ಕಾವ್ಯಧಾರೆ

ಪಂಜು ಕಾವ್ಯಧಾರೆ

ಚುಟುಕುಗಳು
1
ಬಿಸಿಲಿನಲ್ಲಿ ಅಲೆದು ಅವನ
ಹಸಿವು ಹೆಚ್ಚಿ ಸುಸ್ತು ಆಗಿ
ಹಸಿರು ಮರದ ನೆರಳಿಗಾಗಿ ತುಂಬ ಅಲೆದನು
ಮಳೆಯ ಕಾಲದಲ್ಲಿ ಹತ್ತು
ಗೆಳೆಯರೊಡನೆ ಸೇರಿಕೊಂಡು
ನಾಳೆಗಾಗಿ ಹಲವು ಸಸಿಯ ನೆಟ್ಟು ಬಂದನು
2
ಹುಡುಗನೋರ್ವ ಬಿಸಿಲಿನಲ್ಲಿ
ನಡೆದು ಬರಲು ಸುಸ್ತು ಆಗಿ
ಗಿಡದ ನೆರಳಿನಲ್ಲಿ ಕೊಂಚ ಒರಗಿಕೊಂಡನು
ಮರಳಿ ಮನೆಗೆ ತೆರಳಿ ತಾನು,
ಹುರುಪಿನಿಂದ ಗೆಳೆಯರೊಡನೆ
ಅರಳಿ, ಹೊಂಗೆ ಸಸಿಯ ದಾರಿ ಬದಿಗೆ ನೆಟ್ಟನು
3
ಬಿಸಿಲ ಕಾಲದಲ್ಲಿ ಬುವಿಯ
ಹಸಿರು ಮಾಯವಾಗುತಿರಲು
ಹೆಸರು ಉಳಿಸುವಂತ ಕೆಲಸಕೆಂದು ಪುಟ್ಟನು
ಕಟ್ಟೆ ಮೇಲೆ ಹಕ್ಕಿಗಳಿಗೆ
ಬಟ್ಟಲಲ್ಲಿ ನೀರು ಕಾಳು
ಇಟ್ಟು ತಿನ್ನಲೆಂದು ಒಲುಮೆಯಿಂದ ಕರೆದನು
4
ಬರವು ಬಿದ್ದು ಬುವಿಯು ಸುಡಲು
ಮರಗಳೆಲ್ಲ ಒಣಗುತಿರಲು
ನರಳುತಿಹವು ಜೀವರಾಶಿ ವರುಣನಿಲ್ಲದೆ
ಇಳೆಯ ಮೇಲೆ ಗಿಡವ ನೆಡದೆ
ಮಳೆಯ ನೀರ ಇಂಗಿಸದೇ
ಬೆಳೆಯು ಹೋದವೆಲ್ಲ ನರನಿಗರಿವು ಇಲ್ಲದೆ
5
ರನ್ನನೆಂಬ ಪುಟ್ಟ ಕಂದ
ತನ್ನ ಹುಟ್ಟು ಹಬ್ಬದಂದು
ಚಿನ್ನದಂತ ಕೆಲಸ ತಾನು ಮಾಡಬಯಸಿದ ‌
ಕೆಲವು ದಿನಗಳಿಂದ ಹಸಿದ
ಹಲವು ಬೀದಿ ನಾಯಿಗಳಿಗೆ
ಒಲವಿನಿಂದ ಹೊಟ್ಟೆ ತುಂಬ ಅನ್ನ ಹಾಕಿದ
6
ಪುಟ್ಟ ಕಂದ ದಾರಿಯಲ್ಲಿ
ತಟ್ಟೆ ಹಿಡಿದು ಬೇಡುತಿದ್ದ
ದಟ್ಟ ಜನರ ಗುಂಪು ಕಂಡು ಮನದಿ ಮರುಗಿದ
ವೆಚ್ಚಕೆಂದು ಅಮ್ಮ ಕೊಟ್ಟ
ಬಚ್ಚಿ ಇಟ್ಟ ಕಾಸಿನಲ್ಲಿ
ಕೊಂಚ ಎತ್ತಿ ದೀನ ಜನರಿಗೆಂದು ನೀಡಿದ

