ಇದೊಂದು ಸಂಕಷ್ಟದ ಕಾಲ. ಸಾಲು ಸಾಲು ಸೋಲುಗಳು ಕಣ್ಣೆದುರೆ ನಿಂತಿದೆ. ಎದ್ದೇಳಬೇಕು ಅಂದಾಗಲೆಲ್ಲ ಈ ಕಣ್ಣಿಗೆ ಕಾಣದ ಸೂಕ್ಷ್ಮಾಣು ಕಣ ಮತ್ತೆ ಮತ್ತೆ ಬದುಕನ್ನು ಸೋಲಿಸುತ್ತಿದೆ. ದುಡಿವ ಕೈಗಳಿಗೆ ಯಾರೋ ಬೇಡಿ ತೊಡಿಸಿ ಕುಕ್ಕರುಗಾಲಿನಲ್ಲಿ ಕೂರಿಸಿದಂತೆ. ಏನೀದು ಯಾಕೆ ಹೀಗಾಗುತ್ತಿದೆ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಮನಸ್ಸನ್ನು ದಾಳಿ ಮಾಡಿ ಬಿಡುತ್ತದೆ. ವಿಪರ್ಯಾಸವೆಂದರೆ ನಾವು ಎಲ್ಲದಕ್ಕೂ ಒಂದೇ ಕಾರಣವನ್ನು ಕೊಟ್ಟು ಅದನ್ನೇ ದೂಷಿಸುತ್ತೇವೆ. ಇವತ್ತು ಹೀಗೆ ಆಗಲು ಆ ಒಂದು ರೋಗವೇ ಕಾರಣ ಅನ್ನುವ ಮಾತು ಎಲ್ಲರಲ್ಲೂ ಇದೆ. ರೋಗ ಸರಿ ಇದನ್ನು ಇಷ್ಟು ಗಂಭೀರವಾಗಲು ಬಿಟ್ಟವರು ಯಾರು.? ನಾವೇ ತಾನೇ.? ನಮ್ಮಲ್ಲಿರುವ ನಿರ್ಲಕ್ಷ್ಯ ನಮ್ಮನ್ನು ನಮ್ಮ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ ಅನ್ನುವ ಕಿಂಚಿತ್ತು ಯೋಚನೆ ನಮಗಿರುವುದಿಲ್ಲ. ನಮ್ಮ ಹೋರಾಟ ಹಾರಟಗಳು ಬರೀ ಇನ್ನೊಬ್ಬರನ್ನೂ ದೂಷಿಸುವುದರಲ್ಲೆ ಸಾಗುತ್ತದೆ. ಇವತ್ತು ಭಯ ಅನ್ನುವ ಮಾಯಾಜಾಲದಲ್ಲಿ ನಾವು ಬಂಧಿಯಾಗಿದ್ದೇವೆ. ಕೆಟ್ಟ ಮೇಲೆ ಬುದ್ಧಿಯನ್ನು ನೆಟ್ಟಗೆ ಮಾಡಿಕೊಳ್ಳುತ್ತೇವೆ. ಅದು ಕೂಡ ಅಲ್ಪಕಾಲ ಮಾತ್ರ ಉಳಿಯುತ್ತದೆ.
