ಸೋಲಿಗರ ಜೊತೆ ಒಂದು ದಿನ: ಶೈಲಜೇಷ ಎಸ್.

ಮಳೆಗಾಲದ ಕಾಡು ಹೇಗೆ ಇರುತ್ತದೆ ಎಂದು ನಾನು ಹೇಳ ಬೇಕಿಲ್ಲ ಅಲ್ಲವೇ, ಅಂತ ಒಂದು ಸ್ಥಳ ಚಾಮರಾಜ ಜಿಲ್ಲೆಯ ಬಿಳಿಗಿರಿ ರಂಗನ ಬೆಟ್ಟ. ಸಾಮಾನ್ಯವಾಗಿ ಎಲ್ಲರೂ ಬಾಲ್ಯದಲ್ಲಿ ಪ್ರಯಾಣ ಅಂತ ಹೋಗುತ್ತಿದ್ದದ್ದೆ ವರುಷಕ್ಕೆ ಒಮ್ಮೆಯೋ ಅಥವಾ ಎರಡು ಬಾರಿಯೊ ಅಷ್ಟೆ, ಈಗ ಹಾಗಿಲ್ಲ ಪ್ರತಿವಾರದ ಕೊನೆಯ (weekend) ದಿನಗಳನ್ನು ಪ್ರಯಾಣದ ದಿನಗಳೆಂದೆ ಘೋಷಿಸಬಹುದು ಅಷ್ಟರ ಮಟ್ಟಿಗೆ ಎಲ್ಲರೂ ಪ್ರಯಾಣದಲ್ಲಿ ಇರುವವರೆ.

ಕಾಡು, ಮೇಡು, ಚಾರಣ, ತೀರ್ಥಕ್ಷೇತ್ರ, ಪ್ರೇಕ್ಷಣೀಯ ಸ್ಥಳಗಳ, ರೆಸಾರ್ಟ್, ಹೋಮ್ ಸ್ಟೇಗಳು ಹೀಗೆ ಎಲ್ಲೆಲ್ಲೂ ಜನರಿಂದ ತುಂಬಿ ತುಳುಕುತ್ತಿರುತ್ತದೆ. ಇದರಲ್ಲಿ ನನ್ನ ಆಯ್ಕೆ ಚಾರಣ.ಕಾಡು,ಬೆಟ್ಟ,ಗುಡ್ಡ ವಿಶೇಷವಾಗಿ ಪಶ್ಚಿಮ ಘಟ್ಟಗಳು ಎಂದರೆ ಪ್ರಾಣ.ಈಗ ಈ ಸ್ಥಳಗಳು ನನ್ನಂತಹ ಚಾರಣಿಗರ,ಪ್ರಯಾಣಿಕರ weekend stress busterಗಳಾಗಿ ಅವು ನಲುಗುತ್ತಿವೆ,ಕುಸಿಯುತ್ತಿವೆ,ಸವೆಯುತ್ತಿವೆ, ಕಸದ ತೊಟ್ಟಿಗಳಾಗಿವೆ.ನಮಗೆ ಅದರ ಸೌಂದರ್ಯ ಸವಿಯಬೇಕು ಆನಂದಿಸ ಬೇಕು ಅಷ್ಟೇ ಅದನ್ನು ಉಳಿಸಿ ಮುಂದಿನ ತಲೆಮಾರಿಗೆ ಬಿಟ್ಟು ಕೊಡಬೇಕು ಎನ್ನುವ ಯಾವ ಉಮೇದಿಯು ನಮಗಿಲ್ಲ. ಅಷ್ಟೇ ಅಲ್ಲ ಚಾರಣ ಅನ್ನುವುದು ಹೆಸರಿಗಷ್ಟೆ ಅದು ಸವಲತ್ತುಗಳನ್ನು ಕೇಳುತ್ತದೆ.

ಆದರೆ ಕಳೆದ ಭಾನುವಾರ ಹೋಗಿದ್ದ ಪ್ರಯಾಣ ಸ್ವಲ್ಪ ಭಿನ್ನವಾಗಿತ್ತು ಬಿಳಿಗಿರಿ ರಂಗನ ಬೆಟ್ಟದ ( BRT) ‘ಸೋಲಿಗರ ಜೊತೆ ಒಂದು ದಿನ’ ಇಂತಹ ಆಲೋಚನೆಗಳು ಬರುವುದೇ ಪೀಪಲ್ ಟ್ರೀ ನ ನಮ್ಮ ಶಿವಶಂಕರ್ ಅವರಿಗೆ. ಸೋಲಿಗರನ್ನು ಕಾಡಲ್ಲಿ, ಅದರ ಅಂಚಿನಲ್ಲಿ, ಕಾಡಿನ ಪಕ್ಕದ ಊರಿನ ಸಂತೆಗಳಲ್ಲಿ ಕುತೂಹಲದಿಂದ ಅವರನ್ನು ನೋಡುತ್ತಿದ್ದೆವು.ಮೊನ್ನೆ ಇಡೀ ದಿನ ಅವರ ಜೊತೆ ಇರುವ ಅವಕಾಶ ಸಿಕ್ಕಿದ್ದು ನಿಜಕ್ಕೂ ಖುಷಿ ಕೊಟ್ಟಿತು. ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಪ್ರಯತ್ನಿಸಿದವರು ಡಾಕ್ಟರ್ ಸುದರ್ಶನ ಅವರು ಇಂದಿಗೂ ಅಲ್ಲಿನ ಸೋಲಿಗರ ಆರಾಧ್ಯ ದೈವ. ಹೇಗೆ?

