ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 78 & 79): ಎಂ. ಜವರಾಜ್

-೭೮-

ಆಗ..
ಆಗ..
ಆಗ ಏನಾಯ್ತು ಅಂದ್ರಾ..
‘ಏ…ಯ್…’
ಅಂತ ಅಬ್ರುಸ್ತ
ಮರದ ಮ್ಯಾಲಿಂದ ಕೆಳಕ
ಆಗ್ಲೆ ಕಂಡ
ಆ ನೆಳ್ ರೂಪು
ದುತ್ತಂತ ಬಿದ್ದು ಎಗುರಿ
ಮುಂದ ನಿಂತ್ಗಂಡೂ
“ಏ..ಯ್..
ಆಗ್ಲೆ ಬಿದ್ದೇಟ್ಗ
ಹೆದ್ರಿ ಹೋಯ್ತಿದ್ದರಿ ಅನ್ಕಂಡಿ
ಆದ್ರ..ಆದ್ರ..
ಇಲ್ಲಿಗಂಟು ಬಂದಿದರಿ ಅಂದ್ರ
ನಿಮ್ಮ ಬುಡಗಿದ್ದಾ..
ಈ ನೀರಂಜಿ ಬುಡ್ಕೇ
ಹಾರ ಮಾಡ್ದೆ ಬುಡಲ್ಲ”

ಈ ಅಯ್ನೋರ್ ಕಾಲು
ಗಡಗಡ ನಡುಗ್ತ
ಅವ್ರು ನಡ್ಗ ರೀತಿಗ
ನಂಗೂ ಮೈಬಾರ ಆಯ್ತಿರಗಾಯ್ತು

ಅಂವ
ಅದೆ, ಎಳುರುಂಡಿ ಮಾದೇವ
ಗರ ಬಡ್ದಿರತರ ನಿಂತನ..

ಅಂವ ನಿಂತಿರ ತರುಕ್ಕ
ಇವ್ನ್ ಮ್ಯಾಗ
ಆಗಿಂದ ಅನ್ಕಂಡದೆಲ್ಲ
ಸರುಕ್ನ ಇಳ್ಕಂಡಗಾಯ್ತು

ಈ ಅಯ್ನೋರು ಆಗ್ಗಿಂದ ಈಗ್ಗಂಟು
ಇಂತೆವ್ನ ಮುಂದಿಟ್ಗಂಡು
ಯವರ ಮಾಡ್ತಿದ್ರಲ್ಲಾ..
ಇಂವ,
ಇಂತಾ ಅಡ್ಕಸ್ಬಿ ಪುಕ್ಕುಲ್ನಾ..
ತೂ..
ಸೂಳಮಗನಾ.. ಅನ್ನುಸ್ತು

ಎಳುರುಂಡಿ ಮಾದೇವ ಅಂದ್ರ,
ಸುತ್ಮತ್ತು ಏಳೂರೂ ತರಗುಟ್ತಿದ್ದು…
ಯಾವ್ ಮೆದ ಬೆಂದ್ರೂ
ಈ ಎಳುರುಂಡಿ ಮಾದೇವ್ನೇ….
ಆ ಮೆದ್ಗಳು ಬೆಂದು ಬೂದಿಯಾದಾಗ್ಲೂ
ಅದ್ರೊಳ್ಗಿಂದ ಬೆಂದಿರ ಹೆಣುದ್ ವಾಸ್ನನೇ…

ಆ ನೆಳ್ ರೂಪು
ಆ ಬೆಳ್ಗ ತಿಂಗುಳ್ಳಿ
ನಿಜು ರೂಪು ಪಡ್ಕತಾ..
ಆ ನೆಳ್ ಸರುದು
ಕರಿ ಇಜ್ಜುಲ್ತರ
ಉದ್ದುಕ್ಕ ದಪ್ಪುಕ್ಕ
ಕಾಡೆಮ್ಮ ಕಂಡಾಗಿ
ಮೊಸ್ಗರಿತಾ..
ಇಕ್ಕಂಡಿರ ಬಟ್ಟನು
ಹರುದು ಜೂಲಾಗಿ
ಮೊಖುದ್ ಮ್ಯಾಲ
ಬರಿ ಕೂದ್ಲೇ ತುಂಬ್ಕಂಡಿರತರ ಕಾಣ್ತು

ಆಗ
ಮೊಸ್ಗರಿತಾ ಮೊಸ್ಗರಿತಾ
ನಗಕ ಸುರು ಮಾಡುದ್ನ

ಆ ನಗ ಹೆಂಗಿತ್ತು ಅಂದ್ರ…

ತಣ್ಣಗ ಹರಿತಿದ್ದ
ಆ ಹೊಳ ನೀರು
ಒಂದೆ ಸತಿಗ
ಅಲ ಏಳತರ…

ಸುಮ್ನ ಬೀಸ್ದೆ ನಿಂತಿರ
ನೀರಂಜಿ ಮರೆಲ್ಲ
ಒಂದೆ ಸತಿಗ
ದಿಕ್ಕಾಪಾಲು ಮೊರುಗುಟ್ತ ಬೀಸತರ…

ಆಸ್ರ ಕೊಟ್ಟ ಭೂಮ್ತಾಯಿ
ಗಡಗಡ ನಡ್ಗತರ..