ಮತ್ತೆ ಯಥಾ ಪ್ರಕಾರ ಅದೇ ಜೀವನ ನಮ್ಮದು. ಇಲ್ಲಿ ಸೋತಾಗ ಬದುಕು ಲಯ ತಪ್ಪಿದಾಗ ಮಾತ್ರ ಮನಸ್ಸು ಯೋಚಿಸಲು ಶುರು ಮಾಡುತ್ತದೆ. ಏನಾಗಿದೆ ಏನಾಗುತ್ತಿದೆ ಅನ್ನುವ ಯೋಚನೆಗಳು ಬಂದಾಗ ಮನಸ್ಸು ಜಾಗೃತವಾಗುತ್ತದೆ. ಜೊತೆಯಿದ್ದವರು ದೂರವಾದಾಗ ಮನಸ್ಸು ಭಯದಿಂದ ಮುನ್ನೆಚ್ಚರಿಕೆ ನೀಡುತ್ತದೆ. ಬದುಕಿನ ಬಂಡಿ ಮುಂದೆ ಚಲಿಸುತ್ತಿಲ್ಲ ಅಂತ ಅರಿವಾದಾಗ ಕಷ್ಟಗಳು ಕಣ್ಣಮುಂದೆ ಯುದ್ಧಕ್ಕೆ ನಿಂತಿರುವಂತೆ ಭಾಸವಾಗುತ್ತದೆ ಈ ಭಯದ ವಾತಾವರಣದಲ್ಲಿ ಬದುಕಲು ಸಾಧ್ಯವೇ?ಅನ್ನುವ ಯೋಚನೆಯೊಂದು ಹಾಗೇ ಹಾದು ಹೋಗುತ್ತದೆ. ಅದಷ್ಟಕ್ಕೆ ಮುಗಿಯಲ್ಲ. ಮತ್ತೆ ಅರ್ಧಕ್ಕೆ ನಿಂತು ಹೋದ ಬದುಕಿನ ಭಯ. ಭವಿಷ್ಯದ ಚಿಂತೆ. ಮಕ್ಕಳ ಓದು ಶಾಲೆ. ಇದೆಲ್ಲದಕ್ಕೂ ಕಾಣದ ಪರಿಹಾರ. ಕೆಲಸವಿಲ್ಲ ಕಾಸಿಲ್ಲ. ಬದುಕು ಬರಡಾದಂತೆ ಸಾವು ಒಂದೇ ಪರಿಹಾರವೆನೋ ಅನ್ನುವ ಯೋಚನೆಯೂ ಮನಸ್ಸನ್ನು ಕಾಡಲು ಶುರು ಮಾಡಿ ಬಿಡುತ್ತದೆ. ಮತ್ತೆ ಮನಸ್ಸು ಇನ್ಯಾರನ್ನೋ ದೂಷಿಸುತ್ತ ಕುಳಿತಿರುತ್ತದೆ.
ಯಾಕೋ ಈ ವರ್ಷ ಸರಿಯಿಲ್ಲ ಅಂತ ನಾವು ವರ್ಷ ದಿನಗಳನ್ನು ದೂರುತ್ತೇವೆ. ನಮಗೆ ಗೊತ್ತಿದೆ ಇಲ್ಲಿ ಯಾವುದು ಶಾಶ್ವತವಲ್ಲ ಎಂದು.ಹುಟ್ಟಿದ ಮನುಷ್ಯ ಸಾಯಲೇ ಬೇಕು. ಸಾವಿಗೊಂದು ಕಾರಣ ಬೇಕು ಅಷ್ಟೇ. ಕೆಲವರ ಆಯುಷ್ಯದ ಪ್ರಮಾಣ ಅಲ್ಪವಾಗಿರುತ್ತದೆ. ಧೀರ್ಘಾಯುಷ್ಯ ಎಲ್ಲರಿಗೂ ಇರುವುದಿಲ್ಲ. ಇಲ್ಲಿ ಒಂದು ದಿನ ಹಿಂದೆ ಮುಂದೆ ಇರಬಹುದಷ್ಟೆ. ಎಲ್ಲರೂ ಒಂದಲ್ಲ ಒಂದು ದಿನ ಈ ಬದುಕಿಗೆ ವಿದಾಯ ಹೇಳಲೇಬೇಕು. ಆದರೂ ಆಪ್ತರ ಸಾವು ಆಕಸ್ಮಿಕವಾಗಿ ಆದಾಗ ಅದನ್ನು ಒಪ್ಪಿಕೊಳ್ಳಲು ಈ ಮನಸ್ಸು ತಯಾರಿರುವುದಿಲ್ಲ. ಈ ಸಂಕಷ್ಟದ ಸಮಯದಲ್ಲಿ ಇಂತಹ ಸಾವುಗಳನ್ನು ಅರಗಿಸಿಕೊಳ್ಳಲು ನಾವು ಸಿದ್ಧರಿರುವುದಿಲ್ಲ.
ಇಲ್ಲಿ ಎಲ್ಲವನ್ನು ಅನುಭವಿಸಲೇಬೇಕು. ದುಃಖದ ಸಮಯ ಒಮ್ಮೆ ಇದ್ದರೆ ಅದರ ಬೆನ್ನ ಹಿಂದೆ ಸುಖವೂ ಕಾಯುತ್ತಿರುತ್ತದೆ. ಅದಕ್ಕಾಗಿ ನಾವು ಸಮಯವನ್ನು ದೂರುತ್ತ ಕುಳಿತರೆ ಬದುಕು ಭಾರವಾಗುತ್ತದೆ. ನೋವನ್ನು ಸೋಲಿಸಿ ನಲಿವನ್ನು ಸ್ವಾಗತಿಸಲು ಮನಸ್ಸು ಧೃಡವಾಗಿರಬೇಕು ಅಷ್ಟೆ.