ಸೋಲಿಗರ ಮುಖ್ಯಸ್ಥರೊಬ್ಬರು ಹೇಳುತ್ತಾರೆ ಹಿಂದೆ ನಾವು ಹಲ್ಲು ಉಜ್ಜುತಿರಲಿಲ್ಲ, ಮುಖ ತೊಳೆಯುತಿರಲಿಲ್ಲ, ಸ್ನಾನ ಮಾಡುತ್ತಿದ್ದದ್ದೆ ವರ್ಷಕೊಮ್ಮೆ ಈಗಲು ಕೆಲವು ಹಿರಿಯರು ವರುಷಕೊಮ್ಮೆ ಮಾತ್ರ ಸ್ನಾನ‌ ಮಾಡುತ್ತಾರೆ. ಸಾರ್ವಜನಿಕರಿಂದ ನಾವು ದೂರ ಇದ್ದೆವು ನಮಗೆ ವಿದ್ಯೆ ದೂರದ ಮಾತಾಗಿತ್ತು, ಮನೆಗಳೆಂದರೆ ಹುಲ್ಲಿನಮಾಡು ಗುಡಿಸಲು, ಈಗಲೂ ನೋಡಲು ಒಂದೆರಡು ಸಿಗುತ್ತವೆ. ಆಹಾರ ಪದ್ದತಿಯಲ್ಲಿ ರಾಗಿ ಪ್ರಧಾನ,ಜೊತೆಗೆ ಕಾಡಿನಲ್ಲಿ ಸಿಗುವ ಸೊಪ್ಪುಗಳು, ಹಣ್ಣುಗಳು, ನಿತ್ಯ ಎರಡು ಹೊತ್ತು ಮಾತ್ರ ಆಹಾರ ಸೇವನೆ ಮಾಡುವುದು ಬೆಳಗ್ಗೆ ಹಾಗೂ ಸಂಜೆ ಅದು ಆರರ ಒಳಗೆ, ಮಧ್ಯಾಹ್ನ ಟೀ, ನಾವು ಹಾಡಿಗೆ ಹೋದಾಗ ತರಕಾರಿ ಮಾರುವವರು ಕಂಡರು ಬಹುಶಃ ಆಹಾರ ಪದ್ದತಿ ಕೂಡ ಬದಲಾಗಿದೆ. ದಿ.ಪುನೀತ್ ರಾಜಕುಮಾರ್ ಅವರ ಪೋಟೋಗೆ ಹಾರ ಹಾಕಿ ಸೋಲಿಗ ಕಲಾ ತಂಡದ ಶ್ರದ್ಧಾಂಜಲಿ ತಿಳಿಸಿದ್ದು ಹಾಡಿಯಲ್ಲಿ ಕಂಡು ಬಂತು. ಕನ್ನಡ ಸಿನಿಮಾದ ನಂಟು ಇವರಿಗೆ ಇದೆ ಹಲವು ಸಿನಿಮಾಗಳಿಗೆ ಹಾಡಿದ್ದಾರೆ ಅಂತೆ ಇತ್ತೀಚೆಗೆ ದಿ.ಸಂಚಾರಿ ವಿಜಯ್ ಅವರ ಕೊನೆ ಸಿನಿಮಾ ತಲೆದಂಡಕ್ಕೂ ಇವರು ಹಾಡಿದ್ದಾರೆ.ಪ್ರಸಿದ್ಧ ಜಾನಪದ ಹಾಡುಗಳನ್ನು ಚೆಂದವಾಗಿ ಹಾಡುತ್ತಾರೆ.

