ಶುದ್ದ ನಗರಿಕರಣದಿಂದ ದೈತ್ಯ ನಗರಗಳು ಯಾಂತ್ರಿಕವಾಗಿ ಮುನ್ನೆಡೆಯುವ ಇಂದಿನ ಜೀವನ ಶೈಲಿ ಅದೇಕೋ ನನಗೆ ಹಿಡಿಸಲಾರದಷ್ಟು ಯಾತನೆ ಪಡಿಸುತ್ತೆ. ಅದೇ ಹಳ್ಳಿಗಳ ಗ್ರಾಮೀಣ ಬದುಕು ರೀತಿರಿವಾಜುಗಳು, ರಾಜಕೀಯದ ಒಳಪಟ್ಟುಗಳು, ಅಣ್ಣ ತಮ್ಮರ ವ್ಯಾಜ್ಯ, ಜಾತ್ರೆಯ ಬಾಡೂಟ- ಇಂತಹ ಹಲವಾರು ನಿದರ್ಶನಗಳು ಗ್ರಾಮ್ಯ ಸಮಾಜದ ಜೀವಂತಿಕೆಯನ್ನು ಹಾಗೂ ಬದುಕಿನ ಶ್ರೀಮಂತಿಕೆಯನ್ನು ಹೆಜ್ಜೆ- ಹೆಜ್ಜೆಗೂ ಪ್ರತಿಪಾದಿಸುತ್ತವೆ.
ನಮ್ಮ ಊರಿನ ಆಜುಬಾಜಿನ ಸುಮಾರು 30 ಹಳ್ಳಿಗಳ ಜನರು ತಮ್ಮ ಜಾನುವಾರು, ಬೆಳ್ಗೆ ಹಾಗೂ ದೈನಂದಿನ ಅವಶ್ಯಕ ವಸ್ತುಗಳ ಖರೀದಿ ಹಾಗೂ ಬಿಕರಿ ಇಲ್ಲಿ ವಾರಕ್ಕೊಮ್ಮೆ ನಡೆಯುವ ಗಂಡಸಿ ಸಂತೆಯ ನೂಕುನುಗ್ಗಲಲ್ಲಿ ನಡೆಸುತ್ತಾರೆ. ನಾ ಕೇಳಿ ತಿಳಿದ ಮಟ್ಟಿಗೆ ಇಡಿಯ ರಾಜ್ಯದಲ್ಲಿ ನಡೆಯುವ ಸಂತೆಗಳಲ್ಲಿ ಜನಸಂಖ್ಯೆ ಹಾಗೂ ವೈವಿಧ್ಯಮಯ ವ್ಯಾಪಾರದಿಂದ ಅತೀ ದೊಡ್ಡದು. ಇದರ ಜೊತೆಗೆ ಹಾಸನದ ಮಂಗಳವಾರದ ಸಂತೆ, ಭಾನುವಾರದ ಕಾರೇಹಳ್ಳಿ ಸಂತೆ, ಶುಕ್ರವಾರ ಜರುಗುವ ಅರಸೀಕೆರೆ ಸಂತೆ, ತಿಪಟೂರು, ಚಿಕ್ಕನಾಯಕನ ಹಳ್ಳಿ ಸಂತೆಗಳು ಹೀಗೆ ನಮ್ಮ ಸೀಮೆಯ ರೈತರ ಬದುಕಿನ ಹಲವಾರು ತಿರುವುಗಳನ್ನು ನಿರ್ಧರಿಸುವ ಅನುಭವ ಮಂಟಪಗಳು ಈ ಸಂತೆಗಳು.
