ಮಾತೆಂಬ ಜ್ಯೋತಿ ಮನವ ಬೆಳಗಲಿ: ಸುಂದರಿ ಡಿ.

ಜೀವಜಗತ್ತು ಹಲವು ವಿಸ್ಮಯಗಳ ಆಗರ. ಇಲ್ಲಿ ನಾವು ಕಂಡು ಅಚ್ಚರಿಯಿಂದ ಹುಬ್ಬೇರಿಸಿದ ಹಲವು ಸಂಗತಿಗಳು ನಮ್ಮ ಅರಿವಿಗೆ ಬಾರದೆಯೂ ಇರಬಹುದು. ನಮ್ಮ ಅರಿವಿಗೆ ಬಂದರೆ ಕುತ್ತಾಗಬಹುದೆಂಬ ಭಯಕ್ಕೆ ಜೀವಜಗತ್ತು ಹೊಸ ಪಾಠವನ್ನೇ ಈ ವೇಳೆಗೆ ಕಲಿತಿರಲೂಬಹುದು ಅಥವಾ ಅದೆಷ್ಟೋ ವಿಸ್ಮಯಗಳನು ಅರಿವಾಗುವ ಮೊದಲೇ ನಾವು ನಮ್ಮ ಪಾಪಕೂಪಗಳಿಂದ ಇಲ್ಲವಾಗಿಸಿರಲೂಬಹುದು. ಅದೇನೇ ಇರಲಿ ಮನುಷ್ಯ ತನ್ನ ಅರಿವಿಗನುಗುಣವಾಗಿ ಮತ್ತು ವಾಸಪ್ರಪಂಚದ ಕೆಲವು ವಿಸ್ಮಯಗಳನ್ನಷ್ಟೇ ಅರಿತಿರಲು ಸಾಧ್ಯ. ಏಕೆಂದರೆ ಆ ಪ್ರಮಾಣದ ವಿಸ್ಮಯಗಳ ಹೊದ್ದು ನಿಂತಿದೇ ಈ ಜಗತ್ತು.

ಕವಿಗಳ ಕಲ್ಪನಾಶಕ್ತಿಯೇ ಬಹುದೊಡ್ಡ ಅಚ್ಚರಿ! ಮಗುವಿನ ಪುಟ್ಟ ಪ್ರಪಂಚವೋ ವಿಸ್ಮಯಗಳ ಲೋಕವೇ ಸರಿ. ಇನ್ನು ಪ್ರಾಣಿ-ಪಕ್ಷಿಗಳ ಪ್ರಪಂಚವೋ ಹೇಳುವುದೇ ಬೇಡ! ಹಂಸಪಕ್ಷಿಗಳು ಯೌವ್ವನಾವಸ್ಥೆಗೆ ಬರುವಾಗ ಬಿಳಿ ಮತ್ತು ಕೆಂಪು ಬಣ್ಣವನ್ನು ಹೊಂದುತ್ತವೆ. ಅಲ್ಲಿಯವರೆಗೂ ಅವುಗಳ ಬಣ್ಣ ಕಪ್ಪೆಂಬುದೇ ಅಚ್ಚರಿ! ಹಾಗೆಯೇ ಹಾರ್ನ್ ಬಿಲ್ ಹಕ್ಕಿಗಳು ಆಜೀವಪರ್ಯಂತ ಏಕಸಾಂಗತ್ಯ ಹೊಂದಿ ಜೀವನಪರ್ಯಂತ ಕಷ್ಟ-ಸುಖಗಳಲಿ ಜೊತೆಗಿದ್ದು ಮರಿಗಳ ಲಾಲನೆ- ಪಾಲನೆಯಲ್ಲಿ ದಂಪತಿ ಹಕ್ಕಿಗಳು ಪಾಲುದಾರರಾಗುವ ಬದ್ಧತೆಯೂ ಬಹು ಅಚ್ಚರಿ. ತಾಯಿಯು ಮರಿಗಳಿಗೆ ಜನ್ಮ ನೀಡಿರುವುದನ್ನು ಮಾತ್ರ ನಾವು ಕಂಡಿದ್ದೇವೆ ಮತ್ತು ಅದೇ ಸತ್ಯವೆಂದು ನಂಬಿದ್ದೇವೆ. ಆದರೆ ತಂದೆಯೇ ಜನ್ಮಕೊಡುವುದರ ಬಗ್ಗೆ ಕೇಳಿರಲಿಕ್ಕಿಲ್ಲ. ಈ ನಂಬಿಕೆಗೆ ಅಪವಾದವೆಂಬಂತೆ ಕಶೇರುಕಗಳ ಗುಂಪಿಗೆ ಸೇರಿದ ಗಂಡು ಸಮುದ್ರಕುದುರೆ ಮೀನುಗಳೇ ಗರ್ಭ ಧರಿಸಿ ಮೊಟ್ಟೆಯಿಡುವುದು, ಮರಿಗಳಿಗೆ ಜನ್ಮ ನೀಡುವುದು. ಹಾಗೆಯೇ ಅರ್ಧನಾರೀಶ್ವರನ ರೂಪ ಕಂಡುಬಂದಿರುವ ಹಣ್ನೊಣ (ಡ್ರೊಸೋಫಿಲಾ ನೊಣ) ಎಂಬ ಈ ಕೀಟ ದ್ವಿಲಿಂಗರೂಪಿ. ಅಂದರೆ ಇದು ಗಂಡೂ ಹೌದು, ಹೆಣ್ಣೂ ಹೌದು. (ವಿಜ್ಞಾನಲೋಕ-ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಸಂಪುಟ:13, ಸಂಚಿಕೆ:03, ಸೆಪ್ಟಂಬರ್ – ಅಕ್ಟೋಬರ್ – 2019) ಹೀಗೆ ವಿಸ್ಮಯಗಳ ಲೋಕವೇ ಆಗಿರುವ ಈ ಜಗತ್ತಿನಲ್ಲಿ ಪ್ರತೀಕ್ಷಣವೂ ವಿಸ್ಮಯಗಳು ಎದುರಾಗುತ್ತಲೇ ಇರುತ್ತವೆ. ಅಂತೂ ಎಲ್ಲಾ ವಿಸ್ಮಯಗಳನ್ನು ಯಾರೂ ಕಂಡಿರಲಾರರು. ಇವನ್ನೆಲ್ಲ ವಿಜ್ಞಾನಿಗಳ ಸಂಶೋಧನೆ ಋಜುವಾತು ಪಡಿಸದೇ ಹೋಗಿದ್ದರೆ ನಮ್ಮಂಥ ಸಾಮಾನ್ಯರಿಗೆ ಇಂಥವೆಲ್ಲ ತಿಳಿಯುತ್ತಲೇ ಇರಲಿಲ್ಲ ಎಂಬುದೂ ಅಷ್ಟೇ ಸತ್ಯ.