ಅಯ್ಯಯ್ಯಪ್ಪೊಯ್
ಅಂತ ಅಳಳ್ತ ಇರದ ಕಂಡೂ..
ನಂಗೂ ಅಳ್ಕಾಗಿ
ಗುರಾಯಿಸ್ತ ಗುರಾಯಿಸ್ತ
ಅವತ್ತು ರಾತ್ರ
ಆ ಮಾರುನ್ಜೊಜ
ಮಾತಾಡ್ತ ಇದ್ದದು
ನೆಪ್ಗ ಸಿಕ್ತು

ಊ್ಞ..
ಇಂವ ನನ್ ಕಾಲ್ನೈದ ಪರ್ಶೂ…

ಅರೆ,
ಉಡ ಉಡ ಉಡ ಉಡಾ..

ಕಣ್ಣ ಮುಚ್ಚಿ ಬುಡದ್ರೊಳ್ಗ
“ಅಯ್ಯಯ್ಯಪ್ಪೋಯ್…”
ಅಂತ ಅರುಚ್ತ ದೊಸುಕ್ನ
ಭೂಮ್ತಾಯ್ಗ ಮೊಕಣ್ಣಾಗಿ
ಈ ಅಯ್ನೋರು ಬಿದ್ರಲ್ಲಾ..

ಆ ಎಳುರುಂಡಿ ಮಾದೇವ
ಈ ಅಯ್ನೋರ್ ಅರಚಾಟ ಕಂಡು
ಬೆವ್ರಿ ದಂಗಿಡ್ದು
ಆ ನೆಳ್ ರೂಪ್ದಂಗಿದ್ದ ಪರ್ಶುಗ
ಕೈಲಿದ್ದ ಬಿದುರು ದೊಣ್ಣ ಬೀಸುದ್ನಲ್ಲಾ…
ಆ ಪರ್ಶು ಕೆಂಗಣ್ಣ ಬೀರಿ
ಆ ಬೀಸ ದೊಣ್ಣನ
ಲಬುಕಂತ ಅಮುಕಿ ಕಿತ್ಗಂಡೂ..

ಆಗ
ಎಳುರುಂಡಿ ಮಾದೇವ ಎದ್ದೂ..
ಆ ಪರ್ಶು ಕಾಲೆಳ್ದೂ..
ಈ ಅಯ್ನೋರು ಮ್ಯಾಕ್ಕೆದ್ದೂ..
ನನ್ ಮೆಟ್ಟೇ ಕಾಲೆತ್ತಿ
ಆ ಪರ್ಶುನ ತುಳ್ದೂ..

ಆಗ
ಆ ಪರ್ಶೂ
ಎಮ್ಮ ಮೊಸ್ಗರಿಯತರ ಮೊಸ್ಗರಿತಾ
ಆ ಇಬ್ರುನುವ ದಿಕ್ದಿಕ್ಕೂ ಎಳ್ದೂ..
ಅಲ್ಲೆ ಸಾಲ್ಗಿದ್ದ
ಆ ನೀರಂಜಿ ಬುಡ್ಕ ಅಮ್ಕಿ
ಉಸುರು ಕಟ್ಸೀ..
ಆ ನೀರಂಜಿ ಬುಡ್ದ ಪೊಟ್ರಲಿದ್ದ
ಮಚ್ಚಾ ಏನಾ ತಗ್ದಾ….

ಆಗ
ಆ ಎಳುರುಂಡಿ ಮಾದೇವ
ಆ ಪರ್ಶುನ ಕಾಲ್ಲಿ ಜಾಡ್ಸೀ..

ಅಂವ ಜಾಡ್ಸ ರಬುಸುಕ್ಕ
ಎಳುರುಂಡಿ ಮಾದೇವು
ಹೊಳ ಅಂಚ್ಲಿ
ಬೆಳ್ದು ತೊನ್ಯಡ್ತಿದ್ದ
ನೊಸ ಹುಲ್ಲು ಜಾರಿ
ಮೊರುಗುಟ್ತ ಹರಿತಿರ
ನೀರೊಳಕ ಬಿದ್ದು ಲಬಗುಟ್ತ
ನೀರಂಜಿ ಬೇರಿಡ್ದು ಕೂಗಾಗ್ತ ಇದ್ರಾ..