ಗುರುವಾರ ನಡೆಯುವ ಸಂತೆಗೆ ಹೋಗಲು ಬುಧುವಾರವೇ ನನ್ನ ಹಠ ಶುರು. ಬೇಸಿಗೆ ರಜೆಯಲ್ಲಿ ಸಂತೆ ನೋಡದೆ ಬಿಡಲು ಸಾಧ್ಯವೇ ? ಅದರಲ್ಲೂ ನನ್ನ ದೊಡ್ಡಣ್ಣ ಆಗಷ್ಟೇ ಒಂದು ಲಕ್ಷ ಮೌಲ್ಯದ ಎತ್ತುಗಳನ್ನು ಹೂಡಿದ್ದ ಹೊಚ್ಚಹೊಸ ಟೈರ್‍ಗಾಡಿಯಿಂದ ಸಂತೆಗೆ ನಡೆಯುವವನಿದ್ದೆ
ಅದು ಹೇಗೋ ನನ್ನಮ್ಮನನ್ನು, ನನ್ನ ಮಾವನನ್ನು ಒಪ್ಪಿಸಿಯೇ ಬಿಟ್ಟೆ. ಮುಂಜಾನೆ 5 ಕ್ಕೆ ಗಾಡಿ ಹೂಡಿದೆವು ಅಣ್ಣ ಎತ್ತನ್ನು ಚಬುಕಿಸುವ ರೀತಿಯನ್ನು ಬಿಟ್ಟ ಕಣ್ಣಿನಿಂದ ನೋಡುತ್ತಿದ್ದೆ, ಅರ್ಧ ತೆರೆದ ಕಣ್ಣುಗಳಲ್ಲಿ ನಿದ್ರೆಯ ತುಂಬಿದ ನನ್ನನ್ನು ಮಾವ, ಲೇ| ಸುಮ್ಮನೆ ಮಲ್ಗಾದ್ ಬುಟ್ಟು, ಬಿಸಿಲುಬಾಳೇಹಣ್ಣು
ತಿನ್ನಾಕೆ ಬರೀಯಲ್ಲೋ ! ಒಳ್ಳೆ ಹುಡುಗ ಎಂದು ಪ್ರೀತಿಯಿಂದ ಗದರಿಸಿದರು.
ಬಿಸಿಲುಬಾಳೇಹಣ್ಣು
ಹೀಗೊಂದು ಉಪಮೇಯವನ್ನು ಗ್ರಾಮ್ಯ ಭಾಷೆಯಲ್ಲಿ – ಬಿಸಿಲಲಿ ಬಸವಳಿದವರ ವಣೀಶಲು ಬಳಸುತ್ತಾರೆ. ಸುಮಾರು ಆರು ಮೈಲಿಯ ಪ್ರಯಾಣ ಎತ್ತುಗಳ ಕೊರಳ ಗೆಜ್ಜೆ ನಾದದೊಂದಿಗೆ ಸುಶ್ರಾವ್ಯವಾಗಿ ಆರಂಭವಾಯಿತು. ಬೆಳಗಿನ ಚಳಿಯ ಶೀತಕ್ಕೆ ಎಳೆಯವನಾದ ನಾ ನಡುಗಿದ್ದ ಕಂಡು, ಮಾವ ತನ್ನ ತಲೆಗೆ ಸುತ್ತಿದ್ದ ವಲ್ಲಿಯನ್ನು ತೆಗೆದು ನನಗೆ ಮುಚ್ಚಿ ಮಲ್ಗೊ, ಎಬ್ರುಸ್ತೀನಿ ಸಂತೆ ಬಂದಾಗ. ಅಂದಿದ್ದೇ ತಡ ರೆಪ್ಪೆಗಳು ದೃಷ್ಠಿಯ ಕವಾಟವನ್ನು ಮುಚ್ಚಿಯೇ ಬಿಟ್ಟವು.
ಸಂತೆ ತಲುಪಿದ್ದರೂ ನಾನು ಮಲಗೇ ಇದ್ದೆ. ಮಾವ ನನ್ನ ಎಬ್ಸಿ ನೋಡೋ ಸಂತೆಗೆ ಬಂದಿದಿವಿ ಎಂದು ಎಚ್ಚರಿಸಿದರು. ನಾನೋ ಹಲವಾರು ದಿನ ಸಂತೆಯಲ್ಲಿ ಅಡ್ಡಾಡಿದ್ದರೂ ಬೆಳಗಿನ 6 ರ ಈ ಸಂತೆಯನ್ನು ಕಂಡೇ ಇರಲಿಲ್ಲ ಹಲವಾರು ಊರಿನ ಎಲ್ಲಾ ವಯೋಮಾನದ ನೂರಾರು ಜನರು ಹತ್ತಾರು ಕೆಲಸದಲ್ಲಿ ನಿರತವಾಗಿದ್ದರು. ನಮ್ಮ ಗಾಡಿ ನಿಂತಿದ್ದು ದನಗಳ ಆಸರದ ಪಕ್ಕದಲ್ಲಿಯೇ. ಸುತ್ತ ಕಣ್ಣು ಹಾಯಿಸಿದಷ್ಟೂ ಎತ್ತುಗಳ ಕೊಂಬು ನೀಲಿ ಆಗಸವನ್ನು