ಈ ಎಲ್ಲ ವಿಸ್ಮಯಗಳಿಗೂ ಅಚ್ಚರಿಯಿಂದ ಹುಬ್ಬೇರಿಸುವ ನಮಗೆ ನಮ್ಮಲ್ಲೇ ಇರುವ ಅಭೂತಪೂರ್ವ ಅಚ್ಚರಿಯ ಅರಿವಿಲ್ಲ. ಆ ಅಚ್ಚರಿಯೇನೆಂದರೆ “ಮಾತು”. ಉಳಿದ ಯಾವ ಜೀವಗಳಿಗೂ ಇರದ, ಇದ್ದರೂ ಸಂವಹಿಸುವ ರೀತಿಯು ಸಂಜ್ಞೆ, ಸಂಕೇತ, ಶಬ್ದಗಳಿಗೆ ಮಾತ್ರ ಸೀಮಿತವಾಗಿದೆ. ಯಾವ ಜೀವಸಂಕುಲಕ್ಕೂ ಇರದ ಬರಿಯ ಮಾನವನಿಗೆ ಮಾತ್ರವೇ ನಿಲುಕಿರುವ ಮಾತು ಬರಿ ಮಾತಲ್ಲ, ಬರಿಯ ಮಾತೇ ಅಲ್ಲ. ಅದು ಅದ್ಭುತ ಶಕ್ತಿ. ಇದು ಸೋತ ಮನಕ್ಕೆ ಸಾಂತ್ವನ ನೀಡುವ, ಗೆಲುವಿನ ಕನಸಿನ ಮೂಟೆ ಹೊತ್ತ ಜೀವಕೆ ಹಗುರ ಹಾರಾಟದ ಚೈತನ್ಯ ಕೊಡಬಲ್ಲ ಪ್ರೇರಣಾಶಕ್ತಿ. ಹಾಗಾಗಿಯೇ ಮಾತನ್ನು ಜ್ಯೋತಿರ್ಲಿಂಗ ಎಂದು ಅಲ್ಲಮಪ್ರಭುದೇವರು ಕರೆದದ್ದು; “ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು, ನುಡಿದರೆ ಲಿಂಗಮೆಚ್ಚಿ ಅಹುದಹುದೆನಬೇಕು” ಎಂಬ ಬಸವಣ್ಣನವರ ಈ ಮಾತು ಮಾತಿನ ಮಹತ್ತು ಮತ್ತು ಆ ಮಹತ್ತಿನ ಬಳಕೆಯ ರೀತಿಯನು ಅರಿವಂತಿದೆ.

