ಬಡತನಕ್ಕೂ ಸೊಗಸಿದೆ ಎನ್ನುವ ಮುಕ್ಕಾದ ಭಿಕ್ಷಾಪಾತ್ರೆ ಬೌಲ್: ಡಾ. ನಟರಾಜು ಎಸ್.‌ ಎಂ.

ಎಂ ಎಸ್‌ ಮೂರ್ತಿಯವರ ಆಟೋಗ್ರಾಫ್‌ ಇರುವ ಅವರ ಬೌಲ್‌ ಕಾದಂಬರಿ ನನ್ನ ಕೈ ಸೇರಿ ಹತ್ತು ದಿನವಾಗಿರಬಹುದು. ಮೊದಲ ದಿನ ಊರಿನಲ್ಲಿ ಪುಸ್ತಕ ಓದಲು ಕುಳಿತಾಗ ಎರಡು ನಿಮಿಷಕ್ಕೆ ಒಂದು ಪುಟದಂತೆ ಐವತ್ತು ಪುಟಗಳ ಮೊದಲ ಅಧ್ಯಾಯವನ್ನು ಓದಿ ಮುಗಿಸಿದ್ದೆ. ಉಳಿದ ಅ‍ಧ್ಯಾಯಗಳನ್ನು ಬಿಡುವಿದ್ದಾಗ ಓದಿಕೊಂಡು ಇವತ್ತು ಬೆಳಿಗ್ಗೆ ಈ ಪುಸ್ತಕದ ಓದು ಪೂರ್ತಿಯಾಯಿತು. ಒಂದಷ್ಟು ಪುಟಗಳಲ್ಲಿನ ವಿಷಯಗಳು ಅದರಲ್ಲೂ ಗುರುಪರಂಪರೆಯ ಕುರಿತು ಬರೆದ ಅಧ್ಯಾಯಗಳು ಚೂರು confuse ಆದಂತೆ ಅನಿಸಿದ್ದರಿಂದ ಆ ಪುಟಗಳನ್ನು ಮತ್ತೆ ಓದಿಕೊಂಡೆ. ಪುಸ್ತಕವನ್ನು ಓದಿ ಮುಗಿಸಿದ ಮೇಲೆ ಪುಸ್ತಕದ ಕುರಿತು ಬರೆಯಲೇಬೇಕು ಎನಿಸತೊಡಗಿತು. ಆ ಕಾರಣಕ್ಕೆ ಈ ಲೇಖನ.

ಬೌಲ್‌ ಎನ್ನುವುದೇ ಒಂದು ವಿಭಿನ್ನ ಹೆಸರು. ನೇರವಾಗಿ ಭಿಕ್ಷಾಪಾತ್ರೆ ಅಂತ ಕನ್ನಡದಲ್ಲಿ ಅಂದುಬಿಟ್ಟಿದ್ದರೆ ಬಹುಶಃ ಈ ಪುಸ್ತಕದ ಶೀರ್ಷಿಕೆ ಅಷ್ಟು ಆಕರ್ಷಕ ಅನಿಸುತ್ತಿರಲಿಲ್ಲವೇನೋ. ಆದರೆ ಬೌಲ್‌ ಎನ್ನುವ ಹೆಸರು ಪುಸ್ತಕಕ್ಕೆ ಚೆನ್ನಾಗಿ ಒಪ್ಪುತ್ತದೆ. ಲೇಖಕರೇ ರಚಿಸಿರುವ ತಿಳಿ ನೀಲಿ ಬಣ್ಣ ಮತ್ತು ಬಿಳಿಯ ಕ್ಯಾನ್‌ ವಾಶ್‌ ನ ಮೇಲೆ ಮೂಡಿರುವ ಬೌಲ್‌ ನ ಚಿತ್ರ ಪುಸ್ತಕದ ಮುಖಪುಟವಾಗಿದೆ. ನಮ್ಮದೇ ಲೋಕದಲ್ಲಿ ಮುಳುಗಿ ಹೋಗಿ ಕೆಲವು ಸಲ ಕಲೆಯ ಕಡೆ ಗಮನವನ್ನೇ ಹರಿಸದ ಕಾರಣಕ್ಕೆ ಲೇಖಕರು ಖ್ಯಾತ ಚಿತ್ರಕಲಾವಿದರು ಎನ್ನುವುದು ನನಗೆ ತಿಳಿದಿರಲಿಲ್ಲ. ಆದರೆ ಅವರ ಕುರಿತು ಓದಿದಾಗ ಕಲಾವಿದರಾಗಿ ಹಾಗು ಲೇಖಕರಾಗಿ ತುಂಬಾ ಎತ್ತರದ ಸ್ಥಾನದಲ್ಲಿ ಎಂ ಎಸ್‌ ಮೂರ್ತಿಯವರು ನಿಂತಿದ್ದಾರೆ ಎನ್ನುವುದ ತಿಳಿದು ತುಂಬಾ ಖುಷಿಯಾಯಿತು.

