ಅಮರ್ ದೀಪ್ ಅಂಕಣ

“ಮರಳಿ ಮನಸಾಗಿದೆ…”: ಪಿ.ಎಸ್. ಅಮರದೀಪ್

ಅಂತೂ ಎರಡು ಸಾವಿರದ ಇಪ್ಪತ್ತೊಂದೂ ಪರೀಕ್ಷೆ ಇಲ್ಲದೇ ಮುಗಿದು ಹೋಯಿತು; 2020ರಂತೆ. ಕಳೆದ ವರ್ಷ ಮಗ ಒಂಭತ್ತನೇ ಕ್ಲಾಸಿನಲ್ಲಿದ್ದ. ಅರ್ಧ ಪರೀಕ್ಷೆಗಳೂ ಮುಗಿದಿದ್ದವು, ಇನ್ನೊಂದೆರಡು ಪರೀಕ್ಷೆ ಮುಗಿದಿದ್ದರೆ ಬರೆದ ಖುಷಿಯಾದರೂ ಇರುತ್ತಿತ್ತು. ಅದಾಗಲಿಲ್ಲ. ಪೀಡೆ ಕರೋನಾ ತಗುಲಿಕೊಂಡಿತು. 2019ರ ಡಿಸೆಂಬರ್ ನಲ್ಲಿ ಶಾಲಾ ವಾರ್ಷಿಕೋತ್ಸವದ ದಿನ ನನ್ನ ಮಗ ಮತ್ತವನ ತಂಡ ಡಾನ್ಸ್ ಮಾಡ್ಕೊಂಡು ಖುಷಿಯಾಗಿ ಕಳೆದಿದ್ದರು. ಪರೀಕ್ಷೆಯೂ ಇಲ್ಲ. ಸರಾಸರಿ ಮೇಲೆ ಪಾಸೂ ಆಗಿಬಿಟ್ಟ. ಆದರೆ, ಅವನಿಗೆ ಒಂದಾಸೆ ಇತ್ತು. ಮುಂದಿನ ವರ್ಷ ಹತ್ತನೇ ತರಗತಿ ಇವರದೇ ಸೀನಿಯರ್ ಬ್ಯಾಚು. ಶಾಲಾ ವಾರ್ಷಿಕೋತ್ಸವದ ದಿನ ಇವರಿಷ್ಟದ ಹಾಡೊಂದಕ್ಕೆ ಡಾನ್ಸ್ ಮಾಡಿ ಮೆಚ್ಚುಗೆ ಗಳಿಸಿಕೊಳ್ಳಬೇಕೆಂಬುದು. ಮಧ್ಯೆ ಯಾವುದಾದರೂ ಒಂದೂರಿಗೆ ಪಿಕ್ನಿಕ್ ಹೊರಡುತ್ತಿದ್ದರೋ ಏನೋ.