ಚುಂಬಿಸುತ್ತಿದ್ದಂತೆ ಕಾಣುತಿತ್ತು. ಬೆಳಗಿನ ರಾಸುಗಳ ವ್ಯಾಪಾರ ಬಲು ಜೋರು ಸುಮಾರು 4 ಹಲ್ಲಾದ ಜೋಡಿಗೆ ಬೆಲೆ ಕಟ್ಟುತ್ತಿದ್ದೂ ದೊಡ್ಡ ಮೊತ್ತವೇ. ಅವುಗಳನ್ನು ಕೊಂಡುಕೊಳ್ಳಲು ಆಗದೆ ಬಿಡಲು ಆಗದೆ ಅತ್ತಿಂದಿತ್ತ ಬೆಲೆ ಎಳೆದಾಡುವುದು ಮಾಮೂಲಿಯ ನೋಟ ಅವರು ವ್ಯವರಿಸುವ ರೀತಿಯೇ ರಹಸ್ಯವಾದುದು.ವಲ್ಲಿಯ ಮರೆಯಲ್ಲಿಯೇ ಕೈಬೆರಳುಗಳ ಮೂಲಕ ಇಂತಿಷ್ಟು ಸಾವಿರಗಳು ಎಂದು ಮಾತನಾಡಿಕೊಳ್ಳುತ್ತಿದ್ದರು ಸುತ್ತಲು ನೆರೆದಿದ್ದವರಿಗೆ ಬೆಲೆಯೇ ತಿಳಿಯುತ್ತಿರಲಿಲ್ಲ. ಬರೀ ಎತ್ತುಗಳಷ್ಟೇ ಅಲ್ಲ ಸಣ್ಣ ಕರುಗಳು ಬಳ್ಳಾರಿಯಿಂದ ಲಾರಿಯಲ್ಲಿ ಇಳಿಯುವ ಡೆಕ್ಕನಿ ತಳಿಯ ಕುರಿ ಹಾಗೂ ಟಗರುಗಳು ಎಚ್‍ಎಫ್, ಜೆವೈ ಹಸುಗಳು, ಕರ್ರನೆ ಮೈಯಿಯ ಮಜಬೂತದ ಕೊಂಬುಗಳ ಎಮ್ಮೆಗಳು, ಮಣಕಗಳು ಹಾಗೂ ಆಡು- ಹೋತಗಳ ಹಿಂಡಿಗೆ ಹಿಂಡೇ ತಮಗಾಗಿ ಮೀಸಲಿಟ್ಟ ಸ್ಥಳದಲ್ಲಿ ನೇಋಎದಿದ್ದವು.
ಇವು ರಾಸುಗಳ ನೋಟವಾದರೆ, ಇನ್ನೊಂದೆಡೆ ಹತ್ತಾರು ಶೆಡ್ಡುಗಳ ಕೆಳಗೆ ರಾಗಿ, ಜೋಳ, ಟಕ್ಕಿ ಹಾಗೂ ಇತರೆ ಧವಸ –ಧಾನ್ಯಗಳ ರಾಶಿಯಂತೂ ಆಸಂತೆಯ ವ್ಯಾಪಾರದ ಜೋರನ್ನು ಮನದಟ್ಟು ಮಾಡಿಸುವಂತಿತ್ತು. ತರಕಾರಿ, ಕಡ್ಲೆಪುರಿ, ಬೆಲ್ಲದ ಆಸರ, ಎಲೆಯ ಆಸರ, ತರಹೇವಾರಿ ಸೊಪ್ಪುಗಳ ಅಂಗಡಿಗಳೇ ಸುಮಾರು ಎರಡ್ಮೂರೆ ಕರೆಯಷ್ಟು ಜಾಗದಲ್ಲಿ ಹರಡಿದ್ದವು.
ಮತ್ತೊಂದು ಬದಿಯಲ್ಲಿ ಬಟ್ಟೆ ಹಾಗೂ ವ್ಯವಸಾಯ ಉಪಕರಣಗಳ ಮಾರಟ ನಿರಂತರ ಸಂಜೆ ಸಂತೆ ಬರಾಖಾಸ್ತುಗೊಳ್ಳುವವರೆಗೂ ಒಂದೇ ತೆರನಾದ್ದಾಗಿರುತ್ತದೆ. ಕುಂಟೆ, ಹಲುಬೆ, ಬಾರುಕೋಲು, ಮಚ್ಚು ಸೌದೆ ಕಡಿಯುವಂತದು, ಹೊಲ ಕುಯ್ಯಲು ಸಣ್ಣದಾದ ಕುಡುಗೋಲುಗಳು ಇತರೆ ಸಲಕರಣೆಗಳು ಒಂದೆಡೆಯಾದರೆ, ಪಶುಗಳನ್ನು ಪಳಗಿಸಲು ಉಪಯೋಗಿಸುವ ಮೂಗುದಾರ, ನೈಲಾನ್ ಹಗ್ಗ, ಜೋಕಾರಿ ಕೋಳಿ, ಕೂಂಸಲು, ಇತ್ತೀಚೆಗೆ ಪ್ಲಾಸ್ಟಿಕ್ ಹಗ್ಗಗಳು ಸದಾ ಬೇಡಿಕೆಯಲ್ಲಿರುತ್ತವೆ.