ಇತ್ತಗ
ಈ ಅಯ್ನೋರ್ ಉಟ್ಪಂಚ
ಗಿಂಜ್ಲು ಮುಳ್ಗ ಸಿಕ್ಕಿ ಅಳ್ದೂ..
ಆ ತಿಂಗ್ಳು ಬೆಳುಕ್ಕ
ಇನ್ನೂ ಬೆಳ್ ಬೆಳ್ನ ಬೆಳುಗ್ತ
ಭೂಮ್ತಾಯ್ಗ ಬೆಳಿ ಹೊದುಕ ಆಗಿ..

ಆ ಭೂಮ್ತಾಯ್ ಮ್ಯಾಲಿದ್ದ
ಆ ಅಳ್ದೊಗಿರ ಪಂಚ್ವ ಎತ್ತಿ
ಸೊಂಟ್ಗ ಸುತ್ಕಳ ಹೊತ್ಲೀ..
ಕಿಟಾರಂತ ಕಿರುಚುದ್ರಲ್ಲಾ…

ಆಗ
ಆ ಹರಿತಿರ ಹೊಳ
ಆ ನೀರಂಜಿ ಸಾಲು
ಆ ಬೆಳ್ಳುನ್ ಬೆಳ್ಗ ತಿಂಗ್ಳು
ತಣ್ಣಗ ಮನ್ಗಿದ್ದ
ಆ ಭೂಮ್ತಾಯಿ
ಮೊಖ ಮೊಖ ನೋಡ್ಕಳವತ್ಲೀ..
ನನ್ ಮೈಮ್ಯಾಕ್ಕ
ಮ್ಯಾಲಿಂದ ಕೆಳಕ
ಬುಳ ಬುಳ್ನ
ರಕ್ತ ಹರಿತಾ ಸರಿತಾ
ನನ್ನೆದ ಲಬಲಬಲಬ್ನ
ಲಬ್ಗುಟ್ತಾ..

ಈ ಹೊಳಕರ ಆಚ್ಗ
ಆ ಹೆಣ್ಣೊಳ ಮಗ್ಗುಲ್ಗ
ಈ ಕಣ್ಗ ಕಾಣ್ತಿದ್ದ
ಆ ಗಗ್ಗೇಶ್ವರಿ ಮಸತಿ ಒಳ್ಗಿಂದ
‘ಅಲ್ಲಾಉ ಅಕ್ಬರ್ ಅಲ್ಲಾ..’
ಅಂತ
ಶಿವುನ್ನ ಕೂಗದು ಕೇಳ್ತಿತ್ತಲ್ಲಾ..

ಈ ಅಯ್ನೋರ್ ಕಿರುಚಾಟ್ವು
ಆ ಶಿವುನ್ ಕೂಗೂ ಒಂದಾಗ್ತಾ..
ಆ ಒಂದಾದ ಗಳುಗ್ಗ
ಇತ್ತಗ
ಕಿರುಗ್ಸೂರ್ ಏರಿದಿಕ್ಕಿಂದ
ಅದ್ಯಾರ ಕೂಗ್ತ ಓಡ್ಬತ್ತಿರಗಾಗಿ..

ಆ ಪರ್ಶೂ ಆ ಕೂಗ್ತ ಓಡ್ಬತ್ತಿರ ಸದ್ಗ
ಆ ನೀರಂಜಿ ಸಾಲ್ಲಿ ಕಾಣ್ದಗಾಗಿ..

‘ಏಯ್ ಯಾರ ಅರುಚುದ್ದು’
ಅಂದ ದನಿ ನೆಪ್ಗ ಸಿಕ್ಕಿ
ಉಸುರು ಬಂದಗಾಗಿ
“ನಾನು ಸಾಯೇಬ್ರ ನಾನು”

ಲಾಯರಿ ಖಾಲಕ್ ಸಾಬ್ರು,
“ಅಯ್ನೋರಾ ನೀವಾ.. ಇದೇನ”
“ಕಾಲ್ನೈದ ಸಾಯೇಬ್ರ..”
“ಕಾಲ್ನೈದ್ನಾ..
“ಕೊಲ ಆಗಿರ ಪರ್ಶುನಾ..”
*

ಆಗ
ಈ ಅಯ್ನೋರು ಗ್ಯಾನ ತಪ್ಪಿ..

ಆ ಲಾಯರಿ ಖಾಲಕ್ ಸಾಬ್ರು
ಜೊತಲಿದ್ದ ಆ ಜೀತ್ದಾಳ್ಗಳೂ
ಗ್ಯಾನ ತಪ್ಪಿರ ಅಯ್ನೋರಾ
ಜೀಪ್ಗ ಎತ್ತಾಕಂಡು
ಗೂಡುನ್ ಪ್ಯಾಟ್ರಿ ಆಸ್ಪತ್ರುಕ ಬರ್ದೆ ಇದ್ರಾ…

ತೂ..
ಈ ಅಯ್ನೋರ್ ಮನ ಎಕ್ಕುಟ್ಟೋಗ..
*

ಕೆಂಟಿ
ಇನ್ನೂ..ಕೆಂಟಿ
ರುತಿ ಇಲ್ದೆದ್ ಆ ರಕ್ತನ
ಕೆಂಟಿ ಕೆಂಟಿ
ಬಾಯಿಲಿ ನೊಣ್ದು
ಕುಡಿತಿದ್ದರೆಲ್ಲ ಕುಡಿರಿ..

