ಬೆರಗು ಹುಟ್ಟಿಸುವ ಬೇತಾಳ: ರಾಜಶ್ರೀ. ಟಿ. ರೈ. ಪೆರ್ಲ

ಊರ ದೇವರ ಜಾತ್ರೆ ಬಂತು ಎಂದರೆ ಒಂಥರಾ ತನು ಮನದಲ್ಲಿ ಹೊಸ ಹುರುಪು ಹುಟ್ಟಿಕೊಳ್ಳುತ್ತದೆ. ಹಳೇಯ ನೆನಪುಗಳು, ಊರಿಗೆ ಬರುವ ಅಥಿತಿಗಳ ಸ್ವಾಗತದ ತಯಾರಿ. ಅದರಲ್ಲೂ ಧಕ್ಷಿಣ ಕನ್ನಡ ಕಾಸರಗೋಡು ಈ ಭಾಗದಲ್ಲಿ ದೇವಸ್ಥಾನದ ಜಾತ್ರೆಯೆಂದರೆ ಒಂದು ಬಗೆಯ ಸಾಂಸ್ಕøತಿಕ ಉತ್ಸವವೇ ಸರಿ.ಅಲ್ಲಿ ಎಲ್ಲವೂ ಉಂಟು ಎನ್ನುವ ಹಾಗೆ. ಪ್ರತೀ ದಿನ ನಿಗದಿತ ಹೊತ್ತಿಗೆ ನಡೆಯುವ ಪೂಜೆ ಮತ್ತು ಇತರ ನಿತ್ಯ ನೈಮಿತ್ತಿಕ ಕ್ರಿಯೆ ವಿಧಿಯನ್ನು ಬಿಟ್ಟರೆ ಕೆಲವು ಹಬ್ಬದ ಸಮಯಕ್ಕೆ ಸಣ್ಣ ಸಂಭ್ರಮ. ಆದರೆ ಜಾತ್ರೆ ಬಂತೆಂದರೆ ಹಾಗಲ್ಲ. ಇಡೀ ದೇವಸ್ಥಾನದ ಪರಿಸರವೇ ಜಗಮಗಿಸುತ್ತದೆ. ಜಾತಿ ಮತ ಮರೆತ ಸಾಮೂಹಿಕ ಸಂಭ್ರಮ. ವರ್ಷಕ್ಕೊಮ್ಮೆ ಆ ದಿನ ನೋಡಿಯೇ ಬರುವ ಖಾಯಂ ನೆಂಟರು ಮತ್ತು ದೂರದೂರಿನಲ್ಲಿ ನೆಲೆನಿಂತ ಪರಿವಾರದವರು.

ಜಾತ್ರೆ ಎಂದ ಕೂಡಲೆ ಗುಡಿಯೊಳಗಿನ ದೇವರು ಒಮ್ಮೆಗೆ ಹೊರಬಂದು ನಮ್ಮ ನಡುವೆ ಓಡಾಡುವ ಸಂಭ್ರಮ ಹುಟ್ಟುವುದು ಉತ್ಸವ ಮೂರ್ತಿಯಿಂದ. ದಿನ ಹೊರಗಿನಿಂದಲೇ ಒಳಗಿಣುಕಿ ದೇವರನ್ನು ನಾವು ನೋಡಬೇಕಾದರೆ, ನಮ್ಮ ನಡುವೆ ಮೂರೋ ಐದೋ ದಿನವೋ ಆತನೇ ಓಡಾಡುವುದು ಎಂದರೆ ಭಕ್ತಿಯಿಂದ ಮನಸ್ಸಿಗೆ ರೋಮಾಂಚನ. ಈ ಸಂಭ್ರಮವನ್ನು ಹೆಚ್ಚಿಸುವುದು ದೇವರ ಉತ್ಸವ ಮೂರ್ತಿಯ ಜೊತೆಗೆ ಬರುವ ಇತರ ವಿಶೇಷತೆಗಳು. ರಾಜಗಂಭೀರ್ಯದಿಂದ ಮುಂದೆ ನಡೆಯುವ ದೇವರ ಬಸವ,(ಹೋರಿ), ಅದರ ಹಿಂದೆ ಕಮಾನುಗಳು, ಪಕ್ಕಿ ನಿರ್ಸಾನಿ, ಅದರ ಹಿಂದೆ, ಕೊಂಬು ವಾಳಗದವರು, ಅವರ ಹಿಂದೆ ಚೆಂಡೆಯವರು, ಅವರೆಲ್ಲರ ಹಿಂದಿನಿಂದ ಅಟ್ಟೆಯಲ್ಲಿ ಸಿಂಗಾರಗೊಂಡ ದೇವರ ಉತ್ಸವ ಮೂರ್ತಿಯನ್ನು ಹೊತ್ತವರು ಮತ್ತು ದೇವರ ಹಿಂದೆ ಬೊಳ್ಗುಡೆ (ಛತ್ರಿ) ಹಿಡಿಯುವವರು. ಕೊನೆಗೇ ಊರಿನ ಭಕ್ತ ಜನರ ಸಮೂಹ. ಆದರೆ ದೇವರ ಬಲಿ ನಡೆಯುವಾಗ ಇವರೆಲ್ಲರಿಗಿಂತ ಮೊದಲು ನಮಗೆ ಥಟ್ಟಂತ ಎದುರಾಗುವುದು ಬೃಹತ್ ಗಾತ್ರದ ಚೆಲುವ ಚೆನ್ನಿಗ ತಟ್ಟಿರಾಯ. ಅದು ಹೆಂಗಸಾದರೂ ಗಂಡಸಾದರೂ ಹೆಸರು ಒಂದೇ ತಟ್ಟಿರಾಯ. ತಟ್ಟನೆ ನೋಡಿದರೆ ಬಡಗಿನ ತಟ್ಟಿ ಕಿರೀಟ ಇರಿಸದ ಯಕ್ಷಗಾನದ ವೇಷ. ಧಕ್ಷಿಣ ಕನ್ನಡದಿಂದೀಚೆ ಕಾಸರಗೋಡು ಪರಿಸರದಲ್ಲಿ ಇದರ ಹೆಸರು ಬೇತಾಳ. ಹೆಸರಲ್ಲಿ ಮಾತ್ರವಲ್ಲ, ಅದರ ಸ್ವರೂಪವೂ ಬೇರೆ. ದೇವರ ಬಲಿ ನಡೆಯುವಾಗ ಎಲ್ಲರಿಂದ ಮುಂದೆ ಕಾಣಿಸಿಕೊಳ್ಳುವುದು ಇವನೇ. ಇವನು ಒಂದು ರೀತಿಯಲ್ಲಿ ಗದ್ದೆಯ ನಡುವೆ ನಿಲ್ಲಿಸಿದ ಬಿದಿರು, ಹುಲ್ಲುಗಳಿಂದ ಮಾಡಿದ ಬೆರ್ಚಪ್ಪ ಅಥವಾ ಬೆದರು ಬೊಂಬೆಯ ಹಾಗೆ. ಆದರೆ ಚಲನೆ ಉಂಟು.