ಹಾಳಾದ್ದು ಕರೋನಾ ಎಂಬ ಪೀಡೆ ಶಾಲೆ ಶುರುವಾಗಲು ಬಿಡಲೇ ಇಲ್ಲ. ಶುರುವಾಯಿತಲ್ಲ ಆನ್ಲೈನ್ ಕ್ಲಾಸ್ ಎಂಬ ದ್ವಂದ್ವ. “ಶಾಲೇಲಿ ಕುಂತು ಕೇಳಿದ್ರೇನೇ ತೆಲೆಗೆ ನೆಟ್ಟಗೆ ಸೇರೋದಿಲ್ಲ, ಅಂತಾದ್ರಲ್ಲಿ ಇನ್ನು ಆನ್ಲೈನ್ ನಲ್ಲಿ ಅದಿನ್ನೇನ್ ಕಲಿತಾವೋ” ಎನ್ನುವ ನಮ್ಮ ದಿಗಿಲು ಬೇರೆ. ನೋಡ ನೋಡುತ್ತಾ ಮಕ್ಕಳು ಮೊಬೈಲ್ನಲ್ಲೇ ಮುಳುಗತೊಡಗಿದರು. ಸಾಮಾನ್ಯ ಸ್ಥಿತಿಯಂತಾಗಿದ್ದರೆ ಹತ್ತನೇ ಕ್ಲಾಸಿಗೆಂದೇ ಒಂದೆರಡು ತಿಂಗಳು ಕೋಚಿಂಗೋ, ಟ್ಯೂಷನ್ನೋ ಒಟ್ನಲ್ಲಿ ಸ್ಥಳ ಬದಲಾವಣೆಯಂತಾಗಿ ಬೇರೆ ಊರು, ವಾತಾವರಣ, ಸ್ನೇಹಿತರ ಸಂಪರ್ಕವಾಗಿದ್ದರೂ ಆಗಬಹುದಿತ್ತು. ಅದಿರಲಿ, ಹತ್ತನೇ ಕ್ಲಾಸೆಂದರೆ, ಹದಿನಾರಕ್ಕೆ ಕಾಲಿಡುವ ಸಮಯ. ಗಂಡು ಮಕ್ಕಳು ನೋಡುತ್ತಲೇ ಎತ್ತರಕ್ಕೆ ಬೆಳೆದುಬಿಡುತ್ತಾರೆ, ಧ್ವನಿ ಗಡುಸಾಗಿಬಿಡುತ್ತದೆ, ತಂದೆ ತಾಯಿಯೊಂದಿಗೆ ಸ್ವಲ್ಪ distance ಮಾಡುತ್ತಾರೆ. ಹುಡುಗಿಯರಂತೂ ದೈಹಿಕವಾಗಿ ಬೇಗ ಬದಲಾವಣೆಯಾಗುತ್ತಾರೆ.

ಕದ್ದು ಮುಚ್ಚಿ ಎನ್ನುವುದು ಆಗತಾನೇ ಶುರುವಾಗುತ್ತದೆ. ಅದು ಹುಡುಗಿಯರ ಬಗೆಗಿನ ಹುಡುಗರ ಮಾತಿರಬಹುದು. ಲವ್ ಸಾಂಗ್ ಕೇಳುವ ಆಸಕ್ತಿಯಿರಬಹುದು ಅಥವಾ ಕ್ಲಾಸಿನಲ್ಲಿ ಹುಂಬ ಹುಡುಗರ ಮಾತಿನಿಂದಲೋ ಇನ್ನಾವುದೋ ಜಗಳದೊಂದಿಗೆ ಟೀಚರ್ ಗೆ ಕಂಪ್ಲೇಂಟ್ ಮಾಡಿದ ಪ್ರಸಂಗದೊಂದಿಗೆ ಒಂದು ಹುಡುಗಿಯ ಕಡೆ ಒಲವಂತೂ ಆಗಿರುತ್ತದೆ. ಅದನ್ನು ಹೇಳಿಕೊಳ್ಳುತ್ತಾರೋ ಇಲ್ಲವೋ ಬೇರೆ ಪ್ರಶ್ನೆ. ಆದರೆ, ಕ್ರಶ್ಶಂತೂ ಶುರುವಾಗಿರತ್ತದೆ. ಬಿಡಿ, ನಾವೇನೋ ಹತ್ತನೇ ಕ್ಲಾಸಿಗೆ ಶುರುವಾಗಬಹುದು ಅನ್ನುತ್ತೇವೆ. ಕೆಲವೊಂದು ಪ್ರಸಂಗಳು ಆರು, ಏಳು, ಎಂಟನೇ ಕ್ಲಾಸಿನಿಂದಲೇ ಶುರುವಾದ ಪ್ರಸಂಗಗಳು ಎಷ್ಟೋ ವರ್ಷಗಳ ನಂತರ ಹೇಳಿಕೊಂಡವರ ಉದಾಹರಣೆಗಳು ಸಾಕಷ್ಟಿವೆ. ಆ ವಯಸ್ಸಲ್ಲಿ ಹುಡುಗಿಯರಿಗೆ ಮಾತ್ರವಲ್ಲ, ಟೀಚರ್ ಮೇಲೂ ಕ್ರಶ್ ಆಗಿದ್ದನ್ನು ನಕ್ಕು ಹೇಳಿಕೊಂಡವರಿದ್ದಾರೆ.

