ಪಂಜು ಕಾವ್ಯಧಾರೆ

ಬಡಿತದ ಭಾವ ಅಲೆಗಳು

ಎನ್ನೆದೆಯಾಳದಲ್ಲಿ ಜನ್ಮಿಸಿದ
ನೂರಾರು ಬಡಿತದ ಭಾವಗಳು
ಧರೆಯ ಮಡಿಲಲ್ಲಿ ಚಿಗುರಿದಂತೆ
ಹೊಸ ಹೊಸ ತುಡಿತದ ಕನಸುಗಳು
ಒಮ್ಮೊಮ್ಮೆ ಕುಸುಮವಾಗಿ ಅರಳಿ
ಮತ್ತೊಮ್ಮೆ ಕಮರಿದ ಕ್ಷಣಗಳು

ಒಮ್ಮೊಮ್ಮೆ ಯಾರನ್ನು ಹಂಬಲಿಸಿ
ಅವರಿಗಾಗಿ ನವಜೀವನ ಬಯಸಿ
ಒಲವಿನ ಚೆಲುವಿನ ಕನಸುಗಳು ಮೂಡಿಸಿ
ಮೌನ ನಲಿಯುತ್ತಾ ಹೂವಂತೆ ಅರಳಿದರೆ
ಮತ್ತೊಮ್ಮೆ ಮುಳ್ಳುಗಳಿಂದ ಹೃದಯಪರಚಿ
ಸುಮ್ಮನೆ ಕುಳಿತಂತಾಗುವುದು

ಅದು ಕುಂತಲ್ಲಿ ಚಿಂತಿಸುವುದು
ನನ್ನ ಭವ್ಯಭವಿಷ್ಯದ ಬಗ್ಗೆ
ಒಮ್ಮೊಮ್ಮೆ ಪರದಾಡುವುದು
ಪಾರಿವಾಹಕ ಸೆಳೆತದ ಬಗ್ಗೆ
ಮತ್ತೊಮ್ಮೆ ಉಗ್ರವಾಗದೆ ಅರಿವುದು
ಗೋಮುಖ ವ್ಯಾಘ್ರ ದ ಮಾನವರ ಬಗ್ಗೆ

ಒಮ್ಮೊಮ್ಮೆ ನನ್ನದೆಯ ಅರಗಿಳಿಯು
ಸುಮಧುರ ಅಕ್ಷರಗಳನ್ನು ಪೋಣಿಸಿ
ಮಾತಿನ ಮುತ್ತಿನ ಹೊಳೆ ಸುರಿಸಿದರೆ
ಮತ್ತೊಮ್ಮೆ ಮಾಗಿಯ ಕೋಗಿಲೆಯಂತೆ
ಮೂಕಭಾವವನ್ನು ಆವರಿಸಿಕೊಂಡು
ಅಕ್ಷರಗಳೋತ್ಪತ್ತಿಯನ್ನು ನಂದಿಸುವುದು

ಒಮ್ಮೊಮ್ಮೆ ಸೊಂಪಾಗಿಬೀಸಿ
ಹುಟ್ಟುಹಾಕುವುದು ಆಸೆಗಳ ಮನದೊಳಗೆ
ಆಶಾಗೋಪುರವನ್ನು ನಿರ್ಮಿಸಿ
ಹರುಷದಿ ಸೊಗಸಾಗಿ ಸಂತೈಸಿದರೆ
ಮತ್ತೊಮ್ಮೆ ಎಲ್ಲವ ಕೆಡವಿ
ಒಳಗೊಳಗೇ ಅತ್ತು ದುಃಖಿಸುವುದು

ಒಮ್ಮೊಮ್ಮೆ ಕುಸುಮದಂತೆ ಅರಳಿ
ಎಲ್ಲೆಡೆ ಸುಮಧುರ ಸೌರಭವ ತಾಸೂಸಿ
ಪ್ರಶಾಂತತೆಯನ್ನು ಹರಡುತ್ತಾ ತನ್ನತ್ತ ಸೆಳೆದಂತಾಗುವುದು
ಮತ್ತೊಮ್ಮೆ ಬಿಸಿಲ ಬೇಗೆಯಿಂದ ಕಮರಿ
ತನ್ನಲ್ಲಿನ ಅರಳಿದ ಸುಮದ ದಿವ್ಯತೆಯನ್ನು ಹಿಸುಕಿ ಹಾಕಿದಂತಾಗುವುದು

