ಇತಿಹಾಸದಲ್ಲಿ ನಡೆದ ಅತಿ ಘೋರ ಘಟನೆ ಅದು ನಡೆದದ್ದು ರಾಜಸ್ಥಾನದ ಜೋಧಪುರದಲ್ಲಿ ಅಲ್ಲಿನ ರಾಜ ಅಜಿತ ಸಿಂಹ ತನ್ನ ಅರಮನೆಯ ಸೌಂದರ್ಯ ಹೆಚ್ಚಿಸಲು ತನ್ನ ರಾಜ್ಯದ ಬಿಷ್ಣೋಯಿ ಸಮಾಜದವರೆ ಹೆಚ್ಚಾಗಿದ್ದ ಜೆಹ್ನಾದ್‌ನ ಗ್ರಾಮದಲ್ಲಿ ಸಮೃದ್ಧವಾಗಿ ಬೆಳೆದ ಖೇಜ್ರಿ ವೃಕ್ಷಗಳನ್ನು ಕತ್ತರಿಸಿ ತರುವಂತೆ ಮಂತ್ರಿ ಗಿರಿಧರ ಭಂಡಾರಿಗೆ ಆಜ್ಞೆಪಿಸಿದ.
ಸೈನಿಕರೊಡನೆ ಹೊರಟ ಮಂತ್ರಿ ಗ್ರಾಮದಲ್ಲಿ ಮರ ಕಡಿಯಲು ಮುಂದಾದ. ಸುದ್ದಿ ತಿಳಿದು ಮರಗಳನ್ನು ಮಕ್ಕಳಂತೆ ಪೋಷಿಸಿ ಬೆಳೆಸುವ ಅಲ್ಲಿನ ಬಿಷ್ಣೋಯಿ ಸಮಾಜದ ಅಮೃತಾದೇವಿ ಬಿಷ್ಣೋಯಿ ತಕ್ಷಣ ಮರಗಳ ರಕ್ಷಣೆಗೆ ತನ್ನ ಮೂವರು ಹೆಣ್ಣು ಮಕ್ಕಳ ಜೊತೆಗೆ ಧಾವಿಸಿ ಬಂದು ಯಾವುದೇ ಕಾರಣಕ್ಕೂ ವೃಕ್ಷಸಂಹಾರಕ್ಕೆ ಅವಕಾಶ ಕೊಡುವುದಿಲ್ಲ ಎಂದು ದೃಢವಾಗಿ ಪ್ರತಿರೋಧ ವ್ಯಕ್ತಪಡಿಸುತ್ತಾರೆ. ಈ ಅನಿರೀಕ್ಷಿತ ಪ್ರತಿಭಟನೆಯಿಂದ ಕೋಪಗೊಂಡ ಮಂತ್ರಿ ಗಿರಿಧರ ಭಂಡಾರಿ ಕಡಿಯುವ ಮರಗಳ ಜೊತೆ ತಾಯಿ ಮಕ್ಕಳುನ್ನು ಕೊಲ್ಲಲು ಆಜ್ಞೆ ಮಾಡುತ್ತಾನೆ. ಅಷ್ಟರಲ್ಲಿ ಅಮೃತಾದೇವಿ ಬಿಷ್ಣೋಯಿ ಹಾಗು ಅವರ ಮೂರು ಜನ ಹೆಣ್ಣುಮಕ್ಕಳು ಮರಗಳನ್ನು ತಬ್ಬಿಕೊಂಡು ಪ್ರತಿಭಟನೆ ಮಾಡುತ್ತಾ ನಿಂತುಬಿಡುತ್ತಾರೆ. ಮಂತ್ರಿಯ ಆಜ್ಞೆಯಂತೆ ಸೈನಿಕರು ಅವರ ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿ ಅಮೃತಾದೇವಿ ಮತ್ತು ಆಕೆಯ 3 ಹೆಣ್ಣು ಮಕ್ಕಳನ್ನು ಅತ್ಯಂತ ಧಾರಣವಾಗಿ ತಲೆ ಕತ್ತರಿಸಿ ಕೊಲ್ಲುತ್ತಾರೆ .
