ನಾವು ಏನೂ ಅನುಭವಿಸಿದರೂ ಅದು ನಮ್ಮ ಕರ್ಮಫಲವಷ್ಟೆ: ಪೂಜಾ ಗುಜರನ್. ಮಂಗಳೂರು.

ಆವತ್ತು ಅತ್ಮೀಯ ಗೆಳೆಯರೊಬ್ಬರ ಸಂಬಂಧಿಕರ ಸಾವು ನಡೆದಿತ್ತು. ಅವರು ತುಂಬಾ ಬೇಜಾರಿನಲ್ಲಿ ನನ್ನಲ್ಲಿ ಒಂದು ಮಾತು ಹೇಳಿದರು. ಅಲ್ಲ ಏನಾಗುತ್ತಿದೆ ಇಂದು. ಎಲ್ಲಿ ನೋಡಿದರು ಸಾವು, ನೋವು, ಈಗ ಇದ್ದವರು ಮತ್ತೆ ಇಲ್ಲ. ನೋಡ ನೋಡುತ್ತಿದಂತೆ ಎದ್ದು ಹೋಗುತ್ತಿದ್ದಾರಲ್ವ. ಇದೆಂತಹ ಕ್ರೂರ ಸಮಯ,  ಇದನ್ನೆಲ್ಲ ನೋಡುವುದಕ್ಕಾಗಿಯಾ ನಾವಿನ್ನು ಬದುಕಿರೋದು. ಹೀಗೆ ಅವರ ನೋವಿನ ಮಾತುಗಳು ಸಾಗುತ್ತಿದ್ದವು. ಅವರ ಹಣೆಬರಹವೇ ಸರಿ ಇಲ್ಲವೇನೋ ಅದಕ್ಕೆ ವಿಧಿ ಹೀಗೆ ಮಾಡುತ್ತಿದ್ದಾನೆ. ಅಂದಾಗ ನನಗೆ ಏನೂ ಉತ್ತರಿಸಬೇಕೋ ತಿಳಿಯದಾಗಿತ್ತು. ಅಲ್ಲ ನಾವ್ಯಾಕೆ ಈ ಹಣೆಬರಹ ವಿಧಿಬರಹ ಅಂತ ಹೇಳುತ್ತೇವೆ ಅನ್ನೋದು ನನಗೆ ಇವತ್ತಿಗೂ ಒಂದು ಬಿಡಿಸಲಾರದ ಯಕ್ಷಪ್ರಶ್ನೆ. ಭೂಮಿ ಮೇಲೆ ಹುಟ್ಟಿದವನು ಸಾಯಲೇಬೇಕು. ಆಯಸ್ಸು ಇರುವವರೆಗಷ್ಟೆ ನಮ್ಮ ಬಾಳು. ಮತ್ತೆಲ್ಲವೂ ಕಾಣದ ಕತ್ತಲು. ಅದ್ಯಾಕೆ ಕಣ್ಣಿಗೆ ಕಾಣದ ಬರಹವನ್ನು ವಿಧಿಯ ಮೇಲೆ ಹೊರೆಸುತ್ತೇವೆ.? ನಮ್ಮ ಕರ್ಮಾನುಸಾರ ಇಲ್ಲಿ ಎಲ್ಲವೂ ನಡೆಯುತ್ತದೆ. ಅಲ್ಲವೇ.? ಈ ವಾದವನ್ನು ನಾನು ಅವರ ಮುಂದೆ ಇಟ್ಟಾಗ ಏನೋ ಒಂದು ಗೊತ್ತಾಗಲ್ಲ ಕಣೇ ಎಲ್ಲವೂ ಹಣೆಬರಹ ಅಂತಾನೇ ಮಾತು ಮುಗಿಸಿದಾಗ ಅಳಬೇಕೋ ನಗಬೇಕೋ ಅರ್ಥವಾಗಲಿಲ್ಲ. ಇಂತಹ ಮನಸ್ಥಿತಿಯವರು ತುಂಬಾ ಜನ ಇರುತ್ತಾರೆ. ಅವರಿಗೆ ಅದೇನಾದರೂ ಅವರ ತಲೆಗೆ ಹೋಗುವುದು ಈ ಹಣೆಬರಹ ವಿಧಿಬರಹ ಅಷ್ಟೆ. 