ಒಮ್ಮೊಮ್ಮೆ ಶಾಂತವಾಗಿ ಸಾಗುವ
ಸಣ್ಣಸಣ್ಣ ಜುಳುಜುಳು ಝರಿಗಳಂತೆ
ಮನದಾಳದ ಕೆಟ್ಟ ಕಲ್ಮಶಗಳನ್ನು
ತೊಳೆದು ಶುಚಿ ಮಾಡಿ ಸಾಗಿದರೆ
ಮತ್ತೊಮ್ಮೆ ಕುಪಿತ ಕಡಲ
ಉಬ್ಬರವಿಳಿತದಂತೆ ಎದೆಗಪ್ಪಳಿಸುವುದು

ಒಮ್ಮೊಮ್ಮೆ ಮುಂಬತ್ತಿಯ ಬೆಳಕಂತೆ
ಶಾಂತ ಕಿರಣಗಳ ಎಲ್ಲೆಡೆ ಬೀರುತ್ತಾ
ಮನದೊಳಗೆ ಮರಿ ಮಿಣುಕುಹುಳು
ಚೈತನ್ಯದಿಂದ ಹಾರಾಡಿ ಸುತ್ತದೆ
ಮತ್ತೊಮ್ಮೆ ಪ್ರಜ್ವಲಿಸುವ ಬೆಂಕಿಯಾಗಿ
ರೆಕ್ಕೆ ಸುಟ್ಟು ಬೀಳಿಸಿ ಎಲ್ಲವ ದಹಿಸುತ್ತದೆ

ಒಂದೆಡೆ ಮುಂಜಾವ ಭಾಸ್ಕರ ಇಣುಕಿದಾಗ
ಚಿಲಿಪಿಲಿ ನಾದದ ಸಂಗ ಲಭಿಸಿ
ಎದೆಯೊಳಗೆ ಭದ್ರವಾದ ಧನಾತ್ಮಕ
ಚಿಂತನೆಗಳನ್ನು ಮೂಡಿಸಿದರೆ
ಮತ್ತೊಂದೆಡೆ ಕಿಚ್ಚು ಬಾವ ತುಂಬಿರುವ
ಧ್ವನಿಗಳು ಸಂಪೂರ್ಣ ಋಣಾತ್ಮಕವಾಗಿಸುತ್ತವೆ

ಕಳೆದ ಸುಮಧುರ ಕ್ಷಣಗಳು
ನೈಜತೆಯ ಜೀವನಕ್ಕೆ ಹೋಲಿಕೆಯಾಗದೆ
ಮುಂದಿನ ಭವಿಷ್ಯದ ಬದುಕಿಗೆ
ಸರಿಯಾದ ಸ್ಪಷ್ಟತೆಯು ನಿಲುಕದೆ
ಚಿಂತಿಸಿ ನಾಳೆಯ ಬೆಳಕು ಕಾಣದೆ
ಹುಡುಕಿ ನೊಂದು-ಬೆಂದು ನಂತರ ನಿಶಬ್ದ

ಆಸೆಗಳ ಚಿತ್ರಣಕ್ಕೆ ದರ್ಪಣ
ರಾತ್ರಿ ಕಂಡ ಬಾವಿಗೆ ಹಗಲೊತ್ತು ಬಿದ್ದಂತೆ
ಕನಸುಗಳ ನೆನಪಲ್ಲಿ ಪಯಣ
ಕೊನೆಗೆ ಮಂಕುಮುಸುಕಿದ ಜೀವನ ಚಿತ್ರಣ
ಅದು ಎಲ್ಲವೂ ಮೌನದ ಆವರಣ
ಎಲ್ಲವೂ ಮೌನ ಎಲ್ಲವೂ ಮೌನ