“ಮೃದು ವಚನವೇ ಸಕಲ ಜಪಂಗಳಯ್ಯ, ಮೃದು ವಚನವೇ ಸಕಲ ತಪಂಗಳಯ್ಯ, ಸದುವಿನಯವೇ ಸದಾ ಶಿವನ ಒಲುಮೆಯಯ್ಯ” ಎಂಬ ಮಾತಿಗೆ ಇಂಬುಕೊಡುವಂತೆ ಅಂಗುಲಿಮಾಲನ ಮನೋಸ್ಥಿತಿಯ ಬದಲಾವಣೆಗೆ ಕಾರಣವಾದುದೇ ಬುದ್ದನ ಮೃದುವಚನ. ಅಂಗುಲಿಮಾಲನಂತಹ ಘನಮನವನೂ ಪರಿವರ್ತಿಸಲು ಸಾಧ್ಯವಾದುದೇ ಈ ಮಾತಿನಿಂದ, ಅಂದರೆ ಮಾತಿಗಿರುವ ಶಕ್ತಿ ಅಂತಾದ್ದು. ಮಾತಿಗೆ ಅಮೂಲ್ಯವಾದ ಏನನ್ನಾದರೂ ಕಟ್ಟಬಲ್ಲ ಮತ್ತು ಕೆಡುವಬಲ್ಲ ತಾಕತ್ತಿದೆ. ಈ ಕಾರಣಕ್ಕಾಗಿಯೇ ನಾವು ಆಡುವ ಮಾತು ಹೇಗಿರಬೇಕೆಂದು ನಿರ್ಧರಿಸಬೇಕಾದವರು ನಾವುಗಳೇ ಎಂಬುದು ನಿಶ್ಚಿತ. ಆಡುವ ಮಾತು ಹೇಗಿರಬೇಕೆಂದು ಕಬೀರದಾಸರು ಹೇಳುತ್ತಾ “ ಆಡುವ ನುಡಿ ಇಂತಿರಬೇಕು, ಶಾಂತಿ ನೆಲೆಸುವಂತಿರಬೇಕು” ಎಂದು ಹೇಳಿದ್ದಾರೆ. ಹಾಗಾಗಿ ನಮ್ಮ ಮಾತು ಕದಡಲು ಅನುವಾಗದೆ ಕಟ್ಟುವ ಕಾಯಕವ ಮಾಡಬೇಕಿದೆ. ನಾವಾಡುವ ಮಾತು ನೇತ್ಯಾತ್ಮಕ ಇಲ್ಲವೇ ಇತ್ಯಾತ್ಮಕವಾದ ಪರಿಣಾಮವನ್ನಾದರೂ ಉಂಟುಮಾಡಬಹುದು. ಹಾಗಾಗಿ ನಾವು ಮಾತನಾಡುವ ಮಾತಿನ ಮಾಲೀಕರಾಗಿರುತ್ತೇವೆ ಅಷ್ಟೇ ಅಲ್ಲ ಮಾತನಾಡಿದ ಮಾತಿನ ಗುಲಾಮರೂ ಆಗುತ್ತೇವೆಂಬ ಎಚ್ಚರಿಕೆಯೂ ಇರಬೇಕಿದೆ. ಏಕೆಂದರೇ ಮಾತಾಡಿದ ಮಾತಿನಿಂದಾದ ಅನಾಹುತಗಳಿಗೆ ಪ್ರತ್ವಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ನಾವೇ ಕಾರಣವಾಗಿರುತ್ತೇವೆ ಹಾಗಾಗಿ ನಾವು ತಪ್ಪಿಸಿಕೊಳ್ಳಲೀ ಅಥವಾ ಬಿಡಲೀ ನಾವು ಆಡಿದ ಮಾತು ನಮ್ಮನ್ನಾಳುತ್ತಿರುತ್ತದೆ.

ಬೇರೆಯವರ ಕಣ್ಣು ಎಂದೂ ನಮ್ಮದಾಗದು. ಏಕೆಂದರೆ ನಮ್ಮ ಕಣ್ಣೇ ನಮಗೆ ಬಹಳ ಸಲ ಮೋಸ ಮಾಡಿದ್ದಿದೆ. ಒಂದೂ ತಪ್ಪಿಲ್ಲ ಎಂದು ಬರೆದು ಬಂದು ಕೈ ಕುಲುಕಿದರೂ ಉತ್ತರ ಪತ್ರಿಕೆ ಕೊಟ್ಟಾಗ ಹೋ…. ಛೆ…. ಎಂಥಾ ತಪ್ಪಾಯ್ತು ನಾನು ನೋಡಿದ್ದೆ, ಸರಿಯೇ ಇದೆ ಅಂದುಕೊಂಡು ಉತ್ತರ ಪತ್ರಿಕೆ ಕೊಟ್ಟೆ ಆದರೆ ತಪ್ಪಾಗಿದೆ ಅದೇಗೆ ನನ್ನ ಕಣ್ಣಿಂದ ಅದು ತಪ್ಪಿಸಿಕೊಂಡಿತು! ಅಂದಿದ್ದಿದೆ. ಹಾಗಾದರೇ ನಮ್ಮ ಕಣ್ಣೇ ನಮಗೆ ಮೋಸಮಾಡಿದೆ ಅಂತಲೇ… ಅದೂ ಅಲ್ಲ ನಾವು ಸರಿಯಾಗಿ ಬರೆದಿರುವೆ ಎಂಬ ನಮ್ಮ ಮೇಲಿನ ನಂಬಿಕೆಯಿಂದ ಇದು ನಾವು ತೋರಿದ ನಿರ್ಲಕ್ಷ್ಯವೇ ಹೊರತೂ ಬೇರೇನೂ ಅಲ್ಲ. ಹಾಗೆಯೇ ನನ್ನ ಲೆಕ್ಕ ಯಾವತ್ತೂ ಪಕ್ಕ ಎಂದ ಮಾತನ್ನು ನಾವೇ ಎ಼ಷ್ಟೋ ಬಾರಿ ಹುಸಿಮಾಡಿದ ಉದಾಹರಣೆಗಳೂ ಇವೆ. ಹಾಗೆಂದ ಮಾತ್ರಕ್ಕೆ ಲೆಕ್ಕ ತಪ್ಪಿದ್ದೆಲ್ಲಿ ಎಂದರೇ ನನ್ನ ಲೆಕ್ಕ ಎಂದೂ ತಪ್ಪಿಲ್ಲವೆಂಬ ಅತಿಯಾದ ಆತ್ಮವಿಶ್ವಾಸದಲ್ಲಿ ನಮ್ಮ ಲೆಕ್ಕತಪ್ಪಿತೇ ಹೊರತು ಬೇರೇನೂ ಅಲ್ಲ.