ಸೋಲಿಗರ ಹಾಡಿಗೆ ಕರೋನ ಕಾಡಲಿಲ್ಲವಂತೆ,ಲಸಿಕೆ ಹಾಕಿಸಿಕೊಂಡವರು ಬದುಕುವುದಿಲ್ಲ ಎಂಬ ಗಾಳಿಸುದ್ದಿ ಹರಡಿ ಹಾಡಿ ಜನ ಹೆದರಿ ಬಿಟ್ಟಿದ್ದರಂತೆ ಆನಂತರ ಅವರೆ ಕರೋನ ಮೇಲೆ ಹಾಡು ಕಟ್ಟಿ ಜನಪ್ರಿಯಗೊಳಿಸಿದ್ದಾರೆ. ಈಗ ನಮ್ಮ ಮಕ್ಕಳು ಶಾಲೆಗೆ ಹೋಗುತ್ತಾರೆ ನಮ್ಮಲ್ಲಿ ಸಾಕಷ್ಟು ವಿದ್ಯಾವಂತರು ಇದ್ದಾರೆ ಪಿ ಹೆಚ್ ಡಿ ಮಾಡಿದವರು ಇದ್ದಾರೆ.ನಮಗೆ ಕಲಿಸಿದವರು ನಾಗರೀಕತೆಗೆ ತಂದವರು ಡಾಕ್ಟರ್ ಸುದರ್ಶನ್. ಜೊತೆಗೆ ನಮ್ಮ ನಂಬಿಕೆ,ಸಂಪ್ರದಾಯಗಳನ್ನು ಹಾಗೆ ಉಳಿಸಿ ಕೊಂಡಿದ್ದೇವೆ. ಬಿಳಿಗಿರಿ ರಂಗ ಸ್ವಾಮಿ ನಮ್ಮ ಬಾವ ನಮ್ಮ ಸೋಲಿಗರ ಮೊದಲ ಹಿರಿಯ ಮಗಳನ್ನು ಅಂದರೆ ನಮ್ಮ ಅಕ್ಕನನ್ನು ಬಿಳಿಗಿರಿರಂಗನಿಗೆ ಕೊಟ್ಟು ಮದುವೆ ಮಾಡಿದ್ದು, ಅವರು ಮದುವೆ ಆದ ಪದ್ದತಿಯಲ್ಲೇ ನಾವು ಮದುವೆ ಆಗುತ್ತಿರುವುದು, ಒಂದು ಮದುವೆಗೆ ಆಗುವ ಖರ್ಚು ಕೇವಲ ಹನ್ನೆರಡು ಕಾಲು ರುಪಾಯಿ ಅಷ್ಟೇ ಈಗ ಅದು ಹನ್ನೆರಡುವರೆ ರುಪಾಯಿ ಆಗಿದೆ.

ಮದುವೆ ಹೇಗೆ ಆಗುತ್ತದೆ ಎಂದರೆ ಮಾರ್ಚ ತಿಂಗಳ ಆಸು ಪಾಸಿನಲ್ಲಿ ರೊಟ್ಟಿ ಹಬ್ಬ ಅಂತ ಮಾಡುತ್ತೇವೆ ಅಂದು ಮದುವೆ ವಯಸ್ಸಿಗೆ ಬಂದ ಹುಡುಗರು ನೃತ್ಯ ಮಾಡುತ್ತಾರೆ ಊರಿನ ಸೋಲಿಗರೆಲ್ಲಾ ಸುತ್ತಲೂ ಸೇರುತ್ತಾರೆ ಮುಖ್ಯವಾಗಿ ಮದುವೆ ವಯಸ್ಸಿಗೆ ಬಂದ ಹೆಣ್ಣು ಮಕ್ಕಳು, ಅವರಿಗೆ ಯಾವ ಹುಡುಗನ ನೃತ್ಯ ಇಷ್ಟವಾಗುತ್ತದೊ ಅವನಿಗೆ ಕಲ್ಲು ಹೊಡೆದು ಆಯ್ಕೆ ಮಾಡಿಕೊಳ್ಳುತ್ತಾರೆ ಆನಂತರ ಆಯ್ಕೆ ಆದ ಹುಡುಗ ಹುಡುಗಿಯನ್ನು ಕೇಳುತ್ತಾನೆ ಯಾಕೆ ನನ್ನನ್ನೆ ಆಯ್ಕೆ ಮಾಡಿಕೊಂಡೆ ಎಂದು ಆಗ ಅವಳು ಅವನಲ್ಲಿ ತನಗೆ ಹಿಡಿಸಿದನ್ನು ಹೇಳುತ್ತಾಳೆ ಆನಂತರ ಅವರಿಬ್ಬರೂ ಕಾಡಿನೊಳಗೆ ಓಡಿ ಹೋಗುತ್ತಾರೆ ( ಈಗ ಸಂಬಂಧಿಕರ ಮನೆಗೆ ಹೋಗುತ್ತಾರೆ) ಒಂದೆರಡು ದಿನ ಬಿಟ್ಟು ಮತ್ತೆ ಅವರ ಹಾಡಿಗೆ ಬರುತ್ತಾರೆ ಬಿಳಿಗಿರಿ ರಂಗನನಿಗೆ ಹನ್ನೆರಡುವರೆ ರುಪಾಯಿ ಕಾಣಿಕೆ ಅರ್ಪಿಸಿ ತಮ್ಮ ದಾಂಪತ್ಯ ಜೀವನ ಪ್ರಾರಂಬಿಸುತ್ತಾರೆ.

