ಬದಲಾಗಿದೆ ಭಾರತದ ಬೌಲಿಂಗ್ ಹವಾಮಾನ!: ವಿನಾಯಕ‌ ಅರಳಸುರಳಿ,

ಮೊನ್ನೆ ಮಂಗಳವಾರ ಭಾರತ ಹಾಗೂ ಇಂಗ್ಲೆಂಡ್ ಗಳ ನಡುವೆ ಮ್ಯಾಚ್ ಇರುವುದು ಗೊತ್ತಿರಲಿಲ್ಲ. ಗೊತ್ತಾಗಿ ನೋಡುವಷ್ಟರಲ್ಲಿ ಪ್ರಸಿದ್ ಕೃಷ್ಣ ಎನ್ನುವ ಹೊಸ ಬೌಲರ್ ಪಾದಾರ್ಪಣೆ ಮಾಡಿ, ಅವರಿಗೆ ಆಂಗ್ಲರು ಮೂರು ಓವರ್ ಗೆ ಮೊವ್ವತ್ತೇಳು ರನ್ ಚಚ್ಚಿರುವುದು ಕಾಣಿಸಿತು. ಏನು ನಡೆಯುತ್ತಿದೆ ಇಲ್ಲಿ? ವರ್ಲ್ಡ್ ಕಪ್ ಗೆ ಕೆಲವೇ ತಿಂಗಳು ಇರುವಾಗ ಹೀಗೇಕೆ ಹೊಸ ಹೊಸ ಪ್ರಯೋಗ ಮಾಡ್ತಿದ್ದಾರೆ? ಇರುವವರಿಗೇ ಮತ್ತಷ್ಟು ಆಡುವ ಅವಕಾಶ ಕೊಟ್ಟು ಇಂತಿಂತವನು ಇಂತಿಂತಲ್ಲಿ ಎಂದು ಫಿಕ್ಸ್ ಮಾಡಬಾರದಾ ಎಂದುಕೊಳ್ಳುವಷ್ಟರಲ್ಲಿ ಅದೇ ಪ್ರಸಿದ್ ಕೃಷ್ಣ ನಾಲ್ಕು ವಿಕೆಟ್ ಎಗರಿಸಿಬಿಟ್ಟರು! ಸಾಲದ್ದಕ್ಕೆ ಇವರು ಬೇರೇ ನಮ್ಮ ಕರ್ನಾಟಕದವರೇ!

ನನ್ನ ಈ ಅಭಿಪ್ರಾಯ ನಿಜವೋ ಸುಳ್ಳೋ ಗೊತ್ತಿಲ್ಲ, ನಾನು ಕ್ರಿಕೆಟ್ ನೋಡಲಿಕ್ಕೆ ಆರಂಭಿಸಿದ ಸಮಯದಲ್ಲಿ ಅಂದರೆ 2002 ರಿಂದ 2013/15ರ ಅವಧಿಯಲ್ಲಿ ಭಾರತಕ್ಕೆ ಬೌಲಿಂಗ್ ನಲ್ಲಿ, ಅದರಲ್ಲೂ ವೇಗದ ಬೌಲಿಂಗ್ ನಲ್ಲಿ ಇಷ್ಟೊಂದು ಆಯ್ಕೆಗಳಿರಲಿಲ್ಲ. ಜಹೀರ್ ಖಾನ್, ನೆಹ್ರಾ, ಅಗರ್ಕರ್, ಶ್ರೀಶಾಂತ್, ಇಶಾಂತ್, ಆರ್ಪೀ ಸಿಂಗ್ ಎಲ್ಲಾ ಇರಲಿಲ್ವಾ ಎಂದು ನೀವೇನಾದರೂ ಕೇಳಿದರೆ, ಇದ್ದರು. ಆದರೆ ಈಗಿರುವಷ್ಟು ಹೆಚ್ಚು ಹೆಚ್ಚು ಆಯ್ಕೆಗಳು ಆಗಿರಲಿಲ್ಲ. ಇಡೀ ಹದಿನೈದು