ಅಂದರೇ ನಾವು ನೋಡಿದ್ದೇ ತಪ್ಪಾಗುವಾಗ ಅನ್ಯರ ಬಾಯಿಂದ ಕೇಳಿದ ಮತ್ತು ಕೇಳಿಸಿಕೊಂಡ ಸಂಗತಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಆ ಕೇಳಿದ ಮತ್ತು ಕೇಳಿಸಿಕೊಂಡ ಮಾತುಗಳಿಗೆ ನಾವು ಬಾಯಾದರೆ ಅದು ಮತ್ತೂ ತಪ್ಪಾಗುತ್ತದೆ. ಏಕೆಂದರೆ ಏನೂ ತಪ್ಪು ಮಾಡದೇ ಪರರ ಮಾತುಗಳ ನಿಂದನಾ ನುಡಿಗಳ ಕೇಳಲಾಗದೇ ಎಷ್ಟೋ ದುರ್ಬಲ ಮನಸಿನವರು ಜೀವವನೇ ಅಂತ್ಯಗೊಳಿಸಿಕೊಂಡ ಉದಾಹರಣೆಗಳು ನಮ್ಮ ಕಣ್ಣಮುಂದಿವೆ ಇದಕ್ಕೆ “ಗಾಳಿಮಾತು” ಸಿನೆಮಾ ಉದಾಹರಣೆಯಾಗಿ ನಿಲ್ಲುತ್ತದೆ. ನಾವು ಬೇರೆಯವರ ಬಾಯಿಗೆ ಕಿವಿಯಾಗಬೇಕೇ ಹೊರತು ಮತ್ತೊಬ್ಬರ ಕಿವಿಗೆ ಬಾಯಾಗಿ ಕಾಣದ್ದನ್ನು ಬರಿಯ ಕೇಳಿದ ಮಾತ್ರಕ್ಕೇ ಕಂಡಂತೆ ಹೇಳುವ ಗೊಡವೆ ಬೇಕಿಲ್ಲ. ಏಕೆಂದರೆ ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂಬ ಮಾತಿನಂತೆ ಆಡಿದ ಮಾತನ್ನು ನಾವು ಹಿಂಪಡೆಯಲಾಗದು ಅಷ್ಟೇ ಅಲ್ಲಾ ಅದರಿಂದಾದ ಘಾಸಿಯನೂ ಕೂಡ.

ನಾವು ಮಾತನಾಡುವಾಗ “ನಿಮ್ಮ ಮಾತನ್ನು ವಾಪಸ್ಸ್ ತಗೊಳ್ಳಿ” ಅಂತ ಮಾತಿಗೆ ಹೇಳುತ್ತೇವಾದರೂ…. ಆಡಿದವರು ಆ ಮಾತು ಆಡಬಾರದಿತ್ತು ತಪ್ಪಾಯಿತೆಂದು ನೊಂದುಕೊಂಡಂತೆ ತೋರಿಸಿ ಅಥವಾ ನಿಜವಾಗಿ ನೊಂದುಕೊಂಡು ಕ್ಷಮೆ ಯಾಚಿಸಿದರೂ, ಅಥವಾ ಯಾಚಿಸದಿದ್ದರೂ ಆಡಿದ ಮಾತಿನಿಂದಾದ ಮನೋಪೆಟ್ಟಿನಲ್ಲಿ ಯಾವುದೇ ವ್ಯತ್ವಾಸ ಅಗುವುದಿಲ್ಲವೆಂಬ ಅರಿವು ನಮಗಿರಬೇಕಾದ್ದು ಅತ್ಯಗತ್ಯ. ಏಕೆಂದರೆ ಆಡಿದ ಮಾತಿನಿಂದಾದ ಗಾಯ, ಘಾಸಿ ಬಹುದೊಡ್ಡದು ಮತ್ತು ಅರಿಯದೇ ಬೇರೆಯವರ ಬಾಯಿಗೆ ಕಿವಿಯಾದ ಒಂದೇ ಕಾರಣದಿಂದಲೇ ನಮ್ಮ ಬಾಯಿಗೂ ಮತ್ತು ಇತರರ ಕಿವಿಗಳಿಗೂ ಕೆಲಸ ಕೊಟ್ಟೆವೆಂದಾದರೇ ನಾವು ಪಡೆದ ಶಿಕ್ಷಣವಾದರೂ ಎಂತದ್ದೂ? ಅದು ನಮಗೇನ ಕಲಿಸಿದೆ? ಅದರಿಂದ ಕಲಿತಿದ್ದಾದರೂ ಏನನ್ನು? ಮತ್ತು ಕಲಿತ ಶಿಕ್ಷಣದಿಂದ ನಾವೇನನ್ನು ಬಳಕೆ, ಅಳವಡಿಕೆ ಮಾಡಿಕೊಳ್ಳುತ್ತಿದ್ದೇವೇ? ಎಂಬ ಪ್ರಶ್ನೆಗಳಿಗೆ ಬಲವಾಗಿ ಮನದ ಮೂಲೆಯಲಿ ಉತ್ತರವೊಂದು ತುಡಿಯದಿದ್ದರೇ ಅ ತುಡಿತಕ್ಕೆ ನಮ್ಮಗಳ ಮನ ಮಿಡಿಯದಿದ್ದರೇ ನಾವು ಮನುಷ್ಯರಾಗಿದ್ದು ಏನು ಫಲ? ಎನಿಸಿಬಿಡುತ್ತದೆ.