ಕಷ್ಟಗಳು ಬೆನ್ನತ್ತಿ ಬಂದಾಗ ನಾವು ಮೊದಲು ದೂರುವುದೇ ಈ ಹಣೆಬರಹವನ್ನು.ಏನಾಗುತ್ತಿದೆ ಯಾಕೆ ಹೀಗೆ ಅನ್ನುವ ಹತ್ತು ಹಲವಾರು ಯೋಚನೆಗಳು ಮನಸ್ಸನ್ನು ದಾಳಿ ಮಾಡುತ್ತದೆ.ಬದುಕು ನಮ್ಮನ್ನು ಕ್ಷಣ ಕ್ಷಣವೂ ಬದಲಿಸುತ್ತಿರುತ್ತದೆ. ಯೋಜನೆಗಳ ಯೋಚನೆಗಳು ಸಾವಿರಾರು. ಇದೆಲ್ಲವನ್ನೂ ನೆರವೇರಿಸಲು ನಾವು ಪ್ರತಿದಿನ ಪ್ರಯತ್ನಿಸುತ್ತೇವೆ. ಇವತ್ತಿನ ಪರಿಸ್ಥಿತಿಯಲ್ಲಿ ಮನುಷ್ಯನ ಮಾನಸಿಕ ಒತ್ತಡದಲ್ಲಿ ಅನೇಕ ಏರುಪೇರುಗಳಾಗಿದೆ. ಕೆಲಸವಿಲ್ಲ ಕಾರ್ಯವಿಲ್ಲ. ಅಂತ ಅರಿವಾದಾಗ ಮನಸ್ಸು ವಿಲವಿಲನೇ ಒದ್ದಾಡಿರುತ್ತದೆ. ಬದುಕು ನಿಂತ ನೀರಾಗಿಬಿಟ್ಟರೆ ಭವಿಷ್ಯದ ಗತಿಯೇನು? ಹೀಗೆ ಚಿಂತೆಗಳು ಮನಸ್ಸನ್ನು ಇನ್ನಷ್ಟು ತತ್ತರಗೊಳಿಸುತ್ತದೆ. ಹತಾಶೆ ನಿರಾಸೆಗಳು ಒಮ್ಮೆ ಮನಸ್ಸನ್ನು ದಾಳಿ ಮಾಡಿದರೆ ಮತ್ತೆಲ್ಲವೂ ಮುಗಿದಂತೆಯೆ. ಆಗ ನಮ್ಮ ಯೋಚನೆಗಳೆಲ್ಲ ಧರ್ಮ ಕರ್ಮಗಳ ಸಿದ್ದಾಂತದ ಸುತ್ತ ಗಿರಕಿ ಹೊಡೆಯಲು ಶುರುವಾಗುತ್ತದೆ. ಇದು ಯಾಕೆ ಹೀಗಾಗುತ್ತಿದೆ. ಕಷ್ಟವೇ ಯಾಕೆ ಕಾಡುತ್ತಿದೆ‌?ಕೈಯಲ್ಲಿ ಬಿಡಿಗಾಸು ನಿಲ್ಲುತ್ತಿಲ್ಲ. ನೆಮ್ಮದಿ ಇಲ್ಲ ಅನ್ನುವ ಯೋಚನೆಗೆ ಮನಸ್ಸು ತತ್ತರಿಸುತ್ತದೆ. 

ಇದ್ಯಾಕೆ ಹೀಗಾಯಿತು. ಏನೂ ಮಾಡಿದರೆ ಸರಿಯಾಗುತ್ತದೆ ಯಾರ ಬಳಿ ಹೋಗಲಿ ಯಾವ ಜ್ಯೋತಿಷ್ಯ ತನ್ನ ಕಷ್ಟಕ್ಕೆ ಪರಿಹಾರ ಕೊಡಬಹುದು ಅಂತ ಚಿಂತಿಸುತ್ತ ಕೂರುತ್ತಾನೆ. ಯಾಕೋ ನನ್ನ ಹಣೆಬರಹವೇ ಸರಿ ಇಲ್ಲ ಅನ್ನುವ ತೀರ್ಮಾನಕ್ಕೆ ಬರುತ್ತಾನೆ. ಆ ಕ್ಷಣಕ್ಕೆ ಅವನು ಪರಿಹಾರವನ್ನು ಹುಡುಕುವ ಬದಲು ತನ್ನ ಹಣೆಬರಹವನ್ನು ಜರಿಯುತ್ತಾ ಇರುತ್ತಾನೆ. ಸೋಲು ಮನುಷ್ಯನ ಮನಸ್ಸನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ. 

