-೭೨-
ಕತ್ಲು ಕವಿಕಂಡಿತ್ತು
ಕಾರಮುಳ್ಳು ಚುಚ್ಚುಸ್ಕಂಡು
ಕುಂದ್ರಕಾಗ್ದೆ ನಿಂದ್ರಕಾಗ್ದೆ
ನಳ್ತ ಮುಕ್ಕರಿತ
ನಿಂತು ಕಾಲೂರಿ ಕುಂಟ್ತಿದ್ದ
ಆ ಅಯ್ನೋರ ಕೈಹಿಡ್ಕಂಡು
ಮನ್ಗಂಟ ಬುಟ್ಟು
ಎಡಗೈಲಿ ನನ್ನಿಡ್ಕಂಡು
ದಾಪುಗಾಲಾಕಿ ಬಂದ ಮಾರ
ಅದೇ ರಬುಸ್ದಲ್ಲಿ
ನನ್ನ ತೂದಿ
ತಡ್ಕ ಮೂಲ್ಗ ಎಸ್ದು
ಜಗುಲಿಗ ತಿಕ ಊರ್ದ
ಲಾಟಿನ್ಲಿ ಬತ್ತಿ ಮ್ಯಾಕ್ಕೆದ್ದು
ಬತ್ತಿ ಮ್ಯಾಲಿನ್ ಬೆಳುಕ್ಕುನ್ ನಾಲ್ಗ
ಕೆಂಪಾಗಿ ಮೇಲ್ಚಾಚಿ ವಾಲಾಡ್ತ
ಹೊಗ ಸಯಿತ್ವಾಗಿ
ಬೆಳ್ಕು ಬೆಳುಗ್ತಾ ಇತ್ತು
ಆ ಮಾರನೆಡ್ತಿ
ಆ ಬೆಳ್ಕ ನೋಡ್ತ
ಲಾಟಿನ್ ಕೀಲಿ ಹಿಡ್ದು
ಬತ್ತಿ ಇಳಿಸಿ
ಈಚ್ಗ ಬಂದು
ಲೊಚಲೊಚ ಲೊಚಗುಡ್ತ
ಬಂದವ್ನ್ ಮುಂದ ಕುಂತು
ಕಿರಿಕಿರಿ ಎಟ್ಟಿ
ಎರುಡು ಬಾಟ್ಲಿ ಹೆಂಡನ ಕುಕ್ಕಿ
‘ಆ ಕಿತ್ತೊದ್ ಎಕ್ಡುವೇ
ಕಾಲ್ ಕಾಲ್ದಿಂದೂ
ಯಾವ್ ಕಾಲ ಆಯ್ತು ಅವ ಮಾಡ್ಸಿ
ತೂ..
ಒಂದ್ಜೊತ ಮಾಡುಸ್ಕಳಕ ಗತಿ ಇಲ್ವ’
ಅಂತ ಹೆಂಡುದ್ ಬಾಟ್ಲಿ ಎತ್ತಿ
ಅಂತ್ಗಂಡು ಗಟಗಟ ಹೀರಿ
ಔವ್ವ್..ಔವ್ವ್.. ಢ್ರ್.. ಅಂತ ತೇಗುದ್ಲು
ಮಾರ ಅವ್ಳ್ ಕೈಲಿದ್ದ ಬಾಟ್ಲ ಈಸ್ಕಂಡು
ತಾನೂ ಅಂತ್ಗಂಡು ಗಟಗಟ ಹೀರಿ
ಔವ್ವ್.. ಔವ್ವ್.. ಢ್ರ್.. ಅಂತ ತೇಗಿ
ಅವ್ಳ ನೋಡ್ತ ಒಳಕ ಕೈತೋರುಸ್ತ
‘ಕೊರಬಾಡು ಸುಟ್ಟಿದ್ರ ತತ್ತ ಇಲ್ಲಿ
ಹಂಗೆ ಕಾರದುಡಿ ಹೊಂಟ್ಗ ಬಾ..’