ಹತ್ಯೆಯ ಸುದ್ದಿ ತಿಳಿದು ಜೆಹ್ನಾದ್‌ನ ಸುತ್ತಮುತ್ತಲಿನ 83 ಗ್ರಾಮಗಳ ಬಿಷ್ಣೋಯಿ ಸಮಾಜದ ಜನ ಧಾವಿಸಿ ಬಂದು ಅವರು ಕೂಡ ಅದೇ ರೀತಿಯಲ್ಲಿ ಮರಗಳನ್ನು ತಬ್ಬಿ ನಿಲ್ಲುತ್ತಾರೆ ಸೈನಿಕರಿಗೆ ದೊಡ್ಡ ಮಟ್ಟದಲ್ಲಿ ಪ್ರತಿರೋಧ ಓಡ್ಡುತ್ತಾರೆ. ಈ ಅಹಿಂಸಾತ್ಮಕ ಪ್ರತಿಭಟಕರ ಮೇಲೆ ಕರುಣೆ ಇಲ್ಲದ ಅವಿವೇಕಿ ಸೈನಿಕರು ಮರಗಳನ್ನು ತಬ್ಬಿ ಹಿಡಿದುಕೊಂಡ ಬಿಷ್ಣೋಯಿ ಸಮಾಜದ ಸ್ತ್ರೀ ಪುರುಷ ವೃದ್ದ ಭೇದವಿಲ್ಲದೆ ಎಲ್ಲರನ್ನು ಅನಾಯಾಸವಾಗಿ ಅತ್ಯಂತ ಹೀನಾಯವಾಗಿ ಕಡೆದು ಕೊಲ್ಲುತ್ತಾರೆ.
ಈ ಮಹಾ ಅಪರಾಧದ ವಿಷಯ ರಾಜನ ಕಿವಿಗೆ ತಲುಪುವಷ್ಟರಲ್ಲಿ ಪರಿಸ್ಥಿತಿ ಕೈ ಮೀರಿ 363 ಬಿಷ್ಣೋಯಿ ಸಾಮಾಜದ ಬಂಧುಗಳನ್ನು ಕಡೆದು ಕೊಂದು ಪ್ರತಿಭಟಿಸಿದವರ ರಕ್ತದ ಹೊಳೆಯೆ ಹರಿಸಿ ಬಿಟ್ಟಿರುತ್ತಾರೆ. ಎಚ್ಚೆತ್ತುಕೊಂಡ ರಾಜ ತಕ್ಷಣ ಜೆಹ್ನಾದ್ ಗ್ರಾಮಕ್ಕೆ ಬಂದು ಮಂತ್ರಿ ಮಾಡಿದ ಮಹಾಪರದಕ್ಕೆ ಕ್ಷಮೆ ಕೇಳಿ ಅಲ್ಲಿ ಮರಗಳನ್ನು ಕಡೆಯದಂತೆ ಆಜ್ಞೆ ಮಾಡುತ್ತಾನೆ. ಮುಂದೆ ಜೆಹ್ನಾದ್ ಗ್ರಾಮಕ್ಕೆ ಖೇಜ್ರಿ ಮರಗಳ ರಕ್ಷಣೆಗೆನಿಂತ ಕಾರಣ ಖೇಜರ್ಲಿ ಎಂದು ಹೆಸರಾಯಿತು. ಮತ್ತು ಹತ್ಯಾಕಾಂಡದ ಸ್ಥಳವು ಬಿಷ್ಣೋಯಿ ನಂಬಿಕೆಯ ತೀರ್ಥಯಾತ್ರೆಯ ಸ್ಥಳವಾಯಿತು.