ಚಂದ್ರು ಪಿ ಹಾಸನ್

ಕನಸಿನ ಬೆಳೆ

ಅವಳು
ಹೃದಯದ ಹೊಲವ ಹದಗೊಳಿಸಿ
ಭಾವನೆಗಳ ಬೀಜ ಬಿತ್ತಿ
ಕನಸುಗಳ ಬೆಳೆ ಬೆಳೆದವಳು॥

ಅವನು
ಆಸೆಯ ಕುಡಗೋಲು ಹಿಡಿದು
ಕನಸಿನ ಬೆಳೆ ಕತ್ತರಿಸಿ
ದೇಹ ಸಿರಿ ಧಾನ್ಯವನುಂಡು ತೃಪ್ತನಾದವನು॥

ಈಗ
ಹೊಲ ಹದವಾಗುತ್ತಿಲ್ಲ
ಬೆಳೆಗಳು ಬೆಳೆಯುತ್ತಿಲ್ಲ
ಉಂಡು ಹೋದವ ತಿರುಗಿ ನೋಡಲಿಲ್ಲ
ಮಕ್ಕಳ ಜೊತೆ ತಾನು ಉಪವಾಸ ನಿಂತಿದ್ದಾಳೆ
ಬಿರುಕುಗೊಂಡು ಅವಳು
ಕಾಯುತ್ತಿದ್ದಾಳೆ ಮುಷ್ಟಿಯಲಿ ಬೀಜ ಹಿಡಿದು
ಮತ್ತೆ ಎಂದಾದರೂ ಮಳೆಯಾದರೆ
ಹಿಡಿಯಷ್ಟು ಕನಸು ಬಿತ್ತಲು
ಮತ್ತೊಮ್ಮೆ ಮನಸ್ಸು ತುಂಬಿ ಬದಕಲು॥

ಇಂದ್ರ (ಧರಣೇಂದ್ರ ದಡ್ಡಿ)

ಚುಟುಕಗಳು

೧. ಹುಟ್ಟು

ಅವಳ ಮುಟ್ಟೊಂದು
ಗರ್ಭದೊಳು ಹೊಸ ರೂಪವ ಪಡೆದು
ಜಗವ ಕಾಣುವ ವೇಳೆ
ನೆನಪ ಸಾಲಿಗಾಗಿ ಮೊದಲ ಪುಟವ ತಿರುವಿತ್ತು..!!

೨. ಹಣೆಬರಹ

ಬದುಕ ಪುಸ್ತಕದೊಳಗೆ
ಅಳಿಸಲಾರದ ಅಕ್ಷರ
ವಿರಾಮವಿಲ್ಲದ ಸಾಲಿನೊಳು
ಬದಲಾವಣೆಯ ಕಾದಿತ್ತು..!!

೩. ಸಂಬಂಧಿಕರು

ಹುಟ್ಟಿದಾಗ ಜೊತೆಯಾಗಿ
ಕರೆದ ಹೆಸರಿನಾಚೆ
ಕುಟುಂಬವ ಸೇರಿಸಿ
ಜೊತೆ ನಗುತ ಚಿತೆಯಲಿಟ್ಟು ಮರೆತವರು

೪. ಶವಯಾತ್ರೆ

ಸ್ಮಶಾನದ ದಾರಿಯಲ್ಲಿ
ನೆನಪುಗಳು ಹೊಸ ಯಾತ್ರೆ ಹೊರಟಿದ್ದವು
ಕೊನೆಹಾಳೆಯೊಳು ಕ್ಷಣಗಳ
ಲೆಕ್ಕವ ಹಾಕಿ ಚಿತೆಯರಾಗವ ಬರೆಯುತ್ತ..!!

-ದೇವಿಪ್ರಸಾದ ಶೆಟ್ಟಿ

ಬಣ್ಣದ ಹಾಡು

ಅತ್ತೀಯ ಮಗಳು ಅತ್ತಿಹಣ್ಣಿನಂಥಾಕಿ
ಎತ್ತ ಹೋದರೂ ಕಾಡ್ತಾಳ/
ಎತ್ತ ಹೋದರೂ ಕಾಡ್ತಾಳೊ
ಎಲೆ ಗೆಳೆಯ ಮತ್ತು ತರಿಸ್ಯಾಳೊ ಮನದಾಗ!