ಪ್ರಸ್ತುತ ಕಾದಂಬರಿಯನ್ನು ಓದಲು ಶುರುಮಾಡಿದಾಗ ಮೊದಲ ಅಧ್ಯಾಯದಲ್ಲಿ ಕಥೆಯ ಪ್ರಮುಖ ಪಾತ್ರದಾರಿಗಳೆಲ್ಲಾ ತಮ್ಮ ಕತೆ ಹೇಳಿಕೊಳ್ಳಲು ಕಾತರರಾಗಿ ನಿಂತಿದ್ದರು. ಅವರ ಕತೆಗಳನ್ನು ಕೇಳಿಸಿಕೊಳ್ಳಲು ಕುಳಿತಾಗ ಸಮಯ ಸರಿದದ್ದೇ ತಿಳಿಯಲಿಲ್ಲ. ಒಂದೊಂದು ಅಧ್ಯಾಯದ ಉಪ ಅಧ್ಯಾಯಗಳಲ್ಲಿ ಕತೆ ಶುರುವಾಗುವುದೇ ಪಾತ್ರಗಳ ಸ್ವಗತದ ನಿರೂಪಣೆಯಿಂದ. ಈ ತರಹದ ನಿರೂಪಣೆ ಒಂದು ಹೊಸ ಪ್ರಯೋಗ ಎನ್ನಬಹುದು. ಸ್ವಗತದ ಮಾತುಕತೆಗಳಿಂದ ಶುರುವಾಗುವ ಸನ್ನಿವೇಶಗಳಲ್ಲಿ ತಮ್ಮ ಕತೆ ಹೇಳುತ್ತಲೇ ನಮ್ಮನ್ನು ತಮ್ಮ ಪ್ರಪಂಚದ ಸುತ್ತ ಸುತ್ತಿಸಿಬಿಡುವುದು ಈ ಕಾದಂಬರಿಯ ಪಾತ್ರದಾರಿಗಳ ವೈಶಿಷ್ಟ್ಯ. ಈ ಕಾದಂಬರಿಯ ಪಾತ್ರದಾರಿಗಳು ತುಂಬಾ ಸರಳ ವ್ಯಕ್ತಿಕ್ವದವರು. ಎಲ್ಲರೂ ಒಂಟಿಪಯಣಿಗರು. ಕಾಲನ ಹೊಡೆತಕ್ಕೆ ಸಿಕ್ಕಿ ತಮ್ಮ ತಮ್ಮ ಬದುಕುವ ಬಗೆಯನ್ನು ಹೇಗೋ ಕಂಡುಕೊಂಡವರು. ಕಾದಂಬರಿಯಲ್ಲಿ ಒಟ್ಟು ಆರು ಪ್ರಮುಖ ಪಾತ್ರಗಳಿದ್ದರೂ ಮಾಲಿಂಗನ ಪಾತ್ರವನ್ನು ಕುರಿತು ಓದುವಾಗ ಡಾ.ಪ್ರಭುಶಂಕರರು ಬರೆದ ಅಂಗುಲಿಮಾಲನ ಕತೆ ಯಾಕೋ ತಕ್ಷಣಕ್ಕೆ ನೆನಪಾಯಿತು. ಅಂಗುಲಿಮಾಲನಷ್ಟೇ ಕೌರ್ಯವನ್ನು ಮೈಗೂಡಿಸಿಕೊಂಡಿರುವ ಪಾತ್ರ ಈ ಕಾದಂಬರಿಯ ಕತೆಯ ಶುರುವಿಗೆ ನಾಂದಿ ಹಾಡುತ್ತದೆ. ಕತೆ ಶುರುವಾಯಿತು ಎಂದ ಮೇಲೆ ಅದಕೊಂದು ಅಂತ್ಯವೆಂಬುವುದೇ ಇರುವುದಿಲ್ಲವೇನೋ!!

