ನೋವು ಸಾವಾಗದಿರಲಿ..: ಪೂಜಾ ಗುಜರನ್. ಮಂಗಳೂರು

ಬದುಕು ಒಂದೊಂದು ಸಲ ಹೀಗಾಗಿ ಬಿಡುತ್ತದೆ.. ಯಾರು ಬೇಡ ಏನೂ ಬೇಡ ಹಾಗೇ ಎದ್ದು ಹೋಗಿಬಿಡಬೇಕು. ಯಾರ ಜಂಜಾಟವೂ ಬೇಡ ಅನಿಸುವಷ್ಟು ಬದುಕು ರೋಸಿ ಹೋಗಿರುತ್ತದೆ..ಈ ಯೋಚನೆ ಪ್ರತಿಯೊಬ್ಬನ ಬದುಕಿನಲ್ಲಿಯೂ ಒಂದಲ್ಲ ಒಂದು ದಿನ ಬಂದಿರುತ್ತದೆ. ಕೆಲವರು ಎದ್ದು ಹೋದರೆ ಇನ್ನು ಕೆಲವರು ಯೋಚನೆಯ ಆಯಾಮವನ್ನು ಬದಲಿಸಿ ಸುಮ್ಮನಿರುತ್ತಾರೆ. ಆದರೆ ಎಲ್ಲರ ನಿರ್ಧಾರಗಳು ಬದಲಾಗಿರುವುದಿಲ್ಲ. ಬದಲಿಗೆ ಅವರಿಗೆ ಈ ಬದುಕಲ್ಲಿ ಇನ್ನೇನೂ ಇಲ್ಲ ಅನ್ನುವುದೊಂದೆ ಯೋಚನೆಯಾಗಿರುತ್ತದೆ. ಈ ಯೋಚನೆಯ ಯೋಜನೆಗಳೆಲ್ಲ ಮುಕ್ತಾಯವಾಗುವುದು ಸಾವಿನಲ್ಲಿ. ಅತಿಯಾದ ಖಿನ್ನತೆ ಸಾವಿನ ಕದವನ್ನು ತೆರೆಯುವಂತೆ ಮಾಡುತ್ತದೆ. ಮಾನಸಿಕವಾಗಿ ನೊಂದವನು ಶರಣಾಗುವುದು ಸಾವಿಗೆ. ಇಂದೆಂತಹ ವಿಪರ್ಯಾಸ.? ಮನುಷ್ಯನ ಮನಸ್ಸು ಇಷ್ಟೊಂದು ದುರ್ಬಲವಾದರೆ ಬದುಕು ಇನ್ನಷ್ಟು ಕಠಿಣವಾಗುವುದಿಲ್ಲವೇ.? ಇಂದು ಮಕ್ಕಳಿಂದ ಹಿಡಿದು ಮುದುಕರವರೆಗೂ ಈ ಆತ್ಮಹತ್ಯೆಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಕ್ಕೆ ಕಾರಣಗಳು ಹಲವಾರು ಇರಬಹುದು ಆದರೆ ಎಲ್ಲವೂ ಕೊನೆಯಾಗುವುದು ಸಾವಿನಲ್ಲಿ.

