ಕಾವ್ಯಧಾರೆ

ಪಂಜು ಕಾವ್ಯಧಾರೆ

ಚಿತೆಯಾಗದ ಮಾತುಗಳು

ಬನ್ನಿ ಮಲಗೋಣ ಯಾರೂ ಇಲ್ಲ ನಮಗೀಗ
ಮಣ್ಣಿನ ಮಾತು ಮನಸಲಿ ಕೂತಿದೆ
ಮಸಣದಲಿ.. ನಾವು ಮಾಡಿದ ಕೆಲಸಗಳ
ಮಾತು-ಕತೆ ಶುರುವಾಗಿದೆ
ಬೆಂಕಿ ಇಡುವ ಮುನ್ನ ನನ್ನ ಸೋಂಕಿನ
ಇತಿಹಾಸವನ್ನೆಲ್ಲ ಎಲ್ಲರೂ
ಊರು ಹೊಡೆಯುತ್ತಿದ್ದಾರೆ.

ವಾಸನೆ ಹೆಚ್ಚಾಗಿ ಮೂಗು ಮುಚ್ಚುತ್ತಿದ್ದಾರೆ
ಮುಟ್ಟಲು ಸಮಾಜವನ್ನೆ
ಧಿಕ್ಕರಿಸುತ್ತಿದ್ದಾರೆ
ಅತ್ತು ಕರೆಯಲು ಸಮಯವಿಲ್ಲ
ಚಿತಾಗಾರದ ಬಾಗಿಲಲ್ಲಿ
ಯತಾಸ್ಥಿತಿಯಲ್ಲಿ ಕ್ಯೂ ಹೆಚ್ಚೆ ಆಗಿದೆ
ಸತ್ತವರು ನಾವೆ
ಅವರ ಹೆಸರಲ್ಲಿ ಅವರ ಉಸಿರಲ್ಲಿ.

ಅಂಬೆಗಾಲಿಟ್ಟು ನಡೆಯಲು
ಪ್ರೋತ್ಸಾಹಿಸಿದ ನೆಲದವ್ವ
ನವ ನವ ಜಾತಿಯ ಸೋಂಕನ್ನು ಮಡಿಲು
ತುಂಬಿಸಿಕೊಳ್ಳುತ್ತಿದ್ದಾಳೆ
ಕರುಳ ಬೇನೆಯು ಇಲ್ಲ
ತೀವ್ರವಾದ ಎದೆಹಾಲಿನ ಕೊರತೆಯು ಇಲ್ಲ
ಬರಿ ಬರಡಾಗಿರುವ
ಗರ್ಭದಲಿ ಸೃಷ್ಠಿಯ ಋತುಸ್ರಾವ
ಸಂಕಟಗಳ ವ್ಯರ್ಥ ಹರಿವು.

ನಿನ್ನ ನನ್ನ ಭೇಟಿಗೆ ಸಾವೆ ಸಾಕ್ಷಿ
ಸಂಭ್ರಮದಲ್ಲಿಯಲ್ಲ, ಸಂತೆಯಲ್ಲೂ ಅಲ್ಲ
ಸಾಂಕ್ರಾಮಿಕ ಹಬ್ಬದ ದಿಬ್ಬಣದಲ್ಲಿ
ನಮ್ಮವರು ತಮ್ಮವರು ಅಲ್ಲಿ ಎಲ್ಲರೂ ಇಲ್ಲ
ಹೂಳುವಲ್ಲಿ ಸುಡುವಲ್ಲಿ
ಸಾಮಾಜಿಕ ಅಂತರವಿಲ್ಲ
ಒಂದೆ ಕಿಟ್ ನಲ್ಲಿ ಕೆಟ್ಟು ನಾರುತ್ತಿದ್ದೇವೆ
ಒಂದೆ ಜಾಗದಲಿ ಸುಟ್ಟು ಬೂದಿಯಾಗುತ್ತಿದ್ದೇವೆ
ಒಂದೆ ಮಣ್ಣಲ್ಲಿ ಮಣ್ಣಾಗುತ್ತಿದ್ದೇವೆ
ಖುಷಿ ಇದೆ
ಏಕತೆಯ ಸಂಕೇತವಾಗಿದ್ದಕ್ಕೆ.

ಉಸಿರನ್ನು ಹುಡುಕಲು ಹೋಗಿ
ಎಡವಿ ಬಿದ್ದದ್ದಾಯ್ತು
ಉಸಿರನ್ನು ಕೊಂಡುಕೊಳ್ಳುವ
ಕಾಲ ಬಂದಾಯ್ತು
ಮೈಗೆ ಹೊಲಿಸಿಕೊಳ್ಳುವ ಹತ್ತಿಬಟ್ಟೆಯು
ಕಾಸಗೀಕರಣದ ದೇಹಕ್ಕೆ ಮಾತ್ರ
ಒಗ್ಗಿಕೊಂಡಿದೆ
ತಗ್ಗಿ ಬಗ್ಗಿ ನಡೆಯುವವರಿಗಿದು ಕಾಲವಲ್ಲ
ಹಿಗ್ಗಿ ಹಾರಾಡುವ ಹಾಗೂ ಇಲ್ಲ
ಖಾಲಿ ಖಾಲಿ ರಸ್ತೆಯಲಿ
ನುಗ್ಗಿ ಬರುವ ರೋಗಗಳ ಟ್ರಾಫಿಕ್ಕು
ಹೆಚ್ಚಾಗಿದೆ
ಸಿಗ್ನಲ್ ದೀಪಗಳ ಸಾಲಿನಲ್ಲಿ
ಸಾವೊಂದು ಅಡ್ಡ ಕೈ ಹಾಕಿ ತಡೆದುನಿಲ್ಲಿಸುತ್ತಿದೆ.

