“ಬದುಕನ್ನು ಒಮ್ಮೆ ತಿರುಗಿ ನೋಡು”. ಅಂದರೂ ಸಾಕು ಎಲ್ಲವೂ ನೆನಪಾಗಿ ಬಿಡುತ್ತದೆ.
ನಾವು ನಡೆದು ಬಂದ ದಾರಿ. ಕಷ್ಟ ಪಟ್ಟ ದಿನಗಳು, ಬದುಕಿನ ಉದ್ದಕ್ಕೂ ಸಹಿಸಿದ ಈ ಸಹನೆ, ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡಿದ ತಪ್ಪುಗಳು, ಒಪ್ಪುಗಳು. ನೋವು ನಲಿವುಗಳು. ಅತಿಯಾದ ತುಂಟಾಟ, ತಿಂದ ಏಟುಗಳು, ಗೆಳೆಯರ ಜೊತೆ ಮಾಡಿದ ಜಗಳಗಳು. ತಿನ್ನಲು ಏನು ಇಲ್ಲದಾಗ ಸಹಿಸಿಕೊಂಡ ಹಸಿವು. ಮುಗ್ಧತೆಗೆ ಜೋತುಬಿದ್ದ ಮುಗ್ಧ ಮನಸ್ಸುಗಳು. ಯಾರದ್ದೋ ಕುಹಕ ನೋಟ. ಇನ್ಯಾರದ್ದೋ ಮತ್ಸರದ ಮಾತು. ಬಡತನದ ಬವಣೆ. ಎಲ್ಲವೂ ಬಂದು ಮುತ್ತಿಕೊಂಡು ಬಿಡುತ್ತದೆ.
ಅಂದು ಮನಸ್ಸು ನೋವನ್ನು ಅನುಭವಿಸುತ್ತಿದ್ದರೂ ನಗುತ್ತಾ ಇರುತ್ತಿದ್ದ ಮುಗ್ಧ ಮುಖಗಳು. ಅಳಬಾರದು ಎಂದು ಗಟ್ಟಿಯಾಗಿ ತಡೆದುಕೊಳ್ಳುತ್ತಿದ್ದ ಕಣ್ಣೀರು. ಅತ್ತರೆ ಎಲ್ಲಿ ಎಲ್ಲರೂ ಅಪಹಾಸ್ಯ ಮಾಡುತ್ತಾರೋ ಅನ್ನುವ ನಾಚಿಕೆ. ಅದಕ್ಕಾಗಿ ಯಾರಿಗೂ ತಿಳಿಯದಂತೆ ಪಕ್ಕಕ್ಕೆ ತಿರುಗಿ ಒರೆಸುತ್ತಿದ್ದ ಕಣ್ಣೀರು. ಆ ಚಿಕ್ಕ ವಯಸ್ಸಿಗೆ ಬಂದ ಸ್ವಾಭಿಮಾನ, ನನಗೆಲ್ಲವೂ ಗೊತ್ತಿದೆ ಅನ್ನುವ ಆ ಜಂಭ. ಎಲ್ಲವನ್ನು ಅಂದಿನ ಆ ಕಾಲವೂ ಕಲಿಸುತ್ತಿತ್ತು. ನೀನು ಹೀಗೆ ಇರು ಇದೇ ಆಟವನ್ನು ಆಡು. ಇದನ್ನೆ ಮಾಡು ಅಂತ ಹಿರಿಯರು ಹೇಳುತ್ತಿರಲಿಲ್ಲ. ಮಕ್ಕಳು ಹೊರಗಿದ್ದಷ್ಟು ಹೊತ್ತು ಮಕ್ಕಳ ಯಾವ ಚಿಂತೆಯೂ ಹೆತ್ತವರ ಬಳಿ ಸುಳಿಯುತ್ತಿರಲಿಲ್ಲವೇನೋ? ಅಂದಿನ ಮಕ್ಕಳಿಗೆ ಮನೆಯಲ್ಲಿ ಸಂಪೂರ್ಣ ಸ್ವಾತಂತ್ರ್ಯ ಸಿಗುತಿತ್ತು.