“ಮಾತಿನಿಂ ನಡೆ ನುಡಿಯು, ಮಾತಿನಿಂ ಕೊಲೆ ಹಗೆಯು, ಮಾತೇ ಮಾಣಿಕವು ಸರ್ವಜ್ಞ” ಎಂಬ ಮಾತಿನಂತೆ ನಮ್ಮ ಮಾತೇ ನಮ್ಮ ನಡೆ-ನುಡಿ ಎಂತದ್ದೆಂದು ತಿಳಿಸುತ್ತದೆ ಇದನ್ನೇ ಪಂಪ “ನಾಲಿಗೆ ಕುಲಮಂ ನುಡಿದಿತ್ತು” ಎಂದಿರುವುದು. ಅಂತೆಯೇ ಇದೇ ಮಾತು ಪರಸ್ಪರರ ನಡುವೆ ಸ್ನೇಹ-ಪ್ರೀತಿಗಳಿಗೆ ನಾಂದಿಯಾಗುತ್ತದೆ. ಅಷ್ಟೇ ಅಲ್ಲ ಈ ಮಾತೆಂಬ ಮಾಣಿಕ್ಯ ಮಂಗನ ಕೈಯ್ಯಲ್ಲಿನ ಮಾಣಿಕ್ಯವಾದರೆ ಏನು ಫಲ! ಮಂಗವದರ ಬೆಲೆಯ ತಿಳಿದಿರುವುದೇ? ಬಳಕೆಯ ಪರಿಯ ಕಂಡಿರುವುದೇ? “ಕತ್ತೆ ಬಲ್ಲುದೇ ಕಸ್ತೂರಿ ಗುಣವ” ಎಂಬ ಗಾದೆಯೂ ಈ ಮಾತಿಗೇ ಇಂಬುಕೊಡುವಂತಿದೆ. ಹಾಗಾಗಿ ಮಾತೆಂಬುದು ಮಾಣಿಕ್ಯ ಎಂಬುದನ್ನರಿತರೆ ಅದರ ಬಳಕೆಯ ರೀತಿಯೂ ಅರ್ಥವಾಗುತ್ತದೆ ಮತ್ತು ಸರಿಕ್ರಮದ ಬಳಕೆಗೂ ಸಾಧ್ಯವಾಗುತ್ತದೆ.

ಆಡಬೇಕಾದ ಮತ್ತು ಆಡಲೇಬೇಕಾದ ಬಹಳ ಮಾತುಗಳು ನಮ್ಮ ಮುಂದೆ ಬಹಳವೇ ಇವೆ. ಏಕೆಂದರೆ ಇಂದೆಂದಿಗಿಂತ ಈ ಹೊತ್ತು ಮಾತನಾಡುವವರ ಪ್ರಮಾಣವೇ ಕಡಿಮೆಯಾಗುತ್ತಿದೆ. ವೃದ್ಧರ ಗೊಡವೆಗಳಿಗೆ ನಮ್ಮ ಮಾತು ಚೈತನ್ಯವಾಗಬೇಕಿದೆ, ಸೋತು ಕಂಗೆಟ್ಟ ಮನಗಳಿಗೆ ನಮ್ಮ ಮಾತು ಮತ್ತೆ ಪುಟಿದು ನಿಲ್ಲಲು ಬೇಕಾದ ಚೈತನ್ಯವೆಂಬ ಇಂಧನವಾಗಬೇಕಿದೆ. ಇಂದಿಗೆ ನಮ್ಮ ಮಾತುಗಳನ್ನು ಕೇಳುವವರೇ ಇಲ್ಲ ಎನಿಸಿದರೂ ಕೂಡ ಮಾತಿನ ಬರ ಭುವಿಯ ಬರದಷ್ಟೇ ನಮ್ಮನ್ನೂ ಆವರಿಸಿದೆ ಎಂಬುದೇ ಸತ್ಯ. ಹಾಗಾಗಿ ಕೆಲಸಕ್ಕೆ ಬಾರದ ಪರರ ಮನ ಘಾಸಿಮಾಡುವ ಮಾತುಗಳಿಗೆ ನಮ್ಮ ತುಟಿಗಳು ಮಿಡಿವ ಬದಲಿಗೆ ನಿಜದನಿಗಾಗಿ ಕಾಯುವ ಮನಗಳ ಮುಂದೆ ನಮ್ಮ ತುಟಿಗಳು ಮಿಡಿಯಬೇಕಿವೇ ಏಕೆಂದರೇ ನಮ್ಮ ಮನೆಯ ಮಕ್ಕಳೇ ನಮ್ಮ ಮಾತುಗಳಿಗಾಗಿ ಕಾಯುವ ಕೆಲವಲ್ಲ ಹಲವು ಸಂದರ್ಭಗಳನೇ ನಾವು ಕಂಡಿದ್ದೇವೆ.