ಈಗ ನೀವ್ ಕುಡ್ದಂಗಿ ತಿಂದಂಗಿ
ಇವ್ನುಸ್ರು ಇರಾಗ್ಲೆ
ಮನಿಗಿದ್ ಮಗ್ಗುಲ್ಲೆ
ನಾಯಿ ನರುಗಳೂ
ಆ ಕಾಗ್ಗಳು ಗೂಗ್ಗಳು
ಬಾಣದ್ ಮ್ಯಾಲ ಹಾರತಿರ
ಆ ರಣದ್ಗಳು ಮುತ್ಗಂಡು
ಕುಡ್ದು ತಿಂದೂ..

ಉಳ್ದ ಮೂಳ ಚಕ್ಳನ
ದಿಕ್ದಿಕ್ಕೂ ಎಸಿಲಿ..

ಈ ಪಾಪಿ ರಕ್ತನ ಕೆಂಟಿ
ಮೈಭಾರದ ಇಳ್ಸಿದರಿ

ಇರಿ, ಇಲ್ಲೆ ಇರಿ
ಈ ಮನ ಸುತ್ತನೆ ಇರಿ
ಈ ಅಯ್ನೋರ್ ಮನ್ಗಿರ
ಮಂಚ ಸುತ್ತನೆ ಇರಿ
ಕಾಲ್ ಕಾಲುಕ್ಕು ಇರಿ
ಈ ಗ್ವಾಡ ಕಿರ್ಸುಣ್ಣ ನ್ಯಾರುಕ್ಕ
ಸಾಲ್ಗಟ್ಟಿ ಕಾಯ್ತಿರಿ
ನಿಮ್ಗೂ ಹಾರ ಸಿಕ್ಕುತ್ತ
ನಿಮ್ ಕೂಸುಕುರಿಗಳ್ಗೂ ಹಾರ ಸಿಕ್ಕುತ್ತ
ಅಂತಿರವತ್ಲೀ…

ರಟ್ಗಟ್ಟಿರ ರಕ್ತನ ಕೆಂಟಿ
ತಿಂದು ತೇಗಿ
ರಾತ್ರ ಆದ್ದ ಕೇಳ್ತಾ
“ಸರಿಕಣ ನೀ ಹೇಳದು ಸರಿಕಣ
ಇಲ್ಲೆ ಇರ್ತಿಂವಿ ಬುಡಣ್ಣ” ಅನ್ಕಂಡು
ಬುಳುಬುಳ್ನ ಗ್ವಾಡ ನ್ಯಾರುಕ್ಕ
ಸಾಲ್ಗಟ್ಟಿ ಕಟ್ಟಿರ್ವ ಹರಿತಿದ್ರ..

ಆ ಬೆಳಿ ಬಟ್ಟ ಪ್ಯಾಟ್ರಿ ಡಾಕ್ಟ್ರು
ಆ ಕರಿ ಕಾರತ್ಗಂಡು ಹೊಂಟ್ಮೇಲ…

ಆ ಲಾಯರಿ ಖಾಲಕ್ ಸಾಬ್ರು
ಜೀಪುಟ್ಗ ಬಂದು ಕೆಳಕ್ಕಿಳ್ದು
ಗಡ್ಡ ನೀವ್ಕಂಡು ಒಳಕ ಹೋದ್ಮೇಲ…

“ಆ ಕಾಲ್ನೈದ ನನ್ನ ಕೊಲ್ತನ ಸಾಯೇಬ್ರ
ಅವ್ನಿಡ್ದು ಪೋಲಿಸ್ರುಗ ಕೊಡಿ ಸಾಯೇಬ್ರ
ನನ್ನಾಸ್ತಿ ಮಾರುದ್ರು ಚಿಂತಿಲ್ಲ ಸಾಯೇಬ್ರ..”

ಅನ್ನದು,

ಮನ ಒಳಗಿಂದ ಬೀದಿಗ್ಬಂದು
ಹಂಗೆ ಬೀದಿಗುಂಟ ಹರಿತಾ
ಈ ಹಳ ಊರ ದಾಟಿ
ಆ ಹೊಸೂರ್ ಹೆಬ್ಬಾಗುಲ್ಗು ಹರಿತಾ..
ಆ ಹೊಸ ಊರ ಬೀದ್ಬೀದಿಲೂ ಹರಿತಾ..
ಅದು ಸುತ್ಮುತ್ತ ಏಳೂರ್ ಮೇಲೂ ಹರಿತಾ…