ಬೇತಾಳ ಎಂದಾಗ ಇದು ಶಿವನ ಒಂದು ರೂಪವನ್ನೋ ಇಲ್ಲ ವಿಕ್ರಾಮಾಧಿತ್ಯನನ್ನು ಸವಾಲುಗಳಿಂದ ಕಾಡುವ ಬೇತಾಳನ ರೀತಿಯ ಭಯ ಹುಟ್ಟಿಸುವ ರೂಪದ ಕಲ್ಪನೆಯನ್ನೋ ನಮ್ಮ ಮನಸ್ಸಿಗೆ ತಂದು ಬಿಡಬಹುದು. ಆದರೆ ಇಲ್ಲಿರುವ ತಟ್ಟಿರಾಯ ಅಥವಾ ಬೇತಾಳ ಅಲಂಕಾರದೊಂದಿಗೆ ಸಿಂಗಾರಗೊಂಡ ಸುರ ಸುಂದರಾಂಗಿ ಅಥವಾ ಸುರ ಸುಂದರ. ದೇವರು ಗರ್ಭಗುಡಿಯಿಂದ ಹೊರಬರಬೇಕಾದರೆ ಛತ್ರ ಹಿಡಿಯುವವರು ಇರಲೇಬೇಕು. ಹಾಗೆಯೇ ಈ ಭಾಗದಲ್ಲಿ ಸಾಧಾರಣವಾಗಿ 5 ದಿನ ಜಾತ್ರೆ ನಡೆಯುವ ದೇವಸ್ಥಾನಗಳಲ್ಲಿ ಎಲ್ಲಾ ಕಡೆ ಈ ತಟ್ಟಿರಾಯನಿದ್ದೇ ಇದ್ದಾನೆ. ಕುಂಬಳೆ ಕಣಿಪುರ ಗೋಪಾಲಕೃಷ್ಣ ದೇವಸ್ಥಾನ ಪೆರಡಾಲ, ಕಾವು, ಈಶ್ವರಮಂಗಿಲ, ಪುತ್ತೂರು ಮುಂತಾದ ಕಡೆಗಳಲ್ಲಿ ನಾವು ಇದನ್ನು ಕಾಣಬಹುದು. ಬಜಕೂಡ್ಲು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೊದಲು ಇತ್ತು, ಆದರೆ ಈಗಿಲ್ಲ. ಅದರಲ್ಲೂ ವಿಶೇಷವಾಗಿ ಪುತ್ತೂರಿನಲ್ಲಿ ಹೆಣ್ಣು ಗಂಡೂ ಎರಡೂ ಬೇತಾಳಗಳಿವೆ. ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತಟ್ಟಿರಾಯ ಸೇವೆ ಎಂಬ ವಿಶೇಷ ಸೇವೆ ನಡೆಯುತ್ತದೆ. ದೇವರ ಉತ್ಸವ ಮೂರ್ತಿ ಇಲ್ಲದೇ ಬರೇ ಜೋಡು ತಟ್ಟಿರಾಯಗಳ ಕುಣಿತವಿರುತ್ತದೆ. ಈಚೆ ಕಡೆ ಇದಿಲ್ಲ. ಉಪ್ಪುಂದದಲ್ಲೂ ಜೋಡು ತಟ್ಟಿರಾಯಗಳಿವೆ.

ಕಾಸರಗೋಡು ಅಥವಾ ಕುಂಬಳೆ ಸೀಮೆ ಎಂದು ಪರಿಗಣಿಸಲ್ಪಡುತ್ತಿದ್ದ ಪ್ರದೇಶದಲ್ಲಿ ಹಿಂದೆ ದೇಲಂಪಾಡಿ ಭಾಲಕೃಷ್ಣ ತಂತ್ರಿಗಳ ತಂದೆ ಸುಬ್ರಾಯ ತಂತ್ರಿಗಳು ಇದನ್ನು ಮಾಡಿಸುತ್ತಿದ್ದರಂತೆ. ಆಗೆಲ್ಲಾ ಬೆತ್ತದಲ್ಲಿ ಆಕೃತಿಯನ್ನು ಮಾಡಿ ಅದಕ್ಕೆ ಬಟ್ಟೆಯನ್ನು ಹೊದಿಸಿದರೆ, ತಲೆಯನ್ನು ಅಚ್ಚು ಬೆಲ್ಲ ಮತ್ತು ಆವೇ ಮಣ್ಣು ಬೆರೆಸಿ ಮಾಡುತ್ತಿದ್ದರಂತೆ. ಅಲ್ಲದೇ ಹಳೇಯ ಬೇತಾಳನ ಕತ್ತಿನ ಭಾಗ ನೀಳವಿರುತ್ತಿತ್ತು.