ಈ ಬದುಕು ಎಷ್ಟು ವಿಚಿತ್ರ ಇಲ್ಲಿ ನಾವಂದುಕೊಂಡಂತೆ ಏನೇನೂ ಇಲ್ಲ. ಚಿತ್ರ ವಿಚಿತ್ರಗಳ ಸರಮಾಲೆ. ಈ ಬದುಕಿನ ಪಯಣ ನಾನಾ ತಿರುವಿನಲ್ಲಿ ಸಾಗುತ್ತದೆ. ಜೀವನ ಒಂದು ರಹಸ್ಯಗಳ ಸರಮಾಲೆ. ನಾಳೆಯ ಭವಿಷ್ಯವನ್ನು ಇಂದು ತಿಳಿಯಲಾಗದು. ಆದರೂ ನಾವು ಕಾಣದ ನಾಳೆಯ ಬಗ್ಗೆ ಭರವಸೆಯಿಂದ ಮಾತಾನಾಡುತ್ತೇವೆ. ಇದು ಜೀವನ ಪ್ರೀತಿ. ಈ ಬದುಕನ್ನು ಭರವಸೆಯಿಂದ ಬದುಕಲು ಕಲಿತಾಗ ಯಾವುದು ಕಷ್ಟವಲ್ಲ. ಬದುಕೆಂದರೆ ನಿರಂತರವಾದ ಪಯಣ. ಇಲ್ಲಿ ಎಲ್ಲವೂ ಮಿಶ್ರವಾಗಿರುತ್ತದೆ. ಜೀವನ ಅಂದ ಮೇಲೆ ಸಮಸ್ಯೆ ಸರ್ವೇಸಾಮಾನ್ಯ. ಯಂಡಮೂರಿಯವರ ಸಾಲುಗಳಲ್ಲಿ ಹೇಳಬೇಕೆಂದರೆ “ಸಮಸ್ಯೆ ಘರ್ಷಣೆಯನ್ನು ಉಂಟು ಮಾಡುತ್ತದೆ. ಘರ್ಷಣೆ ಆಲೋಚನೆಯನ್ನು ಹುಟ್ಟಿಸುತ್ತದೆ”.ಆ ಆಲೋಚನೆಯ ಅಂತರ್ಮಥನ ಆದಾಗ ಮನುಷ್ಯರಲ್ಲಿ ಬದಲಾವಣೆ ಬರುತ್ತದೆ. ಅವರ ಆಲೋಚನೆ ಕ್ರಮಬದ್ಧವಾದ ಮಾರ್ಗದಲ್ಲಿದ್ದರೆ ಮನುಷ್ಯರು ಉಳಿಯುತ್ತಾರೆ.ಇಲ್ಲದಿದ್ದರೆ ಪುಕ್ಕಲು ಆಗುತ್ತಾರೆ. ಆ ಪುಕ್ಕಲುತನ ಅವರನ್ನು ನಾಶ ಮಾಡುತ್ತದೆ. ಎಷ್ಟೊಂದು ಅರ್ಥಪೂರ್ಣವಾದ ಮಾತುಗಳು. ಈ ಬದುಕಲ್ಲಿ ಬರುವ ಕಷ್ಟಗಳನ್ನು ಎದುರಿಸಿ ಬದುಕಬೇಕು.ಆಗಲೇ ಎಲ್ಲವೂ ಸುಗಮವಾಗಿ ಸಾಗುತ್ತದೆ. ಕಷ್ಟ ಬಂದಾಗ ಕುಗ್ಗದೆ ಎದೆಕೊಟ್ಟು ಬದುಕುವ ಛಲವಿರಬೇಕು. ಆಗ ಬಂದ ಕಷ್ಟ ಕೂಡ ಭಯಪಟ್ಟು ಹಿಂದೆ ಸರಿಯುತ್ತದೆ. ಬದುಕಿಗೆ ಒಂದು ಧ್ಯೇಯ ಇರಬೇಕು.ಅದನ್ನು ಸಾಧಿಸುವ ಛಲ ನಮ್ಮಲ್ಲಿ ಇರಬೇಕು. “ಗುರಿ ಇಲ್ಲದ ಬದುಕು ಗರಿ ಇಲ್ಲದ ಹಕ್ಕಿಯಂತೆ” ಅದಕ್ಕೆ ಮೊದಲು ನಾವು ನಮ್ಮ ಗುರಿಯನ್ನು ಮುಟ್ಟಲು ಗರಿಗೆದರಿ ನಿಲ್ಲಬೇಕು.