ನಾವು ಬೇರೆಯವರಿಂದ ಪಡೆದ ವಸ್ತುವನ್ನು ಹಿಂದಿರುಗಿಸುವಾಗ ಅವರು ಕೊಟ್ಟಿರುವಂತೆಯೇ ಜೋಪಾನವಾಗಿ ಮರಳಿಸಬೇಕು ಎಂದು ಪಡೆದ ಪ್ರತೀ ವಸ್ತುವನ್ನೂ ಕಾಳಜಿ ಮಾಡುವ ನಾವು ಪರರ ವಿಚಾರವಾಗಿ ಮಾತನಾಡುವಾಗ ಮಾತ್ರ ಆ ಕಾಳಜಿಯನಂತೂ ಮಾಡುವುದೇ ಇಲ್ಲ ಅನಿಸುತ್ತದೆ. ಹಾಗಾಗಿ ಏನಾದರೂ ಮಾತನಾಡುವಾಗ ಸ್ವಲ್ಪ ಯೋಚಿಸಿ ಮಾತನಾಡಬೇಕು ಏಕೆಂದರೇ ನಮ್ಮ ಮಾತುಗಳು ಕೆಲವರ ನಗುವನ್ನೇ ಕೊಲ್ಲಬಹುದು. ಇತರರ ಮಾತಿನಿಂದ ಬೇರೆಯವರ ಮಾಪನ ಮಾಡಲಾಗದು. ಅಥವಾ ನಮ್ಮ ಅಳತೆಗೋಲಿನಿಂದಲೂ ಯಾರನ್ನು ಅಳೆಯಲು ಹೋಗಬಾರದು. ಕಾರಣ ಯಾರೂ ಕೂಡಾ ಅವರ ಇಡೀ ವ್ಯಕ್ತಿತ್ವವನ್ನು ತೋರಿಸಿರುವುದಿಲ್ಲ. ನೀವೂ ಸಹ ಅವರನ್ನು ನಿಮಗೆ ನಿಲುಕಿದಷ್ಟೇ ನೋಡಿರುತ್ತೀರಿ. ಅದು ಅವರ ಇಡೀ ವ್ಯಕ್ತಿತ್ವವಾಗಿರುವುದಿಲ್ಲ. ಇಡೀ ಜಗತ್ತನ್ನು ಬೆಳಗುವ ಸೂರ್ಯನೇ ಏಕಕಾಲಕ್ಕೆ ಭುವಿಯ ದರ್ಶಿಸಲಾರ ಅಂದ ಮೇಲೆ ಯಾವುದೇ ವ್ಯಕ್ತಿಯ ಆಂತರ್ಯವನ್ನು ಪೂರ್ಣ ಅರಿತಿರಲು ಅದು ಹೇಗೆ ಸಾಧ್ಯ?.

”ಮನಕಂಜಿ ನಡೆಯದೆ ಜನಕಂಜಿ ನಡೆದರೆ ಮನಗಾಣ್ವ ಗುರುಸಿದ್ದ ಮರೆಯಾಗುವನಲ್ಲ” ಎಂಬ ಮಾತಿನಂತೆ ನಾವು ನಮ್ಮ ನಮ್ಮ ಮನಗಳಿಗೆ ಅಂಜಿ ನಮ್ಮ ಮನದಂತೆ ನಡೆಯಬೇಕೇ ಹೊರತು ಲೋಕ ಕುಣಿವಂತೆ ಕುಣಿವ ಬೆಪ್ಪರಾಗುವುದಾದರೂ ಏತಕ್ಕೇ? ವಿವಿಧ ಬಣ್ಣಗಳ ತನ್ನ ಕುಂಚದಲ್ಲಿ ಚೆಲ್ಲಿಯೇ ಸುಂದರವಾದ ಕಲಾಕೃತಿಯಾಗಿಸಿದ ಕಲಾಕೃತಿಯ ಕಂಡು ಬೆರಗಾಗಿ ನಿಲ್ಲುವ ನಾವು ಮಾತೆಂಬ ಕುಂಚದಿಂದಲೇ ಅದ್ಭುತ ಜೀವನಪ್ರೀತಿಯ ಹೊಂದುವಂತ ಮನವ ರೂಪಿಸಿ ಕಲಾವಿದರಾಗುವ ಅವಕಾಶಗಳು ನಮ್ಮ ಕಣ್ಣ ಮುಂದೆ ಬೇಕಾದಷ್ಟಿವೆ. ಅದಕ್ಕೆ ಉದಾಹರಣೆ ಎಂಬಂತೆ ಮಾತಿನಿಂದಲೇ ಮನಸೂರೆಗೊಂಡು ವಿದೇಶಗಳಲ್ಲೂ ತಮ್ಮ ಮಾತಿನ ಛಾಪು ಮೂಡಿಸಿರುವ ಪ್ರೊ.ಕೃಷ್ಣೇಗೌಡ, ಪ್ರಾಣೇಶ್ ಮೊದಲಾದವರಿದ್ದಾರೆ. ಅಂತೆಯೇ ತಮ್ಮ ಮಾತಿನ ಮೂಲಕ ಜೀವನ ಪ್ರೀತಿ ಮೂಡಿಸುವ ಗುರುರಾಜ ಕರ್ಜಗಿ ಅವರ ಮಾತು ನಮಗೆ ಮಾದರಿ ಆಗಬೇಕಿದೆ. ದಿವಂಗತ ರವಿಬೆಳಗೆರೆ ಅವರ ಮಾತು ಎಷ್ಟೋ ಮನಗಳಿಗೆ ಸ್ಪೂರ್ತಿಯಾಗಿದೆ, ಮಾತ್ರವಲ್ಲ ಮಾತಿನ ಧಾಟಿಯೂ ಹಲವನ್ನು ಹಲವರಿಗೆ ಕಲಿಸಿಕೊಟ್ಟಿದ್ದಿದೆ. ಮಾತು ಆಡುವುದೇ ಆದರೆ ಇಂತಹ ಮಾತುಗಳಾಗಿ ಹಲವರಿಗೆ ದಾರಿದೀಪವಾಗಬೇಕಿದೆ. ಏಕೆಂದರೆ ಹೇಗೋ ಬದುಕುವ ಬದಲು ನಮ್ಮಿಚ್ಚೆಯಂತೆ ಬದುಕುವ, ಏನೋ ಮಾತಾಡುವ ಬದಲು ಉತ್ತಮವಾದುದನೇ ಮಾತಾಡುವ ರೀತಿ ನಮ್ಮದಾಗಬೇಕಿದೆ. ಏಕೆಂದರೆ ಪೂರ್ಣಚಂದಿರನಲೂ ದಿಟ್ಟಿಸಿ ನೋಡಿದರೆ ಕಪ್ಪು ಚುಕ್ಕೆಗಳಿವೆ ಮತ್ತು ಹಳ್ಳಕೊಳ್ಳಗಳಿವೆ. ಅವುಗಳ ಬಗೆಗೆ ಮಾತಾಡಿ ಸಮಯ ಕಳೆವ ಬದಲಿಗೆ ಅದರ ಸೌಂದರ್ಯವ ಕಾಣೋಣ ಮತ್ತು ಕಟ್ಟೋಣ ಅನಿಸುತ್ತದೆ.

