ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 76 & 77): ಎಂ. ಜವರಾಜ್

-೭೬-

ಕಂತಕಟ್ಟ ಗದ್ದಮಾಳ
ಗಕುಂ ಅಂತಿತ್ತು

ಕೆರ ಪಾಚಿಕಟ್ಟಿ
ಜೊಂಡು ಬೆಳ್ದು
ಮಧ್ಯದಲಿ ಒಂದೇಡ್ ತಾವರ ಹೂ

ಆ ಹೂವ್ಗಳು
ಅತ್ತ ಅಳ್ದಾಗು ಅಲ್ಲ
ಇತ್ತ ಮೊಗ್ನಾಗು ಅಲ್ಲ
ಜೋತ್ಗಂಡು ಮ್ಯಾಕ್ಕ ನೋಡ್ತ
ಮ್ಯಾಲ ತಿಂಗ್ಳು ಬೆಳ್ಕು ಬೆಳುಗ್ತಾ..

ಇತ್ತಗ
ಈ ಅಯ್ನೋರು ನನ್ನ ಮೆಟ್ಟಿ
ಈ ಮೆಟ್ಟಿರ ಪಾದ್ವ
ಈ ಭೂಮ್ತಾಯ್ಗ ಕುಟ್ಟಿ ಕುಟ್ಟಿ
ಸುಮ್ನ ಅತ್ತಗು ಇತ್ತಗು ನೋಡ್ತಾ..

ಹಂಗ ನೋಡ್ತಾ ನೋಡ್ತಾ
ಆ ತಿಂಗ್ಳು ಬೆಳುಕ್ಲಿ
ಕೆರ ಮಗ್ಗುಲ್ಲಿ ಅದೇನ ಸದ್ದಾಯ್ತು
ಆ ಸದ್ದು,
ಹೆಜ್ಜ ಸದ್ದೇ ಆದಂಗಿತ್ತು

ಈ ಅಯ್ನೋರು ಬೆಚ್ತ ಮ್ಯಾಕೆದ್ರು

ಮರದ ಕೊಂಬ ಮ್ಯಾಲಿಂದ
ಬೇರು ಕಂಡಾಗಿ ಜೋತಾಡ್ತ
ಭೂಮ್ತಾಯಿಗ ಅಂಟ್ಗಂಡಿದ್ದ
ಆಲದ ಮರ ಸಂದಿಲಿ ಮಡ್ಗಿದ್ದ
ಬಿದುರು ದೊಣ್ಣ ಎತ್ಗಂಡು
‘ಅದ್ಯಾರ’ ಅಂತ ಅತ್ತಗೆ ಹೆಜ್ಜ ಇಟ್ರು

ಹಂಗಿಟ್ಟ ಹೆಜ್ಜ ರಬುಸುಕ್ಕ
ನನ್ ಮೈಮಾರೆಲ್ಲ ಬೆಂಕಿತರ ಆಗಿ
ಸುಡುಸುಡು ಸುಡ್ತ
ಗಿರಿಕ್ಕು ಗಿರಿಕ್ಕು ಅಂತ ಸದ್ದಾಯ್ತು

ಆ ಸದ್ಗ ಆ ಕಂತಕಟ್ಟ
ಗದ್ದಮಾಳಾಗಿದ್ಮಾಳೆಲ್ಲ
ಗಿರ್ಗುಟ್ಟತರ ಆಯ್ತು

ಈ ಅಯ್ನೋರು
ಬಿದುರು ದೊಣ್ಣ ಊರಿ
ನೆಟ್ಗ ನಿಂತು
ಪಾದ್ವ ಭೂಮ್ತಾಯ್ಗ ಕುಟ್ಟುದ್ರು

ಹತ್ರ,
ಇನ್ನೇನ ಹತ್ರುಕ್ ಬಂದ

ಆ ಹೆಜ್ಜ ಸದ್ದು ಹಂಗೆ
‘ಅಯ್ನೋರಾ..’ ಅಂತ
ಮೆಲ್ಗ ಪಿಸುಗುಡ್ತು

ಹಂಗ ಪಿಸುಗುಡ ದನಿ
ನೆಪ್ಗ ಸಿಗ್ದೆ
ನಂಗು ದಿಕ್ಕೆಡ್ತು
ಈ ಅಯ್ನೋರ್ಗು ದಿಕ್ಕೆಡ್ತು ಅನ್ಸುತ್ತ..

ಆ ಬೆಳ್ಗ ತಿಂಗುಳ್ಳಿ
ಮೊಖನು ಕಾಣ್ದು
ಮೂಗೂ ಕಾಣ್ದು
ಬಾಯಿ ಗಡ್ಡನು ಕಾಣ್ದು

ಹಂಗ ಮೊಖ ಮಾರೆಲ್ಲ ಕಾಣ್ದಂಗ
ಬಟ್ಟ ಸುತ್ಗಂಡಿರದು ಕಾಣ್ತು

‘ಯಾರ’
ಈ ಅಯ್ನೋರು ಅಳ್ಕಿ ಅಂದಗಾಯ್ತು

‘ನಾನು ಅಯ್ನೋರಾ, ಮಾದೇವ’
ಅಂತ ಇನ್ನೂ
ಮೆಲ್ ಮೆಲ್ಗ ಪಿಸುಗುಡ್ತ
ಮೊಖ ಮೇಲಿರ ಬಟ್ಟನ ಬಿಚ್ಚುದ್ರಾ..

ಅದೆ ಅಂವ,
ಅಂದ್ರ, ಎಳುರುಂಡಿ ಮಾದೇವ

ಈ ಅಯ್ನೋರು ಅವನ ಭುಜ ಹಿಡ್ದು
‘ನೀನಾ..
ಇದೇನ ನಿನ್ ಅವ್ತಾರ’ ಅಂದ್ರು

“ಅವ್ತಾರ ಅಂದಗಾಯ್ತು
ಎಲ್ಲ ಕಡನು ಪೋಲೀಸೆ
ಕಾಡ್ಬಿದ್ದು ಬರಂಗಾಯ್ತು
ಈ ಎಣ್ಕ ಮುಗ್ಯಗಂಟು ಹಿಂಗೆ
ನಡರಿ.. ನಡರಿ..
ಊರಿ ಹೆಜ್ವ..”
“ಕಂಡಿದಯ..”
“ಊ್ಞ ಕಂಡಿನಿ, ಆದ್ರ..”
“ಆದ್ರಗೀದ್ರ ಬ್ಯಾಡ
ಆ ಪುಂಡ ಮುರಿಬೇಕು
ಆ ಪುಂಡ ಮುರುದ್ರ
ಅವ್ನೊಂದ್ಗಿರ ಪುಂಡೆಲ್ಲ
ಮುರುದು ಬೀಳ್ತವ”
“ಅಯ್ನೋರಾ ಮಾತ್ಯಾಕ
ಊರಿ ಹಜ್ವ…
ರಸ್ತಗುಂಟ ಕಾಲೂರದು ಬ್ಯಾಡ
ಪೋಲೀಸ್ರು ಊರಾಚ ತಿರುಗ್ತವ್ರ
ಅದ್ಕ ಕಾವ್ಲಿ ಒಳ್ಗಿಂದ ಹೋಗಂವ್
ಆ ಕಾವ್ಲಿ ಒಳಕ ಇಳಿರಿ
ದೊಣ್ಣ ಆಡುಸ್ತ ಊರಿ ಹೆಜ್ವ”

