಯೇಕ ಹೊಲಗೇರಿ ಕಟ್ಟಬೇಕಾಗುತ್ತೆ ಕಣಾ’ ಎಂದು ಊರ ಗಂಡಸರು ಛೇಡಿಸಿದಾಗ ‘ನೀವೂ ಏನೂ ಕಮ್ಮಿ ಇಲ್ಲ ಬುಡಿ ಗೌಡ್ರೆ’ ಎಂದು ಎದುರುತ್ತರ ನೀಡುತ್ತಿದ್ದ ಅವನು ಹಿಡಿದೊಯ್ದು ಸಂತಾನಹರಣ ಮಾಡುತ್ತಾರೆಂದು ತಿಳಿದಾಗ ದಂಗು ಬಡಿದುಹೋಗಿದ್ದ.
ಶಿಬಿರದ ದಿನ ಸಮೀಪ ಬಂದೇಬಿಟ್ಟಿತು. ಭಯದಿಂದ ಕಂಗಾಲಾಗಿದ್ದ ಗಂಡಸರು ಪಾರಾಗುವ ದಾರಿ ಹುಡುಕುತ್ತಲೇ ಇದ್ದರು.

ಸಿಬ್ಬಂದಿ ಮನೆಗೆ ಬಂದರು. ನಾಡಿದ್ದೇ ಆಪರೇಷನ್ನು, ಸಿದ್ಧವಾಗಿರಿ. ಬೆಳಿಗ್ಗೆಯೇ ಜೀಪಲಿ ಬಂದು ಕರಕೊಂಡು ಹೋಗ್ತಾರೆ. ಆಪರೇಷನ್ ಆದಮೇಲೆ ಖರ್ಚಿಗೇಂತ ನಿಮ್ಮ ಕೈಗೆ ನೂರು ರೂಪಾಯಿ ಬೇರೆ ಕೊಟ್ಟು ಕಳಿಸ್ತಾರೆ. ಹುರಿದುಂಬಿಸಿ ಮಾತನಾಡಿದರು.
‘ಯಾರಿಗೆ ಬೇಕಾಗಿದೆ ಇವ್ರ ನೂರು ರೂಪಾಯಿ. ಆಪರೇಷನ್ ದಿನ ಬೆಳಿಗ್ಗೆ ಕೋಳಿ ಕೂಗುವ ಹೊತ್ತಿಗೇ ಎದ್ದು ದೂರದ ನೆಂಟರು ಮನೆಗಳ ಕಡೆ ಹೋಗಿ ಬಿಡಾಣ’ ಗಂಡಸರೆಲ್ಲಾ ಗುಸುಗುಸು ಮಾತಾಡಿಕೊಂಡರು.
ಸುದ್ಧಿ ಹೇಗೋ ದೊಡ್ಡೂರು ಆಸ್ಪತ್ರೆ ತಲುಪಿತ್ತು. ಶಿಬಿರದ ಹಿಂದಿನ ದಿನ ಸಂಜೆಯೇ ಊರೊಳಗೆ ಜೀಪುಗಳು ನುಗ್ಗಿದವು. ಸೋಮಾರಿ ಕಟ್ಟೆಯಲ್ಲಿ ಬೀಡಿ ಸೇದುತ್ತಾ ಬೆಳಗಿನ ಪಲಾಯನ ಕಾರ್ಯಕ್ರಮದ ಬಗ್ಗೆ ಮಾತಾಡಿಕೊಳ್ಳುತ್ತಿದ್ದ ಗಂಡಸರು ಚಲ್ಲಾಪಿಲ್ಲಿಯಾದರು. ಹಿತ್ತಲಲ್ಲಿ, ಕೊಟ್ಟಿಗೆಯಲ್ಲಿ, ಮನೆಯ ಅಟ್ಟದಲ್ಲಿ ಹೀಗೆ ಸಿಕ್ಕ ಸಿಕ್ಕಲ್ಲಿ ಅಡಗಿಕೊಳ್ಳಲು ಯತ್ನಿಸಿದರು. ನಮ್ಮ ಅಪ್ಪ ಮೇಲಿನ ಹಿತ್ತಲಿಗೆ ಓಡಿಹೋಗಿ ಬಾಳೆ ಹಿಂಡಲಿನ ಮಧ್ಯೆ ಅಡಗಿ ಕುಳಿತಿದ್ದರು.
ಸಿಬ್ಬಂದಿ ಬಿಡಲಿಲ್ಲ. ಎಲ್ಲಕ್ಕೂ ತಯಾರಾಗಿಯೇ ಬಂದಿದ್ದರು. ಒಬ್ಬೊಬ್ಬರನ್ನೂ ಹಿಂಬಾಲಿಸಿ ಹೋಗಿ ಹಿಡಿದೆಳೆದು ತಂದು ಜೀಪಿಗೆ ತುಂಬತೊಡಗಿದರು.