ಮರ ಕಡಿಯುವುದಾಗಲಿ ಅಥವಾ ಅದನ್ನು ಘಾಸಿಗೊಳಿಸುವುದಾಗಲಿ ಮಾಡುವುದು ಬಿಷ್ಣೋಯಿ ಧರ್ಮಕ್ಕೆ ವಿರುದ್ಧವಾದುದ್ದು. ಗುರು ಜಂಬೇಶ್ವರರು ಬಿಷ್ಣೋಯಿ ಪಂತವನ್ನು ಸ್ಥಾಪಿಸಿ 29 ಉಪದೇಶಗಳನ್ನು ನೀಡುತ್ತಾರೆ, ಸ್ಥಳೀಯ ಭಾಷೆಯಲ್ಲಿ ಬಿಸ್ ಎಂದರೆ ಇಪ್ಪತ್ತು ನೋಯಿ ಎಂದರೆ ಒಂಬತ್ತು ಬಿಸ್ ಹಾಗೂ ನೋಯಿ ಸೇರಿಸಿ ಈ ಸಮುದಾಯಕ್ಕೆ ಬಿಷ್ಣೋಯಿ ಎಂಬ ಹೆಸರಾಯಿತು. ಉನ್ತೀಸ್ ಧರ್ಮ ಕಿ ಅಖಾದಿ, ಹಿರ್ದಯ್ ಧರಿಯೋ ಜಾಯ್, ಜಂಭೇಜಿ ಕಿರ್ಪಾ ಕರಿ, ನಾಮ್ ಬಿಷ್ಣೋಯಿ ಹೋಯೆ ” ಎಂದು ಹೇಳಲಾಗುತ್ತದೆ, ಅಂದರೆ ಈ ಇಪ್ಪತ್ತೊಂಬತ್ತು ತತ್ವಗಳನ್ನು ಹೃದಯದಿಂದ ಅನುಸರಿಸುವವರು ಗುರು ಜಂಭೋಜಿ ಅವರ ಆಶೀರ್ವದ ಪಡೆಯುತ್ತಾರೆ ಮತ್ತು ಅವರು ಬಿಷ್ಣೋಯಿ ಆಗಿರುತ್ತಾರೆ ಎಂಬುದಾಗಿದೆ. 29 ಉಪದೇಶಗಳಲ್ಲಿ ಹಸಿರು ಮರಗಳನ್ನು ಕಡಿಯಬೇಡಿ, ಪರಿಸರ ಉಳಿಸಿ ಎಂಬುದು ಕೂಡ ಮುಖ್ಯ ಉಪದೇಶ ಇದೆ ಕಾರಣಕ್ಕೇ ಇವರು ಮರಗಳನ್ನು ಮಕ್ಕಳಂತೆ ಪೋಷಿಸಿ ಸಂರಕ್ಷಿಸುತ್ತಾರೆ.
ಇತಿಹಾಸದಲ್ಲೇ ಅತ್ಯಂತ ದೊಡ್ಡ ಮಟ್ಟದ ವೃಕ್ಷರಕ್ಷಣೆಗೋಸ್ಕರ ಹುತಾತ್ಮರಾದ ಇಂಥ ಮಹಾನ್ ಸಮಾಜದ ನೆನಪಿಗಾಗಿ ಖೇಜರ್ಲಿಯಲ್ಲಿ ವೀರಗಲ್ಲನ್ನು ಸ್ಥಾಪಿಸಲಾಗಿದೆ . ಹಾಗೂ ಅಮೃತ ದೇವಿ ಸ್ಮರಣಾರ್ಥ ಅಮೃತಾ ದೇವಿ ಬಿಷ್ಣೋಯ್ ವನ್ಯಜೀವಿ ಸಂರಕ್ಷಣಾ ಪ್ರಶಸ್ತಿಯು ಭಾರತ ಸರ್ಕಾರವು ವನ್ಯಜೀವಿ ಸಂರಕ್ಷಣೆಗಾಗಿ ಸ್ಥಾಪಿಸಿದ ರಾಷ್ಟ್ರೀಯ ಪ್ರಶಸ್ತಿಯಾಗಿದೆ .
1730 ಸೆಪ್ಟಂಬರ್ 11 ರಂದು ನಡೆದ ಈ ಘಟನೆಗೆ 292ವರ್ಷ ಆಗಿದೆ . 1983ರಲ್ಲಿ ಕರ್ನಾಟಕದಲ್ಲಿ ನಡೆದ ಅಪ್ಪಿಕೋ ಚಳುವಳಿಗೆಗೂ ಇದೇ ಘಟನೆ ಪ್ರೇರಣೆಯಾಗಿದ್ದು.