ಆತ್ಮಹತ್ಯೆ ಮಾಡಿಕೊಳ್ಳುವ ಅಷ್ಟು ಜನರ ಯೋಚನೆಗೂ ಒಂದು ಬಲವಾದ ಇಲ್ಲವೇ ಬದಲಾಗದ ಅಭಿಪ್ರಾಯಗಳು ಇರುತ್ತದೆ. ಕೆಲವರಿಗೆ ಸಾವಿನ ಯೋಚನೆಯೇ ಒಂದು ನೆಮ್ಮದಿಯ ವಿಷಯವಾಗಿರುತ್ತದೆ. ಇಲ್ಲಿ ದಿನ ಸತ್ತು ಬದುಕುವುದಕ್ಕಿಂತ ಒಂದೇ ಬಾರಿ ಸಾಯುವುದೇ ಮೇಲು ಅನ್ನುವ ನಿರ್ಧಾರ ಮನಸ್ಸಿನಲ್ಲಿ ಕುಳಿತುಬಿಟ್ಟಿರುತ್ತದೆ. ಮುಂದಿನ ಯೋಜನೆಗಳೆಲ್ಲ ಯಾವ ತರ ನಾನು ಸಾಯಬೇಕು ಅನ್ನುವ ಯೋಚನೆಗಳು.ಸಾಯಲು ಹೊರಟವನಿಗೆ ನಾನು ಬದುಕಬೇಕು ಎನ್ನುವ ಯೋಚನೆ ಆ ಕ್ಷಣಕ್ಕೆ ಬರುವುದಿಲ್ಲ. ಬಂದವನು ಮತ್ತೆಂದೂ ಸಾಯುವ ನಿರ್ಧಾರವನ್ನು ಮಾಡಲಾರ. ಈ ಆತ್ಮಹತ್ಯೆ ಅನ್ನುವುದು ಒಂದು ದುರ್ಬಲ ಮನಸ್ಸಿನ ಅತಿರೇಕದ ನಿರ್ಧಾರ. ನಿಜ ಸಾಯುವ ಯೋಚನೆ ವಿಲಕ್ಷಣ ಇರಬಹುದು. ಆದರೆ ಅದಕ್ಕಾಗಿ ಅವನು ಭಾವುಕ ಮನಸ್ಸನ್ನು ಸಿದ್ಧಗೊಳಿಸಿ ಗಟ್ಟಿ ಮಾಡಬೇಕು. ಒಂದು ಸಲ ಎಲ್ಲವನ್ನೂ ಮುಗಿಸಿ ಬಿಟ್ಟರೆ ನೆಮ್ಮದಿ. ಇನ್ನೆಂದೂ ಈ ಭೂಮಿ ಮೇಲೆ ಬದುಕಬಾರದು ಅನ್ನುವ ನಿರ್ಧಾರದ ಮುಂದೆ ಮತ್ತೇನನ್ನೂ ಯೋಚಿಸದಷ್ಟು ಮನಸ್ಸು ದುರ್ಬಲವಾಗಿರುತ್ತದೆ. ಈ ಆತ್ಮಹತ್ಯೆಗೆ ಶರಣಾದವರೆಲ್ಲ ತಮ್ಮನ್ನು ತಾವು ನಿಯಂತ್ರಿಸದಷ್ಟು ಮನಸ್ಸಿನ ಒತ್ತಡಕ್ಕೆ ಒಳಗಾಗಿರುತ್ತಾರೆ. ಮಾನಸಿಕವಾಗಿ ಕಿರಿಕಿರಿಯನ್ನು ಅನುಭವಿಸಿರುತ್ತಾರೆ. ಇಲ್ಲಿ ಸಾವು ಒಂದೇ ಪರಿಹಾರ ಎನ್ನುವ ಭಾವನೆಯೊಂದು ಮನಸ್ಸನ್ನು ತುಂಬಿರುತ್ತದೆ.

ಭಾವುಕ ಮನಸ್ಸು ಏನೇನೊ ಯೋಚಿಸುತ್ತದೆ. ಹತೋಟಿಗೆ ಸಿಗದ ಮನಸ್ಸು ಲಂಗು ಲಗಾಮಿಲ್ಲದೆ ಓಡುತ್ತಿರುತ್ತದೆ. ಕೊನೆಗೂ ಸಾವು ಮಾತ್ರ ಅವರೊಳಗಿನ ಮಾನಸಿಕ ಕಿರಿ ಕಿರಿಯನ್ನು ದೂರ ಮಾಡಿರುತ್ತದೆ. ಸಾವಿನಲ್ಲಿ ಸುಖವಿದೆ ಎನ್ನುವ ಯೋಚನೆ ಬಂದವರು ಮತ್ತೆ ಬದುಕನ್ನು ಪ್ರೀತಿಸಲಾರರು. ಇಲ್ಲಿ ಆತ್ಮಹತ್ಯೆಗೆ ಕಾರಣಗಳು ಹಲವಾರು. ಒಂದೇ ವಿಷಯಕ್ಕೆ ಎಲ್ಲೂ ಆತ್ಮಹತ್ಯೆಗಳು ಸಂಭವಿಸುವುದಿಲ್ಲ. ವ್ಯಕ್ತಿಯ ಮಾನಸಿಕ ಪರಿಸ್ಥಿತಿಗೆ ಅನುಗುಣವಾಗಿ ಇಂತಹ ಘಟನೆಗಳು ನಡೆಯುತ್ತದೆ. ಕೌಟುಂಬಿಕ ಕಲಹ,ಹಿಂಸೆ, ಅಸಮಾಧಾನಗಳು, ಮಾನಸಿಕ ಅಸ್ವಸ್ಥತೆ, ನಿರಾಸೆಗಳು, ಹೀಗೆ ಹಲವಾರು ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಸಾವಿನ ಬಗ್ಗೆ ಯೋಚಿಸುವವನ ಮಾನಸಿಕ ಪರಿಸ್ಥಿತಿಯೂ ತುಂಬಾ ಹದಗೆಟ್ಟಿರುತ್ತದೆ. ಅವರಿಗೆ ಸಾವು ಮಾತ್ರ ಕಟ್ಟ ಕಡೆಯ ನಿರ್ಧಾರವಾಗಿರುತ್ತದೆ. ಒಮ್ಮೆ ಸಾಯಬೇಕು ಅಂದುಕೊಂಡವನು ಮತ್ತೊಮ್ಮೆ ಬದುಕಿನ ಬಗ್ಗೆ ಯೋಚಿಸಲಾರ. ಅಷ್ಟರ ಮಟ್ಟಿಗೆ ಅವನು ಖಿನ್ನತೆಗೆ ಒಳಗಾಗಿರುತ್ತಾನೆ. ಕೆಲವು ಕುಟುಂಬದಲ್ಲಿ ಅರ್ಥಿಕ ಸಮಸ್ಯೆ ಸಾಲದ ಭಾದೆ ಅತಿಯಾದಾಗ ಇಡೀ ಕುಟುಂಬವೇ ಆತ್ಮಹತ್ಯೆಗೆ ಶರಣಾದ ಘಟನೆಗಳು ನಡೆಯುತ್ತದೆ.

ಆತ್ಮಹತ್ಯೆ ಮಹಾಪಾಪ ಅಂದವನು ಕೂಡ ನೇಣಿಗೆ ಕೊರಳೊಡ್ಡಿರುತ್ತಾನೆ. ನಾವು ಅಂದುಕೊಂಡಂತೆ ಇಲ್ಲಿ ಯಾವುದು ಇಲ್ಲ. ಬದುಕಲು ಸಾವಿರ ದಾರಿ ಇದೆ ಅಂದರೂ ಯಾವುದು ಕಾಣದೆ ಕಂಗಲಾಗಿ ಸತ್ತವರ ಪಾಲು ಅಧಿಕವಾಗಿದೆ. ಹೇಳಿದಷ್ಟು ಯಾವುದು ಸುಲಭವಲ್ಲ. ಹಾಗಂತ ಬದುಕನ್ನು ಕಷ್ಟಕರವಾಗಿ ನೋಡಿದರೆ ಅದು ಕಷ್ಟವೇ. ಸಾಯಲು ಸಾವಿರ ದಾರಿ ಹುಡುಕುವನಿಗೆ ಬದುಕಲು ಒಂದು ದಾರಿಯೂ ಕಾಣುವುದಿಲ್ಲ ಅನ್ನುವುದೇ ವಿಪರ್ಯಾಸ. ಈ ಬದುಕೇ ಹೀಗೆ ಬಲು ವಿಚಿತ್ರ ಅಷ್ಟೇ ಸೋಜಿಗ. ಕಷ್ಟ ಬಂದಾಗ ಕುಗ್ಗದೇ ಸುಖದಲ್ಲಿ ಹಿಗ್ಗದೆ ಬದುಕಿನ ಬಗ್ಗೆ ಮಧುರವಾದ ಭಾವವನ್ನು ಬೆಳೆಸಿಕೊಂಡವನು ಯಾವತ್ತು ಅನಾಹುತಗಳನ್ನು ಮೈಮೇಲೆ ಎಳೆದುಕೊಳ್ಳಲಾರ. ಕೆಲವರು ಮಾನಸಿಕವಾಗಿ ತುಂಬಾ ಅಂತರ್ಮುಖಿಯಾಗಿರುತ್ತಾರೆ. ಯಾರ ಜೊತೆಯೂ ಬೆರೆಯದೆ ಒಬ್ಬಂಟಿಯಾಗಿರುತ್ತಾರೆ. ತಮ್ಮ ಮನಸ್ಸಿನ ಭಾವನೆಗಳನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಇವರು ಅತಿಯಾದ ಖಿನ್ನತೆಯಿಂದ ಬಳಲುತ್ತಿರುತ್ತಾರೆ. ಇಂತವರಿಗೆ ಆತ್ಮಹತ್ಯೆಯ ಯೋಚನೆಗಳು ಬೇಗನೆ ಬಂದು ಬಿಡುತ್ತದೆ.