ವರ್ಷಗಳ ಅವಧಿಯಲ್ಲಿ ತಂಡ ಅತೀ ಹೆಚ್ಚು ನೆಚ್ಚಿಕೊಂಡಿದ್ದವರು ಅಂತ ನೋಡಿದರೆ ಎಲ್ಲೋ ಬೆರಳೆಣಿಕೆಯ ಬೌಲರ್ ಗಳ ಹೆಸರಷ್ಟೇ ಪಟ್ಟಿಯಲ್ಲಿ ಉಳಿಯುತ್ತದೆ. ಇನ್ನೂ ಸೂಕ್ತವಾಗಿ ಹೇಳುವುದಾದರೆ ಆಡುತ್ತಿರುವ ಬೌಲರ್ ಗಳಿಗಿಂತ ದುಪ್ಪಟ್ಟು, ಮೂರುಪಟ್ಟು ಸಂಖ್ಯೆಯ ಪ್ರತಭಾನ್ವಿತರು ಬೆಂಚಿನಲ್ಲಿ ಕಾಯುತ್ತಿರುವ ಪರಿಸ್ಥಿತಿ ಆಗಿರಲಿಲ್ಲ. ಇರುವವರಾದರೂ ಗಾಯಗೊಂಡಾಗ, ಇಲ್ಲವೇ ಫಾರ್ಮ್ ಕಳೆದುಕೊಂಡಾಗ ಮಧ್ಯದಲ್ಲಿ ನುಸುಳಿ ಬಂದ ಅವಿಶ್ಕಾರ್ ಸಾಳ್ವಿ, ವಿ ಆರ್ ವಿ ಸಿಂಗ್, ಪಂಕಜ್ ಸಿಂಗ್, ಮೋಹಿತ್ ಶರ್ಮಾ, ಮನಪ್ರೀತ್ ಗೋನಿ.. ಇನ್ನೂ ಮುಂತಾದವರು ಸ್ಥಿರ ಪ್ರದರ್ಶನ ನೀಡಲಾಗದೆ ಕೆಲವೇ ಪಂದ್ಯಗಳಿಗೆ ಸೀಮಿತರಾಗಿ ಮರಳಿಹೋಗಿದ್ದರು. ಹೀಗೆ ಭಾರತವೆಂದರೆ ಕೇವಲ ಸ್ಪಿನ್ನರ್ ಗಳ ತಂಡ ಎಂಬ ಅಘೋಶಿತ ಹಣೆಪಟ್ಟಿಯೊಂದು ತಂಡಕ್ಕೆ ಅಂಟಿಕೊಂಡಿತ್ತು.

ಇದಕ್ಕೊಂದು ಉದಾಹರಣೆ ಕೊಡುತ್ತೇನೆ. 2013ರಲ್ಲಿ ಮೊಹಮ್ಮದ್ ಶಮಿ ವೆಸ್ಟಿಂಡೀಸ್ ವಿರುದ್ಧ 5 ವಿಕೆಟ್ ತೆಗೆದು ಭಾರತದಲ್ಲಿ ಭಾರತವನ್ನು ಗೆಲ್ಲಿಸಿದಾಗ ಅದಕ್ಕೆ ಅತೀಹೆಚ್ಚಿನ ಪ್ರಶಂಸೆ ಲಭ್ಯವಾಗಿತ್ತು. ಭಾರತದ ಪಿಚ್ ನಲ್ಲಿ ವೇಗದ ಬೌಲರೊಬ್ಬ ಹೀಗೆ ಮ್ಯಾಚ್ ಗೆಲ್ಲಿಸಿದ್ದು ಅದೆಷ್ಟೋ ವರ್ಷಗಳ ಬಳಿಕ ಎನ್ನುವುದು ಇದಕ್ಕೆ ಕಾರಣ. ಪರಿಸ್ಥಿತಿ ಹೀಗಿದ್ದಾಗ, ಇದ್ದಕ್ಕಿದ್ದಂತೆ ಅದೇನಾಯಿತೋ ಏನೋ, ಕಳೆದ ನಾಲ್ಕೈದು ವರ್ಷಗಳಲ್ಲಿ ಪ್ರತಿಭಾನ್ವಿತ ವೇಗದ ಬೌಲರ್ ಗಳ ದಂಡೇ ಸಾಲಾಗಿ ನಿಂತು ತಂಡದೊಳಕ್ಕೆ ನುಗ್ಗಲು ಕಾಯುತ್ತಾ ಬಾಗಿಲು ತಟ್ಟುತ್ತಿದೆ. ಎಷ್ಟರ ಮಟ್ಟಿಗೆಂದರೆ ಯಾರನ್ನು ಆಯ್ಕೆ ಮಾಡುವುದು, ಯಾರನ್ನು ಬಿಡುವುದು ಎನ್ನುವುದು ಆಯ್ಕೆಮಂಡಳಿಗೆ ತಲೆನೋವಾದರೆ ಆಯ್ಕೆಯಾದವರ ಪೈಕಿ ಯಾರನ್ನು ಆಡಿಸುವುದು, ಯಾರನ್ನು ಬಿಡುವುದು ಎಂದು ನಾಯಕನಿಗೆ ಮಂಡೆಬಿಸಿಯಾಗುತ್ತಿದೆ!

ಸುಮ್ಮನೆ ಲೆಕ್ಕ ಹಾಕೋಣ: ಜಸ್ಪ್ರೀತ್ ಬೂಮ್ರ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಉಮೇಶ್ ಯಾದವ್, ಶಾರ್ದುಲ್ ಠಾಕೂರ್, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್, ನಟರಾಜನ್, ದೀಪಕ್ ಚಹಾರ್, ಪ್ರಸಿಧ್ ಕೃಷ್ಣ.. ಇನ್ನು ಸ್ಪಿನ್ನರ್ ಗಳೆಡೆಗೆ ಹೊರಳಿದರೆ ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಯಜುರ್ವೇಂದ್ ಚಹಾಲ್, ವಾಶಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕ್ರುನಾಲ್ ಪಾಂಡ್ಯಾ, ರಾಹುಲ್ ಚಹಾರ್.. ಇವರುಗಳ ಪೈಕಿ ಕೆಲವರನ್ನು ಟೆಸ್ಟ್ ಗೆ ಮಾತ್ರ, ಇನ್ನು ಕೆಲವರನ್ನು ಏಕದಿನಗಳಿಗೆ ಮಾತ್ರ, ಮತ್ತೂ ಕೆಲವರನ್ನು ಆಲ್ ರೌಂಡರ್ ಗಳು ಎಂದು ವಿಭಾಗಿಸಿದರೂ ಭಾರತಕ್ಕೆ ಒಂದಕ್ಕೆ ಮೂರು ಆಯ್ಕೆಯಿದೆ! ಒಬ್ಬರು ಆಡುವಾಗ ಅಷ್ಟೇ ಸಾಮರ್ಥ್ಯದ ಇನ್ನೂ ಮೂವರು ಹೊರಗೆ ಕಾಯುತ್ತಿರುತ್ತಾರೆ!