ಜೀವನವೆನ್ನುವುದು ಸಭಿಕರ ಮುಂದೆ ವೇಷಹಾಕಿ ಕುಣಿವ ಬಯಲು ನಾಟಕ. ಒಂದು ವೇಳೆ ಆ ಸಭಿಕರೇ ಪಾತ್ರಧಾರಿಗಳಾದರೆ ಅವರೂ ವೇಷಹಾಕಿ ಕುಣಿವವರೇ. ರಂಗಮಂದಿರ ಮಾತ್ರ ಒಂದೇ; ಆದರೆ ಪಾತ್ರಧಾರಿಗಳು ಮತ್ತು ಪ್ರೇಕ್ಷಕ ಮಹಾಶಯರು ಕಾಲ ಮತ್ತು ಸಂದರ್ಭಗಳಿಗೆ ತಕ್ಕಂತೆ ಬದಲಾಗುತ್ತಿರುತ್ತಾರೆಂಬುದೇ ಕಟುಸತ್ಯ. ನಮ್ಮನ್ನು ಬಿಟ್ಟು ಬೇರೆಯವರನ್ನು ಮಾತ್ರವೇ ಕೇಂದ್ರಪರಿಧಿಯಲಿಟ್ಟು ಮಾತಾಡಲಾಗದು. ಬದಲಿಗೆ ನಾನೂ ಆ ಮಾತಿನ ಭಾಗವಾಗಿರುತ್ತೇನೆಂಬ ಅರಿವು ಸದಾ ಜಾಗೃತವಾಗಿರಬೇಕೆನಿಸುತ್ತದೆ. ಈ ದೃಷ್ಟಿಯಲ್ಲಿಯೇ ಮಾತು ವರ ಎನ್ನುವುದು ಎಷ್ಟು ಸತ್ಯವೋ, ಸರಿಯಾಗಿ ತೂಗಿ ಆಡದಿದ್ದರೆ ಅದೇ ಮಾತು ಶಾಪವಾಗಿ ಪರಿಣಮಿಸಿ, ಕಾಡುತ್ತದೆಂಬ ಸತ್ಯವನ್ನು ಯಾವ ಸಂದೇಹವಿಲ್ಲದೇ ಒಪ್ಪಲೇಬೇಕಾಗುತ್ತದೆ.

ನಮಗೆ ಬೇಕಾದರೆ ಬೆರೆತು, ಸಾಕಾದರೆ ಸರಿದು, ಎರಡೂ ಬೇಡವಾದರೆ ಸುಮ್ಮನೇ ನಡೆದುಬಿಡಬೇಕು ಅದೂ ಮೌನವಾಗಿ ಗೆದ್ದು ಬೀಗಿಬಿಡಬೇಕು ಎನಿಸುತ್ತದೆ. ಆಗಲೇ ಮಾತಿನಿಂದ ಹೇಳಲಾಗದ್ದನ್ನು ಮೌನ ಕೆಲವೊಮ್ಮೆ ಹೇಳಿಮುಗಿಸಿರುತ್ತದೆ. ನಮಗಾದ ಅತೀ ಆನಂದವನ್ನೋ, ಅಚ್ಚರಿಯನ್ನೋ, ನೋವನ್ನೋ, ದುಃಖವನ್ನೋ ಹೇಳಿಕೊಳ್ಳಲು ಆಗುವುದೇ ಇಲ್ಲ. ಅಲ್ಲಿಗೆ ಭಾಷೆಯೂ ಕೆಲವೊಮ್ಮೆ ಸೋಲುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಮೌನಕ್ಕೂ ಮಾತಿಗಿರುವ ತಾಕತ್ತಿದೆ. ಹಾಗಿಲ್ಲದಿದ್ದರೆ ಮೈಕಲ್ ಜಾಕ್ಸನ್ ಮೌನಾಭಿನಯದಲೇ ಆ ಮಟ್ಟದ ಗೆಲುವನಪ್ಪಲು ಆಗುತ್ತಿತ್ತೇ? ಇಲ್ಲವೇ ಇಲ್ಲ. ಅದೇ ಮೌನಕ್ಕಿರುವ ಗತ್ತು-ಗಮ್ಮತ್ತು. ಹಾಗಾಗಿ ಕೆಲವೊಮ್ಮೆ ಭಾಷೆಯಲ್ಲಿ ಹಿಡಿದಿಡಲಾಗದ್ದೂ ಇದೆ, ಆಗ ಮಾತು ಸೋಲುತ್ತದೆ. ”ಹೇಳಿದರೆ ಹಾಳಾಗುವುದು ಅನುಭವದ ಸವಿಯು, ಹೇಳದಿರೆ ತಾಳಲಾರನು ಕವಿಯು” ಎಂಬಂತೆ ಹೇಳಲೇಬೇಕಾದುದನು ಕೆಲವೊಮ್ಮೆ ಮಾತಾಗಿ ಹೊಮ್ಮಿಸಲೇಬೇಕಾಗುತ್ತದೆ ಹಾಗಾಗಿ ಎಲ್ಲಿ ಮೌನ ಮಾತಾಗಬೇಕು?, ಎಲ್ಲಿ ಮಾತು ಮೌನವಾಗಬೇಕು ಎಂಬುದನು ನಿರ್ಧರಿಸಬೇಕಾದವರು ನಾವೇ.