ದೊಡ್ಡ ದೊಡ್ಡ ಮರ ಹತ್ತಿ ಕೀಳುತ್ತಿದ್ದ ಹಣ್ಣುಗಳು. ಕೊಂಬೆಯಿಂದ ಕೊಂಬೆಗೆ ಹಾರಿ ಜೋಕಾಲಿ ಆಡುತ್ತಿದ್ದ ಆಟಗಳು. ಅಂದು ಇದನ್ನೆಲ್ಲ ಆಡುವಾಗ ಯಾವ ಭಯವೂ ಕಾಡಿದಿಲ್ಲ. ಎಲ್ಲಿ ಜಾರಿ ಬೀಳುತ್ತೇವೋ ಕೈ ಕಾಲಿಗೆ ಗಾಯವಾಗುತ್ತದೋ ಅನ್ನುವ ಭಯ ಎಲ್ಲೂ ಇರುತ್ತಿರಲಿಲ್ಲ. ಹರಿಯೊ ನೀರಿನಲ್ಲಿ ಕಾಗದದ ದೋಣಿ ಮಾಡಿ ಬಿಡುವ ಖುಷಿಯೇ ಬೇರೆ.
ಕುಂಟೆಬಿಲ್ಲೆ, ಲಗೋರಿ, ಕಣ್ಣಾಮುಚ್ಚಾಲೆ, ಹೀಗೆ ಮಣ್ಣಲ್ಲಿ ಹೊರಳಾಡಿ ಆಡಿದ ಆಟಗಳೆಷ್ಟೊ.? ಮೈ ತುಂಬಾ ಮಣ್ಣು ಹೊತ್ತು ಬಂದರು ಅಮ್ಮನ ಗದರುವಿಕೆ ಇರುತ್ತಿದ್ದದು ಈ ಬಟ್ಟೆಯನ್ನು ನೋಡಿ ನಾನು ಹೇಗೆ ಇದನ್ನು ಮಡಿ ಮಾಡಲಿ? ಇದೊಂದೆ ಅಮ್ಮನ ಚಿಂತೆಗೆ ಕಾರಣವೇ ಹೊರತು ಎಲ್ಲಿ ಈ ಧೂಳಿನಿಂದ ಕಾಯಿಲೆ ಕಸಾಲೆ ಬರುತ್ತದೆಯೋ ಅನ್ನುವ ಅಂಜಿಕೆ ಅಳುಕುಗಳಿರುತ್ತಿರಲಿಲ್ಲ. ನಾಳೆ ಬೆಳಿಗ್ಗೆ ಎದ್ದು ಇದನ್ನು ನೀನೆ ಒಗೆದು ಹಾಕಿಬಿಡು ಅಂತ ಅಮ್ಮನ ತಾಕೀತು ಆದ ಮೇಲೆ ಇನ್ನೇನ್ನೂ ಇರುತ್ತಿರಲಿಲ್ಲ.
ಮರುದಿನ ಅದೇ ಹರಕು ಬಟ್ಟೆಯಲ್ಲಿ ಆಟ ಊಟ ಪಾಠ. ಎಲ್ಲೂ ಹೈಜೆನಿಕ್ ಅನ್ನುವ ಪದಗಳ ಬಳಕೆ ಕಾಡಿರಲಿಲ್ಲ. ಕೈ ತೊಳೆಯದೆ ತಿಂದ ತಿಂಡಿಗಳೆಷ್ಟೊ ಲೆಕ್ಕವಿಟ್ಟವರಾರು. ಹೊಟ್ಟೆನೋವು ಎಂದರೆ ಮನೆ ಮದ್ದು ರೆಡಿ. ಓಮಸತ್ವಕ್ಕೆ ಉಪ್ಪು ಹಾಕಿ ಕುಡಿದರೆ ನೋವು ಮಾಯ. ಇಲ್ಲವೇ ಹೊಕ್ಕಳಿಗೆ ಅದೇನೊ ರಸ ಹಿಂಡಿ ಹಾಗೇ ಕವುಚಿ ಮಲಗಿಸಿ ಬಿಡುತ್ತಿದ್ದರೂ. ಡಾಕ್ಟರ್ ಹತ್ತಿರ ಹೋಗುತ್ತಿದ್ದ ಪ್ರಸಂಗಗಳು