ಇನ್ನು, ಅಂದು ಹಾಗೂ ಇಂದಿನ ಕಾಲಮಾನಗಳ ನಡುವೆ ಬದಲಾದ ಇನ್ನೊಂದು ಸಂಗತಿಯೆಂದರೆ ಆಲ್ರೌಂಡರ್ ಗಳ ಉದಯ ಅಥವಾ ಕೆಳ ಕ್ರಮಾಂಕದ ಬ್ಯಾಟಿಂಗ್ನಲ್ಲಿ ಕಂಡುಬಂದ ಭಾರೀ ಸುಧಾರಣೆ. ಯಾರು ಏನೇ ಹೇಳಿ, ಒಂದು ಕಾಲವಿತ್ತು. ಐದು ಅಥವಾ ಆರು ವಿಕೆಟ್ ಹೋಯಿತೆಂದರೆ ಮತ್ತುಳಿದವರು ತರಗೆಲೆಗಳಂತೆ ಉದುರಿಹೋಗುತ್ತಿದ್ದರು. ಏನ್ ಸರ್ ಹಿಂಗಂದ್ಬಿಟ್ರೀ? ಹರ್ಭಜನ್, ಜಹೀರ್, ಮುರುಳಿ ಕಾರ್ತಿಕ್ ರೇ ನಿಂತು ಮ್ಯಾಚ್ ವಿನ್ ಮಾಡಿದ್ದು ತೋರ್ಸ್ಲಾ ಎಂದು ಯಾರಾದರೂ ಸವಾಲು ಹಾಕಿದರೆ, ಅದೂ ನಿಜವೇ. ಆದರೆ ಅದರ ಪ್ರಮಾಣ ಕಡಿಮೆ. ಎಷ್ಟೋ ಬಾರಿ ಆರೇಳು ವಿಕೆಟ್ ಹೋದಮೇಲೆ ಬರೀ ಮೊವ್ವತ್ತು, ನಲವತ್ತು ರನ್ ಹೊಡೆಯಲಾಗದೆ ಸೋತ ಎಷ್ಟೋ ಉದಾಹರಣೆಗಳಿವೆ. ಆದರೆ ಈಗಿನ ಕೆಳಕ್ರಮಾಂಕದವರಾದ ಜಡೇಜಾ, ಪಾಂಡ್ಯಾ ಸಹೋದರರು, ಆಶ್ವಿನ್, ಶಾರ್ದೂಲ್, ವಾಶಿಂಗ್ಟನ್ ಸುಂದರ್, ಭುವನೇಶ್ವರ್, ಅಕ್ಷರ್ ಪಟೇಲ್.. ಎಲ್ಲರೂ ಬ್ಯಾಟಿಂಗ್ ಸಾಮರ್ಥ್ಯವುಳ್ಳವರೇ ಆಗಿದ್ದು ಕೆಲವೊಮ್ಮೆ ಭಾರತದ ಬ್ಯಾಟಿಂಗ್ ಪ್ರಾಬಲ್ಯ ಒಂಭತ್ತು, ಹತ್ತನೇ ಕ್ರಮಾಂಕ್ ತನಕವೂ ಮುಂದುವರೆಯುತ್ತದೆ! ಬಾಲಂಗೋಚಿಗಳು ಎಂದು ಪದೇಪದೇ ಕರೆಯಲ್ಪಟ್ಟಿದ್ದ ತಂಡವೊಂದು ಈ ತೆರನಾಗಿ ರೂಪಾಂತರ ಹೊಂದಿದ್ದೂ ಒಂದು ಪವಾಡಮಯ ಬದಲಾವಣೆಯೇ.