ಇಲ್ಲಿನ ಹೆಣ್ಷುಮಕ್ಕಳು ಲೀಲಾಜಾಲವಾಗಿ ನೂರೈವತ್ತು ಇನ್ನೂರು ಅಡಿ ಮರಗಳನ್ನು ಹತ್ತುತ್ತಾರೆ,ವಯಸ್ಸಾದವರು ಕೊಡಲಿಯಿಂದ ಸೌದೆ ಸೀಳುತ್ತಾರೆ,ಕಾಡಿಗೆ ಹೋದಾಗ ಸಮಯ ತಿಳಿಯಲು ಯಾವುದೋ ಗಿಡವನ್ನು ಅವಲಂಬಿಸುತ್ತಾರೆ,(ಈಗ ಮೊಬೈಲ್ ಬಳಸುತ್ತಾರೆ), ಈಗ ಮುಖ್ಯವಾಹಿನಿಗೆ ಬಂದಿದ್ದಾರೆ, ಈಗ ಸೋಲಿಗ ಸೊಗಡು ಸವೆಯುತ್ತಿದೆ ಎಂದು ಸೋಲಿಗ ಮುಖ್ಯಸ್ಥ ಆತಂಕ ವ್ಯಕ್ತಪಡಿಸುತ್ತಾರೆ,ಇವರು ಮದುವೆ ಆದಾಗ ಕಾಡಿನ ಒಳಕ್ಕೆ ಓಡಿ ಹೋಗಿ ಇಪ್ಪತ್ತು ದಿನ ಇದ್ದರು ಎಂದು ಅಲ್ಲಿನ ಹೆಣ್ಣು ಮಗಳೊಬ್ಬರು ಹೇಳಿದರು. ಮೂರ್ನಾಲ್ಕು ಅವರ ಸಾಂಪ್ರದಾಯಿಕ ನೃತ್ಯ ಮಾಡಿದರು ನಾವು ಅವರೊಟ್ಟಿಗೆ ಹೆಜ್ಜೆ ಹಾಕಿದೆವು. ಅದು ಒಂದು ಸುಂದರ ಅನುಭವ. ಇದು ಬಿಳಿಗಿರಿರಂಗನ ಬೆಟ್ಟದ ಸೋಲಿಗರ ಕಿರು ಪರಿಚಯ ಅಷ್ಟೆ ,ಇವರ ಬದುಕಿನ ಮೇಲೆ ಸಾಕಷ್ಟು ಜನ ಅಭ್ಯಾಸ ಮಾಡಿ ಪಿ ಹೆಚ್ ಡಿ ಮಾಡಿದ್ದಾರೆ, ಸಾಕಷ್ಟು ಪುಸ್ತಕಗಳು ಬಂದಿದೆಯಂತೆ.

ಅಲ್ಲಿಂದ ಹೊರಡುವಷ್ಟರಲ್ಲಿ ಮುಸಂಜೆ ಸಮಯ ಮುಂದೆ ಕೆ.ಗುಡಿಗೆ ಹೋದೆವು (ಅಲ್ಲಿ ಸಫಾರಿ ಅನುಕೂಲ ಇದೆ). ಮೂರುನಾಲ್ಕು ಗುಂಪುಗಳಾಗಿ ನಡೆಯುತ್ತಾ ಒಂದು ಅರ್ಧ ತಾಸು ಪಕ್ಷಿಗಳ ವೀಕ್ಷಣೆ ಮಾಡಿದೆವು. ಸಾಕಷ್ಟು ಜಾತಿಯ ಪಕ್ಷಿಗಳು ದೊರೆತವು, ಹವ್ಯಾಸಿ ಪಕ್ಷಿವೀಕ್ಷಕನಾದ ನನಗೆ ಸಂಬ್ರಮವೊ ಸಂಬ್ರಮ. ಇನ್ನೇನು ಚಳಿಗಾಲದ ವಲಸೆ ಹಕ್ಕಿಗಳು ಬರುವ ಸಮಯದ ಹೊಸ್ತಿಲಲ್ಲಿ ಇದ್ದೇವೆ.

-ಶೈಲಜೇಷಎಸ್.‌


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x