ತುಂಬಾ ಕಮ್ಮಿಯೇ. ಚಿಕ್ಕ ಪುಟ್ಟ ಕಾಯಿಲೆಗಳಿಗೆ ಒಂದೆಲೆಗದ ರಸವೋ ಕಷಾಯಾವೋ ಹೊಟ್ಟೆಗೆ ಸೇರಿದರೆ ಸಾಕು ಎಲ್ಲವೂ ಮಾಯ. ಕಹಿಯೋ ಸಿಹಿಯೋ ಒಂಚೂರು ಹಟ ಮಾಡದೇ ಕುಡಿದು ಜೇನುತುಪ್ಪ ನೆಕ್ಕಿದರೆ ಮುಗಿಯಿತು. ಅಂತಹ ಕಮ್ಮಿಯೇ ಆಗದ ರೋಗಗಳು ಕಾಣಿಸಿಕೊಂಡಾಗ ಮಾತ್ರ ಊರಿನ ವೈದರ ಹತ್ತಿರ ಹೋಗುತ್ತಿದ್ದರು. ಅವರು ಕೊಡುವ ಆ ಗುಳಿಗೆಯನ್ನು ನುಂಗುವುದು ಕಷ್ಟವೇ. ಅಪ್ಪನ ಗದರುವಿಕೆಯ ನೋಟಕ್ಕೆ ಅದು ಗುಳುಂ ಆಗುತ್ತಿತ್ತು. ಅಂದು ಅಪ್ಪ ಕೈಗೆ ಸಿಕ್ಕಿದರಲ್ಲಿ ಬಾರಿಸುತ್ತಿದ್ದರು. ಬೆನ್ನ ಮೇಲಿನ ಬಾಸುಂಡೆಗೆ ಅಜ್ಜಿ ಪ್ರೀತಿಯಿಂದ ಎಣ್ಣೆ ಹಚ್ಚುತ್ತಿದ್ದ ನೆನಪುಗಳೇ ಜೀವಾಳ.
ಇನ್ನು ಶಾಲೆ ಪರೀಕ್ಷೆ ಅಂದಾಗ ನೆನಪಾಗುತ್ತಿದ್ದೇ ನಮ್ಮೂರಿನ ದೇವರುಗಳು.
ಪರೀಕ್ಷೆಗೆ ಹೇಗೆ ಬರೆದಿರುತ್ತೇವೆ ಅನ್ನುವ ಯೋಚನೆಯಿರುತ್ತಿರಲಿಲ್ಲ. ರಿಸಲ್ಟ್ ಬರುವ ದಿನ ಮಾತ್ರ ಯಾವುದೋ ಭಯ. ಆದರೂ ನಾವು ಪಾಸು ಆಗುತ್ತೇವೆ ಅನ್ನುವ ಒಂದು ಧೈರ್ಯ. ಯಾಕೆಂದರೆ ಆ ದಿನ ಊರಿನ ದೈವ ದೇವರಿಗೆ ಹರಕೆ ಹೇಳಿರುತ್ತೇವೆ. ನನ್ನನ್ನು ಪಾಸು ಮಾಡಿದರೆ ನಿಮಗೆ ಕಾಣಿಕೆ ಹಾಕುತ್ತೇವೆ. ಇಲ್ಲವೇ ಊರಿನ ಕಾರಣಿಕದ ಕೊರಗಜ್ಜನಿಗೆ ಬೀಡಾ ಇಡುತ್ತೇವೆ. ಅನ್ನುವ ಮೌನ ಪ್ರಾರ್ಥನೆಗೆ ದೇವರು ಒಲಿಯದಿರುತ್ತಾನೆಯೇ.? ಈ ಹರಕೆಯ ಫಲವೋ ಗೊತ್ತಿಲ್ಲ ದೇವರು ನಮ್ಮ ಕೈ ಬಿಡುತ್ತಿರಲಿಲ್ಲ. ದೇವರಿದ್ದಾನೆ ಅನ್ನುವ ಆ ಬಲವಾದ ನಂಬಿಕೆ ಯಾವತ್ತು ಸುಳ್ಳಾಗುತ್ತಿರಲಿಲ್ಲ.
ಮತ್ತೆ ಅದೇ ಆಟ ಬಿಸಿಲಿನ ಭಯವಿರಲಿಲ್ಲ. ಚರ್ಮದ ಬಣ್ಣ ಕಪ್ಪಾಗುತ್ತದೆ ಅನ್ನುವ ಅಂಜಿಕೆಯಿರಲಿಲ್ಲ. ಅಂದಿನ ಬಾಲ್ಯದ ನೆನಪುಗಳು ಅದೆಷ್ಟು ಮಧುರ. ಆದರೆ ಇವತ್ತು ಯಾವ ಮಕ್ಕಳು ಹೀಗೆ ಬೆಳೆಯುತ್ತಿದ್ದಾರೆ? ತಂದೆ ತಾಯಿ ಮಾಡುವ ಕಟ್ಟುನಿಟ್ಟು ಅದು ತಿನ್ನಬೇಡ ಇದು ಮುಟ್ಟಬೇಡ. ಕೈ ತೊಳೆಯದೆ ಒಂದು ವಸ್ತುವನ್ನು ಮುಟ್ಟುವಾಗಿಲ್ಲ. ಪ್ರತಿಯೊಂದಕ್ಕೂ ಹೈಜೆನಿಕ್. ಸ್ವಲ್ಪ ಹೊಟ್ಟೆ ನೋವು ಅಂದ್ರು ನಗರದ ದೊಡ್ಡ ಡಾಕ್ಟರ್ ಹತ್ತಿರ ಭಯದಿಂದ ಓಡುವ ಹೆತ್ತವರು. ಸದಾ ಮನೆಯೊಳಗೆ ಬಂಧಿಯಾಗಿ ಮೊಬೈಲ್ ಕಂಪ್ಯೂಟರ್ ಜೊತೆ ಮಗ್ನವಾಗಿರುವ ಮಕ್ಕಳು. ಬಿಸಿಲಿನ ಅನುಭವಿಲ್ಲ. ಹೊರಗಿನ ಗಾಳಿಗೆ ಮೈಯೊಡ್ಡಿ ನಿಂತ ಕ್ಷಣಗಳಿಲ್ಲ. ಹೊತ್ತು ಮೀರಿದ ನಂತರವೇ ಬೆಳಕಾಗುವುದು. ಎಲ್ಲಿ ಹೋಯಿತು ಆ ದಿನಗಳು. ಕಾಲ ಬದಲಾಗುವುದು ಅಂದ್ರೆ ಇದೇನಾ? ಈ ಕಾಲವನ್ನು ಬದಲಾಯಿಸಿದವರಾರು.? ಯಾಕೆ ಬದಲಾಯಿಸಿದರೂ. ? ಈ ಬದಲಾವಣೆ ಬೇಕಿತ್ತಾ? ಹುಡುಕಿದರೂ ಉತ್ತರವಿಲ್ಲ. ಆಧುನಿಕತೆಯ ಪರಮಾವಧಿಯಲ್ಲಿ ಮನುಷ್ಯ ಬದಲಾಗುತ್ತ ಹೋದ. ಅವನ ಜೊತೆ ಅವನು ನಡೆದು ಬಂದ ದಾರಿಗಳು ಸದ್ದಿಲ್ಲದೆ ಮಾಸಿ ಹೋದವು. ಇವತ್ತು ಈ ತಂತ್ರಜ್ಞಾನದ ಯುಗದಲ್ಲಿ ತಂತ್ರಜ್ಞಾನದ ಕಾಯಿಲೆಗಳೇ ತುಂಬಿ ಹೋಗಿವೆ. ಯಾವುದೇ ಮನೆಮದ್ದಿಗೂ ದೇಹ ಒಗ್ಗುತ್ತಿಲ್ಲ. ಮೈ ತುಂಬಾ ವಿಷವನ್ನು ಕ್ಷಣ ಕ್ಷಣಕ್ಕೂ ತುಂಬಿಕೊಂಡು ಬದುಕುತ್ತಿದ್ದೇವೆ. ಅದಕ್ಕೆ ಇವತ್ತು ಕಲ್ಪನೆಗೂ ಕಾಣದ ಕಾಯಿಲೆಗಳು ಮನುಷ್ಯನ ದೇಹವನ್ನು ಕಿತ್ತು ತಿನ್ನುತ್ತಿದೆ. ವೈಜ್ಞಾನಿಕತೆ ಬೆಳೆದಂತೆ ವಿವೇಕವೂ ಕುಸಿಯುತ್ತಿದೆ. ಏನೂ ಬೇಕು ಏನೂ ಬೇಡ ಅನ್ನುವ ಮಾನಸಿಕ ಸಂತುಲನವನ್ನು ನಾವು ದಿನೇ ದಿನೇ ಕಳೆದುಕೊಳ್ಳುತ್ತಿದ್ದೇವೆ. ಆಧುನಿಕತೆಯ ಮುಂದೆ ಎಲ್ಲವೂ ಮಾಸುತ್ತಿದೆ. ಪಾಶ್ಚಿಮಾತ್ಯದ ಎದುರು ನಾವು ನಮ್ಮ ಸಂಸ್ಕ್ರತಿಯನ್ನು ಮರೆಯುತ್ತಿದ್ದೇವೆ. ಅಲ್ಲದೇ ಅದನ್ನೆ ಮಕ್ಕಳಿಗೂ ಕಲಿಸುತ್ತಿದ್ದೇವೆ. ಅದಕ್ಕೆ ಇವತ್ತಿನ ಮಕ್ಕಳಿಗೆ ಮಣ್ಣಿನ ಗುಣವಿಲ್ಲ. ವಿಪರ್ಯಾಸವೆಂದರೆ ಇಂದಿನ ಮಕ್ಕಳಿಗೆ ನಾವು ಆ ವಾಸ್ತವತೆಯನ್ನು ಪರಿಚಯಿಸುತ್ತಿಲ್ಲ.
ಇವತ್ತು ಜ್ಞಾನ ಅಂದ್ರೆ ಪುಸ್ತಕ, ಓದು, ಪ್ರಶಸ್ತಿ, ಹೆಸರು, ಇವಿಷ್ಟನ್ನೆ ನಾವು ನಮ್ಮ ಮಕ್ಕಳ ತಲೆಯೊಳಗೆ ತುಂಬಿಸುವುದು.
ಅವರೊಳಗಿನ ಆತ್ಮವಿಶ್ವಾಸವನ್ನು ಹೆಚ್ಚಿಸುವ ಬದಲು ಕುಗ್ಗಿಸುತ್ತಿದ್ದೇವೆ. ಅಂದು ನಾವು ಎಲ್ಲರ ಜೊತೆ ಬೆರೆತು ಕಲಿತದ್ದೆ ಹೆಚ್ವು. ಆದರೆ ಇವತ್ತು ಕಾಲ ಬದಲಾಗಿದೆ. ಯಾರಿಗೂ ಯಾರ ಬಗ್ಗೆಯೂ ಯೋಚಿಸಲು ಸಮಯವಿಲ್ಲ. ಒಬ್ಬರ ಬಗ್ಗೆ ಯೋಚಿಸುವುದಕ್ಕೂ ಪುರುಸೊತ್ತಿಲ್ಲ. ಓಡುವ ಕಾಲದ ಚಕ್ರಕ್ಕೆ ಸಿಲುಕಿ ನಾವು ಎಗ್ಗಿಲ್ಲದೆ ಓಡಲು ನೋಡುತ್ತಿದ್ದೇವೆ. ಇದೆಲ್ಲವನ್ನೂ ನೋಡುವಾಗ ಮುಂದಿನ ದಿನಗಳ ಭಯ ಕಾಡುತ್ತದೆ. ಕಾಲ ಬದಲಾಗುವುದರ ಜೊತೆಗೆ ನಾವು ನಮ್ಮ ಮನಸ್ಥಿತಿಗಳು ಬದಲಾಗುತ್ತಿದೆ. ಬದಲಾವಣೆ ಬೇಕು ನಿಜ. ಆದರೆ ಅದು ಅತಿಯಾದಾಗ ಮನುಷ್ಯ ಮತಿಹೀನನಾಗುತ್ತಾನೆ. ಎಲ್ಲವೂ ನಾವು ಅಂದುಕೊಂಡಂತೆ ಇಲ್ಲ. ಹಾಗಂತ ಏನೂ ಇಲ್ಲದಂತೆ ಬದುಕುವ ಬದುಕಾದರೂ ಏನೂ ಚೆಂದ? ನಮ್ಮ ಬಾಲ್ಯದ ನೆನಪುಗಳನ್ನು ನಮ್ಮ ಮಕ್ಕಳಿಗೂ ತೋರಿಸೋಣ.ಅವರಿಗೂ ಮನಸ್ಸು ಬಿಚ್ಚಿ ಹಾರಲು ಕಲಿಸೋಣ. ಆಧುನಿಕತೆಯ ಗಾಳಿಯಿಂದ ಅವರನ್ನು ಸ್ವಲ್ಪ ಮಟ್ಟಿಗಾದರೂ ದೂರವಿರಿಸುವ ಸಣ್ಣ ಪ್ರಯತ್ನವೂ ಜಾರಿಯಲ್ಲಿರಿಸೋಣ.. ಏನಂತೀರ.?
-ಪೂಜಾ ಗುಜರನ್ ಮಂಗಳೂರು.