ಲೇಖನ

ಗಾಡಿ ಹೋಟೆಲ್: ಎಸ್.ಗಣೇಶ್


ಸದಾಶಿವನಿಗೆ ಒಂದು ದೊಡ್ಡ ಚಟವಿತ್ತು. ತಿನ್ನೋ ಚಟ. ಯಾವಾಗಲೂ ಬಾಯಿ ಆಡ್ತಾನೇ ಇರಬೇಕು. ಅವರು, “ಗಾಡಿ ಹೋಟೆಲ್” ತಿಂಡಿ ಚಪಲ. ಮನೆಯಲ್ಲಿನ ಮೇವು ಹಿಡಿಸುತ್ತಿರಲಿಲ್ಲ. ಹೊರಗಡೆಯ ಯಾವುದೇ ತಿನಿಸು ಬಿಡುತ್ತಿರಲಿಲ್ಲ. ಬೇರೆ ಊರಿಗೆ ಹೋದರೂ.. ರಸ್ತೆ ಬದಿ ಕಾಣುತ್ತಿದ್ದ ಗಾಡಿ ಹೋಟೆಲ್ ಕಡೆಯೇ ಗಮನ. ಊಟದ ವಿಷಯಕ್ಕೆ ಎಷ್ಟೋ ಸಲ, ಮಡದಿ ಗಂಗಾಂಬ ಜೊತೆ ಜಗಳವಾಡಿಕೊಂಡು ಕಳೆದ ವರ್ಷ 12 ಬಾರಿ “ಗಾಡಿ ಹೋಟೆಲ್” ಜೊತೆ 1 ಬಾರಿಗೆ 1 ವಾರದಂತೆ ಸಂಸಾರ ಮಾಡಿದ ರೆಕಾರ್ಡ ಇದೆ. ತಿಂಗಳಲ್ಲಿ 1 ವಾರ ಈ ಪರ್ಯಾಯ ಸಂಸಾರ ಖಾಯಂ ಆಗಿತ್ತು. “ಹೋಟೆಲ್ ಮೇ ಖಾನ.. ಘರ್ ಮೇ ಸೋನಾ”. ಈ ವಾರ 13ನೇ ಬಾರಿಯ ಸಂಸಾರ.

ಹೀಗೆ ಇರುವಾಗ ಒಂದು ದಿನ ಭಾನುವಾರ ಸದಾಶಿವನ ಮನೆಗೆ ಅವನ ಮಾವ ಜಗನ್ನಾಥರ ಆಗಮನವಾಯಿತು.. ಇಬ್ಬರಲ್ಲೂ ಬಹಳ ಆತ್ಮೀಯತೆ ತುಂಬಿ ತುಳುಕುತ್ತಿತ್ತು..
ಓ.. ಮಾವನವರೇ, ಹೇಗಿದ್ದೀರ? ಯಾವಾಗ ಬಂದ್ರಿ? ಟ್ರೈನ್ ನಲ್ಲಿ ಬಂದ್ರೋ? ಬಸ್‍ನಲ್ಲಿ ಬಂದ್ರೋ?
ಅದು.. ನಾನು ಮಧ್ಯಾಹ್ನವೇ ಬಂದೆ.. ಅಂಕನಾಥೇಶ್ವರ ಶಟಲ್ ಬಸ್.. ನಮ್ ಹಳ್ಳಿಯಿಂದ ಅತೀ ವೇಗವಾಗಿ ಬರೋದು ಅದೇ ಬಸ್. ಒಂದೊಂದು ಸಲ ಎಕ್ಸಪ್ರೆಸ್ ಬಸ್‍ನೇ ಓವರ್‍ಟೇಕ್ ಮಾಡ್ತಾನೆ ಅಂತೀನಿ. ಭೀಮಸಂದ್ರ ಬ್ರಿಡ್ಜ್ ಮೇಲೆ ಬರ್‍ರ್‍ರ್…. ಅಂತ ಬರ್ತಾನೇ ನೋಡಿ.. ಬಸ್‍ನ ರಭಸಕ್ಕೆ ಆ ಬ್ರಿಡ್ಜ್ ಒಮ್ಮೆ ಎಕ್ಕ-ಸಕ್ಕ.. ಎಕ್ಕ-ಸಕ್ಕ ಅಂತ ಡ್ಯಾನ್ಸ್ ಮಾಡುತ್ತೆ. ಅದನ್ನ ನೋಡೋಕೆ ಎರಡು ಕಣ್ಣು ಸಾಲದು. ನೋಡೋರ್ಗೆ ಹಬ್ಬ..