ಜಗತ್ತಿನಲ್ಲಿ ಮಾತನ್ನು ಕುರಿತ ಮಾತುಗಳೇ ಅಧಿಕವಾಗಿರುವುದು! ಅಂದರೆ ಮಾತನ್ನು ಕುರಿತು ಎಷ್ಟು ಮಾತಾಡಿದರೂ ನಮಗದು ಇನ್ನೂ ಅಪರಿಚಿತವೇ ಎಂದೆನಿಸುವುದು ಭಾಷೆ ಮತ್ತು ಭಾಷಿಕರ ಮನದಂತರಾಳದ ನಿಗೂಢತೆಯೇ ವಿನಾ ಮತ್ತೇನಲ್ಲ ಎಂದು ಭಾವಿಸುತ್ತೇನೆ. ಅಂಥ ಸಾವಿರ ಲಕ್ಷ ಕೋಟಿ ಮಾತುಗಳಲ್ಲಿ ನನ್ನದೂ ಇಂಥ ಒಂದು ಮಾತು ಸೇರ್ಪಡೆ! ಇಷ್ಟಕ್ಕೂ ಮಾತು ಮತ್ತು ಅರ್ಥಗಳು ಕವಿ ಕಾಳಿದಾಸನು ಹೇಳುವಂತೆ, ಪಾರ್ವತಿ ಪರಮೇಶ್ವರರ ದಾಂಪತ್ಯದಂತಿರಬೇಕು. ಬಹಳ ಸಲ ಹೀಗಾಗುವುದಿಲ್ಲ ಎನ್ನುವುದು ವಿಷಾದನೀಯವೇ ಸರಿ. ಏಕೆಂದರೆ ಮಾತಿಗೆ ಹಲವು ಅರ್ಥಗಳ ಮಗ್ಗಲುಗಳಿರುತ್ತವೆ. ಅರ್ಥದಾಚೆಗಿನ ಭಾವತುಮುಲಗಳ ತುಯ್ತವೂ ಕುಯ್ತವೂ ಇರುವ ಸಾಧ್ಯತೆಗಳಿರುತ್ತವೆ. ಮಾತಾಡುವಾಗಿನ ಸಂದರ್ಭದಲ್ಲಿ ನಮ್ಮ ಆಂಗಿಕ ಅಭಿನಯ, ಹಾವಭಾವ, ದೇಹದ ಚಲನೆ, ಮೌನ ಮೊದಲಾದ ನುಡಿಗಡಣದಾಚೆಗಿರುವ ಪರಿಕರಗಳೂ ಇರುತ್ತವೆ. ಹಾಗಾಗಿ ಮಾತು ಮಹತ್ವಗೊಳ್ಳುವುದು ಇವೆಲ್ಲದರ ಸಮತೋಲನದಿಂದ ಮತ್ತು ಕೇಳುಗರ ಭಾವಪ್ರಪಂಚ ಹಾಗೂ ಮಾನಸಿಕ ಸ್ಥಿತಿಗತಿಗಳಿಂದ!

ಹಾಗಾಗಿಯೇ ಮಾತು ಮತ್ತು ಅರ್ಥಗಳು ಸೇರಿ (ವಾಗರ್ಥವಿವಾ ಸಂಪೃಕ್ತೌ ವಾಗರ್ಥವಿವ ಪ್ರತಿಪತ್ತಯೇ) ಮಾಣಿಕ್ಯ ಬೆಳಗಬೇಕು. ಅರ್ಥವಿಲ್ಲದೇ ಮಾತಿಗೆ ಪೂರ್ಣತೆ ಲಭಿಸಲಾರದು. ಅರ್ಥವಿಲ್ಲದ ಮಾತು ಅಹಮಿನ ವಿಜೃಂಭಣೆ; ಖಾಲಿಡಬ್ಬದೊಳಗಿನ ಶಬ್ದಭ್ರಮಣೆ! ಮಾತು ಮುತ್ತಾದರೆ ಅದರರ್ಥವೆಂಬುದು ಮಾಣಿಕ್ಯವೇ ಸರಿ. ಇದರ ಹೊಳಪಿನಲ್ಲಿ ನಮ್ಮ ಬದುಕು ಚೆಂದಗೊಳ್ಳಬೇಕು; ಜೀವ ಜೀವನ ಧನ್ಯಗೊಳ್ಳಬೇಕು. ಈ ಬರಹದ ಮೊದಲಲ್ಲಿ ಪ್ರಸ್ತಾಪಿತವಾದ ಹಕ್ಕಿಪಕ್ಷಿ ಜೀವಿಗಳು ನಮ್ಮಂತೆ ಮಾತಾಡುವುದೇ ಇಲ್ಲ; ಆದರೂ ಅವುಗಳ ಬಾಳುವೆ ಇರುವಷ್ಟು ಹೊತ್ತು ಅರ್ಥಪೂರ್ಣವಾದದ್ದು. ಇದೇ ನನ್ನಂಥವಳಿಗೆ ನಿರಂತರ ಕಾಡುವ ಸೋಜಿಗ.

-ಸುಂದರಿ ಡಿ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x