ಇಲ್ಲಿ ಇನ್ನೊಂದು ವಾದವಿದೆ. ಆಗಿನ ಕಾಲದ ಕಂಡೀಶನ್ ಗಳೇ ಬೇರೆ ಇತ್ತು, ಆಗ ಕ್ರಿಕೆಟ್ ಇಷ್ಟು ಸುಲಭವಾಗಿರಲಿಲ್ಲ, ಬ್ಯಾಟಿಂಗ್ ಸ್ನೇಹಿಯಾಗಿರಲಿಲ್ಲ, ಆಗಿದ್ದ ಬೌಲರ್ ಗಳ ಖದರ್ರೇ ಬೇರೆ.. ನಿಜ. ಎಲ್ಲವೂ ಒಪ್ಪುವ ಅಂಶಗಳೇ. ಆದರೆ ಗಮನಿಸಿ, ನಾನಿಲ್ಲಿ ಎರೆಡು ಕಾಲಮಾನದ ಆಟಗಾರರ ವಯಕ್ತಿಕ ಅಂಕಿ-ಅಂಶಗಳನ್ನು ಕಂಪೇರ್ ಮಾಡುತ್ತಿಲ್ಲ. ಎರೆಡು ಕಾಲಮಾನದ ತಂಡಗಳನ್ನು ಹೋಲಿಕೆ ಮಾಡುತ್ತಿದ್ದೇನೆ. ಕಾಲ ಬದಲಾದ ಮಾತ್ರಕ್ಕೆ, ಆಟದ ಕಂಡೀಶನ್ ಸುಲಭವಾದ ಮಾತ್ರಕ್ಕೆ ತಂಡ ಗೆದ್ದುಬಿಡುವುದಿಲ್ಲ. ಅದಕ್ಕೆ ಸೂಕ್ತ ಉದಾಹರಣೆಯೆಂದರೆ ಪಕ್ಕದ ಶ್ರೀಲಂಕಾ, ಪಾಕಿಸ್ತಾನ ಹಾಗೂ ವೆಸ್ಟಿಂಡೀಸ್ ತಂಡಗಳು. ಆ ಹೊತ್ತಿನಲ್ಲಿ ಅತ್ಯಂತ ಪ್ರಬಲ ತಂಡಗಳಾಗಿದ್ದ ಅವು ಬದಲಾದ, ಸುಲಭಗೊಂಡ ಕಾಲಮಾನದಲ್ಲಿ ಮತ್ತಷ್ಟು ಬಲಾಢ್ಯವಾಗಬೇಕಿತ್ತು. ಆದರೆ ಹಾಗಾಗಲಿಲ್ಲ. ಸಂಗಕ್ಕಾರ, ಜಯವರ್ಧನೆ, ದಿಲ್ಶಾನ್, ಮುರುಳಿ, ಶೊಯೆಬ್, ವಖಾರ್, ಯುಹಾನಾ, ಯೂಸುಫ್, ಲಾರಾ, ಚಂದ್ರಪಾಲ್, ಸರವಣ್ ಮುಂತಾದ ಘಟಾನುಘಟಿಗಳ ನಿವೃತ್ತಿಯ ಬಳಿಕ ಮತ್ತೆ ಆ ಜಾಗವನ್ನು ತುಂಬುವ ಸಮರ್ಥ ಆಟಗಾರರು ಆ ತಂಡಗಳಿಗೆ ದೊರಕಲೇ ಇಲ್ಲ. (ಇದಕ್ಕೆ ಅಲ್ಲಿನ ಒಳ, ರಾಜಕೀಯ ಕಾರಣಗಳೂ ಹೊಣೆಯಾದರೂ ಪೂರ್ಣ ದೋಷ ಅದರದ್ದೇ ಅಲ್ಲ) ಹೀಗಾಗಿ, ಆ ತಂಡಗಳ ಪಾಲಿಗೆ ಆಟ ಸುಲಭವಾದರೂ ಆಡುವುದು, ಅದರಲ್ಲೂ ಗೆಲ್ಲುವುದು ಕಷ್ಟವಾಗಿದೆ. ಈ ತಂಡಗಳು ಹಾಗೂ ಭಾರತದ ನಡುವಿನ ವ್ಯತ್ಯಾಸ ಏನೆಂದರೆ, ಭಾರತ 2000ದನೇ ಇಸವಿಯ ಆರಂಭ ಕಾಲದಲ್ಲಿ ಗಂಗೂಲಿ ಆರಂಭಿಸಿದ ‘ಯೋಗ್ಯ ಪ್ರತಿಭೆಗಳ ಹುಡುಕಾಟ’ದ ಪರಂಪರೆಯನ್ನು ಇಲ್ಲಿಯವರೆಗೂ ಮುಂದುವರೆಸಿಕೊಂಡು ಬಂದಿದೆ. ಅದಕ್ಕೆ ಸರಿಯಾಗಿ ಭಾರತಕ್ಕೆ ತಕ್ಕ ಯುವ ಆಟಗಾರರೂ ಸಿಕ್ಕಿದ್ದಾರೆ. ಹೀಗಾಗಿ ಸಚಿನ್, ಸೆಹ್ವಾಗ್, ಗಂಗೂಲಿ, ದ್ರಾವಿಡ್, ಯುವರಾಜ್, ಜಹೀರ್, ಧೋನಿಯಂಥವರ ನಿವೃತ್ತಿಯ ಬಳಿಕವೂ ಭಾರತದ ಗೆಲುವಿನ ಲಹರಿ ಕುಸಿದಿಲ್ಲ.