ಪ್ರಮುಖ ಪಾತ್ರಗಳಾದ ಬಿಕು, ಅಜ್ಜ, ಸುಮಲತೆ, ಆನಂದ, ಮಾಲಿಂಗ ಮನುಷ್ಯರೂಪಿಗಳಾಗಿದ್ದರೆ, ಗುಂಡ ಎನ್ನುವ ನಾಯಿ, ಬೌಲ್‌ ಎನ್ನುವ ಭಿಕ್ಷಾಪಾತ್ರೆಯೂ ಕೂಡ ಇಲ್ಲಿ ಸಹ ಪಾತ್ರದಾರಿಯಾಗಿವೆ. ಪ್ರತೀ ಪಾತ್ರದ ಮೂಲಕವೂ ಲೇಖಕರು ಅನೇಕ ವಿಚಾರಗಳನ್ನು ಥೀಮ್‌ ಗಳನ್ನು ನಮ್ಮ ಮುಂದೆ ಇಟ್ಟಿದ್ದಾರೆ. ಅಜ್ಜ ಒಬ್ಬ ಸಂತನಾದರೆ, ಸುಮಲತೆ ಸುಲಲಿತೆ ಸುಸಂಸ್ಕೃತೆ, ಆನಂದ ಮುಗ್ಧತೆಯ ಪ್ರತೀಕ, ಮಾಲಿಂಗ ಕೌರ್ಯದ ಪರಾಕಷ್ಟೆ. ಮುಕ್ಕಾದ ಭಿಕ್ಷಾಪಾತ್ರೆ ಬದುಕಿನ ಪ್ರತಿರೂಪ. ಇನ್ನು ಬಿಕುವಿನ ಮೂಲ ನಿಗೂಢ. ಕಾದಂಬರಿಯ ಥೀಮ್‌ ಗಳಲ್ಲಿ ನನ್ನನ್ನು ತುಂಬಾ ಆಕರ್ಷಿಸಿದ್ದು ಕಾದಂಬರಿಯ ತುಂಬಾ ಆವರಿಸಿಕೊಂಡಿರುವ ಬುದ್ಧ ಪ್ರಜ್ಞೆ ಮತ್ತು ಪರಿಸರ ಪ್ರಜ್ಞೆ. ಪುಸ್ತಕದ ಐದನೇ ಪುಟದಲ್ಲಿ “ನಮ್ಮನ್ನು ಸಮೀಪಿಸಿದ ಅಥವಾ ನಾವು ಸಮೀಪಿಸಿದ ಮನುಷ್ಯರನ್ನು ಗಿಡಗಳಂತೆ ಬೆಳೆಸಬಹುದು. ನಾವು ಅಕ್ಕರೆ, ಪ್ರೀತಿಯಿಂದ ಆರೈಕೆ ಮಾಡಿದಂತೆ ಅವು ಆರೋಗ್ಯವಾಗಿ, ಎತ್ತರವಾಗಿ, ಸೊಂಪಾಗಿ ಬೆಳೆಯುತ್ತವೆ. ಗಿಡ, ಮರವಾಗಿ ಈ ಜೀವಲೋಕದಲ್ಲಿ ಬೆರೆತುಹೋಗುತ್ತದೆ.” ಎನ್ನುವ ಸಾಲುಗಳಿರುವ ಪೂರ್ತಿ ಪ್ಯಾರಾ ಮನಃಪಟಲದಲ್ಲಿ ಯಾಕೋ ಸುಮ್ಮನೆ ನಿಂತುಬಿಟ್ಟಿತು. ಈ ಕಾದಂಬರಿಯ ಎಲ್ಲಾ ಪಾತ್ರಗಳು ಓಡಾಡುವುದು, ಬದುಕುವುದು, ಬದುಕಿನ ಸಾರ್ಥಕತೆ ಕಂಡುಕೊಳ್ಳುವುದು ಬುದ್ಧನಂತೆಯೇ ಕಾಡಿನ ಮಧ್ಯೆಯೇ! ಜೊತೆಗೆ ಕಾಡಿನಲ್ಲಿ ಜೀವನೋಪಾಯಕ್ಕೆ ಉತ್ಪನ್ನಗಳನ್ನು ತೆಗೆದುಕೊಂಡರೂ ಅದು ಬರಿದಾಗದಂತೆ ನೋಡಿಕೊಂಡು ಮತ್ತೆ ತುಂಬಿಸುವ ಪ್ರಕ್ರಿಯೆಯ ಪಾಠ ಮತ್ತು ಬದುಕಿನ, ಕೃಷಿಯ ಪಾಠಗಳು ಪುಸ್ತಕದ ತುಂಬಾ ನಮಗೆ ಯಥೇಚ್ಚವಾಗಿ ಓದಲು ಸಿಗುತ್ತವೆ.