ದೊಡ್ಡೂರಿನ ಆಸ್ಪತ್ರೆಯಲ್ಲಿ, ಸರ್ಕಾರಿ ಶಾಲೆಯಲ್ಲಿ ಅವರನ್ನು ಕೆಡವಿ ಪಹರೆ ಇಟ್ಟರು.
ಬೆಳಗಾಗೆದ್ದು ಹೆಂಗಸರೆಲ್ಲಾ ಬಂದು ದೊಡ್ಡೂರು ಆಸ್ಪತ್ರೆಯ ಬಳಿ ನೆರೆದರು. ಅವರೆಣಿಸಿದಂತೆ ಗಾಬರಿಯ ವಾತಾವರಣವೇನೂ ಇರಲಿಲ್ಲ. ಮಕ್ಕಳು ಹೆರುವುದು ತಪ್ಪಿತಲ್ಲ ಎಂದು ಅವರ ಮನದಲ್ಲಿ ನೆಮ್ಮದಿ ಸುಳಿದಾಡತೊಡಗಿತು.
ಮಧ್ಯಾಹ್ನದ ವೇಳೆಗೆ ಆಪರೇಷನ್ ಮುಗಿದುಹೋಗಿತ್ತು. ಜೀವತಂತುವನ್ನು ಜನನಾಂಗಕ್ಕೆ ರವಾನಿಸುವ ನರವೊಂದನ್ನು ತುಂಡರಿಸಿ ಹಿಂದಕ್ಕೆ ಮಡಚಿ ಹೊಲಿಗೆ ಹಾಕಿದ್ದರು.
ಹೆಂಗಸರನ್ನು ಒಳಕರೆದ ನರ್ಸ್ ‘ಎಲ್ಲಾ ಅಲ್ಲಿ ನೂರು ನೂರು ದುಡ್ಡು ಇಸ್ಗೊಂಡು ನಿಮ್ಮ ನಿಮ್ಮ ಗಂಡಸರನ್ನು ಕರಕೊಂಡು ಮನೆಗೆ ಹೋಗಿ’ ಎಂದಳು.
ಹೀಗೆ ಅಪ್ಪನ ಸಂತಾನೋತ್ಪತ್ತಿಯ ಯಾತ್ರೆ ಒಂಬತ್ತಕ್ಕೆ ನಿಲುಗಡೆಯಾಗಿತ್ತು. ‘ಇನ್ನಾದರೂ ತಾಪತ್ರಯ ಕಮ್ಮಿಯಾಗಬಹುದೇನೋ’ ಎನ್ನುತ್ತಾ ಅವ್ವ ಅಪ್ಪನೊಂದಿಗೆ ಹೊರಬಂದಿದ್ದಳು.

ಹಾಡ್ಲಹಳ್ಳಿ ನಾಗರಾಜ್

ಓದುಗರಿಗೆ ವಿಶೇಷ ಸೂಚನೆ:
ನಿಲುವಂಗಿಯ ಕನಸು… ಈಗ ಪಂಜು ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟವಾಗುತ್ತಿದೆ. ಖ್ಯಾತ ಸಾಹಿತಿಗಳಾದ ಹಾಡ್ಲಹಳ್ಳಿ ನಾಗರಾಜ್ ಅವರ ಈ ಕಾದಂಬರಿ ಬಹಳಷ್ಟು ಕಾರಣಕ್ಕಾಗಿ ಮುಖ್ಯವಾದುದು. ಇದನ್ನು ವಾರವಾರ ಓದುತ್ತಾ ಹೋದಂತೆ ನಿಮಗೆ ತಿಳಿಯುತ್ತಾ ಹೋಗುತ್ತದೆ. ಇಲ್ಲಿ ಒಂದು ಸಂಗತಿಯಿದೆ. ಕಾದಂಬರಿ ಮುಗಿದ ಮೇಲೆ ಕಾದಂಬರಿಯ ಬಗ್ಗೆ ಅಭಿಪ್ರಾಯಗಳನ್ನು ಓದುಗರಿಂದ ಕೇಳಲಾಗುವುದು. ಓದುಗರಿಂದ ಬಂದ ಅತ್ಯುತ್ತಮ ಅಭಿಪ್ರಾಯಗಳಿಗೆ ಪುಸ್ತಕ ರೂಪದ ಬಹುಮಾನಗಳನ್ನು ನೀಡಲಾಗುವುದು. ಇನ್ ಯಾಕೆ ತಡ… ಒಂದೊಳ್ಳೆ ಕೃತಿ ಓದಿದ ಅನುಭವದ ಜತೆ ಒಂದೊಳ್ಳೆ ಅಭಿಪ್ರಾಯ, ಚರ್ಚೆ… ಜೊತೆಗೆ ಬಹಳಷ್ಟು ಪುಸ್ತಕಗಳ ಬಹುಮಾನ. ಅಭಿಪ್ರಾಯಗಳ ಜತೆ ನಡೆಯೋಣ ಬನ್ನಿ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x