*
ಏನ್ಮಾಡದೂ..
ಆ ಅಲ್ಲಾನೆ ಕಾಪಾಡ್ಬೇಕೂ..
ಆ ಕಾಲ್ನೈದ ಎಲ್ಲಿದ್ದನೂ..
ಕೊಲ ಆಗಿರಂವ ಎದ್ಬಂದು
ಈ ಅಯ್ನೋರ ಕೊಂದನಾ..
ಇವ್ರುನ್ನ ಕಾಲ್ನೈದ ಹಿಡ್ದವ್ನಾ..
ಓ ಅಲ್ಲಾ…

ಅಂತ

ಆ ಖಾಲಕ್ ಸಾಬ್ರು ಅಂದ್ಬುಟು
ಆ ಜೀಪ ಬುಟ್ಗಂಡು ಹೋದ್ರಲ್ಲೊ…
*

ಆ ಜನುವೂ

ಆ ಖಾಲಕ್ ಸಾಬ್ರ ಮಾತ ಎಳಿತಾ..

ಆ ಪರ್ಶು ದೆವ್ವ್ಯಾಗಿ ಗಾಳ್ಯಾಗಿ
ಈ ಅಯ್ನೋರ್ ಮ್ಯಾಲ ಬಂದನಲ್ಲೊ..

ಈ ಸುದ್ದಿ ಸುತ್ಮುತ್ತು
ಏಳೂರ್ ಮ್ಯಾಲೇರಿ ಗಳ್ಳಾಕ್ತಲ್ಲೊ..


-೭೯-

ವಾರಾಯ್ತು ತಿಂಗ್ಳಾಯ್ತು
ಆರ್ತಿಂಗ್ಳಾಯ್ತು ವರ್ಷಾಯ್ತು
ಆ ತಿಂಗ್ಳು ವರ್ಷುಗಳೂ ಉಳ್ತಾ
ರಾತ್ರ ಹಗಲುಗಳೂ ಮುಳುಗ್ತಾ ಏಳ್ತಾ…

ಅದ್ರೊಂದ್ಗ ಬಿಸ್ಲು ಬಿಂಕಿ
ಮಳ ಗಾಳಿ ಸಳಿ ಅನ್ನದೂ
ನಂಟುಸ್ತನ ಮಾಡವ್ರಂಗ
ಹೊಯ್ತ ಬತ್ತಾ..

ಈ ನಂಟುಸ್ತನ ನೋಡ್ತ
ಈ ಕಟ್ಟೆರ ಹಿಂಡ್ಜೊತ್ಗ
ಆ ಈ ಮಾತುಕತ ಆಡ್ತ
ನನ್ ಬಾಳು
ಈ ಜಗುಲಿ ಮೂಲಲಿ ಬೇರ್ ಬುಡ್ತು

*

ರಾತ್ರ ಮನಿಕಳ ಹೊತ್ತು

ಕತ್ಲಲಿ ಏನಂದ್ರ ಏನೂ ಕಾಣ್ದು
ಲೈಟಿಲ್ದೆ ಬೆಳ್ಕಿಲ್ದೆ ಗವ್ವನ್ನದು
ಇದೇನ ಇದು ಇಸ್ಯವ್…
ಒಂಜಿನ ಸರಿ
ಏಡ್ಜಿನ ಸರಿ
ಜಿನೊಪ್ಪತ್ತು ಬೆಳ್ಕೂ ಇಲ್ದೆರತರ
ಈ ಮನ ತೊಡ್ದೊಯ್ತಾ ಕುಂತದಲ್ಲ..
ತೂ… ಅನ್ನುಸ್ತು

ಕಸ ಗುಡ್ಸವ್ರಿಲ್ಲ
ಬೀದ್ಗ ಮುನ್ನೀರ್ ಎರಚಿ
ರಂಗೋಲ ಬುಡವ್ರಿಲ್ಲ

ತೂ…ತುತುತುತೂ….