ಅನ್ನದ್ರಲ್ಲಿ ಅವ ಎದ್ದೋಗಿ
ಒಲ ಕೆಂಡಲಿ ಸುಟ್ಟು
ಕಾರ ಹೊಂಟಿರ ಕೊರಬಾಡ
ತಂದು ಅವುನ್ ಕೈಗಿಟ್ಟು
ತಾನೂ ಒಂದು
ಕೊರಬಾಡು ತುಂಡ ಬಾಯ್ಗಿಕ್ಕಂಡು
ಅಗಿತ ರಸ ಹೀರಿ ಚಪ್ಪುರುಸ್ತ
ಇನ್ನೊಂದು ಬಾಟ್ಲ ಎತ್ತಿ ಹಿಡುದ್ಲು
ಮಾರ
ಜೋಬಿಂದ ಬೀಡಿ ತಗ್ದು
ಬಾಯ್ಗಿಟ್ಟು ಕಡ್ಡಿಗೀರಿ
ಒಂದು ದಮ್ಮು ಎಳ್ದು
ಹೆಡ್ತಿ ಕುಡಿತಿದ್ದ ಬಾಟ್ಲ ಕಿತ್ಕಂಡು
ದಮ್ಮೆಳ್ದ ಬೀಡಿಯ
ಎಡಗಾಲ ಹೆಬ್ಬೆಳ್ ಸಂದ್ಗ ಸಿಕ್ಸಿ
ಬಾಟ್ಲ ಮ್ಯಾಕ್ಕೆತ್ತಿ ಗಟಗಟ ಹೀರಿ
ಔವ್ವ್..ಔವ್ವ್.. ಢ್ರ್.ಢ್ರ್.. ನ ತೇಗಿ
ಒಂದು ಕೊರಬಾಡು ತುಂಡ
ತಿರುಗ್ಸಿ ಉರುಗ್ಸಿ ಕಣ್ಣಾಡ್ಸಿ
ಬಾಯ್ಗಾಕಂಡು ಕರುಮ್ ಕರುಮ್ ಅನ್ಸಿ
ಕುಡ್ದ ನಸ್ಗ ಅಗಿತಾ
ರಸ ಹೀರಿ ನುಂಗ್ತಾ
‘ಆ ಆಯ್ನೋರು ಗತಿ ಇಲ್ದೆ ಇಲ್ಲ ಕನ
ನಿಂಗೇನ್ ಗೊತ್ತು ಆ ಕತಾ..
ಇಂತ ಎಕ್ಡನ.. ಒಂದಲ್ಲ ಎರಡಲ್ಲ,
ಏನ ಹೇಳು.. ಒಂದಲ್ಲ ಎರಡಲ್ಲ
ನೂರ್ಜೊತ.. ನೂರ್ಜೊತ ಬೇಕಾರು
ಮಾಡುಸ್ಕಳ ತಾಕತ್ತದ ಕನ…
‘ಆದ್ರ..
ನೂರ್ಜೊತ ಮಾಡಿಟ್ಗಂಡು
ಮೆಟ್ಟದು ದೊಡ್ದಲ್ಲ ಕನ…
ಚೆಂದ್ಗಾಂದಾಗಿ ಕಾಣ್ತ
ಅವ್ರ್ ಮೆಟ್ಟಿ ಮೆರಿಲಿ ಅಂತ
ಅವ್ರ್ಗೂ ಗೊತ್ತಿಲ್ದೆ
ಮಾಡ್ಸಿ ಕೊಟ್ಟರಲ್ಲ
ಅವ್ರ್ ನೆಪ್ಗಾದ್ರು
ಈ ಎಕ್ಡನ ಜ್ವಾಪಾನ ಮಾಡದು
ದೊಡ್ದು ಕನ..
ಈ ಎಕ್ಡ ಕತ ಹಿಂದ ದೊಡ್ದೆ ಅದ ಕನ..
ಆ ಕತ ನಿಂಗೊತ್ತಾ..’ ಅಂತ
ಎಡಗಾಲ ಹೆಬ್ಬೆಟ್ಗ
ಸಿಕ್ಕುಸ್ಕೊಂಡಿದ್ದ ಬೀಡಿನ
ತಗ್ದು ಬಾಯ್ಗಿಟ್ಟು
ಮ್ಯಾಕ್ಕೆದ್ದು ತೂರಾಡ್ತ
ಮೆಲ್ ಮೆಲ್ಗ ಕಾಲೂರ್ತ
ಜಗುಲಿ ಕಂಬ ಹಿಡ್ಕಂಡು
ಹಂಗೆ ಗ್ವಾಡ ಹಿಡ್ಕಂಡು
ಹಿಡ್ದ ಆ ಗ್ವಾಡನ ಸವುರ್ತಾ ಸವುರ್ತಾ
ನನ್ಕಡನೇ ಬತ್ತ ಇರಗಾಯ್ತು..
ಈ ಮಾರ
ಆ ತ್ವಾಟ್ದಿಂದನುವ ನ್ಯಾತಾಡುಸ್ಕಂಡು
ಎಡಗೈಲಿ ಹಿಡ್ಕ ಬಂದು
ಈ ತಡ್ಕ ಮೂಲ್ಗ
ತೂದಿ ಎಸ್ದಿದ್ದ ನನ್ನ ಎತ್ಗಂಡು
ಸೂರ್ಲಿ ನ್ಯಾತಾಡ್ತಿದ್ದ
ಲಾಟೀನ್ ಬೆಳುಕ್ಕ
ಹಿಡ್ದು ನೋಡ್ತಾ..