-ಹಲವಾಗಲ ಶಂಭು

” ಭಿಕ್ಷುಕರು “

ಎಲ್ಲೆಂದಲ್ಲಿ,
ಸಾರ್ವಜನಿಕರ ಸಿಸಿಟಿವಿ ಕಣ್ಣುಗಳಿರುವ
ಹಾದಿ-ಬೀದಿಯ ಇಕ್ಕೆಲಗಳನ್ನು
ಹೊರತುಪಡಿಸಿ,
ತಂಪು ಎಸಿಯ ರೂಮಿನೊಳಗೆ
ನಾಲ್ಕು ಕಾಲುಳ್ಳ ಖುರ್ಚಿಯ ಕೆಳಗೆ
ಎರಡು ಕೈಗಳು ಬೆರಳೆಣಿಸುತ್ತಾ
ಒಂದಕ್ಕೊಂದು ಹೊಂದಿಕೊಂಡು
ಮಿಸುಕಾಡುತ್ತಿದ್ದವು

ದೊಡ್ಡ ದೊಡ್ಡ ನೋಟುಗಳ
ಹಸಿ-ಬಿಸಿ ಸುಗಂಧವನ್ನು ಹೀರಲು
ಕಾತುರದಿಂದ ಮೂಗುಗಳಲ್ಲಿಯೂ
ಎಡೆಬಿಡದೆ ಕಡಿತ ಶುರುವಾಗಿತ್ತು
ಬಲಗಾಲು ಕಡಿದಂತೆ
ಕಂತೆಗಳ ಅದೃಷ್ಟದ ಕನಸಂತೆ
ಅದಾರು ಮಲಗಿದ್ದರೋ.. ಕೆಲಸದ ನಡುವೆ
ಸನ್ನೆಗಳ ಸುಳಿವಿಗೆ ಎಚ್ಚರವಾದರು

ಸುಡುಸುಡು ಮಧ್ಯಾಹ್ನ
ಕಪ್ಪು-ತಂಪು ಚಾಳೀಸು ಏರಿಸಿಕೊಂಡು
ಇಬ್ಬಿಬ್ಬರು ಕಳ್ಳರು ವಸೂಲಿಗೆ ನಿಂತಿದ್ದರು
ಜೋಲ್ಲು ಸುರಿಸುತ್ತಾ.. ನೆಕ್ಕಿಕೊಳ್ಳುತ್ತಾ
ಯಾರನ್ನೂ ಬಿಡದೆ ರಕ್ತ ಹೀರುತ್ತಿದ್ದರು
ಡಬಲ್ ಸಂಬಳ ಅವರಿಗೆ; ಅದೃಷ್ಟವಂತರು

ಅಲ್ಲಿಯವರೆಗೂ ಶಿಸ್ತಿನಿಂದಿದ್ದವರು
ನೋಟುಗಳು ಕಂಡಾಕ್ಷಣ
ಬಾಯಿಬಿಟ್ಟು ನಿಲ್ಲತ್ತಿದ್ದರು;
ಕೀಲು ಗೊಂಬೆಗಳಂತೆ
ಅಯ್ಯೋ! ಅವರಿಗೇನೇನು ಕಷ್ಟಗಳೋ..
ದೇವರು ಸರಿಯಿಲ್ಲ!
ಎಲ್ಲರಿಗೂ ಕಷ್ಟಗಳನ್ನು ಕೊಡುತ್ತಾನೆ
ಕೆಲವರಿಗೆ ಕಮ್ಮಿ ಕೋಡುತ್ತಾನೆ
ಯಾವುದೋ ಜನ್ಮದ ಪುಣ್ಯವಿರಬೇಕು

ಹಸಿದು ವ್ಯಾಘ್ರಗಳಾಗಿ
ಒಮ್ಮೊಮ್ಮೆ ಅಸಹಾಯಕರಾಗಿ
ಅಲ್ಲಿಬ್ಬರು ಮತ್ತು ದೂರದಲ್ಲಿಬ್ಬರು
ಬೇಡುತ್ತಾ ನಿಂತಿದ್ದರು
ಅನ್ನಕ್ಕಾಗಿ ಅಲ್ಲ; ನೋಟಿಗಾಗಿ
ಪಾಪ! ಯಾರೋ ಭಿಕ್ಷುಕರಿರಬೇಕು