ಈಗ ಇದನ್ನು ಮಾಡಲು ಆಧುನಿಕ ವಿಧಾನಗಳು ,ವಸ್ತುಗಳು ಬಳಕೆಯಾಗುತ್ತಿದೆ. ಈಗ ಪ್ಲಾಸ್ಟರ್ ಓಪ್ ಪ್ಯಾರಿಸ್ ನಿಂದ ತಲೆಯ ಭಾಗವನ್ನು ಮಾಡುತ್ತಾರೆ. ಅಲ್ಲದೇ ಈಗಿನ ಬೇತಾಳದ ಕತ್ತು ಕಾಣುವುದಿಲ್ಲ .ತಲೆಯನ್ನು ಭುಜದ ಮೇಲೆ ಇರಿಸಿದ ರೀತಿ ಕಾಣಿಸುತ್ತದೆ. ಕಣಿಪುರ ದೇವಸ್ಥಾನಕ್ಕೆ ಇತ್ತೇಚೆಗೆ ಬೊಳುವಾರಿನ ಭಾವನಾ ಕಲಾ ಆಟ್ರ್ಸ್‍ನವರು 10 ಅಡಿ ಎತ್ತರದ ಕಬ್ಬಿಣದ ಪಟ್ಟಿಯ ಸುತ್ತಳತೆಯುಳ್ಳ ತಟ್ಟಿರಾಯನನ್ನು ನಿರ್ಮಿಸಿಕೊಟ್ಟಿದ್ದಾರೆ. ಅಲ್ಲದೇ ಎರಡು ವರ್ಷ ಮೊದಲು ಪೋಳ್ಯ ಶ್ರೀ ವೆಂಕಟರಮಣ ಮತ್ತು ಮಜಲುಮಾರು ಶ್ರೀ ಉಮಾಮಹೇಶ್ವರೀ ದೇವಸ್ಥಾನ ಮುಂತಾದ ಕಡೆ ತಟ್ಟಿರಾಯನನ್ನು ನಿರ್ಮಿಸಿಕೊಟ್ಟ ಹೆಗ್ಗಳಿಕೆ ಇವರದ್ದು.

ತಟ್ಟಿರಾಯನೆಂದರೆ ಇನ್ನೇನು ಮಾಡಿಗೆ ತಲೆ ತಾಗಿಸಿಕೊಳ್ಳುತ್ತಾನೋ ಎನ್ನುವಷ್ಟು ಎತ್ತರ, ನಮ್ಮ ಅಪ್ಪುಗೆಯಲ್ಲಿ ಬಂಧಿಸಲಾಗದಷ್ಟೂ ದಪ್ಪಗಿನ ಮನುಷ್ಯ ಆಕೃತಿ. ಎರಡೂ ಕಡೆ ಜೋತು ಬಿದ್ದರುವ ನೀಳ ಬಾಹುಗಳು. ಕಾಲು ಕಾಣಿಸದಂತೆ ಕೆಳಗಿನವರೆಗೆ ಆವರಿಸಿ ನಿಂತ ರಾಜ ಪೋಷಾಕು. ತಲೆಗೇರಿಸಿರುವ ಪೇಟಾ. ಯಕ್ಷಗಾನದ ರಾಜವೇಷದಂತೆ ಭುಜ ಕತ್ತಿಗೆ ಅಲಂಕಾರ, ಮೀಸೆ ಮೊಗದಲ್ಲಿ ಹಣೆಯಲ್ಲಿ ಮೂರು ನಾಮ, ಕಿವಿಗೆ ಆಭರಣ, ಎದೆಯ ಭಾಗದಲ್ಲಿ ಕಲಶದ ಚಿತ್ರ, ಹೂವಿನ ಹಾರ, ಹಿಂಬದಿಯಿಂದ ಇಳಿಬಿಟ್ಟ ಶಾಲು. ಒಂದು ರೀತಿಯಲ್ಲಿ ಹೇಳುವುದಾದರೆ ತುಳು ಯಕ್ಷಗಾನ ಪ್ರದರ್ಶನಗಳಲ್ಲಿ ಕಂಡು ಬರುವ ರಾಜ ವೇಷ. ಒಳಗೆ ಟೊಳ್ಳು. ಅದರೊಳಗೆ ನಿಲ್ಲುವ ಮನುಷ್ಯನಿಗೆ ಕಾಣುವುದಕ್ಕಾಗಿ ಹೊಟ್ಟೆಯ ಭಾಗದಲ್ಲಿ ತೂತು ಇರಿಸಿರುತ್ತಾರೆ. ಇಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಯ ಬೇತಾಳದಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳನ್ನು ಕಾಣಬಹುದು. ಅಲ್ಲದೇ ರಾಣಿಯ ವೇಷದ ಬೇತಾಳವು ಇದೆ. ಆದರೆ ಇದನ್ನು ಹೆಣ್ಣು ಬೇತಾಳ ಗಂಡು ಬೇತಾಳ ಎಂದು ಕರೆಯುವ ಕ್ರಮವಿಲ್ಲ. ಯಾವುದಾದರೂ ಬೇತಾಳ ಅಷ್ಟೆ.