ಇಲ್ಲಿ ನಾವು ಏನು ಬಿತ್ತುತ್ತೇವೋ ಅದನ್ನೇ ಫಲವಾಗಿ ಪಡೆಯುತ್ತೇವೆ. ಸನ್ಮಾರ್ಗದಲ್ಲಿ ನಡೆಯುವಾಗ ಸರ್ವವೂ ಸುಂದರ. ನಾವು ಮಾಡುವ ಕಾರ್ಯವೇ ನಮ್ಮ ಬದುಕನ್ನು ರೂಪಿಸುತ್ತದೆ. ಅಂದರೆಇಲ್ಲಿ ಕರ್ಮವೇ ನಮ್ಮನ್ನು ಸದಾ ನಡೆಸುತ್ತಿರುತ್ತದೆ. ನಾವು ಕರ್ಮನುಸಾರವಾಗಿ ಬದುಕುತ್ತಿರುವವರು.ಕರ್ಮವನ್ನು ಮಾಡದೇ ಇರಲಾಗದು.ನಮ್ಮ ಸದ್ವಿಚಾರಗಳಿಂದ ಮಾಡಿದ ಕರ್ಮವೇ ಮೋಕ್ಷವನ್ನು ಸಿದ್ಧಿಸುತ್ತದೆ.  ಇಲ್ಲಿ ಪ್ರತಿದಿನ ಹುಟ್ಟಿ ಪ್ರತಿದಿನ ಸಾಯುವುದೇ ಮನುಷ್ಯನ ಬದುಕು.ಅದಕ್ಕೆ ಕಾಣದ ಹಣೆಬರವನ್ನು ದೂರುತ್ತ ಕುಳಿತರೇನು ಬಂತು.ಮನಸ್ಸು ಬಲಶಾಲಿಯಾಗಿದ್ದರೆ ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳಬಹುದು. ಧೃಢವಾದ ನಿರ್ಧಾರ ಎಲ್ಲವನ್ನು ಬದಲಿಸುತ್ತದೆ..

ಯಾರದೋ ಸಾವು ಸಂಭವಿಸಿದಾಗಲೂ ನಾವು ಭಯಭೀತರಾಗುತ್ತೇವೆ. ನಾಳೆ ನಾನು ಸಾಯಬಹುದು ಅನ್ನುವ ಭಯವೊಂದು ಮನಸ್ಸನ್ನು ಆವರಿಸುತ್ತದೆ.  ಆದರೆ ಇಲ್ಲಿ ನಾವು ಉಸಿರಾಡುವ ಉಸಿರಿಗಷ್ಟೆ ಸಾವಿನ ರುಚಿ ಅರಿಯಲು ಸಾಧ್ಯ. ಅದು ಮಾತ್ರ ನಮ್ಮನ್ನು ಸಾವಿನ ಸಮೀಪಕ್ಕೆ ಕೊಂಡೊಯ್ಯುತ್ತದೆ. ಹುಟ್ಟು ಸಾವಿನ ಕೊಂಡಿಯಲ್ಲಿ ಬದುಕಿನ ಬಂಡಿ ಚಲಿಸುತ್ತದೆ. ಇಲ್ಲಿ ಸ್ವಲ್ಪ ಏರುಪೇರಾದರೂ ಬದುಕು ನಿಲ್ಲುತ್ತದೆ. 

ಬದುಕಿನಲ್ಲಿ ಸಾವು, ನೋವು, ಸೋಲು, ಗೆಲುವು, ಅನಿವಾರ್ಯ. ಇಲ್ಲಿ ತಪ್ಪುಗಳು ಆಗೋದು ಸಹಜ. ನಮ್ಮ ಲೆಕ್ಕಚಾರದಂತೆ ಎಲ್ಲವೂ ನಡೆಯುತ್ತದೆ ಅಂದುಕೊಳ್ಳುವುದು ಮೂರ್ಖತನ.  ಹಾಗೇ ನಾವು ಇಲ್ಲಿ ಏನೇ ಮಾಡುತ್ತಿದ್ದರೂ ಅದಕ್ಕೊಂದು ಕಾರಣ ಇರಲೇಬೇಕು. ಕಾರಣವಿಲ್ಲದೇ ಯಾವುದು ನಡೆಯಲ್ಲ. ಅದನ್ನು ಹಣೆಬರಹ ವಿಧಿಬರಹ ಅನ್ನುವ ಹೆಸರಿನಿಂದ ಕರೆಯುವವರು ಇದ್ದಾರೆ. ಯಾವುದು ಕಾಣುವುದಿಲ್ಲವೋ ಅದನ್ನು ನಾವು ಹಣೆಬರಹದ ಪಟ್ಟಿಯಲ್ಲಿ ಸೇರಿಸಿ ಬಿಡುತ್ತೇವೆ.  