ಅಯ್ಯಯ್ಯೋ ಅವರು ಭಿಕ್ಷುಕರಲ್ಲಾ,
ಭ್ರಷ್ಟರು!!
ಹೀಗೊಂದು ಹುದ್ಧೆ ಇದೆ ಎಂದು
ನನಗೀಗಲೇ ಗೊತ್ತಾಗಿದ್ದು
ಕ್ಷಮೆಯಿರಲಿ ಪ್ರಮಾದಕ್ಕೆ
ಮತ್ತೊಮ್ಮೆ ಒತ್ತಿ ಹೇಳುವೆ
ಅವರು ಭಿಕ್ಷುಕರಲ್ಲಾ, ಭ್ರಷ್ಟರು!!

-ಅನಂತ ಕುಣಿಗಲ್

ವಿಶ್ವಗುರು ಭಾರತ

೧. ಉದಯವಾಯಿತು ನನ್ನ ಕನಸಿನ ಭಾರತ,
ದೇಶದ್ರೋಹಿಗಳ ಸದೆಬಡಿದು ಎದ್ದು ನಿಂತಿತು ನನ್ನ ಭಾರತ,
ನನ್ನ ದೇಹದ ಪ್ರತಿ ಕಣ-ಕಣದಲ್ಲಿರುವ ಶಕ್ತಿ ನನ್ನ ಭಾರತ,
ಉದಯೋನ್ಮುಖವಾಯಿತು ವಿಶ್ವಗುರು ನನ್ನ ಭಾರತ.

೨. ವಿಶ್ವಕ್ಕೆ ಭಾವೈಕ್ಯತೆಯ ಸ್ಪೂರ್ತಿಯ ಸೆಲೆ ನನ್ನ ಭಾರತ,
ಹಿಂದೂ,ಮುಸ್ಲಿಂ, ಕ್ರೈಸ್ತರ ಒಗ್ಗಟ್ಟಿನ ಪ್ರತೀಕ ನನ್ನ ಭಾರತ,
ಒಗ್ಗಟ್ಟಿಗೆ ಬಿಕ್ಕಟ್ಟು ತಂದ ಕೇಡಿಗಳ ರಣಬೇಟೆಯಾಡುವ ದೇಶ ನನ್ನ ಭಾರತ,
ಎಲ್ಲರೊಂದಾಗಿ ಕಾಪಾಡೋಣ ಈ ದೇಶ ನನ್ನ ಭಾರತ.

೩. ವಿಶ್ವಕ್ಕೆ ಸಂಸ್ಕೃತಿ ಕಲಿಸಿದ ಮಹಾನ್ ದೇಶ ನನ್ನ ಭಾರತ,
ಹೆಣ್ಣನ್ನು ಪೂಜಿಸುವ ಕಲೆ ತೋರಿಸಿದ ಏಕೈಕ ದೇಶ ನನ್ನ ಭಾರತ,
ಹೆತ್ತ ತಾಯಿಯೆ ಪ್ರತ್ಯಕ್ಷ ದೇವರೆಂದ ದೇಶ ನನ್ನ ಭಾರತ,
ಸದ್ಗುಣಗಳ ಶಾಸ್ತ್ರವನ್ನೆ ಪರಿಚಯಿಸಿದ ಪ್ರಾಚೀನ ದೇಶ ನನ್ನ ಭಾರತ.

೪. ಐತಿಹಾಸಿಕ ತಾಣಗಳ ತವರೂರೆಂದು ವಿಶ್ವಕ್ಕೆ ತೋರಿದ ದೇಶ ನನ್ನ ಭಾರತ,
ಪ್ರತಿ ಕಲ್ಲಿಗೆ ಉಸಿರು ತಂದ ಸಾವಿರ ಶಿಲ್ಪಿಗಳ ತವರು ದೇಶ ನನ್ನ ಭಾರತ,
ಪ್ರತಿ ಮಣ್ಣಿನ ಕಣ ಸಾರಿ ಹೇಳುವುದು ನನ್ನ ದೇಶ ನವ ಭಾರತ,
ಪವಿತ್ರ ಭೂಮಿಯ ಸ್ಪಶ೯ವಾದಾಗ ನೆನಪಾಗುವುದು ಶರಣರ ವಚನ ಸಾಹಿತ್ಯ ನೆಲೆ ನನ್ನ ದೇಶ ಭಾರತ.