ಇದರ ರೂಪ ಅಲಂಕಾರ ಗಮನಿಸುವಾಗ ಇದು ಬಹಳ ಹಿಂದಿನಿಂದ ಬಂದ ಆಚರಣೆಯಾಗಿ ಕಾಣಿಸುವುದಿಲ್ಲ. ಬಡಗು ಮತ್ತು ತೆಂಕಿನ ಯಕ್ಷವೇಷಗಳಿಗೆ ತೀರಾ ಹತ್ತಿರದ ಹೋಲಿಕೆಯನ್ನು ಇದು ಹೊಂದಿರುವ ಕಾರಣದಿಂದ ಇದು ಯಕ್ಷಗಾನ ಕಲೆ ಈ ಭಾಗದಲ್ಲಿ ಪಾಮುಖ್ಯತೆ ಮತ್ತು ಪ್ರಸಿದ್ಧಿ ಪಡೆದುಕೊಂಡ ಸಂದರ್ಭದಲ್ಲಿ ಹುಟ್ಟಿಕೊಂಡ ಪರಿಕಲ್ಪನೆ ಎಂಬುದು ಸಮರ್ಥನೀಯ ಕಾರಣವಾಗಿ ಕಾಣಿಸುತ್ತದೆ. ಉತ್ಸವಕ್ಕೆ ಮೆರುಗನ್ನು ತರುವುದಕ್ಕೆ ಈ ರೀತಿಯ ಬೇತಾಳ ಅಥವಾ ತಟ್ಟಿರಾಯನ ಸೃಷ್ಟಿ ಆಗಿರಬೇಕು. ಈ ಕುರಿತು ಬೇರೆ ಬೇರೆ ಹೇಳಿಕೆಗಳನ್ನು ನಾವು ಗಮನಿಸಬಹುದು. ಹಿಂದೆ ರಾಜರ ಆಡಳಿತ ಇರುವಾಗ ರಾಜನೇ ಊರಿನ ಪರ್ವ ಉತ್ಸವಗಳನ್ನು ಮುಂದೆ ನಿಂತು ನಡೆಸುವವನಾದ ಕಾರಣ ಆತನೇ ದೇವರ ಬಲಿಯ ಸಂದರ್ಭ ಮುಂದೆ ನಡೆಯತ್ತಿದ್ದಿಬೇಕು.. ಆದರೆ ಕಾಲ ಉರುಳಿದ ಹಾಗೆ ಈ ಭಾಗದಲ್ಲಿ ರಾಜರ ಆಡಳಿತ ಪ್ರಾಮುಖ್ಯತೆಯನ್ನು ಕಳೆದುಕೊಂಡ ಸಂದರ್ಭದಲ್ಲಿ ಈ ರೀತಿಯ ರಾಜನ ಉಪಸ್ಥಿತಿಯನ್ನು ನೆನೆಪಿಸುವ ಬೇತಾಳನನ್ನು ಬಳಸಲಾಯಿತು ಎಂಬುದು ಕೆಲವರ ಅನಿಸಿಕೆಯಾದರೆ, ಜನಪದರಲ್ಲಿ ಇದು ದೇವರಿಗೆ ದೃಷ್ಟಿಯಾಗುವ ಕಾರಣಕ್ಕೆ ಉಪಯೋಗಿಸುತ್ತಾರೆ ಎಂಬ ಅನಿಸಿಕೆ.