ಮಾತು ಸಾಕಿನ್ನು ಮಣ್ಣಾಗೋಣ
ಚೂರು ಶ್ರೀಮಂತರಾಗಿದ್ದರೆ
ಬೂದಿಯಾಗೋಣ
ಬೀದಿ ಹೆಣವಾಗುವ ಭಾಗ್ಯ ಬಡವರಿಗೆ
ತಪ್ಪಿದ್ದಲ್ಲ
ಒಪ್ಪಿಕೊಳ್ಳದ ಅಪ್ಪಿಕೊಳ್ಳದ
ಸಾವಿದು ನಮ್ಮದು
ನಾವಿರುವ ಜಾಗದಲ್ಲಿ ಶ್ರೀಮಂತರು ನಾವು ಮಾತ್ರ
ಬಂದವರೆಲ್ಲ ಬರಿ ಕಣ್ಣೀರಲ್ಲೇ
ಮುಳುಗೇಳುತ್ತಿದ್ದಾರೆ
ನಾವು ನೆಮ್ಮದಿಯ ನಿದ್ದೆಗೆ ಜಾರಿದ್ದೇವೆ..

-ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ

ಧರೆಯ ಋಣದಲ್ಲಿ ಮನುಕುಲ

ಸಕಲ ಜೀವಿಗೆ ಧರೆಯಾದಳು ತಾಯಿ
ಇಡೀ ಸೃಷ್ಟಿಯೇ ಇವಳ ಮಾಯೆ
ಬದುಕಲು ಪ್ರಾಣವಾಯು ಕೊಟ್ಟೆ
ಉದರಕ್ಕೆ ಅನ್ನಾಮೃತ ಕೊಟ್ಟೆ
ಧರೆಯ ಮಾತೆಗೆ ನೀನೇನು ಕೊಟ್ಟೆ,
ಅವಳ ಋಣ ತೀರಿಸದೆ ನೀ ಕೆಟ್ಟೆ

ಜಲದ ದಾಹ ನೀಗಿಸಲು ಮಳೆರಾಯನ ಕರೆದೆ
ಕೆರೆಕಟ್ಟೆ, ಹೊಳೆ, ನದಿ, ತುಂಬಿ ಹರಿಸಿದೆ
ಉಸಿರಾಡುವ ಜೀವಿಗೆ ಪ್ರಾಣ ರಕ್ಷಣೆ ನೀಡಿದೆ
ಸ್ವಾತಂತ್ರ್ಯದ ಬದುಕು ಕಟ್ಟಿಕೊಳ್ಳಲು ಕಲಿಸಿದೆ
ನೀನೇನು ಕಲಿತೆ, ಅವಳ ಋಣ ತೀರಿಸದೆ ನೀ ಕೆಟ್ಟೆ

ನಿನ್ನ ಸ್ವರ್ಗದ ಮಡಿಲಿನಲ್ಲಿ ಎಲ್ಲರೂ ಒಂದೇ
ಜಾತಿಯ ಸ್ವಾರ್ಥ , ಲಾಭದ ಲೋಭ ತುಂಬಿರದ ಸುಧೆ
ನಿನ್ನ ಸೃಷ್ಟಿಯ ಕಲೆಗೆ ಕಟ್ಟಲಾಗದು ಬೆಲೆ
ಧರೆಯ ಗರ್ಭದ ಕೂಸೇ, ಮರೆತೆಯ ತಾಯಿನಾಡಿನ ಆಸೆ
ಭೂ ತಾಯಿಯ ಋಣ ತೀರಿಸುವದೇ ಮರೆತೆ

ಸ್ವಾರ್ಥದ ಬದುಕಿನಲ್ಲಿ ನಿಸ್ವಾರ್ಥದ ಸ್ವರ್ಗವ ಮರೆತು
ಸಾಗಿದೆ ನಿನ್ನ ಅಹಂಕಾರದ ಬದುಕು
ನಿನ್ನ ಸಾಧನೆ ನನ್ನಿಂದಲೇ ಕಲಿತು,
ಎಲ್ಲರಿಗೆ ಹೇಳುವೆ ಜಂಬದ ಮಾತು,
ನನ್ನ ಜೀವನ ನೋಡಿ, ನೀ ಏನು? ಕಲಿತೆ,
ಆಗಾಗ ನಾ ತೋರಿಸುವೆ ನಿನಗೆ ರುದ್ರತಾಂಡವ ನಡತೆ ,
ಋಣ ತೀರಿಸದೇ, ನೀ ಜೀವನದಲ್ಲಿ ಸೋತೆ…
ನೀ ಜೀವನದಲ್ಲಿ ಸೋತೆ