ಅಂತ ಪಿಸುಗುಡ್ತ
ಕಾವ್ಲಿ ದಾರಿ ಸಾಗ್ತಿತ್ತು

ಅವ್ನುವ ಈ ಅಯ್ನೋರುವ
ಕಾವ್ಲಿ ಒಳಗ ಕಾಲೂರಿ ನಡಿತಿದ್ರ
ಆ ಸ್ಯತ್ತ ಸಿದುಕ್ಲು
ಸರಸರ ಸದ್ದ ಮಾಡವ್
ಆತರ ಸರಸರ ಸದ್ದ ಮಾಡ್ತಿದ್ರ
ಈ ಅಯ್ನೋರು ಬೆಚ್ಚತರ ಕಾಲೆತ್ತರು

ಈಗ ಕಿರುಗುಸೂರು ದಡ ಮುಟ್ಟುದ್ರು
ಅಂವ ಅತ್ತಿಮರದ ಬುಡುತ್ತವು
ಅಯ್ನೋರ್ ಕೈಹಿಡ್ದು..

ಈ ಅಯ್ನೋರೂ
ಆ ಕೈಯ ಬಿಗಿ ಹಿಡ್ದು
ದಡ ಹತ್ತಿ
ಏರಿಮ್ಯಾಲ ನಡುದ್ರು…

“ಈ ನಡ್ಗಯಿಂದ
ಒಂದ್ರಾತ್ರುಕ್ಕೆ
ನಂಗ ಸಾಕು ಸಾಕಾಯ್ತು
ಜಿನಾ ನೀ ಅದೆಂಗ್ ನಡ್ದಯ..
ಆದ್ರ, ಅದೇನಾರ ಆಗ್ಲಿ ನಡ..”

ಈಗ ಇಬ್ರು ನಡ್ಗನು ಜೋರಾಯ್ತು

“ನಡರಿ ನಡರಿ ಅಲ್ಲೆ ಅವ್ನ ಕಣ
ಹೊಳ ಮಗ್ಗುಲ್ಗ
ನೀರಂಜಿ
ಮರದ ಬ್ವಾರ ಅದಲ್ಲ..
ಅಲ್ಲಿ
ಅಲ್ಲೆ ಅಂವ ಯಾವಾಗ್ಲು ಇರದು..

“ಅಲ್ಗ ಯಾರು ಹೋಗ್ರು
ಅಲ್ಲಿ ಆಗಿರ ಕೊಲ ಲೆಕ್ಕಿಲ್ಲ
ಅಲ್ಲಿ ಗಾಳಿ ಗಾಚಾರ ಅಂತಾನು
ಜನ ಹೋಗಾಕ ಜರಿತರ
ಅದ್ಕಾಗಿ ಅಲ್ಲಿ ಬೀಡ್ಬುಟ್ಟಿರದು…

“ಆ ಪುಂಡೆಲ್ಲ ಅಲ್ಲೆ ಸೇರ್ತವ
ಕುಡ್ದು ತಿಂದು ಗಾಳಿ ಗಾಚಾರನೆ
ಮೈಗ ಬರುಸ್ಕಂಡು
ಕುಣ್ದು ಕುಪ್ಪುಳುಸ್ತವ…

“ಅದು ನಂಗು ಗೊತ್ತಿಲ್ದೆ
ಆ ಪುಂಡ್ಲೆ ಒಬ್ಬುನ್ನ
ಇತ್ತಗ ಎತ್ತಾಕ ಬಂದು
ಗುದ್ದಿ ಬಾಯ ಬುಡುಸ್ದಿ…

“ಅವ್ನ್ ಬಾಯ ಬುಡ್ಸಿ
ನಾ ಸುಮ್ನಿರಗಿದ್ದಾ..
ಕಣ್ಣಿಟ್ಟಿ ಅಯ್ನೋರಾ..

“ಅವತ್ತಿಂದ ಇವತ್ಗೂ
ಆ ಪುಂಡ ಪತ್ತಿಲ್ಲ..”