ಆ ಆಳು ಬತ್ತನ ಹೋಯ್ತನ
ಆ ಆಳು ಬಂದು ಹೋದ್ಮೇಲ
ಆ ಆಳ್ನೆಡ್ತೂ ಬತ್ತಳ ಹೋಯ್ತಳ

ಒಳ್ಗ ಅದೇನೇನ್ ನಡಿತಾ..
ನಾ ಕಾಣಗಿದ್ದಾ

ಆ ಕಟ್ಟೆರ ಹಿಂಡಂತೂ
ಎತ್ತಗು ಹೋಗ್ದೆ
ನನ್ ಮಾತ್ಗ ಬ್ಯಲ ಕೊಟ್ಟು
ನನ್ ಸುತ್ತನೆ…
ಈ ಜಗುಲಿ ಸುತ್ತನೆ…
ಈ ಅಯ್ನೋರ್ ಮಂಚ ಸುತ್ತನೆ…
ಆ ಸಂದಿ
ಈ ಸಂದಿ
ಆ ಹಿತ್ಲು ಅನ್ನದ್ನು ಕಾಣ್ದೆ
ಈ ಮನ ಸುತ್ತನೆ ಸುತ್ತಿ
ಕೊನ್ಗ
ಮೊಕ್ಕತ್ಲ ಆಯ್ತ ಆಯ್ತ
ಸಾಲ್ಗಟ್ಟಿ ಹರಿತಾ
ನನ್ ಮಗ್ಗುಲ್ಗೇ ಬಂದು
ಸುತ್ತ
ಮುಲುಮುಲು ನೆರುದು
ಕಂಡುದ್ದ ಕೇಳುದ್ದ ಹೇಳ್ತ
ನಗಾಡ್ತ ಗೇಲಾಡ್ತ
ಹಂಗೆ ಕ್ಯಾಣಾಡ್ತವ..

ಆ ಕ್ಯಾಣುಕ್ಕ
ನನ್ ಮೈನೆಲ್ಲ
ಕೆಂಟಿ ಕೆಂಟಿ ಕಚ್ತ ಗಾಯ ಮಾಡ್ತವ

ಇದ್ಯಾಕ ಹಿಂಗ ಕೆಂಟಿರಿ ಅಂದ್ರ..

ಈಗ ನಮ್ಗು ವಯ್ಸಾಯ್ತು ಕಣ್ಣ
ನೀನಲ್ವ ಇಲ್ಲೆ ಇರಿ ಅಂದಂವ
ನಿನ್ ಮಾತ್ಗ ಬ್ಯಲ ಕೊಟ್ಟು ಇರದು ಕಣ್ಣ..
ಈ ಅಯ್ನೋರ್ ರಕ್ತ ಒಂದ್ಸಾಕ..
ಅದೂ ಇರ್ಲಿ
ಈ ಅಯ್ನೋರು ಸತ್ರ
ಈಗ ಕಣ್ಬುಟ್ಟು ಆಡ್ತಿರ
ನಮ್ಮೈಕ ಮಕ್ಳು ಗತಿ ಏನಣ್ಣಾ…

ಅವತ್ತು ಈ ಅಯ್ನೋರ್ ಕಾಲ್ಲಿ
ಗಾಯ ಮಾಯ್ಕಂಡು
ರಕ್ತ ಚೊಟಚೊಟ್ನ ಸೋರ್ತಿತ್ತು
ನಾವು ಸಾಲ್ಗಟ್ಟಿ
ಮುಲುಮುಲು ಮುತ್ಗಂಡು
ಹೊಟ್ಟಪಾಡು ಮಾಡ್ಕತಿದ್ರಾ..

ಆ ಆಳುವ ಆ ಆಳ್ನೆಡ್ತುವ
ಹೊದ್ದಿರ ದುಪ್ಟಿನ ಎತ್ತಿ ಒದರಿ
ನಾವು ತುಂಬಿರದ
ನೋಡ್ತ ನೋಡ್ತ ಲೊಚುಗುಟ್ತ
ಇದೇನ ಕಟ್ಟೆರ ಇಷ್ಟವ ಅನ್ಕಂಡು
ಕಸ್ಬಳ್ನ ತಕ್ಕಂಡು ಗುಡ್ಸಿ
ರಪ್ಪರಪ್ಪಂತ ಬಡ್ದು
ಆಚ್ಗ ಎಸ್ದು
ನಮ್ ಕೈಕಾಲು ಮುರುದು
ಬಿದ್ದ ಜಾಗ್ದಲ್ಲೆ ಬಿದ್ದು
ನಳ್ಳಾಡುದ್ವಲ್ಲ
ಆ ಸಂಕ್ಟ ನಿಂಗೇನಾರ ಗೊತ್ತಣ್ಣಾ…

ಇದು
ಒಂಜಿನ ಸರಿ
ಏಡ್ಜಿನ ಸರಿ
ಜಿನೇಡೊತ್ತು ಹಿಂಗೆ ಆದ್ರ
ನಾವು ಬದ್ಕದಾದ್ರು ಹೆಂಗೆಣ್ಣಾ..

ಅಂತ..

ಒಂದೆ ಸಮ್ಕ ಕ್ಯಾಣಾಡ್ತ
ತಲಗೊಂದೊಂದ್ ಮಾತಾಡ್ತ
ತಲ ಚಿಟ್ಟಿಡಿಸಿ
ಎಲ್ಲ ಸೇರಿ ಕೆಂಟ್ತಿದ್ರ
ತೂ…ಈ ಮನ ಎಕ್ಕುಟ್ಟೋಗ ಅನ್ನುಸ್ತು

*

ಅವತ್ತು ಸುಡು ಬಿಸ್ಲು

ಮ್ಯಾಲ ಸೂರು
ಗೆಜ್ಜುಲು ಕಟ್ಗಂಡು ಉದುರದು

ಆ ಗೆಜ್ಲುಳ ಉದುರಿ ಉದುರಿ
ನನ್ ಮ್ಯಾಕ್ಕು ಹರ್ಕ ಬಂದು,

“ಈ ಅಯ್ನೋರ್ ದೆಸಿಂದ
ನಮ್ಗೂ ಒಂದ್ ತಾವಾಯ್ತು
ಈ ಅಯ್ನೋರು ಮೊದಲಂಗಿದ್ರ
ನಮ್ಗ ತಾವಿರ್ತಿತ್ತಾ..
ಈ ಅಯ್ನೋರ್ ಆಂಕಾರ ಅಡಗಿ
ನಮ್ಗೂ ಒಂದ್ ಬಾಳಂತ ಆಯ್ತು..”