ನಾವು ಅನುಭವಿಸುವ ಕಷ್ಟ ಸುಖಗಳಿಗೆ ನಾವು ಮಾಡಿದ ಕರ್ಮಗಳೇ ಕಾರಣ ಎನ್ನುತ್ತೇವೆ. ನಾವು ಏನೂ ಬಿತ್ತುತ್ತೇವೋ ಅದನ್ನೆ  ಫಲವಾಗಿ ಪಡೆಯುತ್ತೇವೆ. ನಮ್ಮ ದೇಹದಲ್ಲಿ ಉಸಿರು ಇರುವವರೆಗೂ ಕರ್ಮ ಅನಿವಾರ್ಯ.ನಿನ್ನ ಕರ್ಮವನ್ನು ನೀನು ಮಾಡು ಫಲಾ ಫಲವನ್ನು ನನಗೆ ಬಿಡು ಎಂದೂ ಶ್ರೀ ಕೃಷ್ಣನೂ ಹೇಳುತ್ತಾನೆ.
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ!

ಪ್ರತಿ ಹುಟ್ಟಿಗೂ ಒಂದು ಕರ್ತವ್ಯ ಇರುತ್ತದೆ. ಹಾಗೇ ಕಾರಣವೂ ಇರುತ್ತದೆ. ಜನನ ಮರಣ ಇವೆರಡಕ್ಕೂ ಕಾರಣವಿರುತ್ತದೆ. ಕಾರಣವಿಲ್ಲದೇ ಯಾವ ಕಾರ್ಯವೂ ನಡೆಯದು. ನಾವೆಲ್ಲರೂ ಕಾರಣ ಜನ್ಮರೇ ಅಲ್ಲವೇ..?ಒಳ್ಳೆಯದು ಯಾವುದು ಕೆಟ್ಟದು ಯಾವುದು ಎಂಬುದರ ಮೇಲೆ ಜೀವನದ ಫಲಿತಾಂಶವಿರುತ್ತದೆ. ನಾವು ಮಾಡುವ ಕೆಟ್ಟ ಕರ್ಮಗಳು ನಕರಾತ್ಮಕ ಫಲಗಳನ್ನಷ್ಟೆ ನೀಡುತ್ತದೆ. ನಮ್ಮ ಭಾವ ಶುದ್ಧವಾಗಿದ್ದರೆ ಸಿಗುವ ಫಲವೂ ಶುದ್ಧವಾಗಿರುತ್ತದೆ. ದ್ವೇಷ ಅಸೂಯೆಗೆ ನಕರಾತ್ಮಕ ಶಕ್ತಿಗಳು ಜಾಗೃತಗೊಳ್ಳುತ್ತದೆ.ನಮ್ಮನ್ನು ಅಧಃಪತನಕ್ಕೆ ತಳ್ಳುತ್ತದೆ. ಪ್ರೀತಿ ಸಂತೋಷಕ್ಕೆ ಸಕರಾತ್ಮಕ ಶಕ್ತಿಗಳು ಇನ್ನಷ್ಟು ಒಳ್ಳೆಯದನ್ನು ಕೊಡುತ್ತದೆ. ಬದುಕಿನ ಒಂದೊಂದು ಹಂತವೂ ಒಂದೊಂದು ಪಾಠವನ್ನು ಕಲಿಸುತ್ತದೆ. ಹುಟ್ಟಿದ ಮೇಲೆ ಸಾವು ಖಚಿತ. ಇದು ಅನಿವಾರ್ಯ ಕೂಡ. ಅದಕ್ಕಾಗಿ  ಸಮಯವನ್ನು ದೂರುವುದು ಯಾಕೆ.? ನಾವು ಏನೂ ಅನುಭವಿಸಿದರೂ ಅದು ನಮ್ಮ ಕರ್ಮಫಲವಷ್ಟೆ. ಇಲ್ಲಿ ಎಲ್ಲವನ್ನೂ ಸಮಚಿತ್ತವಾಗಿ ಸ್ವೀಕರಿಸುವ ಮನಸ್ಸು ಇರಬೇಕಷ್ಟೆ…
-ಪೂಜಾ ಗುಜರನ್. ಮಂಗಳೂರು.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x