ಪ್ರೀತಿಸುವ ಮನಸ್ಸು ಒಂದಿದ್ದರೆ ಸಾಕು ಯಾವುದು ಕಷ್ಟವಲ್ಲ. ನಾವು ನಮ್ಮನ್ನು ಪ್ರೀತಿಸಿದಾಗ ಮಾತ್ರ ಬದುಕು ನಮ್ಮನ್ನು ಆಲಂಗಿಸುತ್ತದೆ. ನೋವಲ್ಲಿ ನಗುವುದನ್ನು ಕಲಿತವನಿಗೆ ಎಲ್ಲವನ್ನು ಸಹಿಸುವ ಶಕ್ತಿಯೊಂದಿರುತ್ತದೆ. ಆ ಶಕ್ತಿಯೇ ಸಹನೆ. ಎಲ್ಲದಕ್ಕೂ ಆ ದೇವರನ್ನೂ ದೂರುತ್ತ ಕುಳಿತವನ್ನು ಬದುಕಲ್ಲಿ ಏನನ್ನೂ ಸಾಧಿಸಲಾರ. ಅವನು ನನಗೇನು ಕೊಟ್ಟಿಲ್ಲ ಅಂತ ಹಲುಬುತ್ತ ಇದ್ದರೇನು ಬಂತು. ಆ ದೇವರು ಎಲ್ಲವನ್ನು ಕೊಟ್ಟಿರುತ್ತಾನೆ. ಅದನ್ನು ನಾವು ಶ್ರದ್ಧೆಯಿಂದ ಹುಡುಕಬೇಕು. ಆಗಲೇ ಅದು ನಮ್ಮ ಕೈ ಸೇರುತ್ತದೆ. ಇಲ್ಲಿ ಕಷ್ಟಪಟ್ಟು ಪಡೆದದ್ದು ಕೊನೆವರೆಗೂ ನಮ್ಮ ಜೊತೆಯೇ ಇರುತ್ತದೆ. ಶ್ರಮವಿಲ್ಲದೆ ಬರಬೇಕು ಎಂದರೆ ಅದು ಶ್ರಮವಿಲ್ಲದೆಯೇ ಕರಗಿ ಹೋಗುತ್ತದೆ.
ಸಂಕಟ ಬಂದಾಗ ಮಾತ್ರ ದೇವರು ನೆನಪಾದರೆ ಸಾಕೇ.? ಎಲ್ಲದಕ್ಕೂ ಒಬ್ಬನನ್ನೇ ದೂಷಿಸುವುದು ಅದೆಷ್ಟು ಸರಿ. ಇಲ್ಲಿ ಏನೇ ನಡೆದರೂ ಅದಕ್ಕೆ ಇನ್ನೊಬ್ಬರನ್ನು ಹೊಣೆ ಮಾಡುತ್ತ ಕುಳಿತರೆ ಏನೂ ಲಾಭವಿದೆ. ಆಗುವುದೆಲ್ಲ ಆಗಲಿ ಅದೇನಾದರೂ ಎದುರಿಸಿ ನಿಲ್ಲುವ ಶಕ್ತಿಯೊಂದಿರಲಿ ಅಂತ ಅಂದುಕೊಂಡರು ಸಾಕು ಎಲ್ಲವೂ ಸಲೀಸಾಗಿ ಬಿಡುತ್ತದೆ. ಎಲ್ಲದಕ್ಕೂ ಒಂದು ತಾಳ್ಮೆ ಇರಬೇಕು. ಆ ತಾಳ್ಮೆ ನಮ್ಮನ್ನು ಇನ್ನಷ್ಟು ಬದುಕಿಸುತ್ತದೆ. ಕಷ್ಟಗಳು ನೋವುಗಳು ಕ್ಷಣಿಕ ಮಾತ್ರ. ಅದು ಕರಗಿದ ಮೇಲೆ ಎಲ್ಲವೂ ಸುಖಾಂತವಾಗುತ್ತದೆ. ಈ ವಿಶ್ವಾಸವೇ ಬದುಕನ್ನು ಗೆಲ್ಲಿಸುತ್ತದೆ. ಎತ್ತರಕ್ಕೆ ಕೊಂಡೊಯ್ದ ನಿಲ್ಲಿಸುತ್ತದೆ.
-ಪೂಜಾ ಗುಜರನ್ ಮಂಗಳೂರು.