ಆದರೆ, ಒಂದಕ್ಕೆ ಮೂರು ಆಯ್ಕೆಗಳಿರುವ ಈ ಪರಿಸ್ಥಿತಿ ತಂಡಕ್ಕೆ ಹಾಗೂ ವಯಕ್ತಿಕವಾಗಿ ಆಟಗಾರರಿಗೆ ಮಾರಕವೂ ಆಗಬಹುದು. ಒಬ್ಬ ಹೋದರೆ ಇನ್ನೊಬ್ಬ ಎನ್ನುವ ಸ್ಥಿತಿಯಲ್ಲಿ ಒಂದು ಸ್ಥಿರ ತಂಡವೊಂದನ್ನು ಕಟ್ಟುವುದು ನಾಯಕನ ಪಾಲಿಗೆ ದೊಡ್ಡ ಸವಾಲು. ಯಾರನ್ನು ಕೂರಿಸುವುದು, ಯಾರನ್ನು ಆಡಿಸುವುದು ಎಂಬ ಯಕ್ಷಪ್ರೆಶ್ನೆಗೆ ಆತ ಬಹಳ ಚಾಣಾಕ್ಷತೆಯಿಂದ ಉತ್ತರ ಹುಡುಕಬೇಕಾಗುತ್ತದೆ. ಒಂದೆರೆಡು ಸರಣಿಯಲ್ಲಿ ವಿಫಲನಾದ ಪ್ರತಿಭಾವಂತನೊಬ್ಬ ತಿದ್ದಿಕೊಳ್ಳಲಿಕ್ಕೆ ಸಾಕಷ್ಟು ಅವಕಾಶಗಳು ದೊರಕದೆಯೇ ತಂಡದಿಂದ ಹೊರದೂಡಲ್ಪಡುತ್ತಾನೆ. ಕಳೆದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಸರಣಿಯಲ್ಲಿ ಆರಂಭಿಕ ಜೋಡಿಗಾಗಿ ರೋಹಿತ್, ಧವನ್, ರಾಹುಲ್, ಮಯಾಂಕ್, ಪೃಥ್ವಿ, ಗಿಲ್, ಮಯಾಂಕ್ ಹಾಗೂ ಇಶಾನ್ ಕಿಶನ್ ರ ನಡುವೆ ಒಂದೇ ಒಂದು ಜೋಡಿಯನ್ನು ಆಯ್ಕೆಮಾಡಬೇಕಾದ ಗೊಂದಲಮಯ ವಾತಾವರಣವಿದ್ದುದು ಇದಕ್ಕೆ ಅತ್ಯುತ್ತಮ ಉದಾಹರಣೆ. ವಿಫಲರಾಗುತ್ತಿರುವವರಿಗೆ ಮತ್ತೊಂದು ಅವಕಾಶ ಕೊಡಬೇಕೇ ಅಥವಾ ಅವರನ್ನು ಕೈಬಿಟ್ಟು ಇನ್ನೊಬ್ಬರನ್ನು ಆಡಿಸಬೇಕೇ ಎಂಬ ಗೊಂದಲದಲ್ಲಿ ಕೊನೆಗೆ ಸ್ವತಃ ನಾಯಕ ವಿರಾಟ್ ಕೋಹ್ಲಿಯೇ ಆರಂಭಿಕನಾಗಿ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಿದ್ದನ್ನು ನಾವೆಲ್ಲಾ ಕಣ್ಣಾರೆ ಕಂಡೆವು. ಹೀಗೆ ಪದೇ ಪದೇ ಬದಲಾಗುತ್ತಾ, ಪ್ರಯೋಗಗಳಿಗೊಳಪಡುತ್ತಲೇ ಗೆಲುವಿನ ಲಹರಿಯನ್ನೂ ಉಳಿಸಿಕೊಳ್ಳುವುದು ಕಷ್ಟದ ಕೆಲಸ.