ದಾರಿ ಸಾಗ್ತಿತ್ತು
ಮ್ಯಾಲ ತಿಂಗ್ಳು
ಹಾಲ್ನೊರತರ ಬೆಳ್ನ ಬೆಳ್ಗಿ
ಬೆಳ್ಕ ಚೆಲ್ಲಿ
ಅದೂ ನಮ್ಜೊತ್ಗೇ
ಓಡ್ಬತ್ತಿತ್ತು

ಆಗ..
ಆಗ ಅಂವ
ಅಂದ್ರ,‌
ಎಳುರುಂಡಿ ಮಾದೇವ
“ಅಯ್ನೋರಾ….” ಅಂತ
ಕೂಗ್ತ ರುಪ್ಪಂತ ಕೆಳಕ ಬಿದ್ದು
“ಓಡಿ ಅಯ್ನೋರಾ ಓಡಿ”
ಅಂತ
ಕೈಬೀಸಿ ಸನ್ನ ಮಾಡುದ್ನ

ಈ‌ ಅಯ್ನೋರು ಬೆಚ್ಚಿ
ಕಾಲು ನಡಿಕಂಡು ಓಡುದ್ರು..

ಹಿಂದ್ಗುಂಟ ಅಂವ ಎದ್ದು
ದಿದಿ ದಿದುಗುಟ್ಕಂಡು
ಓಡ್ಬತ್ತಿರದು ಕಾಣ್ತಿತ್ತು

“ನಡರಿ ಅಯ್ನೋರಾ
ತಲಲಿ ರಕ್ತ ಬತ್ತಾ ಅದ
ಅದ್ಯಾರ ಹಿಂದ್ಲಿಂದ ಹೊಡ್ದಂಗಾಯ್ತು”

ಅಂತ ದುಮುಗುಡ್ತ
ಏರಿ ಒತ್ಗ ಬಂದು
ಹಿಂದುಕ್ಕ ತಿರುಗುದ್ನ

ನಂಗೂ ದಿಗ್ಲಾಗಿ
ಹಿಂದುಕ್ಕ ತಿರುಗ್ದಿ
ಯಾರಿದ್ದರು..

ಯಾರು ಇದ್ದಂಗಿ ಕಾಣ್ಣಿಲ್ಲ

ಆದ್ರ
ಈ ಅಯ್ನೋರ್ ಕಾಲು
ಗಡಗಡ ನಡುಗ್ತಿತ್ತು

ಅಂವ ಅಯ್ಯೋರ್ ಕೈಹಿಡ್ದು
ಎಳ್ದಂಗಾಯ್ತು

ಅಲ್ಲೆ ಏರಿ ಮಗ್ಗುಲ್ಲಿ
ಅತ್ತಿಮರದ ಬುಡುಕ್ಕ ತಿಕವೂರಿ
“ಇದೆ ಅಯ್ನೋರಾ ನಮ್ ಬೇಟ ಜಾಗ”
ಅಂತ ಕೈತೋರಿ ತಿರುಗ್ದ

ಆಗ
ಆ ಹೊಳ ಅಂಚು ಕಾಣ್ತು

ಅದೆ ಹೊತ್ಗ
ಆ ಅಂಚ್ನ ಉದ್ದುಕ್ಜು
ಬೆಳ್ದು ತೊನ್ಯಾಡ್ತಿದ್ದ
ನೀರಂಜಿ ಮರದ ಸಾಲ್ಲಿ
ಆ ತಿಂಗ್ಳು ಬೆಳುಕ್ಲಿ
ನೆಳ್ಳುನ್ ತರ
ಮನುಸುನ್ ರೂಪ್ದಲ್ಲಿ
ಅದೇನ ಅದ್ಯಾರ
ನಡ್ಕಂಡು ಹೋಗತರ ಕಾಣ್ತು..