ಸರಿ, ಇವೆಲ್ಲಾ ಆದರೂ ಆಫ್ ಲೈನ್ ಕ್ಲಾಸಿನಲ್ಲಿ ಆಗುವಂಥದ್ದಲ್ಲವಾ ಅಂತೇನಾದರೂ ನೀವು ಕೇಳಿದರೆ ಅದೂ ಸರಿ. ಆದರೆ, ಹಾಗಾಗಿದ್ದರೆ ಹುಡುಗ ಹುಡುಗಿಯರಿಗೆ ಪರಸ್ಪರ ಫೋನ್ ನಂಬರ್ ಏನೋ ಸಿಗುತ್ತಿತ್ತೆನ್ನಿ. ಆದರೆ, ಸಲೀಸಾಗಿ ಪೋಷಕರು ಮಾತಾಡಲು ಚಾಟ್ ಮಾಡಲು allow ಮಾಡುತ್ತಿದ್ದರಾ? ಚಾನ್ಸಸ್ ಕಡಿಮೆ. ಆದರೆ, ಆನ್ಲೈನ್ ಕ್ಲಾಸಿನ ಅವತಾರ ನೋಡಿ. ಒಂದು ಮೊಬೈಲ್ ಅವರ ಕೈಗೇ ಸಿಗುವಂತೆ ಮಾಡಿಬಿಟ್ಟವು. ಇನ್ನು ಗ್ರೂಪ್ ನಲ್ಲಿ ಯಾರಿದ್ದಾರೆ ಯಾರಿಲ್ಲ, ಗ್ರೂಪ್ ನಿಂದ ಹೊರತಾದ ಖಾಸಗಿಯಾಗಿ ವಿನಿಮಯವಾಗುವ ಸಂದೇಶಗಳು ವಾಟ್ಸಪ್ ಚಾಟ್ ಗೆ ಸುಲಭವಾಗಿ ಸಿಗುವಂತಾಯ್ತು.

ನಿಜ ಹೇಳಬೇಕೆಂದರೆ, ಈ ವಯಸ್ಸಿನಲ್ಲಿ ಮೊಬೈಲ್ ಗಿಂತ ಹೆಚ್ಚಾಗಿ ಚಟುವಟಿಕೆಯಿಂದ ಇರುವ ಶಾಲಾ ಹಾಜರಾತಿ, ಹರಟೆ, ಸ್ನೇಹಿತರು, ಗೇಲಿ, ಚುಡಾಯಿಸುವಿಕೆ, ಕಣ್ಣೋಟ, ಎಲ್ಲರೂ ಗಮನಿಸುತ್ತಿದ್ದಾರೆನ್ನುವ ಭಯದಲ್ಲೇ ಕಣ್ಣಲ್ಲೇ ಮಾತಾಡೋದು, ಎಣಿಸಿ, ಪೊಣಿಸಿ, ರಮಿಸಿ ಇಂಪ್ರೆಸ್ಸಾಗುವಂತೆ ನಡೆದುಕೊಳ್ಳುವ ತುಸು ವಯಸ್ಸಿಗೆ ಬಂದ ಧಿಮಾಕು ಎಲ್ಲವೂ ಹುಡುಗ ಹುಡುಗಿಯರಿಗೆ ಸಹಜ ಮತ್ತದು ಹಾಗೇ ನಡೆಯಬೇಕು. ಮಗನೂ ಹಾಗೇ ಇದ್ದನಾ? ಇರಬಹುದು ಎನ್ನುವುದಕ್ಕೆ ಅವನು ನೋಡುವ ಸಿನಿಮಾ, ಹಾಡು, ವಾಟ್ಸಪ್ ಸ್ಟೇಟಸ್ ಗೆ ಹಾಕಿಕೊಳ್ಳುತ್ತಿದ್ದ ತುಣುಕು ವಿಡಿಯೋಗಳು, ಫೋಟೋಗಳು, ಕೋಟ್ ಗಳು, ಕಾಲರ್ ಟ್ಯೂನ್ ಎಲ್ಲವೂ ಅನುಮಾನ ಹುಟ್ಟಿಸುತ್ತವೆ.