ಮಾವನ ಮಗಳು ಮಲ್ಲಿಗಿಯಂಥಾಕಿ
ಮೋಹ ತುಂಬ್ಯಾಳ ಎದೆಯಾಗ/
ಮೋಹ ತುಂಬ್ಯಾಳೊ ಎದೆಯೊಳಗ
ಎಲೆ ಗೆಳೆಯ ಕಾವ ತುಂಬ್ಯಾಳೊ ಮನದಾಗ!

ಅಕ್ಕನ ಮಗಳು ಚಕ್ಕುಲಿಯಂಥಾಕಿ
ನಕ್ಕಾಗ ಗಲ್ಲ ಕುಳಿ ತೆಗ್ಗು/
ನಕ್ಕಾಗ ಗಲ್ಲ ಕುಳಿ ತೆಗ್ಗು
ಎಲೆ ಗೆಳೆಯ ಬಣ್ಣ ತುಂಬ್ಯಾವ ಮಕದಾಗ!

ತಂಗಿಯ ಗೆಳತಿ ತಂಬೂರಿಯಂಥಾಕಿ
ರಾಗ ತುಂಬ್ಯಾಳ ಹೃದಯಕ/
ರಾಗ ತುಂಬ್ಯಾಳ ಹೃದಯಕ
ಎಲೆ ಗೆಳೆಯ ಸೋಗ ತುಂಬ್ಯಾಳ ಉದಯಕ!

ಗೆಳೆಯನ ತಂಗಿ ಬಿಳಿ ಜ್ವಾಳದಂಥಾಕಿ
ಬೆಳಕ ತುಂಬ್ಯಾಳ ಆತ್ಮಕ/
ಬೆಳಕ ತುಂಬ್ಯಾಳೊ ಆತ್ಮಕ
ಎಲೆ ಗೆಳೆಯ ಸೆಳಕ ತುಂಬ್ಯಾಳ ಭಾವಕ!

ಕೂಡಿ ಓದಿದ ಹುಡುಗಿ ಆಡಿ ಸೋಲಿಸಿದ್ಹುಡುಗಿ
ಮೋಡಿ ಮಾಡ್ಯಾಳ ಮನಸಿಗಿ/
ಮೋಡಿ‌ ಮಾಡ್ಯಾಳೊ ಮನಸಿಗಿ
ಎಲೆ ಗೆಳೆಯ ಜೋಡಿ ಆಗುವೆನು ಎನುತಾಳೊ!

ಊರಿಗ್ಹೋಗುವಾಗ ಸೀಟು ಕೇಳಿದ ಹುಡಿಗಿ
ಕಣ್ಣು ಹೊಡೆದಾಳು ಇಳಿವಾಗ/
ಕಣ್ಣು ಹೊಡೆದಳೊ ಇಳಿವಾಗ
ಎಲೆ ಗೆಳೆಯ ಬಣ್ಣ ಎರಚಿದಳೊ ಕಣ್ಣಾಗ!

ಕಡುಬು ಹೋಳಿಗಿ ಹುಗ್ಗಿ ರಸಗುಲ್ಲಾ ಜಾಮೂನು
ಎಷ್ಟೊಂದು ಸವಿಯೊ ಹಬ್ಬಕ/
ಎಷ್ಟೊಂದು ಸವಿಯೊ ಹಬ್ಬಕ
ಎಲೆ ಗೆಳೆಯ ಯಾವುದು ಹಿತವೊ ನೀ ಹೇಳೊ!

-ಸಾವಿತ್ರಿ ಹಟ್ಟಿ

ಸಿಕ್ಕೀತೇ…

ನಿತ್ಯ ವೆಚ್ಚದ ಅಚ್ಚಿನಲ್ಲಿ ಬದುಕು ಅಪ್ಪಚ್ಚಿ ಉಸಿರು ಮೇಲೆ ಕೆಳಗೆ
ದುಡುಮೆಯ ಕಾಸು ಬಿಸಿಲಗುದರೆಯ ಮರೀಚಿಕೆ
ಖಾಲಿ ಕೈ ಕೆಲಸ ಕಾಣದೆ ಆಕಾಶ ನೋಡಿದೆ
ಹಸಿವಿನಲ್ಲಿ ಮಕ್ಕಳ ಹೊಟ್ಟೆ ನೆಲಕೊರಗಿದೆ
ಇಂದೋ ನಾಳೋ ನೆಮ್ಮದಿ, ಸಿಕ್ಕೇತೇ?