ಬಡತನ, ಈ ಪುಸ್ತಕದಲ್ಲಿ ಚರ್ಚಿತವಾಗಿರುವ ಮತ್ತೊಂದು ಥೀಮ್.‌ ಬಡತನ ಒಂದು ಸಮಸ್ಯೆಯಾಗಿ ಉಳಿದಿದೆ ಎಂದ ಮೇಲೆ ಅದಕ್ಕೆ ಪರಿಹಾರ ಕಂಡುಕೊಂಡು ಬದುಕು ರೂಪಿಸಿಕೊಳ್ಳುವ ಬಗೆ ಅನನ್ಯ. ಬಡತನ ಅಳಿದು ಬದುಕು ಅರಳಿದ ಮೇಲೆ ಬದುಕನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯುವುದು ಹಾಗು ಆ ನಿಟ್ಟಿನಲ್ಲಿ ಬರುವ ಭಾವನಾತ್ಮಕ ಸಂಘರ್ಷಗಳಿಂದ ಮುಕ್ತಿ ಹೊಂದಿ ಸಾರ್ಥಕತೆಯ ಪಥದೆಡೆಗೆ ಸಾಗಲು ಹವಣಿಸುವ ಕಾರ್ಯವನ್ನು ಈ ಕಾದಂಬರಿಯ ಪ್ರತೀ ಪಾತ್ರಗಳು ಮಾಡುತ್ತವೆ. ತಮ್ಮ ಜೀವನದಲ್ಲಿ ಕಂಡುಕೊಂಡ ಅನೇಕ ಸತ್ಯಗಳನ್ನು ಲೇಖಕರು ಆಧ್ಯಾತ್ಮಿಕ ದೃಷ್ಟಿಕೋನದಲ್ಲಿ ಹಲವು ಉಪಮೆಗಳ ಮೂಲಕ ಪುಸ್ತಕದ ಉದ್ದಕ್ಕೂ ಹೇಳುತ್ತಾ ಹೋಗಿದ್ದಾರೆ. ಬಹುಶಃ ಬುದ್ದನ ತತ್ವಗಳನ್ನು ಮೈಗೂಡಿಸಿಕೊಂಡವರಿಂದ ಮಾತ್ರ ಈ ತರಹ ಉತ್ಕೃಷ್ಟ ಮಟ್ಟದ ಚಿಂತನೆಗಳನ್ನು ಒಂದೆಡೆ ಹೀಗೆ ಕಾದಂಬರಿಯ ರೂಪದಲ್ಲಿ ಕಟ್ಟಿಕೊಡಲು ಸಾಧ್ಯವೇನೋ ಅನಿಸುತ್ತದೆ. ಪ್ರಪಂಚದ ಯಾವುದನ್ನೂ ಸಂಗ್ರಹಿಸಬೇಡ ಎನ್ನುತ್ತಲೇ ಬೌಲ್‌ ರೂಪದ ಕಾದಂಬರಿಯಲ್ಲಿ ಮೂರ್ತಿಯವರು ಸಂಗ್ರಹಿಸಿಕೊಟ್ಟಿರುವ ವಿಚಾರ ಎಲ್ಲಾ ಕಾಲಕ್ಕೂ ಸಲ್ಲುವಂತಹ ವಿಚಾರಗಳಾಗಿವೆ. ಈ ವಿಚಾರಗಳು ಓದಿನ ಮೂಲಕ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ದಾಟಿಸುವ ಕೆಲಸವಾಗಬೇಕಿದೆ. ಬದುಕಲ್ಲಿ ನೋವನ್ನೇ ಉಂಡು, ನೋವನ್ನೇ ಹೊದ್ದು ಮಲಗಿರುವವರಿಗೆ ಬದುಕೆಂದರೆ ಬರೀ ನೋವಷ್ಟೇ ಅಲ್ಲ ನಲಿವಿನ ಆಗರ ಎನ್ನುವುದ ಮನದಟ್ಟು ಮಾಡುವ ಹಾಗು ಆ ನಲಿವಿನ ಪಥದೆಡೆಗೆ ಕರೆದೊಯ್ಯುವ ಗುರುಪರಂಪರೆ ನಮ್ಮಗಳ ನಡುವೆ, ಬುದ್ಧಪ್ರಜ್ಞೆ ನಮ್ಮೊಳಗೆ ಉದಯವಾಗಬೇಕಾದ ಅವಶ್ಯಕತೆ ಇದೆ.

-ಡಾ. ನಟರಾಜು ಎಸ್.‌ ಎಂ.

ಪುಸ್ತಕ: ಬೌಲ್‌ (ಕಾದಂಬರಿ)

ಪ್ರಕಾಶಕರು: ಕಿರಂ ಪ್ರಕಾಶನ, ಬೆಂಗಳೂರು

ಪ್ರತಿಗಳಿಗಾಗಿ ಸಂಪರ್ಕಿಸಿ: 7090180999

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x