ಹಂಗ ನ್ಯಾತಾಡ್ತಿದ್ದ
ಆ ಲಾಟೀನ್ನೂ ಕೆಳಕ ಎತ್ಗಂಡೂ
ಸೇಯ್ತಿದ್ದ ಬೀಡಿನ ಕೆಳಗಿಟ್ಟು
ತಡಿ ಸರಿಸಿ
ಆ ಲಾಟೀನ
ಮೊಕುದ್ ಮುಂದ್ಕ ಇಟ್ಕಂಡೂ..
ಕಾಲ್ದಿಂದೂ ಹಾಸ್ಕೊಂಡೇ
ಜೀವ ಉಳಿಸ್ಕಂಡು
ಉಸುರಾಡ್ತಿದ್ದ
ಆ ಗೋಣಿ ತಾಟ್ಗ ತಿಕ ಊರೀ..
ಕೆಮ್ತ ಕ್ಯಾಕುರ್ಸ್ತ
ಮ್ಯಾಣನುವ
ರಂಪಿನುವ
ದಾರನುವ
ಹೊಲ್ಗ ಮೊನನುವ
ಕೊಳ ನೀರು ತುಂಬಿರ
ಡಬ್ಬಿನುವ
ದಂಡುಕ್ಕ ಎತ್ಗಂಡು
ಕುಡ್ದ ನಸ್ದಲ್ಲಿ
ಬುಟ್ಟೂ ಬುಟ್ಟೂ
ಎಳಿತಿರ ಕಣ್ಣ ನೆಟ್ಗಂಡು
ನನ್ನ ಹದ ಮಾಡಕ ಕುಂತ್ನಲ್ಲೊ..
ಕಾಲೋ ನನ್ ಒಡಿಯ ಕಾಲಯ್ಯೋ
ನಂಗೂ ಗೊತ್ತಿಲ್ದೆ
ಆ ಚಂದ್ರವ್ವೊರ್ ಕೊಟ್ಟ ಕಾಣ್ಕ ದೆಸಲಿ
ಅದೆ ದೆಸ್ಗ ಆ ನಿನ್ ಕಣ್ದೆಸಲಿ
ನಿನ್ಗ ನಾ ಕಾಣಲಾಗಿ
ಆಗ ಕಂಡ್ರೂ
ಈ ರೂಪನ ಆಗ ರೂಪ್ಸಕಾಗ್ದೆ
ಆ ಜೊತಗಾರರ ಜೊತಲೇ
ಇದ್ದಂಗೆ ಇದ್ದ ನನ್ನ
ಅದಂಗೇ ಕಣ್ಲಿ ಕಣ್ಣಿಟ್ಟು
ಜ್ವಾಪಾನ ಮಾಡಿ ಮೂಲಲಿಟ್ಟೂ..
ಅದಾದ್ಮೇಲ ಅದೇನ ಎತ್ಲಾ ಕಾಣ್ದಗಾಗಿ
ಅದೆಸ್ಟ್ ಹಗ್ಲು ಬಂದ್ವಾ
ಅದೆಸ್ಟ್ ರಾತ್ರ ಬಂದ್ವಾ..
ಆ ಹಗುಲೂ ರಾತ್ರಗಳೊಳ್ಗ
ಅದಾದ್ದು ಅರುವಾಗ್ದೆ
ಈಗ ಅಯ್ನೋರ್ ಹೇಳುದ್ ಕತಾ ಕೇಳ್ತಾ
ನಂಗೀಗ ಎಲ್ಲ ಅರುವಾಗ್ತ
ಅವತ್ತು ನಾ ರೂಪುಗೊಂಡು
ಆ ಅಯ್ನೋರ್ ಪಾದ ಮೆಟ್ಟಿ
ಜಿರಿಕ್ಕು ಜಿರಿಕ್ಕು ಸದ್ದಾ ಮಾಡ್ತ
ಆ ಪಂಚ ಅಂಚು ಹೇಳುದ್ದೂ
ಈಗ ತಾಳ ಆಯ್ತ ಅದಲ್ಲಾ..
‘ಏ ಮುಚ್ ಬಾಯಿ…
ನಾಯಿ, ಅಯ್ನೊರ್ ನಾಯಿ ನೀನು..
‘ಬತ್ತನ ಅಂವ ಬಂದೆ ಬತ್ತನ
ಎಲ್ಲ ಸತ್ಯ ಗೊತ್ತದ..
ನನ್ ಕುಲ್ಕಾದ ಗತಿನೆ ಆಯ್ತುದ
‘ಉಂಡು ಬಿದ್ಕ ಬಾ..
ಅಂತ ಲೊಚಲೊಚ ಲೊಚಗುಡ್ತ
ತೂರಾಡ್ತ ಒಳಕ್ಕೊದ್ಲಲ್ಲೊ..
-ಎಂ. ಜವರಾಜ್
ಮುಂದುವರೆಯುವುದು….