ನನಗೆ ಬಲು ಇಷ್ಟವಾದ್ದು ಬೆಣ್ಣೆಯ ವ್ಯಾಪಾರ ಪುರಾತನ ಕಾಲದ ತೂಕ ಮಾಪನವಾದ ಸೇರಿನ ಕಲ್ಲನ್ನು ಒಂದು ಕೆ.ಜಿ. ಬೊಟ್ಟಿನ ಸಮನಾದ ರೂಪದಲ್ಲಿ ಬಳಸುವುದು ಇನ್ನೂ ಜೀವಂತವಾಗಿದೆ. ಹಳ್ಳಿಯಲ್ಲಿ ಮೇಯ್ದು ಕೊಬ್ಬಾಗಿ ಬೆಳೆದಿರುವ ಎಮ್ಮೆಯ ಹಾಲಿನಲ್ಲಿ ಕಡೆದ ಬೆಣ್ಣೆ ಒಂದು ಸೇರಿಗೆ 100 ರಿಂದ 110 ರೂಗಳಷ್ಟು ಕೆಲವೊಮ್ಮೆ ಏರುವುದೂ ಉಂಟು.
ಸಂತೆಗೆ ಒಳಬರಲು ಹೊರಹೋಗಲು ಇರುವುದು ಎರಡು ದಾರಿಗಳು ಮಾತ್ರ. ಇಬ್ಬದಿಯಲ್ಲೂ ನಡೆಯುವ ನಾಟಿಕೋಳಿ ವ್ಯಾಪಾರವಂತೂ ನೋಡಲು ರಂಗುರಂಗು. ಸರಿಯಾಗಿ ತೂಕ ಬರುವ ನಾಟಿ ಹುಂಜದ ಜೋಡಿಯನ್ನು 400-500 ರೂಗಳು ಕೇಳಿದರೂ, ರೈತರು ತಮ್ಮ ಬಿಗಿ ಸಡಿಲಿಸುತ್ತಿರಲಿಲ್ಲ. ಅಷ್ಟು ವ್ಯವಹಾರ ಕುಶಲರು ತಮಗೆ ಗೀಟುವ ಬೆಲೆಯನ್ನೇ ಶತಾಯಗತಾಯ ಪಡೆದು ಕಡೆಗೂ ಅವನಿಂದ 50-100 ರೂ ಹೆಚ್ಚಿಗೆ ಆದ್ರೂ ಏರಿಸಿ ಮಾರುತ್ತಾರೆ.
ಇಷ್ಟೆಲ್ಲಾ ಕಲಾಪಗಳ ನಡುವೆ ತಿಂದ ಬಿಸಿಬಿಸಿಯಾದ ಇಡ್ಲಿ ವಡೆಯನ್ನು ಮರೆತರೆ ನಾ ಕಂಡ ಸಂತೆ
ಅಪರಿಪೂರ್ಣವಾಗಿಯೇ ಉಳಿಯುತ್ತದೆ. ಬೇಸಿಗೆಯ ಧಗೆಯಿದ್ದರೂ ಮೋಡ ಕವಿದ ವಾತಾವರಣವಿದ್ದು ಸೂರ್ಯ ಮಂಕಾಗಿದ್ದ. ನಮ್ಮ ಟೈರು ಗಾಡಿಯು ಊರಿನ ದಾರಿ ಹಿಡಿದು ಸಾಗಿಯೇಬಿಟ್ಟಿತು ಸಂತೆಯ ಸವಿನೆನಪುಗಳಿಂದ ಭಾರದಿಂದ ಜೀಕುತ್ತಿದ್ದ ನನ್ನ ಖುಷಿಯು ಮನೆಗೆ ತಲುಪಿದ ಕೂಡಲೇ ಗಣಿತ ಪಾಠಿ ಪುಸ್ತಕದೆಡೆಗೆ ನಾಗಾಲೋಟದಿಂದ ಓಡಿದೆ….
-ಮಂಜುನಾಥ ವಿ.
Superb
A very nice narration, when I was reading felt as if I was in one# sante.