ಹಂಗೆ,

ಆ ಆಳ್ನುವ ಆ ಆಳ್ನೆಡ್ತಿನುವ
ಕೊಂಡಾಡ್ತ ಕೊಂಡಾಡ್ತ
ನಾ ಬಿದ್ದಿರ ಮೂಲ್ಗ ಮ್ಯಾಲ ನ್ಯಾರುಕ್ಕ
ಕಿಟಕಿ ಬಾಗುಲ್ಗ ಹರುದು..
ಆ ಕಿಟಕಿ ಬಾಗುಲ್ಗ ಅಂಟಿ
ಮೇಯ್ತ ಹೊಟ್ಟ ತುಂಬುಸ್ತ ಇದ್ರ..

ಈ ಗೆಜ್ಜುಳ ದೆಸಿಂದ
ಮ್ಯಾಲ ಸೂರು
ದೊಸಿಕಂಡಂಗಾಗಿ
ಮಳ ಗಾಳಿ ಬೀಸುದ್ರ
ಈಗಿರದೂ ಉದುರತರ ಕಾಣ್ತಿತ್ತು

ಆ ಆಳುವ
ಆ ಆಳ್ನೆಡ್ತುವ
ಬತ್ತರ ಹೊಯ್ತರ
ಸೂರುಪಾರು ಎತ್ತಿ ಇಳ್ಕಿ
ಹಂಚುಪಂಚು ಕೈಯಾಡಿ
ಅಚ್ಕಟ್ ಮಾಡಿ ಇಡಂವ್ ಅನ್ದೆ
ಇವ್ರು ಜಿನಾ
ಬರದ್ಯಾಕ ಹೋಗದ್ಯಾಕ..
*

ದೀವುಳ್ಗ ಜಿನ ಅನ್ಸುತ್ತ

ಹೆಡ್ತಿ ಜೊತಲಿ
ಹೆಡ್ಗಲಿ
ಹಣ್ಣು ಹಂಪ್ಲು ಹೊತ್ಗಂಡು
ಅದ್ಯಾರ ಬಂದು
ಹೊತ್ಗಂಡಿರ ಹೆಡ್ಗನ ಇಳ್ಕಿ
ಜಗುಲಿ ಅಂಚ್ಗ ಕುಂತು
ಬಿಸುಲ್ಗ ಬೆಂದು ಬೆವ್ರು ತೊಟ್ಟಿಕ್ತ
ಹೆಗ್ಲಲಿದ್ದ ಟರ್ಕಿ ಟವಲ್ಲಿ
ತೊಟ್ತಿದ್ದ‌ ಬೆವ್ರ ಸೀಟ್ಗಂಡ್ರು
ಜೊತ್ಗ ಎರಡ್ಕೂಸ್ಗಳೂ
ಆ ಸುಡ ಬಿಸ್ಲು ಬಿಂಕಿಗ
ಒಂದೆ ಸಮ್ಕ ಕಿರುಚ್ತಿದ್ದು

ಆಗ
ಆ ಆಳುವ ಆಳ್ನೆಡ್ತುವ
ಕಂಚ್ಲಿ ನೀರ ಕೊಟ್ಟು ಕುಡಿಸಿ
“ನೋಡಿ ಅಳಿ ಹೆಂಗಾಯ್ತು” ಅಂದ್ರು

ನಂಗೂ ಗೆಪ್ತಿ ಸಿಕ್ದೆ
ಇದ್ಯಾರ ಅನ್ಕಂಡು
ಗೆಪ್ತಿ ಮಾಡ್ಕತಿದ್ದಿ

ಆಮ್ಯಾಲ ಆ ಆಳುವ ಆಳ್ನೆಡ್ತುವ
ಒಳಕ ಹೋದ್ರು

ಆ ಬಂದವ್ರೂ ಎದ್ದು
ಅವ್ರ ಅನುಸರುಸುದ್ರು

ಆಗ ಒಳಗ
“ನಾನು.. ನಾನು..
ನಾನುಕಾ ಬಾವ..”