-ತಿಮ್ಮಣ್ಣ ಭೇರ್ಗಿ

ಅಮೃತ ಹನಿ

ಎಲ್ಲಿಂದೆಲ್ಲಿಗೋದರು,
ನಿನ್ನ ಚೆಲುವಿಗಿಲ್ಲ ಸಾಟಿ,
ನಂದನವನ ನೀನು,
ಅದೆಷ್ಟು ಚೆಂದ,
ನೀ ನಗುವ ನಲಿವಿನ ಧಾಟಿ,
ಎಲ್ಲಾ ನೀನೆ, ಎಲ್ಲಾ ನಿಂದೆ,
ಜೀವರಾಶಿಗಳಿಗೆ,
ನಿನ್ನೊಡಲಿನ ಅಮೃತ ಹನಿ ಕೋಟಿ ಕೋಟಿ….

ನೀನಿಲ್ಲದ, ನೀನಲ್ಲದ
ಬದುಕು!! ಬದುಕಲ್ಲ,
ನೀನಿಲ್ಲದೆ, ನೀನಲ್ಲದೆ,
ಬದುಕಿಲ್ಲ!!!
ಖಗ ಮೃಗಗಳಿಗೆಲ್ಲ ನೀನೆ ಸೂರು,
ವಿರಾಮವೇ ಇಲ್ಲವಲ್ಲ ನಿನಗೊಂದು ಚೂರು….

ಅನುಗಾಲವೂ
ನಿನ್ನದೆಷ್ಟು ಅಲಂಕಾರ,
ಅನುದಿನವೂ, ಅನುಕ್ಷಣವು,
ನಿನ್ನ ಕಾಯಕ, ಆದರೂ!!
ನಿನಗಿಲ್ಲವಲ್ಲ ಒಂದಿಷ್ಟು ಅಹಂಕಾರ….

ಅಹಂಕಾರದ ಅಲಂಕಾರದಲ್ಲಿ,
ನಾನು ನನ್ನದೆನ್ನುವ,
ಮನುಕುಲಕ್ಕೆ ನೀನೇ ಒಡಲು,
ಕರುಣಾಮಯಿ ನೀನು,
ತ್ಯಾಗದ ಕಡಲು…..

ನೀನೊಂದು
ಕಲ್ಪನೆಗೆ ಸಿಗದಷ್ಟು ಗಮ್ಯ,
ನಿನ್ನ ನಿರುಪಮ ನೆನಪು ಅನನ್ಯ,
ಸದಾ ನಿನ್ನ ಕೃಪೆಯಲ್ಲಿ,
ನಾವು ಧನ್ಯ, ಧನ್ಯ, ಧನ್ಯ……

-ಕ. ಲ. ರಘು.

ಧಮ್ಮಗಾಥೆ

ಕೊತಕೊತನೆ ಕುದಿವ ಕೊತ್ತಂಬರಿಗೂ
ಮತಗಟ್ಟೆಯಲಿ ನಡುರಾತ್ರಿ
ಮತಿಯ ಮದವೇರಿ ಧಮ್ಮದ
ಬತ್ತಳಿಕೆಯೊಳಗೆ ಕಂಬನಿ ಜಾರಿದೆ

ಉಂಡು ತೇಗುವ ಬಾಳೆಯಡಿ
ಅಡಿಕೆಪಟ್ಟೆ ಅವುಚಿದ ಲಿಂಗಧಾರಿಯ
ಮಡಿಕೆಯೊಳು ” ಗೋಮಾತ ನಮ್ಮಾತ”
ಕಡೆನುಡಿಯು ಅವಳ ಉಸಿರು ಹಿಂಡಿದೆ

ಗುಡಿ ದುಡಿಮೆಯಲಿ ಉದರ ಹೊರೆವಾತ
ಬಿಡಿಗಾಸಸೆವ ಒಡ್ಡನ ಕಿಸೆಯ ಬೆವರಹನಿಯ
ಮಡಿನಾಮದಿ ತಿದ್ದಿ ತೀಡುವ ಗಂಜಲೇ
ದುಡಿಬಡಿವ ತಮಟೆಯವನ ಕೊಳೆ ತೊಳೆದಿದೆ

ಸೆರೆಮನೆಯಲಿ ಹಾಡಿದ ಮೋಹನರಾಗವು
ನೀರಸ ಕಾಡಿನ ಹಾದಿಯೊಳು ದನಿಸಿ
ತೀರಿದ ತಂದೆಗೆ ಕುರುಳಾಯಿತೀ ಧರೆಯಲಿ
ಅರಳಿತು ನಗುವಾಗಿ ದನದ ಕೊಟ್ಟಗೆಯಲಿ

-ಮಸಿಯಣ್ಣ ಆರನಕಟ್ಟೆ

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published.