ಇನ್ನು ಪ್ರತಿಭೆಯ ತುಳುಕುವಿಕೆ ಆಟಗಾರರ ವಯಕ್ತಿಕ ಕರಿಯರ್ ಗೂ ಮಾರಕವೇ. ಇದಕ್ಕೆ ಅತ್ಯುತ್ತಮ ಉದಾಹರಣೆ ನಮ್ಮ ಕನ್ನಡಿಗ ಮನೀಶ್ ಪಾಂಡೆ. 2016ರಲ್ಲಿ ಆಸ್ಟ್ರೇಲಿಯಾದ ವಿರುದ್ಧ ಅಜೇಯ 104 ರನ್ ಗಳ ಮ್ಯಾಚ್ ವಿನ್ನಿಂಗ್ ಆಟವಾಡಿದ ಹೊರತಾಗಿಯೂ ಇಲ್ಲಿಯ ವರೆಗೆ ಅವರು ಕೇವಲ 26 ಪಂದ್ಯಗಳನ್ನಷ್ಟೇ ಆಡಿದ್ದಾರೆ. ಮೊದಲು ಧೋನಿ, ರೈನಾರ ಉಪಸ್ಥಿತಿಯಿಂದ ಅವಕಾಶ ವಂಚಿತರಾದ ಅವರು ನಂತರ ಹಾರ್ಧಿಕ್ ಪಾಂಡ್ಯಾ, ಶ್ರೇಯಸ್ ಐಯರ್, ರಿಶಭ್ ಪಂತ್ ರ ಒಳಗೊಳ್ಳುವಿಕೆಯಿಂದಾಗಿ ಬೆಂಚು ಕಾಯಿಸುತ್ತಲೇ ಉಳಿಯಬೇಕಾಯಿತು. ಈ ನಡುವೆ ದೊರಕುವ ಒಂದೋ ಎರೆಡೋ ಅವಕಾಶದಲ್ಲವರು ಚೆನ್ನಾಗಿ ಆಡಲೇಬೇಕಾದ ಒತ್ತಡಕ್ಕೆ ಬೀಳುವುದರಿಂದ ಅದು ಅವರ ಆಟದ ಮೇಲೂ ಪ್ರಭಾವ ಬೀರಿ ಅವರು ವಿಫಲರಾಗುವ ಸಾಧ್ಯತೆಯೇ ಹೆಚ್ಚಿರುತ್ತದೆ. ಹೀಗೆ ಅತಿಯಾದ ಲಭ್ಯತೆಗಳಿಂದಾಗಿ ಆಟಗಾರರು ಸಫಲತೆ, ವಿಫಲತೆಗಳೆರೆಡನ್ನೂ ಅನುಭವಿಸಿ, ತಿದ್ದಿಕೊಂಡು, ಬೆಳೆಯುತ್ತಾ ಹೋಗುವ ಅವಕಾಶದಿಂದ ವಂಚಿತರಾಗುತ್ತಾರಲ್ಲದೇ ಕೊನೆಯದಾಗಿ ಅವರ ಪ್ರತಿಭೆ ವ್ಯರ್ಥವೂ ಆಗಿಬಿಡಬಹುದು

ಇದಕ್ಕೆ ಇನ್ನೂ ಉತ್ತಮ ಉದಾಹರಣೆಗಳು ಆಸ್ಟ್ರೇಲಿಯಾದ ಆ್ಯಂಡಿ ಬಿಕೆಲ್ ಹಾಗೂ ಬ್ರಾಡ್ ಹಾಡ್ಜ್. 