ನಾಳೆ ಬದುಕುವ ಉಮೇದದಲ್ಲಿ ಇಂದಿನ ಬದುಕಿನ ತಯಾರಿಗೆ
ಆಳುವವರು ನೀಡಿ ಅಕ್ಕಿ ಗಂಜಿಗಾದರೆ ಕೆಂಪು ಸಾರಿಗೇನು ಮಾಡುವುದು
ಸೊಪ್ಪುಸೆದೆಯ ಉಪ್ಪಿನಲ್ಲಿ ಬೆರೆತ ಋಣಕೇನು
ಮಾಡುವುದು ಅನ್ನದ ನೆಮ್ಮದಿ, ಸಿಕ್ಕೀತೇ?

ಈ ನಡುವೆ ದೇವರಿಗಾಗಿ ಹುಡುಕಾಡಿದೆ ನಿರ್ಜನ ರಸ್ತೆಯಲ್ಲಿ ಕರುಣೆ,
ಮಮತೆ ಮಾನವೀಯತೆ ಮೂಲ ಸೆಲೆಯನ್ನು ಹಣದ
ಬೆಂಗಾಡಿನಲ್ಲಿ ಬತ್ತಿ ಹೋದ ಪ್ರೀತಿಗಾಗಿ ಹುಡುಕಾಡಿ ತಡಕಾಡಿ
ಸೋತು ಹೋದೆ ಪ್ರೀತಿಯ ಸೆಲೆ, ಸಿಕ್ಕೇತೇ?

ದಿನ ರಾತ್ರಿ ಲೆಕ್ಕದಲ್ಲಿ ಲೆಕ್ಕವೇ ಇಲ್ಲದಷ್ಟು ಮನಸುಗಳ ಎದೆಯಲ್ಲಿ
ಸುಮ್ಮನೆ ನಿಂತ ಅಂತಸ್ತಿನ ಕಲ್ಲು ಮಹಡಿಯಲ್ಲಿ
ಲೆಕ್ಕ ಇಲ್ಲದಷ್ಟು ಹಣ ತುಂಬಿದ ಖಜಾನೆಯ ಒಳಗೆ
ಹಿಡಿಯಷ್ಟೇ ಕರುಣೆ ಹುಡುಕಿದೆ, ಸಿಕ್ಕೇತೇ?

ಹೊಟ್ಟೆಯ ಬೊಜ್ಜಿಗೆ ತಿಂದು ಉಳಿಸಿ ಬಿಸಾಕುವ ಅನ್ನದ ಅಗುಳಿಗಾಗಿ
ಬಟ್ಟೆ ಎನ್ನುವ ತುಂಡು ಪ್ರತಿಷ್ಠೆಗಾಗಿ
ಇರುವವರು ನಡುವೆ ಕಣ್ಣು ಮುಚ್ಚಿ ಕೈ ಕಟ್ಟಿ ಹೃದಯ
ತೆರೆದು ದೇಹ ಬಾಗಿಸಿ ಕೇಳಿದೆ, ಸಿಕ್ಕೇತೇ?

ಬಾಗಿಲು ಹಾಕಿಕೊಂಡ ದೇವಸ್ಥಾನದ ಘಂಟೆ ಸದ್ದುನಲ್ಲಿ
ಸಮಯಕ್ಕೆ ಸರಿಯಾಗಿ ಆವಾಜಿಸುವ ಆಜಾನದಲ್ಲಿ
ಸುಖಕ್ಕೊ ದುಃಖಕ್ಕೂ ಬಡಿದುಕೊಳ್ಳುವ ತ್ರೀ ಕೋನದ ಬೆಲ್ ನಲ್ಲಿ
ಅಷ್ಟೇ ಅಲ್ಲ ಎಲ್ಲಿಯಾದರೂ ಸಿಕ್ಕುತ್ತಾನೆ ಮನುಷ್ಯನ ಸೃಷ್ಟಿ ದೇವರು
ಉಸಿರು ನಿಲ್ಲಿಸುವ ಅವಕಾಶ ಮತ್ತೋಮ್ಮೆ , ಸಿಕ್ಕೀತೇ?