ಆದರೆ, ಮೊಬೈಲ್ ಇದೆಯಲ್ಲಾ? ಕೈ ಬೆರಳಲ್ಲೇ ಎಲ್ಲವನ್ನೂ ತಂದೊಡ್ಡಿದ್ದರ ಪರಿಣಾಮವಾಗಿ ಎಲ್ಲಾ ಕುತೂಹಲಗಳನ್ನು ಕೊಂದು ಹಾಕಿಬಿಡುತ್ತದೆ. ಆ ಎಲ್ಲಾ ಸಂಧರ್ಭಗಳ ಪ್ರಸ್ತುತವನ್ನೂ ಕಸಿದುಕೊಳ್ಳುತ್ತದೆ.

ಈ ವಾರದಲ್ಲಿ ಸಿ.ಬಿ.ಎಸ್.ಇ. ಬೋರ್ಡ್ ಎಕ್ಸಾಂ ರದ್ದು ಎಂಬ ಸುದ್ದಿ ಬಂತು. ಅಲ್ಲಿಯವರೆಗೆ ನನ್ನ ಮಗನೂ ಸೇರಿದಂತೆ ಉಳಿದ ವಿದ್ಯಾರ್ಥಿಗಳು ಪರೀಕ್ಷೆ ಇದೆ. ಅಲ್ಲಿವರೆಗೆ ಶಾಲೆಯೂ ಇರುತ್ತೆ, ಗೆಳೆಯರೂ ಸೇರಬಹುದು. ಪರೀಕ್ಷೆಗೆ ಓದಲೂಬೇಕೆಂಬಂತೆ ಗುಂಗಿನಲ್ಲೇ ಇದ್ದರು. ಯಾವಾಗ “ ರದ್ದು” ಎಂಬ ಸುದ್ದಿ ಕೇಳಿದರೋ ಅಲ್ಲಿಗೆ ಅವರ ಪ್ರಿಪರೇಷನ್ನು, ಓದು, ಗುಂಗು ಎಲ್ಲವೂ ಭಸ್ಮ. ಇದಕ್ಕೂ ಮೊದಲೇ ಹತ್ತನೇ ಕ್ಲಾಸಿಗೆ ಬಂದ ಮೇಲೆ ಸಖತ್ತಾಗಿ ಡಾನ್ಸ್ ಪ್ರೋಗ್ರಾಮ್ ನೀಡಬೇಕೆಂದಿದ್ದ ಕನಸೂ ಕೊನೆಯಾಗಿತ್ತು. ಈಗ ಕ್ಲಾಸೂ ಇಲ್ಲ, ಡಾನ್ಸೂ ಇಲ್ಲ, ಗೆಳೆಯರೂ ಇಲ್ಲ. ಪರೀಕ್ಷೆಯಂತೂ ಗೋತಾ.