2003ರ ವಿಶ್ವ ಕಪ್ ನಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ಗಳ ವಿರುದ್ಧ ಒಬ್ಬನೇ ನಿಂತು ಹೋರಾಡಿ ಪಂದ್ಯ ಗೆಲ್ಲಿಸಿದ್ದ, ಅತ್ಯುತ್ತಮ ಬೌಲಿಂಗ್ ಹಾಗೂ ಕೆಳಕ್ರಮಾಂಕದಲ್ಲಿ ನೆರವಾಗಬಲ್ಲ ಬ್ಯಾಟಿಂಗ್ ಸಾಮರ್ಥ್ಯ ಹೊಂದಿದ್ದ ಆ್ಯಂಡಿ ಬಿಕೆಲ್ ತನ್ನ ಜೀವಮಾನವಿಡೀ ಆಡಿದ್ದು ಕೇವಲ 67 ಪಂದ್ಯಗಳನ್ನು ಮಾತ್ರ! ಆಸ್ಟ್ರೇಲಿಯಾ ಕಂಡ ಸರ್ವ ಶ್ರೇಷ್ಠ ಆಟಗಾರರಾದ ಮೆಗ್ರಾತ್, ಬ್ರೆಟ್ಲೀ, ಗಿಲೆಸ್ಪೀ, ಬ್ರೇಕನ್ ಮುಂತಾದವರ ಉಪಸ್ಥಿತಿಯಿಂದಾಗಿ ವೃತ್ತಿಬದುಕಿನ ಪರ್ವ ಕಾಲವನ್ನು ಹನ್ನೆರೆಡನೇ ಆಟಗಾರನಾಗಿಯೇ ಕಳೆದ ಅವರು ಕೊನೆಗೆ ಅವಕಾಶ ದೊರೆಯುವ ಹೊತ್ತಿಗೆ ವೇಗವನ್ನೂ, ಫಾರ್ಮನ್ನೂ, ವಯಸ್ಸನ್ನೂ ಕಳೆದುಕೊಂಡುಬಿಟ್ಟಿದ್ದರು. ಅಂತೆಯೇ ಬ್ರಾಡ್ ಹಾಡ್ಜ್ ಸಹಾ ತಮ್ಮ ವೃತ್ತಿಜೀವನದ ಪರ್ವಕಾಲವನ್ನು ಬೆಂಚ್ ಕಾಯಿಸುತ್ತಲೇ ಕಳೆದರು. ದಕ್ಷಿಣ ಆಫ್ರಿಕಾದ ಎದುರು ದ್ವಿಶತಕ ಹೊಡೆದ ಅವರು ನಂತರದ ಸರಣಿಗೇ ಆಯ್ಕೆಯಾಗಲಿಲ್ಲ! ಕೊನೆಗೆ ಹಾಡ್ಜ್ ಕೆಲವೇ ಕೆಲವು ಪಂದ್ಯಗಳ ಅಂಕಿ-ಅಂಶದೊಂದಿಗೆ ನಿವೃತ್ತಿ‌ ಹೊಂದಬೇಕಾಯಿತು. ಒಟ್ಟಾರೆ ಈ ಫ್ರತಿಭಾನ್ವಿತ ಆಟಗಾರರ ಸಾಮರ್ಥ್ಯ ಅತ್ತ ದೇಶದ ತಂಡಕ್ಕೂ ಸಿಗದೇ, ಇತ್ತ ರಾಜ್ಯದ ತಂಡಕ್ಕೂ ದೊರಕದೇ ವ್ಯರ್ಥವಾಗಿಹೋಯಿತು.

ಇಂಥಹಾ ಪರಿಸ್ಥಿತಿ ನಮ್ಮವರಿಗೂ ಆಗದಿರಲಿ!

ವಿನಾಯಕ‌ ಅರಳಸುರಳಿ,


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x