ವೃಶ್ಚಿಕ ಮುನಿ

ಅಭಿನೇತ್ರಿ…

ನಿತ್ಯ ಹೊಸ ಪಾತ್ರ ಧರಿಸುವ
ಅವಳು ನುರಿತ ಅಭಿನೇತ್ರಿ;
ಪರಕಾಯ ಪ್ರವೇಶಿಸಿ ಮಾಡುವ
ಅಭಿನಯ ಒಮ್ಮೆ ನೋಡಬೇಕಷ್ಟೆ..!

ಕಣ್ಣಂಚಲಿ ಒಲವು ದಾಟಿಸಿ, ರೆಪ್ಪೆ
ನಡುವಿನ ಪಾಪೆ ತುಸು ಅಗಲ-
ಕಿರಿದುಗೊಳಿಸಿ, ಅಬ್ಬಾ! ನಯನ
ಸಂದೇಶ ವಾಹನೆ, ಎಂಥಾ ನಿಪುಣೆ!
ಎನ್ನದೇ ಇರಲಾರಿರಿ…

ಒಂದು ತುಟಿ ಕೊಂಕಿಗೆ, ಹುಬ್ಬಿನ
ತುದಿ ಡೊಂಕಿಗೆ, ನೋಡುಗರ ಹೃದಯ
ವೇದಿಕೆ ಮೇಲೆ ಕಡಲ ಮೊರೆತ; ಸಿಡಿಲ
ಬಡಿತ; ಮಿಂಚು ಸಂಚರಿಸಿ – ಓಹ್!
ಅದ್ಭುತ ನಟಿ!! ಎಂಬ ಉದ್ಗಾರ..

ತಪ್ಪಿ ಎದೆ ತಾಳ; ಹಿಡಿದು ಹೊರಟರೆ
ಗಾನದ ಹಿಮ್ಮೇಳ; ಬೆಪ್ಪಗಾಗುವ
ಮಂದಿ ಒಪ್ಪಿ ತಲೆದೂಗಿ ಹೇಳುವರು,
ಅಬ್ಬಾ ರಮಣಿ! ಅಭಿನಯ ನಿಪುಣಿ..!!

ಈಕೆಯಿಂದ ಅಭಿನಯಕ್ಕೊಂದು
ಹೊಸಕಳೆ! ಕಲೆ ಹುಟ್ಟಿತೆ ಇವಳು
ಹುಟ್ಟಾದ ಮೇಲೆ? ಮೂಗಿನ ಮೇಲೆ
ಬೆರಳಿರಿಸಿ ನಿಂತವರ ಉದ್ಗಾರ!! ಎಂಥಾ
ಅಭಿನೇತ್ರಿ..

-ವಸುಂಧರಾ ಕದಲೂರು

ಚಿಂದಿಯಾಯುವವ
ಹೌದು ,
ದಿನದ ಬದುಕು ಶುರುವಾಗುವ ಹೊತ್ತಿಗೆ
ಆತನದು ಅರ್ಧ ಕೆಲಸ‌ ಮುಗಿದಿರುತ್ತದೆ
ಹೊಟ್ಟೆ ಪಾಡಿನ ಜೀವನ ಆತನದು
ಆತನೆ ಚಿಂದಿಯಾಯುವವನು…

ಮುಖ ತೊಳೆಯದ
ನಿತ್ಯ‌ಕರ್ಮಗಳಿಗೆ ಪುರುಸೊತ್ತು ಇಲ್ಲದ
ಸದಾ ಕ್ರಿಯಾಶೀಲ ಜೀವವದು.
ಸೂರ್ಯ ರಶ್ಮಿಗೆ ಶುಭಕೋರುವಾತ
ನೀತಿ-ನಿಷ್ಠೆಗಳ ಆಸ್ತಿ ಮಾಡಿಕೊಂಡಾತ
ಶ್ರಮಜೀವಿ-ಚಿಂದಿಯಾಯುವವನು….

ಊರು-ಕೇರಿಗಳೆನ್ನದೆ
ಜಾತಿ ಭೇದವ ಮಾಡದೆ
ಜಗದ ಕಸವೆಲ್ಲವ ಗಂಟುಮೂಟೆ ಕಟ್ಟಿ
ಸ್ವಚ್ಛ ಭಾರತದ ಕನಸು ಕಾಣುತಿರುವಾತ
ನವೋದಯದ ಹರಿಕಾರ ಈ ನಮ್ಮ‌ ಚಿಂದಿಯಾಯುವವ…

ಹರಿದ ಪ್ಯಾಂಟಿನೊಳಗೆ ಒಡೆದ ಮನಸುಗಳ
ಕಂಡು,ತೂತು ಬಿದ್ದ ಅಂಗಿಯಿಂದ
ಜಗದ ಜಡತ್ವವ ತಿಳಿದುಕೊಂಡು,
ಮಂದಸ್ಮಿತ ಬೀರಿ ಬುದ್ದನೆ ಆಗಲು ಹೊರಟವ
ನನ್ನ‌ ಚಿಂದಿಯಾಯುವವ…

ಹಗಲು ಕಳೆದು ರಾತ್ರಿ ಬರಲು
ಅವನಿಗದೊ ಸುಗ್ಗಿ…
ನೆಲವ ಹಾಸಿಗೆ ಮಾಡಿ,
ಬಾನ ಚಾದರ ಮಾಡಬಲ್ಲ ಚತುರ ಅವ…
ಎಂಟೆದೆಯ ಬಂಟ ನನ್ನ ಚಿಂದಿಯಾಯುವವ….

ಮನದ ಕಲ್ಮಶವೆಲ್ಲ ತೊಳೆಯಲು
ಹುಟ್ಟು ಹಾಕಬೇಕಿದೆ ನಮ್ಮೊಳಗೊಬ್ಬ
ಚಿಂದಿಯಾಯುವವನ
ಚತುರನನ್ನಾಗಿಸುವವನ…..

-ಸುರೇಶ ತಂಗೋಡ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
ವಾಣಿಮಹೇಶ್
ವಾಣಿಮಹೇಶ್
2 years ago

ನಿಮ್ಮ ಕಾವ್ಯ ಭಾವನಾತ್ಮಕ ವಿಷಯಗಳನ್ನು ಒಳಗೊಂಡಿದೆ. ಬಹಳ ಪ್ರೌಢಿಮೆಯಿಂದ ಕೂಡಿದ ಕಾವ್ಯ. ತುಂಬಾ ಖುಷಿಯಾಯ್ತು. ಮತ್ತಷ್ಟು ಕವನಗಳು ನಿಮ್ಮಿಂದ ಹೊರಬರಲಿ‌

ಚಂದ್ರು ಪಿ ಹಾಸನ್
ಚಂದ್ರು ಪಿ ಹಾಸನ್
2 years ago

ಧನ್ಯವಾದಗಳು ಮೇಡಂ

ಚಂದ್ರು ಪಿ ಹಾಸನ್
ಚಂದ್ರು ಪಿ ಹಾಸನ್
2 years ago

ಧನ್ಯವಾದಗಳು ಮೇಡಂ
ತಮ್ಮ ಹಾರೈಕೆ ಸದಾ ಇರಲಿ

ಚಂದ್ರು ಪಿ ಹಾಸನ್
ಚಂದ್ರು ಪಿ ಹಾಸನ್
2 years ago

ಪ್ರತಿಯೊಂದು ಸಾಲುಗಳು ಅದ್ಭುತ ವಾಗಿವೆ.
ರಚನಾ ಕಾರರಿಗೂ ಮತ್ತು ಪ್ರಕಟಕರಿಗೂ ಧನ್ಯವಾದಗಳು

4
0
Would love your thoughts, please comment.x
()
x