ಹಬ್ಬ ಅಂತೀರಲ್ಲ ಮಾವ, ಸ್ವಲ್ಪ ಯಾಮಾರಿದ್ರೆ ಹಬ್ಬ ಹೋಗಿ ತಿಥಿ ಆಗತ್ತೆ ಅಷ್ಟೇ..
ಅಯ್ಯೋ ಬಿಡ್ತು ಅನ್ರಿ.. ಬರೀ ಅಮಂಗಲ ಮಾತು ಆಡ್ಬೇಡಿ.. ನಮ್ ಅಪ್ಪ ಬರೋದೆ ಅಪರೂಪ, ಅಂತದ್ರರಲ್ಲಿ ಏನದು ತಿಥಿ-ಪತಿ ಅಂತ!
ಹೂಂ.. “ಅದು ತಿಥಿ-ಪತಿ ಅಲ್ಲ ಪತಿ-ತಿಥಿ” ಅನ್ನು ಅಂತ ಮನಸ್ಸಿನಲ್ಲೇ ಗೊಣಗಿಕೊಂಡ ಸದಾಶಿವ
ಏನಂದ್ರಿ..? ಕೇಳಿಸಲಿಲ್ಲ ಸ್ವಲ್ಪ ಜೋರಾಗಿ ಹೇಳಿ.. ನಮ್ಮ ಅಪ್ಪನೂ ಕೇಳಿಸ್ಕೋತ್ತಾರೆ ಅಂದಳು ಗಂಗಾ..

ಅದೇ ಕಣೇ ಆ ಬಸ್ ಡ್ರೈವರ್ ನಿಮ್ ಅಮ್ಮನಿಗೆ ಪತಿ-ತಿಥಿ ಮಾಡಿಸ್ತಿದ್ದಾ ಅಂದೇ..? ಮಾವ ನೀವು ಬೇಜಾರ್ ಅಗ್ಬೇಡಿ ಅಯ್ತಾ?
ನಿಮಗೆ ಹಿಡ್ಕೊಂಡ್ ಬಾರಿಸ್ಬೇಕು.. ಅಮೇಲೆ ನೊಡ್ಕೊತ್ತೀನಿ.. ಅಂತ ಹೇಳಿ ಕೋಣೆ ಒಳಗೆ ಸರಕ್ಕನೆ ಸೇರಿಕೊಂಡಳು.
ಸರಿ, ಹೇಗಿದ್ದೀರಾ ಮಾವ? ಅತ್ತೇ ಹೇಗಿದ್ದಾರೆ? ಅವರನ್ನು ಕರ್ಕೊಂಡು ಬರ್ಬಹುದಿತ್ತಲ್ಲಾ?

ಹೂಂ.. ನಾನು ಚೆನ್ನಾಗಿದ್ದೀನಿ ಸದಾಶಿವ. ನಮ್ ಮನೆ ಹಿತ್ಲಲ್ಲಿ ಒಂದು ಬಾಳೆಗಿಡ ಇತ್ತು, ಅದರಲ್ಲಿ ಒಂದು ಗೊನೆ ಬಿಟ್ಟಿತ್ತು.. ಹಾಗೆ ನಿಮಗೂ ಒಂದು “ಚಿಪ್ಪು” ಕೊಟ್ಟು ಹೋಗೋಣ ಅಂತ ಬಂದೆ. ನಿಮ್ ಅತ್ತೆನೂ ಬರ್ತಿದ್ಲೂ.. ಅವಳಿಗೂ ಮಗಳನ್ನ ನೋಡಿ ತುಂಬಾ ದಿನ ಆಯ್ತು ಅಂತಿದ್ಲು.. ಇವತ್ತು ನಮ್ಮೂರಲ್ಲಿ ತುಂಬಾ ಬಿಸಿಲಿತ್ತು.. ಬಿಸಿಲು ಕಂಡವಳೇ ಹಪ್ಪಳ ಒಣ ಹಾಕಿದ್ಲು.. ಅದಕ್ಕೆ ಬಂದಿಲ್ಲ.
ನನ್ನ ಮೇಲಿನ ಪ್ರೀತಿಯಿಂದ ಪಾಪ ಅಷ್ಟು ದೂರದಿಂದ ಒಂದು “ಚಿಪ್ಪು” ಬಾಳೆಹಣ್ಣು ಹಿಡ್ಕೊಂಡು ತಂದ್ರಲ್ಲ ನನಗೆ ಬಹಳ ಖುಷಿ ಆಯ್ತು ಮಾವ.. ನಿಮಗೆ ಎಷ್ಟು ಒಳ್ಳೆಯ ಮನಸ್ಸು..ಬಾಳೆ ಹಣ್ಣಿಗಿಂತ ಅದರ ಹಿಂದಿನ ಉದ್ದೇಶ ಮುಖ್ಯ ನೋಡಿ ಮಾವ.. ಅಮೇಲೆ.. ನಿಮ್ ಮಗಳು ಬೇಜಾರು ಮಾಡ್ಕೋಂಡ್ಲು ಅಂತ ನೀವ್ ಬೇಜಾರ್ ಮಾಡ್ಕೊಬೇಡಿ ಮಾವ.. ಅಯ್ಯೋ.. ಅವಳು ಹೇಗೆ ಅಂತಾ ನನಗಿಂತ ನಿಮಗೆ ಚೆನ್ನಾಗೇ ಗೊತ್ತಲ್ವಾ..

ನಾನೇ ಸಾಕಿದ ಗಿಣಿ.. ಹದ್ದಾಗಿ ನಿಮ್ಮನ್ನ ಕುಕ್ತಿದೆ..? ಪಾಪ.. ಇಪ್ಪತ್ತ್ಮೂರುವರೆ ವರ್ಷ ನಮ್ಮ ಮನೆಯ ಪಂಜರದಲ್ಲಿ ಇದ್ದ ಗಿಳಿಯನ್ನ ನಿಮಗೆ ಒಪ್ಪಿಸಿದೆ.. ಅಜೀವ ಪರ್ಯಂತ ಚೆನ್ನಾಗಿ ನೋಡ್ಕೋಳಿ.. ಸ್ವಲ್ಪ ಮುದ್ದು ಬಿಟ್ರೆ ಕಚ್ಚೋದು ಇಲ್ಲ.. ಹಾಯೋದು ಇಲ್ಲ..

ಹೂಂ.. ಅವಳು ಕಚ್ಚೋಕೆ ಅಥವಾ ಹಾಯೋಕೆ ಪ್ರಾಣಿನಾ..? ಅದು ಗಿಣಿ ಬರೀ ಕುಟುಕತ್ತೆ ಅಷ್ಟೇ.. ಪರವಾಗಿಲ್ಲ.. ನನಗೆ ಹನ್ನೆರಡು ಮುಕ್ಕಾಲು ವರ್ಷದಿಂದ ಅಭ್ಯಾಸವಾಗಿದೆ.. ಅವಳು ಕುಟುಕಿದ್ರೆ ಒಂದು ರೀತಿ ಆನಂದ.. ಒತ್ತಡ ಇಳಿಕೆಯ ಭಾವ.. ಮಾವ, ಹೋದ ವರ್ಷ ನನಗೆ ಇದ್ದ 160/110 ಬಿ.ಪಿ. ಈಗ 140/100ಕ್ಕೆ ಬಂದಿದೆ.. ಹೀಗೆ ಆದರೆ ಹೈ ಬಿ.ಪಿ. ಹೋಗಿ ಮುಂದೆ ಅದು ಲೋ ಬಿ.ಪಿ. ಆಗಬಹುದು.. ಒಟ್ನಲ್ಲಿ ಡೇಂಜರ್ ಜೋನ್ ನಲ್ಲಿ ಇದ್ದೀನಿ.