೫. ಭಾರತಾಂಬೆಯ ಮಡಿಲಿನ ಪ್ರತಿ ಯೋಧನ ಉಸಿರು ಈ ನನ್ನ ದೇಶ ಭಾರತ,
ಬಲಿದಾನ, ತ್ಯಾಗದ ಪ್ರತೀಕ ಈ ಬಲಾಢ್ಯ ದೇಶ ನನ್ನ ಭಾರತ,
ಭಾರತ ಮಾತೆಯ ರಕ್ಷಣೆ ಹೊತ್ತ ಪ್ರತಿ ವೀರ ಯೋಧನ ಹನಿರಕ್ತ ಒಟ್ಟಾಗಿ ಮೇಲೆರುತ್ತಿದೆ ಈ ದೇಶ ನನ್ನ ಭಾರತ,
ಗಟ್ಟಿಗುಂಡಿಗೆಯ ಪರಾಕ್ರಮದಿಂದ ವಿಶ್ವವನ್ನೇ ಬೆರಗುಗೊಳಿಸುವ ದೇಶ ನನ್ನ ಭಾರತ.

-ಪ್ರದೀಪ ಮಲಾಬಾದಿ

ಮುಂಬೈ ಮೋಹದಲ್ಲಿ

ಬೆಳಕು ಇರುವಂತೆಯೇ ಬಂದು ಬಿಡು
ಉಸಿರಿನ ಹಾಗೆ ಜತೆಗಿದ್ದು ಬಿಡು
ದೂರ ದೂರ ಎನ್ನುವ ಮಾತು ದೂರವಿಡು
ಎಂದೆಂದೂ ಜತೆಗಿರುವೆ ಭಾಷೆ ಕೊಡು

ಕಳವಳವ ಕಳೆದು ಬಿಡು
ತಳಮಳ ತೊಡೆದು ಬಿಡು
ಥಳ ಥಳ ಹೊಳೆಯುವ ಮುಖ ತೋರಿಸಿ ಬಿಡು

ಹಕ್ಕಿ ಹೆಣೆಯುವುದು ಗೂಡು
ನಾನು ಕಟ್ಟುವೆನು ಹಾಡು
ಪಾಲುಗಾರ್ತಿ ಯಾಗಿಸೆನು ನಿನ್ನ , ನನಗಿರಲಿ ನನ್ನ ಪಾಡು
ಬೆಳಕು ಇರುವಂತೆಯೇ ಬಂದು ಬಿಡು

ಸೌಂದರ್ಯ ಸೆಳೆಯುವುದು
ವ್ಯಕ್ತಿ ತ್ವ ಉಳಿಯುವುದು
ಕಾದಷ್ಟು ಕುತೂಹಲ ಹೆಚ್ಚು ವುದು
ನಿನ್ನ ನನ್ನ ಪ್ರೀತಿ ಇನ್ನಷ್ಟೂ ಬಲಿಯುವುದು

ಅಂಜಿಕೆ ಸಿಗುವವರೆಗೂ
ನಂಬಿಕೆ ಮನೆ ವರೆಗೂ
ಹೊಂದಿಕೆ ಕೊನೆವರೆಗೂ
ನನ್ನ ಈ ವ್ಯಾಮೋಹ ಮಣ್ಣಾಗುವರೆಗೂ

ಅವರಿವರ ಮಾತು ಬಿಡು
ಊರವರ ತುಸು ದೂರವಿಡು
ಅಪರಿಚಿತ ರು ಎಂಬ ಭಯ ಬಿಟ್ಟು ನೋಡು
ಬೆಳಕು ಇರುವಂತೆಯೇ ಬಂದು ಬಿಡು

ಬಂದರೆ ಬರೆದಿಡು
ತಂದರೆ ತೆರೆದಿಡು
ಏನಾದರೂ ಅಂದರೆ ಮರೆತುಬಿಡು
ಉಸಿರು ಇರುವಂತೆಯೇ ನನ್ನ ಸೇರಿ ಬಿಡು…..

-ಯಶ್‌ ರಾಜ್

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published.