ಈಗ ಗೆಪ್ತಿಗ ಬಂತು:
ಸತ್ತೋದ ನೀಲವ್ವೋರ್ ತಮ್ಮ

“ಇವ ನನ್ನೆಡ್ತಿ
ಇವು ನನ್ಮಕ್ಳು
ಒಂದೆಣ್ಣು ಒಂದ್ಗಂಡು”

ಅದ್ಯಾಕ ಏನಾ
ಈ ಅಯ್ನೋರ್ ಸೊರ ಕೇಳ್ದು

“ಏನ್ ಮಾತಾಡಿರು ಅಳಿ..
ಹಿಂಗೆ,
ಜಿನಾ.. ಹಿಂಗೆ
ಎಡ್ಕಿಲ್ಲ ಬಲ್ಕಲ್ಲ
ಏನಾ ಮಾಡದು..”

ಹಿಂಗೆ ಮಾತುಕತ ನಡಿತಾ
ಹೊತ್ತು ಮೀರ್ತಾ
ಕತ್ಲು ಕವುಸ್ಕತಾ
ಗಾಳಿ ತಿಸ್ಸಂತ ಬೀಸ್ತಾ
ಆ ಬೀಸ ಮಗ್ಗುಲ್ಗ

ಈ ಅಯ್ನೋರು,

“ಕಾಲ ಏ ಕಾಲ ಇದ್ಯಾಕ್ಲ ಬಂದಾ
ಚೆಲ್ವಿ ನಿ ಚೆನ್ನಗಿದ್ದಯ..
ಇದ್ಯಾಕ ಹಿಂಗ
ದಯ್ಯ ಮೆಟ್ಗಂಡಿತರ ಕುಣಿತಿದ್ದರಿ..

ಆ ಸವ್ವ್ಯಾ..
ಆ ನನ್ ಕಳ್ಬಳ್ಳಿ ಸವ್ವ್ಯಾ..

“ತೂ.. ಜನ್ಮುವೇ
ನಂದೂ ಒಂದ್ ಜನ್ಮುವೇ..

ಅವತ್ತು ರಾತ್ರ ಹೆಂಡ ಕುಡ್ದೊತ್ಲಿ
ಆ ನನ್ ಚಂದ್ರಿ ಮಾತೂ ಬಂತು
ಸರೊತ್ಲಿ
ನನ್ ಕಳ್ಬಳ್ಳಿ ಮಾತೂ ಬಂತು

ಅವತ್ಗಂಟೂ ನಿಚಾಯಿಸ್ಗ ಇದ್ದಿ
ಅವತ್ತು ಕಳುದ್ದೇ..

ತೂ.. ಜನ್ಮುವೇ
ನಂದೂ ಒಂದ್ ಜನ್ಮುವೇ..

ಪರ್ಶು ಬಂದ್ನ ಪರ್ಶು…
ಆ ಕಾಲ್ನೈದ ಪರ್ಶು ಬಂದ್ನ
ಬಂದ್ರೆಪ್ಪೋ.. ಹಿಡ್ಕಳಿ ಹಿಡ್ಕಳಿ

ಇದೆ ಇದೆ ಬರೀ ಇದೆ
ಜಿನೇಡೊತ್ತು ಇದೆ

ಇದು ಈಚ್ಗ ಬಂದು
ಆ ಬೀಸ ಗಾಳಿಲಿ ತೇಲ್ತ
ಬೀದಿಲಿ ಆಡ್ತ..

ಆ ಆಡದ
ಆ ಆಳು ಆ ಆಳ್ನೆಡ್ತುವ ಕೇಳ್ತ

ಈ ಊರು
ಆ ಊರು
ಆ ಸುತ್ತ ಏಳೂರೊಳಕು ತಲುಪ್ತ
ಗುಸುಗುಸು ಮಾತಾಡ್ತ..

ಆ ಆಳು ಆ ಆಳ್ನೆಡ್ತುವ
ಬಂದವ್ರು ಬಂದಂಗೆ,

ಸೊಳ್ಗ ಬತ್ತಿ ಹೊಸ್ದಾಕಿ..
ಸೀಮೆಣ್ಣ ಊದು ಹಸ್ಸಿ…
ಬಾಗ್ಲ ಎಳಕಂಡೂ..
ಆ ಕತ್ಲಾಗಿದ್ ಕತ್ಲೊಳ್ಗ
ಗೊಣಕ್ತ ಗೊಣುಕ್ತ ಹೋದ್ರಲ್ಲೊ…

ಆಗ ಮ್ಯಾಲ
ಮಿಂಚು ಸೊಯ್ಯಂತ ಮಿಚ್ತ
ಕಣ್ಗ ಕುಕ್ತ
ಗುಡುಗುಡು ಗುಡುಗು ಗುಡುಗ್ತ
ದಡ್ ದಡ್ ದಡಾರ್ ಬಡಾರ್
ಸದ್ಗ
ಈ ಸಲಿರಾಗಿದ್ ಸಲಿರೆಲ್ಲ
ತರತರ ತರಗುಟ್ಗ ಒದುರ್ತಲ್ಲಾ…

-ಎಂ.ಜವರಾಜ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x