ನನ್ನ ಹಣೆಬರಹಕ್ಕೆ ಬಿಳಿ ಅಂಗಿ ನೀಲಿ ಪ್ಯಾಂಟು ಯೂನಿಫಾರ್ಮು, ಮರಕೋತಿ ಆಟ, ಬಾಲ್ ಬ್ಯಾಟ್ಮಿಂಟನ್, ಪ್ರಬಂಧ ಸ್ಪರ್ಧೆಯಲ್ಲಿ ಪಡೆದ ಹದಿನೈದು ರೂಪಾಯಿ ಬಹುಮಾನ ಮತ್ತು ಸುಡುವ ಬರಿಗಾಲಲ್ಲಿ ನಡೆದ ನೆನಪು ಮಾತ್ರ ನನ್ನ ಹೈಸ್ಕೂಲಿನ ಓದು. ಓದಿನ ಹೊರತಾಗಿ ನಾನು ನೋಡಿದಂಥ ಲವ್ವಲ್ಲಿ ಬಿದ್ದ ಜೋಡಿ, ಓಡಿ ಹೋದ ಜೋಡಿ, ಹುಡುಗಿ ಹೆಸರಿಗೆ ವಿಳಾಸ ಬರೆದು ಗೋಡೆ ಮೇಲೆ ಬರೆದ ಕೊಳಕು ಬರಹ ಇವು ಕೇವಲ ನೋಡಿದ್ದಷ್ಟೇ. ಆದರೆ ಇದರ ಮಧ್ಯೆ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಅನ್ನುವಂಥ ಯಾವುದೇ ಘಟನೆಗಳೂ ನೆನಪಿಲ್ಲ.

ಮೊನ್ನೆ “ಸಿ.ಬಿ.ಎಸ್.ಇ. ಪರೀಕ್ಷೆ ರದ್ದು” ಸುದ್ದಿ ನೋಡಿ ಸಮರ್ಥ ವಾಟ್ಸಪ್ ಸ್ಟೇಟಸ್ ಗೆ ಒಂದು ವಿಡಿಯೋ ಇಟ್ಟಿದ್ದ. “ ಶಾಲೆ ಇಲ್ಲ, ಪರೀಕ್ಷೆ ಇಲ್ಲ, ಗೆಳೆಯ, ಗೆಳತಿಯರಿಲ್ಲ, ಹರಟೆಯಿಲ್ಲ, ಗೆಟ್ ಟುಗೆದರ್ ಇಲ್ಲ, ಗ್ಯಾದರಿಂಗ್ ಇಲ್ಲ, ಹೀಗೆ ಈ ವರ್ಷವೂ ಮುಗೀತು” ಎನ್ನುವ ಅರ್ಥದ್ದು. ನೋಡಿದ ತಕ್ಷಣ ಪಿಚ್ಚೆನಿಸಿತು….

ಕೊರೋನಾಗೆ ಸಿಕ್ಕ ದೊಡ್ಡವರದಂತೂ ಫಜೀತಿ ಕೇಳುವುದೇ ಬೇಡ, ದುಡಿಮೆ ಇಲ್ಲ, ಆರೋಗ್ಯ ಯಾವಾಗ ಕೈಕೊಡುತ್ತೋ, ಯಾರಿಗೆ ಏನಾಗುತ್ತೋ ಊಟ, ಬಟ್ಟೆ, ಬಾಡಿಗೆ, ಔಷಧಿ, ಮದುವೆ, ತಿಥಿ, ಸತ್ತರೆ ಯಾರೂ ಬರದ ಸ್ಥಿತಿ ಯಾಕಾದರೂ ಬಂತೋ ದರಿದ್ರ ಪರಿಸ್ಥಿತಿ ಅಂದುಕೊಳ್ಳುವುದೇನೂ ನಿಜ. ಅದರೆ, ಈ ಪೀಡೆ ಕೊರೋನಾ ಮಕ್ಕಳ ಎಷ್ಟೊಂದು ಬಾಲ್ಯದ, ಹರೆಯದ ಖುಷಿಯ ದಿನಗಳನ್ನು ಕಸಿದುಕೊಂಡು ಬಿಟ್ಟಿತಲ್ಲಾ? ಅನ್ನಿಸ್ಸಿದ್ದು ಸುಳ್ಳಲ್ಲ.

-ಪಿ.ಎಸ್. ಅಮರದೀಪ್


ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *