ಹಸಿ ರಕ್ತ ಮುಸಿ ಮುಸಿ ನಗುತ್ತಲಿತ್ತು
ಎಡ ಬಲದ ಭುಜಹತ್ತಿ ಕ್ರೌರ್ಯ ಮೆರೆಯುತ್ತಲಿತ್ತು
ತಾನು ನಗುತ್ತಲೇ ಪ್ರಶ್ನೆ ಕೇಳುತ್ತಿತ್ತು?
ಯಾರೊಳಗೆ ನಾನಿಲ್ಲ ?
ನನ್ನ ಬಲ್ಲವರಿಲ್ಲ
ನಿನ್ನೊಳಗಿನ ಅವನ
ಅವನೊಳಗಿನ ನಿನ್ನ
ನಡುವಿನ
ಅಂತರ ಇಷ್ಟೇ
ಅದು ನಾನು!
ನಿನ್ನೊಳಗಿನ ನನಗೆ
ನಾನಾ ಮುಖಗಳು
ನಾನಿದ್ದೆ ನನ್ನಂತೆ
ನೀನೇ ತೊಡಿಸಿದೆ
ಸಿದ್ದಾಂತದ ಸೋಗಿನಲ್ಲಿ
ಧರ್ಮಾಂಧತೆಯ ಮಸಿಯ
ನಾನೇನು ಮಾಡಲಿ
ಕರ್ತವ್ಯ ಮುಗಿಸಿದೆ
ಕಾರಣ ಇಷ್ಟೇ
ಅದು ನಾನು!
ಸಿಡಿವುದಷ್ಟೇ ಗೊತ್ತು
ಗುಂಡಿಗೆ
ಕಡಿಯುವುದಷ್ಟೇ ಗೊತ್ತು
ಮಚ್ಚಿಗೆ
ಪಾಪ ಅವುಗಳ ತಪ್ಪಿಲ್ಲ
ತಪ್ಪಿಗೆ ತೀರ್ಪಿಷ್ಟೇ
ಅದು ನಾನು !
ಹೆತ್ತವರೋ ಹೊತ್ತವರೋ
ತುತ್ತಿಟ್ಟು ಸಾಕಿದವರೋ
ಯಾರ ಕಣ್ಣೊರೆಸುವೆ ?!
ನೀ ಸತ್ತನಂತರ
ಬೇಕೇ ನಿಜ ಕಾರಣ ?
ಹ್ಞೂಂ..!
ಅದು ನಾನೆಂಬ
ನೀನು ಅಷ್ಟೇ !!
ಹಸಿ ರಕ್ತ ಮುಸಿ ಮುಸಿ ನಗುತ್ತಲೇ ಇತ್ತು
ಪ್ರಶ್ನೆ ಕೇಳುತ್ತಲೇ ಇತ್ತು??!!!
-ಮಿತಾಕ್ಷರ
ನನ್ನನ್ನು ಕೊಲ್ಲುವವರಿದ್ದಾರೆ
ಒಂದೇ ಏಟಿಗೆ;
ಗೆಲ್ಲುವ ಮನವಿಹುದೆ ಹೇಳಿ ?
ದ್ವೇಷಿಸುವವರಿದ್ದಾರೆ;
ಅಡಿಗಡಿಗೂ ಮುಳ್ಳಂತೆ,
ಕೊಂಚ ಹಂಚಲು ನನಗೂ,
ಒಲವಿಹುದೆ ಹೇಳಿ?
ಕಿಡಿ ಕಾರುವವರಿದ್ದಾರೆ;
ಗಿರಣಿಯ ಹೊಗೆಯಂತೆ !
ಮೃದು ನಿಲುವ ತಳೆಯುವ
ಮಾತಿಹುದೆ ಹೇಳಿ ?
ದೂರ ಸರಿಯುವವರೋ ?!
ನೂರು ಮಂದಿ ಬಾಳಿನಲಿ;
ಹತ್ತಿರ ಕರೆದು, ತುತ್ತನಿಟ್ಟುವ
ಕೈ ಇಹುದೆ ಹೇಳಿ ?
ನುಡಿಯುವವರಿದ್ದಾರೆ;
ಒಳಿತು ಕೆಡುಕುಗಳ !
ವಾಸ್ತವ ಬದುಕ ಎಣೆದುಕೊಡುವ
ಕಲೆಯಿಹುದೆ ಹೇಳಿ ?
ಗೋರಿ ಕಟ್ಟುವವರಿದ್ದಾರೆ
ಜೀವಂತವಿದ್ದಾಗಲೂ;
ಸತ್ತ ಘಳಿಗೆ ಶವದ ಮೇಲಿಡಲು
ಒಂದೆಳೆ ಹೂವಿಹುದೆ ಹೇಳಿ ?
-ಮನು ಗುರುಸ್ವಾಮಿ
ನಾನಿಲ್ಲದ ನಿನ್ನೂರಿನ ಸಂತೆ
ನಿಸೂರ ನಿಭ್ರಾಂತ ಮನಸು
ಹಾರಾಡುತ್ತಿದೆ, ಗಗನದಿ
ಗರಿಬಿಚ್ಚಿದ ನವಿಲಂತೆ…!
ಅರಳಿದ ಸುಮದಂತೆ
ಹೃದಯ ನಿನ್ನೂರಿನ ಸಂತೆ…!
ತೃಪ್ತ ಭಾವದಲಿ
ತಪ್ತ ಕನಸುಗಳು
ಕುಡಿಯೊಡೆದಿವೆ ಸಖಿ…!
ನಿರ್ಲಿಪ್ತ ಮೌನ,
ಶಾಂತಿ ಚಳುವಳಿಯ
ವಕ್ತಾರ, ಇಂದುಮುಖಿ..!
ಪ್ರೇಮದುದಧಿಯಲ್ಲಿ
ಮಿಂದೆದ್ದು ಸ್ವರ್ಗದ
ಓಣಿಯಲ್ಲಿ ಕುಣಿಯುವೆ
ನಾನು ಗೆಜ್ಜೆ ಕಟ್ಟುತ್ತಾ…!
ಸಪ್ತಪದಿಯ ನೆಪದಿ
ಶಿಖೆಯ ಸುತ್ತಲೂ
ಸಖಿಯೊಂದಿಗೆ
ಹೊಸತಾಳ ಹಾಕುತ್ತಾ…!
ಹರೆಯ ಜಾರುವ ಮುನ್ನ
ಉರಿವ ಕನಸಿನ ಯಾನ
ಕಣ್ಣಲ್ಲಿ ಕರೆವ ಭಾವಲೋಕ
ಯಾಮಿನಿಯ ಧ್ಯಾನ…!
ನಿನ್ನೊಳಗಡಗಿದೆ
ಮರಳಿ ಬರದ ಪ್ರಾಣ…!
ಹೃದಯಗಳ ಮಾರಾಟ
ಕ್ರಯವಿಕ್ರಯಗಳ
ಯಾದಿಯಲ್ಲ
ಸರಕಿನ ಸಾಗಾಣಿಕೆಯಲ್ಲ..!
ಭಾವನೆಗಳ ಸ್ಪರ್ಶ
ಅನುಭವಕ್ಕೆ ಬರಲಿಲ್ಲ,,
ನಿನ್ನೂರಿನ,
ಸಂತೆಯಲಿ ನಾನೆ ಇಲ್ಲ….!
–ಶಂಕರಾನಂದ ಹೆಬ್ಬಾಳ
ಕಾಯುತ್ತಿದ್ದೇನೆ ಕಾಯುತ್ತೇನೆ
ಕಾಯುತ್ತಿದ್ದೇನೆ ಕಾಯುತ್ತೇನೆ
ಸಮಾಜದ ಬದಲಾವಣೆಗಾಗಿ
ಬಡವರ ಶ್ರೀಮಂತಿಕೆಗಾಗಿ
ಅಸ್ಪೃಶ್ಯರ ವಿಮೋಚನೆಗಾಗಿ
ಅತ್ತವರ ಕನಸ್ಸಿಗಾಗಿ
ಕಾಯುತ್ತಿದ್ದೇನೆ ಕಾಯುತ್ತೇನೆ
ಪ್ರತಿಯೊಬ್ಬರ ಉಚಿತ ಶಿಕ್ಷಣಕ್ಕಾಗಿ
ಉಚಿತ ಆರೋಗ್ಯ ತಪಾಸಣೆಗಾಗಿ
ಸಾಮಾನ್ಯ ಯುವಕರ ಉದ್ಯೋಗಕ್ಕಾಗಿ
ಸೋತವರ ಬದುಕಿಗಾಗಿ
ಕಾಯುತ್ತಿದ್ದೇನೆ ಕಾಯುತ್ತೇನೆ
ರೈತರ ಬೆಳವಣಿಗಾಗಿ
ಬುಡಕಟ್ಟುಗಳ ಅಭಿವೃದ್ಧಿಗಾಗಿ
ಹೆಣ್ಣುಮಕ್ಕಳ ಉದ್ಧಾರಕ್ಕಾಗಿ
ನೊಂದವರ ನೆಮ್ಮದಿಗಾಗಿ
ಕಾಯುತ್ತಿದ್ದೇನೆ ಕಾಯುತ್ತೇನೆ
ಅನ್ಯಾಯಕ್ಕೆ ಒಳಗಾದವರ ನ್ಯಾಯಕ್ಕಾಗಿ
ಭ್ರಷ್ಟ ಅಧಿಕಾರಿಗಳ ಮುಕ್ತಿಗಾಗಿ
ಸಮೃದ್ಧ ಸಮಾನತೆಯ ನಾಡಿಗಾಗಿ
ಸಮಾನ ಮನಸ್ಸುಗಳ ಖುಷಿಗಾಗಿ
ಕಾಯುತ್ತಿದ್ದೇನೆ ಕಾಯುತ್ತೇನೆ
ಅನಕ್ಷರಸ್ತ ರಾಜಕಾರಣಿ ಗಳಸೋಲಿಗಾಗಿ
ಯುವ ರಾಜಕಾರಣದ ಏಳಿಗೆಗಾಗಿ
ಬುದ್ಧಿವಂತ ಬಡ ವಿದ್ಯಾವಂತರಿಗಾಗಿ
ವಿಚಾರವಂತರ ಬೆಳವಣಿಗೆಗಾಗಿ
-ಜಿ ಎಸ್ ಶರಣು
ಇಲ್ಲಿಲ್ಲ ನಿನ್ನ ನಗುವಿಗೆ ನಗುವಾಗುವವರು
ಮುಗಿಲು ಮಳೆ ಸುರಿಸುವರಿಗೆ ಬೇಡಿಕೆಯು
ಚಿಗುರು ಎಲೆ ಇರುಳಾಗುಹುದೇನೂ
ಸುರಿಯುವ ಮಳೆಯಲಿ ಕಂಗಳು
ಒದ್ದೆಯಾದರೆ ಕಾಣುವುದೆ ಹೃದಯೊಳಗಿದು….
ನಿನ್ನ ಸರದಿ ಬಂದಾಗಲೇ
ದೋಚುವನು ನಿನ್ನ ಆ ಯಮನು
ಯಾತನೆಯ ನೇಪ ಬಂದರಷ್ಟೋ
ಮುಸುಕು ಹೊದ್ದು ಮಲಗಿದೆ ಮನಸು…
ಯಾವುದೋ ಒಲವು ತಿವಿದು ಕೇಳತಿಹುದು
ಯಾರದೋ ನೆನಪು ಮನೆ ಮಾಡಿಹುದು
ಯಾರದೋ ಮನದಲಿ ಸಿಲಿಕಿರುವ ಅನುಭವವು
ನವಿರಾದ ಭಾವಗೀತೆ ನಿನಗೆ ಓ ಮೌನವು……
-ಸಂತೋಷ ಕಾಖಂಡಕಿ