ಇಂದು ಇಂಥ ಹುತಾತ್ಮ ಆದರ್ಶದ ಹಿನ್ನೆಲೆ ಹೊಂದಿರುವ ನಾವುಗಳು ಮಾಡುತ್ತಿರುವುದಾದರೂ ಏನೆಂದು ಊಹಿಸಿಕೊಂಡರೆ ಮುಂದಿನ ಪೀಳಿಗೆಯ ಭವಿಷ್ಯ ಅತ್ಯಂತ ಕರಾಳವಾಗಿ ಕಾಣುತ್ತಿದೆ. ಇನ್ನೂ ಹತೋಟಿಗೆ ಬಾರದ ಕರೋನ ಮಹಾಮಾರಿ ಜಗತ್ತಿನಾದ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಕೃತಕ ಆಮ್ಲಜನಕದ ಕೊರತೆಯಿಂದ ಸಾವಿರಾರು ಜನರು ಪ್ರಾಣ ಕಳೆದುಕೊಂಡ ಘಟನೆ ನೆನಪಿರಬಹುದು. ಲೆಕ್ಕಾಚಾರದ ಪ್ರಕಾರ ಒಬ್ಬ ಮನುಷ್ಯನಿಗೆ ಪ್ರತಿದಿನ ಮೂರು ಸಿಲಿಂಡರ್ಗಳಷ್ಟು ಆಕ್ಸಿಜನ್ ಅವಶ್ಯಕತೆ ಇರುತ್ತದೆ, ಒಂದು ಸಿಲೆಂಡರ್ ಆಕ್ಸಿಜನ್ 700 ರೂಪಾಯಿಗಳು ಅಂದರೆ ದಿನಕ್ಕೆ 2100 ರೂಪಾಯಿ ಆಗುತ್ತದೆ ವರ್ಷಕ್ಕೆ 7,66,500 ರೂಪಾಯಿಗಳು….! ಒಮ್ಮೆ ಊಹಿಸಿ ನಮ್ಮ ಈಗಿನ ಜೀವಿತಾವಧಿಯವರೆಗೂ ಅದು ಎಷ್ಟು ಲಕ್ಷಗಳಷ್ಟು ಬೆಳೆಬಾಳುವ ಆಕ್ಸಿಜನ್ ಬಳಸಿರಬಹುದು..! ಸದ್ಯಕ್ಕೆ ಇಷ್ಟೆಲ್ಲಾ ಬೆಳೆಬಾಳುವ ಆಕ್ಸಿಜನ್ ಅನ್ನು ಮರಗಳು ಪುಕ್ಕಟ್ಟೆಯಾಗಿ ಮನುಷ್ಯನಿಗೆ ದಯಪಾಲಿಸುತ್ತಿವೆ.!
ಒಂದು ಅಂದಾಜಿನ ಪ್ರಕಾರ ಪ್ರಪಂಚಾದ್ಯಂತ ವರ್ಷಕ್ಕೆ 100 ಕೋಟಿಗೂ ಹೆಚ್ಚಿನ ಮರಗಳ ಹನನವಾಗುತ್ತಿದೆ ಪರಿಣಾಮವಾಗಿ ಜಾಗತಿಕ ತಾಪಮಾನ, ನೆರೆಹಾವಳಿ ಹವಾಮಾನ ವೈಪರಿತ್ಯಗಳಂತದ್ದನ್ನು ಈಗಾಗಲೇ ಅನುಭವಿಸುತ್ತಿದ್ದೇವೆ ಇದು ಇದೇ ರೀತಿ ಮುಂದುವರೆದರೆ ಸಾಕ್ಷಾತ್ ಭಗವಂತನು ನಮ್ಮನ್ನು ರಕ್ಷಿಸಲಾರ ಎಂಬುದತ್ತೂ ಸತ್ಯ ಏಕೆಂದರೆ ಪ್ರಕೃತಿಯ ಮುಂದೆ ಭಗವಂತನು ಕುಬ್ಜ! ಹಾಗಾಗಿ ಇನ್ನಾದರೂ ಎಚ್ಚೆತ್ತುಕೊಂಡು ಪರಿಸರ ಉಳಿಸುವ ಪ್ರಯತ್ನ ಮಾಡಲೇಬೇಕು.
ನಮ್ಮ ಇವತ್ತಿನ ಉಳಿವಿಗಾಗಿ ಅಂದು ಹುತಾತ್ಮರಾದ ಇಂಥ ಪರಿಸರ ಪ್ರೇಮಿಗಳನ್ನು ನೆನಪಿಟ್ಟುಕೊಂಡು ನಾವೆಲ್ಲರೂ ವೃಕ್ಷಗಳನ್ನು ರಕ್ಷಿಸಿ ಪೋಷಿಸಿ ಬೆಳೆಸುವ ಸಂಕಲ್ಪ ಮಾಡೋಣ ಮುಂದಿನ ಪೀಳಿಗೆಗಾಗಿ ಪ್ರಕೃತಿಯನ್ನು ಉಳಿಸೋಣ.
-ಮಿತಾಕ್ಷರ