*

-೭೭-
ಮನ ಮುಂದ
ಜನ ನೆರುದು
ಗಲಕಾಕ್ತಿತ್ತು

ಪೋಲೀಸ್ರು ದೊಣ್ಣ ಬೀಸ್ತ
ಆ ಜನನ ತಳ್ತ
ದಾರಿ ಮಾಡ್ತ ಇದ್ರು

ಈ ಅಯ್ನೋರು ಮನ ಒಳ್ಗ
ನಳ್ಳಾಡದು ಕೇಳ್ತ
ಆ ಜನ ಲೊಚ್ಗುಟ್ತಿದ್ರು

ಆ ಆಳು,
ಆ ಆಳ್ನೆಡ್ತಿ
ಈ ಅಯ್ನೋರ್ ಕಾಲಿಂದ
ನನ್ನ ತಗ್ದು
ತೂದಿ ಎಸ್ದ ರಬುಸುಕ್ಕ
ನಾನು
ಜಗುಲಿ ಮೂಲಲಿ ಬಿದ್ದಿರಗಾಯ್ತು

ನಾಳ ನಾಳಿದ್ದು ಓಟೆಣ್ಕ ಅದ
ಇವತ್ಗ ಹಿಂಗಾಗದ

ಹಿಂಗಾಗ್ಲಿ ಬ್ಯಾಡ ಅನ್ನಲ್ಲ
ರಾಜ್ಕೀಯ ಅಂದ್ಮೇಲ
ಈತರ ಕಾಲ್ ಕಾಲ್ಕು ಅದ
ಆದ್ರ, ನೋಡಕ ಮಾಡಕ
ಎಡ್ಕ ಬಲ್ಕ ಯಾರಿದ್ದರು…

ಹಿಂಗ ಜನ ಮಾತಾಡ್ತಿದ್ರು

ನಾ ಕೇಳ್ತನೆ ಇದ್ದಿ
ಈ ಅಯ್ನೋರು ನಳ್ತನೇ ಇದ್ರು

ಈ ಪೋಲೀಸ್ರು,
ನಾಕ್ಸಲ ಒಳಕ
ನಾಕ್ಸಲ ಈಚ್ಗ
ಹೋಗದು ಬರದು ಮಾಡ್ತಿದ್ರು

ಆ ಆಳು ,
ಆ ಪೋಲೀಸ್ರು ಜೊತ್ಗ
ಹಲ್ಕಿರಿತಾ
ಗ್ವಾಡ ಸಂದಿದಿಕ ಹೋಯ್ತಿದ್ರಾ…
ಆ ಪೋಲೀಸ್ರೂ
ಆ ಆಳ್ನಿಂದ್ಗುಂಟೆ ಹೋಯ್ತಿರದು ಕಾಣ್ತು

ಆಗ
ಒಂದು ಕರಿದು ಕಾರು ಬಂದು
ಮನತವು ನಿಂತ್ಕತು

ಆ ಕರಿ ಕಾರಿಂದ
ಬೆಳಿ ಬಟ್ಟ ಪ್ಯಾಟ್ರಿ ಡಾಕ್ಟ್ರು
ಟ್ರಂಕ್ ಇಡ್ಕಂಡು
ಕೆಳಕ ಇಳ್ದು ಮನ ಒಳಕ್ಕೋದ್ರು


ಗಳುಗ್ಗ ಈ ಅಯ್ನೋರು
ಕಿಟಾರಂತ ಕಿರುಚುದ್ದು ಕೇಳ್ತಾ..
ಈಚ ನಿಂತಿರ

ಜನ
ಲೊಚ್ಗುಟ್ಟದು ಜಾಸ್ತಿನೆ ಮಾಡುದ್ರು

ತೂ.. ಲೌಡಿ ಸೂಳ ಮಕ್ಳಾ..
ಅದ್ಯಾಕ ಲೊಚ್ಗುಟ್ಟಿರಿ..
ಅಯ್ನೋರೇನು ಅಂತಾ
ಲೊಚ್ಗುಟ್ಟ ಕೆಲ್ಸ ಮಾಡಿದ್ದರು..

ನನ್ ಕಾಲೋ..
ನನ್ ಕಾಲಯ್ಯೋ..
ನನ್ ಒಡಿಯೋ..
ಈ ಜನ ಯಾಕ ಲೊಚ್ಗುಟ್ಟರೋ..

ಆ ನಿನ್ ಸವ್ವಿ ಅರಿದೆ ಬಸ್ರಾಗಿ..
ಆ ಬಸ್ರಾದ್ ನೆಪ್ಗ
ಆ ಚೆಂಗುಲಿ ಜೊತ್ಗ
ರಾತ್ರಾರಾತ್ರಾ ಕಾಣ್ದಗಾದ್ರೂ..
ಆ ನಿನೈದ ಪರ್ಶುನ
ಚೆಂಗುಲಿ ಕೇಸ್ಲಿ
ಪೋಲೀಸ್ರು ಎತ್ಗ ಹೋದ್ರೂ..
ಈ ಅಯ್ನೋರು ಎಲಕ್ಷನಲಿ
ಗೆದ್ದು ಹೂನಾರ ಹಾಕಂಡು ಬೀಗ್ತಾ..
ತಂವ್ಟ ಸದ್ಲಿ ಮೆರುಣ್ಗ ಬತ್ತಿರ ಹೊತ್ಲೀ..
ರಾತ್ರಾರಾತ್ರಾ
ನೀನು,
ನಿನ್ ಚೆಲ್ವಿ
ಬೆಂದು ಬೂದಿಯಾದ್ರೂ..
ಹಿಂಗ ಲೊಚ್ಗುಟ್ನಿಲ್ವಲ್ಲೊ….

ಆದ್ರಾ..
ಆದ್ರ,
ಇಂದ್ಯಾಕ ಹಿಂಗ ಲೊಚ್ಗುಟ್ತಿದ್ದಾರೋ…

ಇದರ ಮರ್ಮ
ನನ್ನೆದ ಒಳಗ
ದಗದಗ ಅಂತ ಉರಿತಾ
ಬೇಯ್ತ ಇರದು ನಂಗಲ್ದೆ
ಈ ಲೊಚ್ಗುಟ್ಟ ಜನುಗ್ಗೊತ್ತಾ
ನನ್ನ ಕಾಲಯ್ಯೋ..

ರಾತ್ರ ಆ ಅಂವ
ಅದೆ,
ಎಳುರುಂಡಿ ಮಾದೇವ
ಜೊತ್ಗೂಡಿ
ಇದ್ದೂ ಇಲ್ದಂಗಿ ಇರ
ನಿನ್ ಕುಡಿನ
ಕಡಿಯಕ್ಕೋಗಿದ್ನಲ್ಲೊ..

ಆದ್ರಾ..
ಆದ್ರ, ನಿನೈದ ಕಡಿಸ್ಕಂಡ್ನಾ..

ಆ ಕಡಿಯ ಸವುಳ್ಳಿ
ಅದೇನಾಯ್ತ ಏನಾ..
ನನ್ ಮೈಗ ಬುಳುಬುಳು
ಹರುಕ ಬಂದಂಗಾಯ್ತಲ್ಲಾ..

ಈಗ ನೋಡುದ್ರ
ನನ್ ಮೈಲಿ ರಕ್ತ ರಟ್ಗಟ್ಟಿ
ನಿದ್ದನು ಹತ್ದೆ
ರಾತ್ರ ಆದ್ದು
ಇನ್ನುವ ಕಣ್ಲಿ ಕಟ್ದಗದಲ್ಲಾ…

ಅದೇನ ಆದ್ದು..

ತೂ..
ಲೊಚ್ಗುಟ ಲೌಡಿ ಮಕ್ಳಾ..
ನನ್ ಕಣ್ಮುಂದ ಲೊಚ್ಗುಟ್ಟದ ನಿಲ್ಸಿ
ಎಲ್ರುವ ಇಲ್ಲಿಂದ ತೊಲ್ಗಿ
ಸೂಳಾ ಮಕ್ಳಾ..