ಅದ್ ಸರಿ ಸದಾಶಿವ.. ಇದೇನು ಭಾನುವಾರ ಆಫೀಸ್‍ಗೆ ರಜಾ ತಾನೆ.. ಮನೆಯಲ್ಲೆ ಇರೋದು ಬಿಟ್ಟು ಮಧ್ಯಾಹ್ನದಿಂದ ಎಲ್ಲಿಗೆ ಹೋಗಿದ್ರಿ?
ಅದೇನಿಲ್ಲ ಮಾವ.. ಪಾಪ ಗಂಗೆ ದಿನಾ ನನಗೆ ಅಡುಗೆ ಮಾಡಿ ಬೇಜಾರು ಆಗಿರುತ್ತೆ ಅಲ್ವಾ.. ಅದಕ್ಕೆ ತಿಂಗ್ಳಲ್ಲಿ ಒಂದು ವಾರ ನಾನು ಹೊರಗೆ ತಿಂದು ಬರ್ತೀನಿ ಅಷ್ಟೇ.. ಮಧ್ಯಾಹ್ನ 6ನೇ ಕ್ರಾಸ್‍ನಲ್ಲಿರುವ ರಾಘವೇಂದ್ರ ಫಾಸ್ಟ್ ಫುಡ್‍ನಲ್ಲಿ ಊಟ ಮುಗಿಸಿ.. ಅಲ್ಲೆ ಕಾವೇರಿ ಪಾರ್ಕನಲ್ಲಿ ಹಾಯಾಗಿ ರೆಸ್ಟ್ ಮಾಡಿ.. ಸಂಜೆ ಒಂದು ಕಪ್ ಕಾಫಿ ಜೊತೆ ಮೂರು ಮೆಣಸಿಕಾಯಿ ಬಜ್ಜಿ ಹೊಡೆದು.. ರಾತ್ರಿ ಊಟ ಅನ್ನಪೂರ್ಣೇಶ್ವರಿ ಕ್ಯಾಂಟೀನ್‍ನಲ್ಲಿ ಮುಗಿಸಿ ಬಂದೆ.. ಆಹಾ.. ಆಹಾ.. ಅನ್ನಪೂರ್ಣೇಶ್ವರಿ ಕ್ಯಾಂಟೀನ್‍ನಲ್ಲಿ ತೆಂಗಿನಕಾಯಿ ಚೆಟ್ನಿ ಮಾಡ್ತಾರೆ ಮಾವ.. ನೆನಸಿಕೊಂಡ್ರೆ ಬಾಯಲ್ಲಿ ನೀರು ಬರುತ್ತೆ.

ಅಲ್ಲಾ ಸದಾಶಿವ.. ಈ ರೀತಿ ಹೋಟೆಲ್ ಊಟ ತಿಂದ್ರೆ ನಿಮ್ಮ ಆರೋಗ್ಯ ಗತಿ ಏನಪ್ಪಾ? ಗಂಗಾ ಏನು ಹೇಳಲ್ವಾ?
ಪಾಪ ಅವಳು ಹೇಳ್ತಾಳೆ, “ನನಗೆ ಹೋಟೆಲ್ ತರ ಅಡುಗೆ ಮಾಡೋಕೆ ಬರಲ್ಲ ಬೇಕಾದ್ರೆ ನಾನು ಮಾಡಿದ್ನ ತಿನ್ನಿ ಇಲ್ಲಾಂದ್ರೆ ಎದ್ಹೋಗಿ” ಅಂತ, ನನಗೆ ಕಾಲೇಜು ಟೈಮ್‍ನಿಂದ ಹೋಟೆಲ್ ಅಡಿಕ್ಷನ್.. ಬಿಡೋಕೆ ಆಗ್ತಾ ಇಲ್ಲಾ ಮಾವ..

ಬೇಡ ಸದಾಶಿವ, ಹೊಟೆಲ್ ಚಟ ಬಿಟ್ಟು ಮನೆ ಊಟ ಮಾಡೋದು ಅಭ್ಯಾಸ ಮಾಡ್ಕೊಳ್ಳಿ.
ಸರಿ ಮಾವ, ನಿಮ್ಮೂರಿಂದ ಸ್ವಲ್ಪ ಹಪ್ಪಳ ಕಳ್ಸಕೊಡಿ.. ಅಮೇಲೆ ನೋಡೋಣ.. ನನಗೆ ನಿದ್ದೆ ಬರ್ತಾ ಇದೆ, ಮಿಕ್ಕಿದ್ದು ನಾಳೆ ಮಾತಾಡೋಣ ಅಂತ ಹೇಳಿ ಕೋಣೆ ಪ್ರವೇಶ ಮಾಡಲು ತೆರಳಿದ..
ಬೇಡ ಸದಾಶಿವ, ಆ ಹಪ್ಪಳಕ್ಕಿಂತ “ಗಾಡಿ ಹೋಟೆಲ್” ತಿಂಡಿನೇ ವಾಸಿ ಅನ್ಸತ್ತೇ.. ಗುಡ್ ನೈಟ್ ಅಂತ ಹೇಳಿ ಜಗನ್ನಾಥ ದೀಪ ಆರಿಸಿದ.

-ಎಸ್.ಗಣೇಶ್


ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಗಾಡಿ ಹೋಟೆಲ್: ಎಸ್.ಗಣೇಶ್

  1. ತಿಂಡಿಪೋತ ಸದಾಶಿವನ ಪುರಾಣ ಚೆನ್ನಾಗಿ ಪ್ರವಚನ ಮಾಡಿದ್ದೀ ದೋಸ್ತಾ….. ಸೂಪರ್….

Leave a Reply

Your email address will not be published. Required fields are marked *