ಧೀರ್ಘಕಾಲದ ಆರೋಗ್ಯದ ಸಮಸ್ಯೆ ಇರುವವರಿಗೆ ಬದುಕು ಭಾರವಾಗಿರುತ್ತದೆ. ಗುಣಪಡಿಸಲಾಗದ ಕಾಯಿಲೆಯನ್ನು ಅನುಭವಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಾರೆ. ಕೆಲವೊಮ್ಮೆ ಅತಿರೇಕದ ನಿರ್ಧಾರವನ್ನು ಮಾಡಿ ಸೋತು ಬದುಕಿದವರಿದ್ದಾರೆ. ಕೆಲವರು ದುಡುಕಿನ ನಿರ್ಧಾರಕ್ಕೆ ನಾಚಿ ಮತ್ತೊಮ್ಮೆಸಾಯುವ ಯೋಚನೆ ಮಾಡಲಾರರು. ಇನ್ನೂ ಅತೀ ಖಿನ್ನತೆಯಿಂದ ಬಳಲುವವರು ಮತ್ತೆ ಮತ್ತೆ ಅದೇ ಪ್ರಯತ್ನವನ್ನು ಮಾಡುತ್ತಿರುತ್ತಾರೆ. ಅಂದು ಆ ಹುಡುಗಿಯ ನಿರ್ಧಾರವೂ ಆತ್ಮಹತ್ಯೆಯೇ ಆಗಿತ್ತು. ತನ್ನ ಮೈ ಮೇಲೆ ಬೆಂಕಿ ಹಚ್ಚಿಕೊಂಡು ಸಾಯಲು ಹೊರಟಿದ್ದಳು. ಬೆಂಕಿಯ ಕೆನ್ನಾಲಿಗೆಗಳು ಹಂತ ಹಂತವಾಗಿ ಸುಡುವಾಗ ಅದರಿಂದ ಪಾರಾಗಿ ಬದುಕಲು ಹರಸಾಹಸ ಪಡುತ್ತಿದ್ದಳು. ಅಯ್ಯೋ ಉರಿ ನಾನು ಬದುಕಬೇಕು ನನ್ನನು ಬದುಕಿಸಿ ಎಂದೂ ಬೊಬ್ಬಿಡುತ್ತ ಇದ್ದವಳನ್ನು ಕೊನೆಗೂ ಯಾರಿಗೂ ಬದುಕಿಸಲಾಗಲಿಲ್ಲ. ಇಂತಹ ಘಟನೆಗಳು ಹಲವಾರು ಇವೆ. ಆ ಕ್ಷಣದ ಒಂದು ದುಡುಕಿನ ನಿರ್ಧಾರ ಬದುಕನ್ನು ಇನ್ನಿಲ್ಲದಂತೆ ಸಾವಿನ ಕಡೆಗೆ ನೂಕಿರುತ್ತದೆ.

ಆ ದಿನ ಅವಳ ಯೋಚನೆಯೂ ಸಾವಿನದೆ ಆಗಿತ್ತು. ನಿರಂತರವಾಗಿ ಹೊಟ್ಟೆನೋವಿನಿಂದ ಬಳಲುತ್ತಿದ್ದವಳಿಗೆ ಸಾವು ಪರಿಹಾರವಾಗಿ ಕಂಡಿತ್ತು. ಅದೆಷ್ಟು ಮದ್ದು ಮಾಡಿದರೂ ವಾಸಿಯಾಗದೆ ರೋಸಿ ಹೋಗಿದ್ದವಳಿಗೆ ಸಾವು ನೆಮ್ಮದಿಯನ್ನು ತರಬಹುದು ಎನ್ನುವ ಯೋಚನೆ ಬಂದಿತ್ತು. ಆ ಯೋಚನೆ ಬಂದದ್ದೇ ತಡ ತನ್ನಲ್ಲಿರುವ ಅಷ್ಟು ಮಾತ್ರೆಗಳನ್ನು ಒಂದರ ಹಿಂದೆ ತೆಗೆದುಕೊಂಡು ಬಿಟ್ಟಳು. ಬರೋಬ್ಬರಿ ಇಪ್ಪತ್ತು ಮಾತ್ರೆಯನ್ನು ನುಂಗಿದವಳು ಸಮಾಧಾನದ ನಿಟ್ಟುಸಿರನ್ನು ಬಿಟ್ಟಿದ್ದಳು. ಆ ಕ್ಷಣಕ್ಕೆ ಅವಳಿಗೆ ತನ್ನವರ ಯೋಚನೆಯೂ ಬಂದಿರುವುದಿಲ್ಲ. ತನಗಿರುವ ಕಾಯಿಲೆಗೆ ಸಾವು ಮಾತ್ರ ಸರಿಯಾದ ಮಾರ್ಗ ಎನ್ನುವ ಯೋಚನೆಯ ಮುಂದೆ ಮತ್ತೆಲ್ಲವೂ ಗೌಣ. ಅಷ್ಟು ಮಾತ್ರೆಯನ್ನು ತಿಂದವಳ ದೇಹವೀಗ ತನ್ನ ಸ್ವಾಧೀನವನ್ನು ಕಳೆದುಕೊಳ್ಳಲು ಶುರು ಮಾಡಿತ್ತು. ದೇಹ ಎಲ್ಲೋ ತೇಲುತ್ತಿರುವ ಭಾವ. ಕಾಲುಗಳೂ ನೆಲದ ಮೇಲೆ ನಿಲ್ಲುತ್ತಿಲ್ಲ. ಏನೇನೊ ಬಡಬಡಿಸುತ್ತಿವಳನ್ನು ಮನೆಯವರು ಗಮನಿಸಿದಾಗ ಎಲ್ಲೋ ಏನೊ ಆಗಿದೆ ಅನ್ನುವ ಅರಿವಾದದ್ದೇ ತಡ ಎತ್ತಿಕೊಂಡು ಆಸ್ಪತ್ರೆಗೆ ಓಡಿದರು. ಇಪ್ಪತ್ನಾಲ್ಕು ಗಂಟೆಯ ಸಮಯ ಕೊಟ್ಟ ವೈದರೂ ಯಾವ ಭರವಸೆಯನ್ನು ನೀಡಲಿಲ್ಲ. ಕೊನೆಗೂ ಸಾವನ್ನು ಗೆದ್ದು ಬಂದವಳು ತಾನು ಮಾಡಿದ ಕೆಟ್ಟ ನಿರ್ಧಾರಕ್ಕೆ ನಾಚಿಗೆ ಪಟ್ಟಿದ್ದಳು.ಸಾವು ಆ ಕ್ಷಣಕಷ್ಟೆ ಸುಖದ ಯೋಚನೆಯಾಗಿರಬಹುದು. ಆದರೆ ಅದು ತುಂಬಾ ಖಂಡನೀಯವಾದ ನಿರ್ಧಾರ ಅನ್ನುವುದು ಅವಳಂತೆ ಬದುಕಿ ಬಂದವರ ಯೋಚನೆಯಾಗಿರುತ್ತದೆ.

ಆತ್ಮವನ್ನು ಸಾಯಿಸುವ ಅಧಿಕಾರ ಯಾವತ್ತು ನಮ್ಮಲ್ಲಿ ಇರಬಾರದು. ಈ ಬದುಕು ನಾವಂದುಕೊಂಡಂತೆ ಇರಲಾರದು ನಿಜ. ಆದರೆ ಪ್ರಯತ್ನಗಳ ಹಾದಿಯಲ್ಲಿ ಸುಂದರವಾದ ದಾರಿ ಇದ್ದೇ ಇರುತ್ತದೆ. ಸಾಧಿಸದಿದ್ದರೂ ಪರವಾಗಿಲ್ಲ.ಸೋತು ಸಾವಾಗದಿರು. ಗೆಲುವು ಒಂದೇ ಬದುಕಲ್ಲ.ಬದುಕೆಂದರೆ ವಿಶಾಲವಾದ ಕಡಲು. ಅಲ್ಲಿ ಬರುವ ಅಲೆಗಳ ಸೆಳೆತಕ್ಕೆ ಸವಾಲಾಗುವ ಸಹನೆ ಬೇಕು. ಬದುಕನ್ನು ಪ್ರೀತಿಸಲು ಕಲಿತವನು ಅದೆಂತಹ ಕಡಲನ್ನು ಈಜಿ ಜಯಿಸಬಲ್ಲ. ಸಾವಿಗೂ ಸವಾಲಾಗಿ ಬದುಕನ್ನು ಸ್ವೀಕರಿಸಿದರೆ ಮುಂದೆ ಎಲ್ಲವೂ ಸುಖಾಂತ್ಯ. ಇಲ್ಲದಿದ್ದರೆ ಎಲ್ಲವೂ ಅಂತ್ಯ..

ಪೂಜಾ ಗುಜರನ್. ಮಂಗಳೂರು.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x