ಆಂತ ನಾನು ಕೆಂಡ ಕಾರ್ತಿದ್ರಾ..

“ಇದ್ಯಾಕಣ್ಣ ಅಸ್ಟೊತಿಂದ
ಒಬ್ನೆ
ಗೊಣಗೊಣ ಗೊಣ್ಗುಟ್ತಿದೈ”

ಅನ್ನದು ಗುಂಯ್ಗುಡ್ತು

ಇದೇನ ಗುಂಯ್ಗುಡದು
ಅಂತ ಮಂಪ್ರ ಎಸ್ದು ನೋಡುದ್ರಾ..

ಇತ್ತಗ ಹಿಂಡ್ಗಟ್ಲ ಕಟ್ಟೆರ
ನನ್ ಮೈಮ್ಯಾಕ್ಕ ಹತ್ಕಂಡು
ರಟ್ಗಟ್ಟಿರ ರಕ್ತನ ಕೆಂಟ್ತ ಕೆಂಟ್ತ
“ಈ ರಕ್ತ ರುತಿನೆ ಇಲ್ವಲಣ್ಣ”
ಅಂತಂತ್ಲೆ ತಿಂತಿದ್ದು

ರುತೀ..
ರುತಿನಂತ ರುತಿ
ಎಂಥ ರುತಿನಾ..
ಇದ್ಯಾರ್ ರಕ್ತ ಅನ್ನದಾದ್ರು ಗೊತ್ತಾ…
ಒಳ್ಗ ನಳ್ತ ಬಿದ್ದನಲ್ಲ
ಈ ಅಯ್ನೋರ್ ಕಾಲ್ ರಕ್ತಾ….

ಕಳ್ಬಳ್ಳಿ ಅನ್ನದ್ನೂ ಕಾಣ್ದೆ..
ಕೂಸುಕುರಿ ಅನ್ನದ್ನೂ ಕಾಣ್ದೆ..
ಬಸ್ರಿ ಬಾಣ್ತಿ ಅನ್ನದ್ನೂ ಕಾಣ್ದೆ..
ಕೋರಿ ಮುದ್ಕಿ ಅನ್ನದ್ನೂ ಕಾಣ್ದೆ..
ಬುಟ್ಟೂ ಬುಡ್ದೆ
ರುತಿ ನೋಡ್ದವ್ನ್ ರಕ್ತ ರುತಿ ಎಲ್ಬಂದೂ..

“ಅದೇನ ರಾತ್ರ ಆದ್ದು
ಒಬ್ನೆ ಗೊಣುಕ್ತ ಇದ್ದೆಲ್ಲ..”

ರಾತ್ರ ಆದ್ದು..

ಆ ಹೊಳ ಮಗ್ಗುಲ್ಲಿ
ಆ ನೀರಂಜಿ ಮರದ ಸಾಲ್ಲಿ..
ಆ ತಿಂಗ್ಳು ಬೆಳುಕ್ಲಿ
ನೆಳ್ಳುನ್ ತರ
ಮನುಸುನ್ ರೂಪ್ದಲ್ಲಿ
ಅದೇನ ಅದ್ಯಾರ
ನಡ್ಕಂಡು ಹೋಗತರ ಕಾಣ್ತಲ್ಲ..

ಅದ ನೋಡ್ತಾ
ಈ ಇಬ್ರೂ ಜೊತ್ಗೂಡಿ
ಆ ಭೂಮ್ತಾಯಿ ಆಸ್ರ ತಗಂಡು
ಬಿದುರು ದೊಣ್ಣ ಊರ್ತಾ
ನೀರಂಜಿ ಮೂಲ್ಗ ನಡುದ್ರಲ್ಲ..

ಆಗ..

-ಎಂ.ಜವರಾಜ್

ಮುಂದುವರಿಯುವುದು…

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x