ಸಿಂಗಾರಗೊಂಡ ಉತ್ಸವ ಮೂರ್ತಿಯ ಮುಂದುಗಡೆಯಿಂದ ಈ ರೀತಿಯ ಆಕೃತಿ ಬರುವಾಗ ನೋಡುಗರ ಗಮನವೆಲ್ಲ ಅದರ ಮೇಲೆ ಹೋಗುವುದು ಸುಳ್ಳಲ್ಲ. ಅಲ್ಲದೆ ಇದು ಸಾಕಷ್ಟು ಎತ್ತರ ಇರುವ ಕಾರಣಕ್ಕೆ ಬಹಳ ದೂರದಿಂದಲೇ ದೇವರ ಉತ್ಸವ ಮೂರ್ತಿಯನ್ನು ಹೊತ್ತವರು ಬರುವ ವಿಚಾರ ಉಳಿದವರಿಗೆ ತಿಳಿಯುವುದಕ್ಕೆ ಸಾಧ್ಯವಾಗುತ್ತದೆ. ದಾರಿಯಲ್ಲಿ ಎಲ್ಲರೂ ಸರಿದು ನಿಲ್ಲಬೇಕು ಎಂಬುದಕ್ಕೆ ಸೂಚನೆ ಇದು ಎಂದೂ ಕೂಡ ಹೇಳುತ್ತಾರೆ. ಹಾಗೆಂದು ಎಲ್ಲಾ ಕಡೆ ಇದು ಇರಲೇ ಬೇಕು ಎಂಬ ಕಡ್ಡಾಯವಿಲ್ಲ. ಅಲ್ಲದೇ ಕೆಲವು ಕಡೆ ಹಿಂದೆ ಇದ್ದು ಈಗ ಇಲ್ಲ ಎಂಬ ವಿವರ ಸಿಗುತ್ತದೆ. ಸಾಧಾರಣವಾಗಿ ಈ ಬೇತಾಳ ದೇವಸ್ಥಾನದಿಂದ ಹೊರಹೋಗುವ ಕ್ರಮ ಇಲ್ಲ. ದೇವಸ್ಥಾನದ ಸುತ್ತು ಅಂಗಣದಲ್ಲಿ ಇದರ ಪ್ರದಕ್ಷಿಣೆ. ಹೊರಗೆ ಕಟ್ಟೆ ಪೂಜೆಯಿದ್ದರೆ ,ಸವಾರಿಯಿದ್ದರೆ ಬೇತಾಳ ಜೊತೆಗೆ ಹೋಗುವುದಿಲ್ಲ. ಹೋಗಬಾರದು ಎಂದೇನು ಇಲ್ಲ. ಆದರೆ ಬಹಳ ಎತ್ತರ ಮತ್ತು ದೊಡ್ಡ ಆಕೃತಿಯಾದ ಕಾರಣ ಎಲ್ಲಾ ಕಡೆ ಸರಾಗವಾಗಿ ಸಂಚರಿಸುವುದು ಕಷ್ಟವಾಗುತ್ತದೆ.

ಏನೇ ಇರಲಿ. ಈ ಬೇತಾಳ ಇದ್ದರೆ ಪುಟ್ಟ ಮಕ್ಕಳ ಕಣ್ಣಿಗೆ ಹಬ್ಬ. ಜಾತ್ರೆಯ ಸಂಭ್ರಮವೂ ದ್ವಿಗುಣ. ಪುಟ್ಟ ಮಕ್ಕಳಿಗೆ ಅದೊಂದು ಅಚ್ಚರಿ. ದೇವರ ಬಲಿ ನಡೆದ ನಂತರ ಅಲ್ಲೆಲ್ಲಾದರೂ ದೇವಸ್ಥಾನದ ಹೊರ ಅಂಗಣದಲ್ಲಿ ಬದಿಯಲ್ಲಿ ಇರಿಸಿದ್ದರೆ ಹೋಗಿ ಒಮ್ಮೆ ಮುಟ್ಟಿ ಬರದೆ ಇರಲಾರರು. ಊರ ಜಾತ್ರೆಗೆ ಥಟ್ಟಂತ ಪ್ರತ್ಯಕ್ಷ ಆಗುವ ಬೇತಾಳನನ್ನು ಮರೆಯುವುದಾದರೂ ಹೇಗೆ?.

-ರಾಜಶ್ರೀ. ಟಿ. ರೈ. ಪೆರ್ಲ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x